ಸಯೊನಾರ ಸಯೊನಾರ ಫಿಲೋಮಿನಾ


Team Udayavani, Sep 9, 2018, 6:00 AM IST

x-7.jpg

ಪುತ್ತೂರಿನ ಫಿಲೋಮಿನಾ ಕಾಲೇಜು ಕ್ರೀಡೆ ಮತ್ತು ಎನ್‌ಸಿಸಿ ಚಟುವಟಿಕೆಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಳ್ಳೆಯ ಹೆಸರನ್ನು ಪಡೆದಿತ್ತು. ಈ ಯಶಸ್ಸಿನ ಹಿಂದಿನ ಚಾಲಕಶಕ್ತಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಮತ್ತು ಎನ್‌ಸಿಸಿ ಮೇಜರ್‌ ಆಗಿದ್ದ ಎನ್‌. ವೆಂಕಟರಾಮಯ್ಯ. ಆಜಾನುಬಾಹು ದೇಹದ ಶಿಸ್ತು ಸಂಯಮದ ವೆಂಕಟರಾಮಯ್ಯ ಅವರ ಮಾರ್ಗದರ್ಶನದಲ್ಲಿ ನಮ್ಮ ಕಾಲೇಜಿನ ಆಟದ ಬಯಲಿನಲ್ಲಿ ಆಟೋಟ ಸ್ಪರ್ಧೆಗಳು ನಡೆಯುತ್ತಿದ್ದುವು. ಕ್ರಿಕೆಟ್‌, ಫ‌ುಟ್‌ಬಾಲ್‌, ವಾಲಿಬಾಲ್‌ ಆಟಗಳ ಜೊತೆಗೆ ಹಾಕಿ ಆಟವು ನಮ್ಮಲ್ಲಿ ಜನಪ್ರಿಯವಾಗಿತ್ತು. ಆಗ ನಮ್ಮ ಕಾಲೇಜಿನಲ್ಲಿ ಕೊಡಗಿನ ಸಾಕಷ್ಟು ಸಂಖ್ಯೆಯ ಹುಡುಗರು ಹಾಸ್ಟೆಲ್‌ನಲ್ಲಿ ಇರುತ್ತಿದ್ದರು. ಅವರಲ್ಲಿ ಬಹಳ ಮಂದಿ ಉತ್ತಮ ಹಾಕಿ ಆಟಗಾರರಾಗಿದ್ದರು. ನಮ್ಮ ಕಾಲೇಜಿನ ಆಟದ ಬಯಲಿನಲ್ಲಿ ಒಮ್ಮೆ ಜಿಲ್ಲಾ ಮಟ್ಟದ ಆಟೋಟ ಸ್ಪರ್ಧೆಯನ್ನು ನೋಡಿದ ನೆನಪಿದೆ. ಎಂ.ಎಂ. ಗಣಪತಿ ರಾಜ್ಯಮಟ್ಟದ ಶ್ರೇಷ್ಠ ಕ್ರೀಡಾಳು ಆಗಿ ನಮ್ಮ ಕಾಲೇಜಿಗೆ ಹೆಸರು ತಂದಿದ್ದರು. ಸೈಂಟ್‌ ಫಿಲೋಮಿನಾ ಹೈಸ್ಕೂಲಿನ ಹೆಡ್‌ಮಾಸ್ಟರ್‌ ಡೆನ್ನಿಸ್‌ ಡಿಸೋಜಾರು ಕ್ರೀಡಾಸ್ಪರ್ಧೆಗಳಲ್ಲಿ ಚೆನ್ನಾಗಿ ಕಮೆಂಟರಿ ಹೇಳುತ್ತಿದ್ದರು. ಅವರೇ ರಚಿಸಿದ ನಾಡಕರೆ ಎಂಬ ಹಾಡನ್ನು ಉತ್ಸಾಹದಿಂದ ಹಾಡುತ್ತಿದ್ದರು. ಭಾರತ-ಚೀನಾ ಯುದ್ಧದ ಬಳಿಕ ಅವರು ರಚಿಸಿದ ಹಾಡಿನ ಪಲ್ಲವಿ:

ಏಳಿರೆಲ್ಲ ಭಾರತದ ವೀರಯೋಧರೆ |
ದೇಶಕಾಗಿ ಒಂದುಗೂಡಿ ಬನ್ನಿರೆಲ್ಲರು ||
ಆ ಕಾಲದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಎನ್‌ಸಿಸಿ ಕಡ್ಡಾಯವಾಗಿತ್ತು- ಕೊನೆಯ ವರ್ಷದ ಹೊರತಾಗಿ. ನನ್ನ ಬದುಕಿನಲ್ಲಿ ನನಗೆ ಇದೊಂದು ಮರೆಯಲಾರದ ಅನುಭವ. ಎನ್‌ಸಿಸಿ ಡ್ರೆಸ್‌, ಭಾರದ ಗಟ್ಟಿ ಬೂಟ್ಸ್‌, ಬೆಲ್ಟ್, ಟೊಪ್ಪಿ- ಅವುಗಳಿಗೆ ಪಾಲಿಶ್‌ ಹಾಕಿ ಸದಾ ಬೆಳಗುತ್ತಿರುವಂತೆ ನೋಡಿಕೊಳ್ಳುವುದು, ಮಾರ್ಚ್‌ಫಾಸ್ಟ್‌ನ ಶಿಸ್ತು, ತಪ್ಪಾದರೆ ಶಿಕ್ಷೆ-ಎಲ್ಲವನ್ನೂ ಎಚ್ಚರದಿಂದ ಕಲಿತ ಅನುಭವ ಬದುಕಿನ ಶಿಸ್ತಿಗೆ ನೆರವಾಯಿತು. ಎನ್‌ಸಿಸಿಯ ಇನ್ನೊಂದು ಅಪೂರ್ವ ಅನುಭವ ಕ್ಯಾಂಪ್‌ಗ್ಳದ್ದು. ನನ್ನ ಪದವಿ ತರಗತಿಯ ಅವಧಿಯಲ್ಲಿ ಎರಡು ಬಾರಿ ಅಂಥ ಕ್ಯಾಂಪ್‌ಗ್ಳಲ್ಲಿ ಭಾಗವಹಿಸುವ ಅವಕಾಶ ದೊರಕಿತ್ತು. ಎರಡೂ ಕೊಡಗಿನಲ್ಲಿ ನಡೆದವು. ಒಂದು ಸೋಮವಾರಪೇಟೆಯಲ್ಲಿ, ಇನ್ನೊಂದು ಮಡಿಕೇರಿಯಲ್ಲಿ. ನಮ್ಮ ಕಾಲೇಜಿನ ಮೇಜರ್‌ ವೆಂಕಟರಾಮಯ್ಯ ಅವರ ನೇತೃತ್ವದಲ್ಲಿ ನಾವು ಕೆಡೆಟ್‌ಗಳು ಬಸ್ಸಿನಲ್ಲಿ ಹೋದದ್ದು. ಮಡಿಕೇರಿ ಕ್ಯಾಂಪ್‌ನಲ್ಲಿ ಅಲ್ಲಿನ ಕಾಲೇಜಿನಲ್ಲಿ ವಾಸ್ತವ್ಯ ಎಂದು ನೆನಪು. ಮೇಜರ್‌ ದೇವಯ್ಯ ಎನ್ನುವವರು ಒಟ್ಟು ಶಿಬಿರದ ಮುಖ್ಯಸ್ಥರಾಗಿದ್ದರು. ಮಡಿಕೇರಿ ಕ್ಯಾಂಪಿನಲ್ಲಿ ನಮಗೆ ಮಾರ್ಚ್‌ಫಾಸ್ಟ್‌ ಬಹಳ ದೀರ್ಘ‌ ಪ್ರಯಾಣದ್ದು ಆಗಿತ್ತು. ಬೆಳಗ್ಗೆ ಚಳಿಯಲ್ಲಿ ಎದ್ದು ಡ್ರೆಸ್‌ ಧರಿಸಿ ರೈಫ‌ಲ್‌ ಹಿಡಿದುಕೊಂಡು ಮಡಿಕೇರಿಯಿಂದ ಮಾದಾಪುರಕ್ಕೆ, ಅಲ್ಲಿಂದ ಶುಂಠಿಕೊಪ್ಪಕ್ಕೆ, ಮತ್ತೆ ಅಲ್ಲಿಂದ ಮಡಿಕೇರಿಗೆ. ನಮ್ಮಲ್ಲಿ ಅನೇಕರ ಕಾಲಿನಲ್ಲಿ ಚರ್ಮ ಕಿತ್ತುಹೋಗಿ ಬೊಕ್ಕೆಗಳು ಬಂದಿದ್ದವು. ಆದರೆ, ಎಲ್ಲವನ್ನೂ ಸಹಿಸಿಕೊಳ್ಳಬೇಕಾಗಿತ್ತು. ಸೋಮವಾರಪೇಟೆ ಕ್ಯಾಂಪಿನಲ್ಲಿ ನಮಗೆ ರೈಫ‌ಲ್‌ ಬಳಸುವ ತರಬೇತಿ ಕೊಟ್ಟರು. ರೈಫ‌ಲ್‌ ಹಿಡಿದು ನಿಂತುಕೊಂಡು ಇದ್ದವರು ಥಟ್ಟನೆ ಕೆಳಗೆ ಮಲಗಿ ರೈಫ‌ಲ್‌ ಸರಿಯಾಗಿ ಹಿಡಿದುಕೊಂಡು ನಿರ್ದಿಷ್ಟ ಗುರಿಗೆ ಶೂಟ್‌ ಮಾಡಬೇಕು. ಎಲ್ಲವೂ ಕ್ಷಣಾರ್ಧದಲ್ಲಿ ನಡೆಯಬೇಕು. ನಾನು ರೈಫ‌ಲ್‌ನಲ್ಲಿ ಗುರಿಯ ಸಮೀಪಕ್ಕೆ ಶೂಟ್‌ ಮಾಡಿದೆ ಎಂದು ನೆನಪು. ಆದರೆ ಬದುಕಿನಲ್ಲಿ ಅನೇಕ ಬಾರಿ ನಾವು ಗುರಿ ತಪ್ಪುತ್ತೇವೆ! 

ಕೊಡಗಿನಲ್ಲಿ 53 ವರ್ಷಗಳ ಹಿಂದೆ ಭಾಗವಹಿಸಿದ ಎನ್‌ಸಿಸಿ ಶಿಬಿರಗಳನ್ನು ನೆನಪಿಸಿಕೊಂಡಾಗ ಮೂಡುವ ಭಾವನೆಗಳು: ಕೊಡಗಿನ ಚಳಿಯಲ್ಲಿ ಬೂಟ್ಸ್‌ ರೈಫ‌ಲ್‌ ಹೊತ್ತುಕೊಂಡು ಮಾರ್ಚ್‌ಫಾಸ್ಟ್‌ ಮಾಡುವಾಗ ನೋವು ಅನುಭವಿಸಿದ್ದನ್ನು ಹಿಮಾಲಯದ ಗಡಿಭಾಗಗಳಲ್ಲಿ ವರ್ಷಗಟ್ಟಲೆ ಕುಟುಂಬದಿಂದ ದೂರವಾಗಿ ಚಳಿ-ಮಳೆಗಳನ್ನು ಲೆಕ್ಕಿಸದೆ ಜೀವವನ್ನು ಪಣಕ್ಕಿಟ್ಟು ಹೋರಾಡುವ ನಮ್ಮ ದೇಶದ ಸೈನಿಕರ ಬದುಕಿನ ಜೊತೆಗೆ ಹೋಲಿಸಿಕೊಂಡಾಗ ಕಣ್ಣು ಮಂಜಾಗುತ್ತದೆ. ಕೊಡಗಿನ ಇತ್ತೀಚೆಗಿನ ಮಳೆನೆರೆ ಅನಾಹುತಗಳನ್ನು ನೆನೆದು ಮನಸ್ಸು ವಿಷಣ್ಣವಾಗುತ್ತದೆ. 

ಕಾಲೇಜಿನಲ್ಲಿ ವಿಜ್ಞಾನದ ಪದವಿಗಾಗಿ ಓದುತ್ತಿದ್ದರೂ ಕನ್ನಡ ಸಾಹಿತ್ಯದ ಆಸಕ್ತಿಗೂ ಅಲ್ಲಿ ಅವಕಾಶ ದೊರೆಯಿತು. ಮೊಳೆಯಾರರ ಮಾರ್ಗದರ್ಶನದಿಂದಾಗಿ ಎರಡನೆಯ ವರ್ಷದ ಪದವಿಯ ಪರೀಕ್ಷೆಯಲ್ಲಿ ನನಗೆ ಕನ್ನಡದಲ್ಲಿ ಅತ್ಯಧಿಕ ಅಂಕ ದೊರೆಯಿತು. ಅದಕ್ಕಾಗಿ ಆ ವರ್ಷದ ವಾರ್ಷಿಕೋತ್ಸವದಲ್ಲಿ ನನಗೆ ಮೊದಲನೆಯ ಬಹುಮಾನ ಕೊಟ್ಟರು. ಅದು ಒಂದು ಪುಸ್ತಕ-ಜಾನ್‌ ಬುನ್ಯಾನ್‌ನ ದಿ ಪಿಲಿಗ್ರಿಮ್ಸ್‌ ಪ್ರೊಗ್ರೆಸ್‌. ಆ ಪುಸ್ತಕವನ್ನು ಓದಿ, ನೆನಪಿಗಾಗಿ ಜೋಪಾನವಾಗಿಟ್ಟುಕೊಂಡಿದ್ದೇನೆ. ಕಾಲೇಜಿನಲ್ಲಿ ವಾಲ್‌ಮ್ಯಾಗಜಿನ್‌ ಇತ್ತು. ನಾನು ಅದರಲ್ಲಿ ಚುಟುಕುಗಳನ್ನು ಬರೆಯುತ್ತಿದ್ದೆ. ಆಗ ಕನ್ನಡ ಪತ್ರಿಕೆಗಳಲ್ಲಿ ಬರುತ್ತಿದ್ದ ದಿನಕರ ದೇಸಾಯಿ ಅವರ ಚುಟುಕುಗಳಿಂದ ಪ್ರಭಾವಿತನಾಗಿ ಅವುಗಳ ಅನುಕರಣೆ ಮಾಡುತ್ತಿದ್ದೆ. ಅಲ್ಲಿಗೆ ಬರೆದ ಎರಡು ಚುಟುಕುಗಳು: ಒಂದು, ಆ ಕಾಲದ ರೇಷನ್‌ ಅಕ್ಕಿಯ ಬಗ್ಗೆ- 

ಅಕ್ಕಿಯಲಿ ಕಲ್ಲುಂಟೆ? ಛೆ, ಬರಿ ಸುಳ್ಳು 
ಅದರಲ್ಲಿ ತುಂಬಿಹುದು, ಅದು ಬರೇ ಕಲ್ಲು!
ನಡುವಿನಲಿ ಸಿಗಬಹುದು ಒಂದೊಂದು ಅಕ್ಕಿ 
ತಿನಬೇಕು ಅದನು ಬೇಗನೆ ಹೆಕ್ಕಿ ಹೆಕ್ಕಿ.
ಇನ್ನೊಂದು, ಗಡಿವಿವಾದದ ಬಗ್ಗೆ-
ಮೈಸೂರು ಮಹಾರಾಷ್ಟ್ರ ಗಡಿಗಳಿಗೆ ಒಂದು ಆಯೋಗ?
ಕಾಶ್ಮೀರ ಲಡಕ್‌ ಗಡಿಗಳ ಮರೆತೆವು ನಾವೆಷ್ಟು ಬೇಗ!
ಮಂತ್ರಿಗಳಿಗೆ ಬಂದರೂ ಒಂದೊಂದು ಲೋಡು 
ಬರಲಾರದು ನಮ್ಮಯ ಕಾಸರಗೋಡು.
ನಾನು ಮೂರನೆಯ ಬಿಎಸ್ಸಿ ತರಗತಿಯಲ್ಲಿ ಇದ್ದಾಗ ಕಾಲೇಜು ಮ್ಯಾಗಜಿನ್‌ನಲ್ಲಿ ಬರೆದು ಪ್ರಕಟವಾದ ಒಂದು ಲೇಖನವನ್ನು ಅಲ್ಲಿನ ಕನ್ನಡ ಪ್ರಾಧ್ಯಾಪಕ ವಿಜಯಕುಮಾರ ಮೊಳೆಯಾರ ಇತ್ತೀಚೆಗೆ ಕಳುಹಿಸಿಕೊಟ್ಟರು. ಆ ಲೇಖನದ ಶೀರ್ಷಿಕೆ “ನಮ್ಮ ವಿದ್ಯಾರ್ಥಿಗೆ ಏನಾಗಿದೆ?’ ಆ ವರ್ಷ ದೇಶದಲ್ಲಿ ನಡೆದ ಅನೇಕ ವಿದ್ಯಾರ್ಥಿ ಮುಷ್ಕರಗಳ ಬಗೆಗಿನ ವಿಮರ್ಶೆ ಆ ಲೇಖನದಲ್ಲಿ ಇದೆ. 

ನಾನು ಹೈಸ್ಕೂಲು ಮುಗಿಸಿ ಕಾಲೇಜಿಗೆ ಬಂದಾಗ ಆಗಿನ ಸಂಪ್ರದಾಯದಂತೆ ವೇಷಭೂಷಣ ಬದಲಾವಣೆ ಆಯಿತು. ಆ ಕಾಲದಲ್ಲಿ ಹೈಸ್ಕೂಲಿನಲ್ಲಿ ಎಲ್ಲ ಹುಡುಗರು ಚಡ್ಡಿ ಮತ್ತು ಅಂಗಿ ಧರಿಸುತ್ತಿದ್ದರು. ಹುಡುಗಿಯರಿಗೆ ಲಂಗ ಮತ್ತು ರವಕೆ. ಹೆಚ್ಚಿನವರು ಉದ್ದ ಲಂಗ ತೊಡುತ್ತಿದ್ದರು. ಹುಡುಗಿಯರು ತಲೆಕೂದಲನ್ನು ಎರಡು ಜಡೆ ಹೆಣೆಯುವುದು ಆಗಿನ ಕೇಶಪದ್ಧತಿ. ಹುಡುಗರದು ಗಿಡ್ಡವಾಗಿ ಕತ್ತರಿಸಿದ ತಲೆಕೂದಲು; ಕೆಲವೊಮ್ಮೆ ಸಣ್ಣದಾದ ಕ್ರಾಪ್‌. ಕಾಲೇಜಿಗೆ ಬಂದ ಕೂಡಲೇ ಹುಡುಗರು ಪ್ಯಾಂಟ್‌ ಧರಿಸಲು ತೊಡಗುವುದು. ಕೆಲವರು ಮುಂಡು (ಪಂಚೆ) ಉಡಲು ಕಲಿಯುವುದು. ಹುಡುಗಿಯರು ಸೀರೆ-ರವಕೆ ಉಡಲು ಆರಂಭ. ಕೆಲವರು ಸ್ವಲ್ಪ ಕಾಲ ಲಂಗ-ರವಕೆಯಲ್ಲೇ ಕಾಲೇಜಿಗೆ ಬರುತ್ತಿದ್ದರು. 

ನಾನು 1963ರಲ್ಲಿ ಫಿಲೋಮಿನಾ ಕಾಲೇಜಿನಲ್ಲಿ ಪಿಯುಸಿ ಸೇರುವ ವೇಳೆಗೆ ನಮ್ಮ ಬಿಡಾರ ಪುತ್ತೂರು ಕೋರ್ಟ್‌ಗುಡ್ಡೆಯ ಪಶ್ಚಿಮ ಭಾಗದ ಕೆಳಗಿನ ರಾಧಾಕೃಷ್ಣ ಮಂದಿರದ ಬಳಿಯಲ್ಲಿ ಒಂದು ಬಾಡಿಗೆ ಮನೆಯಲ್ಲಿ ಇತ್ತು. ಮನೆಯಿಂದ ಹೊರಟು ಕೋರ್ಟ್‌ ರಸ್ತೆಯ ಮೂಲಕ ಬಸ್‌ಸ್ಟ್ಯಾಂಡ್‌ಗೆ ಬಂದು ಅಲ್ಲಿಂದ ಮುಂದೆ ದಭೆìಗೆ ಕಾಲೇಜಿಗೆ ಹೋಗುತ್ತಿದ್ದೆನು. ಆ ವೇಳೆಗೆ ಪುತ್ತೂರಿನಲ್ಲಿ ಸಿಟಿಬಸ್‌ ಆರಂಭವಾಯಿತು. ಆಗ ಎರಡು ಸಿಟಿಬಸ್‌ಗಳು ಇದ್ದುವು: ಒಂದು, ಶಂಕರವಿಠuಲ್‌, ಇನ್ನೊಂದು, ಸುಬ್ರಹ್ಮಣ್ಯ ಸ್ವಾಮಿ ಬಸ್‌. ಆ ಎರಡು ಸಿಟಿಬಸ್‌ಗಳ ನಡುವೆ ಸ್ಪರ್ಧೆ ಇತ್ತು. ಶಂಕರ ವಿಠuಲ್‌ ಬಸ್ಸಿನ ಡ್ರೈವರ್‌ ಶಿವರಾಮಣ್ಣ . ಸುಬ್ರಹ್ಮಣ್ಯ ಸ್ವಾಮಿ ಬಸ್ಸಿನ ಡ್ರೆçವರ್‌ ಅಣ್ಣುವಣ್ಣ. ಈ ಬಸ್ಸುಗಳು ವಿಟ್ಲದಿಂದ ದಭೆìಗೆ ಕಾಲೇಜಿನವರೆಗೆ ಬರುತ್ತಿದ್ದುವು. ಆ ಕಾಲದ ಡ್ರೆçವರ್‌ಗಳು ಹುಡುಗರ ಪಾಲಿಗೆ ಹೀರೋಗಳು. ತುಂಬು ದೇಹದ ತರುಣ ಶಿವರಾಮಣ್ಣ ವೇಗದೂತದಂತೆ ಬಸ್ಸು ಚಲಾಯಿಸಿ ಇನ್ನೊಂದು ಸಿಟಿಬಸ್ಸನ್ನು ಹಿಮ್ಮೆಟ್ಟಿಸುವಾಗ ಸಿಂಹಾವಲೋಕನ ಕ್ರಮದಿಂದ ನಮ್ಮ ಕಡೆಗೆ ತಿರುಗಿ ಮುಗುಳ್ನಕ್ಕು ಮುಂದೆ ಓಡಿಸಿ ಕಾಲೇಜಿನ ಬಳಿ ನಿಲ್ಲಿಸಿ ವಿಜಯದ ನಗೆ ಬೀರುವುದನ್ನು ನೋಡುವುದೇ ನಮಗೆ ರೋಮಾಂಚನ. ಕೆಲವು ಹುಡುಗರು ಲೌಕಿಕ ಕಾರಣಗಳಿಗಾಗಿ ನಿರ್ದಿಷ್ಟ ಸಿಟಿಬಸ್ಸಿಗೇ ಕಾಯುತ್ತಿದ್ದರು! ಆಗ ಬಸ್‌ಸ್ಟ್ಯಾಂಡ್‌ನಿಂದ ದಭೆìಗೆ ಟಿಕೆಟ್‌ ದರ ಏಳು ಪೈಸೆ. 

ನಮ್ಮ ಬಿ.ಎಸ್ಸಿ. ಶಿಕ್ಷಣದ ಕೊನೆಯಲ್ಲಿ ನಮ್ಮ ಉಪನ್ಯಾಸಕರೊಬ್ಬರು ನಮ್ಮ ತರಗತಿಯ ಎಲ್ಲ ವಿದ್ಯಾರ್ಥಿಗಳಲ್ಲಿ “ಮುಂದೆ ನೀವು ಏನು ಆಗಲು ಬಯಸಿದ್ದೀರಿ’ ಎಂದು ಕೇಳಿದರು. ಗೆಳೆಯ ಎನ್‌. ಕೃಷ್ಣಮೂರ್ತಿ, “ನಾನು ಅಧ್ಯಾಪಕ ಆಗುತ್ತೇನೆ’ ಎಂದು ಹೇಳಿದರು. ನಾನು, “ಪತ್ರಕರ್ತ ಆಗುತ್ತೇನೆ’ ಎಂದು ಹೇಳಿದೆ. ನನ್ನ ಅಪ್ಪ ಪುರಂದರ ರೈ ಆಗ ಪ್ರಜಾವಾಣಿ ಮತ್ತು ಡೆಕ್ಕನ್‌ ಹೆರಾಲ್ಡ್‌ ಪತ್ರಿಕೆಗಳಿಗೆ ಪುತ್ತೂರಿನ ವರದಿಗಾರ ಆಗಿ ಕೆಲಸಮಾಡುತ್ತಿದ್ದರು. ಅವರಿಗೆ ಕಾರ್ಯಕ್ರಮಗಳಲ್ಲಿ ಸಿಗುತ್ತಿದ್ದ ಮನ್ನಣೆ ಎಲ್ಲ ನೋಡಿ ನನಗೂ ಪತ್ರಕರ್ತ ಆಗಬೇಕು ಎನ್ನುವ ಬಯಕೆ ಇತ್ತು. ಆದರೆ ನಮ್ಮ ಬಯಕೆಗಳು ಮುಂದೆ ನಿಜಜೀವನದಲ್ಲಿ ಅದಲುಬದಲಾದುವು. ಕೃಷ್ಣಮೂರ್ತಿ ನಿಟಿಲಾಪುರ “ಉದಯವಾಣಿ’ ಪತ್ರಿಕೆ ಸೇರಿ ಪತ್ರಕರ್ತ ಆದರು; ನಾನು ಅಧ್ಯಾಪಕ ವೃತ್ತಿಗೆ ಬಂದೆ ! 

ಫಿಲೋಮಿನಾ ಕಾಲೇಜಿನಲ್ಲಿ ನಾನು ಮೊದಲನೆಯ ಬಿ.ಎಸ್ಸಿ. ತರಗತಿಯಲ್ಲಿ ಇದ್ದಾಗ ನಡೆದ ಒಂದು ಕಹಿ ಘಟನೆಯನ್ನು ನೆನಪಿಸಿಕೊಳ್ಳುತ್ತಿದ್ದೇನೆ. ಅದು ಕಾಲೇಜಿನ ವಿರುದ್ಧ ನಡೆದ ವಿದ್ಯಾರ್ಥಿಗಳ ಮುಷ್ಕರ. ಕೆಲವು ಬೇಡಿಕೆಗಳನ್ನು ಇಟ್ಟುಕೊಂಡು ವಿದ್ಯಾರ್ಥಿ ಸಂಘಟನೆಯ ಹೆಸರಲ್ಲಿ ನಡೆದ ಮುಷ್ಕರದಲ್ಲಿ ನನ್ನ ಸಹಪಾಠಿಯೊಬ್ಬನ ಒತ್ತಾಯದಿಂದ ನಾನೂ ಒಂದೆರಡು ದಿನ ಪಾಲ್ಗೊಂಡೆ. ಆ ಮುಷ್ಕರದ ಹಿಂದೆ ಕೆಲವು ಹಿತಾಸಕ್ತಿಗಳು ಇದ್ದುವು ಎಂದು ನನಗೆ ತಡವಾಗಿ ಗೊತ್ತಾಯಿತು. ಆ ಮುಷ್ಕರದ ಬಳಿಕ ಕಾಲೇಜು ಆಡಳಿತದವರಲ್ಲಿ ಅತೃಪ್ತಿ ಕಾಣಿಸಿಕೊಂಡು ಸ್ವಲ್ಪ ಕಾಲ ಬಿಗುವಿನ ವಾತಾವರಣ ನೆಲೆಸಿತ್ತು. ಪ್ರಿನ್ಸಿಪಾಲರ ಮಾತಿನ ಧಾಟಿಯಲ್ಲಿ ಗಡುಸುತನ ಇತ್ತು. ಮುಷ್ಕರದಲ್ಲಿ ಗೊತ್ತಿಲ್ಲದೆ ಪಾಲ್ಗೊಂಡ ನನ್ನಂಥವರಿಗೆ ನಮ್ಮ ತಪ್ಪಿನ ಅರಿವಾಗಿತ್ತು. ನಿಧಾನವಾಗಿ ಅಸಮಾಧಾನದ ಅವಿಶ್ವಾಸದ ಕಾರ್ಮೋಡ ಕರಗುತ್ತ ಬಂತು. ವ್ಯಕ್ತಿಗಳ ಹಿತಾಸಕ್ತಿಗಿಂತ ಸಂಸ್ಥೆಯ ಭವಿಷ್ಯ ಮುಖ್ಯ ಎನ್ನುವ ಭಾವನೆ ವಿದ್ಯಾರ್ಥಿಗಳಲ್ಲಿ ಮೂಡಿತು. ಮೊಳೆಯಾರರು ಪಾಠ ಮಾಡುತ್ತಿದ್ದ ಗೋವಿಂದ ಪೈ ಅವರ ಗೊಲ್ಗೊಥಾದ ಸಾಲುಗಳು ನೆನಪಾದುವು: ಕ್ಷಮಿಸು ಇವರನು ಎಲೆ ತಂದೆ, ತಾವೇನ್‌ ಎಸಗಿದಪೆವೆಂದು ಅರಿಯರಿವರು. ಕ್ಷಮೆ, ಸೌಹಾರ್ದ ಮತ್ತು ಶಾಂತಿಯಿಂದ ಸಾಧಿಸುವುದನ್ನು ದ್ವೇಷ, ಜಗಳ ಮತ್ತು ಸಂಘರ್ಷದಿಂದ ಪಡೆಯಲು ಆಗುವುದಿಲ್ಲ ಎನ್ನುವ ಪಾಠವನ್ನು ಗಟ್ಟಿಮಾಡಿಕೊಂಡದ್ದು ನಾನು ಈ ಕಾಲೇಜಿನಲ್ಲಿ. 

ಫಿಲೋಮಿನಾ ಕಾಲೇಜಿನ ಬಿ.ಎಸ್ಸಿ.ಯ ನಮ್ಮ ಅಧ್ಯಯನದ ಕೊನೆಯಲ್ಲಿ ತೆಗೆದ ಒಂದು ಸಮೂಹ ಫೋಟೊ ಕಾಲೇಜಿನಿಂದ ಇತ್ತೀಚೆಗೆ ಸಿಕ್ಕಿತು. ಅನೇಕರನ್ನು ಗುರುತಿಸಲು ಪ್ರಯತ್ನಿಸಿದೆ. ಬೆಂಗಳೂರಿನಲ್ಲಿರುವ ನನ್ನ ಸಹಪಾಠಿ ಗೆಳೆಯ ವಿ. ಹಸನ್‌ ಅವರ ನೆರವನ್ನೂ ಪಡೆದೆ. ನನ್ನ ಸಹಪಾಠಿಗಳ ಹೆಸರುಗಳ ಪಟ್ಟಿ ಕೊಟ್ಟಿದ್ದೇನೆ ನೆನಪಿನ ಆಧಾರದಲ್ಲಿ: ವಿ. ಹಸನ್‌, ಎನ್‌. ಕೃಷ್ಣಮೂರ್ತಿ, ವಾಲ್ಟರ್‌ ಮಿರಾಂಡ, ಸುಬ್ರಹ್ಮಣ್ಯ ಶಾಸಿŒ, ಜಾರ್ಜ್‌ ಪಿಂಟೊ, ಕೇಶವ ಭಟ್‌ ಎಂ, ಲಿಂಗಪ್ಪ ಗೌಡ, ವಸಂತ ಕಿಣಿ, ದಿನೇಶ ಪ್ರಭು, ಶಂಕರನಾರಾಯಣ ಬನ್ನಿಂತಾಯ, ಸುಬ್ರಾಯ ಭಟ್‌, ಗೋಪಾಲ ಕೆ., ದೇವದಾಸ ಭಟ್‌, ನಾರಾಯಣ ಆಚಾರ್ಯ, ಗೌರಮ್ಮ, ಗೀತಾ ಕೆ., ಸುಮತಿ, ವಸಂತಿ, ವಿಜಯಲಕ್ಷ್ಮೀ, ಶ್ರೀಪತಿ ಭಟ್‌, ಸೀತಾರಾಮ ಗೌಡ. 

ಇವರಲ್ಲಿ ಕೆಲವರು ನಿಧನರಾಗಿರುವ ವಿಷಯ ಗೊತ್ತು. ಆದರೆ ಎಲ್ಲರ ಬಗ್ಗೆ ತಿಳಿದಿಲ್ಲ. ನಮ್ಮ ಅಧ್ಯಾಪಕರಲ್ಲೂ ಕೆಲವರು ಗತಿಸಿದ್ದಾರೆ. ಎಲ್ಲ ಗುರುಗಳ, ಎಲ್ಲ ಸಹಪಾಠಿಗಳ ನೆನಪುಗಳಿಗೆ ಮಾತ್ರ ಸಾವಿಲ್ಲ. ಐವತ್ತು ವರ್ಷಗಳ ಹಿಂದಿನ ನೆನಪುಗಳೇ ಮತ್ತೆ ನಮ್ಮನ್ನು ಆ ಕಾಲದ ಅಪೂರ್ವ ಅನುಭವಗಳ ಲೋಕಕ್ಕೆ ಒಯ್ಯುತ್ತವೆ. ಅಲ್ಲಿ ನಾವೆಲ್ಲರೂ ಮತ್ತೆ ಮಾನಸ ಜಗತ್ತಿನಲ್ಲಿ ಭೇಟಿ ಆಗುತ್ತೇವೆ. ಮತ್ತೆ ನಮ್ಮ ಮನಸ್ಸು ಕಾಲೇಜಿಗೆ ತೆರಳಿ ಆ ಕಾಲದ ಬದುಕಿನ ಬಂಡಿಯಲ್ಲಿ ನಮ್ಮನ್ನು ಒಂದುಗೂಡಿಸುತ್ತದೆ.

ನಮ್ಮ ಕೊನೆಯ ವರ್ಷದ ಕಾಲೇಜು ಡೇಯಲ್ಲಿ ನಮ್ಮ ಕಾಲೇಜಿನ ಜೂನಿಯರ್‌ ಹುಡುಗಿಯರು ಒಂದು ಹಿಂದಿ ಸಿನೆಮಾದ ಹಾಡನ್ನು ಅದ್ಭುತವಾಗಿ ಹಾಡಿದ ದೃಶ್ಯ ನನ್ನ ಕಣ್ಣ ಮುಂದೆ ಜೀವಂತವಾಗಿದೆ, ಅವರ ಧ್ವನಿ ನನ್ನ ಕಿವಿಗಳಲ್ಲಿ ರಿಂಗಣಿಸುತ್ತಿರುತ್ತದೆ. 1966ರಲ್ಲಿ ಬಿಡುಗಡೆಯಾದ ಹಿಂದಿ ಸಿನೆಮಾ ಲವ್‌ ಇನ್‌ ಟೋಕಿಯೋದಲ್ಲಿನ ಲತಾ ಮಂಗೇಶ್ಕರ್‌ ಹಾಡಿದ ಆ ಜನಪ್ರಿಯ ಹಾಡಿನ ಪಲ್ಲವಿ ಸಯೊನಾರ ಸಯೊನಾರ. “ಸಯೊನಾರ’ ಎಂಬ ಜಪಾನಿ ಭಾಷೆಯ ಶಬ್ದದ ಅರ್ಥ “ಬೀಳ್ಕೊಡುಗೆ’ (ಗುಡ್‌ ಬೈ) ಎಂದು. ನನ್ನ ಪಾಲಿಗೆ “ಸಯೊನಾರ’ ಹಾಡು ಫಿಲೋಮಿನಾ ಕಾಲೇಜಿನ ಬಗೆಗಿನ ನನ್ನ ಪ್ರೀತಿಯ ಪಲ್ಲವಿ. 

ಬಿ. ಎ. ವಿವೇಕ ರೈ

ಟಾಪ್ ನ್ಯೂಸ್

CTRavi

Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ

ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ 10, ದೆಹಲಿಯಲ್ಲಿ 11 ಮಂದಿ ಸೆರೆ

Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ

Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ

Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ

Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್‌ ತರಾಟೆ

Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್‌ ತರಾಟೆ

England; ಬೆನ್‌ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್‌ ಟ್ರೋಫಿಗೆ ಅಲಭ್ಯ

England; ಬೆನ್‌ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್‌ ಟ್ರೋಫಿಗೆ ಅಲಭ್ಯ

15-crime

Bailhongal: ಅನೈತಿಕ ಸಂಬಂಧದ ಹಿನ್ನೆಲೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ; ಆರೋಪಿ ಪರಾರಿ

CT Ravi ಭದ್ರತೆ ವ್ಯವಸ್ಥೆ,ನ್ಯಾಯಾಂಗ ತನಿಖೆಗೆ ರಾಜ್ಯಪಾಲರಿಗೆ ಬಿಜೆಪಿ ಮನವಿ: ಆರ್.ಅಶೋಕ್

CT Ravi Case ನ್ಯಾಯಾಂಗ ತನಿಖೆಗೆ ಒಪ್ಪಿಸಲು ಗೌರ್ನರ್‌ಗೆ ಬಿಜೆಪಿ ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

CTRavi

Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ

ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ 10, ದೆಹಲಿಯಲ್ಲಿ 11 ಮಂದಿ ಸೆರೆ

Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ

Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ

Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ

Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್‌ ತರಾಟೆ

Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್‌ ತರಾಟೆ

England; ಬೆನ್‌ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್‌ ಟ್ರೋಫಿಗೆ ಅಲಭ್ಯ

England; ಬೆನ್‌ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್‌ ಟ್ರೋಫಿಗೆ ಅಲಭ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.