ಶೀಲಶಂಕಿಸಿ ಪತ್ನಿ ಕೊಲೆ: ಪತಿ ಬಂಧನ
Team Udayavani, Aug 21, 2018, 12:01 PM IST
ಬೆಂಗಳೂರು: ಶೀಲ ಶಂಕಿಸಿ ಪತ್ನಿಯನ್ನು ಕಲ್ಲಿನಿಂದ ಜಜ್ಜಿ ಹತ್ಯೆಗೈದಿರುವ ಘಟನೆ ಬಸವೇಶ್ವರನಗರದ ಶಿವನಹಳ್ಳಿಯಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ. ಶಿವನಹಳ್ಳಿ ನಿವಾಸಿ ಜಯಶ್ರೀ (32) ಕೊಲೆಯಾದವರು. ಪತಿ ಹನುಮಂತ (38)ನನ್ನು ಬಂಧಿಸಲಾಗಿದೆ.
ಪತ್ನಿ ಶೀಲ ಶಂಕಿಸಿ ಆಕೆಯೊಂದಿಗೆ ಜಗಳವಾಡುತ್ತಿದ್ದ ಆರೋಪಿ ಸೋಮವಾರ ಮಧ್ಯಾಹ್ನ ಈ ಕೃತ್ಯವೆಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಜಯಪುರ ಮೂಲದ ಹನುಮಂತ 10 ವರ್ಷಗಳ ಹಿಂದೆ ಜಯಶ್ರೀಯನ್ನು ವಿವಾಹವಾಗಿದ್ದು, ದಂಪತಿಗೆ ಒಂದು ಗಂಡು ಮತ್ತು ಒಂದು ಹೆಣ್ಣು ಮಗು ಇದೆ. ಆರೋಪಿ ಹನುಮಂತ ಗೋವಾದಲ್ಲಿ ಟೆಂಪೋ ಚಾಲಕನಾಗಿದ್ದು, ಕೆಲ ವರ್ಷಗಳ ಬಳಿಕ ಪತ್ನಿ ಮತ್ತು ಮಕ್ಕಳನ್ನು ಗೋವಾಕ್ಕೆ ಕರೆದೊಯ್ದಿದ್ದ.
ದಂಪತಿ ಕ್ಷುಲ್ಲಕ ವಿಚಾರವಾಗಿ ನಿತ್ಯ ಜಗಳವಾಡುತ್ತಿದ್ದರು. ಇದರಿಂದ ಬೇಸತ್ತ ಜಯಶ್ರೀ ನಾಲ್ಕು ತಿಂಗಳ ಹಿಂದಷ್ಟೇ ಮಕ್ಕಳೊಂದಿಗೆ ಬೆಂಗಳೂರಿಗೆ ಬಂದು ತವರಿನಲ್ಲಿದ್ದರು. ಈ ನಡುವೆ ಪತ್ನಿ ಜಯಶ್ರೀ ಪರ ಪುರುಷನ ಜತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿದ ಆರೋಪಿ ಎರಡು ತಿಂಗಳಿಂದ ಆಕೆಯ ಚಲನವಲನಗಳ ಮೇಲೆ ನಿಗಾವಹಿಸಿದ್ದ. ಸೋಮವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಮಕ್ಕಳನ್ನು ನೋಡುವ ಸಲುವಾಗಿ ಮನೆಗೆ ಬಂದ ಆರೋಪಿ, ಪತ್ನಿ ಜತೆ ಜಗಳವಾಡಿದ್ದಾನೆ.
ದಂಪತಿ ನಡುವೆ ಮಾತಿನ ಚಕಮಕಿ ನಡೆದಿದ್ದು, ಇದರಿಂದ ಕೋಪಗೊಂಡ ಹನುಮಂತ ಮನೆ ಬಾಗಿಲ ಬಳಿಯಿದ್ದ ಕಲ್ಲಿನಿಂದ ಪತ್ನಿಯ ತಲೆ ಮತ್ತು ಕಿವಿ ಭಾಗಕ್ಕೆ ಬಲವಾಗಿ ಹೊಡೆದಿದ್ದಾನೆ. ಗಂಭೀರವಾಗಿ ಗಾಯಗೊಂಡ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ವೇಳೆ ಮಕ್ಕಳು ಶಾಲೆಗೆ ಹೋಗಿದ್ದರು. ಸಹೋದರಿ ಹಾಗೂ ತಾಯಿ ಕೂಡ ಹೊರ ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಬಸವೇಶ್ವರನಗರ ಠಾಣೆಯಲ್ಲಿ ದಾಖಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.