ತೇಜಸ್ವಿ ನೆನಪು
Team Udayavani, Sep 9, 2018, 6:00 AM IST
ಪೂರ್ಣಚಂದ್ರ ತೇಜಸ್ವಿ ಈಗ ನಮ್ಮೊಂದಿಗಿರುತ್ತಿದ್ದರೆ 70ರ ವಸಂತವನ್ನು ಸಂಭ್ರಮಿಸುತ್ತಿದ್ದರು. ಸೆ. 8 ಅವರ ಜನ್ಮದಿನ.
ಆ ದಿನ ಬಹಳ ಮಹತ್ವದ ದಿನವಾಗಿತ್ತು. ಕಾರಣ, ಆ ಇಡೀ ದಿವಸ ಚಿತ್ರೀಕರಣ ನಡೆಯಬೇಕಾಗಿದ್ದದ್ದು ಪೂರ್ಣಚಂದ್ರ ತೇಜಸ್ವಿಯವರ ಮೂಡಿಗೆರೆಯ ತೋಟದಲ್ಲಿ ಮತ್ತು ಮಾತನಾಡಿಸಬೇಕಾದದ್ದು ತೇಜಸ್ವಿಯವರ ನೆರಳಂತೆ ಸುಮಾರು ನಲವತ್ತು ವರುಷ ಅವರ ಕಷ್ಟ-ಸುಖಗಳನ್ನು ಸಮಾನವಾಗಿ ಉಂಡ ಅವರ ಬಾಳಸಂಗಾತಿ ರಾಜೇಶ್ವರಿ ತೇಜಸ್ವಿಯವರನ್ನು. ಬೆಳಿಗ್ಗೆ 7 ಗಂಟೆಗೆ ಸರಿಯಾಗಿ “ನಿರುತ್ತರ’ ತಲುಪಿ ಚಿತ್ರೀಕರಣ ಪ್ರಾರಂಭಿಸಿದೆವು. ಅಂದು ಸಹ ಯಥಾಪ್ರಕಾರ ಬೆಳಿಗ್ಗೆ ಬೆಳಿಗ್ಗೆಯೇ ಮಳೆ. ಆದರೆ ಅಷ್ಟೊತ್ತಿಗಾಗಲೇ ಚಿತ್ರೀಕರಣ ಪ್ರಾರಂಭವಾಗಿ ಐದಾರು ದಿನಗಳಾಗಿದ್ದರಿಂದ ನಿರಂತರವಾಗಿ ಸುರಿಯುವ ಮಲೆನಾಡಿನ ಮಳೆಗೆ ಎಲ್ಲರೂ ಹೊಂದಿಕೊಂಡುಬಿಟ್ಟಿದ್ದೆವು. ಪ್ರಾರಂಭದಲ್ಲಿ ನಾನು, ನಮ್ಮ ತಂಡ ತೋಟವಿಡೀ ಸುತ್ತಾಡಿ ತೋಟದ ಮೂಲೆ ಮೂಲೆಯನ್ನೂ ಬಿಡದೇ ಅಲ್ಲಿನ ಪ್ರತಿಯೊಂದು ಹೂವು, ಹಣ್ಣು, ಕೆರೆ, ಕಂಗೊಳಿಸುತ್ತಿದ್ದ ಕಾಫಿ ತೋಟ- ಹೀಗೆ ಎಲ್ಲವನ್ನೂ ಚಿತ್ರೀಕರಿಸಿಕೊಂಡೆವು. 9 ಗಂಟೆಯ ಹೊತ್ತಿಗೆ ಈ ಕೆಲಸ ಮುಗಿಯುತ್ತ ಬಂದಿತ್ತು. ಕಡೆಯದು ಎಂಬಂತೆ ಮನೆಯ ಪಕ್ಕದ ಶೆಡ್‌ನಲ್ಲಿ ಕವರ್ ಹೊದ್ದುಕೊಂಡು ನಿಂತಿದ್ದ ತೇಜಸ್ವಿಯವರ ದೀರ್ಘಕಾಲದ ಸಾಥಿ MEN 6625 ಸ್ಕೂಟರ್‌ನ ಕೆಲ ಚಿತ್ರಿಕೆಗಳನ್ನು ತೆಗೆದುಕೊಳ್ಳುತ್ತಿದ್ದೆವು. ರಾಜೇಶ್ವರಿ ಮೇಡಂ ಅಡುಗೆ ಮನೆಯ ಕಿಟಕಿಯಿಂದಲೇ ನಮ್ಮನ್ನು ಕಾಫಿ ಕುಡಿಯಲು ಬರುವಂತೆ ಕೂಗಿ ಕರೆದರು. ಮೇಡಂ ಕೊಟ್ಟ ಬಿಸಿಬಿಸಿ ಕಾಫಿ ಕುಡಿಯುತ್ತಲೇ ಮತ್ತೂಮ್ಮೆ ಅವರಿಗೆ ವಿಷಯಗಳನ್ನು ಜ್ಞಾಪಿಸಿದೆ. “”ನೀವು ಕೊಟ್ಟು ಹೋದ ಸ್ಕ್ರಿಸ್ಟ್ ಓದಿದೆ. ನಾನು ಸಿದ್ಧವಾಗಿದ್ದೀನಿ. ನೀವು ಒಂದೊಂದಾಗಿ ಕೇಳ್ತಾ ಹೋಗಿ…” ಎಂದು ಅಲ್ಲಿದ್ದ ಕುರ್ಚಿಯ ಮೇಲೆ ಕುಳಿತರು. ನಾವೂ ಸರ್ವಸನ್ನದ್ಧರಾಗಿಯೇ ಇದ್ದುದ್ದರಿಂದ ಸಾಕ್ಷ್ಯಚಿತ್ರದ ಅಂದಿನ ಚಿತ್ರೀಕರಣ ಪ್ರಾರಂಭವಾಯಿತು. “”ತೇಜಸ್ವಿಯವರನ್ನು ಮೊದಲು ನೋಡಿದ್ದು ಎಲ್ಲಿ?” ಎಂಬ ಮೊದಲ ಪ್ರಶ್ನೆಯನ್ನು ಅವರಿಗೆ ಕೇಳಿದೆ. ಮೇಡಂ ಪ್ರಾರಂಭದಲ್ಲಿ ತುಸು ಸಂಕೋಚದಿಂದಲೇ ಆ ದಿನಗಳ ನೆನಪುಗಳನ್ನು ಬಿಡಿಸಿಡಲು ಪ್ರಾರಂಭಿಸಿದರು.
“”ನಾನು ಬೆಂಗಳೂರಿನಿಂದ ಮೈಸೂರಿಗೆ ಓದಕ್ಕೆ ಅಂತ ಹೋದವಳು. ಆಗ ಅದು ತುಂಬಾ ಹೊಸ ಪರಿಸರ ಅನ್ನಿಸಿತ್ತು ನನಗೆ. ಕೋ-ಎಜುಕೇಶನ್ನು ಗೊತ್ತಿರ್ಲಿಲ್ಲ, ಏನೂ ಗೊತ್ತಿರಲಿಲ್ಲ. ಆಗ ಇಡೀ ಕಾಲೇಜ್ ತುಂಬಾ ಹುಡುಗಿರೆಲ್ಲಾ ಏನೋ ಗುಸುಗುಸು, ಪಿಸಿಪಿಸಿ ಅಂತ ಮಾತಾಡ್ಕೊàತಿದ್ರು- ತೇಜಸ್ವಿ ಕಣೆ ಪೂರ್ಣಚಂದ್ರ ತೇಜಸ್ವಿ…’ ಅಂತ. ಅದು ಹೇಗಿರ್ತಿತ್ತು ಅಂದ್ರೆ ಇಡೀ ಕಾಲೇಜು ಇವರನ್ನ ಕಂಡು ಥ್ರಿಲ್ ಆಗ್ತಿದ್ರು. ಅದು ಕುವೆಂಪುರವರ ಮಗ ಅನ್ನೋದಕ್ಕಲ್ಲ, ಒಟ್ಟಾರೆ ಇವರ ವ್ಯಕ್ತಿತ್ವವೇ ಹಾಗಿತ್ತು. ಆಗ ನನಗೆ ಕುತೂಹಲ ತಡೆಯೋಕ್ಕಾಗದೇ ಅವ್ರನ್ನ ಕೇಳ್ದೆ – ಯಾರೇ ಅದು ನನಗೂ ತೋರಿಸ್ರೇ- ಅಂತ. ಒಂದಿನ ತೋರಿಸಿದ್ರು- ಅಗೋ ಅಲ್ಲಿ ಹೋಗ್ತಿದ್ದಾನಲ್ಲ ಅವೆ°à ತೇಜಸ್ವಿ- ಅಂತ. ಆಗ ನನಗೆ ತೇಜಸ್ವಿ ಅಂದ್ರೆ ಕುವೆಂಪು ಅವರ ಮಗ ಅಂತ ಮಾತ್ರ ಗೊತ್ತಿತ್ತು. ಅಮೇಲೆ ಜೂಲಿಯಟ್ ವೆನ್ನಿ ಅಂತ ಒಬ್ಬರು, ಕೃಷ್ಣಮೂರ್ತಿ ಅಂತ ಒಬ್ಬರು ನಮ್ಮ ಗೆಳೆಯರಿದ್ರು. ಅವ್ರು ಒಂದಿನ ತೇಜಸ್ವೀನ ನನಗೆ ಪರಿಚಯ ಮಾಡಿ ಕೊಟ್ರಾ. ಅವತ್ತಾದ ಪರಿಚಯ ಹಾಗೇ ಮುಂದುವರಿಯಿತು. ನಂತರ 1961ರಲ್ಲಿ ಇಬ್ಬರದ್ದೂ ಎಂ.ಎ. ಮುಗೀತು. ನಾನು ಫಿಲಾಸಫಿ ಎಂ. ಎ. ಮಾಡ್ಕೊಂಡೆ, ಅವ್ರು ಕನ್ನಡ ಎಂ.ಎ. ಮಾಡ್ಕೊಂಡ್ರು. ಆಗ ನಾನು ಮೈಸೂರು ಬಿಟ್ಟು ಬೆಂಗಳೂರಿಗೆ ವಾಪಸ್ ಬರಬೇಕಾಯಿತು. ಆಗ ಯಾಕೋ ಇಬ್ಬರಲ್ಲೂ ಒಂಥರ ಚಡಪಡಿಕೆ. ಅದನ್ನೇನು ಬಾಯಿಬಿಟ್ಟು ಹೇಳ್ಬೇಕು ಅನ್ನೋ ಹಂಗಿರಲಿಲ್ಲ. ನನ್ನ ಚಡಪಡಿಕೆ, ಅವರ ಚಡಪಡಿಕೆ ಒಬ್ಬರಿಗೊಬ್ಬರಿಗೆ ಗೊತ್ತಾಗ್ತಿತ್ತು, “ವಿ ಲವ್ ಈಚ್ ಅದರ್’ ಅಂತ. ಆಗ ಮದುವೆ ಮಾಡಿಕೊಳ್ಳೋದು ಅಂತ ಡಿಸೈಡ್ ಮಾಡ್ಕೊಂಡು ನಾನು ಬೆಂಗಳೂರಿಗೆ ವಾಪಸ್ ಬಂದೆ.”
ನಮ್ಮ ಚಿತ್ರೀಕರಣ ಮುಂದುವರೆಯಿತು. “”ಇವತ್ತಿನ ಹಾಗೆ ಆಗ ಟೆಲಿಪೋನ್ ಆಗ್ಲಿ, ಇಂಟರ್‌ನೆಟ್ ಆಗ್ಲಿ ಅಥವಾ ಮೊಬೈಲ್ ಆಗ್ಲಿ ಇರಲಿಲ್ಲ. ಏನೇ ಇದ್ದರೂ ಕಾಗದಗಳ ಮೂಲಕವೇ ಪರಸ್ಪರ ಸಂಪರ್ಕ ಮಾಡ್ಬೇಕಿತ್ತು. ಆಗ ಹೇಗಾಗ್ತಿತ್ತು ಅಂದ್ರೆ ಬೆಳಿಗ್ಗೆ ಒಂದು ಕಾಗದ ಹಾಕಿದ್ರೆ ಸಂಜೆಗೆ ತಲುಪುವ ವ್ಯವಸ್ಥೆಯೂ ಇತ್ತು. ಹಾಗಾಗಿ, ನಾನು ಬೆಂಗಳೂರಿಗೆ ಬಂದ ನಂತರ ಪತ್ರಗಳ ಮೂಲಕವೇ ಇಬ್ಬರೂ ಒಬ್ಬರಿಗೊಬ್ಬರು ಮಾತಾಡ್ತಿದ್ವಿ. ಹೆಚ್ಚು ಕಡಿಮೆ ದಿನಕ್ಕೊಂದು ಕಾಗದ ತಪ್ಪದೇ ಬರಕೊತಿದ್ದೆವು” ಎಂದು ಹೇಳಿ ಮೇಡಂ ನಕ್ಕರು.
ಅಂದಿನ ಆ ಪತ್ರಗಳಲ್ಲಿ ಬದುಕು, ಸಾವು, ಫಿಲಾಸಫಿ, ಆಧ್ಯಾತ್ಮ, ಪ್ರೇಮ, ಕಾಮ, ಹಲವು ವಿಚಾರಗಳಿಗೆ ಸಂಬಂಧಪಟ್ಟಂತೆ ತೇಜಸ್ವಿಯವರ ನಿಲುವುಗಳು- ಮುಂತಾದ ಅನೇಕ ವೈವಿಧ್ಯಮಯ ವಿಷಯಗಳು ಆ ಪತ್ರಗಳಲ್ಲಿವೆ. ತೇಜಸ್ವಿ ರಾಜೇಶ್ವರಿಯವರಿಗೆ ಬರೆದ ಅಷ್ಟೂ ಪತ್ರಗಳಲ್ಲಿ ಒಂದು ಪತ್ರ ನನಗೆ ತುಂಬಾ ಅಚ್ಚುಮೆಚ್ಚಿನ ಪತ್ರ. ರಿಸರ್ಚ್ ವರ್ಕಿನ ಸಮಯದಲ್ಲಿ ಈ ಪತ್ರ ನನ್ನ ತೇಜಸ್ವಿ ಪುಸ್ತಕದಲ್ಲಿ ನನ್ನ ಕಣ್ಣಿಗೆ ಬಿದ್ದಿತ್ತು. ಅದು ತೇಜಸ್ವಿಯವರು ರಾಜೇಶ್ವರಿಯವರನ್ನು ಹುಡುಕಿಕೊಂಡು ಮೈಸೂರಿನಿಂದ ಬೆಂಗಳೂರಿಗೆ ಬಂದಾಗ ಮನೆ ಹುಡುಕಲು ಸರಿಯಾದ ಅಡ್ರೆಸ್ ಕೊಡದ ರಾಜೇಶ್ವರಿಯವರ ಮೇಲೆ ಸಿಟ್ಟಾಗಿ ಬರೆದಿದ್ದ ಪತ್ರ. ಆ ಪತ್ರವನ್ನು ಚಿತ್ರೀಕರಣದ ಸಮಯದಲ್ಲಿ ರಾಜೇಶ್ವರಿ ಮೇಡಮ್‌ರಿಂದಲೇ ಓದಿಸಬೇಕೆಂದುಕೊಂಡಿದ್ದೆ. ಹಾಗೆಯೇ ಹೇಳಿದೆ. ಅವರು ನಗುತ್ತಾ ತೇಜಸ್ವಿ ಬರೆದ ಮೂಲ ಪತ್ರದ ಕಾಗದವನ್ನು ಅವರ ಸಂಗ್ರಹದಿಂದ ಹುಡುಕಿ ತೆಗೆದು ನಮಗಾಗಿ ವಾಚಿಸಿದರು. “”ಇವರು ಯಾವ ಕಾಗದಕ್ಕೂ ತಾರೀಕನ್ನು ಹಾಕ್ತಾನೇ ಇರ್ಲಿಲ್ಲ. ನಾನು ಅದರ ಮೇಲಿರುವ ಪೋಸ್ಟ್ ಆಫೀಸ್ ಸೀಲ್ ನೋಡ್ಕೊಂಡು ಆ ಪತ್ರಗಳ ತಾರೀಕು ಪತ್ತೆ ಹಚ್ಕೊಂಡೆ” ಎಂದು ಹೇಳಿ ಆ ಪತ್ರವನ್ನು ತೇಜಸ್ವಿಯವರ ಧಾಟಿಯಲ್ಲೇ ಓದಲು ಪ್ರಾರಂಭಿಸಿದರು.
“”ರಾಜೇಶ್, ಇಲ್ಲಿ ಬಂದು ನನಗೆ ರೇಗಿ ಹೋಗಿದೆ, ಹಾಳಾದವಳೆ ಯಾವುದೋ ದರಿದ್ರ ಫೋನ್ ನಂಬರ್ ಕೊಟ್ಟು ಫೋನ್ ಮಾಡಿ ಮಾಡಿ ಸತ್ತೆ. ಆಮೇಲೆ ನಿನ್ನೆಯೆಲ್ಲ ಅದನ್ನೇ ಹುಡುಕಿ ಹುಡುಕಿ ಸತ್ತೆ. ಈಗ ಬೆಳಿಗ್ಗೆಯೆಲ್ಲ ಮತ್ತೆ ಹುಡುಕಿ ಹುಡುಕಿ ಸತ್ತೆ. ಹಾಳಾದವ್ರಿಗೆ ಕ್ರಾಸ್ ನಂಬರ್ ಆದ್ರೂ ಕೊಡ್ಲಿಕ್ಕೆ ಏನಾಗಿತ್ತು. ತರ್ಲೆ ಅಂದ್ರೆ ತರ್ಲೆ ಮಾಡಿಟ್ಟಿದ್ದಿ. ನಿನ್ನೆ 3 ಗಂಟೆಗೆ ಬಂದೆ. ಅಂದರೆ ನಿನ್ನೆ ರಾತ್ರಿಯ ರೈಲಿಗೆ ಹೋಗಬೇಕೆಂದು ಬಂದೆ. ನಿನ್ನ ಹುಡುಕಿ ಸತ್ತು ಇವತ್ತಾದರೂ ಸಿಗುತ್ತಾಳೆ ಎಂದರೆ ಇವತ್ತೂ ಬೇರೆ ತರಲೆ… ಥೂತ್ತೇರಿ. ಅಲ್ಲೇ ಇವತ್ತು ರಾತ್ರಿ ರೈಲಿಗೆ ಹೋಗುತ್ತೇನೆ. ತಮ್ಮ ಘನ ವ್ಯಕ್ತಿತ್ವಕ್ಕೆ ಸಾಧ್ಯವಾದರೆ ಟೌನ್‌ಹಾಲಿನ ಹತ್ತಿರ 4 ಗಂಟೆಗೆ ಬನ್ನಿ ಸಿಗುತ್ತೇನೆ. ನನಗೆ ರೇಗಂದ್ರೆ ರೇಗು. ನಿನ್ನನ್ನು ಮಾತಾಡಿಸಲೇ ಬಾರದು ಅನ್ನೊ ಅಷ್ಟು ರೇಗು ತರಲೆ ಥತ್. 16ಠಿಜ 4ಕ್ಕೆ ಟೌನ್ ಹಾಲಿನ ಹತ್ತಿರ ವಕ್ಕರಿಸಿರಿ. -ಪೂಚಂತೇ.” ತೇಜಸ್ವಿಯವರು ರಾಜೇಶ್ವರಿಯವರನ್ನು “ರಾಜೇಶ್’ ಎಂದು ಸಂಬೋಧಿಸುತ್ತಿದ್ದರು. “”ಹೀಗೇನೊ ಕಾಗದ ಬರ್ದಿದ್ರು. ಸರಿ, ಆದರೆ, ಅವರೇ ನಮ್ಮನೆ ಹುಡ್ಕೊಂಡ್ ಬಂದ್ರು. ಹ್ಯಾಗೆ ಗೊತ್ತಾಯ್ತು ಅಂದ್ರೆ ಇವರು ಪೋಸ್ಟ್ ಮ್ಯಾನ್ ಹತ್ರ ಹೋಗಿ ಅಡ್ರೆಸ್ ಕೇಳ್ಕೊಂಡು ಹುಡುಕ್ಕೊಂಡ್‌ಬಂದಿದ್ರು…” ಎಂದು ಹೇಳಿ ರಾಜೇಶ್ವರಿ ಮುಗುಳ್ನಕ್ಕರು.
ಪೂರ್ಣಚಂದ್ರ ತೇಜಸ್ವಿ ಅವರ ಬಗ್ಗೆ ಇನ್ನಷ್ಟು, ಮತ್ತಷ್ಟು ತಿಳಿಯುವ ಆಸಕ್ತಿ ಯಾರಿಗೂ ಕುಗ್ಗಿಲ್ಲ. ಹೀಗಾಗಿ ಬೆಂಗಳೂರಿನ ಬಹುರೂಪಿ ಪ್ರಕಾಶನವು “ತೇಜಸ್ವಿ ಸಿಕ್ಕರು’ ಎಂಬ ಹೊಸ ಕೃತಿಯನ್ನು ಪ್ರಕಟಿಸಿದೆ. ತೇಜಸ್ವಿ ಆಪ್ತರ ಮೂಲಕ ತೇಜಸ್ವಿಯವರನ್ನು ಕಟ್ಟಿಕೊಡುವ ಪ್ರಯತ್ನ ಇದು.
ಕೆ. ಎಸ್. ಪರಮೇಶ್ವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
laws: ಕಠಿಣ ಕಾಯ್ದೆ ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.