ಎ ಖಾತಾ ಕುರಿತು ಶೀಘ್ರ ತೀರ್ಮಾನ
Team Udayavani, Aug 28, 2018, 12:46 PM IST
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿನ “ಬಿ’ ಖಾತಾ ನಿವೇಶನಗಳಿಗೆ “ಎ’ ಖಾತಾ ನೀಡಲು ಕಂದಾಯ ಕಾಯ್ದೆಗೆ ತಿದ್ದುಪಡಿ ತರುವಂತೆ ಈಗಾಗಲೇ ಸರ್ಕಾರಕ್ಕೆ ಮನವಿ ಮಾಡಿದ್ದು, ಶೀಘ್ರದಲ್ಲಿಯೇ ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪಾಲಿಕೆ ಆಯುಕ್ತ ಎನ್.ಮಂಜುನಾಥ್ ತಿಳಿಸಿದ್ದಾರೆ.
ಸೋಮವಾರ ನಡೆದ ಪಾಲಿಕೆ ಸಭೆಯಲ್ಲಿ ಸದಸ್ಯರು ಬಿ ಖಾತಾ ನಿವೇಶನ ಮಾಲೀಕರು ಎದುರಿಸುತ್ತಿರುವ ಸಮಸ್ಯೆಗಳ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಅಕ್ರಮ-ಸಕ್ರಮ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದು, ಅದು ಕಟ್ಟಡ ನಿಮಯ ಉಲ್ಲಂಘನೆಗಳಿಗೆ ಸಂಬಂಧಿಸಿದೆ. ಹೀಗಾಗಿ ಬಿ ಖಾತಾ ನಿವೇಶನಗಳಿಗೆ ಎ ಖಾತಾ ನೀಡುವ ಕುರಿತು ಅಟರ್ನಿ ಜನರಲ್ ಅವರೊಂದಿಗೆ ಚರ್ಚಿಸಲಾಗಿದೆ ಎಂದರು.
ಯಾವುದೇ ಕೃಷಿ ಭೂಮಿಯನ್ನು ವಸತಿ ಬಳಕೆಗೆ ಬಳಸುವಾಗ ಜಿಲ್ಲಾಧಿಕಾರಿಗಳ ಮೂಲಕ ಭೂಮಿ ಬಳಕೆಯನ್ನು ಪರಿವರ್ತಿಸಿಕೊಳ್ಳಬೇಕು. ಆನಂತರ ಅಲ್ಲಿ ಬಡಾವಣೆ ನಿರ್ಮಾಣಕ್ಕೆ ಸಂಬಂಧಿಸಿದ ಪ್ರಾಧಿಕಾರದಿಂದ ಅನುಮತಿ ಪಡೆದರೆ ಅಂತಹ ನಿವೇಶನಗಳಿಗೆ ಎ ಖಾತಾ ನೀಡಲಾಗುತ್ತದೆ. ಇನ್ನು ಭೂ ಪರಿವರ್ತನೆಯಾಗದಿರುವ ನಿವೇಶನಗಳಿಗೆ ಬಿ ಖಾತಾ ನೀಡಲಾಗುತ್ತದೆ ಎಂದು ಹೇಳಿದರು.
ಪಾಲಿಕೆ ವ್ಯಾಪ್ತಿಗೆ ಹೊಸದಾಗಿ ಸೇರಿದ 600 ಚದರ ಕಿ.ಮೀ. ಪ್ರದೇಶದಲ್ಲಿ ಭೂ ಪರಿತರ್ವನೆಯಾಗದ ಹೆಚ್ಚಿನ ನಿವೇಶನಗಳಿವೆ. ಅಲ್ಲಿ ಎಲ್ಲ ರೀತಿಯ ನಿಮಯಗಳನ್ನು ಉಲ್ಲಂ ಸಿ ಕಟ್ಟಡಗಳನ್ನು ನಿರ್ಮಿಸಿದರೂ, ಪಾಲಿಕೆಯಿಂದ ಮೂಲಸೌಕರ್ಯ, ಜಲಮಂಡಳಿಯಿಂದ ನೀರು, ಒಳಚರಂಡಿ ಸೌಲಭ್ಯಗಳನ್ನು ನೀಡಿ, ತೆರಿಗೆ ಸಂಗ್ರಹಿಸುತ್ತಿರುವುದರಿಂದ ಎ ಖಾತಾ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ನಿಯಮ ಪಾಲಿಸದಿದ್ದರೆ ಬಿ ವ್ಯಾಪ್ತಿಗೆ: ಡಿಸಿ ಪರಿವರ್ತನೆ ಮಾಡಿಕೊಂಡು ಎ ಖಾತಾ ಪಡೆದಿದ್ದರೂ, ನಕ್ಷೆ ಮಂಜೂರಾತಿ, ಸ್ವಾಧೀನಾನುಭವ ಪ್ರಮಾಣ ಪತ್ರ ಪಡೆಯದ ನಿವೇಶನಗಳನ್ನು ಬಿ ಖಾತಾ ಆಗಿ ಪರಿಗಣಿಸಲಾಗುತ್ತದೆ. ಪಾಲಿಕೆಯಲ್ಲಿ ಇಂತಹ ಮೂರು ಲಕ್ಷ ಆಸ್ತಿಗಳಿದ್ದು, ಅವುಗಳಿಗೆ ಎ ಖಾತಾ ನೀಡುವ ಅಗತ್ಯವಿದೆ.
ಆದರೆ, 2008ರಲ್ಲಿ ರಾಜ್ಯ ಸರ್ಕಾರ ಕಂದಾಯ ಕಾಯ್ದೆಗೆ ತಿದ್ದುಪಡಿ ತಂದ ಹಿನ್ನೆಲೆಯಲ್ಲಿ, ಯಾವುದೇ ಆಸ್ತಿಗೂ ಎ ಖಾತಾ ನೀಡುತ್ತಿಲ್ಲ. ಇದೀಗ ಅಡ್ವೋಕೇಟ್ ಜನರಲ್ ಸಲಹೆ ಪಡೆದು ಕಂದಾಯ ಕಾಯ್ದೆಗೆ ಮತ್ತೆ ತಿದ್ದುಪಡಿ ತರುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗುವುದು. ತಿದ್ದುಪಡಿ ತಂದರೆ ಬಿ ಖಾತಾ ನಿವೇಶನಗಳಿಗೆ ಎ ಖಾತೆ ವಿತರಿಸಬಹುದು ಎಂದು ಮಂಜುನಾಥ ಪ್ರಸಾದ್ ತಿಳಿಸಿದರು.
ಹಕ್ಕುಪತ್ರ ನೀಡುವಂತೆ ಆಗ್ರಹ: ಕೊಳೆಗೇರಿಗಳಲ್ಲಿ ಹತ್ತಾರು ವರ್ಷಗಳಿಂದ ವಾಸಿಸುತ್ತಿರುವ ನಿವಾಸಿಗಳಿಗೆ ಹಕ್ಕುಪತ್ರ ನೀಡಲು ಸರ್ಕಾರದ ಆದೇಶವಿದ್ದರೂ ಪಾಲಿಕೆ ಮುಂದಾಗುತ್ತಿಲ್ಲ ಎಂದು ಶಾಸಕ ಕೆ. ಗೋಪಾಲಯ್ಯ ಆಗ್ರಹಿಸಿದರು. ಸಭೆಯ ಆರಂಭದಲ್ಲಿ ಮಾತನಾಡಿದ ಅವರು, ಕೊಳೆಗೇರಿಗಳಲ್ಲಿ ವಾಸ ಮಾಡುತ್ತಿರುವ ಶೇ.60ರಷ್ಟು ಜನರಿಗೆ ಈವರೆಗೆ ಹಕ್ಕುಪತ್ರ ಸಿಕ್ಕಿಲ್ಲ.
ಇದರಿಂದಾಗಿ ಪಾಲಿಕೆಗೆ ಬರಬೇಕಾದ ಆದಾಯವೂ ಇಲ್ಲದಂತಾಗಿದ್ದು, ಅಲ್ಲಿನ ಜನರು ಅಂತತ್ರ ಸ್ಥಿತಿಯಲ್ಲಿದ್ದಾರೆ. ಹೀಗಾಗಿ ಕೂಡಲೇ ಅವರಿಗೆ ಹಕ್ಕುಪತ್ರ ನೀಡುವ ಕುರಿತು ಪಾಲಿಕೆಯಲ್ಲಿ ನಿರ್ಣಯ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಮಂಜುನಾಥ್ ಪ್ರಸಾದ್ ಉತ್ತರಿಸಿ, ಪಾಲಿಕೆಯಿಂದ ಕೊಳಗೇರಿಗಳಿಗೆ ಹಕ್ಕುಪತ್ರ ನೀಡಲು ಬರುವುದಿಲ್ಲ. ಹಕ್ಕುಪತ್ರ ನೀಡದಂತೆ 2011ರಲ್ಲಿ ಕ್ಯಾಬಿನೆಟ್‌ನಲ್ಲಿ ನಿರ್ಣಯ ಕೈಗೊಂಡಿದ್ದು, ಕೊಳಗೇರಿಗಳಲ್ಲಿ ವಸತಿ ಸಂಕೀರ್ಣಗಳನ್ನು ನಿರ್ಮಿಸಲು ಅವಕಾಶವಿದೆ ಎಂದರು.
ಮಾಜಿ ಮೇಯರ್ ಗರಂ: ಕಾಲುವೆಗಳಲ್ಲಿ ಪ್ರತಿ ವರ್ಷ ಹೂಳು ತೆಗೆಯುವ ಗುತ್ತಿಗೆದಾರರಿಗೆ ಬಿಲ್ ಪಾವತಿಸಲು ವಿಳಂಬ ಮಾಡುತ್ತಿದ್ದಾರೆ ಎಂದು ಮಾಜಿ ಮೇಯರ್ ಶಾಂತಕುಮಾರಿ ಆಕ್ರೋಶ ವ್ಯಕ್ತಪಡಿಸಿದರು. ತಮ್ಮ ವಾರ್ಡ್‌ನಲ್ಲಿ ಚರಂಡಿಗಳಲ್ಲಿ ಹೂಳು ತೆಗೆದು ಮೂರು ವರ್ಷಗಳಾಗಿವೆ.
ಆದರೂ ಬಿಲ್ ಪಾವತಿಸಿಲ್ಲ. ಇದರಿಂದ ಹೊಸದಾಗಿ ಹೂಳು ತೆಗೆಯಲು ಗುತ್ತಿಗೆದಾರರೇ ಬರುತ್ತಿಲ್ಲ. ಸಣ್ಣ ಮಳೆಗೆ ಮಳೆನೀರು ರಸ್ತೆಯಲ್ಲಿ ಹರಿಯುವಂತಾಗಿದೆ ಎಂದು ದೂರಿದರು. ಅದಕ್ಕೆ ಸ್ಪಂದಿಸದ ಮೇಯರ್ ಸಂಪತ್‌ರಾಜ್, ಕೂಡಲೇ ಗುತ್ತಿಗೆದಾರರಿಗೆ ಬಿಲ್ ಪಾವತಿಸುವಂತೆ ಸೂಚಿಸಿದರು.
ಮಳೆ ಅನಾಹುತ ತಡೆಗೆ ಸಜ್ಜಾಗಿ: ಕೇರಳ, ಕೊಡಗಿನಲ್ಲಿ ಆಗಿರುವ ಅನಾಹುತದಿಂದ ಪಾಲಿಕೆ ಎಚ್ಚೆತ್ತುಕೊಳ್ಳಬೇಕು. ಸದಸ್ಯರು ತಮ್ಮ ವಾರ್ಡ್‌ಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ತಮ್ಮ ವಾರ್ಡ್ ಸಮಸ್ಯೆಗಳ ಕುರಿತು ಲಿಖೀತ ಮನವಿ ನೀಡಿದರೆ ಕೂಡಲೇ ಪರಿಹಾರಕ್ಕೆ ಮುಂದಾಗುತ್ತೇವೆ ಎಂದು ಮೇಯರ್ ತಿಳಿಸಿದರು.
ಇದೇ ವೇಳೆ ಹಲವು ಪಾಲಿಕೆ ಸದಸ್ಯರು ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಗೆ ಪಾಲಿಕೆ ಮುಂದಾಗುತ್ತಿಲ್ಲ. ಇದರಿಂದಾಗಿ ಹಲವು ಭಾಗಗಳಲ್ಲಿ ಪ್ರವಾಹ ಉಂಟಾಗುತ್ತಿದೆ ಎಂದು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಆಯುಕ್ತರು, ರಾಜಕಾಲುವೆ ತೆರವು ವಿಚಾರವಾಗಿ ಪಾಲಿಕೆಯಿಂದ ಭೂಮಾಪಕರನ್ನು ನೇಮಿಸಿ ಒಟ್ಟು 434 ಕಡೆ ಸರ್ವೆ ನಡೆಸಲಾಗಿದೆ. ಭೂ ಮಾಪಕರು ಒತ್ತುವರಿ ಗುರುತಿಸಿಕೊಟ್ಟ ಕೂಡಲೇ ತೆರವು ಕಾರ್ಯಾಚರಣೆ ನಡೆಸಲಿದ್ದೇವೆ ಎಂದು ಹೇಳಿದರು.
ಮರ ತೆರವಿಗೆ 28 ತಂಡ: ಪಾಲಿಕೆ ವ್ಯಾಪ್ತಿಯಲ್ಲಿ ಬೀಳುವ ಮರಗಳ ತೆರವಿಗೆ ಸಿಬ್ಬಂದಿ ಕೊರತೆ ಇದೆ. 28 ವಿಧಾನಸಭಾ ಕ್ಷೇತ್ರಗಳಿಗೆ ಒಂದು ತಂಡವನ್ನು ನೀಡಬೇಕು ಎಂದು ಪಾಲಿಕೆಯ ಅರಣ್ಯ ವಿಭಾಗದ ಉಪ ಸಂರಕ್ಷಣಾಧಿಕಾರಿ ಎಂ.ಕೆ.ಚೋಳರಾಜಪ್ಪ ಮನವಿ ಮಾಡಿದರು. ಇದಕ್ಕೂ ಮೊದಲು ಬಿದ್ದ, ಅಪಾಯದಲ್ಲಿರುವ ಮರಗಳ ತೆರವಿಗೆ ಸಂಬಂಧಿಸಿದವರು ಕ್ರಮಕೈಗೊಳ್ಳುತ್ತಿಲ್ಲ.
ಹಣ ಕೊಟ್ಟರೆ ಸದೃಢವಾಗಿರುವ ಮರಗಳನ್ನು ರಾತ್ರೋರಾತ್ರಿ ತೆರವುಗೊಳಿಸುತ್ತಾರೆ ಎಂದು ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ ಸೇರಿ ಹಲವು ಆರೋಪಿಸಿದರು. ಇದಕ್ಕೆ ದನಿಗೂಡಿಸಿದ ಬಾಗಲುಗುಂಟೆ ಪಾಲಿಕೆ ಸದಸ್ಯ, ಹಲವು ಬಾರಿ ದೂರು ನೀಡಿದರೂ ಮರ ತೆರವುಗೊಳಿಸದ ಹಿನ್ನೆಲೆಯಲ್ಲಿ ಮರದ ಕೊಂಬೆ ಬಿದ್ದು 6 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ ಎಂದು ದೂರಿದರು. ಅದಕ್ಕೆ ಕೋಪಗೊಂಡ ಮೇಯರ್, ನಿರ್ಲಕ್ಷ್ಯ ವಹಿಸಿದ ಅಧಿಕಾರಿಯನ್ನು ಕೂಡಲೇ ಅಮಾನತುಗೊಳಿಸುವಂತೆ ಸೂಚಿಸಿದರು.
ಹಾವು ಹಿಡಿಯುವ ತರಬೇತಿ ಪಡಿಬೇಕಾ?: ನಗರದಲ್ಲಿ ಹಾವು ಹಿಡಿಯುವಂತಹ ವನಪಾಲಿಕೆಗೆ ಎರಡು ವರ್ಷಗಳಿಂದ ಗೌರವಧನ ನೀಡದಿರುವುದಕ್ಕೆ ಪಾಲಿಕೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ವನಪಾಲಕರಿಗೆ ನೀವು ಗೌರವಧನ ನೀಡುತ್ತಿರಾ ಇಲ್ಲಾ, ಪಾಲಿಕೆ ಸದಸ್ಯರೇ ಹಾವು ಹಿಡಿಯುವ ತರಬೇತಿ ಪಡೆಯಬೇಕಾ ಎಂದು ಮೇಯರ್, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಪೌರಕಾರ್ಮಿಕರನ್ನು ಕೊಡಿ: ಕೆ.ಆರ್.ಪುರ ಮಾರುಕಟ್ಟೆಯಲ್ಲಿ ನಿತ್ಯ ಹತ್ತಾರು ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಮಾರುಕಟ್ಟೆಗೆ ಕೇವಲ ಇಬ್ಬರು ಪೌರಕಾರ್ಮಿಕರನ್ನು ನಿಯೋಜಿಸಲಾಗಿದೆ. ಇದರಿಂದ ತ್ಯಾಜ್ಯ ವಿಲೇವಾರಿ ಕಷ್ಟವಾಗುತ್ತಿದೆ. ಅಧಿಕಾರಿಗಳಿಗೆ ತಿಳಿಸಿದರೂ ಹೆಚ್ಚುವರಿ ಕಾರ್ಮಿಕರ ನೀಡುತ್ತಿಲ್ಲ ಎಂದು ದೇವಸಂದ್ರ ಪಾಲಿಕೆ ಸದಸ್ಯ ಶ್ರೀಕಾಂತ್ ದೂರಿದರು. ಮೇಯರ್ ಸ್ಪಂದಿಸಿ, ಕೂಡಲೇ ಹೆಚ್ಚುವರಿ ಕಾರ್ಮಿಕರ ನೀಡುವಂತೆ ಸೂಚಿಸುವುದಾಗಿ ತಿಳಿಸಿದರು.
ಅಜಾತಶತ್ರುವಿಗೆ ಪಾಲಿಕೆ ಶ್ರದ್ಧಾಂಜಲಿ: ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನಕ್ಕೆ ಬಿಬಿಎಂಪಿ ಸಭೆಯಲ್ಲಿ ಸಂತಾಪ ಸೂಚಿಸಿದ ಸದಸ್ಯರು, ಪಕ್ಷಬೇಧ ಮರೆತು ಅವರ ಸಾಧನೆಗಳ ಗುಣಗಾನ ಮಾಡಿದರು. ಸಭೆಯ ಆರಂಭದಲ್ಲಿ ಆಡಳಿತ ಪಕ್ಷದ ನಾಯಕ ಎಂ.ಶಿವರಾಜು ಅವರು ಸಂತಾಪ ಸೂಚನೆ ಮಂಡಿಸಿ, ವಾಜಪೇಯಿ ಅವರ ದೇಶಪ್ರೇಮ, ದೇಶದ ಬಗೆಗಿನ ಅವರ ಕಾಳಜಿ, ಬೇರೆ ಪಕ್ಷಗಳಿಗೆ ಅವರು ನೀಡುತ್ತಿದ್ದ ಗೌರವ, ಕ್ಲಿಷ್ಟಕರ ಸನ್ನಿವೇಶದಲ್ಲಿ ದೇಶ ಮುನ್ನೆಡಿಸಿದ ರೀತಿಯನ್ನು ಸ್ಮರಿಸಿದರು.
ನಂತರದಲ್ಲಿ ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ, ವಾಜಪೇಯಿ ಅವರು ಭಾರತ ಕಂಡ ಧೀಮಂತ ನಾಯಕಾಗಿದ್ದರು. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮೆಟ್ರೋ ಯೋಜನೆಗಳಿಗೆ ಅವರು ಕಾರಣಕರ್ತರಾಗಿದ್ದಾರೆ ಎಂದರು. ಅದರಂತೆ ಜೆಡಿಎಸ್ ಪಕ್ಷದ ನಾಯಕಿ ನೇತ್ರಾ ನಾರಾಯಣ್, ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ, ಉಮೇಶ್ ಶೆಟ್ಟಿ, ನರಸಿಂಹ ನಾಯಕ್ ಅವರನ್ನು ಸ್ಮರಿಸಿದರು.
ಇದೇ ವೇಳೆ ಶಾಸಕರಾದ ಮುನಿರತ್ನ ಹಾಗೂ ಕೆ.ಗೋಪಾಲಯ್ಯ ಅವರು ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರು ಶಾಶ್ವತವಾಗಿ ಉಳಿಯಲು ಬಿಬಿಎಂಪಿ ನಿರ್ಮಾಣ ಮಾಡುವ ಅಥವಾ ನಿರ್ಮಿಸಿರುವ ಕಟ್ಟಡ ಅಥವಾ ಯೋಜನೆಗೆ ಅವರ ಹೆಸರಿಡಬೇಕು ಎಂದು ಸಲಹೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.