ಎಲ್ಲರ ಜೀವನದಲ್ಲೂ ಟರ್ನಿಂಗ್‌ ಪಾಯಿಂಟ್‌ ಬಂದೇ ಬರುತ್ತೆ


Team Udayavani, Sep 16, 2018, 10:23 AM IST

punnaminaagumovielaunch008.jpg

ಅಪ್ಪ ತುಂಬಾ ಬಡವ. ಅಮ್ಮ ಅಪಾರ ಶ್ರೀಮಂತೆ. ಅಪ್ಪ ಪತ್ರಿಕೆ, ಪುರವಣಿಗಳಲ್ಲಿ ಬರೆದುಕೊಂಡು ಕವಿ ಎಂದು ಒಂದಿಷ್ಟು ಹೆಸರು ಸಂಪಾದಿಸಿದ್ದರು. ಆ ಜ್ಞಾನವನ್ನೇ ಶ್ರೀಮಂತಿಕೆ ಎಂದು ಪರಿಗಣಿಸಿದ್ದು ನಮ್ಮ ತಾತನವರ (ಅಮ್ಮನ ಅಪ್ಪ) ದೊಡ್ಡ ಗುಣ. ಮದುವೆ ನಂತರ ಅಪ್ಪ-ಅಮ್ಮ ಪುಟ್ಟ ಮನೆಯಲ್ಲಿ ವಾಸಿಸತೊಡಗಿದರು. ಶ್ರೀಮಂತಿಕೆಯಲ್ಲಿಯೇ ಬೆಳೆದ ಅಮ್ಮ, ಅಪ್ಪನ ಪರಿಸ್ಥಿತಿಗೆ ಹೊಂದಿಕೊಂಡಳು. ನಾನು ಹುಟ್ಟಿದಾಗ ಬಡತನದ ಬಿಸಿ ತಟ್ಟದೇ ಇರಲೆಂದು ನನ್ನನ್ನು ತನ್ನ ತಂದೆ ಮನೆಗೆ ಕಳಿಸಿದಳು. ನನ್ನ ಬಾಲ್ಯ ತಾತನ ಜೊತೆಯೇ ಕಳೆಯಿತು. ಅವರು ನನ್ನನ್ನು ಮುದ್ದಿನಿಂದ, ಏನಕ್ಕೂ ಕೊರತೆಯಿಲ್ಲದಂತೆ ಬೆಳೆಸಿದರು.

ತಾತನ ಮುದ್ದಿನಿಂದ ನಾನು ಪಾಠದ ಕಡೆ ಗಮನವನ್ನೇ ನೀಡುತ್ತಿರಲಿಲ್ಲ. ಶಾಲೆಯಲ್ಲಿ ನಾನು ಜಾಣ ವಿದ್ಯಾರ್ಥಿಯೇನೂ ಆಗಿರಲಿಲ್ಲ. ಜಾಣ ಹೋಗಲಿ, ಜಸ್ಟ್‌ ಪಾಸ್‌ ವಿದ್ಯಾರ್ಥಿಯೂ ಆಗಿರಲಿಲ್ಲ. ಇದರಿಂದಾಗಿ 5 ಮತ್ತು 6ನೇ ತರಗತಿಗಳಲ್ಲಿ ನಾನು ಫೇಲಾದೆ. ಈ ವಿಷಯ ತಿಳಿದು ನಿಮಗೆ ಅಶ್ಚರ್ಯವಾಗಿರಬಹುದು.  
ಯಶಸ್ಸು, ಏಕಾಗ್ರತೆ, ವ್ಯಕ್ತಿತ್ವ ವಿಕಸನ ಕುರಿತ ಪುಸ್ತಕಗಳನ್ನು ಬರೆದ ಮನುಷ್ಯ ಪ್ರಾಥಮಿಕ ಶಾಲೆಯಲ್ಲಿ ಫೇಲಾಗಿದ್ದನ್ನು ಅನೇಕರಿಗೆ ನಂಬಲು ಸಾಧ್ಯವಾಗದೇ ಇರಬಹುದು. ಆದರೆ  ನಾನು ಫೇಲಾಗಿದ್ದು ನಿಜ. ಎಲ್ಲರ ಜೀವನದಲ್ಲೂ ಬ್ರೇಕಿಂಗ್‌ ಪಾಯಿಂಟ್‌ ಎಂಬುದೊಂದು ಬರುತ್ತದೆ. ಇದನ್ನೂ ಹಾಗೆಂದೇ ತಿಳಿಯಬಹುದು. ಆ ಸಂದರ್ಭದಲ್ಲಿ ಕುಗ್ಗಿದ್ದ ನನ್ನನ್ನು, ಅಪ್ಪ ಮನೆಗೆ ಕರೆಸಿಕೊಂಡು ಆತ್ಮವಿಶ್ವಾಸ ತುಂಬಿದರು. ಬದುಕಿನ ವೈಶಾಲ್ಯತೆಯನ್ನು ಅರ್ಥ ಮಾಡಿಸಿದರು. ಭವಿಷ್ಯಕ್ಕೆ ನನ್ನನ್ನು ಸಜ್ಜುಗೊಳಿಸಿದರು. ಮುಂದೆ, ತರಗತಿಗೆ ಮೊದಲಿಗನಾಗಿದ್ದು ಮಾತ್ರವಲ್ಲ, 4 ವರ್ಷದ ಸಿ.ಎ ಪದವಿಯನ್ನು 3 ವರ್ಷಕ್ಕೇ ಪಾಸು ಮಾಡಿಬಿಟ್ಟೆ. ಸ್ವರ್ಗಕ್ಕೆ ಕಿಚ್ಚು ಹಚ್ಚುವಂಥ ಯಶಸ್ಸನ್ನು ಪಡೆಯಬೇಕೆಂದರೆ ಫೇಲ್‌ ಎಂಬ ಗೇಟನ್ನು ದಾಟಿಯೇ ಮುನ್ನುಗ್ಗಬೇಕೆನ್ನುವುದು ಆಗ ಅರ್ಥವಾಯಿತು. 

ಕೀಳರಿಮೆ, ಬ್ಲೇಡು ಮತ್ತು ಮೆಟ್ಟಿಲು
ಪಿ.ಯು.ಸಿ ನಂತರ ತಾತನ ಮನೆ ಬಿಟ್ಟು ನಮ್ಮ ಮನೆಗೆ ಬಂದುಬಿಟ್ಟೆ. ಮನೆಯಲ್ಲಿ ನಾವು ಮೂರು ಮಂದಿ ಸೋದರರ‌ು. ಕಾಲೇಜು ದಿನಗಳಲ್ಲಿ ನಾನು ಕೀಳರಿಮೆಯಿಂದ ಬಳಲುತ್ತಿದ್ದೆ. ಅದಕ್ಕೆ ಮುಖ್ಯ ಕಾರಣ ಬಡತನ. ದುಡ್ಡಿನ ಕೊರತೆ ಏನೇನನ್ನೆಲ್ಲಾ ಮಾಡಿಸುತ್ತೆ ಅನ್ನೋದು ಆವಾಗಲೇ ಗೊತ್ತಾಗಿದ್ದು. ಅದರ ಮೇಲೆ ಕುಳ್ಳನೆಂಬ ಕೀಳರಿಮೆಯೂ ನನ್ನನ್ನು ಕಾಡುತ್ತಿತ್ತು. ಅವೆರಡ ರಿಂದಲೂ ಹೊರಬರಲು ಒದ್ದಾಡಿಬಿಟ್ಟಿದ್ದೆ. ನನ್ನ ಸಾಮರ್ಥ್ಯ ವೇನೆಂದು ಪತ್ತೆಹಚ್ಚಲು ಹರಸಾಹಸಪಟ್ಟಿದ್ದೆ. ಆ ಸಮಯದಲ್ಲಿ ಜೊತೆಯಾಗಿದ್ದು ಬರವಣಿಗೆ. ಅದರಿಂದಾಗಿ ಜನರು ನನ್ನನ್ನು ಗುರುತಿಸತೊಡಗಿದರು. ಕೀಳರಿಮೆ ದೂರವಾಯಿತು. ಬರವಣಿಗೆಯೇ ನನ್ನ ಸಾಮರ್ಥ್ಯವೆಂದು ಗೊತ್ತಾಗಿಬಿಟ್ಟಿತು. ಅದೆಲ್ಲವೂ ಸಾಧ್ಯವಾಗಿದ್ದು ಅಪ್ಪನ ಪ್ರೋತ್ಸಾಹದಿಂದ.ನನ್ನನ್ನು ತಿದ್ದಿ, ತೀಡಿ, ಮಾರ್ಗ ತೋರಿದ್ದೇ ಅಪ್ಪ. ನಿಮಗೆ ಒಂದು ಘಟನೆ ಹೇಳಬೇಕು. ಆಗ ನಾನಿನ್ನೂ ಚಿಗುರು ಮೀಸೆಯ ಹುಡುಗ. ಒಂದು ದಿನ ಅಪ್ಪ ಒಂದು ಕತ್ತರಿ, ಬ್ಲೇಡನ್ನು ನನಗೆ ಕೊಟ್ಟರು. ಕೊಟ್ಟು ûೌರ ಮಾಡಿಕೊಳ್ಳುವುದನ್ನು ಕಲಿಸಿದರು. ಅಷ್ಟಕ್ಕೆ ಅಂಗಡಿಗೆ ಹೋಗಿ ಒಂದೂವರೆ ರೂಪಾಯಿ ಯಾಕೆ ಕೊಡಬೇಕು? ಮನೆಯಲ್ಲೇ ಮಾಡಿಕೊಂಡರೆ ಆ ಹಣ ಮಿಗುತ್ತದಲ್ಲ ಎನ್ನುವುದು ಅವರ ಯೋಚನೆ. ನನಗೀಗ 70 ವರ್ಷ. ಈಗಲೂ ûೌರಿಕನ ಬಳಿ ಹೋಗುವುದಿಲ್ಲ. ನನ್ನ ಗಡ್ಡ ಮೀಸೆಯನ್ನು ನಾನೇ ಎರೆದು ಕೊಳ್ಳುತ್ತೇನೆ. Money saved is money earned ಎಂಬ ಅಪ್ಪನ ಪಾಲಿಸಿಯನ್ನು ಬದುಕಿನುದ್ದಕ್ಕೂ ಪಾಲಿಸಿಕೊಂಡು ಬಂದಿದ್ದೇನೆ. ಇಲ್ಲಿಯತನಕ ಸಲೂನಿಗೆ ಒಂದು ರೂಪಾಯಿ ಖರ್ಚು ಮಾಡಿಲ್ಲ. ಸಾಮಾನ್ಯವಾಗಿ ಜುಗ್ಗ ಎಂದು ಕರೆಸಿಕೊಳ್ಳಲು ಯಾರೂ ಇಷ್ಟಪಡುವುದಿಲ್ಲ. ಆದರೆ, ನನ್ನನ್ನು ಯಾರಾದರೂ “ಜುಗ್ಗ’ ಎಂದು ಕರೆದರೆ ಸಂತೋಷವಾಗುತ್ತದೆ. ಅಪ್ಪ ತೋರಿದ ಮಾರ್ಗದಲ್ಲಿಯೇ ನಡೆಯುತ್ತಿದ್ದೇನೆ ಎಂದು ಖುಷಿ ಪಡುತ್ತೇನೆ.

ಅಪ್ಪ ನನ್ನನ್ನು ಬೆಳೆಸಿದ ರೀತಿಯಲ್ಲೇ ನಾನೂ ನನ್ನ ಮಗನನ್ನೂ ಬೆಳೆಸಿದೆ. ಪೇರೆಂಟಿಂಗ್‌(ಮಕ್ಕಳನ್ನು ಪೋಷಿಸುವ ಕಲೆ) ಕುರಿತ ಪುಸ್ತಕದಲ್ಲಿ ನಾನು ಹಲವು ವಿಧಾನಗಳನ್ನು, ತಂತ್ರಗಳನ್ನು ಹಂಚಿಕೊಂಡಿದ್ದೇನೆ. ಅವೆಲ್ಲವೂ ಯಶಸ್ವಿಯಾಗಿವೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಲ್ಲೆ. ನನ್ನ ಮಗ ಈಗ ವಿದೇಶಿ ಸಂಸ್ಥೆಯೊಂದರ ವ್ಯವಸ್ಥಾಪಕ ಮಂಡಳಿಯಲ್ಲಿದ್ದಾನೆ. ವರ್ಷಕ್ಕೆ ಎರಡೂವರೆ ಕೋಟಿ ಸಂಪಾದಿಸುತ್ತಾನೆ. ನನ್ನ ಮಟ್ಟಿಗೆ ಅದು ದೊಡ್ಡ ಯಶಸ್ಸು. ಅಷ್ಟು ದುಡ್ಡು ಸಂಪಾದಿಸದೇ ಇರುತ್ತಿದ್ದರೆ ನಾನು ಹೆಮ್ಮೆ ಪಡುತ್ತಿದ್ದೆನೇ? ಎಂದು ನೀವು ಕೇಳಬಹುದು. ಇಲ್ಲ! ಆದರೆ, ಕೋಟಿಗಟ್ಟಲೆ ದುಡ್ಡು ಗಳಿಸದೇ ಇದ್ದ ಪಕ್ಷದಲ್ಲಿ ಆತ ಬೇರೊಂದು ಕ್ಷೇತ್ರದಲ್ಲಾದರೂ ಹೆಸರು ಮಾಡುವಂತೆ ಬೆಳೆಸುತ್ತಿದ್ದೆ. ಉದಾಹರಣೆಗೆ, ನನ್ನ ಮಗ ಕಾಲೇಜು ದಿನಗಳಲ್ಲಿ ಚೆನ್ನಾಗಿ ಕ್ರಿಕೆಟ್‌ ಆಡುತ್ತಿದ್ದ. ಒಂದು ವೇಳೆ ಉದ್ಯೋಗ ಕ್ಷೇತ್ರದತ್ತ ಅವನ ಗಮನ ಹರಿಯದೇ ಇರುತ್ತಿದ್ದರೆ ಅವನನ್ನು ರಾಜ್ಯ ಅಥವಾ ರಾಷ್ಟ್ರೀಯ ತಂಡದಲ್ಲಿ ಕ್ರಿಕೆಟ್‌ ಪ್ಲೇಯರ್‌ ಮಾಡುತ್ತಿದ್ದೆ. ಮಕ್ಕಳು ಯಾವೆಲ್ಲಾ ವಿಚಾರಗಳಲ್ಲಿ ಚುರುಕು ಎನ್ನುವುದನ್ನು ಮೊಳಕೆಯಲ್ಲಿಯೇ ಪತ್ತೆ ಹಚ್ಚಿ ಅವನ್ನು ಪೋಷಿಸಬೇಕು. ಕಾಲಕ್ರಮೇಣ ಅವುಗಳಲ್ಲಿ ಕೆಲವು ವಿಚಾರಗಳನ್ನು ಬಿಟ್ಟು, ಮುಖ್ಯವಾದುದಕ್ಕೆ ಪ್ರೋತ್ಸಾಹ ನೀಡಬೇಕು. ಈ ತಂತ್ರವನ್ನು “ಪಿರಮಿಡ್‌ ಪೇರೆಂಟಿಂಗ್‌’ ಎಂದು ಹೆಸರಿಸಿದ್ದೇನೆ. 
“ಜೀವನದಲ್ಲಿ ಎಷ್ಟೊಂದು ಸಾಧನೆ ಮಾಡಿದ್ದೀರಿ. ದುಡ್ಡನ್ನೂ ಸಂಪಾದಿಸಿದ್ದೀರಿ. ಗ್ರೇಟ್‌!’ ಎಂದು ಕೆಲವರು ಮೆಚ್ಚುಗೆ ಸೂಚಿಸುತ್ತಾರೆ. ನಾನವರಿಗೆ ಹೇಳುವುದಿಷ್ಟೆ. ದುಡ್ಡು, ಕೀರ್ತಿ ಮತ್ತು ಆತ್ಮಸಂತೋಷ- ಇವು ಮೂರೂ ದಾಯಾದಿಗಳಿದ್ದ ಹಾಗೆ. ಒಂದರ ಜೊತೆ ಇನ್ನೊಂದು ಸೇರುವುದಿಲ್ಲ. ಹಾಗಾಗಿಯೇ ಇವು ಮೂರೂ ಒಬ್ಬ ಮನುಷ್ಯನಲ್ಲಿರುವುದು ಅತ್ಯಪರೂಪ. ಇಷ್ಟಕ್ಕೂ ನಾನು ಸಾಧಕನಲ್ಲ. ಯಾವತ್ತೂ ಹಾಗೆಂದು ಪರಿಗಣಿಸಿಯೂ ಇಲ್ಲ. ಸಂಪತ್ತು, ಕೀರ್ತಿ, ಪ್ರಶಸ್ತಿ, ಬಿರುದು- ಬಾವಲಿಗಳಿಗೆ ನಿಜಕ್ಕೂ ಅರ್ಹರಾದವರು ಅವುಗಳಿಂದ ದೂರವೇ ಇರುತ್ತಾರೆ. ಹಿಮಾಲಯದಲ್ಲಿ ಏಕಾಂಗಿಯಾಗಿರುತ್ತಾರೆ. ಜನರ ನಡುವೆ ಯಿದ್ದೂ ಕಣ್ಮರೆಯಾಗಿರುತ್ತಾರೆ. ಅವರು ನಿಜವಾದ ಸಾಧಕರು. ನಾನಲ್ಲ. ಬರಹಗಾರ ತಾನು ಪುಸ್ತಕ ಬರೆಯುವ ಮೊದಲು ಯಾರಿಗಾಗಿ ಬರೆಯುತ್ತಿದ್ದೇನೆ ಎಂಬುದನ್ನು ಖಾತರಿ ಪಡಿಸಿ ಕೊಳ್ಳುತ್ತಾನೆ. ಪಬ್ಲಿಷರ್‌ಗಾಗಿಯೋ, ಆತ್ಮಸಂತೋಷಕ್ಕಾಗಿಯೋ? ಎಂದು. ನನ್ನ “ವಿಜಯಕ್ಕೆ ಐದು ಮೆಟ್ಟಿಲು’ ಪುಸ್ತಕ ಇಲ್ಲಿಯವರೆಗೆ ಏನಿಲ್ಲವೆಂದರೂ ಎರಡು ಕೋಟಿಗೂ ಅಧಿಕ ಬಿಝಿನೆಸ್‌ 
ಮಾಡಿದೆ. ಮೇಲಿನ ಪ್ರಶ್ನೆಗೆ ನಿಮಗೀಗಾಗಲೇ ಉತ್ತರ ಸಿಕ್ಕಿರುತ್ತದೆ ಎಂದು ಭಾವಿಸುತ್ತೇನೆ. ನನ್ನ ಪುಸ್ತಕಗಳಿಂದ ಕೆಲವರಿಗಾದರೂ ಸಹಾಯವಾಗಿದೆ ಎನ್ನುವ ಖುಷಿಯಂತೂ ಇದೆ. ನಿಜ ಹೇಳಬೇಕೆಂದರೆ, ನನ್ನ ಪಾಲಿಗೆ ಆತ್ಮಸಂತೋಷದ ಕ್ಷಣಗಳೆಂದರೆ ಶುರುವಿನಲ್ಲಿ ನಾಟಕಗಳನ್ನು ಬರೆಯುತ್ತಿದ್ದ ದಿನಗಳು. ಮೂರು ನಾಲ್ಕು ಸಾಲಿನಲ್ಲಿ ಕುಳಿತ ಆ ಪ್ರೇಕ್ಷಕರ ಚಪ್ಪಾಳೆ ಸದ್ದು ಇಂದಿಗೂ ಕಿವಿಗಳಲ್ಲಿ ಅನುರಣಿಸುತ್ತಿದೆ.

ತೆಲುಗನ್ನೂ ಮೀರಿಸಿದ ಕನ್ನಡದ “ಬೆಳದಿಂಗಳ ಬಾಲೆ’
“ವೆನ್ನೆಲಲೊ ಆಡಪಿಲ್ಲ’ ನನಗೆ ಕನ್ನಡದಲ್ಲಿ ತುಂಬಾ ಹೆಸರು ತಂದುಕೊಟ್ಟ ಕಾದಂಬರಿ. ಹೆಚ್ಚಿನವರಿಗೆ ಈ ಕಾದಂಬರಿ “ಬೆಳದಿಂಗಳ ಬಾಲೆ’ ಎಂದೇ ಚಿರಪರಿಚಿತ. ಕರ್ನಾಟಕದಲ್ಲಿ ನನ್ನನ್ನು ಮನೆಮಾತಾಗಿಸಿದ ಕೀರ್ತಿ “ಬೆಳದಿಂಗಳ ಬಾಲೆ’ ಸಿನಿಮಾದ ನಿರ್ದೇಶಕ ಸುನೀಲ್‌ ಕುಮಾರ್‌ ದೇಸಾಯಿಗೆ ಸಲ್ಲಬೇಕು. ಕೃತಿಯೊಂದು ದೃಶ್ಯ ಮಾಧ್ಯಮಕ್ಕೆ ಒಗ್ಗಿಕೊಂಡಾಗ ಅನೇಕ ಮಾರ್ಪಾಡುಗಳಿಗೆ ಒಳಗಾಗಬೇಕಾಗುತ್ತದೆ. ಹಾಗಿದ್ದೂ ಕೃತಿಗೆ ನ್ಯಾಯ ಸಲ್ಲಿಸುವುದರಲ್ಲಿ ನಿರ್ದೇಶಕನ ಜಾಣ್ಮೆ ಮತ್ತು ಪರಿಶ್ರಮ ಇರುತ್ತದೆ. ದೇಸಾಯಿಯವರು ನನ್ನ ಕಾದಂಬರಿಗೆ ಶೇ.150ರಷ್ಟು ನ್ಯಾಯ ಒದಗಿಸಿದ್ದಾರೆ. ತೆಲುಗಿನಲ್ಲೂ ಆ  ಕಾದಂಬರಿ ಸಿನಿಮಾ ಆಯಿತು. ಆದರೆ “ಬೆಳದಿಂಗಳ ಬಾಲೆ’ ಕೊಟ್ಟಷ್ಟು ತೃಪ್ತಿ ಕೊಡಲಿಲ್ಲ. ತುಂಬಾ ವಿವರಗಳಿಗೆ ಹೋಗದೆ ಅದಕ್ಕೆ ಒಂದು ಕಾರಣವನ್ನು ಕೊಟ್ಟುಬಿಡುತ್ತೇನೆ. ಕನ್ನಡದಲ್ಲಿ ದೇಸಾಯಿಯವರು ಕಡೆಯವರೆಗೂ ಕಥಾನಾಯಕಿಯ ಚಹರೆ ತೋರಿಸೋದಿಲ್ಲ. ಅದೇ ತೆಲುಗಿನಲ್ಲಿ ನಾಯಕಿಯ ಚಹರೆ ತೋರಿಸಿಬಿಟ್ಟಿದ್ದಾರೆ. ಇಂಥ ಒಂದು ಪುಟ್ಟ ಡೀಟೇಲ್‌ ಕೂಡಾ ಸಿನಿಮಾ ಕುರಿತು ಬಹಳಷ್ಟನ್ನು ಹೇಳುತ್ತದೆ.
ಬಹಳ ಹಿಂದಿನಿಂದಲೇ ನಾನು ಸಿನಿಮಾ ಕುರಿತು ಒಲವು ಬೆಳೆಸಿಕೊಂಡವನು. ಭಾಷೆಗಳ ಗಡಿಯನ್ನು ಮೀರಿ ಸಿನಿಮಾವನ್ನು ಪ್ರೀತಿಸುತ್ತೇನೆ. ರಾಷ್ಟ್ರಪ್ರಶಸ್ತಿ ವಿಜೇತ “ಚೋಮನ ದುಡಿ’ ಸಿನಿಮಾದಲ್ಲಿ ಮೂಡಬಿದಿರೆಯ ವಾಸುದೇವ ರಾವ್‌ ಅವರ ಅಭಿನಯ ನೋಡಿದಾಗ ಮೂಕವಿಸ್ಮಿತನಾಗಿದ್ದೆ. ಎಷ್ಟು ಸಹಜವಾಗಿ ನಟಿಸುತ್ತಾರೆ ಈತ ಎಂದು ಅಚ್ಚರಿಪಟ್ಟಿದ್ದೆ. ಅವರೆಷ್ಟು ಇಷ್ಟವಾದರು ಎಂದರೆ ಮುಂದೆ ನಾನು ತೆಲುಗು ಸಿನಿಮಾಗಳಿಗೆ ಕೆಲಸ ಮಾಡುವಾಗ ಅವರನ್ನು ಕರೆದುಕೊಂಡುಬಂದೆ. ಅವರೇಕೆ ಇಷ್ಟವಾದರು ಎಂದರೆ, ಅವರನ್ನು ಕಮೀಡಿಯನ್‌ ಪಾತ್ರದಲ್ಲೋ, ಲೈಟ್‌ ಮ್ಯಾನರಿಸಂನಲ್ಲೋ ನೋಡಲು ಸಾಧ್ಯವಾಗೋದಿಲ್ಲ. ಅವರೊಬ್ಬ ಸೀರಿಯಸ್‌ ಆ್ಯಕ್ಟರ್‌. ನ್ಯಾಚುರಲ್‌ ಆ್ಯಕ್ಟರ್‌ ಕೂಡಾ ಹೌದು. ಅದೇ ರೀತಿ ನಾಸಿರುದ್ದೀನ್‌ ಶಾ, ಅಮಿತಾಭ್‌ ಬಚ್ಚನ್‌, ನವಾಝುದ್ದೀನ್‌ ಸಿದ್ದಿಕಿ, ಮೋಹನ್‌ ಲಾಲ್‌ ಇಷ್ಟವಾಗುತ್ತಾರೆ. ಸಿನಿಮಾ ಕುರಿತು ಒಲವಿದ್ದುದರಿಂದಲೇ ಸಿನಿಮಾ ರಂಗದ ಅನೇಕ ವಿಭಾಗಗಳಲ್ಲಿ ಕೆಲಸ ನಿರ್ವಹಿಸಿದೆ. 70ರ ದಶಕದಲ್ಲಿ “ಒಕ ಊರಿ ಕಥಾ’ ತೆಲುಗು ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಚಿತ್ರದ ನಿರ್ದೇಶಕ, ಸತ್ಯಜಿತ್‌ ರೇ ಅವರ ಸಮಕಾಲೀನರೂ, ಪಶ್ಚಿಮ ಬಂಗಾಳದವರೂ ಆದ ಮೃಣಾಲ್‌ ಸೇನ್‌. ಸಿನಿಮಾಗೆ ಚಿತ್ರಕತೆಯನ್ನು ನಾನು ಬರೆದಿದ್ದೆ. ಭಾರತದ ಹೆಸರಾಂತ ಕಲಾತ್ಮಕ ಚಿತ್ರನಿರ್ದೇಶಕ, ತೆಲುಗು ಸಿನಿಮಾ ನಿರ್ದೇಶಿಸುತ್ತಿದ್ದಾರೆ ಎನ್ನುವುದೇ ನನಗೆ ಹೆಮ್ಮೆಯ ಸಂಗತಿಯಾಗಿತ್ತು. ಅದಕ್ಕೆ ಮಿಗಿಲಾಗಿ, ನಿರ್ದೇಶಕರಾಗಿ ನಾನವರನ್ನು ಇಷ್ಟಪಡುತ್ತಿದ್ದೆ. ಸಿನಿಮಾ ಸೆಟ್‌ಗೆ ಹೋಗಿ ಅವರು ನಿರ್ದೇಶನ ಮಾಡೋದನ್ನು ದೂರದಿಂದಲೇ ನಿಂತು ನೋಡುತ್ತಿದ್ದೆ. ಆ ದಿನ ಮಹಿಳೆಯೊಬ್ಬಳು ಅಳುವ ದೃಶ್ಯದ ಚಿತ್ರೀಕರಣ ನಡೆಯುತ್ತಿತ್ತು. ಪಾತ್ರಧಾರಿ ಹೆಣ್ಣು ಮಗಳು ಗೊಳ್ಳೋ ಎಂದು ಅಳುತ್ತಿದ್ದಳು. ಪೂರ್ತಿ ಸನ್ನಿವೇಶವೇ ಮೆಲೋಡ್ರಾಮಾ ಥರ ಇತ್ತು. ಅದರಲ್ಲಿ ಕೃತಕತೆ ಢಾಳಾಗಿ ಕಾಣುತ್ತಿತ್ತು. ಇತ್ತ ಮೃಣಾಲ್‌ ಸೇನ್‌ ಆಕೆಯನ್ನು ನೋಡಿ “ವಾಹ್‌ ವಾಹ್‌’ ಎಂದು ಉದ್ಗರಿಸುತ್ತಿದ್ದರು. ನನಗೋ ಆಶ್ಚರ್ಯ. ಅಷ್ಟು ದೊಡ್ಡ ಕಲಾತ್ಮಕ ನಿರ್ದೇಶಕರಾಗಿ ಮೆಲೋಡ್ರಮಾಟಿಕ್‌ ನಟನೆಯನ್ನು ಹೊಗಳುತ್ತಿದ್ದಾರಲ್ಲ ಎಂದು! ಆ ದ್ವಂದ್ವವನ್ನು ಇನ್ನೂ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಇರಲಿ, ಮುಂದೆ ನಿರ್ದೇಶಕ ಆದಾಗ ಸಿನಿಮಾ ಮಾಡುವುದರ ಕಷ್ಟಗಳು ನನ್ನ ಅನುಭವಕ್ಕೆ ಬಂದವು. ಅದಕ್ಕಿಂತ ಪುಸ್ತಕ ಬರೆಯುವುದೇ ಸುಲಭವೆಂದು ತೋರುತ್ತೆ. ಬರವಣಿಗೆಯಲ್ಲಿ ರಿಸಲ್ಟ್ ಬಹಳ ಬೇಗ ಗೊತ್ತಾಗುತ್ತದೆ. ಆದರೆ ಸಿನಿಮಾ ಹಾಗಲ್ಲ ಪ್ರಾಜೆಕ್ಟ್ ಶುರುವಾಗಿ, ಮುಗಿದು, ರಿಲೀಸ್‌ ಅಗುವಷ್ಟರಲ್ಲಿ ವರ್ಷಗಳ ಕಾಲ ಹಿಡಿಯುತ್ತದೆ.
ಕರುನಾಡಲ್ಲಿ ಸರಸ್ವತಿ ನೆಲೆಸಿದ್ದಾಳೆ
ಮುಂಚಿನಿಂದಲೂ ಕರ್ನಾಟಕವನ್ನು ಕಂಡರೆ ನನಗೆ ಒಂದು ರೀತಿಯ ಅಸೂಯೆ. ಆರೋಗ್ಯಕರ ಅಸೂಯೆ. ಕರ್ನಾಟಕವನ್ನು ನಾನು “ಸರಸ್ವತಿಯ ಮನೆ’ ಎಂದೇ ಕರೆಯುವುದು. ಏಕೆಂದರೆ ಇದು ಅನೇಕ ಮಹಾನ್‌ ಸಾಹಿತಿಗಳ ತವರೂರು. 

8 ಜ್ಞಾನಪೀಠಗಳನ್ನು ಪಡೆದಿರುವುದು ಕಡಿಮೆ ಸಾಧನೆಯೇ? ಇನ್ನು ಅದೆಷ್ಟು ರಾಷ್ಟ್ರಪ್ರಶಸ್ತಿಗಳು ಕನ್ನಡದ ಸಿನಿಮಾಗಳಿಗೆ ಸಿಕ್ಕಿಲ್ಲ ಹೇಳಿ! ಜಗತ್ತೇ ತಿರುಗಿ ನೋಡುವಂಥ ಕಲಾತ್ಮಕ ಸಿನಿಮಾಗಳು ನಿಮ್ಮ ನೆಲದಿಂದ ಹೊರಹೊಮ್ಮಿವೆ. ಆದರೆ ನಾವಿನ್ನೂ ಬಾಹುಬಲಿಯ ಗುಂಗಿನಲ್ಲಿಯೇ ಇದ್ದೇವೆ. ಕನ್ನಡ ಮಣ್ಣಿನ ಗುಣವೇ ಅಂಥದ್ದು ಅನ್ನಿಸುತ್ತೆ. ಅದಕ್ಕೇ ಆಗಾಗ ಹೇಳುತ್ತಿರುತ್ತೇನೆ  - ಕರುನಾಡಲ್ಲಿ ಸರಸ್ವತಿ ನೆಲೆಸಿದ್ದಾಳೆ ಎಂದು. ಅದರ ಬಗ್ಗೆ ಕನ್ನಡಿಗರು ಹೆಮ್ಮೆ ಪಟ್ಟುಕೊಳ್ಳಬೇಕು. ಎದೆ ತಟ್ಟಿ ಹೇಳಿಕೊಳ್ಳಬೇಕು.

ಬದುಕಿನ ಬಗ್ಗೆ ಖುಷಿಯಿದೆ
ಬೆಳಗ್ಗೆ 6 ಗಂಟೆಗೆ ಏಳುತ್ತೇನೆ. ನಿತ್ಯಕರ್ಮಗಳನ್ನು ಮುಗಿಸಿ ಕಂಪ್ಯೂಟರ್‌ ಮುಂದೆ ಬರೆಯಲು ಕೂರುತ್ತೇನೆ. ಹಿಂದೆಲ್ಲಾ ಸಿ.ಎ. ಪ್ರ್ಯಾಕ್ಟೀಸ್‌ ನಡುವೆ ಬಿಡುವು ಮಾಡಿಕೊಂಡು ಹಗಲು ರಾತ್ರಿ ಬರವಣಿಗೆಯಲ್ಲಿ ತೊಡಗುತ್ತಿದ್ದೆ. ಆದರೀಗ ಸಿ.ಎ. ಪ್ರ್ಯಾಕ್ಟೀಸ್‌ ಮಾಡುತ್ತಿಲ್ಲ. ಪೂರ್ತಿ ಸಮಯ ಬರವಣಿಗೆಗೆ ಮೀಸಲು. ಬೆಳಗ್ಗಿನ ತಿಂಡಿ ಕಾರ್ಯಕ್ರಮ ಮುಗಿಸಿ ಕಂಪ್ಯೂಟರ್‌ ಮುಂದೆ ಬರೆಯುತ್ತಾ ಕುಳಿತರೆ ಒಂದು ಗಂಟೆಯವರೆಗೆ ಕೂತಲ್ಲಿಂದ ಏಳುವುದಿಲ್ಲ. ಆಮೇಲೆ ಊಟದ ಕಾರ್ಯಕ್ರಮ ಮುಗಿಸಿ ನಿದ್ದೆ. ಮಧ್ಯಾಹ್ನ ಊಟವಾದ ನಂತರ ಎರಡು ಮೂರು ಗಂಟೆಯಾದರೂ ನಿದ್ದೆ ಆಗಬೇಕು. ಎದ್ದು ಮತ್ತೆ ಓದುವುದೋ ಬರೆಯುವುದೋ ಮಾಡುತ್ತೇನೆ. 
ನನಗೆ ಸ್ನೇಹಿತರು ಕಮ್ಮಿ, ಟಿ.ವಿ. ನೋಡುವುದೂ ಕಮ್ಮಿ. ಹೀಗಾಗಿ ಪೂರ್ತಿ ಸಮಯ ನನ್ನ ಕೈಯಲ್ಲೇ ಇರುತ್ತದೆ. ಜಾರಿ ಹೋಗುವುದಿಲ್ಲ. ಅದು ಬಿಟ್ಟರೆ, ಶಾಲೆ, ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಮೋಟಿವೇಷನಲ್‌ ಸ್ಪೀಚ್‌ ನೀಡಿ ಬರುತ್ತೇನೆ. ವರ್ಷಕ್ಕೆ ಸುಮಾರು 50 ಕಾಲೇಜುಗಳಿಗೆ ಭೇಟಿ ಇದ್ದೇ ಇರುತ್ತೆ. ಅಲ್ಲದೆ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಗತ್ಯ ನೆರವು ನೀಡುತ್ತೇನೆ. ಇಷ್ಟು ಸಾಕಲ್ಲವೇ ಬದುಕಿನ ಖುಷಿಗೆ?!

ಯಂಡಮೂರಿ ವೀರೇಂದ್ರನಾಥ್‌

ಟಾಪ್ ನ್ಯೂಸ್

Shri-Guru-Kottureshwara-Temple

ಬರೀ ಹುಂಡಿ ಪೆಟ್ಟಿಗೆಗಳಿಂದ ತುಂಬಿದ ಕೊಟ್ಟೂರೇಶ್ವರ ದೇವಸ್ಥಾನ: ಭಕ್ತರಿಂದ ತೀವ್ರ ಆಕ್ರೋಶ

ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಲೈಂಗಿಕದೌರ್ಜನ್ಯ: ಆರೋಪಿ ವಿಚಾರಣೆ ರದ್ದತಿಗೆ ಹೈಕೋರ್ಟ್‌ ನಕಾರ

ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಲೈಂಗಿಕದೌರ್ಜನ್ಯ: ಆರೋಪಿ ವಿಚಾರಣೆ ರದ್ದತಿಗೆ ಹೈಕೋರ್ಟ್‌ ನಕಾರ

ICC ಏಕದಿನ, ಟಿ20 ಕ್ರಿಕೆಟಿಗ ಪ್ರಶಸ್ತಿ ನಾಮಿನೇಶನ್‌ ಪಟ್ಟಿ ಬಿಡುಗಡೆ; ಬುಮ್ರಾ ಹೆಸರಿಲ್ಲ

ICC ಏಕದಿನ, ಟಿ20 ಕ್ರಿಕೆಟಿಗ ಪ್ರಶಸ್ತಿ ನಾಮಿನೇಶನ್‌ ಪಟ್ಟಿ ಬಿಡುಗಡೆ; ಬುಮ್ರಾ ಹೆಸರಿಲ್ಲ

bellad

Dharwad; ನಾಲಿಗೆ ಹರಿಬಿಡುವ ನಾಯಕರ ಮೇಲೆ ಕ್ರಮ ಆಗಬೇಕು: ಶಾಸಕ ಬೆಲ್ಲದ್

17-ckm

Kottigehara: ಆಟೋ ರಿಕ್ಷಾದಲ್ಲಿ ಗಾಂಜಾ ಪತ್ತೆ: ಇಬ್ಬರು ಆರೋಪಿಗಳ ಬಂಧನ

16-yellapura

Yellapura: ಬಸ್‌- ಬೈಕ್‌ ಡಿಕ್ಕಿ; ಟಯರ್‌ ತಲೆ ಮೇಲೆ ಹರಿದು ಇಬ್ಬರು ಸ್ಥಳದಲ್ಲೇ ಮೃತ್ಯು

ಸೋಲಿನ ಭಯದಿಂದ ಬಿಜೆಪಿ ಆಪರೇಶನ್‌ ಕಮಲ ಆರಂಭಿಸಿದೆ: ಅರವಿಂದ ಕೇಜ್ರಿವಾಲ್

Delhi; ಸೋಲಿನ ಭಯದಿಂದ ಬಿಜೆಪಿ ಆಪರೇಶನ್‌ ಕಮಲ ಆರಂಭಿಸಿದೆ: ಅರವಿಂದ ಕೇಜ್ರಿವಾಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-

Cooking Oil: ಅಡುಗೆ ಎಣ್ಣೆ ಆಮದು ಸವಾಲು

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

MM-Singh-ACC-Pm

Accidental Prime Minister: ದ ಮೇಕಿಂಗ್‌ ಆ್ಯಂಡ್‌ ಅನ್‌ಮೇಕಿಂಗ್‌ ಆಫ್ ಡಾ.ಸಿಂಗ್‌

MM-Singh–Bush

Tribute Dr.Singh: ಡಾ.ಸಿಂಗ್‌ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ

MM-Singh-Sonia

Tribute Dr.Singh: ಆರ್ಥಿಕ ಭಾಗ್ಯ ವಿಧಾತ…ಡಾ.ಮನಮೋಹನ್‌ ಸಿಂಗ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1–dddd

Vitla; ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ: ದಂಪತಿಗೆ ಗಾಯ, ಬಾಲಕ ಮೃ*ತ್ಯು

Shri-Guru-Kottureshwara-Temple

ಬರೀ ಹುಂಡಿ ಪೆಟ್ಟಿಗೆಗಳಿಂದ ತುಂಬಿದ ಕೊಟ್ಟೂರೇಶ್ವರ ದೇವಸ್ಥಾನ: ಭಕ್ತರಿಂದ ತೀವ್ರ ಆಕ್ರೋಶ

10

Udupi: ಸಂಚಾರ ಬದಲಿಸಿದರೂ ಸಮಸ್ಯೆ ಬದಲಾಗಲಿಲ್ಲ!

9

Surathkal-ಗಣೇಶಪುರ ರಸ್ತೆಯಲ್ಲಿ ಟ್ಯಾಂಕರ್‌ ರಾಜ್ಯಭಾರ!

8

Mangaluru: ಕರಾವಳಿ ಉತ್ಸವ; ಮತ್ಸ್ಯ ಲೋಕದೊಳಗೆ ನಾವು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.