ಎಲ್ಲೆಲ್ಲೂ ಪರಿಸರ ಸ್ನೇಹಿ ಗಣಪನ ಜಪ
Team Udayavani, Sep 13, 2018, 11:40 AM IST
ಬೆಂಗಳೂರು: ರಾಜಧಾನಿಯಲ್ಲೀಗ ಪರಿಸರ ಸ್ನೇಹಿ ಗಣಪನದ್ದೇ ಜಪ. ರಾಜಕೀಯ ವ್ಯಕ್ತಿಗಳಿಂದ ಹಿಡಿದು ಧಾರ್ಮಿಕ ಮುಖಂಡರು, ಸಿನಿಮಾ ತಾರೆಯರು ಸೇರಿ ವಿವಿಧ ಸಂಘ-ಸಂಸ್ಥೆಗಳು “ಪರಿಸರ ಹಾಗೂ ಜಲಮೂಲಗಳ ಸಂರಕ್ಷಣೆಗಾಗಿ ಈ ಬಾರಿ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿ ಪೂಜಿಸಿ’ ಎಂದು ಜಾಗೃತಿ ಮೂಡಿಸುತ್ತಿದ್ದಾರೆ.
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಂದ ಹಿಡಿದು ಬಿಬಿಎಂಪಿ ಮೇಯರ್, ವಿವಿಧ ಧಾರ್ಮಿಕ ಕೇಂದ್ರಗಳ ಮುಖಂಡರು, ಸಿನಿಮಾ ನಟ-ನಟಿಯರು ಮಣ್ಣಿನ ಮೂರ್ತಿ ಬಳಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದು, ಪರಿಸರ ತಜ್ಞರು, ವಿವಿಧ ಸಂಘ-ಸಂಸ್ಥೆಗಳು ನಿರಂತರವಾಗಿ ಪರಿಸರ ಸ್ನೇಹಿ ಮೂರ್ತಿ ಬಳಕೆ ಬಗ್ಗೆ ಜಾಗೃತಿ ಅಭಿಯಾನ ನಡೆಸಿವೆ. ಅದಕ್ಕೆ ಸ್ಪಂದಿಸಿರುವ ನಗರದ ಜನ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಮಣ್ಣಿನ ಮೂರ್ತಿ ಪೂಜಿಸಲು ಆಸಕ್ತಿ ತೋರಿದ್ದಾರೆ. ಹತ್ತಾರು ವರ್ಷಗಳಿಂದ ಗಣೇಶೋತ್ಸವ ಆಚರಿಸುತ್ತಿರುವ ಸಂಸ್ಥೆಗಳು ಕೂಡ ಪರಿಸರ ಸ್ನೇಹಿ ಗಣಪನ ಪೂಜಿಸುತ್ತಿವೆ. ಎಂಟು ವರ್ಷಗಳಿಂದ ಒಂದೇ ಗಣಪನ ಪೂಜೆ: ಶ್ರೀ ವಿದ್ಯಾರಣ್ಯ ಯುವಕ ಸಂಘದಿಂದ 56ನೇ ಗಣೇಶೋತ್ಸವ ಆಚರಿಸುತ್ತಿದ್ದು, ಬಸವನಗುಡಿಯ ಎಪಿಎಸ್ ಕಾಲೇಜು ಮೈದಾನ ಹಾಗೂ ನ್ಯಾಷನಲ್ ಕಾಲೇಜಿನಲ್ಲಿ 11 ದಿನ ನಡೆಯುವ ಉತ್ಸವ ಪರಿಸರ ಸ್ನೇಹಿ ಹಾಗೂ ಪ್ಲಾಸ್ಟಿಕ್ ಮುಕ್ತವಾಗಿರಲಿದೆ. ಸಂಘವು ಎಂಟು ವರ್ಷಗಳಿಂದ ಮೂರ್ತಿ ವಿಸರ್ಜಿಸದೆ, ಬೃಹದಾಕಾರದ ಒಂದೇ ಗಣೇಶ ಮೂರ್ತಿಯನ್ನು ಪ್ರತಿ ವರ್ಷ ಪೂಜಿಸುತ್ತಿದೆ. ಹೊರಾಂಗಣ ವಿನ್ಯಾಸವನ್ನು ಮಾತ್ರ ಅದ್ದೂರಿಯಾಗಿ ನಿರ್ಮಿಸುವ ಸಂಘ, ಈ ಬಾರಿ ಅತ್ಯಾಕರ್ಷಕ ಮಂಟಪ ನಿರ್ಮಿಸಿದೆ.
ಉತ್ಸವದ 11 ದಿನಗಳು ಚಿಕ್ಕದಾದ ಮಣ್ಣಿನ ಗಣೇಶನಿಗೆ ಪೂಜೆ ನಡೆಯಲಿದ್ದು, 11ನೇ ದಿನ ಆ ಮೂರ್ತಿ ವಿಸರ್ಜಿಸಲಾಗುತ್ತದೆ. ಈ ಬಾರಿ ರಾಷ್ಟ್ರ ಪ್ರಶಸ್ತಿ ವಿಜೇತ ಗೌರಂಗ ಕುಯಾÉ ತಂಡ ಮಂಟಪ ವಿನ್ಯಾಸಗೊಳಿಸಿದೆ. ಉತ್ಸವವನ್ನು ಪದ್ಮಶ್ರೀ ಪುರಸ್ಕೃತ, ಶ್ರೀ ಶೃಂಗೇರಿ ಮಠದ ಆಡಳಿತಾಧಿಕಾರಿ ಡಾ.ವಿ.ಆರ್.ಗೌರಿಶಂಕರ ಅವರು ಉದ್ಘಾಟಿಸಲಿದ್ದಾರೆ ಎಂದು ಬೆಂಗಳೂರು ಗಣೇಶ ಉತ್ಸವ ಸಮಿತಿ ಟ್ರಸ್ಟಿ ಎಸ್.ಎಂ.ನಂದೀಶ್ ತಿಳಿಸಿದರು.
ಸಂಗೀತ ಸಂಭ್ರಮ: 11 ದಿನದ ಉತ್ಸವದಲ್ಲಿ ಬಾಲಿವುಡ್‌ನ ನಟ ರಿಷಿ ಕಪೂರ್, ಹಿನ್ನೆಲೆಯ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ, ಶ್ರೇಯಾ ಘೋಷಾಲ್, ವಿಜಯ್ ಪ್ರಕಾಶ್ ಸೇರಿದಂತೆ ಪ್ರಮುಖ ಗಾಯಕರು ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಜಾಗೃತಿ ಸಪ್ತಾಹಕ್ಕೆ ಚಾಲನೆ: ಯುವಚೇತನ ಯುವಜನ ಕೇಂದ್ರವು ಶುಕ್ರವಾರದಿಂದ (ಸೆ.14) ನಗರದಲ್ಲಿ ಏಳು ದಿನಗಳ ಕಾಲ “ಕೆಮಿಕಲ್ ಗಣೇಶ ಬೇಡ- ಮಣ್ಣಿನ ಗಣಪ ಇರಲಿ’ ಕೆರೆ, ಜಲಚರಗಳನ್ನು ಸಂರಕ್ಷಿಸೋಣ, ನಮ್ಮ
ಪರಿಸರ ಉಳಿಸೋಣ, ಬೆಳೆಸೋಣ ಎಂಬ ಜಾಗೃತಿ ಸಪ್ತಾಹ ಆರಂಭಿಸಲಿದ್ದು, ಮೇಯರ್ ಆರ್.ಸಂಪತ್‌ರಾಜ್ ಚಾಲನೆ ನೀಡಲಿದ್ದಾರೆ.
ಪಿಒಪಿ ಇದ್ದರೂ ಮಾರುವಂತಿಲ್ಲ: ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬರಬಾರದೆಂಬ ಉದ್ದೇಶದಿಂದ ಪಿಒಪಿ
ಗಣೇಶ ಮೂರ್ತಿಗಳ ಜಪ್ತಿ ನಿಲ್ಲಿಸಿರುವ ಪಾಲಿಕೆ ಅಧಿಕಾರಿಗಳು, ಪಾದಚಾರಿ ಮಾರ್ಗ ಹಾಗೂ ಬಯಲಿನಲ್ಲಿ
ಮಾರಾಟಕ್ಕಿಟ್ಟಿರುವ ಪಿಒಪಿ ಮೂರ್ತಿಗಳ ಲೆಕ್ಕ ಪಡೆದು, ಮಾರಾಟ ಮಾಡದಂತೆ ವ್ಯಾಪಾರಿಗಳಿಗೆ ನೋಟಿಸ್
ನೀಡುತ್ತಿದ್ದಾರೆ. ಒಂದೊಮ್ಮೆ ಪಿಒಪಿ ಗಣೇಶ ಮೂರ್ತಿ ಮಾರಿದರೆ ಮುಂದಿನ ವರ್ಷ ವ್ಯಾಪಾರ ಪರವಾನಗಿ
ರದ್ದುಪಡಿಸುವ ಎಚ್ಚರಿಕೆ ನೀಡಿದ್ದಾರೆ.
ಪರಿಸರ ಮೂರ್ತಿ ಚಿತ್ರ ಕಳುಹಿಸಿ ಗೌರಿ- ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಅರ್ಥ ಪೂರ್ಣವಾಗಿ ಆಚರಿಸಬೇಕು ಎಂಬುದು ಸದಾಶಯ. ಅದರಂತೆ ಮಣ್ಣಿನ ಮೂರ್ತಿಗಳನ್ನೇ ಬಳಸುವುದರಿಂದಾಗುವ ಪ್ರಯೋಜನ, ಪರಿಸರ ಸಂರಕ್ಷಣೆ, ವಿಸರ್ಜನಾ ಪ್ರಕ್ರಿಯೆಯೂ ಸರಳವಾಗಿರುವ ಬಗ್ಗೆ ಸರಣಿ ವರದಿಗಳನ್ನು “ಉದಯವಾಣಿ’ ಪ್ರಕಟಿಸಿದೆ. ಇಂದು ಗೌರಿ ಹಬ್ಬ. ಮಣ್ಣಿನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪರಿಸರ ಸ್ನೇಹಿ ವಿಧಾನದಲ್ಲಿ ಆಚರಣೆ ನಡೆಸುವವರು ಮೂರ್ತಿ ಸಹಿತ ಛಾಯಾಚಿತ್ರವನ್ನು 8861196369 ಮೊಬೈಲ್ ವಾಟ್ಸಾಪ್ ಸಂಖ್ಯೆಗೆ ಅಥವಾ [email protected] ಕಳುಹಿಸಿದರೆ ಆಯ್ದ ಚಿತ್ರಗಳನ್ನು ಪ್ರಕಟಿಸಲಾಗುವುದು.
30 ಅಡಿ ಎತ್ತರದ ಕಬ್ಬಿನ ಗಣೇಶ
ಜೆ.ಪಿ.ನಗರದ ಬಳಿಯ ಪುಟ್ಟೇನಹಳ್ಳಿಯಲ್ಲಿನ ಸತ್ಯ ಗಣಪತಿ ದೇವಸ್ಥಾನದಲ್ಲಿ ಈ ಬಾರಿಯ ಕಬ್ಬಿನಿಂದ ಗಣೇಶ ಮೂರ್ತಿ ನಿರ್ಮಿಸುವ ಮೂಲಕ ಗಣೇಶ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ. ಸುಮಾರು 30 ಅಡಿ ಎತ್ತರದ ಗಣೇಶ ಮೂರ್ತಿ ಇದಾಗಿದ್ದು, 4 ಟನ್ ಕಬ್ಬು ಬಳಸಲಾಗಿದೆ. 30 ಕಲಾವಿದರು ಮೂರ್ತಿ ನಿರ್ಮಿಸುತ್ತಿದ್ದಾರೆ.
ನಾಡಿನ ಸಮಸ್ತ ಜನತೆಗೆ ಗೌರಿ-ಗಣೇಶ ಹಬ್ಬದ ಶುಭಾಶಯಗಳು. ಗಣೇಶ ಎಲ್ಲರಿಗೂ ಸುಖ-ಸಮೃದ್ಧಿ ನೀಡಲೆಂದು ಬಯಸುತ್ತೇನೆ. ಜತೆಗೆ ಜನ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳನ್ನು ಪೂಜಿಸಬೇಕೆಂದು ಕೋರುತ್ತೇನೆ.
ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ
ಪಿಒಪಿ ಮೂರ್ತಿಗಳಿಂದ ಕೆರೆಗಳು ಮಲೀನವಾಗಿ, ಅಂತರ್ಜಲವೂ ಕಲುಷಿತವಾತ್ತದೆ. ಹೀಗಾಗಿ ಜನತೆ ಮಣ್ಣಿನ ಗಣೇಶ ಮೂರ್ತಿಗಳನ್ನು ಪೂಜಿಸಿ ಮನೆ ಬಳಿಯೇ ವಿಸರ್ಜಿಸುವ ಮೂಲಕ ಪರಿಸರ ಸಂರಕ್ಷಣೆಯಲ್ಲಿ ಭಾಗಿಯಾಗಬೇಕು.
ಆರ್.ಸಂಪತ್‌ರಾಜ್, ಮೇಯರ್
ಕೆರೆಗಳ ಸಂರಕ್ಷಣೆ ಹೊಣೆ ಪ್ರತಿಯೊಬ್ಬ ನಾಗರಿಕರ ಮೇಲಿದೆ. ಪಿಒಪಿ ಮೂರ್ತಿ ವಿಸರ್ಜನೆಯಿಂದ ವಿಷಕಾರಿ ಅಂಶಗಳು ಅಂತರ್ಜಲ ಸೇರುತ್ತವೆ. ಹೀಗಾಗಿ ಪ್ರತಿಯೊಬ್ಬರೂ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಬಳಕೆಗೆ ಮುಂದಾಗಬೇಕು.
ಯಲ್ಲಪ್ಪ ರೆಡ್ಡಿ, ಪರಿಸರವಾದಿ
ನಾವು ಪರಿಸರ ಕಾಪಾಡಿದರೆ ಪರಿಸರ ನಮ್ಮನ್ನು ಅಷ್ಟೇ ಚೆನ್ನಾಗಿ ನೋಡಿಕೊಳ್ಳುತ್ತೆ. ಪ್ರಕೃತಿ ವಿಕೋಪದಿಂದ ಈಗಾಗಲೇ ಸಾಕಷ್ಟು ಸಮಸ್ಯೆ ಎದುರಿಸಿದ್ದೇವೆ. ಈ ಬಾರಿಯ ಗಣೇಶನ ಹಬ್ಬದಲ್ಲಿ ಎಲ್ಲರೂ ಪರಿಸರ ಸ್ನೇಹಿ ಗಣಪನ ಮೊರೆ ಹೋಗಬೇಕು. ಈ ಮೂಲಕ ಪರಿಸರ ಸ್ನೇಹಿಯಾಗಿ ಸಂಭ್ರಮಿಸಬೇಕು.
ಗಣೇಶ್, ನಟ
ಪರಿಸರವನ್ನು ಈಗಾಗಲೇ ಸಾಕಷ್ಟು ಹದಗೆಡಿಸಿದ್ದೇವೆ. ಅದರಲ್ಲೂ ಗಣೇಶ ಹಬ್ಬದ ನೆಪದಲ್ಲಿ ಕಲರ್ ಗಣೇಶನ
ಪೂಜಿಸಿ, ನೀರಿಗೆ ಬಿಡ್ತೀವಿ. ಅದರಿಂದ ಪರಿಸರಕ್ಕೂ ಹಾನಿಯಾಗುತ್ತೆ. ಜನತೆ ಜಾಗೃತರಾಗಿ ಮಣ್ಣಿನ ಗಣಪ, ಪೇಪರ್ ಗಣಪನ ಪೂಜಿಸುವ ಮೂಲಕ ಪರಿಸರ ಹಾನಿ ತಪ್ಪಿಸಬೇಕು.
ಹರಿಪ್ರಿಯಾ, ನಟಿ
ಗಣೇಶನ ಹಬ್ಬ ಅಂದಾಕ್ಷಣ ಕಲರ್ ಕಲರ್ ಗಣಪ ನೆನಪಾಗುತ್ತಾನೆ. ಆದರೆ, ಬಣ್ಣದಲ್ಲಿ ಕೆಮಿಕಲ್ ಇರುವುದರಿಂದ ನೀರು ಕಲ್ಮಶವಾಗುತ್ತೆ. ಪರಿಸರಕ್ಕೂ ಹಾನಿಯಾಗುತ್ತೆ. ಈಗ ಮಣ್ಣಿನ ಗಣಪ, ವೆಜಿಟೆಬಲ್ ಗಣಪ ಕೂಡ ಇದೆ. ಈ ಗಣಪ ಮೂರ್ತಿಗಳನ್ನೇ ಪೂಜಿಸಬೇಕು. ಪರಿಸರ ಸ್ನೇಹಿ ಗಣಪ ಶ್ರೇಷ್ಠ.
ಅಜೇಯ್‌ರಾವ್, ನಟ
ನಾನು ಇತ್ತೀಚೆಗೆ ಒಂದು ಶಾಲೆಗೆ ಹೋಗಿದ್ದಾಗ ಮಕ್ಕಳ ಕೈಯಲ್ಲಿ ಮಣ್ಣಿನ ಗಣಪ ಮಾಡಿಸುವ ಕಾರ್ಯಕ್ರಮ ಇತ್ತು.
ನಾನೂ ಅವರೊಟ್ಟಿಗೆ ಮಣ್ಣಿನ ಗಣಪ ಮಾಡಿ, ಅದನ್ನು ಮನೆಗೆ ತಂದಿದ್ದೇನೆ. ಅದನ್ನೇ ಪೂಜೆ ಮಾಡ್ತೀವಿ. ಕಲರ್ ಗಣೇಶನ ನೀರಿಗೆ ಬಿಡುವುದು ಪರಿಸರಕ್ಕೆ, ಜಲಚರಗಳಿಗೆ ಹಾನಿಕಾರಕ.
ಪ್ರಜ್ವಲ್ ದೇವರಾಜ್, ನಟ
ಪರಿಸರ ಸ್ನೇಹಿ ಗಣಪ ಒಂದೊಳ್ಳೆ ಕಾನ್ಸೆಪ್ಟ್. ಕಳೆದ ವರ್ಷ ಗಣಪ ಮೂರ್ತಿಗಳನ್ನು ಮಾರುವ ಜಾಗದಲ್ಲಿ ನಾನು
ನೋಡಿದಂತೆ ಕಲರ್ ಕಲರ್ ಗಣೇಶ ಮೂರ್ತಿಗಳ ಮಧ್ಯೆ ಅಲ್ಲೊಂದು, ಇಲ್ಲೊಂದು ಮಣ್ಣಿನ ಗಣಪ ಕಾಣುತ್ತಿದ್ದವು. ಈ ವರ್ಷ ಎಲ್ಲ ಕಡೆ ಮಣ್ಣಿನ ಗಣಪನ ಮೂರ್ತಿಗಳು ಕಾಣುತ್ತಿವೆ.
ಹರ್ಷಿಕಾ ಪೂಣಚ್ಚ, ನಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.