ಐಹೊಳೆ ಗ್ರಾಮ ಸ್ಥಳಾಂತರಕ್ಕೆ ಮರುಜೀವ
Team Udayavani, Sep 27, 2018, 3:56 PM IST
ಬಾಗಲಕೋಟೆ: ವಿಶ್ವವಿಖ್ಯಾತ ಐತಿಹಾಸಿಕ ಪ್ರವಾಸಿ ಸ್ಥಳವಾಗಿರುವ ಐಹೊಳೆ ಗ್ರಾಮ ಸ್ಥಳಾಂತರಕ್ಕೆ ಜಿಲ್ಲಾಡಳಿತ ಮುಂದಾಗಿದೆ. ಸುಮಾರು 30 ವರ್ಷಗಳ ಬೇಡಿಕೆಗೆ ಈವರೆಗೆ ಕೇವಲ ಭರವಸೆಯ ಮಾತುಗಳು ಕೇಳಿ ಬಂದಿದ್ದು, ಇದೀಗ ಜಿಲ್ಲಾಡಳಿತವೇ ಮುತುವರ್ಜಿ ವಹಿಸಿದ್ದು, ಬುಧವಾರ ಜಿಲ್ಲಾಧಿಕಾರಿ ಕೆ.ಜಿ. ಶಾಂತಾರಾಮ್ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.
ದೇಶದಲ್ಲೇ ಹಿಂದೂ ದೇವಾಲಯಗಳ ನಿರ್ಮಾಣ ಪ್ರಯೋಗಶಾಲೆಯೆಂದೇ ಖ್ಯಾತಿಯಾಗಿರುವ ಐಹೊಳೆ ಗ್ರಾಮ ಸ್ಥಳಾಂತರಕ್ಕೆ ಕಳೆದ ಹಲವಾರು ವರ್ಷಗಳಿಂದ ಪ್ರಯತ್ನ ನಡೆದಿರುವ ಹಿನ್ನೆಲೆಯಲ್ಲಿ ವಿಶ್ವವಿಖ್ಯಾತ ಐತಿಹಾಸಿಕ ಸ್ಮಾರಕಗಳ ಸಂಪೂರ್ಣ ಸಂರಕ್ಷಣೆಗಾಗಿ ಐಹೊಳೆ ಗ್ರಾಮ ಸ್ಥಳಾಂತರ ಪ್ರಕ್ರಿಯೆಗೆ ಪ್ರಯತ್ನಗಳು ನಡೆಯುತ್ತಲೇ ಇವೆ.
ಅ.1ಕ್ಕೆ ಗ್ರಾಮ ಸಭೆ: ಐಹೊಳೆ ಗ್ರಾಮ ಸ್ಥಳಾಂತರಕ್ಕೆ ಎಲ್ಲ ರೀತಿಯ ಸಿದ್ದತೆ ಆರಂಭಿಸುವ ಪ್ರಕ್ರಿಯೆಗಾಗಿ ಪ್ರಾಥಮಿಕವಾಗಿ ಅಕ್ಟೋಬರ 1ರಂದು ಐಹೊಳೆ ಗ್ರಾಮದಲ್ಲಿ ಗ್ರಾಮಸಭೆ ಜರುಗಿಸಲು ನಿರ್ಣಯ ಕೈಗೊಳ್ಳಲಾಗಿದೆ.ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ, ಇಲಾಖೆಗಳ ಹಿರಿಯ ಅಧಿಕಾರಿಗಳ ಸಭೆ ಜರುಗಿಸಿ ಮಾತನಾಡಿದ ಜಿಲ್ಲಾಧಿಕಾರಿ, ಗ್ರಾಮೀಣ ಜನಜೀವನಕ್ಕೆ ಅಗತ್ಯವಾಗಿರುವ ಕೃಷಿ ಚಟುವಟಿಕೆಗಳ ಜೀವನಾಧಾರಿತ ಜನಜೀವನ ಗಮನದಲ್ಲಿಟ್ಟುಕೊಂಡೇ ನೂತನ ಗ್ರಾಮ ನಿರ್ಮಾಣ ಮಾಡಬೇಕಿದೆ ಎಂದರು.
ಈಗಾಗಲೇ 51 ಎಕರೆ ಭೂಮಿ ಗುರುತಿಸಲಾಗಿದ್ದು, ಇನ್ನೂ ಹೆಚ್ಚಿನ ಭೂಮಿ ಲಭ್ಯತೆಯನ್ನು ಪರಿಗಣಿಸಲಾಗುವುದು. ಒಂದು ಅದ್ಬುತ ಗ್ರಾಮೀಣ ಶೈಲಿಯ ಗ್ರಾಮ ನಿರ್ಮಾಣಕ್ಕೆ ಬೇಕಾಗುವ ಎಲ್ಲ ರೀತಿಯ ಸೌಲಭ್ಯಗಳ ಬಗ್ಗೆಯೂ ಚಿಂತಿಸಲಾಗುವುದು ಎಂದು ತಿಳಿಸಿದರು.ಉಪವಿಭಾಗಾಧಿಕಾರಿ ಎಚ್.ಜಯ ನೇತೃತ್ವದಲ್ಲಿ ತಹಶೀಲ್ದಾರ್, ಭೂ ದಾಖಲೆಗಳ ಉಪನಿರ್ದೇಶಕರು, ಆಹಾರ ಇಲಾಖೆ, ಪ್ರವಾಸೋದ್ಯಮ ಹಾಗೂ ಪುರಾತತ್ವ ಇಲಾಖೆ ಅಧಿಕಾರಿಗಳು ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಅವರು ಸೂಚಿಸಿದರು.
ಗ್ರಾಮ ಸಭೆಯಲ್ಲಿ ಚರ್ಚಿಸಬೇಕಾದ ಅಗತ್ಯ ವಿಷಯಗಳ ಬಗ್ಗೆ ಪಟ್ಟಿ ಮಾಡಿ ಗ್ರಾಮಸ್ಥರ ಅಹವಾಲು ಬೇಡಿಕೆಗಳನ್ನು ಹಾಗೂ ಪರ್ಯಾಯ ವ್ಯವಸ್ಥೆಯನ್ನು ಸ್ಥೂಲವಾಗಿ ಪರಿಶೀಲಿಸಿ ಸೆ. 29ರೊಳಗಾಗಿ ಅಧಿಕಾರಿಗಳು ಸಿದ್ಧರಾಗಿರಬೇಕು. ಹೆಚ್ಚುವರಿ ಜಿಲ್ಲಾ ಧಿಕಾರಿ ಅಶೋಕ ದುಡಗುಂಟಿ ಹಾಗೂ ಜಿಪಂ ಉಪಕಾರ್ಯದರ್ಶಿ ಅಮರೇಶ ನಾಯಕ ಸಹಯೋಗ ನೀಡಿ ಮೇಲ್ವಿಚಾರಣೆ ನಡೆಸುವಂತೆ ತಿಳಿಸಿದರು.
ಪುರಾತತ್ವ ಇಲಾಖೆ ಅಧಿಕಾರಿ ಡಾ| ಎ.ವಿ.ನಾಗನೂರ ಮಾತನಾಡಿ, 2006ರಲ್ಲಿ 9 ದೇವಾಲಯ ಸಂಕೀರ್ಣಗಳ ಸುತ್ತಲಿನ 144 ಆಸ್ತಿಗಳ (ಮನೆಗಳು) ಸ್ಥಳಾಂತರಕ್ಕೆ ಪಟ್ಟಿ ಮಾಡಲಾಗಿತ್ತು. ಆದರೆ ಇಡೀ ಗ್ರಾಮವನ್ನೇ ಸ್ಥಳಾಂತರ ಮಾಡುವಂತೆ ಗ್ರಾಮಸ್ಥರಿಂದ ಕೂಗು ಆರಂಭಗೊಂಡ ಹಿನ್ನೆಲೆಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಗ್ರಾಮ ಸ್ಥಳಾಂತರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಐಹೊಳೆ ಗ್ರಾಮದ ಐತಿಹಾಸಿಕ ಅಭಿವೃದ್ಧಿಗಾಗಿ 942 ಮನೆಗಳ ಸ್ಥಳಾಂತರ, ಪುನರ್‌ವಸತಿ ಹಾಗೂ ಮೂಲ ಸೌಕರ್ಯ ಒದಗಿಸುವ ಕುರಿತಂತೆ 5041 ಲಕ್ಷ ರೂ. ಅನುದಾನ ಮಂಜೂರಾತಿ ನೀಡಿದೆ ಎಂದರು. 2012-13ರಲ್ಲಿ ಪುನಃ ಸಮೀಕ್ಷೆ ಮಾಡಿ 1052 ಮನೆಗಳ ಸ್ಥಳಾಂತರಕ್ಕೆ ನಿರ್ಧರಿಸಲಾಯಿತು. 488 ಆಸ್ತಿಗಳ 4(1) ಪ್ರಕ್ರಿಯೆ ಮುಗಿದು, 6(1) ಪ್ರಕ್ರಿಯೆ ಕೈಗೊಳ್ಳಬೇಕಿತ್ತು. ಅಲ್ಲಿಂದ ಪ್ರಕ್ರಿಯೆ ಮುಂದುವರಿದಿಲ್ಲ ಎಂದು ವಿವರಿಸಿದರು.
ರಾಷ್ಟ್ರ ಮಟ್ಟದಲ್ಲಿ ಐಹೊಳೆ ದೇವಾಲಯಗಳ ಪ್ರಾಮುಖ್ಯತೆಯನ್ನು ಮನಗಂಡು ಅಧಿಕಾರಿಗಳು ಗ್ರಾಮಸ್ಥರನ್ನು ಮನವೊಲಿಸಿ ಕಾರ್ಯ ನಡೆಸಬೇಕಿದೆ. ಭೂಮಿ ಸಮೀಕ್ಷೆ ಪರಿಹಾರ, ನಿವೇಶನರಹಿತರ ಪಟ್ಟಿ, ಆಸ್ತಿಪಾಸ್ತಿಗಳ ಮೌಲ್ಯ ಮುಂತಾದವುಗಳು ಮುಂದಿನ ಹಂತದ್ದಾಗಿದ್ದು, ಸದ್ಯ ಅಕ್ಟೋಬರ 1ರಂದು ಗ್ರಾಮಸಭೆಯಲ್ಲಿ ಗ್ರಾಮಸ್ಥರ ಪ್ರತಿಯೊಂದು ಬೇಕು ಬೇಡಿಕೆಗಳನ್ನು ಕ್ರೋಢೀಕರಿಸಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಈಗಾಗಲೇ ವಸತಿ ಯೋಜನೆಯಡಿ ಹತ್ತಿರವೆ ಆಶ್ರಯ ಯೋಜನೆಯಡಿ ಹಲವರಿಗೆ ನಿವೇಶನ, ಮನೆ ಒಗದಿಸಲಾಗಿದೆಯೆಂದು ತಹಶೀಲ್ದಾರ್ ಸಂಪಗಾವಿ ಸಭೆಗೆ ತಿಳಿಸಿದರು. ಐಹೊಳೆ ಗ್ರಾಮದಲ್ಲಿ ಒಟ್ಟು 693 ಬಿಪಿಎಲ್ ಪಡಿತರ ಚೀಟಿಗಳಿದ್ದು, ಎಪಿಎಲ್ ಸೇರಿ ಒಟ್ಟು 800 ಪಡಿತರ ಚೀಟಿದಾರರು ಇದ್ದಾರೆ ಎಂದು ಆಹಾರ ಇಲಾಖೆ ಉಪ ನಿರ್ದೇಶಕರ ಕಂಕಣವಾಡಿ ಸಭೆಗೆ ತಿಳಿಸಿದರು. ಅಧಿಕಾರಿಗಳು ಇಚ್ಚಾಶಕ್ತಿಯಿಂದ ಬದ್ದತೆಯಿಂದ ಐಹೊಳೆ ಗ್ರಾಮ ಸ್ಥಳಾಂತರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಬೇಕಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ನವೆಂಬರ್ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.