ಚಿಕಿತ್ಸೆಗೆ ಬಂದ ಬಾಲಕಿ ಗರ್ಭಿಣಿ ಎಂದ ವೈದ್ಯ ವಜಾ
Team Udayavani, Sep 26, 2018, 6:00 AM IST
ಶಿವಮೊಗ್ಗ: ಚಿಕಿತ್ಸೆಗೆಂದು ಬಂದಿದ್ದ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಲ್ಲದೆ ಸರಿಯಾಗಿ ತಪಾಸಣೆ ಮಾಡದ ಮೆಗ್ಗಾನ್ ಆಸ್ಪತ್ರೆ ವೈದ್ಯರೊಬ್ಬರನ್ನು ಸಿಮ್ಸ್ ಮಂಡಳಿ ವಜಾ ಮಾಡಿದೆ. ಅರೆಕಾಲಿಕ ಸರಕಾರಿ ವೈದ್ಯ ಡಾ.ಸೈಯದ್ ಮೀರ್ ಮೊಹಮ್ಮದ್ ವಜಾಗೊಂಡವರು.
ತೀವ್ರ ಜ್ವರದಿಂದ ಬಳಲುತ್ತಿದ್ದ 12 ವರ್ಷದ ಬಾಲಕಿಯೊಬ್ಬಳು ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದಿದ್ದಳು. ಅಲ್ಲಿಯ ವೈದ್ಯರು ಬಾಲಕಿಗೆ ಡೆಂಘೀ ಇರಬಹುದೆಂದು ಶಂಕಿಸಿದ್ದರು. ತಕ್ಷಣ ಪೋಷಕರು ಬಾಲಕಿಯನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆತಂದಿದ್ದಾರೆ. ಈ ವೇಳೆ ವೈದ್ಯ ಡಾ.ಸೈಯದ್ ಮೀರ್ ಮೊಹಮ್ಮದ್ ಖಾಸಗಿ ಆಸ್ಪತ್ರೆಯ ವೈದ್ಯರ ವರದಿ ನೋಡದೇ ಬಾಲಕಿಯ ಕೈ ಹಿಡಿದು ಪರೀಕ್ಷೆ ಮಾಡಿ ಗರ್ಭಿಣಿ ಎಂದು ಹೇಳಿದ್ದಾರೆ. ಇದರಿಂದ ವಿಚಲಿತಗೊಂಡ ಪೋಷಕರು ಸರಿಯಾಗಿ ತಪಾಸಣೆ ಮಾಡುವಂತೆ ಮನವಿ ಮಾಡಿದ್ದಾರೆ. ಇದರಿಂದ ಕುಪಿತಗೊಂಡ ವೈದ್ಯ “ಇದು ನಿಮ್ಮಪ್ಪನ ಆಸ್ಪತ್ರೆಯಲ್ಲ, ಹೊರಗೆ ಹೋಗಿ’ ಎಂದು ಕೂಗಾಡಿದ್ದರು. ವೈದ್ಯರ ವರ್ತನೆಯಿಂದ ಹಾಗೂ ಸರಿಯಾಗಿ ತಪಾಸಣೆ ನಡೆಸದ್ದರಿಂದ ನೊಂದ ಪೋಷಕರು ಆಸ್ಪತ್ರೆ ನಿರ್ದೇಶಕರು ಹಾಗೂ ಜಿಲ್ಲಾ ಧಿಕಾರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಸಿಮ್ಸ್ ಆಡಳಿತ ಮಂಡಳಿ ವೈದ್ಯರಿಂದ
ಉತ್ತರ ಕೇಳಿತ್ತು. ಆದರೆ ಇದಕ್ಕೆ ಸರಿಯಾಗಿ ಪ್ರತಿಕ್ರಿಯೆ ನೀಡದ ಹಿನ್ನೆಲೆಯಲ್ಲಿ ಬುಧವಾರ ಅರೆಕಾಲಿಕ ವೈದ್ಯ ಡಾ. ಸೈಯದ್ ಮೀರ್ ಮೊಹಮ್ಮದ್‌ರನ್ನು ವಜಾ ಮಾಡಿ ಆದೇಶಿಸಿದೆ. ಪ್ರಕರಣ ಸಂಬಂಧ ಪರಿಶೀಲನೆ ಮುಂದುವರಿಯಲಿದೆ ಎಂದು ಮೆಗ್ಗಾನ್ ಆಸ್ಪತ್ರೆ ಅಧೀಕ್ಷಕ
ಸತ್ಯನಾರಾಯಣ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.