ಸಾಮಾನ್ಯ ಕನಿಷ್ಠ ಕಾರ್ಯಕ್ರಮ: ಉದಾಸೀನ ಬೇಡ
Team Udayavani, Sep 10, 2018, 8:16 PM IST
ಉತ್ತಮ ಆಡಳಿತ ನೀಡುತ್ತೇವೆ ಎಂದು ವಾಗ್ಧಾನ ಮಾಡಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮದಡಿ ಕಾರ್ಯಕ್ರಮ ಜಾರಿಗೊಳಿಸುತ್ತೇವೆ ಎಂದು ಘೋಷಿಸಿದ ಮೇಲೆ ಆ ಬಗ್ಗೆ ನಿರಾಸಕ್ತಿ ವಹಿಸುವುದು ಸರಿಯೇ?
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗಿ 100 ದಿನ ಕಳೆದರೂ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಸಿದ್ಧವಾಗಿಲ್ಲ ಎಂಬುದು ಸಣ್ಣ ವಿಚಾರವೇನಲ್ಲ. ಯಾವುದೇ ಒಂದು ಸಮ್ಮಿಶ್ರ ಸರ್ಕಾರ ರಚನೆಯಾದಾಗ ಸರ್ಕಾರದ ಪಾಲುದಾರ ಪಕ್ಷಗಳು ಚುನಾವಣೆ ಸಂದರ್ಭದಲ್ಲಿ ಪ್ರಣಾಳಿಕೆ ಮೂಲಕ ನೀಡಿದ್ದ ಭರವಸೆಗಳ ಈಡೇರಿಕೆ ಸಂಬಂಧ ಮಾರ್ಗಸೂಚಿ ಸಿದ್ಧಪಡಿಸಿಕೊಳ್ಳುತ್ತದೆ.
ಸಮ್ಮಿಶ್ರ ಸರ್ಕಾರ ರಚನೆ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ವರಿಷ್ಠರು ಇದೇ ಮಾತನ್ನೇ ಹೇಳಿದ್ದರು. ಎರಡೂ ಪಕ್ಷಗಳು ಚುನಾವಣೆಯಲ್ಲಿ ಪರಸ್ಪರರ ವಿರುದ್ಧ ಹೋರಾಟ ನಡೆಸಿದ್ದವಾದರೂ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಒಟ್ಟಾಗಿ ಸರ್ಕಾರ ರಚನೆಗೆ ತೀರ್ಮಾನಿಸಿದವು. ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಪ್ರಣಾಳಿಕೆಗಳು, ಕಾರ್ಯಕ್ರಮಗಳು ಬೇರೆ ಬೇರೆ ಆಗಿದ್ದರೂ ಇದೀಗ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರಚಿಸಿ ಎರಡೂ ಪಕ್ಷಗಳ ಕಾರ್ಯಕ್ರಮಗಳನ್ನು ಸಮ್ಮಿಶ್ರ ಸರ್ಕಾರದ ಮೂಲಕ ಅನುಷ್ಟಾನಕ್ಕೆ ತರುವ ಕೆಲಸ ಮಾಡಲಿದ್ದೇವೆ ಎಂದು ಅಂದು ಹೇಳಲಾಗಿತ್ತು.
ಅದಕ್ಕಾಗಿ ಎರಡೂ ಪಕ್ಷಗಳಿಂದ ಸದಸ್ಯರನ್ನೂ ನೇಮಿಸಲಾಗಿತ್ತು. ಆ ಸದಸ್ಯರು ರಚಿಸಿದ ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಕರಡು ನೋಡಿ ಅಂತಿಮ ಸ್ವರೂಪ ನೀಡುವ ಹೊಣೆಗಾರಿಕೆ ಸಮನ್ವಯ ಸಮಿತಿ ಅಧ್ಯಕ್ಷರಿಗೂ ನೀಡಲಾಗಿತ್ತು. ಆದರೆ, 100 ದಿನ ಕಳೆದರೂ ಕರಡು ಸಿದ್ಧಗೊಂಡಿಲ್ಲ, ಸಾಮಾನ್ಯ ಕನಿಷ್ಠ ಕಾರ್ಯಕ್ರಮವೂ ಇಲ್ಲ. ಇದು ಸಹಜವಾಗಿ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳ ಶಾಸಕರು ಹಾಗೂ ನಾಯಕರಲ್ಲಿ ಬೇಸರ ಮೂಡಿಸಿದೆ.
ಸಾಮಾನ್ಯ ಕನಿಷ್ಠ ಕಾರ್ಯಕ್ರಮವೇ ಇರದಿದ್ದರೆ ಸಮ್ಮಿಶ್ರ ಸರ್ಕಾರ ಹೇಗೆ ನಡೆಸುವುದು. ಸಮನ್ವಯ ಸಮಿತಿಯಲ್ಲಿ ಇನ್ನೇನು ಚರ್ಚೆ ಮಾಡುವುದು ಎಂಬ ಪ್ರಶ್ನೆಯೂ ಇದೆ. ಸಮನ್ವಯ ಕೊರತೆ ಇರುವುದರಿಂದಲೇ ಇದುವರೆಗೂ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಸಿದ್ಧಗೊಂಡಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಸಾಮಾನ್ಯ ಕನಿಷ್ಠ ಕಾರ್ಯಸೂಚಿ ಕರಡು ಸಿದ್ಧವಾಗುತ್ತಿದೆ ಎಂದು ಎರಡು ತಿಂಗಳಿನಿಂದ ಹೇಳಲಾಗುತ್ತಿದೆಯಾದರೂ ಅಂತಿಮ ಸ್ವರೂಪ ಪಡೆದಿಲ್ಲ.
ಎರಡೂ ಪಕ್ಷಗಳು ಚುನಾವಣಾ ಪೂರ್ವದಲ್ಲಿ ನೀಡಿದ್ದ ಪ್ರಣಾಳಿಕೆ ಆಧಾರದ ಮೇಲೆ ಸಾಮಾನ್ಯ ಕನಿಷ್ಠ ಕಾರ್ಯಸೂಚಿ ಸಿದ್ಧಗೊಂಡು ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆಯಾಗಿ ಯಾವ್ಯಾವ ಕಾರ್ಯಕ್ರಮಗಳು ಆದ್ಯತೆ ಮೇರೆಗೆ ಜಾರಿಗೊಳಿಸಬೇಕು ಎಂಬುದು ತೀರ್ಮಾನವಾಗಬೇಕಿತ್ತು. ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್‌ನ ರಾಜ್ಯಾಧ್ಯಕ್ಷರೂ ಇನ್ನು ಸಮನ್ವಯ ಸಮಿತಿಗೆ ಪ್ರವೇಶ ಪಡೆದಿಲ್ಲ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಎರಡೂ ಪಕ್ಷಗಳ ರಾಷ್ಟ್ರೀಯ ಮುಖಂಡರು ಸಮಿತಿಯಲ್ಲಿದ್ದು, ಕಾಂಗ್ರೆಸ್ ಶಾಸಕಂಗ ಪಕ್ಷದ ನಾಯಕರು ಅಧ್ಯಕ್ಷರಾಗಿದ್ದಾರೆ. ಇವರ್ಯಾರೂ ಇದುವರೆಗೂ ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಬಗ್ಗೆ ಪ್ರಸ್ತಾಪ ಮಾಡಿಲ್ಲವೇ? ಮಾಡಿದ್ದರೆ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಸಿದ್ಧವಾಗಬೇಕಿತ್ತಲ್ಲವೇ ಎಂಬ ಪ್ರಶ್ನೆಗಳೂ ಇವೆ.
ಸರ್ಕಾರದ ಸ್ಥಿರತೆ ಬಗ್ಗೆ ಮೊದಲ ದಿನದಿಂದಲೂ ಅನುಮಾನ, ಜತೆಗೆ ಎರಡೂ ಪಕ್ಷಗಳ ನಾಯಕರ ನಡುವಿನ ಆಂತರಿಕ ಭಿನ್ನಾಭಿಪ್ರಾಯ, ಗೊಂದಲ ಇವೆಲ್ಲವೂ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಸಿದ್ಧವಾಗದಿರಲು ಕಾರಣ. ಚುನಾವಣೆ ನಂತರ ಒಟ್ಟಾಗಿ ಉತ್ತಮ ಆಡಳಿತ ನೀಡುತ್ತೇವೆ ಎಂದು ವಾಗ್ಧಾನ ಮಾಡಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮದಡಿ ಕಾರ್ಯಕ್ರಮ ಜಾರಿಗೊಳಿಸುತ್ತೇವೆ ಎಂದು ಘೋಷಿಸಿದ ಮೇಲೆ ಆ ಬಗ್ಗೆ ನಿರಾಸಕ್ತಿ ವಹಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಎರಡೂ ಪಕ್ಷದ ನಾಯಕರೇ ಹೇಳಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.