ದಂಡುಪಾಳ್ಯ ತಂಡದ ಹಂತಕರ ಬಿಡುಗಡೆ ಇಲ್ಲ
Team Udayavani, Sep 4, 2018, 12:19 PM IST
ಬೆಂಗಳೂರು: ಸುಮಾರು 17 ವರ್ಷಗಳ ಹಿಂದೆ ನಡೆದಿದ್ದ ಗೀತಾ ಎಂಬುವವರ ಕೊಲೆ ಪ್ರಕರಣದಲ್ಲಿ ದಂಡುಪಾಳ್ಯ ತಂಡದ ಹಂತಕರನ್ನು ಹೈಕೋರ್ಟ್ ಸೋಮವಾರ ಖುಲಾಸೆಗೊಳಿಸಿದೆ. ಆದರೆ, ಇನ್ನೂ ಇವರ ಹೆಸರಲ್ಲಿ ಹಲವು ಪ್ರಕರಣಗಳು ಬಾಕಿ ಇರುವುದರಿಂದ ಸದ್ಯಕ್ಕೆ ಇವರಿಗೆ ಬಿಡುಗಡೆ ಭಾಗ್ಯವಿಲ್ಲ ಎಂದಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಪೀಠ, ಗೀತಾ ಕೊಲೆ ಪ್ರಕರಣದಿಂದ ದಂಡುಪಾಳ್ಯ ತಂಡದ ಕುಖ್ಯಾತ ದೊಡ್ಡ ಹನುಮ, ವೆಂಕಟೇಶ, ಮುನಿಕೃಷ್ಣ, ನಲ್ಲತಿಮ್ಮನನ್ನು ಖುಲಾಸೆಗೊಳಿಸಿ ಆದೇಶಿಸಿತು. ಆದರೆ, ಗೀತಾ ಅವರಿಗೆ ಸೇರಿದ ಚಿನ್ನಾಭರಣ ದರೋಡೆ ಮಾಡಿದ್ದ ಪ್ರಕರಣದಲ್ಲಿ ಈ ನಾಲ್ವರು ಆರೋಪಿಗಳನ್ನು ದೋಷಿಗಳಾಗಿ ತೀರ್ಮಾನಿಸಿರುವ ಹೈಕೋರ್ಟ್, ಅವರಿಗೆ ಅಧೀನ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಏಳು ವರ್ಷ ಜೈಲು ಶಿಕ್ಷೆಗೆ ಕಡಿತಗೊಳಿಸಿದೆ. ಅಲ್ಲದೆ, ಪ್ರಕರಣದಲ್ಲಿ ಆರೋಪಿಯಾಗಿದ್ದ ಲಕ್ಷಮ್ಮಳನ್ನು ಕೊಲೆ ಹಾಗೂ ದರೋಡೆ ಆರೋಪಗಳಿಂದ ಮುಕ್ತಗೊಳಿಸಿದೆ.
ಏಳು ವರ್ಷ ಶಿಕ್ಷೆಗೆ ಗುರಿಯಾಗಿರುವ ನಾಲ್ವರು ಅಪರಾಧಿಗಳಿಗೆ ತಲಾ ಐದು ಸಾವಿರ ರೂ. ದಂಡ ವಿಧಿಸಿದ ಹೈಕೋರ್ಟ್, ಬೇರೆ ಪ್ರಕರಣಗಳಲ್ಲಿ ಅಪರಾಧಿಗಳ ಬಂಧನ ಅಗತ್ಯವಿಲ್ಲ ಎಂದಾದರೆ ಕೂಡಲೇ ಬಿಡುಗಡೆ ಮಾಡುವಂತೆ ಜೈಲು ಪ್ರಾಧಿಕಾರಿಗಳಿಗೆ ಆದೇಶಿಸಿದೆ. ಆದರೆ, ಇವರ ವಿರುದ್ಧ ಕೆಲ ಅಪರಾಧ ಪ್ರಕರಣಗಳು ಇನ್ನು ಬಾಕಿ ಇರುವ ಕಾರಣ, ಸದ್ಯಕ್ಕೆ ಇವರ ಬಿಡುಗಡೆ ಕಷ್ಟ.
ನಗರದ ಅಗ್ರಹಾರ ದಾಸರಹಳ್ಳಿಯಲ್ಲಿ 2000 ನವೆಂಬರ್ 7ರಂದು ಗೀತಾ ಎಂಬುವವರನ್ನು ಕೊಲೆ ಮಾಡಿ, ಅವರ ಚಿನ್ನಾಭರಣಗಳನ್ನು ದರೋಡೆ ಮಾಡಲಾಗಿತ್ತು. ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ್ದ ಪೊಲೀಸರು ದಂಡುಪಾಳ್ಯದ ಐವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಅಧೀನ ನ್ಯಾಯಾಲಯವು ಕೊಲೆ ಹಾಗೂ ದರೋಡೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.