ಆರ್‌ಎಂಎಸ್‌ಎ ಶಿಕ್ಷಕರ ಮುಷ್ಕರ ತಾತ್ಕಾಲಿಕ ಸ್ಥಗಿತ
Team Udayavani, Sep 6, 2018, 11:32 AM IST
ಬೆಳ್ತಂಗಡಿ: ತಾ|ನಲ್ಲಿ ಆರ್‌ಎಂಎಸ್‌ಎನಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 23 ಮಂದಿ ಶಿಕ್ಷಕರು ವೇತನಕ್ಕೆ ಆಗ್ರಹಿಸಿ ಇಲ್ಲಿನ ಬಿಇಒ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವ ಸ್ಥಳಕ್ಕೆ ಬುಧವಾರ ಶಾಸಕ ಹರೀಶ್ ಪೂಂಜ ಭೇಟಿ ನೀಡಿ, ಸೆ. 6ರ ಸಂಜೆಯೊಳಗೆ ವೇತನ ಲಭಿಸದೇ ಇದ್ದರೆ ತಾನು ಶಿಕ್ಷಕರ ಪ್ರತಿನಿಧಿಗಳ ಜತೆಗೆ ಬೆಂಗಳೂರಿನಲ್ಲಿ ಶಿಕ್ಷಣ ಇಲಾಖೆಯ ಮುಖ್ಯ ಕಾರ್ಯದರ್ಶಿಗಳ ಮುಂದೆ ಪ್ರತಿಭಟನೆ ನಡೆಸುವುದಾಗಿ ಭರವಸೆ ನೀಡಿದ ಬಳಿಕ ಶಿಕ್ಷಕರು ತಮ್ಮ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ.
ಈ ಶಿಕ್ಷಕರಿಗೆ 7 ತಿಂಗಳಿನಿಂದ ವೇತನ ಸಿಗದೆ ಸಂಬಂಧಪಟ್ಟವರಿಗೆ ಮನವಿ ನೀಡಿದ ಬಳಿಕವೂ ಸಮಸ್ಯೆ ಬಗೆಹರಿಯದೇ ಇರುವ ಹಿನ್ನೆಲೆಯಲ್ಲಿ ಸೆ. 4 ರಂದು ಮುಷ್ಕರ ಆರಂಭಿಸಿದ್ದರು. ಬುಧವಾರ ಸ್ಥಳಕ್ಕೆ ಭೇಟಿ ನೀಡಿದ ಶಾಸಕರು ಶಿಕ್ಷಕರ ಸಮಸ್ಯೆಗಳನ್ನು ಆಲಿಸಿ, ತಾನು ಈಗಾಗಲೇ ಇಲಾಖೆಯ ಮುಖ್ಯ ಕಾರ್ಯದರ್ಶಿ ಜತೆ ಚರ್ಚೆ ನಡೆಸಿದ್ದೇನೆ. ಅವರು ಸಮಸ್ಯೆ ಬಗೆಹರಿಸುವ ಭರವಸೆಯನ್ನೂ ನೀಡಿದ್ದಾರೆ. ಸೆ. 6ರಂದು ಸಂಜೆಯೊಳಗೆ ವೇತನ ಆಗದೇ ಇದ್ದರೆ ಬೆಂಗಳೂರಿನಲ್ಲಿ ನಿಮ್ಮ ಸಂಘದ ಪ್ರಮುಖರನ್ನು ಕರೆದುಕೊಂಡು ಹೋಗಿ ಪ್ರತಿಭಟನೆ ನಡೆಸುತ್ತೇನೆ. ಹೀಗಾಗಿ ನೀವು ಮುಷ್ಕರ ಕೈಬಿಟ್ಟು ತರಗತಿಗಳಿಗೆ ತೆರಳಿ ಪಾಠ ಮಾಡುವಂತೆ ತಿಳಿಸಿದರು.
ಆಗ ಕೆಲವರಿಂದ ವಿರೋಧಗಳು ಬಂದಾಗ ಹಾಗಾದರೆ ನೀವು ಮುಷ್ಕರ ಮುಂದುವರಿಸಿ ಎಂದು ಶಾಸಕರು ಗರಂ ಆಗಿ ಉತ್ತರಿಸಿದರು. ಬಳಿಕ ಶಾಸಕರ ಭರವಸೆಯ ಮಾತಿಗೆ ಮನ್ನಣೆ ನೀಡಿ, ಈಗ ಪ್ರತಿಭಟನೆಯನ್ನು ಹಿಂಪಡೆಯುತ್ತೇವೆ. ಶನಿವಾರದೊಳಗೆ ವೇತನ ಸಿಗದೇ ಇದ್ದಲ್ಲಿ, ಶಿಕ್ಷಕರ ಸಂಘಗಳ ಸಹಕಾರದಿಂದ ದೊಡ್ಡ ಮಟ್ಟದ ಮುಷ್ಕರ ಆರಂಭಿಸುವುದಾಗಿ ತಿಳಿಸಿದರು. ನಿಮ್ಮ ವೇತನವನ್ನು ಹಿಡಿದುಕೊಂಡೇ ನಾನು ಬೆಂಗಳೂರಿನಿಂದ ಬರುವುದಾಗಿ ಶಾಸಕರು ಭರವಸೆ ನೀಡಿದರು.
ಬಳಿಕ ಇಲಾಖೆಯ ಸಿಬಂದಿ ಅಭಿಷೇಕ್ ಅವರನ್ನು ಕರೆದು ಶಿಕ್ಷಕರ ವೇತನ ಬಿಡುಗಡೆಯ ಕುರಿತು ಶಾಸಕರು ಮಾಹಿತಿ ಕೇಳಿದಾಗ ಸಿಬಂದಿ, ಸುಳ್ಳು ಉತ್ತರ ನೀಡಿ ಉಡಾಫೆಯಿಂದ ವರ್ತಿಸಿದರು. ಇದರಿಂದ ಅಸಮಾಧಾನಗೊಂಡ ಶಾಸಕರು ಸಿಬಂದಿ ಯನ್ನು ತತ್‌ಕ್ಷಣ ಅಮಾನತು ಮಾಡುವಂತೆ ತಿಳಿಸಿದರು. ಬಳಿಕ ಶಿಕ್ಷಕರು ಅವರು ಅನುಭವವಿಲ್ಲದೆ ಹಾಗೆ ಮಾತನಾಡಿದ್ದಾರೆ. ಹೀಗಾಗಿ ಈ ಬಾರಿ ಕ್ಷಮೆ ನೀಡಬೇಕು ಎಂದು ಮನವಿ ಮಾಡಿದರು. ಬಳಿಕ ಸಿಬಂದಿಗೆ ಮೆಮೋ ನೀಡಬೇಕು, ಜತೆಗೆ ಅವರನ್ನೇ ನೋಡಲ್ ಆಗಿ ನೇಮಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಬಿಇಒ ಅವರನ್ನೂ ತರಾಟೆಗೆ ತೆಗೆದುಕೊಂಡರು.
ಸರಕಾರಿ ನೌಕರರ ಸಂಘದ ತಾ| ಅಧ್ಯಕ್ಷ ಜಯಕೀರ್ತಿ ಜೈನ್ ಅವರು, ಬಿಇಒ ಅವರ ವರ್ತನೆಯನ್ನು ತಿದ್ದಿಕೊಳ್ಳಬೇಕು. ಇಲ್ಲದೇ ಇದ್ದಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದರು. ಜಿ.ಪಂ. ಸದಸ್ಯೆ ಮಮತಾ ಎಂ. ಶೆಟ್ಟಿ, ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ರಾಮಕೃಷ್ಣ ಶಿರೂರು, ಸಂಘಟನೆಗಳ ಪ್ರಮುಖರಾದ ರಮೇಶ ಮಯ್ಯ, ಮಹಮ್ಮದ್ ರಿಯಾಜ್, ನಾಗರಾಜ್, ಪ್ರಭಾಕರ ನಾರಾವಿ, ಚಂದ್ರಶೇಖರ ಶೆಟ್ಟಿ, ರಾಮಕೃಷ್ಣ ಭಟ್, ರಾಮಕೃಷ್ಣ ಎಸ್. ಕೆ, ಧರಣೇಂದ್ರ ಕೆ., ಶೇಖರ ಶಂಕು ಮೊದಲಾದವರಿದ್ದರು.
ಮುಷ್ಕರದಲ್ಲೇ ಶಿಕ್ಷಕರ ದಿನ
ಮುಷ್ಕರ ನಿರತ 23 ಮಂದಿ ಶಿಕ್ಷಕರು ಮುಷ್ಕರ ನಿರತ ಸ್ಥಳದಲ್ಲೇ ಡಾ| ರಾಧಾಕೃಷ್ಣನ್ ಅವರ ಭಾವಚಿತ್ರವಿಟ್ಟು ಅಲ್ಲೇ ಶಿಕ್ಷಕರ ದಿನವನ್ನು ಆಚರಿಸಿದರು. ಶಿಕ್ಷಕರ ದಿನಾಚರಣೆಯನ್ನು ಮುಗಿಸಿ ಬಂದ ಇತರ ಶಿಕ್ಷಕರು ಕೂಡ ಪ್ರತಿಭಟನೆಗೆ ಬೆಂಬಲ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.