ಮುಕ್ತ ವಿವಿ ವಿದ್ಯಾರ್ಥಿಗಳಿಗೂ ಕೌಶಲಾಭಿವೃದ್ಧಿ ತರಬೇತಿ ಕಡ್ಡಾಯ
Team Udayavani, Sep 27, 2018, 6:00 AM IST
ಬೆಂಗಳೂರು : ಇನ್ಮುಂದೆ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ವಿವಿಧ ಕೋರ್ಸ್ ಪಡೆಯಲಿರುವ ಅಭ್ಯರ್ಥಿಗಳಿಗೂ ಕೌಶಲಾಭಿವೃದ್ಧಿ ತರಬೇತಿ ಕಡ್ಡಾಯ.
ಬೆಂಗಳೂರು ವಿವಿ, ಮಂಗಳೂರು ವಿವಿ, ಮೈಸೂರು ವಿವಿ, ಕುವೆಂಪು ವಿವಿ, ದಾವಣಗೆರೆ ವಿವಿ ಸೇರಿದಂತೆ ರಾಜ್ಯದಲ್ಲಿ ನಿರಂತರ ತರಗತಿ ನಡೆಸುತ್ತಿರುವ ವಿಶ್ವವಿದ್ಯಾಲಯಗಳು ಪದವಿ ಹಾಗೂ ಸ್ನಾತಕೋತ್ತರ ಪದವಿಯ ಜತೆಗೆ ಕೌಶಲ್ಯ ಆಧಾರಿತ ತರಬೇತಿ ನಡೆಸುತ್ತಿವೆ. ಇನ್ನು ಕೆಲವು ವಿಶ್ವವಿದ್ಯಾಲಯಗಳು ಕೌಶಲಾಭಿವೃದ್ಧಿ ಡಿಪ್ಲೊಮಾ ಕೋರ್ಸ್ ಕೂಡ ಆರಂಭಿಸಿವೆ.ಇದೇ ಮಾದರಿಯಲ್ಲಿ ಮೈಸೂರಿನಲ್ಲಿರುವ ರಾಜ್ಯ ಮುಕ್ತ ವಿಶ್ವವಿದ್ಯಾಲಯವೂ ಪ್ರಸಕ್ತ ಸಾಲಿನಿಂದ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಕೌಶಲಾಭಿವೃದ್ಧಿ ತರಬೇತಿ ಕಡ್ಡಾಯಗೊಳಿಸಿದೆ.
ಮುಕ್ತ ಪದವಿ ಅಥವಾ ಸ್ನಾತಕೋತ್ತರ ಪದವಿಗೆ ಸೇರಿಕೊಳ್ಳುವ ಅಭ್ಯರ್ಥಿ ತನ್ನ ಕೋರ್ಸ್ ಜತೆಗೆ ಕೌಶಲಾಭಿವೃದ್ಧಿ ತರಬೇತಿ ಕೂಡ ಆಯ್ಕೆ ಮಾಡಿಕೊಳ್ಳಲೇ ಬೇಕು.ಪದವಿಗೆ ಸೇರುವ ವಿದ್ಯಾರ್ಥಿ ಆರಂಭದಲ್ಲಿ ಆಯ್ಕೆ ಮಾಡಿಕೊಂಡ ಕೌಶಲಾಭಿವೃದ್ಧಿ ತರಬೇತಿಯನ್ನೇ ಮೂರು ವರ್ಷವೂ ಪಡೆಯಬೇಕು. ಶೈಕ್ಷಣಿಕ ವರ್ಷದ ಮಧ್ಯಭಾಗದಲ್ಲಿ ಅಥವಾ ಕೊನೆಯಲ್ಲಿ ಬದಲಾವಣೆಗೆ ಅವಕಾಶ ಇರುವುದಿಲ್ಲ. ಇದೇ ನಿಯಮ ಸ್ನಾತಕೋತ್ತರ ವಿದ್ಯಾರ್ಥಿಗಳಿಗೂ ಅನ್ವಯಿಸುತ್ತದೆ. ಮುಕ್ತ ವಿಶ್ವವಿದ್ಯಾಲಯದ ಪುನರಾರಂಭಕ್ಕೆ ಯುಜಿಸಿಯಿಂದ ಪಡೆದಿರುವ ಅನುಮತಿ ಜತೆಯಲ್ಲಿ ಇದೂ ಸೇರಿದೆ.
ಯಾವ್ಯಾವ ತರಬೇತಿ
ಬೇಸಿಕ್ ಕಂಪ್ಯೂಟರ್ ನೆಟ್‌ವರ್ಕಿಂಗ್, ಕಂಪ್ಯೂಟರ್ ಮೂಲ ತತ್ವಗಳು, ಬಹುಮಾಧ್ಯಮ, ವೆಬ್‌ಡಿಸೈನಿಂಗ್, ಡೆಸ್ಕ್ಟಾಪ್ ಪಬ್ಲಿಷಿಂಗ್, ಇಂಗ್ಲಿಷ್ ಫಾರ್ ಕಮ್ಯೂನಿಕೇಷನ್ ಆ್ಯಂಡ್ ಸಾಫ್ಟ್ ಸ್ಕಿಲ್ ಹಾಗೂ ಆಡಳಿತ ಕನ್ನಡ ಹೀಗೆ ಏಳು ಮಾದರಿಯ ಕೌಶಲಾಭಿವೃದ್ಧಿ ತರಬೇತಿ ಪ್ರಸಕ್ತ ಸಾಲಿನಲ್ಲಿ ರಾಜ್ಯ ಮುಕ್ತ ವಿವಿಯ ವಿವಿಧ ಕೋರ್ಸ್ ಸೇರಿದ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಇದಕ್ಕೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ವಿಶ್ವವಿದ್ಯಾಲಯ ಅನುದಾನ ಆಯೋಗ ಕೂಡ ಒಪ್ಪಿಗೆ ನೀಡಿದೆ.
ಮುಕ್ತ ವಿವಿಯಲ್ಲಿ ಕೌಶಲ್ಯ ತರಬೇತಿ ಹೊಸ ಪರಿಕಲ್ಪನೆಯಾಗಿದೆ. ಅನ್ಯ ಕಾರಣಗಳಿಂದ ನಿರಂತರ ತರಗತಿಗೆ ಹೋಗಿ ಪದವಿ, ಸ್ನಾತಕೋತ್ತರ ಪದವಿ ಪಡೆಯಲು ಸಾಧ್ಯವಾಗದವರು ಮುಕ್ತ ವಿವಿಯ ಅನುಕೂಲ ಪಡೆದುಕೊಳ್ಳುತ್ತಾರೆ. ವರ್ಷಕ್ಕೆ ಒಂದು ಅಥವಾ ಎರಡು ಬಾರಿ ಏಳೆಂಟು ದಿನದ ತರಗತಿ ಹಾಗೂ ಕೆಲವು ಪ್ರಾಜೆಕ್ಟ್ ವರ್ಕ್ಸ್ ಮುಗಿಸಿ, ವಿವಿಯಿಂದ ನೀಡುವ ಪಠ್ಯ ಸಾಮಗ್ರಿ ಅಧ್ಯಯನ ಮಾಡಿ ನೇರವಾಗಿ ಪರೀಕ್ಷೆಗೆ ಹಾಜರಾಗುತ್ತಾರೆ. ಬೇರೆ ವಿವಿಗಳು ಇದಕ್ಕೆ ಭಿನ್ನವಾಗಿದೆ. ನಿತ್ಯ ತರಗತಿ ಇರುವುದರಿಂದ ಕೌಶಲಾಭಿವೃದ್ಧಿ ತರಬೇತಿ ವಿದ್ಯಾರ್ಥಿಗಳಿಗೆ ನೀಡಲು ಅನುಕೂಲ ಇರುತ್ತದೆ. ಮುಕ್ತ ವಿವಿಯಲ್ಲಿ ಕೌಶಲಾಭಿವೃದ್ಧಿ ತರಬೇತಿಯೂ ಸವಾಲಾಗಿದೆ. ಇದಕ್ಕೆ ಬೇಕಾದ ವೇಳಾಪಟ್ಟಿಯನ್ನು ವಿವಿಯ ಅಧಿಕಾರಿಗಳು ಸಿದ್ಧಪಡಿಸುತ್ತಿದ್ದಾರೆ. ಇದರ ಪಠ್ಯಕ್ರಮ ಆನ್‌ಲೈನ್‌ನಲ್ಲೇ ಅಪ್‌ಲೋಡ್ ಮಾಡುತ್ತಾರೆ. ವರ್ಷದಲ್ಲಿ ಒಮ್ಮೆ ಅಥವಾ ಎರಡು ಬಾರಿ 15 ರಿಂದ 25 ದಿನದ ತರಬೇತಿ ನೀಡಲು ಬೇಕಾದ ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಕೌಶಲ್ಯ ತರಬೇತಿ ಆಧಾರದಲ್ಲಿ ಅಭ್ಯರ್ಥಿಗಳಿಗೆ ಯಾವುದೇ ಪರೀಕ್ಷೆ ಇರುವುದಿಲ್ಲ. ಇದು ಸ್ವ ಉದ್ಯೋಗ ಅಥವಾ ಸಂಸ್ಥೆಗಳಲ್ಲಿ ಉದ್ಯೋಗ ಪಡೆಯಲು ಅನುಕೂಲವಾಗುವಂತೆ ನೀಡುವ ತರಬೇತಿಯಾಗಿದೆ. ಪ್ರತಿ ಹಂತದ ಕೌಶಲಾಭಿವೃದ್ಧಿ ಶಿಕ್ಷಣವು 2 ಶ್ರೇಯಾಂಕ ಹೊಂದಿರುತ್ತದೆ. ಅಂತಿಮ ವರ್ಷದಲ್ಲಿ ಪದವಿಯ ಜತೆಗೆ ಕೌಶಲಾಭಿವೃದ್ಧಿ ತರಬೇತಿ ಪಡೆದಿರುವ ಪ್ರಮಾಣ ಪತ್ರ ಕೂಡ ವಿತರಿಸಲಾಗುತ್ತದೆ. ವಿಷಯವಾರು ತಜ್ಞರಿಂದಲೇ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ ಎಂದು ವಿವಿಯ ಮೂಲ ಖಚಿತಪಡಿಸಿದೆ.
ಅಭ್ಯರ್ಥಿಗಳ ಔದ್ಯೋಗಿಕ ಅನುಕೂಲಕ್ಕಾಗಿ ಕೌಶಲಾಭಿವೃದ್ಧಿ ತರಬೇತಿ ಪ್ರಸಕ್ತ ಸಾಲಿನಿಂದ ಆರಂಭಿಸಿದ್ದೇವೆ. ಇದು ಎಲ್ಲರಿಗೂ ಕಡ್ಡಾಯವಾಗಿದೆ. ಮುಂದಿನ ವರ್ಷದಿಂದ ಕೌಶಲತೆ ಸಂಬಂಧಿಸಿದ ಡಿಪ್ಲೊಮಾ ಕೋರ್ಸ್‌ಗಳನ್ನು ತೆರೆಯುವ ಬಗ್ಗೆಯೂ ಚಿಂತನೆ ನಡೆಸುತ್ತಿದ್ದೇವೆ.
– ಪ್ರೊ.ಡಿ.ಶಿವಲಿಂಗಯ್ಯ, ಕುಲಪತಿ, ರಾಜ್ಯ ಮುಕ್ತ ವಿವಿ, ಮೈಸೂರು
– ರಾಜು ಖಾರ್ವಿ ಕೊಡೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್
By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್.ಯಡಿಯೂರಪ್ಪ ಭವಿಷ್ಯ
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.