ಕೊಂಬೆಟ್ಟು ಗುಡ್ಡೆಯಲ್ಲಿ ಎತ್ತರದ ಶಾಲೆಯಲ್ಲಿ


Team Udayavani, Aug 26, 2018, 6:00 AM IST

z-6.jpg

ಪರಿಯಾಲ್ತಡ್ಕ ಶಾಲೆಯಲ್ಲಿ ಎಂಟನೇ ತರಗತಿ ಮುಗಿಸಿದ ಬಳಿಕ ಮುಂದಿನ ನಮ್ಮ ಶಿಕ್ಷಣಕ್ಕಾಗಿ ಅಪ್ಪ ಅಗ್ರಾಳದಿಂದ ಪುತ್ತೂರಿಗೆ ತಾತ್ಕಾಲಿಕವಾಗಿ ಹೋಗಿ ನೆಲೆಸುವ ನಿರ್ಧಾರ ಮಾಡಿದರು. ಮಕ್ಕಳ ಶಿಕ್ಷಣಕ್ಕಾಗಿ ಮನೆಯ ಆದಾಯದ ಕೃಷಿಯನ್ನು ಪುತ್ತೂರಿನಲ್ಲಿ ಇದ್ದುಕೊಂಡು ಬಂದು ನೋಡಿಕೊಳ್ಳುವ ಶ್ರಮದ ಆಯ್ಕೆಯನ್ನು ಮಾಡಿಕೊಂಡರು. ನನ್ನನ್ನು ಸೇರಿಸಿದ್ದು ಪುತ್ತೂರಿನ ಬೋರ್ಡ್‌ ಹೈಸ್ಕೂಲಿಗೆ. ಆ ಶಾಲೆ ಇದ್ದದ್ದು ಪುತ್ತೂರಿನ ಕೊಂಬೆಟ್ಟು ಗುಡ್ಡೆಯಲ್ಲಿ. ಆದ್ದರಿಂದ ಅದನ್ನು ಜನಪ್ರಿಯವಾಗಿ “ಕೊಂಬೆಟ್ಟು ಶಾಲೆ’ ಎಂದು ಕರೆಯುತ್ತಿದ್ದರು. ಅದು “ಹೈಸ್ಕೂಲ್‌’ ಆದ್ದರಿಂದ ಕನ್ನಡದ ನೇರ ಅನುವಾದದಲ್ಲಿ “ಎತ್ತರದ ಶಾಲೆ’. ಕೊಂಬೆಟ್ಟು ಗುಡ್ಡೆಯ ಮೇಲೆ ಇದ್ದುದರಿಂದ ಭೌತಿಕವಾಗಿ ಅದು “ಎತ್ತರದ ಶಾಲೆ’. ಶಿಕ್ಷಣದ ಗುಣಮಟ್ಟ ಮತ್ತು ಚಟುವಟಿಕೆಗಳಿಂದ ಕೂಡಾ ಅದು ಹಳೆಯ ವಿಶಾಲ ಪುತ್ತೂರು ತಾಲೂಕಿನಲ್ಲಿ “ಎತ್ತರದ ಶಾಲೆ’. 1960ರಲ್ಲಿ ನಾನು ಪುತ್ತೂರಿಗೆ ಬಂದಾಗ ಅಲ್ಲಿ ಇದ್ದದ್ದು ಮೂರು ಹೈಸ್ಕೂಲುಗಳು. ಬೋರ್ಡ್‌ ಹೈಸ್ಕೂಲ್‌ ಸಹಶಿಕ್ಷಣದ್ದು. ಸೈಂಟ್‌ ಫಿಲೋಮಿನಾ ಹೈಸ್ಕೂಲ್‌ ಹುಡುಗರಿಗೆ ಮಾತ್ರ. ಸೈಂಟ್‌ ವಿಕ್ಟರ್ಸ್‌ ಗರ್ಲ್ಸ್‌ ಹೈಸ್ಕೂಲ್‌ ಹುಡುಗಿಯರಿಗೆ. 

ದಕ್ಷಿಣಕನ್ನಡ ಜಿಲ್ಲಾ ಬೋರ್ಡ್‌/ತಾಲೂಕು ಬೋರ್ಡ್‌ ನಡೆಸುವ ಶಾಲೆಗಳನ್ನು “ಬೋರ್ಡ್‌ ಹೈಸ್ಕೂಲ್‌’ ಎಂದು ಕರೆಯುತ್ತಿದ್ದರು. ಹಳೆಯ ವಿಶಾಲ ಪುತ್ತೂರು ತಾಲೂಕಿನಲ್ಲಿ ಮೊತ್ತಮೊದಲು ಸ್ಥಾಪನೆ ಆದ ಬೋರ್ಡ್‌ ಹೈಸ್ಕೂಲು ಪುತ್ತೂರಿನ ಕೊಂಬೆಟ್ಟುವಿನದ್ದು 1916ರಲ್ಲಿ. ಈಗ ಅದು ಶತಮಾನದ ಶಾಲೆ ಎಂಬ ಹಿರಿಮೆ ಉಳ್ಳದ್ದು. ಅದರ ಪಾರಂಪರಿಕ ಕಟ್ಟಡ ಪುತ್ತೂರಿನ ಹೆಮ್ಮೆ. (ಈಗ ಅದು ಸರಕಾರಿ ಜೂನಿಯರ್‌ ಕಾಲೇಜು). 

ನಾನು ಪುತ್ತೂರು ಬೋರ್ಡ್‌ ಹೈಸ್ಕೂಲ್‌ಗೆ ಸೇರಿದ್ದು ಜೂನ್‌ 1960ರಲ್ಲಿ. ಆ ವರ್ಷ ಮೈಸೂರು ರಾಜ್ಯದ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಒಂದು ಹೊಸ ಬದಲಾವಣೆಯನ್ನು ಮಾಡಿದ್ದರು. ಆವರೆಗೆ ಹೈಸ್ಕೂಲಿನ ಮೂರು ತರಗತಿಗಳಿಗೆ 4 ಫಾರ್ಮ್, 5 ಫಾರ್ಮ್, 6 ಫಾರ್ಮ್ ಎಂಬ ಹೆಸರು ಇತ್ತು. ಅದನ್ನು ಬದಲಿಸಿ ನ್ಯೂ8, ನ್ಯೂ9, ನ್ಯೂ10 ಎಂದು ಹೊಸ ನಾಮಕರಣ ಮಾಡಿದ್ದರು. ನನಗೆ ಇದೊಂದು ಮುಜುಗರದ ಸಂಗತಿ ಆಗಿತ್ತು. ಹಿಂದಿನ ವರ್ಷವೂ ಎಂಟನೆಯ ತರಗತಿ, ಈ ವರ್ಷವೂ ಎಂಟನೆಯ ತರಗತಿ!  ಹಾಗಾಗಿ, ಯಾವ ತರಗತಿ ಎಂದು ಯಾರಾದರೂ ಕೇಳಿದರೆ “ಹೊಸ ಎಂಟನೇ’ ಎಂದು ಒತ್ತಿ ಹೇಳುತ್ತಿದ್ದೆ! ಬೋರ್ಡ್‌ ಹೈಸ್ಕೂಲ್‌ನಲ್ಲಿ ನಾನು ಹೊಸ ಎಂಟನೇ ಒಂಬತ್ತನೇ ಮತ್ತು ಹತ್ತನೇ ತರಗತಿಗಳಲ್ಲಿ ಕಲಿತದ್ದು ಜೂನ್‌ 1960ರಿಂದ ಮಾರ್ಚ್‌ 1963ರವರೆಗೆ. ಮೂರು ವರ್ಷಗಳ ಕೊನೆಯಲ್ಲಿ ಪಬ್ಲಿಕ್‌ ಪರೀಕ್ಷೆಯ ಬಳಿಕ ದೊರೆತದ್ದು “ಮೈಸೂರು ಸೆಕಂಡರಿ ಸ್ಕೂಲ್‌ ಲೀವಿಂಗ್‌ ಸರ್ಟಿಫಿಕೇಟ್‌’. ಅಧ್ಯಯನ ವಿಷಯಗಳು: ಭಾಷೆಗಳು- ಕನ್ನಡ, ಹಿಂದಿ, ಇಂಗ್ಲಿಷ್‌; ಕಡ್ಡಾಯ ವಿಷಯಗಳು- ಸಮಾಜವಿಜ್ಞಾನ, ಸಾಮಾನ್ಯ ವಿಜ್ಞಾನ, ಸಾಮಾನ್ಯ ಗಣಿತ. ಐಚ್ಛಿಕ ವಿಷಯಗಳು ನಾನು ಆಯ್ಕೆ ಮಾಡಿಕೊಂಡದ್ದು: ಭೌತವಿಜ್ಞಾನ, ರಸಾಯನ ವಿಜ್ಞಾನ, ಗಣಿತ. ಎಲ್ಲ ವಿಷಯಗಳಿಗೆ 100 ಅಂಕಗಳು, ಹಿಂದಿಗೆ 50 ಅಂಕಗಳು; ಒಟ್ಟು 850 ಅಂಕಗಳು. 

ಆಗ ಬೋರ್ಡ್‌ ಹೈಸ್ಕೂಲ್‌ನ ಮುಖೋಪಾಧ್ಯಾಯರಾಗಿದ್ದವರು ಎಂ. ಅಣ್ಣಪ್ಪನವರು. ನಮಗೆ ಇಂಗ್ಲಿಶ್‌ ಪಾಠ ಮಾಡುತ್ತಿದ್ದವರು. ಆಡಳಿತ ಮತ್ತು ಅಧ್ಯಾಪನ ಎರಡರಲ್ಲೂ ಅಣ್ಣಪ್ಪನವರದು ಒಂದು ಲೆಜೆಂಡರಿ ವ್ಯಕ್ತಿತ್ವ. ಬಹಳ ದೀರ್ಘ‌ಕಾಲದ ಹೆಡ್‌ಮಾಸ್ತರ್‌. ಪುತ್ತೂರು ಬೋರ್ಡ್‌ ಹೈಸ್ಕೂಲಿನ ಸರ್ವಾಂಗೀಣ ಬೆಳವಣಿಗೆಯಲ್ಲಿ ಅದನ್ನು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಅಣ್ಣಪ್ಪರ ಕೊಡುಗೆ ದೊಡ್ಡದು. ಶಿಸ್ತು, ಸಾಂಸ್ಕೃತಿಕ ಮತ್ತು ಕ್ರೀಡಾಚಟುವಟಿಕೆಗಳು ಎಲ್ಲವನ್ನೂ ಅವರ ಕಾಲದಲ್ಲಿ ಅನುಭವಿಸಿ ಕಲಿತುಕೊಂಡವನು ನಾನು. ಕನ್ನಡ ಪಾಠ ಮಾಡಿದವರು ಬಿ.ಎಲ್‌. ನಾರಾಯಣ ಭಟ್ಟರು; ಸೈಕಲ್‌ಕಚ್ಚೆ ಹಾಕಿಕೊಂಡು ಸೈಕಲ್‌ನಲ್ಲಿ ಬರುತ್ತಿದ್ದರು. ನನ್ನ ಕನ್ನಡ ಆಸಕ್ತಿಯನ್ನು ಬೆಳೆಸಿದವರು ಅವರು. ನಮ್ಮ ಉತ್ತರಪತ್ರಿಕೆಗಳನ್ನು ತರಗತಿಯಲ್ಲಿ ಕೊಡುವಾಗ ಹೆಚ್ಚು ಅಂಕ ತೆಗೆದ‌ವರನ್ನು ಮೊದಲು ತೆಗೆದು ಕುತೂಹಲ ಹುಟ್ಟಿಸಿ ಹೆಸರು ಹೇಳಿ ಕೊಡುತ್ತಿದ್ದರು. ಕನ್ನಡದಲ್ಲಿ ಸ್ಪರ್ಧೆ ಇದ್ದದ್ದು ನನಗೆ ಮತ್ತು ಆಗ ಪುತ್ತೂರಿನಲ್ಲಿ ಇದ್ದ ಮುನ್ಸಿಫ್ರ ಮಗ ಮಾಧವ ಕುಲಕರ್ಣಿಗೆ. ಬಿ.ಎಲ್‌.ಎನ್‌. ಭಟ್ಟರ ಮಗ ಗೋಪಾಲಕೃಷ್ಣ ನನ್ನ ಸಹಪಾಠಿ. ಹತ್ತನೆಯ ತರಗತಿಯಲ್ಲಿ ಕೃಷ್ಣ ನಾಯಕ್‌ ಕನ್ನಡ ಕಲಿಸುತ್ತಿದ್ದರು; ಅವರು ಗಾಂಧಿಟೊಪ್ಪಿ ಧರಿಸುತ್ತಿದ್ದ ಕಾರಣ ಮಕ್ಕಳು ಅವರನ್ನು ಟೊಪ್ಪಿಮಾಸ್ಟ್ರೆ ಎಂದು ಕರೆಯುತ್ತಿದ್ದರು. ಹಿಂದಿಯನ್ನು ಕಲಿಸುತ್ತಿದ್ದವರು ಶಂಕರಿ ಟೀಚರ್‌. ಅದು ನಾನು ಹೊಸತಾಗಿ ಕಲಿತ ಭಾಷೆ. ಶಂಕರಿ ಟೀಚರ್‌ ನಮ್ಮ ತರಗತಿಯ ಹಿಂದಿ ಪಾಠದ ಜೊತೆಗೆ ಮದ್ರಾಸಿನ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಪರೀಕ್ಷೆಗಳಿಗೆ ಕಟ್ಟಲು ನಮಗೆ ಸಹಾಯ ಮಾಡುತ್ತಿದ್ದರು. ಉಚಿತವಾಗಿ ಆ ಪರೀಕ್ಷೆಗಳ ಪಾಠಗಳನ್ನು ಮಾಡುತ್ತಿದ್ದರು. ಅವರ ಉತ್ತೇಜನ ಮತ್ತು ಪಾಠಗಳ ನೆರವಿನಿಂದ ನಾನು ಹೈಸ್ಕೂಲಿನ ಮೂರು ವರ್ಷಗಳಲ್ಲಿ ಪ್ರಥಮಾ, ಮಧ್ಯಮಾ ಮತ್ತು ರಾಷ್ಟ್ರಭಾಷಾ ಪರೀಕ್ಷೆಗಳಿಗೆ ಕುಳಿತು ತೇರ್ಗಡೆ ಆಗಿ ಸರ್ಟಿಫಿಕೇಟ್‌ಗಳನ್ನು ಪಡೆದೆ. ಆಗ ರಾಷ್ಟ್ರಭಾಷಾ ಪರೀಕ್ಷೆಗೆ ಅಸ್ಸಿ ದಿನ್‌ ಮೇ ದುನಿಯಾ ಕೀ ಸೈರ್‌ ಎಂಬ ಪತ್ತೇದಾರಿ ಕೃತಿಯೊಂದು ಪಠ್ಯವಾಗಿತ್ತು. ಶಂಕರಿ ಟೀಚರ್‌ ಅದನ್ನು ಸ್ವಾರಸ್ಯಕರವಾಗಿ ಪಾಠ ಮಾಡುತ್ತಿದ್ದರು. ನಾನು ತರಗತಿಯಲ್ಲಿ ಬರೆದುಕೊಂಡ ಟಿಪ್ಪಣಿಗಳ ಸಹಾಯದಿಂದ ನನ್ನ ಹೈಸ್ಕೂಲ್‌ ಶಿಕ್ಷಣ ಮುಗಿದು ರಜೆಯ ವೇಳೆಗೆ 1963-64ರಲ್ಲಿ ಆ ಹಿಂದಿ ಪುಸ್ತಕವನ್ನು ಕನ್ನಡಕ್ಕೆ ಅನುವಾದ ಮಾಡಿದೆ. ಈ ಅನುವಾದ ನನ್ನ ಮೊದಲ ಕೃತಿ. ಕಳೆದ ವರ್ಷ ಆಕಸ್ಮಿಕವಾಗಿ ಆ ಹಸ್ತಪ್ರತಿ ದೊರೆತು ಅದನ್ನು ಯಾವುದೇ ಬದಲಾವಣೆ ಇಲ್ಲದೆ 80 ದಿನಗಳಲ್ಲಿ ವಿಶ್ವ ಪರ್ಯಟನ ಎಂಬ ಹೆಸರಿನಲ್ಲಿ ಪ್ರಕಟಮಾಡಿದೆ. 

ಸಮಾಜವಿಜ್ಞಾನ‌ ಪಾಠ ಮಾಡುತ್ತಿದ್ದವರು ಕೃಷ್ಣ ಮಯ್ಯ ಮತ್ತು ವಿಶ್ವನಾಥ ಶೆಟ್ಟಿ. ನೂರು ಬಗೆಯ ನಗೆಗಳು ಇತ್ಯಾದಿ ಚಟುವಟಿಕೆಗಳ ಮೂಲಕ ವಿಶ್ವನಾಥ ಶೆಟ್ಟರು ವಿದ್ಯಾರ್ಥಿಗಳಿಗೆ ಹಾಸ್ಯ ಮನೋರಂಜನೆ ಕೊಡುತ್ತಿದ್ದರು. ನನಗೆ ಸಾಮಾನ್ಯ ವಿಜ್ಞಾನ ಮತ್ತು ಐಚ್ಛಿಕ ಫಿಸಿಕ್ಸ್‌ ಕೆಮಿಸ್ಟ್ರಿ ಪಾಠ ಮಾಡುತ್ತಿದ್ದದ್ದು ನಿಡ್ವಣ್ಣಾಯರು ಮತ್ತು ಶಾಂತಾ ಟೀಚರ್‌. ವಿಜ್ಞಾನದ ಪ್ರಯೋಗಶಾಲೆಯಲ್ಲಿ ಅಧ್ಯಾಪಕರು  ಪ್ರಯೋಗಗಳನ್ನು ಮಾಡಿ ತೋರಿಸುತ್ತಿದ್ದರು. ಪ್ರಾಯೋಗಿಕ ಶಿಕ್ಷಣದ ಮಹತ್ವವನ್ನು ಕಲಿತದ್ದು ಮುಂದೆ ಬಹಳ ಪ್ರಯೋಜನಕ್ಕೆ ಬಂತು. ಗಣಿತವನ್ನು ಎಂಟನೆಯ ತರಗತಿಯಲ್ಲಿ ಪಾಠ ಮಾಡಿದ್ದು ಬಾಲಕೃಷ್ಣ ರಾಯರು. ಸಾಮಾನ್ಯ ಮತ್ತು ಐಚ್ಛಿಕ ಗಣಿತವನ್ನು ಪರಿಣಾಮಕಾರಿಯಾಗಿ ಬೋಧಿಸುತ್ತಿದ್ದವರು ವೆಂಕಟೇಶ ಕಿಣಿಯವರು. ಡ್ರಾಯಿಂಗ್‌ ಟೀಚರ್‌ ನಾರಾಯಣ ಆಚಾರ್‌, ಕ್ರಾಫ್ಟ್ಗೆ ನಾಯರ್‌. ಡ್ರಾಯಿಂಗ್‌ನಲ್ಲಿ ನಾನು ಪರಿಣತಿ ಪಡೆಯಲಿಲ್ಲ; ನನಗೆ ಹೆಚ್ಚಾಗಿ “ಸಾಧಾರಣ’ ಎಂಬ ಷರಾ ಸಿಗುತ್ತಿದ್ದದ್ದು. 

ಬೋರ್ಡ್‌ ಹೈಸ್ಕೂಲ್‌ ಆ ಕಾಲದಲ್ಲಿ ಕ್ರೀಡಾ ಚಟುವಟಿಕೆಗಳಲ್ಲಿ ಪುತ್ತೂರು ತಾಲೂಕಿನಲ್ಲಿ ಮೊದಲ ಸ್ಥಾನದಲ್ಲಿ ಇತ್ತು. ಸಿಕ್ವೇರಾ ಅವರು ಪಿಟಿ ಮಾಸ್‌ó. ಆಮೇಲೆ ಮಲ್ಯ ಮತ್ತು ತೋಳಾರ್‌ ಎಂಬ ಇಬ್ಬರು ತರುಣ ಪಿಟಿ ಮಾಷ್ಟ್ರುಗಳು ಬಂದರು. ನಾನು ಎಲ್ಲ ಕಾಲಕ್ಕೂ ಕ್ರೀಡೆಗಳಲ್ಲಿ ಬಹಳ ಹಿಂದೆ. ಕ್ರೀಡೆಯ ಕಡ್ಡಾಯದ ತರಬೇತಿಗೆ ಹೋಗುತ್ತಿದ್ದೆ; ಆಟೋಟಗಳಲ್ಲಿ ಸ್ಪರ್ಧಿಸುವಷ್ಟು ಎಂದೂ ಪರಿಣತಿಯನ್ನು ಪಡೆಯಲಿಲ್ಲ. ನಮ್ಮ ಹೈಸ್ಕೂಲಿನ ಕೆಳಗಿನ, ಬಂಟ್ಸ್‌ ಹಾಸ್ಟೆಲಿನ ಪಕ್ಕದ ಆಟದ ಮೈದಾನ ಆ ಕಾಲದಲ್ಲಿ ಪುತ್ತೂರಿನ ಒಲಿಂಪಿಕ್‌ ಕ್ರೀಡಾಂಗಣ ಎಂಬ ಖ್ಯಾತಿ ಪಡೆದಿತ್ತು. ನಮ್ಮ ಬೋರ್ಡ್‌ ಹೈಸ್ಕೂಲಿನಲ್ಲೂ ಹಾರ್ಡ್‌ಬಾಲ್‌ ಕ್ರಿಕೆಟ್‌ ಪಂದ್ಯದ ಪರಿಣತ ಆಟಗಾರರು ಇದ್ದರು. ನನ್ನ ನೆನಪಿಗೆ ಬರುವಂತೆ ನನ್ನ ಸಹಪಾಠಿ ಪುರುಷೋತ್ತಮ ನಾಯಕ್‌ ಕ್ರಿಕೆಟ್‌ ಕ್ಯಾಪ್ಟನ್‌ ಆಗಿದ್ದರು. ಪಿ. ಗೋಪಾಲಕೃಷ್ಣ, ಮೋಹನ ಭಟ್‌, ಸುಧಾಕರ ಶೆಟ್ಟಿ, ಜೀವಂಧರ್‌, ಚಿತ್ತರಂಜನ್‌ ಇನ್ನೂ ಅನೇಕರು ಇದ್ದ ಉತ್ತಮ ತಂಡ ನಮ್ಮಲ್ಲಿತ್ತು. ಕ್ರಿಕೆಟ್‌ ಆಟದ ವ್ಯಾಕರಣವನ್ನು ನಾನು ಕಲಿತದ್ದು ಬೋರ್ಡ್‌ ಹೈಸ್ಕೂಲಿನ ಮೈದಾನದಲ್ಲಿ ನಮ್ಮ ಶಾಲೆಯವರ ಪಂದ್ಯಾಟಗಳನ್ನು ಐಸ್‌ಕ್ಯಾಂಡಿ ಚೀಪುತ್ತ ಉತ್ಸಾಹದಿಂದ ನೋಡುವುದರ ಮೂಲಕ. ಇದರ ಜೊತೆಗೆ ಅದೇ ಮೈದಾನದಲ್ಲಿ ಪುತ್ತೂರು ತಾಲೂಕು ಮಟ್ಟದ ಆಟೋಟ ಸ್ಪರ್ಧೆಗಳು ನಡೆಯುತ್ತಿದ್ದುವು. ಬೇರೆ ಬೇರೆ ಹೈಸ್ಕೂಲುಗಳ ತಂಡಗಳ ವೈವಿಧ್ಯಮಯ ಕ್ರೀಡಾ ಸಾಮರ್ಥ್ಯಗಳನ್ನು ಕಣ್ಣಾರೆ ನೋಡಿ ಕಲಿಯುವ ಅಪೂರ್ವ ಅವಕಾಶಗಳನ್ನು ಕಲ್ಪಿಸಿಕೊಟ್ಟದ್ದು ನಮ್ಮ ಬೋರ್ಡ್‌ ಹೈಸ್ಕೂಲ್‌. 

ಶಿವರಾಮ ಕಾರಂತರ ಭೀಷ್ಮ ವಿಜಯ
ಶಿವರಾಮ ಕಾರಂತರ ಹೊಸ ಪ್ರಯೋಗ “ಯಕ್ಷರಂಗ’ದ ಆರಂಭದ ಒಂದು ಪ್ರದರ್ಶನ “ಭೀಷ್ಮ ವಿಜಯ’ವನ್ನು ಬೋರ್ಡ್‌ ಹೈಸ್ಕೂಲಿನ ಹೊರಾಂಗಣದ ಸ್ಟೇಜ್‌ನಲ್ಲಿ ನೋಡಿದ ನೆನಪು ಹಸುರಾಗಿದೆ.  ಮಾತು ಇಲ್ಲದ, ಸಂಗೀತ ಮತ್ತು ಅಭಿನಯ ಪ್ರಧಾನವಾದ ಕಾರಂತರ ಪ್ರಯೋಗ ನನ್ನ ಮೇಲೆ ಪ್ರಭಾವ ಬೀರಿತು. ಕಾರಂತರ ಮಕ್ಕಳು ಉಲ್ಲಾಸ್‌ ಮತ್ತು ಕ್ಷಮಾ ಆ ಕಾಲಕ್ಕೆ ಬೋರ್ಡ್‌ ಹೈಸ್ಕೂಲ್‌ನಲ್ಲಿ ಕಲಿಯುತ್ತಿದ್ದರು. ನಾನು ಹತ್ತನೆಯ ತರಗತಿಯಲ್ಲಿ ಇದ್ದಾಗ ಉಲ್ಲಾಸ ಕಾರಂತ್‌ ಒಂಬತ್ತನೆಯ ಮತ್ತು ಕ್ಷಮಾ ಎಂಟನೆಯ ತರಗತಿಯಲ್ಲಿ ಕಲಿಯುತ್ತಿದ್ದರು. ಆಗ ನನ್ನ ತಮ್ಮ ಉಲ್ಲಾಸ್‌ ಕೂಡಾ ಎಂಟನೆಯ ತರಗತಿಯಲ್ಲಿ ಓದುತ್ತಿದ್ದ. ನನ್ನ ಅಪ್ಪ 1935ರಲ್ಲಿ ಈ ಶಾಲೆಯಲ್ಲಿ ವಿದ್ಯಾರ್ಥಿ ಆಗಿದ್ದರು. ಬೋರ್ಡ್‌ ಹೈಸ್ಕೂಲ್‌ 1966ರಲ್ಲಿ ಸುವರ್ಣ ಮಹೋತ್ಸವವನ್ನು ಆಚರಿಸಿದಾಗ ಹೊರತಂದ “ಸುವರ್ಣ ದೀಪಿಕಾ’ ಸ್ಮರಣಸಂಚಿಕೆಗೆ ಅಪ್ಪ ಗೌರವ ಸಂಪಾದಕರಾಗಿದ್ದರು.

ಪುತ್ತೂರಿನಲ್ಲಿ ನಮ್ಮ ಬಿಡಾರ ಇದ್ದದ್ದು ಕೊಂಬೆಟ್ಟುವಿನಲ್ಲಿ. ನಮ್ಮ ಮನೆಯಿಂದ ಹೈಸ್ಕೂಲಿಗೆ ಹತ್ತು ನಿಮಿಷದ ನಡಿಗೆಯ ದಾರಿ. 14 ವರ್ಷಗಳ ಬಳಿಕ ಮೊದಲ ಬಾರಿ ವಿದ್ಯುದ್ದೀಪದ ಬೆಳಕಿನಲ್ಲಿ ಓದಲು ಸುರುಮಾಡಿದ ದಿನಗಳು. ಹೈಸ್ಕೂಲಿನಲ್ಲಿ ಕ್ರಿಕೆಟ್‌ ಆಡುವುದನ್ನು ನೋಡಿ ನಾನು ಕ್ರಿಕೆಟ್‌ ಆಡುವುದನ್ನು ಕಲಿತದ್ದು ನಮ್ಮ ಮನೆಯ ಪಕ್ಕದ ಬಯಲಿನಲ್ಲಿ. ನಾನು, ನನ್ನ ತಮ್ಮ ಉಲ್ಲಾಸ, ಹಿಂಬದಿಯ ಮನೆಯಲ್ಲಿ ವಾಸವಾಗಿದ್ದ ಶ್ರೀಕೃಷ್ಣ ವಿಲಾಸ ಹೊಟೇಲಿನ ಸೀತಾರಾಮ ಕೆದಿಲಾಯರ ಮಕ್ಕಳು ಮೋಹನ, ರಮೇಶ, ಜಯರಾಮ, ಹತ್ತಿರದ ಮನೆಯ ನನ್ನ ಸಹಪಾಠಿ ಜಯರಾಮ ರೈ, ಸಮೀಪದಲ್ಲಿದ್ದ ಡಾ. ತಿಮ್ಮಣ್ಣ ಭಟ್ಟರ ಮಕ್ಕಳು ಚಂದ್ರಶೇಖರ ಮತ್ತು ರವೀಂದ್ರ – ನಾವೆಲ್ಲಾ ಸೇರಿಕೊಂಡು ಆಡಿದ ರಬ್ಬರ್‌ ಬಾಲ್‌ ಕ್ರಿಕೆಟ್‌ ಆಟದ ದಿನಗಳು ಅವಿಸ್ಮರಣೀಯ. ಎಲ್ಲರೂ ಹೈಸ್ಕೂಲು ಹುಡುಗರು ಆತ್ಮೀಯತೆಯಿಂದ ಒಂದೇ ಕುಟುಂಬದವರಂತೆ ಚೇಷ್ಟೆ ಮಾಡುತ್ತ ಕ್ರಿಕೆಟ್‌ ಆಡುತ್ತಿದ್ದೆವು. 

ಕೊಂಬೆಟ್ಟು ಮನೆಯಲ್ಲಿ ಇದ್ದಾಗ ನಾನು ಮತ್ತು ತಮ್ಮ ಉಲ್ಲಾಸ ಮಾಡಿದ ಒಂದು ಪ್ರಯೋಗ ಪ್ರಶಾಂತ ಎಂಬ ಹಸ್ತಪತ್ರಿಕೆಯನ್ನು ತಂದದ್ದು. ಅದಕ್ಕೆ ನಾವೇ ಕತೆ, ಕವನ, ಲೇಖನ, ವ್ಯಂಗ್ಯಚಿತ್ರ ಬರೆದು, ಅದರ ಪ್ರತಿಗಳನ್ನು ಮನೆಯಲ್ಲಿ ಮತ್ತು ನೆರೆಕರೆಯಲ್ಲಿ ತೋರಿಸಿ ಸಂಭ್ರಮಿಸುತ್ತಿ¨ªೆವು. ನಮ್ಮ ಮನೆಯ ಸಮೀಪದಲ್ಲಿದ್ದ ಕನ್ನೆಪ್ಪಾಡಿ ರಾಮಕೃಷ್ಣ (ರಘು) ವಕೀಲರು ನವಭಾರತದಲ್ಲಿ ಬರೆಯುತ್ತಿದ್ದ “ಶಿಂಗಣ್ಣ’ ವ್ಯಂಗ್ಯಚಿತ್ರ ಮತ್ತು ಅವರು ಆರಂಭಿಸಿದ “ಇಂದ್ರಧನುಷ್‌’ ವ್ಯಂಗ್ಯ ಪತ್ರಿಕೆಯ ಪ್ರಭಾವ ಕೂಡಾ ಇತ್ತು. 

ನಾನು ಬೋರ್ಡ್‌ ಹೈಸ್ಕೂಲಿನ ಒಂಬತ್ತನೇ ತರಗತಿಯಲ್ಲಿ ಇ¨ªಾಗ ಟೈಫಾçಡ್‌ ಕಾಯಿಲೆಯಿಂದಾಗಿ ಎರಡು ತಿಂಗಳು ಶಾಲೆಗೆ ಹೋಗಲಾಗಲಿಲ್ಲ. ಇಂಗ್ಲಿಶ್‌ ಪಾಠ ನನಗೆ ಬಹಳ ಕಷ್ಟವಾಗುತ್ತಿತ್ತು. ಆಗ ಅಪ್ಪ ನಮ್ಮ ಮನೆಯ ಹಿಂದಿನ ಹಿತ್ತಲಲ್ಲಿ ವಾಸಿಸುತ್ತಿದ್ದ ಅವರ ಗುರು ಹಿರಿಯ ಸಾಹಿತಿ ಉಗ್ರಾಣ ಮಂಗೇಶರಾಯರಲ್ಲಿ ನನಗೆ ಇಂಗ್ಲಿಶ್‌ ಟ್ಯೂಶನ್‌ ಕೊಡಿಸುವ ವ್ಯವಸ್ಥೆ ಮಾಡಿಸಿದರು. ಮಂಗೇಶರಾಯರು ಅಚ್ಚುಕಟ್ಟಾಗಿ ಎರಡು ತಿಂಗಳ ಕಾಲ ಉಚಿತವಾಗಿ ನನಗೆ ಇಂಗ್ಲಿಶ್‌ ಪಾಠ ಮಾಡಿದರು. ಉಗ್ರಾಣ ಮಂಗೇಶರಾಯರ ಶಿಷ್ಯ ಎನ್ನುವ ಹೆಮ್ಮೆ ನನ್ನದು. 

ಅಪ್ಪನ ಆಣತಿಯಂತೆ ನಾನು ಬಹುಮಟ್ಟಿಗೆ ಪ್ರತಿದಿನ ಸಂಜೆ ಕೊಂಬೆಟ್ಟು ಮನೆಯಿಂದ ಕೋರ್ಟು ರಸ್ತೆಯ ಮಾಳಿಗೆಯಲ್ಲಿದ್ದ ಸಾರ್ವಜನಿಕ ಗ್ರಂಥಾಲಯಕ್ಕೆ ಹೋಗುತ್ತಿ¨ªೆ. ಪತ್ರಿಕೆಗಳ ವ್ಯಾಪಕ ಓದಿನ ಅನುಭವ ಸಿಕ್ಕಿದ್ದು ನನಗೆ ಈ ಲೈಬ್ರೆರಿಯಲ್ಲಿ. ಆ ಕಾಲದಲ್ಲಿ (1960-63) ನಾನು ಓದುತ್ತಿದ್ದ ಪತ್ರಿಕೆಗಳು- ಪ್ರಪಂಚ, ಜನಪ್ರಗತಿ, ಕರ್ಮವೀರ, ಪ್ರಜಾಮತ, ವಿಚಾರವಾಣಿ, ಕಸ್ತೂರಿ, ನವಭಾರತ, ಪ್ರಜಾವಾಣಿ. ಹೀಗೆ ಮನೆಯಿಂದ ಲೈಬ್ರೆರಿಗೆ ಹೋಗುವ ದಾರಿಯಲ್ಲಿ ಹೆಚ್ಚಾಗಿ ಎಪಿ ಸುಬ್ಬಯ್ಯನವರ ಮಾಳಿಗೆಯಲ್ಲಿನ ಸಂಜೆಯ ಮಾತುಕತೆಗೆ ಬಾಲವನದಿಂದ ನಡೆದುಕೊಂಡು ಬರುತ್ತಿದ್ದ ಶಿವರಾಮ ಕಾರಂತರನ್ನು ಕಾಣುತ್ತಿದ್ದೆ. ನಾನು ಕೈ ಜೋಡಿಸಿ ನಮಸ್ಕರಿಸಿದ ಕೂಡಲೇ ತಲೆ ಕೆಳಗೆ ಹಾಕಿ ನಡೆದುಬರುತ್ತಿದ್ದ ಕಾರಂತರು ಪ್ರತಿ ನಮಸ್ಕಾರ ಮಾಡುತ್ತಿದ್ದರು. ಅದು ನನಗೆ ಬೆರಗು ಮತ್ತು ಧನ್ಯತೆಯ ಕ್ಷಣ. 

ಹೈಸ್ಕೂಲು ಶಿಕ್ಷಣವು ವಿದ್ಯಾರ್ಥಿಗಳ ಬದುಕಿನ ಸಂಕ್ರಮಣದ ಕಾಲ. ಹದಿಹರೆಯದ ನಡುವಯಸ್ಸಿನಲ್ಲಿ ದೇಹ ಮತ್ತು ಮನಸ್ಸುಗಳಲ್ಲಿ ಹೊಸ ಸಂಚಲನದ ಕಾಮನಬಿಲ್ಲು ಮೂಡುತ್ತಿರುವಾಗ ಏನೆಲ್ಲವನ್ನು ಕಲಿಯಬೇಕು ಮತ್ತು ಕಲಿಯಬಾರದು ಎನ್ನುವುದು ಮುಂದಿನ ಬದುಕಿಗೆ ದಾರಿದೀಪಗಳನ್ನು ತೋರಿಸುತ್ತದೆ. ಪಾಠ-ಆಟಗಳ ಜಗತ್ತನ್ನು ವಿಸ್ತರಿಸಿದ, ಆಲಯ-ಬಯಲುಗಳ ಬೌಂಡರಿ ಗೆರೆಗಳನ್ನು ತೋರಿಸಿದ, “ನಾನು’ ಸರ್ವನಾಮದ ಬದಲು “ನಾವು’ ಬಹುವಚನದ ಪಾಠವನ್ನು ಕಲಿಸಿದ, ಮೇಲಕ್ಕೆ ಏರಲು ಮೆಟ್ಟಿಲುಗಳನ್ನು ಕಾಣಿಸಿದ ನನ್ನ ಬದುಕಿನ ಶೈಕ್ಷಣಿಕ ಏಣಿ- ಕೊಂಬೆಟ್ಟು ಶಾಲೆ.

ಬಿ. ಎ. ವಿವೇಕ ರೈ

ಟಾಪ್ ನ್ಯೂಸ್

Parliament winter session: ಇಂದಿನಿಂದ ಸಂಸತ್‌ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?

Parliament Winter Session: ಇಂದಿನಿಂದ ಸಂಸತ್‌ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

ಗೂಗಲ್ ಮ್ಯಾಪ್ ನಂಬಿ ನಿರ್ಮಾಣ ಹಂತದ ಸೇತುವೆಯಲ್ಲಿ ಚಲಿಸಿ ನದಿಗೆ ಬಿದ್ದ ಕಾರು, ಮೂವರು ಮೃತ್ಯು

ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

9

Cooker Story: ಹತ್ತು ಸಲ ಕೂಗಿದ್ರೂ  ಅವರಿಗೆ ಗೊತ್ತಾಗಲಿಲ್ಲ..!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

3

Kannada: ವೀರ ಕನ್ನಡಿಗ: ತನು ಕನ್ನಡ, ಮನ(ನೆ) ಕನ್ನಡ

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Bengaluru: ಪಾರ್ಕ್‌ನಲ್ಲಿ ಮಲಗಿದ್ದಾಗ ಮರ ಬಿದ್ದು ಬಿಬಿಎಂಪಿ ಕಸದ ಲಾರಿ ಚಾಲಕ ಸಾವು

Bengaluru: ಪಾರ್ಕ್‌ನಲ್ಲಿ ಮಲಗಿದ್ದಾಗ ಮರ ಬಿದ್ದು ಬಿಬಿಎಂಪಿ ಕಸದ ಲಾರಿ ಚಾಲಕ ಸಾವು

Fraud: ಸೈಟ್‌ ಮಾರುವುದಾಗಿ ನಂಬಿಸಿ 56 ಲಕ್ಷ ರೂ. ವಂಚನೆ

Fraud: ಸೈಟ್‌ ಮಾರುವುದಾಗಿ ನಂಬಿಸಿ 56 ಲಕ್ಷ ರೂ. ವಂಚನೆ

4

Bengaluru: ಹೋಟೆಲ್‌ನ ಬಾತ್‌ರೂಮ್‌ನಲ್ಲಿ ಕಾರ್ಪೆಂಟರ್ ನೇಣಿಗೆ ಶರಣು

3

Arrested: ಉಸಿರುಗಟ್ಟಿಸಿ ಪತ್ನಿಯ ಕೊಂದು ಮಗುವಿನ ಜೊತೆಗೆ ಪತಿ ಪರಾರಿ

2

Kadalekai Parishe: ಇಂದಿನಿಂದ ಬಸವನಗುಡಿ ಕಡಲೆಕಾಯಿ ಪರಿಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.