ಕಾನೂನು ಪ್ರಕಾರವೇ ಟೋಪಿ ಹಾಕುವುದು ಅಂದರೆ ಹೀಗೆ…!
Team Udayavani, Sep 17, 2018, 4:39 PM IST
ಭಾರತೀಯ ಮನಸ್ಸುಗಳು ಗ್ರಾಹಕರಾಗಿ ವಂಚನೆಗೊಳಗಾಗುವುದು ನಮ್ಮ ಹಕ್ಕು ಎಂದುಕೊಂಡುಬಿಟ್ಟಿವೆ! ಇದರಿಂದಲೇ ವ್ಯಾಪಾರಂ ದ್ರೋಹ ಚಿಂತನಂ, ಅಕ್ಕನ ಒಡವೇಲೂ ಅಕ್ಕಸಾಲಿಗ ಗುಲಗಂಜಿ ತೂಕದ್ದಾದರೂ ಚಿನ್ನ ಕದಿಯುತ್ತಾನೆ ಎಂಬ ಮಾದರಿಯ ಗಾದೆ ಮಾತುಗಳನ್ನು ಸ್ಟಷ್ಟಿಸಿಕೊಂಡಿದ್ದೇವೆ. ಆ ಮಾತುಗಳು ಎಂದೆಂದಿಗೂ ನಿಜ ಎಂದೂ ಒಪ್ಪುವಂಥ ಮನಸ್ಥಿತಿಗೆ ಒಗ್ಗಿ ಹೋಗಿದ್ದೇವೆ. ಮೋಸ ಹೋಗುವವರು ಇರುವವರೆಗೆ ಮೋಸ ಮಾಡುವವರು ಇರುತ್ತಾರೆ ಎಂಬುದು ನಮ್ಮ ಇನ್ನೊಂದು ಸಮಾಧಾನ. ವ್ಯಾಪಾರವನ್ನು ವೃದ್ಧಿಸಿಕೊಳ್ಳಲು ಸರಪಳಿ ಸದಸ್ಯತ್ವದ ಕಲ್ಪನೆ ಜಾರಿಯಲ್ಲಿದೆ. ಒಂದು ಪ್ರವಾಸ ಉದ್ದೇಶದ ಸಂಸ್ಥೆ, ಒಬ್ಬ ಸದಸ್ಯರು ಮೂರು ಸಹಸದಸ್ಯರನ್ನು ಕೊಟ್ಟರೆ ಅವರ ಹಣ ವಾಪಾಸು, ಇವರ ಸರಪಳಿ ವೃದ್ಧಿಯಾದಂತೆ ಮೂಲ ಸದಸ್ಯರಿಗೆ ಆದಾಯ ಮೂಲ ಸೃಷ್ಟಿಯಾಗುತ್ತದೆ ಎಂಬ ಶೈಲಿಯ ಯೋಜನೆಯನ್ನು ಜಾರಿಮಾಡಿದೆ. ಇಂಥ ಸರಪಳಿ ವ್ಯವಸ್ಥೆಗಳು ಕಳೆದ ಮೂರು ದಶಕಗಳಿಂದ ಹೊಸಹೊಸದಾಗಿ, ಹೊಸ ಹೊಸ ಬಗೆಯಲ್ಲಿ ಹುಟ್ಟಿಕೊಳ್ಳುತ್ತಿರುವುದು ಕೂಡ ನಿಜ. ಈಗಿನ ಆನ್‌ಲೈನ್ ವ್ಯವಸ್ಥೆಯಲ್ಲಿ ಅಂತಜಾìಲದಲ್ಲಿ ನೋಂದಣಿ, ಬ್ಯಾಂಕ್ ಖಾತೆಗೇ ನೇರವಾಗಿ ಹಣ ಪಾವತಿ, ಸದಸ್ಯತ್ವದ ಕಾರ್ಡ್, ಲಾಗಿನ್ ಮೊದಲಾದ ಆಧುನಿಕ ವ್ಯವಸ್ಥೆಗಳೂ ಸೃಷ್ಟಿಯಾಗಿವೆ. ಪ್ರವಾಸಗಳ ಸೇವೆಯ ಸರಪಳಿ ಸಂಸ್ಥೆಯದ್ದು ಕೂಡ ಇಂತಹುದೇ ಜವಾಬ್ದಾರಿಯುತ ಮಾಡೆಲ್.
ಸರಪಳಿಯಿಂದ ಆತ್ಮಹತ್ಯೆ!
ಯೋಜನೆ ಸರಿ, ಅದು ಸರಪಳಿ ಮುಂದುವರೆದಂತೆ ಹಿಂದಿನ ಸದಸ್ಯರಿಗೆ ಲಾಭಾಂಶವನ್ನು ಹಂಚುವುದು ಕೂಡ ಅನೂಚಾನವಾಗಿ ನಡೆಯುತ್ತದೆ. ಇಲ್ಲಿ ಕಾನೂನನ್ನು ಉಲ್ಲಂ ಸುವ ಯಾವುದೇ ಅಂಶಗಳಿಲ್ಲ. ಒಬ್ಬ ಸದಸ್ಯನಿಂದ ಹುಟ್ಟುವ ಸರಪಳಿ ಮುಂದೆ 3, 9, 27, 71, 213, 639, 1917…. ಹೀಗೆ ಮುಂದುವರೆಯುತ್ತದೆ. ಇಂಥ ಹತ್ತಾರು ಸರಪಳಿಗಳಿಂದ ಕೋಟಿಗಟ್ಟಲೆ ಸದಸ್ಯರನ್ನು ಸಂಪಾದಿಸಬಹುದು. ಎಲ್ಲ ಸರಪಳಿಗಳ ಕೊನೆಯ ಮೂರು ಸದಸ್ಯರ ಸಂಖ್ಯೆಯೇ ಒಂದು ಕೋಟಿ ಎಂದುಕೊಳ್ಳೋಣ. ಅವರ ಹಂತದಲ್ಲಿ ಈ ಸರಪಳಿ ಮುಕ್ತಾಯವಾಗಿದೆ. ಅಂದರೆ ಈ ಒಂದು ಕೋಟಿ ಜನ ತೊಡಗಿಸಿದ ಮೊತ್ತಕ್ಕೆ ಒಂದು ರೂಪಾಯಿ ಕೂಡ ವಾಪಾಸು ಬರುವುದಿಲ್ಲ. ಅರ್ಥ ಇಷ್ಟೇ. ಸರಪಳಿ ಯೋಜನೆ ಯಾವುದೋ ಒಂದು ಹಂತದಲ್ಲಿ ಕೊನೆಯಾಗಲೇಬೇಕು. ಅದು ಕೊನೆಯಾಗುವಾಗ ಸರಪಳಿ ವೃದ್ಧಿಯಾಗಿದ್ದಷ್ಟೂ ನಷ್ಟಕ್ಕೆ ಒಳಗಾಗುವ ಗ್ರಾಹಕರ ಸಂಖ್ಯೆ ಅತ್ಯಂತ ದೊಡ್ಡದಾಗಿರುತ್ತದೆ. ಇವತ್ತಿಗೂ ಸರಪಳಿ ಯೋಜನೆಯನ್ನು, ವಂಚಿಸುವ ಉದ್ದೇಶದಿಂದ ರೂಪಿಸಿಲ್ಲ ಎಂದು ವಾದಿಸುವವರು ಸಿಗುತ್ತಾರೆ. ಕಾನೂನು ಪ್ರಕಾರ ಕೂಡ “ಚೈನ್ ಸ್ಕೀಮ್’ ನಿಯಮ ಬದ್ಧ. ಅದಕ್ಕೇ ಹೇಳುವುದು, ಕಾನೂನುಪ್ರಕಾರ ಮಾಡುವುದು ತಪ್ಪಲ್ಲ, ಆದರೂ ತಪ್ಪೇ!
ಬಹುಶಃ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್)ದ ನಿಯಮಗಳನ್ನು ಅತ್ಯಂತ ಹೆಚ್ಚು ಪ್ರಾಮಾಣಿಕವಾಗಿ ಅನುಸರಿಸುವುದು ಬಿಎಸ್‌ಎನ್‌ಎಲ್. ನಿಯಮಬಾಹಿರವಾಗಿ ಗ್ರಾಹಕರನ್ನು ವಂಚಿಸುವುದನ್ನಂತೂ ಅದು ಕನಸಿನಲ್ಲಿಯೂ ಚಿಂತಿಸುವ ಕಂಪನಿಯಲ್ಲ. ಅಷ್ಟಕ್ಕೂ ಅದು ನಮ್ಮ ಸರ್ಕಾರದ ಸ್ವಾಯುತ್ವ ಸಂಸ್ಥೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಅದು ನಮ್ಮದೇ ಮಾಲೀಕತ್ವದ ಸಂಸ್ಥೆ!
ಟಾಕ್‌ಟೈಮ್ ಎಲ್ಲಿ?
ಬಿಎಸ್‌ಎನ್‌ಎಲ್ ತನ್ನ ಮೊಬೈಲ್ ಗ್ರಾಹಕರಿಗೆ ಎರಡು ಮಾದರಿಯ ಯೋಜನೆಗಳನ್ನು ಒದಗಿಸುತ್ತದೆ. ಕೆಲವು ವ್ಯಾಲಿಡಿಟಿ ಹೊಂದಿದ ಯೋಜನೆಗಳು. ಇವು ವ್ಯಾಲಿಡಿಟಿ, ಟಾಕ್‌ಟೈಮ್ ಮತ್ತು ದರಪಟ್ಟಿಯನ್ನು ಹೊಂದಿರುತ್ತವೆ. ಉದಾಹರಣೆಗೆ- 87 ರೂ.ಗಳ ಪ್ಲಾನ್. 180 ದಿನಗಳ ಅವಧಿ. ನಿಮಿಷದ ಕರೆಗೆ 40 ಪೈಸೆ ದರ, ನೂರು ಎಸ್.ಎಂಎಸ್ ಉಚಿತ… ಈ ಥರಹದ ದರಪಟ್ಟಿ ಇದೆ. ಆಕರ್ಷಕ ಪ್ಲಾನ್‌ಗಳಿಲ್ಲದಿದ್ದರೂ ವ್ಯಾಲಿಡಿಟಿಗಾಗಿ ಪ್ಲಾನ್ ವೋಚರ್ ಹಾಕಿಕೊಳ್ಳುವುದು ಅನಿವಾರ್ಯ. ಇದರ ನಂತರ ನಾವು ಕರೆಗಳು ಅಥವಾ ಅಂತಜಾìಲ ಸೇವೆಗಾಗಿ ಸ್ಪೆಶಲ್ ಟಾರಿಫ್ ವೋಚರ್ ಅರ್ಥಾತ್ ಎಸ್.ಟಿಯನ್ನು ಹೆಚ್ಚುವರಿಯಾಗಿ ಹಾಕಿಸಿಕೊಳ್ಳಬಹುದು. ದಿನಕ್ಕೆ ಒಂದೂವರೆ ಜಿಬಿ ಕೊಡುವ 26 ದಿನಗಳ ಅವಧಿಯ 98 ರೂ.ಗಳ ಎಸ್.ಟಿಯನ್ನು ಒಬ್ಬ ಗ್ರಾಹಕ ಹಾಕಿಸಿಕೊಳ್ಳುತ್ತಾನೆ ಎಂದುಕೊಳ್ಳಿ. ಆಗ ಅವನಿಗೆ ಅಂತಜಾìಲ ವೀಕ್ಷಣೆಗೆ ಹೆಚ್ಚುವರಿ ವೆಚ್ಚವಾಗುವುದಿಲ್ಲ.
ಈ ಹಿಂದೆ ಬಿಎಸ್‌ಎನ್‌ಎಲ್, ಈ ಎಸ್‌ಟಿಯ ಅವಧಿ ಮುಕ್ತಾಯವಾಗುವ ಮೂರು ದಿನ ಮುನ್ನಿನಿಂದ ದಿನಕ್ಕೊಂದು ಎಸ್‌ಎಂಎಸ್ ಕಳುಹಿಸಿ ನಿಮ್ಮ ಎಸ್‌ಟಿ ಸಮಯ ಮುಗಿಯುತ್ತಿದೆ ಎಂದು ಎಚ್ಚರಿಸುತ್ತಿತ್ತು. ಈ ಸೂಚನೆ ಕೊಡುವುದು ಕಡ್ಡಾಯವೇನಲ್ಲ. ಈ ಅಂಶದ ಆಧಾರದಲ್ಲಿ ಕಂಪನಿಯ ಒಳಗಿರುವ ಬುದ್ಧಿವಂತರು ಈ ಸಂದೇಶ ಕಳುಹಿಸುವುದನ್ನು ಸ್ಥಗಿತಗೊಳಿಸಿದರು. ಈಗ 26 ದಿನ ಯಾವ ತಲೆಬಿಸಿ ಇಲ್ಲದೆ ದಿನದ ಒಂದೂವರೆ ಜಿ.ಬಿ ಡೇಟಾ ಖಾಲಿ ಮಾಡುತ್ತಿದ್ದ ಸಾಮಾನ್ಯ ಗ್ರಾಹಕ 27ನೇ ದಿನವೂ ನೆಟ್ ಬಳಸುತ್ತಾನೆ. ಅವನ ಟಾಕ್‌ಟೈಮ್‌ನಲ್ಲಿ 300 ರೂ. ಇತ್ತು ಎಂದುಕೊಳ್ಳಿ. ಅದು ಕೆ.ಬಿ ಲೆಕ್ಕದಲ್ಲಿ ವೆಚ್ಚವಾಗಿ ಖಾಲಿಯಾಗುವವರೆಗೆ ನೆಟ್ ಜಾರಿಯಲ್ಲಿರುತ್ತದೆ. ಟಾಕ್‌ಟೈಮ್ ಖಾಲಿಯಾಗಿ ನೆಟ್ ಕೈಕೊಟ್ಟಾಗಲೇ ಗ್ರಾಹಕನಿಗೆ ಅರಿವಿಗೆ ಬರುವುದು. ಎಸ್.ಟಿ ಅವಧಿ ಮುಗಿದಿದೆ ಅಂತ. 98 ರೂ. ಹಾಕಿ ಇನ್ನೂ 26 ದಿನ ಬಳಸ ಬಹುದಿದ್ದವನ 300 ರೂ. ಒಂದು ದಿನದ ಕೆಲ ತಾಸುಗಳಲ್ಲಿಯೇ ಖಾಲಿಯಾಗಿರುತ್ತದೆ. ಈ ರೀತಿಯ “ಸೇವೆ’ಯಿಂದ ಬಿಎಸ್‌ಎನ್‌ಎಲ್ ಸಂಗ್ರಹಿಸುವ ಆದಾಯದ ವಿವರ ಹೊರಬೀಳುವುದಿಲ್ಲ. ಬರೀ ಬಿಎಸ್‌ಎನ್‌ಎಲ್ ಅಂತಲ್ಲ. ಎಲ್ಲ ಖಾಸಗಿ ಮೊಬೈಲ್ ಸೇವಾದಾತರೂ ಇಂತಹ ಮಾಡೆಲ್‌ಗಳನ್ನು ರೂಪಿಸಿರುತ್ತಾರೆ. ಹಣ ಕಳೆದುಕೊಂಡವ ಕೈ ಹಿಸುಕಿಕೊಳ್ಳುವುದರ ಹೊರತಾಗಿ ಬೇರೆ ದಾರಿ ಇಲ್ಲ. ಏಕೆಂದರೆ, ಈ ರೀತಿ ಮಾಡುವುದು ಕಾನೂನುಪ್ರಕಾರ ತಪ್ಪಲ್ಲ. ಆದರೆ ನಮಗನಿಸುತ್ತಿದೆ, ಅದು ತಪ್ಪೇ!
ಕೈ ಕಚ್ಚುವ ಉಚಿತ!
ಡಿಟಿಹೆಚ್ ಕ್ಷೇತ್ರದ ಸೇವಾದಾತರು ಕೂಡ ಇಂಥ ತಂತ್ರಗಾರಿಕೆಯಿಂದ ಹೊರತಲ್ಲ. ಮತ್ತೂಂದು ಉದಾಹರಣೆಯನ್ನು ತೆಗೆದುಕೊಳ್ಳುವುದಾದರೆ, ಡಿಷ್ ಟಿ.ವಿ ಎರಡು ರೀತಿಯ ಆಫರ್‌ಗಳನ್ನು ತನ್ನ ಪ್ರಚಲಿತ ಗ್ರಾಹಕರಿಗೆ ನೀಡುತ್ತದೆ. ಗ್ರಾಹಕ, ತಾನಿರುವ ಪ್ಲಾನ್‌ನಿಂದ ಮುಂದಿನ ಹೆಚ್ಚು ವೆಚ್ಚದ ಪ್ಲಾನ್‌ಗೆ ಬಡ್ತಿ ಪಡೆಯುವುದಾದರೆ ಆತನಿಗೆ ಒಂದು ತಿಂಗಳು ಅದು ಉಚಿತವಾಗಿಯೇ ಲಭ್ಯವಾಗುತ್ತದೆ. ಹೆಚ್ಚು ಚಾನೆಲ್‌ಗಳು ಹಳೆಯ ಪ್ಲಾನ್ ದರದಲ್ಲಿ ಎಂದು ಆಯ್ಕೆ ಮಾಡಿಕೊಂಡರೆ ಅವರು ನಮ್ಮನ್ನು ಕಾನೂನುಬದ್ಧವಾಗಿ ಮೋಸ ಮಾಡಿಬಿಟ್ಟಿರುತ್ತಾರೆ! ಒಂದು ಪ್ಲಾನ್ ಆಯ್ದುಕೊಂಡರೆ ಮೂರು ತಿಂಗಳು ಆ ಗ್ರಾಹಕ ಅದನ್ನು ಬದಲಿಸಿ ಕಡಿಮೆ ಬೆಲೆಯ ಕೆಳಗಿನ ಪ್ಯಾಕ್‌ಗೆ ಬರುವಂತಿಲ್ಲ, ಲಾಕ್ ಇನ್ ಪೀರಿಯಡ್. ಒಂದು ತಿಂಗಳ ಉಚಿತದ ನಂತರ ಮುಂದಿನ ಎರಡು ತಿಂಗಳು ಬೇಡವಾದರೂ ಗ್ರಾಹಕ ಹೆಚ್ಚು ವೆಚ್ಚ ಭರಿಸಲೇಬೇಕು. ಈಗಿನ 250 ರೂ. ತಿಂಗಳ ಪ್ಯಾಕ್‌ನಿಂದ 300 ರೂ. ಪ್ಯಾಕ್‌ಗೆ ಭಡ್ತಿ ಹೊಂದಿದರೆ 50 ರೂ. ಜಾಸ್ತಿ. ಮೊದಲ ತಿಂಗಳ ಉಚಿತದ ನಂತರ ಮುಂದಿನ ಎರಡು ತಿಂಗಳಿಗೆ 100 ರೂ. ಅಧಿಕ ತೆತ್ತಲೇಬೇಕು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಸೇವಾದಾತ ಮಾಸಿಕ 33 ರೂ.ನಲ್ಲಿ ಹೆಚ್ಚುವರಿ ಚಾನೆಲ್ ಕೊಟ್ಟಂತಾಗುತ್ತದೆಯೇ ವಿನಃ ಉಚಿತ ಸೇವೆ ಪಡೆಯುತ್ತಾನೆ ಎಂಬುದು ಸುಳ್ಳೇ ಸುಳ್ಳು. ಹಾಗಂತ ಹೇಳಲಾಗುವುದಿಲ್ಲ. ಏಕೆಂದರೆ, ಕಾನೂನುಪ್ರಕಾರ ಈ ರೀತಿ ಮಾಡುವುದು ತಪ್ಪಲ್ಲ!
ಇತ್ತೀಚೆಗೆ ಜಿಯೋ ಮೊಬೈಲ್ ಕಂಪನಿಯ ಕ್ಯಾಷ್ ಬ್ಯಾಕ್ ಆಫರ್, ಡಿಟಿಎಚ್‌ಗಳವರ ಹೆಚ್‌ಡಿ ಅಪ್‌ಗೆÅàಡ್ ಆಫರ್‌ಗಳಲ್ಲಿ ಇಂತಹ ಒಳಸುಳಿಗಳನ್ನು ಕಾಣುತ್ತಲೇ ಇದ್ದೇವೆ. ಇವತ್ತಿಗೂ ನಾವು ಹಣ್ಣಿನ ಅಂಗಡಿಯಲ್ಲಿ ನಾವೇ ಹಣ್ಣು ಆರಿಸಿಕೊಳ್ಳುತ್ತೇವೆ. 10 ಹಣ್ಣಲ್ಲಿ ಒಂದಾದರೂ ಹುಳುಕು ಹಣ್ಣನ್ನು ಅವ ತೂರಿಸಿಬಿಡುತ್ತಾನೆ ಎಂಬ ಆತಂಕ ನಮಗಿರುತ್ತದೆ. ಹಣ್ಣಿನ ಸೂಕ್ತ ಬೆಲೆಯನ್ನು ಗ್ರಾಹಕರಿಂದ ತೆಗೆದುಕೊಳ್ಳುವಾಗ ಹಾಳಾದ ಹಣ್ಣನ್ನು ನಾನು ಹಾಕಬಾರದು ಎಂಬ ಮನಃಸ್ಥಿತಿ ಅಂಗಡಿಯವನಿಗೆ ಬರುವವರೆಗೆ ಜನ ನಿರುಮ್ಮಳವಾಗಿ ವ್ಯಾಪಾರ ಮಾಡಲಾಗುವುದಿಲ್ಲ. ಇದೇ ಮಾತು ವ್ಯವಸ್ಥಿತ ಮಾರುಕಟ್ಟೆಗೂ ಅನ್ವಯ.
ಬೇಷರತ್ ಮೋಸ!
ಒಂದು ಮಟ್ಟಿಗೆ ಆನ್‌ಲೈನ್ ಮಾರಾಟ ಕಂಪನಿಗಳು ಹೆಚ್ಚು ಪಾರದರ್ಶಕ ವ್ಯಾಪಾರ ಮಾಡುತ್ತವೆ ಎಂದು ನಾವು ಅಂದುಕೊಂಡಿದ್ದೆವು. ಮೊದಲ ವರ್ಷಗಳಲ್ಲಿ ಅದು ಹೆಚ್ಚು ನಿಜವೂ ಆಗಿತ್ತು. ಆದರೆ ಈ ಕ್ಷೇತ್ರದಲ್ಲೂ ಕಾನೂನುಬದ್ಧ ವಂಚನೆಗಳು ಸ್ಥಾನ ಪಡೆಯುತ್ತಿವೆ. ನಂಬಲರ್ಹತೆಯ ಪ್ರತೀಕ ಎಂದು ಹೇಳಿಕೊಳ್ಳುವ ಅಮೆಜಾನ್
ಇ. ವ್ಯಾಪಾರ ಸಂಸ್ಥೆ ಇತ್ತೀಚೆಗೆ ಒಂದು ಕೊಡುಗೆ ನೀಡಿತು. ಅಮೆಜಾನ್ ಬ್ಯಾಲೆನ್ಸ್‌ಗೆ ಹಣ ತೊಡಗಿಸಿದರೆ ಶೇ. 10ರಷ್ಟು ಕ್ಯಾಷ್‌ಬ್ಯಾಕ್. ಗರಿಷ್ಠ 200 ರೂ. ಒಬ್ಬರಿಗೆ ಒಂದು ಬಾರಿ ಮಾತ್ರ, ಒಂದು ದಿನಾಂಕವನ್ನೂ ಸೂಚಿಸಿ, ಈ ದಿನಾಂಕದವರೆಗೆ ಮಾತ್ರ ಈ ರೀತಿಯ ಹತ್ತು ಹದಿನಾರು ಷರತ್ತುಗಳನ್ನು ಹೇಳಲಾಗಿತ್ತು. ಇವಷ್ಟನ್ನೇ ಪ್ರಮುಖ ಷರತ್ತುಗಳು ಎಂದುಕೊಂಡವರೆಲ್ಲ ಅಮೆಜಾನ್ ಬ್ಯಾಲೆನ್ಸ್‌ನಲ್ಲಿ ಹಣ ತೊಡಗಿಸಿದರು. 15 ದಿನಗಳಲ್ಲಿ ಕೊಡಬೇಕಾಗಿದ್ದ ಕ್ಯಾಷ್‌ಬ್ಯಾಕ್ ಮೊತ್ತ ಬಾರದಿದ್ದಾಗ ಗ್ರಾಹಕ ಸೇವಾ ಕೇಂದ್ರವನ್ನು ಸಂಪರ್ಕಿಸಿದರು. ಆಗ ಅವರು ಹೇಳಿದರು; ಈ ಆಫರ್ ನಿಯಮ ಅನ್ವಯಿಸುವುದಿಲ್ಲ. ನಾವು ಷರತ್ತುಗಳ ಕೊನೆಯಲ್ಲಿ ಹೇಳಿದ್ದೇವೆ, ಈ ಆಫರ್ ಆಯ್ದ ಸದಸ್ಯರಿಗೆ ಮಾತ್ರ ಅನ್ವಯ. ಅಂತವರ ಇ ಮೇಲ್‌ಗೆ ನಾವು ಈಗಾಗಲೇ ಸಂದೇಶ ಕಳುಹಿಸಿದ್ದೇವೆ! ನಿಮಗೆ ಮೇಲ್ ಬಂದಿಲ್ಲ ಎಂದಾದರೆ, ನೀವು ಆಯ್ದ ಸದಸ್ಯರಲ್ಲ ಎಂದು ಅರ್ಥ !ಷರತ್ತು ಇದೆ, ಅದನ್ನು ಷರತ್ತು ಪಟ್ಟಿಯಲ್ಲಿಯೂ ಹೇಳಲಾಗಿದೆ. ಅಂದಮೇಲೆ ಕಾನೂನುಪ್ರಕಾರ ಅಮೆಜಾನ್ ಕ್ರಮ ತಪ್ಪಲ್ಲ!
ಹೀಗೆ ಮಾಡುವುದು ಸರಿಯೇ ಎಂಬ ಪ್ರಶ್ನೆ ಕೇಳುವವನಿಗೆ ಹಲವು ವಿಚಾರಗಳು ಎದುರಾಗುತ್ತವೆ. ಅತ್ಯಂತ ಮುಖ್ಯವಾದ ಆಯ್ದ ಗ್ರಾಹಕರಿಗೆ ಮಾತ್ರ ಲಭ್ಯ ಎಂಬುದು ಷರತ್ತು ಷರತ್ತುಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಬೇಕಿತ್ತಲ್ಲವೇ? ಒಂದೊಮ್ಮೆ ಇ ಮೇಲ್ ಸಂದೇಶ ಪಡೆದವರಿಗೆ ಮಾತ್ರ ಲಭ್ಯ ಎಂತಾದ ಮೇಲೆ ಅಮೆಜಾನ್ ತನ್ನ ವೆಬ್‌ನಲ್ಲಿ ಹಣ ಸೇರ್ಪಡೆ ಮಾಡಿ, ಪರಮಾವಧಿ 200 ರೂ. ಕ್ಯಾಷ್‌ಬ್ಯಾಕ್ ಪಡೆಯಿರಿ ಎಂದು ಜಾಹೀರಾತು ನೀಡುವುದೇ ಜನರನ್ನು ಎಡವುವಂತೆ ಮಾಡುವುದು ತಂತ್ರವಲ್ಲವೇ?
ಬದಲಾಗದೆ ಕಾಲ?
ಇನ್ನೂ ಕಾನೂನುಬದ್ಧ ವಂಚನೆಗಳು ಮುಂದುವರೆಯಲು ನಾವು ಬಿಡಬೇಕೆ ಎಂಬುದನ್ನು ಪ್ರತಿಯೊಬ್ಬ ನಾಗರಿಕರು ತಮ್ಮನ್ನು ತಾವೇ ಕೇಳಿಕೊಳ್ಳಬೇಕಾಗಿದೆ. ಇಲ್ಲಿ ದೃಷ್ಟಾಂತವಾಗಿಯಷ್ಟೇ ಕೆಲವು ಹೆಸರುಗಳು ಪ್ರಸ್ತಾಪವಾಗಿವೆ. ಅವು ಪ್ರಾತಿನಿಧಿಕ ಮಾತ್ರ. ನಿಯಮ ರೂಪಿಸುವವರು ಇದನ್ನು ಗಮನಿಸಬೇಕು ಎಂಬುದಕ್ಕಿಂತ ನ್ಯಾಯಯುತವಾಗಿ ಆದಾಯ ಸಂಗ್ರಹ ಮಾಡುವ ಮನೋಭಾವ ಬೆಳೆಯಬೇಕು. ಒಬ್ಬರು ನ್ಯಾಯಬದ್ಧ ಮೋಸ ಮಾಡುತ್ತಿರುವುದು ಕಂಡುಬಂದಾಗ ಸಂಬಂಧಿಸಿದ ನಾವು ಖುದ್ದು ಮೋಸ ಹೋಗದಿದ್ದರೂ ಇದು ತರವಲ್ಲ ಎಂಬ ಸಂದೇಶವನ್ನು ಅಂತಹ ಕಂಪನಿಗೆ ರವಾನಿಸುವ ವ್ಯವಸ್ಥೆಯಾಗಬೇಕು. ಇಂಥ ಆಂದೋಲನವನ್ನು ಪ್ರೇರೇಪಿಸುವ ವೆಬ್ ಪುಟ, ಆ್ಯಪ್ ಸದ್ಯದ ಅವಶ್ಯಕತೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವೇ ಕ್ರಮ ಕೈಗೊಂಡರೆ ಅವರಿಗೊಂದು ಉಘೇ!
-ಮಾ.ವೆಂ.ಸ.ಪ್ರಸಾದ್,
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.