ಪುರಾತನ ವೈಭವವನ್ನು ಸಾರುವ ಬಾದಾಮಿ
Team Udayavani, Sep 27, 2018, 3:32 PM IST
ಗೊತ್ತಿಲ್ಲದ ಊರುಕೇರಿಯಲ್ಲಿ ಏಕಾಂಗಿಯಾಗಿ ಸುತ್ತುವುದು ನೂರಾರು ನೆನಪುಗಳ ಜತೆಗೆ ಹೊಸಹೊಸ ಅನುಭವಗಳನ್ನೂ ಕಟ್ಟಿಕೊಡುತ್ತದೆ. ಬಹುಕಾಲದ ಬಾದಾಮಿ ಪ್ರವಾಸದ ಯೋಜನೆಯೊಂದನ್ನು ಏಕಾಏಕಿ ಕಾರ್ಯರೂ ಪಕ್ಕೆ ತಂದಾಗ ಏಕಾಂಗಿಯಾಗಿಯೇ ಹೊರಟು ನಿಂತಾಗ ಬೇಸರವಾದರೂ ಪ್ರವಾಸ ಮುಗಿಸಿ ಹಿಂತಿರುಗಿದಾಗ ಬದುಕಿನ ಅತ್ಯಂತ ಸುಂದರ ಕ್ಷಣವನ್ನು ತನ್ನದಾಗಿಸಿಕೊಂಡ ಸಂತೃಪ್ತಿ ಜತೆಯಾಗಿತ್ತು.
ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಬಾದಾಮಿಗೆ ಭೇಟಿ ಕೊಡಬೇಕು, ಸುತ್ತಮುತ್ತಲಿನ ಪ್ರವಾಸಿ ತಾಣವನ್ನು ವೀಕ್ಷಿಸಬೇಕು ಎಂದು ಹಲವು ಬಾರಿ ಯೋಚಿಸಿ ವಿಫಲನಾಗಿದ್ದೆ. ಕೊನೆಗೊಂದು ದಿನ ಏನಾದರಾಗಲಿ ಎಂದು ಹೊರಟೇಬಿಟ್ಟೆ. ಅಂತರ್ಜಾಲದಲ್ಲಿ ಹೋಗುವ ದಾರಿ, ಉಳಿದು ಕೊಳ್ಳುವ ವ್ಯವಸ್ಥೆ, ಮತ್ತಿತರ ಅಗತ್ಯ ಮಾಹಿತಿಗಳನ್ನು ಜಾಲಾಡಿ ಮುಂಬಯಿಯ ಕಲ್ಯಾಣ್ ಜಂಕ್ಷನ್‌ನಿಂದ ಬಾಗಲಕೋಟೆಗೆ ರೈಲು ಟಿಕೆಟ್ ಪಡೆದು ಜುಲೈ ತಿಂಗಳ ಮಳೆಗಾಲದ ಒಂದು ರಾತ್ರಿ ಹತ್ತೂವರೆಗೆ ಪ್ರಯಾಣ ಆರಂಭಿಸಿ, ಬೆಳಗ್ಗೆ 10 ಗಂಟೆಗೆ ರೈಲಿನ ಹೊರಗೆ ಕಣ್ಣಳತೆಗೆ ಎಟುಕುತ್ತಿದ್ದ ಹಸುರು ತುಂಬಿದ ಬಯಲು ಪ್ರದೇಶದಲ್ಲಿ ಇಳಿದೆ.
ಬಳಿಕ ಬಾದಾಮಿಯತ್ತ ಪ್ಯಾಸೆಂಜರ್ ರೈಲಿನಲ್ಲಿ 30 ರೂ. ಟಿಕೆಟ್ ಪಡೆದು ಪ್ರಯಾಣ ಆರಂಭವಾಯಿತು. ಬಾಗಲಕೋಟೆಯಿಂದ ಬಾದಾಮಿಗೆ ಇರುವುದು ಕೇವಲ 36 ಕಿ.ಮೀ. ಬಾದಾಮಿ ರೈಲು ನಿಲ್ದಾಣದಿಂದ ಪೂರ್ವ ನಿಗದಿತ ಯೋಜನೆಯಂತೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಹೊಟೇಲ್ ಒಂದರಲ್ಲಿ ಮಧ್ಯಾಹ್ನ ತಲುಪಿ ಫ್ರೆಶ್ ಆಗಿ, ಊಟ ಮುಗಿಸಿ ಬಳಿಕ ಆಟೋ ರಿಕ್ಷಾವೊಂದನ್ನು ಹಿಡಿದು ಬಾದಾಮಿ ಹಾಗೂ ಸುತ್ತಮತ್ತಲಿನ ಸ್ಥಳಗಳ ವೀಕ್ಷಣೆಗೆ ತೆರಳಿದೆ.
ಮನ ಮೋಹಕ ಪ್ರಕೃತಿ, ರಸ್ತೆಯ ಇಕ್ಕೆಲಗಳ ಹೊಲಗಳಲ್ಲಿ ಕಾಣಸಿಗುವ ಬಾಳೆ, ಕಬ್ಬು, ಮೆಕ್ಕೆಜೋಳಗಳು ನೋಡಲು ಕಣ್ಣಿಗೆ ಹಬ್ಬದಂತಿದ್ದು, ಅಲ್ಲಲ್ಲಿ ಕಾಣಸಿಗುವ ನೈಸರ್ಗಿಕ ಕಲ್ಲುಗಳನ್ನು ನೋಡುತ್ತ ಮೊದಲು ಸಾಗಿದ್ದು ಬನಶಂಕರಿಯತ್ತ.
ಪುರಾಣಗಳನ್ನು ಸಾರುವ ದೇವಾಲಯ
ಬಾದಾಮಿಯಿಂದ 5 ಕಿ.ಮೀ. ದೂರದಲ್ಲಿ ಚೋಳಗುಡ್ಡ ಎಂಬ ಗ್ರಾಮದಲ್ಲಿ ಬನಶಂಕರಿ ದೇವಾಲಯವಿದೆ. ಸುಮಾರು 17ನೇ ಶತಮಾನದ ಈ ಮಂದಿರದ ಗೋಡೆ, ಮೇಲ್ಛಾವಣಿಗಳು ಸಂಪೂರ್ಣ ಕಲ್ಲು ಚಪ್ಪಡಿಗಳಿಂದ ನಿರ್ಮಿತವಾಗಿವೆ. ಗರ್ಭ ಗುಡಿಯಲ್ಲಿ ನಾಲ್ಕಡಿ ಎತ್ತರದ ಕರಿಕಲ್ಲಿನ ಬನಶಂಕರಿ ಪ್ರತಿಮೆಯಿದೆ. ದೇವಾಲಯದ ಎದುರು ಹರಿಶ್ಚಂದ್ರ ತೀರ್ಥವೆಂಬ ಆಳವಾದ ಪುಷ್ಕರಣಿಯೊಂದಿದೆ. ಹಿಂದೆ ಇದರಲ್ಲಿ ನೀರು ಬತ್ತುತ್ತಿರಲಿಲ್ಲವಂತೆ. ಆದರೆ ಈಗ ನೀರಿಲ್ಲದೆ ಮೈದಾನದಂತಿದೆ. ಇದನ್ನೆಲ್ಲ ಕಣ್ತುಂಬಿಕೊಂಡು ಇಲ್ಲಿಂದ ಹಿಮ್ಮುಖವಾಗಿ ಬಾದಾಮಿ ಗುಹಾಲಯದತ್ತ ಪ್ರಯಾಣ ಆರಂಭಿಸಿದೆ.
ಐತಿಹಾಸಿಕತೆಯ ಮೆರುಗು
ಚಾಲುಕ್ಯರ ರಾಜಧಾನಿಯಾಗಿದ್ದ ಬಾದಾಮಿ ಎರಡು ಕೆಂಪು ಕಲ್ಲುಗಳ ಬೆಟ್ಟಗಳ ಮಧ್ಯೆ ಇದೆ. ಇದರ ಸುತ್ತ ಮುತ್ತ ಮಾಲೆಗುತ್ತಿ, ಲಕುಲೀಶ, ಭೂತನಾಥ ದೇವಾಲಯಗಳಿವೆ. ಕೋಟೆಗೆ ಎದುರಾಗಿ ಕೆಂಪು ಕಲ್ಲು ಬೆಟ್ಟವನ್ನು ಕೊರೆದು ಇಲ್ಲಿನ ಇತಿಹಾಸ ಪ್ರಸಿದ್ಧ ಗುಹಾಲಯಗಳನ್ನು ನಿರ್ಮಿಸಲಾಗಿದೆ. ಸುಮಾರು 182 ಮೆಟ್ಟಿಲುಗಳನ್ನೇರಿ ಇಲ್ಲಿರುವ ಒಟ್ಟು 4 ಗುಹೆಗಳನ್ನು ನೋಡಬಹುದಾಗಿದೆ. ಒಟ್ಟು 4 ಗುಹೆಗಳಿದ್ದು, ಕಲ್ಲನ್ನು ಮೇಣವಾಗಿಸಿ ಕೆತ್ತಲಾಗಿದೆ ಎನ್ನಲಾಗುತ್ತದೆ. ಹೀಗಾಗಿ ಇವುಗಳನ್ನು ಮೇಣಬಸದಿಗಳೆಂದೂ ಕರೆಯಲಾಗುತ್ತದೆ.
ಗುಹಾ ಮಂದಿರಗಳನ್ನು ವಿಶೇಷ ಬಂಡೆಗಳಲ್ಲಿ ನಿರ್ಮಿಸಲಾಗಿದ್ದು, ಮೊದಲನೆಯದ್ದು ಶೈವ ಗುಹೆಯಾಗಿದೆ. ಅದರೊಳಗೆ ಶಿವಲಿಂಗವಿದೆ. ಎರಡು ಹಾಗೂ ಮೂರನೆಯದ್ದು ವೈಷ್ಣವ ದೇವಾಲಯಗಳಾಗಿವೆ. ಈ ಎರಡೂ ಗುಹೆಗಳ ಒಳಗೋಡೆಗಳಲ್ಲಿ ವೈಷ್ಣವನ ಅವತಾರಗಳನ್ನು ಕೆತ್ತಲಾಗಿದೆ. ಗರ್ಭಗುಡಿಯೊಳಗೆ ಜೈನ ತೀರ್ಥಂಕರರು ಹಾಗೂ ಬಾಹುಬಲಿಯ ಶಿಲಾ ಕೆತ್ತನೆಗಳಿವೆ. ಸುಮಾರು 6ನೇ ಶತಮಾನದ ಚಿತ್ರಗಳನ್ನು ಇಲ್ಲಿನ ಮೇಲ್ಛಾವಣಿಯಲ್ಲಿ ಕಾಣಬಹುದು.
ಗುಹಾಲಯದ ಮೇಲೆ ಕುಳಿತಾಗ ಕೆಳಗಿನ ಬಾದಾಮಿ ನಗರ ಹಾಗೂ ವಿಶಾಲ ಅಗಸ್ತ್ಯತೀರ್ಥಕೆರೆಯ ವಿಹಂಗಮ ನೋಟ ಕಣ್ಣಿಗೆ ಹಬ್ಬವನ್ನು ನೀಡು ವಂತಿದೆ. ಇಲ್ಲಿ ಗುಹಾದರ್ಶನಕ್ಕೆ 15 ರೂ. ಪ್ರವೇಶ ದರವಿದೆ.
ಕೋಟೆಯ ಸಮೀಪದಲ್ಲಿರುವ ಪುರಾತತ್ವ ವಸ್ತು ಸಂಗ್ರಹಾಲಯಕ್ಕೆ 5 ರೂ. ಪ್ರವೇಶ ದರವನ್ನು ಪಾವತಿಸಿ ಇಲ್ಲಿರುವ 4 ಗ್ಯಾಲರಿಗಳಲ್ಲಿ ಚಾಲುಕ್ಯರ ಶಿಲ್ಪಕಲಾಕೃತಿಗಳು, ಗುಹಾಲಯಗಳು, ಶಿಲಾಶಾಸನಗಳು, ಜೈನ ದೇವಾಲಯಗಳ ಸಮಗ್ರ ಮಾಹಿತಿ ಇದೆ. ಇಲ್ಲಿ ಬೆಳಗ್ಗೆ 10ರಿಂದ ಸಂಜೆ 6 ಗಂಟೆಯ ವರೆಗೆ ಸಂದರ್ಶಿಸಬಹುದಾಗಿದೆ.
ಇವನ್ನೆಲ್ಲ ವೀಕ್ಷಿಸಿ ಸಂಜೆಯಾಗುತ್ತಿದ್ದಂತೆ ಮರಳಿ ವಸತಿಗೃಹವನ್ನು ಸೇರಿದೆ. ಮರುದಿನ ಬೆಳಗ್ಗೆ ಟ್ಯಾಕ್ಸಿಯೊಂದನ್ನು ಗೊತ್ತುಪಡಿಸಿ ಹತ್ತಿರದ ಪಟ್ಟದಕಲ್ಲು, ಐಹೊಳೆಗಳನ್ನು ಭೇಟಿ ನೀಡಿ ಬಾದಾಮಿಯ ಚಾಲುಕ್ಯರ ವೈಭವವನ್ನು ಕಣ್ತುಂಬಿಕೊಂಡು ಮರಳಿ ಮುಂಬಯಿಯತ್ತ ಪ್ರಯಾಣ ಆರಂಭಿಸಿದೆ.
ರೂಟ್ ಮ್ಯಾಪ್
· ಮಂಗಳೂರಿನಿಂದ ಬಾಗಲಕೋಟೆಗೆ 503 ಕಿ.ಮೀ. ದೂರ.
· ರೈಲು, ಬಸ್ ಸೌಲಭ್ಯವಿದೆ.
· ಮೊದಲೇ ಬುಕ್ಕಿಂಗ್ ಮಾಡಿದರೆ ಊಟ, ವಸತಿ ಸಮಸ್ಯೆಯಿಲ್ಲ.
· ಬಾಗಲಕೋಟೆಯಿಂದ ಬಾದಾಮಿಗೆ -36 ಕಿ.ಮೀ.
· ಸುತ್ತಮುತ್ತಲಿನ ಸ್ಥಳ ವೀಕ್ಷಣೆಗೆ ಸಾಕಷ್ಟು ಆಟೋ, ಟ್ಯಾಕ್ಸಿ ವ್ಯವಸ್ಥೆ ಇದೆ.
ರಮಣ್ ಶೆಟ್ಟಿ ರೆಂಜಾಳ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.