ಬಾಡಿಗೆ ಕಾರು ಕದಿಯುತ್ತಿದ್ದವರ ಬಂಧನ
Team Udayavani, Oct 2, 2018, 12:41 PM IST
ಬೆಂಗಳೂರು: ಪ್ರವಾಸಕ್ಕೆ ಹೋಗಲು ಕಾರುಗಳನ್ನು ಬಾಡಿಗೆಗೆ ಪಡೆದು, ಮಾರ್ಗಮಧ್ಯೆ ಚಾಲಕನ ಮೇಲೆ ಹಲ್ಲೆ ನಡೆಸಿ ವಾಹನಗಳನ್ನು ಕದ್ದು, ನಂತರ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಾರಾಟ ಮಾಡುತ್ತಿದ್ದ ಆರು ಮಂದಿ ಅಂತಾರಾಜ್ಯ ದರೋಡೆಕೋರರನ್ನು ಬಂಧಿಸುವಲ್ಲಿ ಉತ್ತರ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.
ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಶ್ರೀನಿವಾಸ್ (29), ಮಂಜುನಾಥ್ (29), ಲಗ್ಗೇರೆಯ ಜೀವನ್ (26), ರಾಮನಗರದ ಆರ್ಕೇಶ್ (23), ಚಿತ್ರದುರ್ಗದ ಅಬ್ದುಲ್ ವಹಾಬ್ (24), ನೂರುಲ್ಲಾ (22) ಬಂಧಿತರು. ಆರೋಪಿಗಳಿಂದ 1.26 ಕೋಟಿ ರೂ. ಮೌಲ್ಯದ 17 ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಉತ್ತರ ವಿಭಾಗದ ಪೊಲೀಸರು ತಿಳಿಸಿದ್ದಾರೆ.
ರಾತ್ರಿ ವೇಳೆ ಪ್ರವಾಸಕ್ಕೆಂದು ಬಾಡಿಗೆ ಕಾರುಗಳನ್ನು ಬುಕ್ ಮಾಡಿಕೊಳ್ಳುತ್ತಿದ್ದ ಆರೋಪಿಗಳು, ನಗರದಿಂದ ಸ್ವಲ್ಪ ದೂರ ಹೋಗುತ್ತಿದ್ದಂತೆ ಚಾಲಕನ ಮೇಲೆ ಹಲ್ಲೆ ನಡೆಸಿ ವಾಹನಗಳನ್ನು ದರೋಡೆ ಮಾಡುತ್ತಿದ್ದರು. ಜತೆಗೆ ಓಎಲ್‌ಎಕ್ಸ್ ಹಾಗೂ ಇತರೆ ಜಾಹಿರಾತು ತಾಣಗಳಲ್ಲಿ ಕಾರುಗಳನ್ನು ಮಾರಾಟಕ್ಕಿಡುತ್ತಿದ್ದ ಮಾಲೀಕರನ್ನು ಸಂಪರ್ಕಿಸಿ ಕಾರು ಖರೀದಿಸುವುದಾಗಿ ನಂಬಿಸಿ ಸ್ವಲ್ಪ
ಹಣ ಕೊಟ್ಟು ವಾಹನಗಳನ್ನು ಪಡೆದು ತಮ್ಮದೇ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಾರಾಟ ಮಾಡುತ್ತಿದ್ದರು. ಆರೋಪಿಗಳ ಬಂಧನದಿಂದ ಬೆಳಗಾವಿ ಜಿಲ್ಲೆಯ ಯಮಕನಮರಡಿ ಠಾಣೆ, ಮಂಗಳೂರು ನಗರದ ಬರ್ಕೆ ಠಾಣೆ, ತಮಿಳುನಾಡು ರಾಜ್ಯದ ಸೇಲಂ ಜಿಲ್ಲೆಯ ಕೊಂಡಲಂಪಟ್ಟಿ ಠಾಣೆಯ ತಲಾ ಒಂದೊಂದು ಪ್ರಕರಣಗಳು ಪತ್ತೆಯಾಗಿವೆ.
ಮಲ್ಲೇಶ್ವರ ಉಪವಿಭಾಗದಲ್ಲಿ ನಡೆಯುತ್ತಿದ್ದ ದರೋಡೆ ಪ್ರಕರಣಗಳ ಪತ್ತೆ ಹಚ್ಚಲು ರಾಜಗೋಪಾಲನಗರ ಇನ್ಸ್‌ಪೆಕ್ಟರ್ ಮಿಥುನ್ ಶಿಲ್ಪಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಈ ತಂಡ ವಿಶೇಷ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.
ಬಂಧಿತರೆಲ್ಲರೂ ಕಾರು ಚಾಲಕರಾಗಿದ್ದು, ಐಷಾರಾಮಿ ಜೀವನಕ್ಕಾಗಿ ಕೃತ್ಯವೆಸಗುತ್ತಿದ್ದರು. ಈ ಪೈಕಿ ಶ್ರೀನಿವಾಸ್ ಪ್ರಕರಣದ ಮಾಸ್ಟರ್ ಮೈಂಡ್ ಆಗಿದ್ದಾನೆ. ಅಲ್ಲದೆ, ಯುಟ್ಯೂಬ್ ನೋಡಿ ದರೋಡೆ ಮಾಡುತ್ತಿದ್ದ ಕಾರುಗಳ ನಕಲಿ ದಾಖಲೆಗಳನ್ನು ಫೋಟೋಶಾಪ್‌ನಲ್ಲಿ ಸಿದ್ಧಪಡಿಸಿ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕೃತ್ಯದ ಶೈಲಿ: ಆರೋಪಿಗಳು ಕೆಲ ತಿಂಗಳ ಹಿಂದೆ ಮಂಗಳೂರಿನಲ್ಲಿ ಒಂದು ಸ್ವಿಫ್ಟ್ ಡಿಸೈರ್ ಕಾರು, ಬೆಳಗಾವಿ ಹಾಗೂ ತಮಿಳುನಾಡಿನಲ್ಲಿ ತಲಾ ಒಂದೊಂದು ಇನ್ನೋವಾ ಕಾರುಗಳನ್ನು, ಆನ್‌ಲೈನ್ ಮೂಲಕ ಕಾಯ್ದಿರಿಸಿದ್ದರು.
ಕಾರು ಹತ್ತಿದ ಬಳಿಕ ಮಾರ್ಗ ಮಧ್ಯೆ ಚಾಲಕನಿಗೆ ಕಾರು ನಿಲ್ಲಿಸುವಂತೆ ಸೂಚಿಸಿ, ನಂತರ ಆತನಿಗೆ ಬಲವಂತವಾಗಿ ಮದ್ಯ ಕುಡಿಸಿದ್ದರು. ಮದ್ಯದ ನಶೆಯಲ್ಲಿದ್ದ ಚಾಲಕನ ಕೈ, ಕಾಲುಗಳನ್ನು ಹಗ್ಗದಿಂದ ಕಟ್ಟಿ, ಬಾಯಿಗೆ ಗಮ್‌ಟೇಪ್ ಸುತ್ತಿದ್ದರು. ಮಾರಕಾಸ್ತ್ರ ಹಾಗೂ ಏರ್‌ಗನ್ ತೋರಿಸಿ ಪ್ರಾಣ ಬೆದರಿಕೆ ಹಾಕಿ, ನಿರ್ಜನ ಪ್ರದೇಶದಲ್ಲಿ ಆತನನ್ನು ಬಿಟ್ಟು ಕಾರು ಸಮೇತ ಪರಾರಿಯಾಗಿದ್ದರು.
ವಂಚನೆ ಹೇಗೆ?: ಓಎಲ್‌ಎಕ್ಸ್ ಹಾಗೂ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಕಾರು ಮಾರಾಟ ಕುರಿತು ಜಾಹೀರಾತು ನೀಡುತ್ತಿದ್ದ ಮಾಲೀಕರನ್ನು ಸಂಪರ್ಕಿಸುತ್ತಿದ್ದ ಶ್ರೀನಿವಾಸ್ ಹಾಗೂ ಜೀವನ್, ಬಾಕಿ ಇರುವ ಬ್ಯಾಂಕ್ ಸಾಲದ ಮೊತ್ತವನ್ನು ತಾವೇ ಕಟ್ಟಿಕೊಳ್ಳುತ್ತೇವೆ ಎಂದು ನಂಬಿಸಿ ಒಪ್ಪಂದ ಮಾಡಿಕೊಂಡು, ವಾಹನಗಳನ್ನು ವಶಕ್ಕೆ ಪಡೆಯುತ್ತಿದ್ದರು. ಆರಂಭದಲ್ಲಿ ಅಲ್ಪಸ್ಪಲ್ಪ ಹಣ ಕಟ್ಟುತ್ತಿದ್ದ ಆರೋಪಿಗಳು, ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗುತ್ತಿದ್ದರು. ಈ ರೀತಿ ವಂಚಿಸಿದ 12 ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಯುಟ್ಯೂಬ್ ನೋಡಿ ನಕಲಿ ಕಾರ್ಡ್: ತನ್ನ ಸಹಚರರ ಮೂಲಕವೂ ಕಾರುಗಳನ್ನು ತನ್ನ ವಶಕ್ಕೆ ಪಡೆಯುತ್ತಿದ್ದ ಆರೋಪಿ ಶ್ರೀನಿವಾಸ್, ಆರ್‌ಸಿ ಕಾರ್ಡ್‌ಗಳನ್ನು ನಕಲಿ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಲು ಯುಟ್ಯೂಬ್ ವಿಡಿಯೋಗಳನ್ನು ನೋಡಿದ್ದ.
ಬಳಿಕ ಅಸಲಿ ಆರ್‌ಸಿ ಕಾರ್ಡ್‌ಗಳನ್ನು ಸ್ಕ್ಯಾನ್ ಮಾಡಿಕೊಂಡು, ಫೋಟೋಶಾಪ್‌ನಲ್ಲಿ ವಾಹನದ ಎಂಜಿನ್, ಚಾರ್ಸಿ ನಂಬರ್ ಹೊರತು ಪಡಿಸಿ ಇತರೆ ಎಲ್ಲ ಮಾಹಿತಿಯನ್ನು ನಕಲಿ ಮಾಡಿ ಕಾರ್ಡ್‌ಗಳನ್ನು ಸಿದ್ಧಪಡಿಸುತ್ತಿದ್ದ. ಅಲ್ಲದೆ, ಬ್ಯಾಂಕ್‌ಗಳಿಂದ ಎನ್‌ಓಸಿ ನೀಡಿದಂತೆ ನಕಲಿ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ವಾಹನಗಳನ್ನು ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಫೈವ್‌ಸ್ಟಾರ್ ಹೋಟೆಲಲ್ಲೇ ವಾಸ್ತವ್ಯ: ಆರೋಪಿಗಳ ಪೈಕಿ ಶ್ರೀನಿವಾಸ್ ಮತ್ತು ಜೀವನ್ ಈ ಮೊದಲು ಸೆಕೆಂಡ್ ಹ್ಯಾಂಡ್ ಕಾರುಗಳ ಮಾರಾಟ ವ್ಯವಹಾರ ನಡೆಸುತ್ತಿದ್ದರು. ಈ ವೇಳೆ ಸಂಪರ್ಕದಲ್ಲಿದ್ದ ಕೆಲ ಕಾರು ಮಾಲೀಕರಿಗೂ ಆರೋಪಿಗಳು ವಂಚಿಸಿದ್ದಾರೆ. ಬಳಿಕ ತಮ್ಮದೇ ಆದ ತಂಡ ಕಟ್ಟಿಕೊಂಡು ಕೃತ್ಯ ಎಸಗುತ್ತಿದ್ದರು. ಗೋವಾ, ತಮಿಳುನಾಡು ಸೇರಿ ಕೆಲ ರಾಜ್ಯಗಳ ಕಡೆ ಪ್ರವಾಸಕ್ಕೆಂದು ಹೋಗುತ್ತಿದ್ದ ಆರೋಪಿಗಳು, ಪಂಚತಾರಾ ಹೋಟೆಲ್‌ಗಳಲ್ಲೇ ವಾಸ್ತವ್ಯ ಹೂಡುತ್ತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ
CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ
B Z Zameer ahmed khan ಹೇಳಿಕೆ ಹಿಂದೆ ಎಚ್‌ಡಿಕೆಯದ್ದೇ ಕೈವಾಡ ಎಂದ ಕೈ ಶಾಸಕ
Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ
November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.