ಗಂಧದ ಗುಡಿಯಲ್ಲಿ ಗಾಂಧಿ ಹೆಜ್ಜೆ
Team Udayavani, Oct 2, 2018, 12:42 PM IST
ಕರ್ನಾಟಕ, ಅದರಲ್ಲೂ ಬೆಂಗಳೂರೆಂದರೆ ಮಹಾತ್ಮ ಗಾಂಧೀಜಿಗೆ ಎಲ್ಲಿಲ್ಲದ ಪ್ರೀತಿ. ಹೋರಾಟದ ದಿನಗಳ ಸಂದರ್ಭದಲ್ಲಿ ಅವಕಾಶ ಸಿಕ್ಕಾಗಲೆಲ್ಲಾ ಬಾಪು ಬೆಂಗಳೂರಿಗೆ ಭೇಟಿ ನೀಡುತ್ತಿದ್ದರು. ಅನಾರೋಗ್ಯ ಕಾಣಿಸಿಕೊಂಡಾಗ ಗಾಂಧೀಜಿ ತಂಗುತ್ತಿದ್ದುದು ಬೆಂಗಳೂರು ಮತ್ತು ನಂದಿ ಬೆಟ್ಟದಲ್ಲಿ ಎಂಬುದು ವಿಶೇಷ. ಇಂದು ಗಾಂಧಿ ಜಯಂತಿ. ಈ ಹಿನ್ನಲೆಯಲ್ಲಿ ಬೆಂಗಳೂರಿಗೆ ಬಾಪು ಬಂದು ಹೋದ ದಿನಗಳ ಬಗ್ಗೆ ಒಂದು ಹಿನ್ನೋಟ ಇಲ್ಲಿದೆ.
ಬೆಂಗಳೂರು: ಅಹಿಂಸಾ ಚಳವಳಿ ಮೂಲಕ ಬ್ರಿಟೀಷರನ್ನು ಭಾರತದಿಂದ ಓಡಿಸಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಗೂ, ರಾಜಧಾನಿ ಬೆಂಗಳೂರಿಗೂ ಅವಿನಾಭಾವ ನಂಟಿದೆ. ತಮ್ಮ ಹೋರಾಟದ ದಿನಗಳಲ್ಲಿ ಉದ್ಯಾನನಗರಿಗೆ ಐದು ಬಾರಿ ಭೇಟಿ ನೀಡಿದ್ದ ಬಾಪು, ಒಮ್ಮೆ ಬಸವನಗುಡಿ ನ್ಯಾಷನಲ್ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ಖಾದಿ ಉತ್ಸವಕ್ಕೂ ಚಾಲನೆ ನೀಡಿ, ಖಾದಿ ಉಡುಪು ಕುರಿತು ಜನರಲ್ಲಿ ಜಾಗೃತಿ ಮೂಡಿಸಿದ್ದರು.
ಆನಾರೋಗ್ಯದಿಂದ ಬಳಲುತ್ತಿದ್ದಾಗ ನಗರದ ಕುಮಾರಕೃಪ ಅತಿಥಿಗೃಹ ಹಾಗೂ ಚಿಕ್ಕಬಳ್ಳಾಪುರ ಸಮೀಪದ ನಂದಿಬೆಟ್ಟದಲ್ಲಿ ಗಾಂಧಿ ವಿಶ್ರಾಂತಿ ಪಡೆದಿದ್ದರು ಎಂಬುದು ವಿಶೇಷ. ಹೀಗಾಗಿ, ಮಹಾತ್ಮ ಗಾಂಧೀಜಿಯವರಿಗೆ, ಬೆಂಗಳೂರೆಂದರೆ ಬಲು ಪ್ರೀತಿ. ಕಲಾ ಕಾಲೇಜು ಹಮ್ಮಿಕೊಂಡಿದ್ದ ಗೋಪಾಲ ಕೃಷ್ಣ ಗೋಖಲೆ ಅವರ ಭಾವಚಿತ್ರ ಅನಾವರಣ, ಕೆಂಗೇರಿಯಲ್ಲಿ ನಡೆದ ಹರಿಜನ ಚಳವಳಿ, ಖಾದಿ ಉತ್ಸವ ಹೀಗೆ ನಾನಾ ಸಂದರ್ಭಗಳಲ್ಲಿ ಗಾಂಧೀಜಿ, ಉದ್ಯಾನನಗರಿಗೆ ಬಂದು ಹೋಗಿದ್ದರು.
ಮೊದಲ ಭೇಟಿ: ಗಾಂಧೀಜಿ ಮೊದಲ ಬಾರಿ ಬೆಂಗಳೂರಿಗೆ ಭೇಟಿ ನೀಡಿದ್ದು 1915 ಮೇ 8ರಂದು. ಕಲಾ ಕಾಲೇಜು ಹಮ್ಮಿಕೊಂಡಿದ್ದ ಗೋಪಾಲ ಕೃಷ್ಣ ಗೋಖಲೆ ಅವರ ಭಾವ ಚಿತ್ರ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಲು, ಅವರು ಪತ್ನಿ ಕಸ್ತೂರ ಬಾ ಅವರೊಂದಿಗೆ ರೈಲಿನಲ್ಲಿ ಬಂದಿದ್ದರು. ಈ ವೇಳೆ ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ ಬಂದಿಳಿದ ಅವರಿಗೆ ಅದ್ಧೂರಿ ಸ್ವಾಗತ ದೊರೆತಿತ್ತು.
ಗಾಂಧೀಜಿ ಅವರನ್ನು ಕಂಟೋನ್ಮೆಂಟ್‌ನಿಂದ ಕರೆದೊಯ್ಯಲು ಸಾರೋಟು ವ್ಯವಸ್ಥೆ ಮಾಡಲಾಗಿತ್ತು. ಆಗ ವಿದ್ಯಾರ್ಥಿಗಳು ಕುದುರೆಗಳನ್ನು ಬಿಚ್ಚಿ ತಾವೇ ಸಾರೋಟು ಎಳೆಯಲು ಮುಂದಾದರು. ಆದರೆ ಇದಕ್ಕೆ ನಿರಾಕರಿಸಿದ ಗಾಂಧೀಜಿ, ಕಾರ್ಯಕ್ರಮ ನಡೆಯಲಿದ್ದ ಸ್ಥಳದವರೆಗೂ ಕಾಲ್ನಡಿಗೆಯಲ್ಲೇ ಸಾಗಿದ್ದರು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಒಂದು ದಿನ ಮುಂಚಿತವಾಗೇ ನಗರಕ್ಕೆ ಬಂದಿದ್ದ ಬಾಪು,
ಶೇಷಾದ್ರಿ ರಸ್ತೆಯಲ್ಲಿ ಆಗಿನ ಜಿಲ್ಲಾ ನ್ಯಾಯಾಧೀಶರಾದ ಬಿ.ಎಸ್.ಕೃಷ್ಣಸ್ವಾಮಿ ಅವರು ಕಟ್ಟಿಸಿದ್ದ ಹೊಸ ಮನೆಯಲ್ಲಿ ತಂಗಿದ್ದರು. ಬಳಿಕ ಕಲಾ ಕಾಲೇಜು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದಾದ ಬಳಿಕ ಲಾಲ್‌ಬಾಗ್‌ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲೂ ಭಾಗವಹಿಸಿದ್ದರು. ಗಾಂಧೀಜಿ ಭಾಷಣ ಅಂದ್ರೆ ಜನ ಮುಗಿಬೀಳುತ್ತಿದ್ದರು. ದೂರದ ಊರುಗಳಿಂದ ರೈಲಿನಲ್ಲಿ ಬಂದು ಭಾಷಣ ಕೇಳುತ್ತಿದ್ದರು.
ಎರಡನೇ ಭೇಟಿ: ಎರಡನೇ ಬಾರಿ ಗಾಂಧೀಜಿ ಬೆಂಗಳೂರಿಗೆ ಭೇಟಿ ನೀಡಿದ್ದು, ಬ್ರಿಟಿಷರ ದೌರ್ಜನ್ಯದ ವಿರುದ್ಧ ಜನರಿಗೆ ಅರಿವು ಮೂಡಿಸುವ ಸಲುವಾಗಿ. 1920 ಆಗಸ್ಟ್ 21ರಲ್ಲಿ ನಗರಕ್ಕೆ ಆಗಮಿಸಿದ ಗಾಂಧಿ, ಅಸಹಾಕಾರ ಚಳವಳಿ, ಜಲಿಯನ್ ವಲಾಬಾಗ್ ಹತ್ಯಾಕಾಂಡ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಜನರಿಗೆ ಅರಿವು ಮೂಡಿಸಿದ್ದರು.
ಅಂದು ಮಧ್ಯಾಹ್ನ 3 ಗಂಟೆಗೆ ಕಂಟೋನ್ಮೆಂಟ್ ರೈಲು ನಿಲ್ದಾಣಕ್ಕೆ ಬಂದಿಳಿದ ಗಾಂಧೀಜಿ, ಬೆನ್ಸನ್ ಟೌನ್ ಪ್ರದೇಶದ ಖುದ್ದೂಸ್ ಮೈದಾನದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದರು. ನಾಡಿನ ಮೂಲೆ ಮೂಲೆಗಳಿಂದ ಬೃಹತ್ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಆ ಸಭೆಗೆ ಮೈಸೂರಿನಿಂದ ಒಂದು ರೈಲಿನ ತುಂಬ ಜನರು ಆಗಮಿಸಿದ್ದರು.
ಮಳೆ ಬಂದರೂ ಕದಲಲಿಲ್ಲ: “ಗಾಂಧೀಜಿ ಮಾತನಾಡುತ್ತಿದ್ದ ವೇಳೆ ದೊಡ್ಡ ಪ್ರಮಾಣದಲ್ಲಿ ಮಳೆ ಸುರಿಯಿತು. ಇಡೀ ಮೈದಾನದ ತುಂಬೆಲ್ಲಾ ನೀರು ತುಂಬಿ ಹೋಯ್ತು. ಆದರೂ, ಮಳೆಯಲ್ಲೇ ಕುಳಿತು ಸಹಸ್ರಾರು ಜನ ಗಾಂಧೀಜಿ ಭಾಷಣ ಆಲಿಸಿದರು. ಗಾಂಧೀಜಿ ಕೂಡ ಮೈಕ್ ಇಲ್ಲದೇ ದೊಡ್ಡ ದ್ವನಿಯಲ್ಲಿ ಮಾತನಾಡಿದರು’ ಎಂದು ಹಿರಿಯ ಇತಿಹಾಸ ತಜ್ಞರಾದ ವೇಮಗಲ್ ಸೋಮಶೇಖರ್ ನೆನಪಿಸಿಕೊಳ್ಳುತ್ತಾರೆ.
ಕುಮಾರ ಕೃಪದಲ್ಲಿ ವಿಶ್ರಾಂತಿ: 1927ರ ಮೇ 6ರಂದು ಗಾಂಧೀಜಿ ಅವರು ಕರ್ನಾಟಕ ಪ್ರವಾಸ ಕೈಗೊಂಡಿದ್ದ. ಬೆಳಗಾವಿ ಪ್ರವಾಸದಲ್ಲಿರುವಾಗ ಗಾಂಧೀಜಿ ಅವರು ಅನಾರೋಗ್ಯಕ್ಕೆ ಒಳಗಾದರು. ಈ ವೇಳೆ ವೈದ್ಯರು ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದ್ದರು.
ಈ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಆಗಮಿಸಿದ ಗಾಂಧೀಜಿ, ಕುಮಾರ ಕೃಪ ಮತ್ತು ನಂದಿ ಬೆಟ್ಟದಲ್ಲಿ ಸುಮಾರು 87 ದಿನಗಳನ್ನು ಕಳೆದಿದ್ದರು. ನಂದಿಬೆಟ್ಟದಲ್ಲಿ 45 ದಿನ ತಂಗಿದ್ದರು. ವಿಶ್ರಾಂತಿಯ ದಿನಗಳಲ್ಲಿ ಸುಮ್ಮನೇ ಕೂರಲು ಬಯಸದ ಗಾಂಧೀಜಿ, ಹೊಸೂರು ರಸ್ತೆಯಲ್ಲಿದ್ದ ಇಂಪೀರಿಯಲ್ ಹಾಲಿನ ಡೇರಿಗೆ ಭೇಟಿ ನೀಡುತ್ತಿದ್ದರು. ಹಾಲಿನ ಡೇರಿ ಗಾಂಧೀಜಿ ಅವರಿಗೆ ಇಷ್ಟವಾದ ಸ್ಥಳವಾಗಿತ್ತು.
ಯಲಹಂಕಕ್ಕೆ ಭೇಟಿ: ವಿಶ್ರಾಂತಿ ಪಡೆಯುತ್ತಲೇ ಗಾಂಧೀಜಿ ಬೆಂಗಳೂರಿನ ಹಲವು ಪ್ರದೇಶಗಳಿಗೆ ಭೇಟಿ ನೀಡಿದ್ದರು. 1927ರ ಜುಲೈ 2ರಂದು ಯಲಹಂಕದ ಹೆಂಚಿನ ಕಾರ್ಖಾನೆಗೆ ಭೇಟಿ ನೀಡಿದ್ದ ಅವರು, ಕಾರ್ಮಿಕರಿಂದ 500 ರೂ. ನಿಧಿ ಸಂಗ್ರಹಿಸಿದ್ದರು. ಈ ವೇಳೆ ಹೆಂಚಿನ ಕಾರ್ಖಾನೆಯ ಮಾಲೀಕ ವೇಣುಗೋಪಾಲ ಮೊದಲಿಯಾರ್ ಅವರು ಗಾಂಧೀಜಿ ಅವರ ಪ್ರವಾಸಕ್ಕೆ ಅನುಕೂಲವಾಗಲಿ ಎಂಬ ಕಾರಣಕ್ಕಾಗಿ, ಕಾರು ನೀಡಲು ಮುಂದಾದರು. ಆದರೆ, ಗಾಂಧೀಜಿ ನಿರಾಕರಿಸಿದ್ದರು.
ಹರಿಜನ ಸಮಾವೇಶ: ಹರಿಜರ ಬಗ್ಗೆ ಅಪಾರ ಒಲವು ಹೊಂದಿದ್ದ ಗಾಂಧೀಜಿ, ಹರಿಜರ ಚಳವಳಿಯಲ್ಲಿ ಭಾಗವಹಿಸಲು 1934ರಲ್ಲಿ ಮತ್ತೆ ಬೆಂಗಳೂರಿಗೆ ಬಂದಿದ್ದರು. ಕೆಂಗೇರಿಯ ಗುರುಕುಲಾಶ್ರಮದಲ್ಲಿ ಆಯೋಜಿಸಿದ್ದ ಮೂರು ದಿನಗಳ ಹರಿಜನ ಸಮಾವೇಶದಲ್ಲಿ ಮಾತನಾಡಿದ ಅವರು, ಹರಿಜರ ಉದ್ಧಾರದ ಕುರಿತು ಬೆಳಕು ಚೆಲ್ಲಿದ್ದರು.
ನಂದಿ ಬೆಟ್ಟದಲ್ಲಿ ವಿಶ್ರಾಂತಿ: ಮದ್ರಾಸ್ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಗಾಂಧೀಜಿ, ಅನಾರೋಗ್ಯಕ್ಕೆ ಒಳಗಾಗಿದ್ದರು. ಇದನ್ನು ಮನಗಂಡು ಆಗಿನ ಮೈಸೂರಿನ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಅವರು, ನಂದಿ ಬೆಟ್ಟದಲ್ಲಿ ವಿಶ್ರಾಂತಿ ಪಡೆಯುವಂತೆ ಕೋರಿಕೊಂಡರು.
ಈ ಆಹ್ವಾನ ಒಪ್ಪಿಕೊಂಡ ಬಾಪು, 1936ರ ಮೇ 11ರಂದು ನಂದಿಬೆಟ್ಟದಲ್ಲಿ ವಿಶ್ರಾಂತಿ ಪಡೆದಿದ್ದರು. ರೇಸ್ ಕೋರ್ಸ್ ರಸ್ತೆಯ ಕ್ರೆಸೆಂಟ್ ಹೌಸ್‌ನಲ್ಲೂ (ಈಗಿನ ನ್ಯಾಯಾಂಗ ಅಕಾಡೆಮಿ) ಗಾಂಧೀಜಿ ಕೆಲ ದಿನಗಳ ಕಾಲ ತಂಗಿದ್ದರು ಎಂದು ಹಿರಿಯ ಇತಿಹಾಸ ತಜ್ಞ ವೇಮಗಲ್ ಸೋಮಶೇಖರ್ ಹೇಳುತ್ತಾರೆ.
* ದೇವೇಶ ಸೂರಗುಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cold Weather: ಬೀದರ್, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?
Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್ ಸೂಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.