ನಿಲ್ಲದ ಆಪರೇಷನ್ ಕಮಲ ವದಂತಿ: ಕಾಂಗ್ರೆಸ್ - ಜೆಡಿಎಸ್ ತಲ್ಲಣ
Team Udayavani, Sep 23, 2018, 6:25 AM IST
ಬೆಂಗಳೂರು: ಜಾರಕಿಹೊಳಿ ಸಹೋದರರ ಬಂಡಾಯ ತಣ್ಣಗಾಯಿತು ಎಂದು ನಿಟ್ಟುಸಿರು ಬಿಡುವ ಮೊದಲೇ ಮತ್ತೆ ಬಿಜೆಪಿ ಆಪರೇಷನ್ ಕಮಲ ಕಾರ್ಯಾಚರಣೆ ಆತಂಕವುಂಟಾಗಿದ್ದು, ಶನಿವಾರ ಇಡೀ ದಿನ ಊಹಾಪೋಹಗಳದ್ದೇ ಕಾರುಬಾರು ಎಂಬಂತಾಗಿತ್ತು.
ಕಾಂಗ್ರೆಸ್‌ನ ಹತ್ತಕ್ಕೂ ಹೆಚ್ಚು ಶಾಸಕರು ಮುಂಬೈಗೆ ತೆರಳಿದ್ದಾರೆ. ಎಂ.ಟಿ.ಬಿ.ನಾಗರಾಜ್, ಸುಧಾಕರ್, ನಾಗೇಶ್ ಚೆನ್ನೈಗೆ ಹೋಗಿ ಅಲ್ಲಿಂದ ಮುಂಬೈಗೆ ಶಿಫ್ಟ್ ಆಗಲಿದ್ದಾರೆ. ಮತ್ತಷ್ಟು ಶಾಸಕರು ಅತೃಪ್ತರ ಪಡೆ ಸೇರ್ಪಡೆಯಾಗಲಿದ್ದಾರೆ. ಆನಂದ್‌ಸಿಂಗ್ ಮುಂಬೈನಲ್ಲಿದ್ದಾರೆ ಎಂಬೆಲ್ಲಾ ಮಾತುಗಳು ಹೇಳಿಬಂದವು.
ಇದಕ್ಕೆ ಇಂಬು ಕೊಡುವಂತೆ ಎಂ.ಟಿ.ಬಿ.ನಾಗರಾಜ್, ಸುಧಾಕರ್, ನಾಗೇಶ್ ಅವರು ಒಟ್ಟಿಗೆ ಹೋಟೆಲ್‌ವೊಂದರಲ್ಲಿ ತಿಂಡಿ ತಿನ್ನುತ್ತಿದ್ದ ದೃಶ್ಯಾವಳಿಗಳು ಮಾಧ್ಯಮಗಳಲ್ಲಿ ಪ್ರಸಾರಗೊಂಡವು. ಆನಂದ್‌ಸಿಂಗ್ ಮುಂಬೈಗೆ ಹೊರಟಿದ್ದಾರೆ, ನಾಗೇಂದ್ರ ಮುಂಬೈನಲ್ಲಿದ್ದಾರೆ ಎಂಬ ಸುದ್ದಿ ಹರಡಿತು. ಈ ಬೆಳವಣಿಗೆಗಳಿಂದ ಎಚ್ಚೆತ್ತ ಕಾಂಗ್ರೆಸ್ ನಾಯಕರು ತಮ್ಮ ಶಾಸಕರ ಹಿಡಿದಿಟ್ಟುಕೊಳ್ಳಲು ಮುಂದಾದರು.ಇದಾದ ಕೆಲವೇ ಕ್ಷಣಗಳಲ್ಲಿ ಸಚಿವ ಜಮೀರ್ ಅಹಮದ್, ಶಾಸಕ ಆನಂದ್‌ಸಿಂಗ್ ಅವರನ್ನು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ನಿವಾಸಕ್ಕೆ ಕರೆತಂದರು. ಕೆಪಿಸಿಸಿ ಅಧ್ಯಕ್ಷ ದಿನೇಶ್‌ಗುಂಡೂರಾವ್ ಸಹ ಅಲ್ಲಿಗೆ ದೌಡಾಯಿಸಿದರು.
ಮೂಲಗಳ ಪ್ರಕಾರ ನಾಗೇಂದ್ರ ಅವರಿಗೆ ಸಚಿವ ಸ್ಥಾನ ಸಿಗಬಹುದು ಎಂಬ ಕಾರಣಕ್ಕೆ ಆನಂದ್‌ಸಿಂಗ್ ಮುನಿಸಿಕೊಂಡು ಬಿಜೆಪಿ ಸಂಪರ್ಕದಲ್ಲಿದ್ದರು. ಇದರ ಮಾಹಿತಿ ಪಡೆದ ಜಮೀರ್ ಅಹಮದ್ ಅವರ ಮನವೊಲಿಸಿದ ಸಿದ್ದರಾಮಯ್ಯ ನಿವಾಸಕ್ಕೆ ಕರೆತಂದರು.
ಸಿದ್ದರಾಮಯ್ಯ ಅವರು, ಆನಂದ್‌ಸಿಂಗ್‌ಗೆ ಯಾವುದೇ ಕಾರಣಕ್ಕೂ ಬಿಜೆಪಿಗೆ ಹೋಗಬೇಡಿ. ನೀವೆಲ್ಲಾ ಕಾಂಗ್ರೆಸ್ ಸೇರಲು ವಿರೋಧವಿತ್ತು. ಆದರೂ ಸೇರ್ಪಡೆಮಾಡಿಕೊಂಡು ಟಿಕೆಟ್ ಕೊಟ್ಟು ಗೆಲ್ಲಿಸಿದ್ದೇವೆ. ಯಾರು ಏನೇ ಬ್ಲಾಕ್‌ವೆುàಲ್ ಮಾಡಿದರೂ ಹೆದರಬೇಡಿ. ನಿಮ್ಮ ಜತೆ ನಾನು ಮತ್ತು ಸರ್ಕಾರ ಇದೆ ಎಂದು ಧೈರ್ಯ ತುಂಬಿದರು. ಕಾಂಗ್ರೆಸ್‌ನಲ್ಲಿ ಸೂಕ್ತ ಸ್ಥಾನಮಾನದ ಭರವಸೆಯನ್ನೂ ನೀಡಿದರು.ದೂರವಾಣಿ ಮೂಲಕ ಶಾಸಕ ನಾಗೇಂದ್ರ ಅವರನ್ನೂ ಮಾತನಾಡಿದ ಯಾವುದೇ ಅವಸರದ ತೀರ್ಮಾನ ಕೈಗೊಳ್ಳಬೇಡಿ ಎಂದು ಕಿವಿಮಾತು ಹೇಳಿದರು. ಹಾವೇರಿ ರಸ್ತೆ ಮೂಲಕ ಹೋಗುತ್ತಿದ್ದ ಬಿ.ಸಿ. ಪಾಟೀಲ್ ಅವರನ್ನು ವಾಪಸ್ ಬರುವಂತೆ ಸೂಚಿಸಿದರು ಎಂದು ಹೇಳಲಾಗಿದೆ.
ಇದಾದ ನಂತರ ನಾಗೇಂದ್ರ ಸುದ್ದಿಗಾರರ ಜತೆ ಮಾತನಾಡಿ ನಾನು ಎಲ್ಲೂ ಹೋಗಿಲ್ಲ. ಬಳ್ಳಾರಿಯಲ್ಲೇ ಇದ್ದೇನೆ. ಜಿಲ್ಲೆಯ ಶಾಸಕರೆಲ್ಲಾ ಒಟ್ಟಾಗಿದ್ದೇವೆ. ಉಳಿದ ಶಾಸಕರು ಎಲ್ಲಿದ್ದಾರೆ ನನಗೆ ಗೊತ್ತಿಲ್ಲ ಎಂದು ಹೇಳಿದರು.
ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಕೆಲ ಹೊತ್ತಿನಲ್ಲೇ ಖಾಸಗಿ ಕಾರಿನಲ್ಲಿ ಸಿದ್ದರಾಮಯ್ಯ ನಿವಾಸಕ್ಕೆ ಶಾಸಕರಾದ ಗಣೇಶ್ ಹಾಗೂ ಪ್ರಸಾದ್ ಅಬ್ಬಯ್ಯ ಅವರೊಂದಿಗೆ ಆಗಮಿಸಿ ಇವರ್ಯಾರೂ ಎಲ್ಲೂ ಹೋಗಿಲ್ಲ ಎಂದು ಹೇಳಿ ರಾಜಕೀಯ ವಿದ್ಯಮಾನಗಳ ಬಗ್ಗೆ ಸಮಾಲೋಚನೆ ನಡೆಸಿದರು.
ಈ ಮಧ್ಯೆ, ಚಿಕ್ಕಮಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಪಕ್ಷೇತರ ಶಾಸಕ ನಾಗೇಶ್ ನನ್ನ ಸಂಪರ್ಕದಲ್ಲಿದ್ದಾರೆ. ಅವರ ಜತೆ ಇರುವ ಮೂವರಿಗೂ ನಾನೇ ಮುಂಬೈಗೆ ಹೋಗುವಂತೆ ಹೇಳಿದ್ದೇನೆ ಎಂದು ತಿಳಿಸಿದರು. ಹೀಗಾಗಿ, ಯಾವುದು ಸತ್ಯ, ಯಾವುದು ಸುಳ್ಳು ಎಂಬುದೇ ಅರ್ಥವಾಗದಂತಾಯಿತು.
ಗೌಪ್ಯ
ಬಿಜೆಪಿ ಮೂಲಗಳ ಪ್ರಕಾರ 18 ಶಾಸಕರನ್ನು ಮಹಾರಾಷ್ಟ್ರದ ಸಚಿವರ ಮೂಲಕ ರಕ್ಷಣೆ ನೀಡಿ, ಮಂಗಳವಾರ ಎಲ್ಲರನ್ನೂ ಏಕಕಾಲಕ್ಕೆ ಬೆಂಗಳೂರಿಗೆ ಕರೆದುಕೊಂಡು ಬಂದು ರಾಜೀನಾಮೆ ಕೊಡಿಸುವ ಲೆಕ್ಕಾಚಾರ ಹಾಕಿದ್ದಾರೆ ಎನ್ನಲಾಗುತ್ತಿದೆ. ಆದರೆ, ಮುಂಬೈಗೆ ತೆರಳಿದ್ದಾರೆ ಎನ್ನುವ ಶಾಸಕರು ಎಷ್ಟು ಜನ ಇದ್ದಾರೆ ಎನ್ನುವ ಅಧಿಕೃತ ಮಾಹಿತಿ ಮಾತ್ರ ಗೌಪ್ಯವಾಗಿಡಲಾಗಿದೆ. ಆಪರೇಷನ್ ಕಮಲಕ್ಕೆ ಒಪ್ಪಿಕೊಂಡಿರುವ 18 ಶಾಸಕರ ಪೈಕಿ 10 ಜನರಿಗೆ ಮಂತ್ರಿ ಸ್ಥಾನ ನೀಡಿ ಉಳಿದವರಿಗೆ ನಿಗಮ ಮಂಡಳಿ ಅಧ್ಯಕ್ಷಗಿರಿ ಭರವಸೆ ನೀಡಲಾಗಿದೆ ಎಂದು ಹೇಳಲಾಗಿದೆ.
ಸಚಿವ ಸ್ಥಾನಕ್ಕಾಗಿ ಒತ್ತಡ ತಂತ್ರ?
ಮತ್ತೂಂದು ಮೂಲಗಳ ಪ್ರಕಾರ ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ಸಂಪುಟ ವಿಸ್ತರಣೆಗೆ ವಿಳಂಬ ಧೋರಣೆ ಅನುಸರಿಸುತ್ತಿರುವುದರಿಂದ ಮುನಿಸಿಕೊಂಡಿರುವ ಸಚಿವಾಕಾಂಕ್ಷಿ ಶಾಸಕರು ನಾಯಕರ ವಿರುದ್ಧ ಸಿಡಿದೆದ್ದು ಒತ್ತಡ ತಂತ್ರ ಅನುಸರಿಸುತ್ತಿದ್ದಾರೆ . ಅದಕ್ಕೆ ಬಿಜೆಪಿಯ ಆಪರೇಷನ್ ಕಮಲದ ಕರೆಗಳನ್ನೂ ನಾಯಕರ ಗಮನಕ್ಕೆ ತಂದು ಆದಷ್ಟು ಬೇಗ ಸಂಪುಟ ವಿಸ್ತರಣೆ ಮಾಡುವಂತೆ ನಾಯಕರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಪರಿಷತ್ ಚುನಾವಣೆ ಮುಗಿದರೆ ಪಿತೃ ಪಕ್ಷದ ನೆಪ ಹೇಳಿ ಮತ್ತೆ ಸಂಪುಟ ವಿಸ್ತರಣೆ ಮಾಡದೇ ಹಾಗೆಯೇ ಮುಂದೂಡುತ್ತಾರೆ ಎನ್ನುವ ಕಾರಣಕ್ಕೆ ಈಗಲೇ ಸಚಿವಾಕಾಂಕ್ಷಿ ಶಾಸಕರು ನಾಯಕರ ಮೇಲೆ ಒತ್ತಡ ಹೇರಲು ಮುಂದಾಗಿದ್ದಾರೆ ಎನ್ನಲಾಗಿದೆ.
ಆದರೆ, ವಿಧಾನ ಪರಿಷತ್ತಿನ ಖಾಲಿ ಇರುವ ಮೂರು ಸ್ಥಾನಗಳಿಗೆ ಅಕ್ಟೋಬರ್ 4 ರಂದು ಚುನಾವಣೆ ನಡೆಯಲಿದ್ದು, ಅದಕ್ಕೆ ಮುಂಚೆ ಸಂಪುಟ ವಿಸ್ತರಣೆಯಾದರೆ ಅಡ್ಡ ಮತದಾನ ಆಗುವ ಆತಂಕ ಕಾಂಗ್ರೆಸ್ ನಾಯಕರದು ಎಂದು ಹೇಳಲಾಗಿದೆ. ಈಗಿನ ಪರಿಸ್ಥಿತಿಯಲ್ಲಿ ತಕ್ಷಣಕ್ಕೆ ಸಂಪುಟ ವಿಸ್ತರಣೆ ಲಕ್ಷಣಗಳೂ ಇಲ್ಲ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ
Karnataka by-election: 3 ಕ್ಷೇತ್ರದಲ್ಲಿ 33.33 ಕೋ.ರೂ. ಮೌಲ್ಯದ ಅಕ್ರಮ ವಶ
JDS protest: ಎಚ್‌ಡಿಕೆ ಕರಿಯ: ಜಮೀರ್ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ
Congress: “40 ಪರ್ಸೆಂಟ್ ಸಿಎಂ’ಗೆ ಸಾಕ್ಷಿ ಕೊಟ್ಟಿದ್ರ್ಯಾ?: ಸಿಎಂಗೆ ಸಿ.ಟಿ. ರವಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.