“ಇಲ್ಲ’ ಎನ್ನಲೂ ಎದೆಗಾರಿಕೆ ಬೇಕು…
Team Udayavani, Oct 2, 2018, 6:00 AM IST
“ಇಲ್ಲ’ದ ವೃತ್ತಾಂತ ದೊಡ್ಡದು. ರಾಜ್ಯ ಕೊಡುವುದಿಲ್ಲ ಎಂಬ “ಇಲ್ಲ’ದ ಪರಿಣಾಮದಿಂದ ಮಹಾಭಾರತ ಘಟಿಸುತ್ತೆ. ರಾಮ “ನಿನ್ನನ್ನು ಒಪ್ಪುವುದಿಲ್ಲ’ ಎಂದಾಗ ಸೀತೆ ಅಗ್ನಿಯ ರೆಕ್ಕೆಗಳನ್ನು ಎಣಿಸಲು ಹೊರಡುತ್ತಾಳೆ. “ಬಿಟ್ಟುಕೊಡುವುದಿಲ್ಲ’ ಎಂಬ ಭಾರತದ ಒಂದೇ ಒಂದು ಹೇಳಿಕೆಯಿಂದ ಕಾಶ್ಮೀರ ನಮ್ಮೊಂದಿಗೇ ಹೆಜ್ಜೆ ಹಾಕುತ್ತಿದೆ…
“ಇಲ್ಲ’, “ಬೇಡ’… ಮೇಲ್ನೋಟಕ್ಕೆ ನಕಾರಾತ್ಮಕವಾಗಿ ಕಾಣುವ ಇವೆರಡು ಪದಗಳ ಶಕ್ತಿ ಅಂತಿಂಥದ್ದೇ? ಅನೇಕ ಸಿನಿಮಾಗಳಲ್ಲಿ ಈ ದೃಶ್ಯ ನೋಡಿರುತ್ತೀರಿ. ಒಬ್ಬಳು ಖಡಕ್ ಅಧಿಕಾರಿ. ಅದ್ಯಾವುದೋ ಪತ್ರ ಹಿಡಿದು, ಗೂಂಡಾಗಳಂತಿರುವ ನಾಲ್ಕಾರು ಮಂದಿ ಅವಳೆದುರು ನಿಂತಿರುತ್ತಾರೆ. ಆ ಪತ್ರಕ್ಕೆ ಸಹಿಹಾಕುವಂತೆ ಬಲವಂತ ಮಾಡುತ್ತಾರೆ. ಅದನ್ನು ಓದಿ “ನೋ’ ಎನ್ನುತ್ತಾ ಬದಲಾಗುವ ಆಕೆಯ ಮುಖದ ಚಹರೆಯೇ ಮುಂದಿನ ಕತೆ ಹೇಳುತ್ತೆ. “ನಾನು ಅಂಥವನು, ಇಂಥವನು, ಅವರು ಗೊತ್ತು, ಇವರು ಗೊತ್ತು’ ಎನ್ನುವ ಪ್ರಭಾವಿ ಅಸ್ತ್ರಗಳ ಮಾತಿಗೂ, ಆಕೆ ಜಗ್ಗುವುದಿಲ್ಲ.
“ಇಲ್ಲ’ ಎನ್ನುವ ಒಂದೇ ಒಂದು ಶಬ್ದ ಅವಳನ್ನು ಸವಾಲಿಗೆ ತಳ್ಳಿತು. ಆ ಮಾತಿನ ಯುದ್ಧ ಸಂಜೆಯಾದರೂ ಕೊನೆಯಾಗುವ ಲಕ್ಷಣಗಳಿಲ್ಲ. ಬಂದ ಕರೆಗಳಿಗೆಲ್ಲ ತಾನೇಕೆ ಸಹಿ ಮಾಡಲಾಗುತ್ತಿಲ್ಲ ಮತ್ತು ಇದನ್ನು ಒಪ್ಪಿ ಸಹಿ ಮಾಡಿದರೆ ಇದೇ ಕಾರಣಕ್ಕೆ ಈಗಾಗಲೇ ಪೆಂಡಿಗ್ ಆಗಿರುವ ನೂರಾರು ಸಮಾಜ ವಿರೋಧಿ ಕಡತಗಳನ್ನೂ ಒಪ್ಪಬೇಕಾಗುತ್ತದೆ ಎನ್ನುವುದನ್ನು ತಿಳಿಸಿ ಹೇಳುತ್ತಲೇ ಇದ್ದಾಳೆ. ಇವಳ ಉತ್ತರಗಳು ಅವರ ಕಣ್ತೆರೆಸುತ್ತಿಲ್ಲ. ಕೊನೆಗೆ ತಾನು ಸಹಿ ಮಾಡುವುದೇ ಇಲ್ಲವೆಂದು, ಅಧಿಕಾರ ತೊರೆದು ಹೊರಡುತ್ತಾಳೆ.
“ಇಲ್ಲ’ದ ವೃತ್ತಾಂತ ದೊಡ್ಡದು. ರಾಜ್ಯ ಕೊಡುವುದಿಲ್ಲ ಎಂಬ “ಇಲ್ಲ’ದ ಪರಿಣಾಮದಿಂದ ಮಹಾಭಾರತ ಘಟಿಸುತ್ತೆ. ರಾಮ “ನಿನ್ನನ್ನು ಒಪ್ಪುವುದಿಲ್ಲ’ ಎಂದಾಗ ಸೀತೆ ಅಗ್ನಿಯ ರೆಕ್ಕೆಗಳನ್ನು ಎಣಿಸಲು ಹೊರಡುತ್ತಾಳೆ. “ಬಿಟ್ಟುಕೊಡುವುದಿಲ್ಲ’ ಎಂಬ ಭಾರತದ ಒಂದೇ ಒಂದು ಹೇಳಿಕೆಯಿಂದ ಕಾಶ್ಮೀರ ನಮ್ಮೊಂದಿಗೇ ಹೆಜ್ಜೆ ಹಾಕುತ್ತಿದೆ. ಇದೇ “ಇಲ್ಲ’ದ ನಿರಾಕರಣೆಯ ಪರಿಣಾಮದಿಂದ ಈ ನೆಲದಲ್ಲಿ ಅಂಬೇಡ್ಕರ್ ಚಳವಳಿ ರೂಪಿಸಿದ್ದನ್ನು, ಬಹುದೊಡ್ಡ ಸಾಮಾಜಿಕ ಪರಿವರ್ತನೆಯೆಂದು ನಾವೆಲ್ಲ ನಂಬಿದ್ದೇವೆ. ಮಹಾತ್ಮ ಗಾಂಧೀಜಿ ಚಿತ್ರಿಸಿದ ಮೂರು ಕೋತಿಗಳೂ “ಇಲ್ಲ’ ಎನ್ನುವ ಮೂಲಕವೇ ನಮಗೆ ಆದರ್ಶವಲ್ಲವೇ?
ಹೀಗೆ “ಇಲ್ಲ’ ಎಂಬ ಪದವು ಕಾಲಕಾಲಕ್ಕೆ, ಕಾಲಪುರುಷರಿಂದ ಸಾಮಾನ್ಯರ ವರೆಗೂ ಆವರಿಸಿ, ಒಂದು ಕ್ರಾಂತಿಯನ್ನೋ, ಮಹತ್ತರ ಘಟನೆಯನ್ನೋ ಸೃಷ್ಟಿಸುತ್ತಲೇ ಬಂದಿದೆ. ಆದರೆ, ಹಾಗೆ “ಇಲ್ಲ’ ಎನ್ನಲು ಅದೆಂಥ ಎದೆಗಾರಿಕೆ ಬೇಕೆಂದು ನಿಮಗೆ ಗೊತ್ತೇ?
ಒಂದೆಡೆ ಅರುಣ್ ಶೌರಿ ಹೇಳುತ್ತಾರೆ… it happens only in India! ನಾವು ಒಂಥರಾ ಕಪ್ಪೆಗಳಂತೆ ಅನೇಕ ಸಲ ಯೋಚಿಸಿಬಿಡುತ್ತೇವೆ. ಒಂದು ಕಪ್ಪೆಯನ್ನು ಬಿಸಿ ನೀರಿನ ಕಡಾಯಿಗೆ ಹಾಕಿದಾಗ ಅದು ಗಲಿಬಿಲಿಗೊಳ್ಳುತ್ತೆ. ತನ್ನೆಲ್ಲಾ ಶಕ್ತಿ ಬಳಸಿ ಕಡಾಯಿಯಿಂದ ಹೊರಕ್ಕೆ ಹಾರಲು ಯತ್ನಿಸುತ್ತೆ. ಸ್ವಲ್ಪ ಸುಟ್ಟ ಗಾಯಗಳಾದರೂ ಲೆಕ್ಕಿಸುವುದಿಲ್ಲ. ಜೀವನ್ಮರಣ ಹೋರಾಡಿ ಬಚಾವಾಗುತ್ತದೆ. ಆದರೆ, ಅದೇ ಕಪ್ಪೆಯನ್ನು ತಣ್ಣೀರಿನ ಹಂಡೆಯಲ್ಲಿ ಹಾಕಿ ನಿಧಾನವಾಗಿ ಕಾಯಲು ಬಿಟ್ಟರೆ, ಮೊದಲಿಗೆ ಹಾಯಾಗಿ ತಣ್ಣೀರಿನಲ್ಲಿದ್ದ ಅದಕ್ಕೆ, ನೀರು ಬೆಚ್ಚಗಾಗುತ್ತಿದ್ದಂತೆ ಇನ್ನಷ್ಟು ಆರಾಮವೆನಿಸುತ್ತದೆ. ಹಾಗೇ ಬೆಚ್ಚಗಾಗುತ್ತಾ ಹೋಗುತ್ತಿದ್ದಂತೆ ಅದಕ್ಕೆ ಎಚ್ಚರವಾಗುತ್ತದೆ. ಅಷ್ಟೊತ್ತಿಗಾಗಲೇ ನೀರು ಕುದಿಯುವ ಮಟ್ಟ ತಲುಪಿ ಹಾರಲು ಶಕ್ತಿ ಕಳಕೊಳ್ಳುತ್ತದೆ. ಒಂದು ವೇಳೆ ಕಪ್ಪೆಯ ಮನಸ್ಸಿಗೆ, “ಇಲ್ಲ… ಈ ಅನ್ಯಾಯವನ್ನು ಸಹಿಸಿಕೊಳ್ಳುವುದಿಲ್ಲ’ ಎಂಬ ಭಾವನೆ ಬಂದುಬಿಟ್ಟಿದ್ದಿದ್ದರೆ, ಅದು ಜೀವ ಉಳಿಸಿಕೊಳ್ಳುತ್ತಿತ್ತು. ನಮ್ಮ ದೇಶದಲ್ಲಿ ಕೆಲವರು ಹೀಗೆಯೇ ಯೋಚಿಸುವವರು!
ಇದನ್ನು ಶೌರಿಯೊಬ್ಬರೇ ಹೇಳುವುದೂ ಅಲ್ಲ. ಕನಕದಾಸ, ಪುರಂದರದಾಸ, ಬುದ್ಧ, ಬಸವಣ್ಣನವರೆಲ್ಲ ಈ “ಇಲ್ಲ’ ಎನ್ನುವ ವ್ಯಕ್ತಿತ್ವದಿಂದಲೇ ಸಮಾಜದ ಕಟ್ಟುಪಾಡುಗಳಿಗೆ ಸಡ್ಡು ಹೊಡೆದವರು. ಇದಕ್ಕೂ ಮುನ್ನ ಅವರೂ ಒತ್ತಡ ಅನುಭವಿಸಿರುತ್ತಾರೆ.
“ಇಲ್ಲ’ ಎಂದು ಹೇಳುವವರಷ್ಟೇ ಮಹಾತ್ಮರೋ, ದೊಡ್ಡ ಮನುಷ್ಯರೋ ಆಗುವುದಿಲ್ಲ. ಅಲಿಬಾಬಾ ಎಂಬ ಪ್ರತಿಷ್ಠಿತ ಇ ಕಾಮರ್ಸ್ ಸಂಸ್ಥೆಯನ್ನು ಹುಟ್ಟುಹಾಕಿದ ಜಾಕ್ ಮಾ, 30 ಕೆಲಸಗಳಿಗೆ ಅರ್ಜಿ ಹಾಕಿದವರು. ಆ ಕಂಪನಿಗಳೆಲ್ಲ “ನಿನಗೆ ಕೆಲಸ ಇಲ್ಲ’ ಅಂದಿದ್ದಕ್ಕೆ, ಇವರು ಹೊಸತನ್ನು ಅನ್ವೇಷಿಸಿ, ಸಾಧಕರೇ ಆಗಿಬಿಟ್ಟರು.
ಪರಿಸ್ಥಿತಿಗೆ ತಕ್ಕಂತೆ “ಇಲ್ಲ’ಗಳು ನಮಗೆ ಎದುರುಗೊಳ್ಳುತ್ತವೆ. ನಿಮ್ಮ ವ್ಯಕ್ತಿತ್ವ ಸರಿಯಿದ್ದು, ನಿಮ್ಮಲ್ಲಿ ಬೆಟ್ಟದಂಥ ಆತ್ಮವಿಶ್ವಾಸವಿದ್ದರೆ, ಯಾರಾದರೂ ನಿಮಗೆ “ಇಲ್ಲ’ ಎಂದರೆ, ಬೇಸರಿಸಿಕೊಳ್ಳಬೇಡಿ. ಆ ಪದವೇ ನಿಮಗೆ ಯಶಸ್ಸಿನ ಬಾಗಿಲು.
ಅನ್ಯಾಯವನ್ನು ವಿರೋಧಿಸಿ ಇಲ್ಲವೆನ್ನಲೂ ಗುಂಡಿಗೆ ಗಟ್ಟಿ ಇರಬೇಕು. ಏಕೆ ಗೊತ್ತೇ? ಕ್ರಾಂತಿಗಳು, ಬಹುದೊಡ್ಡ ಘಟನೆಗಳು, ಮಹಾನ್ ಪರಿವರ್ತನೆಗಳ ಹಿಂದೆ ಇರುವುದೇ “ಇಲ್ಲ’ ಎನ್ನುವ ಎರಡಕ್ಷರದ ಕಿಡಿ. ನಿಮ್ಮ ಮುಂದೆ ಈಗ ಯಾವ “ಇಲ್ಲ’ವಿದೆ? ನೀವು ಯಾರಿಗೆ “ಇಲ್ಲ’ ಎಂದಿದ್ದೀರಿ? ಒಮ್ಮೆ ಹಿಂತಿರುಗಿ ನೋಡಿ, ಆ “ಇಲ್ಲ’ದ ನಂತರ ಹೊಸಪುಟವೊಂದು ತೆರೆದಿರುತ್ತದೆ.
ಮಂಜುಳಾ ಡಿ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.