ತೀರ್ಪುಗಳು ಮಾನವತೆಯ ಪ್ರತೀಕವಾಗಿರಲಿ
Team Udayavani, Oct 2, 2018, 6:00 AM IST
ನವದೆಹಲಿ: ಭಾರತೀಯ ನ್ಯಾಯಾಂಗವು ಜಗತ್ತಿನಲ್ಲಿಯೇ ಅತ್ಯಂತ ಶಕ್ತಿಶಾಲಿ ನ್ಯಾಯಾಂಗವಾಗಿದ್ದು, ಇಲ್ಲಿ ಹೊರಬರುವ ತೀರ್ಪುಗಳು ಮಾನವೀಯತೆಯ ಪ್ರತೀಕವಾಗಿರಬೇಕೆಂದು ಸುಪ್ರೀಂ ಕೋರ್ಟ್‌ನ ನಿರ್ಗಮಿತ ಮುಖ್ಯ ನ್ಯಾಯಮೂರ್ತಿ (ಸಿಜೆಐ) ದೀಪಕ್ ಮಿಶ್ರಾ ಕರೆ ನೀಡಿದ್ದಾರೆ.
ಸೋಮವಾರ ಕಡೆಯ ಕಲಾಪ ನಡೆಸಿದ ಅವರಿಗಾಗಿ ಏರ್ಪಡಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, “”ಇತಿಹಾಸವು ಪ್ರಜೆಗಳ ಬಗ್ಗೆ ಕೆಲವೊಮ್ಮೆ ಕರುಣಾಮಯಿಯಾಗಿ, ಮಗದೊಮ್ಮೆ ನಿಷ್ಕರುಣಿ ಯಾಗಿ ಇರಬಲ್ಲದು. ಆದರೆ, ಒಬ್ಬ ನ್ಯಾಯಮೂರ್ತಿಯಾಗಿ ನಾನು ಜನರನ್ನು ಅವರ ಇತಿಹಾಸದಿಂದ ಅಳೆಯಲು ಯತ್ನಿಸದೆ, ಅವರ ನಡೆ-ನುಡಿ, ಅವರು ಹೊಂದಿರುವ ದೃಷ್ಟಿ ಕೋನಗಳ ಮೂಲಕ ಅವಲೋಕಿಸುವ ಪ್ರಯತ್ನ ಮಾಡಿದ್ದೇನೆ. ತೀರ್ಪು ನೀಡುವಾಗ ನ್ಯಾಯದೇವತೆಯ ತಕ್ಕಡಿಯಂತೆ ಸಮತೋಲಿತ ತೀರ್ಮಾನ ಕೈಗೊಂಡಿದ್ದೇನೆ” ಎಂದರು.
ನ್ಯಾಯಮೂರ್ತಿಗಳಿಗೆ, ನ್ಯಾಯಾಧೀಶರಿಗೆ ಸವಾಲೆನಿಸುವಂಥ ಪ್ರಕರಣಗಳನ್ನು ಸಮರ್ಥವಾಗಿ ಎದುರಿಸುವಂಥ ಅವಕಾಶಗಳು ಇರುವುದರಿಂದಲೇ ಭಾರತೀಯ ನ್ಯಾಯಾಂಗ ವಿಶ್ವದಲ್ಲೇ ಅತ್ಯಂತ ಸದೃಢ ನ್ಯಾಯಾಂಗವಾಗಿದೆ ಎಂದ ಅವರು, ಇದನ್ನು ಮತ್ತಷ್ಟು ಗಟ್ಟಿಗೊಳಿಸುವ ಸಾಮರ್ಥ್ಯ ಇಂದಿನ ಯುವ ವಕೀಲರಿಗಿದೆ ಎಂದು ಅಭಿಪ್ರಾಯಪಟ್ಟರು.
ಸಿಜೆಐ ಭಾಷಣಕ್ಕೂ ಮೊದಲು ಮಾತನಾಡಿದ ನಿಯೋಜಿತ ಸಿಜೆಐ ರಂಜನ್ ಗೊಗೊಯ್, “”ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ಅಸಾಧಾರಣ ನ್ಯಾಯಮೂರ್ತಿ” ಎಂದು ಕೊಂಡಾಡಿದರಲ್ಲದೆ, ತಮ್ಮ ಸೇವಾವಧಿಯಲ್ಲಿ ನ್ಯಾ. ಮಿಶ್ರಾ ಅವರು ಜನರ ಮೂಲಭೂತ ಹಕ್ಕುಗಳ ರಕ್ಷಣೆಯನ್ನು ಮಾಡಿದ್ದು, ತಾವು ಅವರು ನಡೆದ ಹಾದಿಯಲ್ಲೇ ಮುನ್ನಡೆಯುವುದಾಗಿ ಭರವಸೆ ನೀಡಿದರು.
ಹಾಡು ನಿಲ್ಲಿಸಿದರು!
ಕಲಾಪದ ವೇಳೆ, ವಕೀಲರೊಬ್ಬರು ಸಿಜೆಐ ಅವರಿಗೆ ಹಾರೈಸುವ ಹಿಂದಿ ಚಿತ್ರಗೀತೆಯೊಂದನ್ನು ಗದ್ಗದಿತ ಧ್ವನಿಯಲ್ಲಿ ಹಾಡಲು ಶುರು ಮಾಡಿದರು. 1950ರ ದಶಕದ, ಸಾಮಾನ್ಯವಾಗಿ ಹುಟ್ಟುಹಬ್ಬದ ಶುಭಕಾಮನೆ ವ್ಯಕ್ತಪಡಿಸಲು ಹಾಡಲಾಗುವ ಹಾಡು ಅದು. “”ತುಮ್ ಜಿಯೋ ಹಝಾರೋ ಸಾಲ್….” ಎಂದು ಸಣ್ಣಗಿನ ಧ್ವನಿಯಲ್ಲಿ ಅವರು ಹಾಡಲಾರಂಭಿಸಿದ ಕೂಡಲೇ ಅವರನ್ನು ತಡೆದ ಸಿಜೆಐ,””ಸದ್ಯಕ್ಕೆ ನಾನು ಹೃದಯದಿಂದ ನಿಮ್ಮ ಗೀತೆಗೆ ಈ ರೀತಿಯಾಗಿ ಸ್ಪಂದಿಸಿದ್ದೇನೆ. ಸಂಜೆ ವೇಳೆಗೆ (ಬೀಳ್ಕೊಡುಗೆ ಸಮಾರಂಭದಲ್ಲಿ) ಮನಸ್ಸಿನಿಂದ ಇದಕ್ಕೆ ಉತ್ತರಿಸುವೆ” ಎಂದು ತಿಳಿಸಿದರು.
ಮಧ್ಯರಾತ್ರಿಯ ಎರಡು ವಿಚಾರಣೆ
ಭಾರತದ ನ್ಯಾಯಾಂಗದ ಇತಿಹಾಸದಲ್ಲೇ 2 ಬಾರಿ ಸುಪ್ರೀಂನಲ್ಲಿ ಮಧ್ಯರಾತ್ರಿ ವಿಚಾರಣೆಗಳು ನಡೆದಿದ್ದು, ಈ ಎರಡೂ ವಿಚಾರಣೆಗಳಿಗೆ ನ್ಯಾ. ದೀಪಕ್ ಮಿಶ್ರಾ ಸಾಕ್ಷಿಯಾಗಿದ್ದರು. 2015ರ ಜು.30ರಂದು ಜಾರಿಗೊಳ್ಳಬೇಕಿದ್ದ 1993ರ ಮುಂಬೈ ಸರಣಿ ಸ್ಫೋಟದ ಪಾತಕಿ ಯಾಕೂಬ್ ಮೆಮನ್‌ನ ಗಲ್ಲು ಶಿಕ್ಷೆಯನ್ನು ತಡೆಯಲು ಜು. 29ರ ರಾತ್ರಿ ನಡೆದ ವಿಚಾರಣೆ ಇವುಗಳಲ್ಲೊಂದು. ಮತ್ತೂಂದು, ಕರ್ನಾಟಕದ 2018ರ ಚುನಾವಣೆ ನಂತರ, ಕಾಂಗ್ರೆಸ್-ಜೆಡಿಎಸ್ ಒಟ್ಟಾಗಿ ಸರ್ಕಾರ ರಚಿಸಲು ಮುಂದಾಗಿದ್ದರೂ, ಅತಿ ಹೆಚ್ಚು ಸ್ಥಾನ ಗಳಿಸಿದ್ದ ಬಿಜೆಪಿಗೆ ಸರ್ಕಾರ ರಚಿಸಲು ಆಹ್ವಾನ ನೀಡಿದ್ದ ರಾಜ್ಯಪಾಲ ವಜೂಭಾಯಿ ವಾಲಾ ಅವರ ನಿರ್ಧಾರದ ವಿರುದ್ಧ ದಾಖಲಿಸಿದ್ದ ಪ್ರಕರಣ ಹಿನ್ನೆಲೆಯಲ್ಲಿ ಮೇ 16ರ ರಾತ್ರಿ ನಡೆದ ವಿಚಾರಣೆ.
ಟಾಪ್ 5 ತೀರ್ಪುಗಳು
ಸಲಿಂಗಕಾಮವನ್ನು ಅಪರಾಧ ಎಂದು ಪರಿಗಣಿಸಿದ್ದ ಐಪಿಸಿ ಸೆಕ್ಷನ್ 377 ರದ್ದು.
ವಿವಾಹೇತರ ಸಂಬಂಧಗಳು ಅಪರಾಧ ಎಂದು ಪರಿಗಣಿಸಲ್ಪಟ್ಟಿದ್ದ ಐಪಿಸಿ ಸೆಕ್ಷನ್ 497 ರದ್ದು.
ಆಧಾರ್‌ಗೆ ಸಾಂವಿಧಾನಿಕ ಮಾನ್ಯತೆ. ವರ್ಷಗಳಿಂದ ಇದ್ದ ಆಧಾರ್ ಗೊಂದಲಕ್ಕೆ ತೆರೆ.
ಶಬರಿಮಲೆ ದೇಗುಲಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರಿಗೆ ಮುಕ್ತ ಪ್ರವೇಶ.
ಸುಪ್ರೀಂ ಕೋರ್ಟ್ ಕಲಾಪಗಳ ನೇರ ಪ್ರಸಾರಕ್ಕೆ ಅವಕಾಶ.
ಪ್ರಮುಖ ವಿವಾದಗಳು
ಭಾರತೀಯ ಮೆಡಿಕಲ್ ಕೌನ್ಸಿಲ್‌ನಲ್ಲಿ ನಡೆದ ಹಗರಣಗಳಿಗೆ ಸಿಜೆಐ ಹೆಸರು ತಳಕು
ಕೇಸುಗಳ ಹಂಚಿಕೆಯಲ್ಲಿ ಸಿಜೆಐರಿಂದ ತಾರತಮ್ಯ: ಪತ್ರಿಕಾಗೋಷ್ಠಿಯಲ್ಲಿ ಸುಪ್ರೀಂ ಕೋರ್ಟ್‌ನ ನಾಲ್ವರು ನ್ಯಾಯಮೂರ್ತಿಗಳ ಆಕ್ಷೇಪ
ನ್ಯಾ. ಲೋಧಾ ಅವರ ಅನುಮಾನಾಸ್ಪದ ಸಾವಿನ ಪ್ರಕರಣದ ವಿಚಾರಣೆಯನ್ನು ನೇಪಥ್ಯಕ್ಕೆ ಸರಿಸಿದ ಆರೋಪ.
ಸಿಜೆಐ ವಿರುದ್ಧ ಮಹಾಭಿಯೋಗಕ್ಕೆ ಮುಂದಾಗಿದ್ದ ಕಾಂಗ್ರೆಸ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.