ಬಿಬಿಎಂಪಿ ರೋಷಿಣಿ ಯೋಜನೆಗೆ ಚಾಲನೆ
Team Udayavani, Sep 27, 2018, 11:33 AM IST
ಬೆಂಗಳೂರು: ಬಿಬಿಎಂಪಿ ಶಾಲೆ, ಕಾಲೇಜುಗಳಲ್ಲಿ 21ನೇ ಶತಮಾನದ ಕಲಿಕಾ ಸೌಲಭ್ಯಗಳನ್ನು ಜಾರಿಗೊಳಿಸುವ “ಬಿಬಿಎಂಪಿ ರೋಷಿಣಿ’ ಯೋಜನೆಗೆ ಬುಧವಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಚಾಲನೆ ನೀಡಿದರು.
ಬಿಬಿಎಂಪಿ ವ್ಯಾಪ್ತಿಯ 156 ಶಾಲೆ, ಕಾಲೇಜುಗಳ ಸಮಗ್ರ ಅಭಿವೃದ್ಧಿ, ಗುಣಾತ್ಮಾಕ ಶಿಕ್ಷಣ ಹಾಗೂ 21ನೇ ಶತಮಾನದ ಕಲಿಕಾ ಸೌಲಭ್ಯಗಳನ್ನು ಒದಗಿಸಲು ಮೈಕ್ರೋಸಾಫ್ಟ್ ಕಂಪನಿ ಹಾಗೂ ಟೆಕ್ ಅನಂತ್ ಗಾರ್ಡ್ ಸಂಸ್ಥೆಗಳು ಯೋಜನೆ ರೂಪಿಸಿದ್ದು, ಸುಮಾರು 500 ಕೋಟಿ ರೂ. ವೆಚ್ಚದಲ್ಲಿ ಪಾಲಿಕೆಯ ಶಾಲೆ, ಕಾಲೇಜುಗಳಿಗೆ ಹೊಸ ರೂಪ ನೀಡಲಿವೆ.
ಖಾಸಗಿ ಶಾಲೆ, ಕಾಲೇಜುಗಳಲ್ಲಿ ದೊರೆಯುವ ಗುಣಮಟ್ಟದ ಶಿಕ್ಷಣ ಪಾಲಿಕೆಯ ಶಾಲೆಗಳ ಮಕ್ಕಳಿಗೂ ದೊರೆಯುವಂತೆ ಮಾಡುವ ಜತೆಗೆ, ಕ್ರೀಡೆ, ಸಾಂಸ್ಕೃತಿಕ, ವ್ಯಕ್ತಿತ್ವ ವಿಕಸನ, ಸಂವಹನ ಕೌಶಲ್ಯ, ಕಂಪ್ಯೂಟರ್ ಹೀಗೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲಾಗುತ್ತದೆ. ಜತೆಗೆ ಪಾಲಿಕೆ ಶಾಲೆ ಮಕ್ಕಳ ಬೌದ್ಧಿಕ ಹಾಗೂ ಶೈಕ್ಷಣಿಕ ಸಾಮರ್ಥ್ಯ ಹೆಚ್ಚಿಸಲು ಅಗತ್ಯ ಕಾರ್ಯಕ್ರಮಗಳನ್ನು ಸಂಸ್ಥೆ ರೂಪಿಸಲಿದೆ.
ಈ ಮೂಲಕ ಪಾಲಿಕೆಯ ಶಾಲೆ ಕಾಲೇಜುಗಳಿಗೆ ರಾಷ್ಟ್ರೀಯ ಮನ್ನಣೆ ದೊರೆಯಲಿದ್ದು, ಸಂಸ್ಥೆ ದತ್ತು ಪಡೆದಿರುವ ಶಾಲೆಗಳ ಸಮೀಕ್ಷೆ ನಡೆಸಿ ಪ್ರತಿಯೊಂದು ಶಾಲೆಗಳಿಗೆ ರ್‍ಯಾಂಕಿಂಗ್ ನೀಡಲಾಗುತ್ತದೆ. ಇದರಿಂದ ಶಾಲೆಗಳ ನಡುವೆ ಸ್ಪರ್ಧೆ ಏರ್ಪಟ್ಟು ಶಿಕ್ಷಣದ ಗುಣಮಟ್ಟ ಸುಧಾರಿಸಲಿದೆ ಎಂಬುದು ಸಂಸ್ಥೆಯ ಅಭಿಪ್ರಾಯ.
ವಿಶೇಷ ಸಾಫ್ಟ್ವೇರ್, ಮೊಬೈಲ್ ಆ್ಯಪ್: ಪಾಲಿಕೆಯ ಪ್ರತಿಯೊಂದು ಶಾಲೆ, ಕಾಲೇಜುಗಳಲ್ಲಿ ಮೇಲ್ವಿಚಾರಣೆಗಾಗಿ ವಿಶೇಷ ಸಾಫ್ಟ್ವೇರ್ ರೂಪಿಸಲಿದ್ದು, ಇದರ ನೆರವಿನಿಂದ ಹಿರಿಯ ಅಧಿಕಾರಿಗಳು ಕಚೇರಿಯಲ್ಲೇ ಕುಳಿತು ಯಾವ ಶಾಲೆಯಲ್ಲಿ ಯಾವ ಶಿಕ್ಷಕರು ಪಾಠ ಮಾಡುತ್ತಿದ್ದಾರೆ ಎಂಬುದು ತಿಳಿಯಬಹುದು. ಇದರೊಂದಿಗೆ ವಿಶೇಷ ಆ್ಯಪ್ ಸಹ ಸಿದ್ಧಪಡಿಸಲಿದ್ದು, ಆ ಮೂಲಕ ಪೋಷಕರಿಗೆ ತಮ್ಮ ಮಕ್ಕಳ ಪ್ರಗತಿ ವರದಿ ದೊರೆಯಲಿದೆ. ಶಿಕ್ಷಕರ ಮೇಲ್ವಿಚಾರಣೆಗೂ ಆ್ಯಪ್ ಸಹಕಾರಿಯಾಗಲಿದೆ.
ಮೈಕ್ರೋಸಾಫ್ಟ್ ಜತೆಗೂಡಿ ಜಾರಿಗೊಳಿಸುತ್ತಿರುವ ಬಿಬಿಎಂಪಿ ರೋಷಿಣಿ ಯೋಜನೆಯಿಂದಾಗಿ ಬಿಬಿಎಂಪಿ ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ಡಿಜಿಟಲ್ ಶಿಕ್ಷಣ ದೊರೆಯಲಿದೆ. ಜತೆಗೆ ಶಾಲೆಯಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಹೊಂದಲಿದ್ದು, ಮುಂದಿನ 5 ವರ್ಷಗಳಲ್ಲಿ ಬಿಬಿಎಂಪಿ ಶಿಕ್ಷಣ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಿಸಲಾಗುತ್ತದೆ.
ಕಾರ್ಯಕ್ರಮದಲ್ಲಿ ಮೇಯರ್ ಆರ್.ಸಂಪತ್ ರಾಜ್, ಶಾಸಕರಾದ ಉದಯ ಗರುಡಾಚಾರ್, ಮಂಜುನಾಥ್, ಶರವಣ, ಉಪ ಮೇಯರ್ ಪದ್ಮಾವತಿ ನರಸಿಂಹಮೂರ್ತಿ, ಆಡಳಿತ ಪಕ್ಷದ ನಾಯಕ ಶಿವರಾಜು, ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ, ಜೆಡಿಎಸ್ ನಾಯಕಿ ನೇತ್ರಾ ನಾರಾಯಣ್, ಆಯುಕ್ತ ಎನ್.ಮಂಜುನಾಥ ಪ್ರಸಾದ್, ವಿಶೇಷ ಆಯುಕ್ತ ರವೀಂದ್ರ, ಹೆಚ್ಚುವರಿ ಸಹಾಯಕ ಆಯುಕ್ತೆ ಕೆ.ಆರ್.ಪಲ್ಲವಿ ಹಾಜರಿದ್ದರು.
ಕೆಲಸ ಮಾಡಲು ಕೋರ್ಟ್ ಹೇಳೇಕಾ? “ನ್ಯಾಯಾಲಯದಿಂದ ಹೇಳಿಸಿಕೊಂಡೇ ನೀವು ಕೆಲಸ ಮಾಡಬೇಕೇ… ಪ್ರಾಮಾಣಿಕವಾಗಿ ನಿಮ್ಮ ಜವಾಬ್ದಾರಿ ನಿರ್ವಹಿಸಲು ನಿಮಗೇನು ಸಮಸ್ಯೆ?’ ಎಂದು ಬಿಬಿಎಂಪಿ ಅಧಿಕಾರಿಗಳನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತೀವ್ರ ತರಾಟೆಗೆ ತೆಗೆದುಕೊಂಡರು.
ಬಿಬಿಎಂಪಿ ರೋಷಿಣಿ ಯೋಜನೆಗೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನುಗ್ಗಿದ ನೀರನ್ನು ಹೊರಗೆ ಹಾಕುವ ಮಕ್ಕಳ ಕಷ್ಟ ನಿಮಗೆ ತಿಳಿಯುವುದಿಲ್ಲವೇ? ಬೆಂಗಳೂರಿನ ಸ್ವತ್ಛತೆ, ರಸ್ತೆಗುಂಡಿ ಸೇರಿದಂತೆ ಪ್ರತಿಯೊಂದನ್ನೂ ಕೋರ್ಟ್ ಹೇಳಿದ ನಂತರವೇ ಮಾಡಬೇಕೇ? ಉಪ ಮುಖ್ಯಮಂತ್ರಿಗಳು ಮೂರ್‍ನಾಲ್ಕು ಬಾರಿ ಸಭೆ ನಡೆಸಿ ಸೂಚನೆ ಕೊಟ್ಟರೂ ನೀವು ಕೆಲಸ ಮಾಡುವುದಿಲ್ಲ. ಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಂಡು ಕೆಲಸ ಮಾಡಬೇಕೇನು? ಪ್ರಾಮಾಣಿಕವಾಗಿ ನಿಮ್ಮ ಜವಾಬ್ದಾರಿ ನಿರ್ವಹಿಸಲು ಏನಾದರೂ ಸಮಸ್ಯೆ ಇದೆಯೇ? ಎಂದು ಪ್ರಶ್ನಿಸಿದರು.
ಜಾಗತಿಕ ಮಟ್ಟದಲ್ಲಿ ಬೆಂಗಳೂರಿಗೆ ಉತ್ತಮ ಹೆಸರಿದೆ. ಭಾರತ ಎಂದರೆ ಬೆಂಗಳೂರು ಎಂದು ವಿದೇಶಗಳ ಜನರು ಹೇಳುತ್ತಾರೆ. ಇಂತಹ ನಗರದ ಹೆಸರನ್ನು ಉಳಿಸಲು ಬಿಬಿಎಂಪಿ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ಇದೇ ವೇಳೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಬೆಂಗಳೂರು ಅಭಿವೃದ್ಧಿಗಾಗಿ 10 ಸಾವಿರ ಕೋಟಿ ಬಜೆಟ್‌ಗೆ ಅನುಮೋದನೆ ನೀಡಿದರೂ ಸಮರ್ಪಕವಾಗಿ ಕೆಲಸ ಮಾಡದಿದ್ದರೆ ಹೇಗೆ? ಪಾಲಿಕೆ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸದ ಪರಿಣಾಮ ರಸ್ತೆಗುಂಡಿಗಳನ್ನು ಮುಚ್ಚುವಂತೆ ನ್ಯಾಯಾಲಯ ಸೂಚಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನಿಮ್ಮ ಮಕ್ಕಳು ಕನ್ನಡ ಮೀಡಿಯಮ್ಮಾ
ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಭಾಷೆ ಕಡ್ಡಾಯಗೊಳಿಸುವುದನ್ನು ವಿರೋಧಿಸುವ ಕನ್ನಡ ಪರ ಹೋರಾಟಗಾರರು, ತಮ್ಮ ಮಕ್ಕಳನ್ನು ಯಾವ ಶಾಲೆಗಳಲ್ಲಿ ಓದಿಸುತ್ತಿದ್ದಾರೆ ಎಂಬುದನ್ನು ತಿಳಿಸಲಿ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದರು.
ಬಿಬಿಎಂಪಿ ವ್ಯಾಪ್ತಿಯ 156 ಶಾಲೆ ಮತ್ತು ಕಾಲೇಜುಗಳ ಶಿಕ್ಷಣ ವ್ಯವಸ್ಥೆ ಉನ್ನತೀಕರಿಸಲು ಮೈಕ್ರೋಸಾಫ್ಟ್ ಸಂಸ್ಥೆ ಜತೆಗೆ ರೂಪಿಸಿರುವ “ಬಿಬಿಎಂಪಿ ರೋಷಣಿ’ ಯೋಜನೆಗೆ ಚಾಲನೆ ನೀಡಿದ ಅವರು, “ಕನ್ನಡ, ಕನ್ನಡ ಎಂದು ಬೊಬ್ಬೆ ಹೊಡೆಯುವ ಕೆಲ ಕನ್ನಡ ಸಂಘಟನೆಗಳು, ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಭಾಷೆ ಕಡ್ಡಾಯಗೊಳಿಸುವುದನ್ನು ವಿರೋಧಿಸುತ್ತಿವೆ. ಆ ಸಂಘಟನೆಗಳ ಮುಖಂಡರು ತಮ್ಮ ಮಕ್ಕಳನ್ನು ಯಾವ ಶಾಲೆಗಳಲ್ಲಿ ಓದಿಸುತ್ತಿದ್ದಾರೆ ಎಂಬುದು ನನಗೂ ಗೊತ್ತಿದೆ,’ ಎಂದು ತಿರುಗೇಟು ನೀಡಿದರು.
ಕನ್ನಡ ನಮ್ಮ ಮಾತೃಭಾಷೆ. ಆದರೆ, ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬರೂ ಆಂಗ್ಲ ಭಾಷೆ ಕಲಿಯಬೇಕಿದೆ. ಹೀಗಾಗಿ ಸರ್ಕಾರಿ ಶಾಲೆಗಳಲ್ಲಿ ಕನ್ನಡದ ಜತೆಗೆ ಆಂಗ್ಲ ಭಾಷೆ ಕಲಿಸಲು ಸರ್ಕಾರ ಬದ್ಧವಾಗಿದೆ. ಇದನ್ನು ವಿರೋಧಿಸುವ ಹೋರಾಟಗಾರರು ತಮ್ಮ ಮಕ್ಕಳು ಯಾವ ಶಾಲೆಗಳಲ್ಲಿ ಓದುತ್ತಿದ್ದಾರೆಂದು ಜಾಹೀರಾತು ನೀಡಲಿ.
ಅವರ ಮಕ್ಕಳು ಮಾತ್ರ ಇಂಗ್ಲಿಷ್ ಕಲಿಯಬೇಕೇ? ಬಡ ಹಾಗೂ ಕೂಲಿ ಕಾರ್ಮಿಕರ ಮಕ್ಕಳು ಇಂಗ್ಲಿಷ್ ಕಲಿಯುವುದು ಬೇಡವೇ? ಎಂದು ಕಿಡಿಕಾರಿದರು. ಕನ್ನಡವನ್ನು ಉಳಿಸಿಕೊಳ್ಳುವ ಮೂಲಕ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವ ವಾತಾವರಣ ಸೃಷ್ಟಿಸಲು ಸರ್ಕಾರ ಸಿದ್ಧವಿದೆ. ಹೀಗಾಗಿ ಯಾರು ಎಷ್ಟೇ ವಿರೋಧ ಮಾಡಿದರೂ ಸರಿ, ಸರ್ಕಾರಿ ಶಾಲೆ ಮಕ್ಕಳಿಗೆ ಇಂಗ್ಲಿಷ್ ಕಲಿಸುವ ನಿರ್ಧಾರದಿಂದ ಹಿಂದೆ ಸರಿಯುವ
ಯೋಜನೆಗೆ ಹಲವು ನಗರಗಳ ಆಸಕ್ತಿ ಸರ್ಕಾರಿ ಶಾಲೆಗಳಲ್ಲಿ 21ನೇ ಶತಮಾನ ಕಲಿಕಾ ಸೌಲಭ್ಯಗಳನ್ನು ಕಲ್ಪಿಸುವ ಮೈಕ್ರೋ ಸಾಫ್ಟ್ನ ರೋಷಿಣಿ ಯೋಜನೆ ಜಾರಿಗೆ ಹಲವು ನಗರಗಳು ಆಸಕ್ತಿ ತೋರಿದ್ದವು. ಆದರೆ, ಶೀಘ್ರ ಅನುಷ್ಠಾನಕ್ಕೆ ಆಸಕ್ತಿ ತೋರಿರಲಿಲ್ಲ. ಈ ನಡುವೆ ಸಂಸ್ಥೆಯ ಪ್ರತಿನಿಧಿಗಳು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಅವರನ್ನು ಭೇಟಿ ಮಾಡಿ ಯೋಜನೆ ಕುರಿತು ತಿಳಿಸಿದಾಗ, ಆಯುಕ್ತರು ಸಂಸ್ಥೆ ಪ್ರತಿನಿಧಿಗಳಿಗೆ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳನ್ನು ಭೇಟಿ ಮಾಡಿಸಿದ್ದರು. ಜತೆಗೆ ಪಾಲಿಕೆ ಸಭೆಯಲ್ಲಿ ಶೀಘ್ರವೇ ಒಪ್ಪಂದ ಮಾಡಿ ಕೊಳ್ಳುವ ಕುರಿತು ನಿರ್ಣಯ ಕೈಗೊಂಡಿದ್ದರಿಂದ ಯೋಜನೆ ಪಾಲಿಕೆಗೆ ಲಭಿಸಿದೆ.
ಪಾಲಿಕೆ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಸರ್ಕಾರದ ಕನಸು ಮೈಕ್ರೋಸಾಫ್ಟ್ ಸಂಸ್ಥೆಯ ಮೂಲಕ ನನಸಾಗುತ್ತಿದೆ. ಈ ಶಾಲೆಗಳಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಸರ್ಕಾರಿ ಹಾಗೂ ಪಾಲಿಕೆ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳ ಕುರಿತು ಪರಿಶೀಲಿಸಲಾಗುವುದು.
ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ
ಬಡತನ ರೇಖೆಗಿಂತ ಕೆಳಗಿರುವ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬಿಬಿಎಂಪಿ ಶಾಲೆ ಸೇರುತ್ತಾರೆ. ಯೋಜನೆಯಿಂದಾಗಿ ಮುಂದಿನ ದಿನಗಳಲ್ಲಿ ಖಾಸಗಿ ಶಾಲೆಗಳಲ್ಲಿ ಓದುವ ಮಕ್ಕಳು ಸಹ ಪಾಲಿಕೆ ಶಾಲೆಗಳತ್ತ ತಿರುಗಿ ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ.
ಡಾ.ಜಿ.ಪರಮೇಶ್ವರ, ಉಪಮುಖ್ಯಮಂತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್ ಡಿಕ್ಕಿ: ಮೊಪೆಡ್ ಸವಾರ ಸಾವು
Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!
Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು
IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್ ಹೂಡಾ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.