ಎರಡು ಕೊಲೆ ರಹಸ್ಯ ಭೇದಿಸಿದ ಪೊಲೀಸರು
Team Udayavani, Sep 27, 2018, 11:39 AM IST
ಬೆಂಗಳೂರು: ಮಹಿಳೆಯೊಬ್ಬರ ಆತ್ಮಹತ್ಯೆ ಘಟನೆಯ ಜಾಡು ಹಿಡಿದು ಹೊರಟ ಬೆಂಗಳೂರು ಗ್ರಾಮಾಂತರ ವಿಭಾಗದ
ಪೊಲೀಸರು, ಕೋಟ್ಯಂತರ ರೂ. ಮೌಲ್ಯದ ಜಮೀನು ಕಬಳಿಸಲು ನಡೆದ ಎರಡು ಕೊಲೆ ಪ್ರಕರಣಗಳನ್ನು ರಹಸ್ಯ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜತೆಗೆ, ಜಮೀನು ಕಬಳಿಕೆ ಸಂಚಿನ ಫಲವಾಗಿ ಮಾಡಿದ ಕೊಲೆ ರಹಸ್ಯ ಪತ್ನಿಗೆ ತಿಳಿದ ಕಾರಣ ಆಕೆಯನ್ನೂ ಕೊಂದ ಪತಿ, ವೈದ್ಯ, ಸಂಘಟನೆಯೊಂದರ ಮುಖಂಡ ಸೇರಿ 9 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಳ್ಳತೂರು ರಮೇಶ್, ಸಾಹುಕಾರ್ ಶಂಕರಪ್ಪ, ನಿಂಬೆಕಾಯಿಪುರದ ವೆಂಕಟಸ್ವಾಮಿ, ಡಾ.ಕುಲಕರ್ಣಿ, ಕೇಶವಮೂರ್ತಿ, ವೆಂಕಟೇಶ್, ಎಸ್.ಕೃಷ್ಣಮೂರ್ತಿ, ಧನಂಜಯ್, ಕೃಷ್ಣಪ್ಪ ಬಂಧಿತರು.
ರಹಸ್ಯ ಬಯಲಾಗಿದ್ದು ಹೇಗೆ? : ನಿಂಬೆಕಾಯಿ ಪುರದ ಸುಧಾರಾಣಿ ಸೆ.18ರಂದು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ಬಗ್ಗೆ ಅನುಮಾನಗಳಿದ್ದ ಕಾರಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ.ಶಿವಕುಮಾರ್ ಸೂಚನೆ ಮೇರೆಗೆ ಡಿವೈಎಸ್‌ಪಿ ಕುಮಾರ್, ಸುಧಾರಾಣಿ ಪತಿ ವೆಂಕಟಸ್ವಾಮಿಯನ್ನು ವಿಚಾರಣೆ ನಡೆಸಿದಾಗ, ಪತ್ನಿಯನ್ನು ತಾನೇ ಕೊಂದಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ. ಜತೆಗೆ, ಈ ಹಿಂದೆ ದಿಕ್ಕುದೆಸೆಯಿಲ್ಲದೆ ಬಸ್ ನಿಲ್ದಾಣದಲ್ಲಿ ಮಲಗಿದ್ದ ಕೃಷ್ಣಪ್ಪ ಎಂಬಾತನ ಕೊಲೆ ಹಾಗೂ ಕೋಟ್ಯಂತರ ರೂ. ಮೌಲ್ಯದ ಜಮೀನು ಕಬಳಿಕೆ ಸಂಚು ಕೂಡ ಬಯಲಾಗಿದೆ.
ಸಂಚಿನ ಸೂತ್ರಧಾರ ರಮೇಶ್: ಬೆಂಗಳೂರು ಪೂರ್ವ ತಾಲೂಕಿನ ಬೆಳ್ಳತ್ತೂರು ಗ್ರಾಮದ ಸರ್ವೆ ನಂ.81ರಲ್ಲಿರುವ ಒಂದು ಎಕರೆ 8 ಗುಂಟೆ ಜಮೀನಿನ ಮೂಲ ಮಾಲೀಕ ನಂಜಪ್ಪ ಎಂಬಾತ ಎನ್ನಲಾಗಿದೆ. ಅವರ ಹೆಸರಿನಲ್ಲಿ ದಾಖಲೆಗಳಿವೆ. ಆದರೆ, ನಂಜಪ್ಪ ಆತನ ಕುಟುಂಬದವರು ಹಲವು ವರ್ಷಗಳಿಂದ ಕಂಡು ಬಂದಿಲ್ಲ. ಹೀಗಾಗಿ ಜಮೀನು ಕಬಳಿಸಲು ಸಂಚು ರೂಪಿಸಿದ ರಮೇಶ್, ನಂಜಪ್ಪ ಎಂದು ಬಿಂಬಿಸಲು ವೆಂಕಟರಮಣಪ್ಪ ಎಂಬಾತನ್ನು ಕರೆತಂದು ಅವರ ಪೋಟೋ ತೆಗೆಸಿ ನಂಜಪ್ಪ ಎಂದು ಬಿಂಬಿಸಿ ವಾಸಧೃಢೀಕರಣ ಪತ್ರ ಸೃಷ್ಟಿಸುತ್ತಾನೆ. ಅಷ್ಟರಲ್ಲಿ ಇದೇ ಜಮೀನು ಕಬಳಿಕೆಗೆ ಹಲವರು ಯತ್ನಿಸಿರುವುದು ರಮೇಶ್‌ಗೆ ಗೊತ್ತಾಗುತ್ತದೆ.
ಅಂತಿಮ ಹಂತದಲ್ಲಿ ಜಮೀನು ಕೈ ತಪ್ಪಲಿದೆ ಎಂದು ಆತಂಕಗೊಂಡ ರಮೇಶ್, ನಂಜಪ್ಪನ ಹೆಸರಿನಲ್ಲಿರುವ ವೆಂಕಟರಮಣಪ್ಪ ಸಾಯುವ ಮುನ್ನ ತನ್ನ ಹೆಸರಿಗೆ ಜಮೀನು ಬರೆದುಕೊಟ್ಟಿದ್ದರು ಎಂದು ಬಿಂಬಿಸಲು, ಆತನನ್ನೇ ಕೊಲೆ ಮಾಡಲು ನಿರ್ಧರಿಸುತ್ತಾನೆ. ಆದರೆ, ಇದಕ್ಕೆ ವೆಂಕಟರಮಣಪ್ಪನವರ ಮಗ ವೆಂಕಟೇಶ್ ಸುತಾರಂ ಒಪ್ಪುವುದಿಲ್ಲ.
ಇದರಿಂದ ಕಂಗಾಲಾದ ರಮೇಶ್ ಮತ್ತೂಬ್ಬ ಆರೋಪಿ ಶಂಕರಪ್ಪನ ಸಹಾಯ ಕೋರುತ್ತಾನೆ. ಇದಕ್ಕೆ ಸಹಕರಿಸುವ ಶಂಕರಪ್ಪ, ಮನೆಯಲ್ಲಿ ಜಗಳವಾಡಿಕೊಂಡು ಬಂದಿದ್ದ ಮುಳಬಾಗಿಲು ಮೂಲದ ವೆಂಕಟರಮಣಪ್ಪ ನನ್ನೇ ಹೋಲುವ ಕೃಷ್ಣಪ್ಪ ಎಂಬಾತನನ್ನು ಕೆಲಸ ಕೊಡಿಸುವುದಾಗಿ ನಂಬಿಸಿ ಕರೆತರುತ್ತಾರೆ.
ಬಳಿಕ ಆತನಿಗೆ ಮದ್ಯದಲ್ಲಿ ಬೇಧಿ ಮಾತ್ರೆ ಬೆರೆಸಿ ತೀವ್ರ ಅಸ್ವಸ್ಥನಾಗಿ ಮೃತಪಡುವಂತೆ ಮಾಡುತ್ತಾರೆ. ಬಳಿಕ ಆತನನ್ನು ಮಾರಗೊಂಡನಹಳ್ಳಿಯ ಅಮೃತ್ ಮೆಡಿಕಲ್‌ಗೆ ದಾಖಲಿಸಿ ಪೂರ್ವ ನಿಯೋಜಿತ ಸಂಚಿನಂತೆ ಡಾ. ಕುಲಕರ್ಣಿಯಿಂದ ಮರಣ ಪ್ರಮಾಣಪತ್ರವನ್ನು ಪಡೆದುಕೊಳ್ಳುತ್ತಾರೆ.
ಆರೋಪಿಗಳಿಗೆ ಕಾಡಿತ್ತು ದೆವ್ವದ ಭಯ
ಅನಾಮಿಕ ಕೃಷ್ಣಪ್ಪನ ಅಂತ್ಯ ಸಂಸ್ಕಾರ ಪೂರ್ಣಗೊಳಿಸಿದ ಆರೋಪಿಗಳು ಆತ ದೆವ್ವವಾಗಿ ಕಾಡಬಹುದು ಎಂದು ಭಯಗೊಂಡಿದ್ದಾರೆ. ಬಳಿಕ ಆತನ ಚಿತಾ ಭಸ್ಮವನ್ನು ಶ್ರೀರಂಗಪಟ್ಟಣದಲ್ಲಿ ವಿಸರ್ಜಿಸಿದ್ದಾರೆ. ಜತೆಗೆ, ಆತನ ಸಾವಿಗೆ ಸಂಬಂಧಿಸಿದ ಧಾರ್ಮಿಕ ವಿಧಿವಿಧಾನಗಳನ್ನು ಪೂರ್ಣಗೊಳಿಸುವಂತೆ ವೆಂಕಟಸ್ವಾಮಿಗೆ ಸೂಚಿಸಿದ್ದರು.
ಇತ್ತೀಚೆಗೆ ಮನೆಗೆ ತಡವಾಗಿ ಹೋಗುತ್ತಿದ್ದ ಗಂಡ ವೆಂಕಟಸ್ವಾಮಿಯನ್ನು ಪತ್ನಿ ಸುಧಾರಾಣಿ ಪ್ರಶ್ನಿಸಿದಾಗ ಕೃಷ್ಣಪ್ಪನ ಕೊಲೆ ಬಗ್ಗೆ ಹೇಳಿದ್ದ. ನಂತರ ಸೆ.18ರಂದು ಕಂಠಪೂರ್ತಿ ಕುಡಿದು ಬಂದಿದ್ದ ವೆಂಕಟಸ್ವಾಮಿ, ಪತ್ನಿಗೆ ಕೊಲೆ ವಿಷಯ ತಿಳಿದಿದೆ. ಬೇರೆ ಯಾರಿಗಾದರೂ ಹೇಳಿಬಿಡುತ್ತಾಳೆ ಎಂದು ಭಯಗೊಂಡು ಆಕೆಯ ಮೇಲೆ ಹಲ್ಲೆ ನಡೆಸಿ, ಕೊಲೆಗೈದು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಿಂಬಿಸಿದ್ದ. ಅನುಮಾನಗೊಂಡು ಆತನನ್ನು ವಿಚಾರಣೆಗೊಳಿಸಿದಾಗ ಇಡೀ ಪ್ರಕರಣ ಬಯಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.