ಎನ್‌ಎಸ್‌ಎಸ್ ಎಂಬ ಗರಡಿಮನೆ
Team Udayavani, Oct 5, 2018, 6:00 AM IST
ಆವತ್ತು ಶನಿವಾರ ನಾವೆಲ್ಲ ಕ್ಲಾಸ್‌ನಲ್ಲಿ ಪಾಠ ಕೇಳುತ್ತ ಕುಳಿತಿದ್ದೆವು. ನಮ್ಮ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾದ ಸತೀಶ್ ಸರ್ ಕ್ಲಾಸ್‌ಗೆ ಬಂದು, “”ಎನ್‌ಎಸ್‌ಎಸ್ ಯುನಿಟ್‌ನವರೆಲ್ಲ ಮಧ್ಯಾಹ್ನ 12.45ಕ್ಕೆ ನಡೆಯುವ ಮೀಟಿಂಗ್‌ನಲ್ಲಿ ಹಾಜರಾಗಬೇಕು” ಎಂದು ಹೇಳಿ ಹೋದರು. ಈ ತುರ್ತುಸಭೆ ನನ್ನಲ್ಲಿ ಗೊಂದಲವನ್ನು ಉಂಟುಮಾಡಿತು. ಈ ಗೊಂದಲದಲ್ಲಿಯೇ ನಾನು ಮೀಟಿಂಗ್‌ಗೆ ಹೋದೆ. ಸತೀಶ್ ಸರ್, “”ಇವತ್ತು ಎನ್‌ಎಸ್‌ಎಸ್ ಘಟಕದ ಈ ವರ್ಷದ ನಾಯಕರನ್ನು ಆಯ್ಕೆ ಮಾಡಲಿದ್ದೇವೆ. ಆಸಕ್ತಿ ಇರುವವರು ಎದ್ದು ನಿಲ್ಲಿ” ಎಂದು ಹೇಳಿದರು. ನಾನು ಮತ್ತು ನನ್ನ ಇನ್ನೊಬ್ಬ ಸಹಪಾಠಿ ಇಬ್ಬರು ಎದ್ದು ನಿಂತೆವು. ಆಗ ನಮ್ಮಿಬ್ಬರಲ್ಲಿ ಒಬ್ಬರನ್ನು ಆರಿಸಲು ಸಹಜವಾಗಿ ಓಟಿಂಗ್ ನಡೆಸಲಾಯಿತು. ನಾನು ಒಬ್ಬ ಸಮರ್ಥ ನಾಯಕನಾಗಬಲ್ಲೆ ಎಂಬ ವಿಶ್ವಾಸದಿಂದ ನನ್ನ ಸಹ ಮಿತ್ರರು ನನ್ನನ್ನು ನಾಯಕನಾಗಿ ಆರಿಸಿದರು. ಆಗ ಸರ್, “”ಮಂಗಳೂರಿನಲ್ಲಿ ಒಂದು ವಾರ ಕಾಲ ನಡೆಯುವ ಲೀಡರ್‌ಶಿಪ್ ಕ್ಯಾಂಪ್‌ಗೆ ನೀವು ಹೋಗಬೇಕು” ಎಂದು ಸೂಚಿಸಿದರು. ಕ್ಯಾಂಪ್‌ಗೆ ಹೋಗುವ ನಾಲ್ಕು ವಿದ್ಯಾರ್ಥಿಗಳಲ್ಲಿ ನಾನು ಒಬ್ಬನಾಗಿದ್ದೆ. ಇದು ನನಗೆ ಖುಷಿ ತಂದು ಕೊಟ್ಟಿತು.
ಪ್ರಿನ್ಸಿಪಾಲರಿಂದ ಒಪ್ಪಿಗೆ ಪತ್ರ ಪಡೆದ ನಾವು ಮರುದಿನ ಬೆಳಿಗ್ಗೆ 8.30ಕ್ಕೆ ಕುಂದಾಪುರದಲ್ಲಿ ಸೇರಿ, ನಂತರ ಅಲ್ಲಿಂದ ಎಲ್ಲರೂ ಒಟ್ಟಾಗಿ ಮಂಗಳೂರಿಗೆ ತೆರಳುವುದೆಂದು ನಿರ್ಧರಿಸಿದೆವು. ಮರುದಿನ ಅರ್ಧಗಂಟೆ ತಡವಾಗಿ ಕುಂದಾಪುರ ತಲುಪಿದ ನನಗೆ ಸ್ನೇಹಿತರಿಂದ ಮಂಗಳಾರತಿ ಕಾದಿತ್ತು. ನಂತರ ನಾವೆಲ್ಲರೂ ಮಂಗಳೂರಿನ ಕಡೆಗೆ ಪ್ರಯಾಣ ಬೆಳೆಸಿದೆವು. ಸುಮಾರು 12 ಗಂಟೆಗೆ ಮಂಗಳೂರಿನ ಕೊಣಾಜೆಗೆ ತಲುಪಿದೆವು. ಆದರೆ, ನಮಗೆ ಸರಿಯಾಗಿ ಕ್ಯಾಂಪ್ ನಡೆಯುವ ಸ್ಥಳದ ಬಗ್ಗೆ ಮಾಹಿತಿ ಇರಲಿಲ್ಲ. ಬೇರೆ ಬೇರೆ ಕಾಲೇಜಿನ ವಿದ್ಯಾರ್ಥಿಗಳು ಹೋಗುತ್ತಿರುವುದನ್ನು ನೋಡಿ ಇದೇ ದಾರಿ ಇರಬೇಕು ಅಂತ ಅವರ ಹಿಂದೆ ಹೊರಟೆವು. ಸರಿಸುಮಾರು 12.15ರ ವೇಳೆಗೆ ಕ್ಯಾಂಪ್ ನಡೆಯುವ ಸ್ಥಳವನ್ನು ತಲುಪಿದೆವು. ಒಂದು ಕ್ಷಣ ಅಲ್ಲಿನ ಪರಿಸರ ನೋಡಿದಾಗ ನಾವು ಬೇರೆ ಯಾವುದೋ ಲೋಕಕ್ಕೆ ಬಂದೆವು ಎನಿಸಿತು. ಏಕೆಂದರೆ ಅಪರಿಚಿತ ಮುಖಗಳ ಅನಾವರಣ ಅಂದು. ಅದೂ ಅಲ್ಲದೇ ತುಳುನಾಡು ಬೇರೆ. ನಾವು ಕುಂದನಾಡಿನವರು. ಅವರ ಭಾಷೆಗೂ ನಮ್ಮ ಭಾಷೆಗೂ ತುಂಬಾ ವ್ಯತ್ಯಾಸವಿತ್ತು. ನಂತರ ನಾವು ನಮ್ಮ ಕಾಲೇಜಿನ ಹೆಸರನ್ನು ನೋಂದಾಯಿಸುವ ಸಾಲಿನಲ್ಲಿ ನಿಂತೆವು. ಆವಾಗಲೇ ನಾವು ಬೇರೆ ಬೇರೆ ಕಾಲೇಜುಗಳ ವಿದ್ಯಾರ್ಥಿಗಳ ಪರಿಚಯ ಮಾಡಿಕೊಳ್ಳಲು ಶುರು ಮಾಡಿಕೊಂಡೆವು.
ರಾಷ್ಟ್ರೀಯ ಸೇವಾಯೋಜನೆ ಎಂದರೆ ಹಾಗೆ ಅದರಲ್ಲಿ ಏನೋ ಒಂದು ಕಣ್ಣಿಗೆ ಕಾಣದ ಅತೀ ದೊಡ್ಡ ರಹಸ್ಯ ಅಡಗಿದೆ. ಹೇಗೋ ಜೀವನ ನಡೆಸುತ್ತಿದ್ದ ಮನಸ್ಸುಗಳು ನಾವು ಮನದ ನವ ಆಲೋಚನೆಗಳಿಗೆ, ಭಾವಗಳಿಗೆ ಜೀವತುಂಬಿ ಬದುಕಿಗೊಂದು ಅರ್ಥ ಕೊಟ್ಟು, ಬದುಕಿನಲ್ಲಿ ಏನಾದರೂ ಸಾಧಿಸಬೇಕು ಅನ್ನುವ ಅಂಶವನ್ನು ಕಲಿಸಿಕೊಟ್ಟಿರುವುದು ಈ ರಾಷ್ಟ್ರೀಯ ಸೇವಾ ಯೋಜನೆ. ಹಾಗೆ ನಮ್ಮ ನೋಂದಣಿ ಆದ ನಂತರ ಸುಮಾರು ಒಂದು ಗಂಟೆಯ ಹೊತ್ತಿಗೆ ಭೋಜನವನ್ನು ಸ್ವೀಕರಿಸಿದೆವು. ತದನಂತರ ಮೂರು ಜಿಲ್ಲೆಗಳಾದಂತಹ ಉಡುಪಿ, ಕೊಡಗು, ದಕ್ಷಿಣಕನ್ನಡ ವಿದ್ಯಾರ್ಥಿಗಳನ್ನು ಎಲ್ಲಾ ಜಿಲ್ಲೆಯ ವಿದ್ಯಾರ್ಥಿಗಳ ಮಿಶ್ರಿತ ತಂಡಗಳಾಗಿ ಮಾಡಲಾಯಿತು. ಒಟ್ಟು ಏಳು ತಂಡಗಳಾಗಿ ಮಾಡಿದರು. ಪ್ರತಿಯೊಂದು ತಂಡಕ್ಕೂ ಆರ್. ಡಿ. ಸ್ಟಾರ್‌ಗಳನ್ನು ಹೆಡ್ ಆಗಿ ಮಾಡಿದರು. ಒಂದು ಖುಷಿ ಏನೆಂದರೆ, ನಮ್ಮ ಕಾಲೇಜಿನಿಂದ ಹೋದಂಥ ವಿದ್ಯಾರ್ಥಿಗಳೇ ಅಲ್ಲಿನ ತಂಡಕ್ಕೆ ನಾಯಕರಾಗಿ ಆಯ್ಕೆ ಆಗಿರುವುದು. ನನ್ನೊಳಗಿನ ನಾನು ಪ್ರದರ್ಶನವಾಗುವ ವೇದಿಕೆ. ನನಗರಿಯದ ಪ್ರತಿಭೆ ಅನಾವರಣವಾಗುವ ವೇದಿಕೆ. ಪರಿಚಿತ ಮನಗಳ ಅಪರಿಚಿತ ಪ್ರಯತ್ನ… ಪ್ರಯತ್ನ ಮತ್ತು ಪ್ರೋತ್ಸಾಹ ಪ್ರತಿಭೆಯಾಗುವಂತಹ ಸಂದರ್ಭ. ಪ್ರಾಮಾಣಿಕ ಪ್ರಯತ್ನಕ್ಕೆ ಸಿಗುವ ಪ್ರೋತ್ಸಾಹದಿಂದ ಪ್ರತಿಭೆ ಅನಾವರಣಗೊಳ್ಳುವಂಥ ಸುಸಂದರ್ಭ. ಇದು ರಾಷ್ಟ್ರೀಯ ಸೇವಾ ಯೋಜನೆ. ನಾವು ಅಲ್ಲಿ ಕಳೆದಂಥ ಏಳು ದಿನಗಳನ್ನು ಬಣ್ಣಿಸಲು ಪದಪುಂಜಗಳೇ ಸಾಲವು. ನಾವು ಅಷ್ಟೊಂದು ವಿಷಯವನ್ನು ಈ ಏಳು ದಿನದಲ್ಲಿ ಕಲಿತುಕೊಂಡೆವು. ಆ ಏಳು ದಿನಗಳಲ್ಲಿ ಪ್ರತಿಯೊಂದು ದಿನ, ಪ್ರತಿಯೊಂದು ಗಂಟೆ, ಪ್ರತಿಯೊಂದು ನಿಮಿಷ, ಪ್ರತಿಯೊಂದು ಸೆಕೆಂಡ್ ಕೂಡ ಅನುಭವಿಸಿದೆವು. ಅಷ್ಟೊಂದು ಅದ್ಭುತವಾದಂಥ ಶಿಬಿರವದು. ನಾವು ಅಲ್ಲಿದ್ದಂತಹ ಏಳು ದಿನಗಳು ಹೇಗಿತ್ತೆಂದರೆ… ಭುಜಗಳಿಗೆ ಗಜಶಕ್ತಿಯನ್ನು ತುಂಬಿ ನಾವೆಲ್ಲ ಅನುಜ-ಅಗ್ರಜರೆಂಬ ಭಾವವನ್ನು ತುಂಬಿ ಒಕ್ಕೊರಲಿನಿಂದ ಕೆಲಸ ಮಾಡುವುದರ ಜೊತೆ ಜೊತೆಗೆ ಪ್ರತಿಯೊಂದು ಕಾರ್ಯಕ್ರಮವನ್ನು, ಪ್ರತಿಯೊಂದು ಸಂದರ್ಭವನ್ನು ಆಸ್ವಾದಿಸಿದ್ದೇವೆ. ಸ್ವಾರ್ಥ, ಅಹಂಕಾರ, ಸೊಕ್ಕು ಬಿಟ್ಟು ನಿಸ್ವಾರ್ಥದೊಂದಿಗೆ, ಪ್ರೀತಿಯೊಂದಿಗೆ, ಸೌಹಾರ್ದದೊಂದಿಗೆ ಬದುಕಿನ ದಾರಿಯನ್ನು ಹಿಡಿದು ಬಿಡು ಅನ್ನುವ ಸಂದೇಶವನ್ನು ಕೊಡುವ ರಾಷ್ಟ್ರೀಯ ಸೇವಾ ಯೋಜನೆ ನಿಜಕ್ಕೂ ಅರ್ಥಪೂರ್ಣ. ನಾವು ಈ ಏಳು ದಿನಗಳಲ್ಲಿ 7 ಜನ್ಮಕ್ಕೆ ಆಗುವಷ್ಟು ಕಲಿತೆವು ಅನಿಸಿತು.
ಅದೊಂದು ಎಷ್ಟು ಅರ್ಥಪೂರ್ಣವಾದಂತಹ, ಅರ್ಥಗರ್ಭಿತವಾದಂತಹ ಶಿಬಿರವಾಗಿರಬಹುದು ಎಂದು ನೀವೇ ಯೋಚಿಸಿ. ಅಲ್ಲಿ ಆಗುವಂತಹ ಪ್ರತಿಯೊಂದು ಕಾರ್ಯಕ್ರಮದಲ್ಲೂ ಜೀವಂತಿಕೆ ಇದೆ, ಭಾವತ್ವವಿದೆ. ಪ್ರತಿಯೊಬ್ಬರನ್ನು ಮಂತ್ರಮುಗ್ಧರನ್ನಾಗಿ ಮಾಡಿಸುವಂತಹ ಶಕ್ತಿ ರಾಷ್ಟ್ರೀಯ ಸೇವಾಯೋಜನೆಗೆ ಇದೆ. ನಾನು ಈ ಶಿಬಿರದಿಂದ ಕಲಿತದ್ದು ಅನೇಕವಿದೆ. ನನ್ನ ಜೀವನದಲ್ಲಿ ಮರೆಯಲಾಗದ ಕ್ಷಣಗಳಲ್ಲಿ ಈ ಒಂದು ಶಿಬಿರವು ಹೌದು. ಜೀವನ ಮೌಲ್ಯ, ಜೀವನ ಕೌಶಲ್ಯ, ಜೀವನ ಪಾಠ ಎಲ್ಲವನ್ನು ನಾನು ಈ ರಾಷ್ಟ್ರೀಯ ಸೇವಾ ಯೋಜನೆಯಿಂದ ಕಲಿತೆ. ಇಂತಹ ಒಂದು ಅವಕಾಶ ನನಗೆ ಸಿಕ್ಕಿದೆ ಅಂದರೆ, ಅದು ನನ್ನ ಪಾಲಿನ ಭಾಗ್ಯ. ಒಂದು ಮುಖ್ಯವಾದ ವಿಚಾರವೆಂದರೆ, ಪ್ರತಿದಿನ 5.45ರ ಮುಂಜಾನೆಯಿಂದ 7.30ರವರೆಗೆ ಪಥಸಂಚಲನ ತರಬೇತಿ ಇತ್ತು. ಅದು ಹೇಗಿತ್ತೆಂದರೆ, ಸೈನಿಕರಿಗೆ ಮಿಲಿಟರಿಯಲ್ಲಿ ಮಾರ್ಚ್ ಮಾಡುವ ತರಹವಿತ್ತು. ಅಷ್ಟೊಂದು ಅಚ್ಚುಕಟ್ಟಾಗಿ ನಮಗೆ ಆರ್. ಡಿ. ಸ್ಟಾರ್ಗಳು ತರಬೇತಿ ನೀಡುತ್ತಿದ್ದರು. ತಪ್ಪು ಮಾಡಿದವರಿಗೆ ಫನಿಶ್‌ಮೆಂಟ್ ಕಟ್ಟಿಟ್ಟ ಬುತ್ತಿಯಾಗಿತ್ತು. ಸುರಿಯುವ ಮಳೆಯನ್ನು ಲೆಕ್ಕಿಸದೆ ಅರ್ಥಪೂರ್ಣವಾದ ತರಬೇತಿಯನ್ನು ಮುಗಿಸಿ ಬಂದೆವು. ಇಂತಹ ಒಂದು ಅವಕಾಶವನ್ನು ಕಲ್ಪಿಸಿಕೊಟ್ಟ ಕಾಲೇಜಿನ ಆಡಳಿತ ಮಂಡಳಿ ಮತ್ತು ಉಪನ್ಯಾಸಕ ವರ್ಗದವರಿಗೆ ನಾನು ಚಿರಋಣಿ.
ಮಹೇಶ್ ಕೊಠಾರಿ
ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Pharma Company ಮೂಲಕ 4500 ಕೋಟಿ ಅಕ್ರಮ: ಇ.ಡಿ.
Mumbai ದೋಣಿ ದುರಂತ: ಮತ್ತೂಂದು ಮೃತದೇಹ ಪತ್ತೆ
ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್ ಆಫ್ ಕಾಲ್ ಸ್ಟೇಟಸ್ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ
Missile Development: ಕ್ಷಿಪಣಿ ನಿರ್ಮಾಣ ಆರೋಪ: ಪಾಕ್‌ಗೆ ಅಮೆರಿಕ ನಿರ್ಬಂಧ
Coconut Oil Controversy: 20 ವರ್ಷಗಳ ಕೊಬ್ಬರಿ ಎಣ್ಣೆ ವಿವಾದಕ್ಕೆ ಸುಪ್ರೀಂ ಬ್ರೇಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.