ರಶೀದ್ ಮಲ್ಬಾರಿಯನ್ನು ಭಾರತಕ್ಕೆ ಕರೆತರಲು ಮುಂದಾಗದ ರಾಜ್ಯ ಪೊಲೀಸರು!
Team Udayavani, Oct 3, 2018, 3:45 AM IST
ಮಂಗಳೂರು: ನಾಲ್ಕು ವರ್ಷಗಳ ಹಿಂದೆ ಜಾಮೀನು ಪಡೆದು ನಾಪತ್ತೆಯಾಗಿರುವ ಮೋಸ್ಟ್ ವಾಂಟೆಡ್ ಭೂಗತ ಪಾತಕಿ ರಶೀದ್ ಮಲ್ಬಾರಿ ಮೂರು ತಿಂಗಳಿನಿಂದ ಅಬುಧಾಬಿಯ ಅಲ್-ವಥಬ್ ಜೈಲಿನಲ್ಲಿ ಬಂದಿಯಾಗಿದ್ದರೂ ಆತನನ್ನು ಭಾರತಕ್ಕೆ ಕರೆತರಲು ಕರ್ನಾಟಕದ ಪೊಲೀಸರು ಆಸಕ್ತಿ ತೋರದ ಅಂಶ ಬೆಳಕಿಗೆ ಬಂದಿದೆ. ಹಲವು ಪ್ರಕರಣಗಳಲ್ಲಿ ಬೇಕಾಗಿದ್ದು, ಲುಕ್ ಔಟ್ ನೋಟಿಸ್, ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಿರುವ ರಾಜ್ಯ ಪೊಲೀಸರೇ ಈಗ ಅದೇ ಆರೋಪಿ ಮತ್ತೂಂದೆಡೆ ಬಂಧಿತನಾದಾಗ ಅವನನ್ನು ಕರೆತರಲು ಉತ್ಸಾಹ ತೋರುತ್ತಿಲ್ಲ.
ಅಚ್ಚರಿಯ ಸಂಗತಿ ಎಂದರೆ ಈತ ಅಬುಧಾಬಿಯ ಅಲ್-ವಥಬ್ ಜೈಲಿನಲ್ಲಿರುವುದು ಮಂಗಳೂರಿನ ಪೊಲೀಸರಿಗೂ ಗೊತ್ತಿದೆ. ಮಂಗಳೂರು ಸಹಿತ ರಾಜ್ಯ ದಲ್ಲಿ ನಡೆದ ಹಲವು ಕೊಲೆ- ದರೋಡೆ ಪ್ರಕರಣಗಳಲ್ಲಿ ಬೇಕಾದ ಈತನನ್ನು ಭಾರತಕ್ಕೆ ಗಡೀಪಾರು ಮಾಡಿಸಿ ಕರೆತರಲು ಇಲ್ಲಿಯವರೆಗೆ ಯಾವುದೇ ಕಾನೂನಾತ್ಮಕ ಕ್ರಮಕ್ಕೆ ಪೊಲೀಸರು ಮುಂದಾಗಿಲ್ಲ.
‘ಉದಯವಾಣಿ’ಗೆ ಲಭ್ಯವಾದ ಮಾಹಿತಿ ಪ್ರಕಾರ, ರಶೀದ್ ಮಲ್ಬಾರಿಯನ್ನು ಅಬುಧಾಬಿ ವಿಮಾನ ನಿಲ್ದಾಣದಲ್ಲಿ ಪೊಲೀಸರು ಜೂನ್ ಕೊನೆಯ ವಾರದಲ್ಲಿ ಬಂಧಿಸಿದ್ದರು. ಜತೆಗೆ ಆತನ ಸಹಚರ ಬಿ.ಸಿ. ರೋಡ್ ಮೂಲದ ವ್ಯಕ್ತಿಯೊಬ್ಬನನ್ನೂ ಬಂಧಿಸಲಾಗಿತ್ತು. ಮೂರು ತಿಂಗಳಿನಿಂದ ಈ ಇಬ್ಬರನ್ನು ‘ಅಲ್-ವಥಬ್’ ಸೆಂಟ್ರಲ್ ಜೈಲಿನಲ್ಲಿರಿಸಲಾಗಿದೆ. ಭಾರತದ ಜತೆಗೆ ಉತ್ತಮ ಸಂಬಂಧ ಹೊಂದಿರುವ ಹಿನ್ನೆಲೆಯಲ್ಲಿ ರಶೀದ್ ಮಲ್ಬಾರಿಯ ಹಸ್ತಾಂತರಕ್ಕೆ ಅಬುಧಾಬಿ ಪೊಲೀಸರು ಸಿದ್ಧರಿದ್ದಾರೆ. ಆದರೆ ಭಾರತದ ಕಡೆಯಿಂದ ಕಾನೂನಾತ್ಮಕ ಪ್ರಕ್ರಿಯೆ ನಡೆಯದ ಕಾರಣ ಸಾಧ್ಯವಾಗಿಲ್ಲ ಎನ್ನಲಾಗಿದೆ.
‘ರಶೀದ್ ಮಲ್ಬಾರಿ ಅಬುಧಾಬಿಯ ಅಲ್-ವಥಬ್ ಜೈಲಿನಲ್ಲಿದ್ದಾನೆ. ಕಳೆದ ವಾರದವರೆಗೂ ಆತ ಅಲ್ಲಿದ್ದುದನ್ನು ನೋಡಿದ್ದೇವೆೆ. ಆದರೆ ಈತನೇ ರಶೀದ್ ಮಲ್ಬಾರಿ ಎಂಬುದನ್ನು ಭಾರತದ ಪೊಲೀಸರು ಸೂಕ್ತ ದಾಖಲೆ ನೀಡಿ ದೃಢೀಕರಿಸಬೇಕು. ರಶೀದ್ ಬಂಧನವಾಗಿ 3 ತಿಂಗಳು ಕಳೆದಿರುವ ಕಾರಣ ಯಾವುದೇ ಕ್ಷಣ ಜಾಮೀನಿನ ಮೇಲೆ ಬಿಡುಗಡೆಯಾಗುವ ಸಾಧ್ಯೆತೆಯಿದೆ’ ಎಂದು ಅಬುಧಾಬಿ ಮೂಲದ ವ್ಯಕ್ತಿಯೊಬ್ಬರು ‘ಉದಯವಾಣಿ’ಗೆ ಸ್ಪಷ್ಟಪಡಿಸಿದ್ದಾರೆ.
ಬಂಧನ ಹೌದು ಎಂದ ಸಹೋದರ
ಇನ್ನೊಂದೆಡೆ ರಶೀದ್ ಮಲ್ಬಾರಿ ಬಂಧನದ ಕುರಿತಂತೆ ಅಬುಧಾಬಿಯ ಭಾರತೀಯ ರಾಯಭಾರಿ ಕಚೇರಿಯನ್ನೂ ‘ಉದಯವಾಣಿ’ ಸಂಪರ್ಕಿಸಿತು. ಆದರೆ ಅಲ್ಲಿನ ಅಧಿಕಾರಿಗಳು ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದರು. ರಶೀದ್ ಮಲ್ಬಾರಿ ಈಗ ಅಲ್-ವಥಬ್ ಜೈಲಿನಲ್ಲಿರುವುದು ನಿಜ ಎಂದು ಬೆಂಗಳೂರಿನ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ರಶೀದ್ ಮಲಾºರಿಯ ಸಹೋದರನೊಬ್ಬ ಬಿ.ಸಿ. ರೋಡಿನಲ್ಲಿದ್ದು, ಅವರೂ ಮಲ್ಬಾರಿ ಅಬುಧಾಬಿಯ ಜೈಲಿನಲ್ಲಿರುವುದು ಹೌದು ಎಂದು ಪೊಲೀಸರ ಬಳಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಮಲ್ಬಾರಿಯ ಬಂಧನ ಹಲವು ಮೂಲಗಳಿಂದ ಖಚಿತವಾಗಿರಬೇಕಾದರೆ ಆತನನ್ನು ಭಾರತಕ್ಕೆ ಕರೆ ತರಲು ರಾಜ್ಯ ಪೊಲೀಸರು ಆಸಕ್ತಿ ವಹಿಸದೇ ಸುಮ್ಮನಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿದೆ.
ಭೂಗತ ಪಾತಕಿ ಹಿನ್ನೆಲೆ
ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಚರ ರಶೀದ್ ಮಲಾºರಿ (46) ವಿರುದ್ಧ ಪೊಲೀಸರು ಈಗಾಗಲೇ ವಾರಂಟ್, ಲುಕ್ ಔಟ್ ನೋಟಿಸು ಮತ್ತು ರೆಡ್‌ಕಾರ್ನರ್ ನೋಟಿಸು ಜಾರಿಗೊಳಿಸಿದ್ದಾರೆ. ಬೆಂಗಳೂರು ಜೈಲಿನಲ್ಲಿದ್ದ ಆತ 2014ರ ಜು.21ರಂದು ಜಾಮೀನು ಲಭಿಸಿ ಬಿಡುಗಡೆ ಹೊಂದಿದ್ದ. ಐದು ದಿನಗಳ ಬಳಿಕ ಅಂದರೆ 2014 ಜು.26ರಂದು ಪ್ರಕರಣವೊಂದಕ್ಕೆ ಸಂಬಂಧಿಸಿ ಆತ ಮಂಗಳೂರಿನ ನ್ಯಾಯಾಲಯಕ್ಕೆ ಹಾಜರಾಗಬೇಕಿದ್ದರೂ ಹಾಜರಾಗಿರಲಿಲ್ಲ. ಅಂದಿನಿಂದ ಆತನ ಸುಳಿವೇ ಇಲ್ಲ. ಉಡುಪಿ ಮೂಲದ ರಶೀದ್ ಮಲ್ಬಾರಿಯನ್ನು ಅದಕ್ಕೂ ಹಿಂದೆ 2009ರ ಮಾ.29ರಂದು ಮಂಗಳೂರಿನ ಆಗಿನ ಡಿಸಿಐಬಿ ಇನ್ಸ್‌ಪೆಕ್ಟರ್ ಡಾ| ಎಚ್.ಎನ್. ವೆಂಕಟೇಶ ಪ್ರಸನ್ನ ಮತ್ತು ತಂಡದವರು ಕೇರಳದ ಚಟ್ಟಂಚಾಲ್‌ನಲ್ಲಿ ವಶಕ್ಕೆ ತೆಗೆದುಕೊಂಡು ಮರುದಿನ ಬಂಧಿಸಿದ್ದರು.
ರಶೀದ್ ಮಲ್ಬಾರಿ ಬಂಧಿಸಿದ್ದು ಯಾಕೆ ?
ರಶೀದ್ ಮಲ್ಬಾರಿ ನಾಲ್ಕು ವರ್ಷಗಳ ಹಿಂದೆ ಪ್ರಕರಣವೊಂದರಲ್ಲಿ ಜಾಮೀನು ಪಡೆದು ನಾಪತ್ತೆಯಾದ ಬಳಿಕ ನೇಪಾಲ ಮೂಲಕ ಬಾಂಗ್ಲಾ ದೇಶಕ್ಕೆ ಹೋಗಿದ್ದ. ಅನಂತರ ಅಲ್ಲಿನ ಪಾಸ್‌ಪೋರ್ಟ್ ಮಾಡಿಕೊಂಡು ಭೂಗತ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ. ಅಬುಧಾಬಿ ಅಥವಾ ದುಬಾೖಯಲ್ಲಿ ಶಾಶ್ವತವಾಗಿ ನೆಲೆಯೂರುವ ಲೆಕ್ಕಾಚಾರ ಹಾಕಿದ್ದ. ಅದಕ್ಕಾಗಿ ನಕಲಿ ದಾಖಲೆ ಸೃಷ್ಟಿಸಿ ಅಬುಧಾಬಿಯ ಖಾಯಂ ವೀಸಾ ಮಾಡಿಸಿಕೊಳ್ಳಲು ಉದ್ದೇಶಿಸಿದ್ದ. ಅಬುಧಾಬಿಯಲ್ಲಿ ನಕಲಿ ವೀಸಾ ಮಾಡಿಸುತ್ತಿದ್ದ ವಿಷಯ ಗೊತ್ತಾಗಿ ಅಲ್ಲಿನ ಪೊಲೀಸರು ಬಂಧಿಸಿ ಜೈಲಿನಲ್ಲಿರಿಸಿದರು. ಅಷ್ಟೇ ಅಲ್ಲ, ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಆತನಲ್ಲಿರುವ ಬಾಂಗ್ಲಾ ದೇಶದ ಪಾಸ್‌ಪೋರ್ಟ್ ಕೂಡ ನಕಲಿ ಎಂಬುದು ಬೆಳಕಿಗೆ ಬಂದಿತ್ತು. ಈ ಬಗ್ಗೆ ಅಬುಧಾಬಿ ಪೊಲೀಸರು ಈಗಾಗಲೇ ಬಾಂಗ್ಲಾ ಸರಕಾರವನ್ನು ಸಂಪರ್ಕಿಸಿ ಮಾಹಿತಿ ಕೇಳಿದ್ದಾರೆ ಎನ್ನಲಾಗಿದೆ.
ಕರೆ ತರಲು ಏನು ಮಾಡಬೇಕು ?
ರಶೀದ್ ಮಲ್ಬಾರಿ ಕರೆತರಲು ಇಂಟರ್‌ಪೋಲ್ ಮೂಲಕ ರಾಜ್ಯದ ಪೊಲೀಸರು ಕಾರ್ಯಪ್ರವೃತ್ತರಾಗಬೇಕು. ರಶೀದ್ ಮಲಾºರಿ ಮೇಲೆ ಬೆಂಗಳೂರಿನಲ್ಲಿ ಸದ್ಯಕ್ಕೆ ಒಂದು ಪ್ರಕರಣವಷ್ಟೇ ಇದ್ದು, ಮಂಗಳೂರಿನಲ್ಲಿ ಹಲವು ಪ್ರಕರಣಗಳಲ್ಲಿ ಬೇಕಾಗಿದ್ದಾನೆ. ಆದ್ದರಿಂದ ಆತ ಬಂಧಿತನಾಗಿದ್ದಾನೆಯೇ ಇಲ್ಲವೇ ಎನ್ನುವುದನ್ನು ಮಂಗಳೂರು ಪೊಲೀಸರು ಮೊದಲು ದೃಢೀಕರಿಸಬೇಕು. ರಶೀದ್ ಮಲ್ಬಾರಿಯ 10 ಬೆರಳಚ್ಚು ಮಾದರಿ ಹಾಗೂ ವೀಡಿಯೋ ತುಣುಕು ಮಂಗಳೂರು ಪೊಲೀಸರ ಬಳಿಯಿದೆ. ಹೀಗಿರುವಾಗ ಮಂಗಳೂರು ಪೊಲೀಸರು ಮೊದಲು ಇಂಟರ್‌ಪೋಲ್ ಮೂಲಕ ಅಬುಧಾಬಿಗೆ ಪ್ರೊವಿಷನಲ್ ಅರೆಸ್ಟ್‌ಗೆ ಕೋರಿಕೆ ಸಲ್ಲಿಸಬೇಕು. ಅನಂತರ ತಮ್ಮಲ್ಲಿರುವ ಬೆರಳಚ್ಚು, ವೀಡಿಯೋ ಮೂಲಕ ಚಹರೆ ಖಚಿತಪಡಿಸಿಕೊಂಡು ಭಾರತಕ್ಕೆ ಅಲ್ಲಿಂದ ಗಡೀಪಾರು ಮಾಡುವುದಕ್ಕೆ ದಾಖಲೆಗಳನ್ನು ಒದಗಿಸಬೇಕು ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು.
ರಶೀದ್ ಮಲ್ಬಾರಿ ಬಂಧನವಾಗಿರುವ ಕುರಿತಂತೆ ಇದುವರೆಗೆ ನಮಗೆ ಯಾವುದೇ ಮಾಹಿತಿ ಬಂದಿಲ್ಲ.
– ಟಿ.ಆರ್. ಸುರೇಶ್, ಮಂಗಳೂರು ನಗರ ಪೊಲೀಸ್ ಆಯುಕ್ತ
ರಶೀದ್ ಮಲ್ಬಾರಿ ಅಬುಧಾಬಿಯಲ್ಲಿ ಬಂಧನವಾಗಿರುವ ಕುರಿತು ಅಧಿಕೃತವಾದ ಯಾವುದೇ ಮಾಹಿತಿ ಇಲ್ಲ. ಒಂದು ವೇಳೆ ಇಂಟರ್‌ಪೋಲ್ ಹಾಗೂ ಸಿಬಿಐ ಕಡೆಯಿಂದ ಅಧಿಕೃತ ಮಾಹಿತಿ ಸಿಕ್ಕಿದರೆ ಕಾನೂನು ಪ್ರಕ್ರಿಯೆ ಮೂಲಕ ರಾಜ್ಯಕ್ಕೆ ಕರೆ ತರಲಾಗುವುದು.
– ಕಮಲ್ ಪಂತ್, ಎಡಿಜಿಪಿ , ಕಾನೂನು ಮತ್ತು ಸುವ್ಯವಸ್ಥೆ
— ಸುರೇಶ್ ಪುದುವೆಟ್ಟು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.