ಪ್ಲಾಸ್ಟಿಕ್ ನಿಷೇಧ ಕಡ್ಡಾಯ ಜಾರಿಯಲ್ಲಿ ಗೊಂದಲ!
Team Udayavani, Oct 3, 2018, 10:49 AM IST
ಪುತ್ತೂರು: ಪ್ಲಾಸ್ಟಿಕ್ ನಿಷೇಧದ ಹಿನ್ನೆಲೆಯಲ್ಲಿ ಅಧಿಕಾರಿಗಳು ಒಂದಾದ ಮೇಲೊಂದರಂತೆ ದಾಳಿಗಳನ್ನು ಯೋಜಿಸುತ್ತಿದ್ದಾರೆ. ದಾಳಿ ನಡೆಸುವ ವೇಳೆಯಲ್ಲಿ ಅಂಗಡಿ ಮಾಲಕರು ಎದುರಿಡುವ ಪ್ರಶ್ನೆಗೆ ಅಧಿಕಾರಿಗಳು ತಬ್ಬಿಬ್ಟಾಗುತ್ತಿದ್ದಾರೆ. ಕಾರಣ ಯಾವೆಲ್ಲ ಬಗೆಯ ಪ್ಲಾಸ್ಟಿಕ್‌ಗಳನ್ನು ನಿಷೇಧ ಮಾಡಲಾಗಿದೆ ಎನ್ನುವ ಬಗ್ಗೆ ಅಧಿಕಾರಿಗಳಿಗೇ ಸರಿಯಾಗಿ ಮಾಹಿತಿ ಇಲ್ಲ. ಇದು ಕಟು ಸತ್ಯ.
ರಾಜ್ಯ ಸರಕಾರ, ಜಿಲ್ಲಾಡಳಿತ ಪ್ಲಾಸ್ಟಿಕ್ ನಿಷೇಧದ ಬಗೆಗಿನ ಸುತ್ತೋಲೆಯನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಿದೆ. ಸುತ್ತೋಲೆಯಲ್ಲಿ ಉಲ್ಲೇಖ ಮಾಡಿದಂತೆ 2016 ನ. 25ರಂದು ಪ್ಲಾಸ್ಟಿಕ್ ನಿಷೇಧದ ಸೂಚನೆ ನೀಡಲಾಗಿತ್ತು. ಸೂಚನೆಯ ಆನಂತರ 6 ತಿಂಗಳ ಅವಧಿಯಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರಬೇಕಾಗಿತ್ತು. ಆದರೆ ದ.ಕ. ಜಿಲ್ಲೆಯ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಅಧಿಸೂಚನೆಯಲ್ಲಿ ತಿಳಿಸಿರುವಂತೆ ಪ್ಲಾಸ್ಟಿಕ್ ಬಳಕೆಯ ನಿಷೇಧವನ್ನು ಸಂಪೂರ್ಣವಾಗಿ ನಿಯಂತ್ರಿಸಿರುವುದಿಲ್ಲ. ಆದ್ದರಿಂದ ಎಲ್ಲ ಅಧಿಕಾರಿ, ನೌಕರರು ಮತ್ತು ಗ್ರಾ.ಪಂ. ವ್ಯಾಪ್ತಿಯ ಪಿಡಿಒಗಳು ಪ್ಲಾಸ್ಟಿಕ್ ನಿಷೇಧವನ್ನು ಜಾರಿಗೆ ತರಲು ಸೂಚಿಸಿದ್ದಾರೆ.
ಕಂಪೆನಿಗಳಿಗೆ ರಿಯಾಯಿತಿ
ಕುರುಚಲು ತಿನಿಸು, ಆಹಾರ ಪದಾರ್ಥವನ್ನು ಪ್ಯಾಕ್ ಮಾಡಿರುವ ಪ್ಲಾಸ್ಟಿಕ್ ಗಳಿಗೆ ನಿಷೇಧ ಹೇರಲಾಗಿಲ್ಲ. ನಿಷೇಧದ ಪಟ್ಟಿಯಲ್ಲಿ ಕೆಲವು ಪ್ರಕರಣಗಳಲ್ಲಿ ವಿನಾಯಿತಿ ನೀಡಿ ಎಂದು ಉಲ್ಲೇಖೀಸಲಾಗಿದೆ. ತಿಂಡಿ- ತಿನಸು, ಕೆಲ ವಸ್ತುಗಳನ್ನು ಪ್ಲಾಸ್ಟಿಕ್ ಕವರ್ ನಲ್ಲಿ ತುಂಬಿ ಮಾರಾಟ ಮಾಡುವುದಕ್ಕೆ ಯಾವುದೇ ಕಡಿವಾಣ ಹಾಕಿಲ್ಲ. ಪ್ಲಾಸ್ಟಿಕ್ ನಿಷೇಧದಿಂದ ದೊಡ್ಡ ಕಂಪೆನಿಗಳನ್ನು ದೂರ ಇಡಲಾಗಿರುವುದು ಮಾತ್ರ ತಾರತಮ್ಯ ಧೋರಣೆಯಾಗಿದೆ.
150 ಕೆ.ಜಿ. ವಶಕ್ಕೆ
ಪುತ್ತೂರು ನಗರಸಭೆ ಈಗಾಗಲೇ ಹಲವು ಅಂಗಡಿಗಳ ಮೇಲೆ ದಾಳಿ ನಡೆಸಿದೆ. ದಾಳಿಯಲ್ಲಿ ವಶಕ್ಕೆ ತೆಗದುಕೊಂಡ ಪ್ಲಾಸ್ಟಿಕ್ ಗಳು ಸುಮಾರು 150 ಕೆ.ಜಿ.ಯಷ್ಟು ಇದೆ. ಹೀಗೆ ದಾಳಿಯಲ್ಲಿ ಸಂಗ್ರಹವಾದ ಪ್ಲಾಸ್ಟಿಕ್ ಅನ್ನು ಏನು ಮಾಡಬೇಕು ಎನ್ನುವುದನ್ನು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ವಾಣಿಜ್ಯ ಮಳಿಗೆ, ಹೊಟೇಲ್, ಪ್ಲಾಸ್ಟಿಕ್ ಉತ್ಪನ್ನ ತಯಾರಿಸುವ ಕೈಗಾರಿಕೆಗಳಿಗೆ ಆಗ್ಗಿಂದಾಗೆ ದಾಳಿ ನಡೆಸುತ್ತಿರಬೇಕು. ವಶಪಡಿಸಿಕೊಂಡು ಮಹಜರು ಮಾಡಿದ ಪ್ಲಾಸ್ಟಿಕ್‌ಗಳನ್ನು ರಾಜ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಪರಿಸರ ಅಧಿಕಾರಿ ಅಥವಾ ಸಹಾಯಕ ಆಯುಕ್ತರ ವಶಕ್ಕೆ ನೀಡಬೇಕು ಎಂದು ತಿಳಿಸಲಾಗಿದೆ. ಒಂದು ವೇಳೆ ಅಧಿಸೂಚನೆಯನ್ನು ಉಲ್ಲಂಘಿಸಿದರೆ ಆಯಾ ವ್ಯಾಪ್ತಿಯ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸುವಂತೆ ಸೂಚಿಸಲಾಗಿದೆ.
ಬ್ಯಾನರ್‌ಗಳಿಗೂ ಕಡಿವಾಣ
ಎಲ್ಲ ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಪ್ಲಾಸ್ಟಿಕ್ ಆಧಾರಿತ ಯಾವುದೇ ಜಾಹೀರಾತು ಬ್ಯಾನರ್‌ಗಳಿಗೆ ಪರವಾನಿಗೆ ನೀಡಬಾರದೆಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಅನಧಿಕೃತವಾಗಿ ಹಾಕಲಾದ ಪ್ಲಾಸ್ಟಿಕ್ ಆಧಾರಿತ ಯಾವುದೇ ಜಾಹೀರಾತು ಬ್ಯಾನರ್, ಬಾವುಟ, ಬಂಟಿಂಗ್ಸ್‌ಗಳನ್ನು ಕೂಡಲೇ ತೆಗೆದುಹಾಕಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಯಾವೆಲ್ಲ ಪ್ಲಾಸ್ಟಿಕ್ ನಿಷೇಧ?
ಅಂಗಡಿಗಳಲ್ಲಿ ಮಾರಾಟ ಮಾಡಲಾಗುವ ಎಲ್ಲ ರೀತಿಯ ಪ್ಲಾಸ್ಟಿಕ್‌ಗಳಿಗೂ ನಿಷೇಧ ಹೇರಲಾಗಿದೆ. ಅಂದರೆ ಜೂಸ್ ಕುಡಿಯಲು ಬಳಕೆ ಮಾಡುವ ಸ್ಟ್ರಾ ಕೂಡ ನಿಷೇಧದ ಪಟ್ಟಿಯಲ್ಲಿದೆ ಎನ್ನುತ್ತಾರೆ ಅಧಿಕಾರಿಗಳು. ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಪ್ಲಾಸ್ಟಿಕ್ ಭಿತ್ತಿಪತ್ರ, ಪ್ಲಾಸ್ಟಿಕ್ ತೋರಣ, ಪ್ಲಾಸ್ಟಿಕ್ ಬಾವುಟ, ಪ್ಲಾಸ್ಟಿಕ್ ತಟ್ಟೆ, ಪ್ಲಾಸ್ಟಿಕ್ ಲೋಟ, ಪ್ಲಾಸ್ಟಿಕ್ ಚಮಚ, ಕ್ಲಿಂಗ್ ಫಿಲ್ಮ್ಸ್ , ಊಟದ ಮೇಜಿನ ಮೇಲೆ ಹರಡುವ ಪ್ಲಾಸ್ಟಿಕ್ ಹಾಳೆ, ಥರ್ಮಕೋಲ್ ಗಳ ಮಾರಾಟ ಹಾಗೂ ಬಳಕೆಯನ್ನು ನಿಷೇಧಿಸಲಾಗಿದೆ. ಪ್ಲಾಸ್ಟಿಕ್ ಮೈಕ್ರೋ ಬೀಡ್ಸ್‌ನಿಂದ ತಯಾರಾದ ವಸ್ತುಗಳ ತಯಾರಿಕೆ, ಸರಬರಾಜು, ಬಳಕೆಗೂ ನಿಷೇಧ ಹೇರಲಾಗಿದೆ.
ಮರುಬಳಕೆಗೆ ಅವಕಾಶ
ಸ್ಥಳೀಯಾಡಳಿತಗಳು ಪ್ಲಾಸ್ಟಿಕ್ ವಶಕ್ಕೆ ತೆಗೆದುಕೊಳ್ಳುವ ಕೆಲಸ ಮಾಡುತ್ತಿವೆ. ಈ ಪ್ಲಾಸ್ಟಿಕ್‌ಗಳನ್ನು ನಮ್ಮ ವಶಕ್ಕೆ ನೀಡಿದರೆ ಅದನ್ನು ಸಂಬಂಧಪಟ್ಟ ಇಲಾಖೆಗೆ ಹಸ್ತಾಂತರಿಸಲಾಗುತ್ತದೆ. ಈ ಪ್ಲಾಸ್ಟಿಕ್‌ಗಳನ್ನು ಸುಡಲು ಅಥವಾ ಹೂಳಲು ಅವಕಾಶವಿಲ್ಲ. ಮರುಬಳಕೆಗೆ ಮಾತ್ರ ಅವಕಾಶವಿದೆ.
– ಎಚ್.ಕೆ. ಕೃಷ್ಣಮೂರ್ತಿ
ಸಹಾಯಕ ಆಯುಕ್ತರು, ಪುತ್ತೂರು
ಗಣೇಶ್ ಎನ್. ಕಲ್ಲರ್ಪೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.