ಹೋರಿ ಕರುವಿನ ವಿದಾಯ ಪ್ರಸಂಗ
Team Udayavani, Sep 7, 2018, 6:00 AM IST
ಮನೆಯಲ್ಲಿ ಗಂಡು, ಹಟ್ಟಿಯಲ್ಲಿ ಹೆಣ್ಣು ಹುಟ್ಟಬೇಕು ಎಂಬುದು ಗ್ರಾಮೀಣ ಜನರ ವಾಡಿಕೆ ಮಾತು. ಮನೆಯಲ್ಲಿ ಯಾವುದು ಹುಟ್ಟಿದರೂ ಆದೀತು. ಆದರೆ, ಹಟ್ಟಿಯಲ್ಲಿ ಮಾತ್ರ ಹೆಣ್ಣೇ ಹುಟ್ಟಬೇಕು ಇದು ನನ್ನ ಇಪ್ಪತ್ತೈದು ವರ್ಷಗಳ ಹೈನುಗಾರಿಕೆಯ ಅನುಭವದ ಮಾತು.
ಪ್ರತಿ ಸಾರಿ ನಮ್ಮ ಹಸು ಗಬ್ಬ ಧರಿಸಿದಾಗ, “ಹೆಣ್ಣು ಕರುವೇ ಹುಟ್ಟಲಿ’ ಎಂದು ನಾನು ಪ್ರಾರ್ಥನೆ ಮಾಡುತ್ತೇನೆ. ನನ್ನ ಮೊರೆ ದೇವರಿಗೆ ಕೇಳಿಸದೆ ಅವನೇನಾದರೂ ಹೋರಿಯನ್ನು ದಯಪಾಲಿಸಿದರೆ ನನಗೆ ಇನ್ನಿಲ್ಲದಂತೆ ತಳಮಳ ಶುರುವಾಗುತ್ತದೆ. ಈ ಕರು ದೊಡ್ಡದಾದ ಮೇಲೆ ಏನು ಮಾಡುವುದು? ಯಾರಿಗೆ ಕೊಡುವುದು? ಎಂಬ ಚಿಂತೆ ಕಾಡತೊಡಗುತ್ತದೆ.
ನಾವು ಐದಕ್ಕಿಂತ ಹೆಚ್ಚು ಹಸು ಸಾಕುವುದಿಲ್ಲ. ಹೋರಿ ಕರು ಹುಟ್ಟಿದರೆ ಅದು ಸ್ವಲ್ಪ ದೊಡ್ಡದಾದ ಮೇಲೆ ಮಾರುತ್ತೇವೆ. ಇಲ್ಲವೇ ಕೆಲಸದವರಿಗೆ ಸಾಕಲು ಕೊಡುತ್ತೇವೆ. ಮೊದಲೆಲ್ಲ ಗಿರಾಕಿಗಳು ಮನೆಗೆ ಬಂದು ಪುಡಿಗಾಸು ಕೊಟ್ಟು ಹೋರಿಯನ್ನು ಕೊಂಡೊಯ್ಯುತ್ತಿದ್ದರು. ಈಗ ಕೆಲವು ವರ್ಷಗಳಿಂದ ಅವರು ಕೂಡ ನಾಪತ್ತೆ. ನಮ್ಮ ಹೋರಿಗಳು ಹಟ್ಟಿಯಲ್ಲಿ ಕೊಳೆಯುತ್ತಿರಬೇಕಾಗುತ್ತದೆ. ಕೊಳೆಯುತ್ತಿರುವುದು ಏಕೆಂದರೆ ಅವುಗಳಿಗೆ ಏನೂ ಕೆಲಸ ಇಲ್ಲ. ಹಸು ಬೆದೆಗೆ ಬಂದರೆ ಗೋ-ಡಾಕ್ಟರ್‌ನ ಮೂಲಕ ಕೃತಕ ಗರ್ಭಧಾರಣೆ ಮಾಡಿಸುತ್ತೇವೆ. ಇಂದು ಬೇಸಾಯ ಮಾಡುವುದನ್ನು ಎಲ್ಲರೂ ನಿಲ್ಲಿಸಿದ್ದರಿಂದ ಹೋರಿ ಯಾರಿಗೂ ಬೇಡ. ಗ¨ªೆ ಮಾಡುವವರೂ ಯಂತ್ರಕ್ಕೆ ಶರಣಾಗಿ¨ªಾರೆ. ಗೊಬ್ಬರಕ್ಕಾಗಿ ಸಾಕುವುದೂ ವ್ಯರ್ಥ. ಏಕೆಂದರೆ, ಇರುವ ಹಸುಗಳ ಗೊಬ್ಬರವನ್ನೇ ತೆಗೆಯಲು ಕೂಲಿಯಾಳುಗಳ ಕೊರತೆ ಇದೆ. ಕೂಲಿಯವರು ಸಿಕ್ಕಿದರೂ ಸಂಬಳ ಕೊಡಲು ಪೂರೈಸಬೇಕಲ್ಲ? ವೆಚ್ಚ ಹೆಚ್ಚಾಗಿ ಉಳಿತಾಯ ಇಲ್ಲದ ಹೋರಿ ಸಾಕುವ ಕೆಲಸ ಯಾರಿಗೆ ಬೇಕು?
ಎಲ್ಲ ಹೈನುಗಾರರ ಮನೆಗೆ ಹೋಗಿ ನೋಡಿದರೆ ಅಲ್ಲಿ ಹಸು ಮತ್ತು ಹೆಣ್ಣು ಕರುಗಳು ಮಾತ್ರ ಇರುತ್ತವೆ ! ಹೋರಿ ಕಾಣಲು ಸಿಗುವುದಿಲ್ಲ. ಹಾಗಾದರೆ, ಅವರಲ್ಲಿ ಗಂಡು ಕರು ಹುಟ್ಟುವುದೇ ಇಲ್ಲವೆ? ಹುಟ್ಟಿದರೆ ಅವರು ಏನು ಮಾಡುತ್ತಾರೆ ಎಂಬುದು ಚಿಂತನೆಗೆ ಯೋಗ್ಯವಾದ ವಿಷಯ.
ಈಚಿನ ದಿನಗಳಲ್ಲಿ ದನ ಸಾಕುವುದು ದುಬಾರಿ. “ಚಿಕ್ಕ ಸಂಸಾರ, ಸುಖಕ್ಕೆ ಆಧಾರ’ ಎಂಬ ಮಾತಿನಂತೆ ಹಟ್ಟಿಯಲ್ಲಿ ಕಡಿಮೆ ಸದಸ್ಯರಿದ್ದಷ್ಟೂ ಒಳ್ಳೆಯದು. ಸಂಖ್ಯೆ ಜಾಸ್ತಿಯಾದರೆ ಅವುಗಳಿಗೆ ಮೇವು ಹಾಕುವುದು ಕಷ್ಟ. ಸುಡು ಬೇಸಗೆಯಲ್ಲಂತೂ ಹುಲ್ಲು ಒಣಗಿಹೋಗುವುದರಿಂದ ಜಾನುವಾರುಗಳ ಹೊಟ್ಟೆ ತುಂಬಿಸುವುದು ಇನ್ನೂ ಕಷ್ಟ.
ವರ್ಷದ ಹಿಂದೆ ಹುಟ್ಟಿದ ಹೋರಿ ಕರು ನನ್ನ ಸೊಂಟಕ್ಕಿಂತ ಎತ್ತರ ಬೆಳೆದಿತ್ತು. ಮೊಲೆ ಮರೆತ ಅದನ್ನು ಹಟ್ಟಿಯಿಂದ ಹೊರ ಕಳಿಸುವ ನಿರ್ಧಾರ ಮಾಡಿದೆ. ಮೊದಲಿಗೆ ಕೆಲಸದವರನ್ನು ಕರೆದು ಹೇಳಿದೆ, “ಬೇಕಾದವರು ಈ ಕರುವನ್ನು ಮನೆಗೆ ಸಾಕಲು ಕೊಂಡುಹೋಗಬಹುದು’. “ನಮಗೆ ಹುಲ್ಲು, ಸೊಪ್ಪು ಮಾಡುತ್ತ ಕೂತರೆ ಕೆಲಸಕ್ಕೆ ಬರಲು ಆಗುವುದಿಲ್ಲ. ಹಾಗಾಗಿ ಬೇಡ’ ಎಂದು ಅವರು ಹೇಳಿದರು.
ನಂತರ ಊರವರಿಗೆ ಕೇಳಿದೆ, “ಹೋರಿ ಕರುವೊಂದನ್ನು ಧರ್ಮಕ್ಕೆ ಕೊಡುತ್ತಿದ್ದೇನೆ. ಬೇಕಾ?’ “ನಾವೆಲ್ಲ ದನ ಸಾಕುವುದನ್ನು ಬಿಟ್ಟುಬಿಟ್ಟಿದ್ದೇವೆ. ನಷ್ಟ ಮಾಡಿಕೊಂಡು ಏಕೆ ಹೈನುಗಾರಿಕೆ ಮಾಡಬೇಕು?’ ಎಂದರು. ಏನು ಮಾಡುವುದು ಎಂದು ತೋಚದಾಯ್ತು. ಹಟ್ಟಿಯಲ್ಲಿಟ್ಟರೆ ಅದರಿಂದ ಏನೂ ಉಪಯೋಗವಿಲ್ಲ. ಹುಲ್ಲು, ಹಿಂಡಿ ಖರ್ಚು. ಅದೇ ಆಹಾರವನ್ನು ಉಳಿದ ಹಸುಗಳಿಗೆ ಹಾಕಿದರೆ ಹಾಲು ಕೊಡುತ್ತದೆ. ಪ್ರಯೋಜನಕ್ಕಿಲ್ಲದ ಹೋರಿ ಇದ್ದರೆಷ್ಟು? ಬಿಟ್ಟರೆಷ್ಟು? ಎಂದು ಯೋಚಿಸಿ ಅದನ್ನು ಹೇಗಾದರೂ ಮಾಡಿ ಸಾಗಹಾಕುವ ಉಪಾಯ ಮಾಡತೊಡಗಿದೆ. ಕಲ್ಲುಗುಂಡಿಗೆ ಹೋಗಿ ಅಡಿಕೆ ವ್ಯಾಪಾರ ಮಾಡುವವರಲ್ಲಿ ವಿಚಾರಿಸಿದೆ. ಅವರು ಹೇಳಿದರು, “ಒಂದು ಪಾರ್ಟಿ ಉಂಟು. ಆದರೆ, ನಾವು ಅಲ್ಲಿಗೆ ಬರುವುದಿಲ್ಲ. ನೀವೇ ಇಲ್ಲಿಗೆ ತಂದರೆ ಪಡೆದುಕೊಳ್ಳುತ್ತೇವೆ. ಹೇಗೂ ನಿಮ್ಮ ಮನೆಯಿಂದ ಬರುವ ಮುಕ್ಕಾಲು ದಾರಿಯಲ್ಲಿ ನಮ್ಮ ಮನೆ ಸಿಗುತ್ತದಲ್ಲ, ಅಲ್ಲಿಗೆ ರಾತ್ರಿ ತಂದು ಕೊಡಿ’. ಇದೇನು ದೊಡ್ಡ ಸಂಗತಿಯಲ್ಲ ಎಂದು ಅಂದುಕೊಂಡು ನಾನು ತರಲು ಒಪ್ಪಿದೆ. ಮನೆಗೆ ಬಂದು ಗಂಡನಲ್ಲಿ ಹೇಳುವಾಗ ಅವರೂ ಒಪ್ಪಿದರು. ಅದೇ ದಿನ ರಾತ್ರಿ ಹತ್ತು ಗಂಟೆಯಷ್ಟು ಹೊತ್ತಿಗೆ ಕರುವನ್ನು ಜೀಪಿಗೆ ಹತ್ತಿಸಿದೆವು. ನಾನು ಎದುರು ಸೀಟಿನಲ್ಲಿ ಗಂಡನ ಪಕ್ಕ ಆಸೀನಳಾದೆ. ಜೀಪು ಹೊರಟದ್ದೇ ತಡ; ಕರುವಿಗೆ ಖುಷಿಯೋ ಖುಷಿ. ಪುಟ್ಟ ಮಕ್ಕಳು ಪೇಟೆಗೆ ಹೊರಟಂಥ ಅದರ ಸಂಭ್ರಮ. ಅದು ಮುಖವನ್ನು ಮುಂದೆ ತಂದು ಮುತ್ತು ಕೊಡುವಂತೆ ನನ್ನ ಮುಖಕ್ಕೆ ಒತ್ತಿತು. ನಾಲಗೆಯಿಂದ ನೆಕ್ಕಿತು. ತಲೆಯನ್ನು ಮೂಸಿ ಮೂಸಿ ಮುಡಿಯಲ್ಲಿದ್ದ ಹೂವನ್ನು ತಿಂದಿತು. ಕೊನೆಗೆ ನನ್ನ ಹೆಗಲ ಮೇಲೆ ಅದರ ತಲೆಯನ್ನು ಇಟ್ಟಿತು. ನನ್ನ ಕಣ್ಣಿಂದ ನೀರು. ಗದ್ಗದ ಧ್ವನಿಯಿಂದ ಗಂಡನ ಜೊತೆ ಹೋರಿ ತೋರಿಸುತ್ತಿರುವ ಪ್ರೀತಿಯನ್ನು ಹೇಳಿದೆ. ಅಷ್ಟರಲ್ಲಿ ಸಾಹುಕಾರರ ಮನೆ ಬಂದೇ ಬಿಟ್ಟಿತು. ಗಂಡ ಜೀಪು ನಿಲ್ಲಿಸಿದರು. ಅದುವರೆಗೂ ಆಟವಾಡುತ್ತಿದ್ದ ಕರುವಿಗೆ ಹೇಗೆ ಗೊತ್ತಾಯಿತೋ, ಅದು ಒಂದೇ ಸಮನೆ ಇಳಿಸಬೇಡ ಎಂಬಂತೆ “ಅಂಬೇ’ ಎಂದು ಅರಚತೊಡಗಿತು. ಕೆಳಗೆ ಇಳಿಯಲು ಒಪ್ಪಲಿಲ್ಲ. ಬಲಾತ್ಕಾರ ಮಾಡಿ ಇಳಿಸಲು ನನಗೂ ಮನಸ್ಸಾಗಲಿಲ್ಲ. ನನ್ನ ಹೃದಯ ದುಃಖದಿಂದ ಬಾಯಿಗೆ ಬಂದಂತಾಯಿತು. ಆದರೆ, ನಾನು ಅದನ್ನು ವಾಪಸು ಮನೆಗೆ ಕೊಂಡುಹೋಗುವ ಹಾಗೆ ಇರಲಿಲ್ಲ. ಏಕೆಂದರೆ, ಈಗಲೇ ಹಟ್ಟಿಯಲ್ಲಿ ಐದು ಹಸುಗಳಿವೆ. ಮೋಹದಿಂದ ಇದನ್ನು ಉಳಿಸಿಕೊಂಡರೆ ಎಲ್ಲದಕ್ಕೂ ಅರೆ ಹೊಟ್ಟೆಯಾಗುತ್ತದೆ. ಏನು ಮಾಡುವುದೆಂದು ತಿಳಿಯಲಿಲ್ಲ. ಗಂಡನ ಹತ್ತಿರ ಜೀಪನ್ನು ಹಿಂದಕ್ಕೆ ತಿರುಗಿಸಲು ಹೇಳಿದೆ. ಈಗ ಹೋರಿಯ ತುಂಟಾಟ ಯಾವುದೂ ಇರಲಿಲ್ಲ. ಬಾಹುಬಲಿಯಂತೆ ನಿಂತಿತ್ತು. ಮನೆಗೆ ಇನ್ನೂ ದೂರ ಇದೆ ಎನ್ನುವಾಗ ಜೀಪು ನಿಲ್ಲಿಸಲು ಹೇಳಿದೆ. ಅದು ರಕ್ಷಿತಾರಣ್ಯ. ಹಗಲೂ ಆನೆಗಳು ಅಡ್ಡಾಡುವ ಜಾಗ. ನಾನು ಜೀಪಿನಿಂದ ಕೆಳಗೆ ಇಳಿದು ಹಿಂದಿನ ಬಾಗಿಲು ತೆಗೆದೆ. ಕಲ್ಲು ಹೃದಯ ಮಾಡಿ ಜೀಪಿಗೆ ಕಟ್ಟಿದ ಕರುವಿನ ಹಗ್ಗವನ್ನು ಬಿಚ್ಚಿದೆ. ಕರು ನನ್ನ ಮುಖ ನೋಡಿತು “ಹೋಗಿ ಬರುತ್ತೇನೆ’ ಎನ್ನುವಂತೆ. ಅಷ್ಟೆ. ಮರುಕ್ಷಣ ಜೀಪಿನಿಂದ ಕೆಳಗೆ ಹಾರಿತು. ಕಣ್ಣಿಗೆ ಕಾಣದಂತೆ ದಟ್ಟ ಕಾಡಿನೊಳಗೆ ಮರೆಯಾಯಿತು. “ಮೇದು ಹೊಟ್ಟೆ ತುಂಬಿಸು. ಕ್ಷಮಿಸು’ ಮನದಲ್ಲಿ ಹೇಳಿಕೊಂಡೆ.
ಈಗಲೂ ಪೇಟೆಗೆ ಹೋಗುವಾಗ ಆ ಅರಣ್ಯ ಸಿಗುವ ದಾರಿಯಲ್ಲಿ ನಮ್ಮ ಹೋರಿ ಎಲ್ಲಾದರೂ ಕಾಣುತ್ತದೆಯೇ ಎಂದು ಕಣ್ಣಾಡಿಸುತ್ತೇನೆ.
ಸಹನಾ ಕಾಂತಬೈಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Ullal: ಬಾವಿ, ಬೋರ್‌ವೆಲ್‌ನಲ್ಲಿ ತೈಲಮಿಶ್ರಿತ ನೀರು; ಸಮಸ್ಯೆ ಇರುವ ಮನೆಗಳಿಗೆ ಪೈಪ್‌ಲೈನ್
Panchamasali;ಈಗಲೂ ಮೀಸಲಾತಿ ಹೋರಾಟ ಮಾಡುತ್ತಿದ್ದೇನೆ: ಲಕ್ಷ್ಮೀ ಹೆಬ್ಬಾಳಕರ್
Ola Gig Electric Scooter: ಕೇವಲ 40 ಸಾವಿರ ರೂಪಾಯಿಗೆ ನೂತನ ಶ್ರೇಣಿಯ ಓಲಾ ಸ್ಕೂಟರ್!
Sagara: ಮಿಡಿ ಮಾವು, ವಿಶ್ವವಿದ್ಯಾಲಯದ ನಡೆದಾಡುವ ವಿಶ್ವಕೋಶ ಬಿ.ವಿ.ಸುಬ್ಬರಾವ್ ಇನ್ನಿಲ್ಲ
Perla: ರಸ್ತೆ ವಿಸ್ತರಣೆ, ನೇತ್ರಾವತಿ ನದಿ ತಡೆಗೋಡೆ ದುರಸ್ತಿಗೆ ಆಗ್ರಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.