ಕಾಡು ನೋಡಿ ಕೃಷಿ ಮಾಡಿ
Team Udayavani, Oct 8, 2018, 6:00 AM IST
ಕೃಷಿ ಸುಸ್ಥಿರತೆಗೆ ಪರಿಣಾಮಕಾರಿ ಪಾಠಶಾಲೆ ನಮ್ಮ ಭೂಮಿಯ ಪಕ್ಕದ ಕಾಡಿನಲ್ಲಿದೆ. ಅಲ್ಲಿನ ಮರ ಗಿಡಗಳ ಸ್ವರೂಪಗಳು ಪರಿಸರದ ಸಾಧ್ಯತೆ ಹೇಳುತ್ತವೆ. ಮಳೆ ಇಲ್ಲದ ನೆಲೆಯಲ್ಲಿ ಯಾವ ಬೆಳೆ ಯೋಗ್ಯ? ಬರ ಗೆಲ್ಲುವ ಮರ ಯಾವುದೆಂದು ಇಲ್ಲಿ ತಿಳಿಯುತ್ತದೆ.
ಹೊಸ ಭೂಮಿ ಖರೀದಿಸಿ ಬೆಳೆ ಬೆಳೆಯಲು ಹೊರಟವರು ಸುತ್ತಲಿನ ಕೃಷಿಯತ್ತ ಕಣ್ಣಾಡಿಸುತ್ತೇವೆ. ಕೊಪ್ಪಳಕ್ಕೆ ದಾಳಿಂಬೆ, ವಿಜಯಪುರಕ್ಕೆ ದ್ರಾಕ್ಷಿ$, ಗೋಕಾಕ್‌ಗೆ ತರಕಾರಿ, ಬಾಗಲಕೋಟೆಗೆ ಕಬ್ಬು ಬೆಳೆಯಬಹುದೆಂಬ ನಿರ್ಧಾರಕ್ಕೆ ನಿಲ್ಲುತ್ತೇವೆ. ಹೆದ್ದಾರಿ ಪಕ್ಕದ ಹೊಲದ ಬೆಳೆ ಗಮನಿಸಿ, ಸೂರ್ಯಕಾಂತಿ, ಮೆಕ್ಕೆಜೋಳ ಲಾಭದಾಯಕ ಬೆಳೆಗಳೆಂದು ನಿರ್ಧರಿಸುತ್ತೇವೆ. ಕೃಷಿ ವಿಜ್ಞಾನಿಗಳು, ಸಾಧಕ ಕೃಷಿಕರ ಜೊತೆ ಮಾತಾಡುತ್ತ ಕನಸು ಶುರುವಾಗುತ್ತದೆ. ಇನ್ನಷ್ಟು ಸಿದ್ಧ ಸೂತ್ರಗಳು ಸಮೂಹ ಸನ್ನಿಯಂತೆ ಕಣ್ಮುಚ್ಚಿ ಅಡಿಕೆ, ಬಾಳೆ, ತೊಗರಿ, ಭತ್ತದ ಹಿಂದೆ ಸಾಗಲು ಪ್ರೇರೇಪಿಸುತ್ತವೆ. ಹೊಸದಾಗಿ ಗೇರು, ಮಾವು, ಕಾಳುಮೆಣಸು, ಹೆಬ್ಬೇವೆಂದು ಹೆಜ್ಜೆ ಹಾಕುತ್ತೇವೆ.
ಚಿತ್ರದುರ್ಗ, ದಾವಣಗೆರೆ ಪ್ರದೇಶಗಳಲ್ಲಿ ಕೊಳವೆ ಬಾವಿಗೆ ಉತ್ತಮ ನೀರು ದೊರಕಿದರೆ ಅಲ್ಲಿನ ರೈತ ಬಂಗಾರ ಸಿಕ್ಕಷ್ಟು ಖುಷಿ ಪಡುತ್ತಾನೆ. ನೀರು ಸಿಕ್ಕ ಸಂತಸದಲ್ಲಿ ಕೃಷಿ ಸಲಹೆ ಕೇಳಲು ನಗರಕ್ಕೆ ಹೊರಟವರಿಗೆ ಅರ್ಧ ದಾರಿಯಲ್ಲಿ ಸಿಗುವವರು ಏಣ್ಣೆ ತಾಳೆ ಬೆಳೆಯಲು ಸಲಹೆ ನೀಡುವವರು! ಲಾಭದಾಯಕ ಬೆಳೆ, ಲಕ್ಷ ಲಕ್ಷ ಗಳಿಸುವ ಸಬ್ಸಿಡಿ ಸಿಗುತ್ತದೆ ಎಂದೆಲ್ಲಾ ಆಮಿಷ ತೋರಿಸಿ ಸಸಿ ನಾಟಿ ಆರಂಭವಾಗಿಬಿಡುತ್ತದೆ. ಒಂದು ತಾಳೆ ಗಿಡಕ್ಕೆ ದಿನಕ್ಕೆ 50 ಲೀಟರ್ ನೀರು ಬೇಕು. ಮೂರು ವರ್ಷಗಳ ನಂತರ ಗೊನೆ ಬಿಡಲು ಆರಂಭಿಸಿದಾಗ ಗಿಡವೊಂದಕ್ಕೆ 250 ಲೀಟರ್ ನೀರುಣಿಸಬೇಕು.
ಅಷ್ಟರಲ್ಲಿ ಕೊಳವೆ ಬಾವಿ ಬತ್ತುತ್ತದೆ. ತೋಟ ಒಣಗುತ್ತದೆ. ಲಾಭ ಗಳಿಕೆಯ ಆಸೆಗೆ ಬರದ ನಾಡಿನಲ್ಲಿ ಅಧಿಕ ನೀರು ಬಯಸುವ ತಾಳೆ ಬೆಳೆಯಲು ಹೋದವರು ಸಾಲಗಾರರಾಗುತ್ತಾರೆ. ತಾಳೆಯಲ್ಲಿ ಸೋತ ಬಳಿಕ ಬೇರೆ ಕೃಷಿ ಮಾಡಲು ತೋಟದ ಮರವನ್ನು ಕಿತ್ತೆಸೆಯಬೇಕು. ಮರದ ಕೀಳಲು ಜೆಸಿಬಿ ಬೇಕು. ತಾಳೆ ಸಂಹಾರಕ್ಕೆ ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ. ಭೂಮಿಗೆ ಒಂದು ಬೆಳೆ ಬೆಳೆಯಲು ಹೋಗುವ ನಾವು, ಮೊದಲು ಪರಿಸರದ ಕಾಡು ಗುಡ್ಡಗಳನ್ನು ನೋಡಿದರೆ ನೆಲ ಸತ್ವದ ಸತ್ಯ ತಿಳಿಯುತ್ತದೆ. ಕಣ್ಣಿಗೆ ಕಾಣದ ಕೊಳವೆ ಬಾವಿ ನೀರು ನಂಬಿ ಏಣಿಕೆಗೆ ಸಿಗದ ಸಾಲದ ಗಾಯದಲ್ಲಿ ಮುಳುಗುವುದು ತಪ್ಪುತ್ತದೆ.
ಬಾಗಲಕೋಟೆಯ ಜಮಖಂಡಿಯ ಕಲ್ಲಹಳ್ಳಿಯ ಗುಡ್ಡದಲ್ಲಿ, ಕಳ್ಳಿ ಗಿಡ ಹಾಗೂ ಕಲ್ಲು ಧಾರಾಳವಿದೆ. ಸರಿಯಾಗಿ 500-600 ಮಿಲಿ ಮೀಟರ್ ಮಳೆಯೂ ಸುರಿಯುವುದಿಲ್ಲ. ಒಮ್ಮೆ ಇಲ್ಲಿನ ಗುಡ್ಡದಲ್ಲಿ ಬೆಳೆದ ಸಸ್ಯಗಳ ಪಟ್ಟಿಮಾಡಿದಾಗ ಮುಳ್ಳುಕಂಟಿಗಳು ಜಾಸ್ತಿ ಕಾಣಿಸಿದವು. ನೈಸರ್ಗಿಕವಾಗಿ ಬೆಳೆದಿದ್ದ 118 ಗಿಡ, ಬಳ್ಳಿಗಳಲ್ಲಿ 32 ಕ್ಕೂ ಹೆಚ್ಚು ಮುಳ್ಳು ಗಿಡಗಳಾಗಿದ್ದವು. ಗಾಯಮಾಲಿ, ಚರಗಿ, ಗೋಳಗೋಳಕಿ, ಗಜ್ಜುಗ , ಗುಂಡಗೊಳಿ, ಕಾರೆ, ಮುಂಗಾರಿ, ರೇವಡಿ, ರಟಗೋಳಿ, ಭರಮ ಜಂಡಿ, ಬರಗಿ, ಫಿರಂಗಿ, ನಗರಿ ಮುಂತಾದವು ಅಲ್ಲಿದ್ದವು. ಸಸ್ಯ ಭಾಗಗಳಲ್ಲಿ ಮುಳ್ಳಿಗೆ ವಿಶೇಷ ಅಸ್ತಿತ್ವವಿಲ್ಲ.
ಅವು ಎಲೆಯ ಪರಿವರ್ತಿತ ರೂಪ ಮಾತ್ರ. ಬಿರು ಬೇಸಿಗೆಯ ನೀರಿನ ಕೊರತೆ ಸಂದರ್ಭದಲ್ಲಿ ಗಿಡದ ನೀರು ಆವಿಯಾಗುವುದನ್ನು ತಪ್ಪಿಸಿ ಗಿಡ ಬದುಕಿಸುವ ತಂತ್ರ ಮುಳ್ಳಿನದು. ಇದೇ ಕಾರಣಕ್ಕಾಗಿ ಮಳೆಗಾಲದಲ್ಲಿ ಹೆಚ್ಚು ಎಲೆ ತುಂಬಿರುವ ಕಂಟಿಗಳು ಬೇಸಿಗೆಯಲ್ಲಿ ಕೇವಲ ಮುಳ್ಳು ಹೊತ್ತು ನಿಲ್ಲುತ್ತವೆ. ನೆಲದಲ್ಲಿ ತೇವಾಂಶ ರಕ್ಷಣೆಯಾದರೆ, ಬೀಜ ಮೊಳಕೆಯಾಗಿ ಸಸ್ಯದ ಅಭಿವೃದ್ಧಿಯಾಗುತ್ತದೆ. ನೀರನ್ನು ಮಿತವಾಗಿ ಬಳಸುವ ಮುಳ್ಳುಗಿಡಗಳು ನೆಲಕ್ಕೆ ತರಗೆಲೆ ಚೆಲ್ಲುತ್ತ ಕಾಲಾಂತರದಲ್ಲಿ ಭೂಮಿಗೆ ಶಕ್ತಿ ತುಂಬುತ್ತವೆ.
ಮಣ್ಣಿನ ಸತ್ವಾಂಶ ಹೆಚ್ಚಿಸಿ ತೇವಾಂಶ ಉಳಿಸುವ ಸೂತ್ರ ಕಂಟಿ ಕಾಡಿನದು. ಕಾಡಿನ ಮರಗಳು ಮಳೆ ನಂಬಿ ಬದುಕಬೇಕು, ಬೇಸಿಗೆಯ 42 ಡಿಗ್ರಿ ಉಷ್ಣತೆ ಸಹಿಸಬೇಕು. ಇವಕ್ಕೆಲ್ಲಾ ನಾವೇನು ಕೊಳವೆ ಬಾವಿ ಕೊರೆದು ನೀರುಣಿಸುತ್ತೇವೆಯೇ? ಮರಗಳು ಬೇರು, ತೊಗಟೆಗಳಲ್ಲಿ ನೀರುಳಿಸಿಕೊಂಡು ಬರ ಗೆಲ್ಲುವ ಜಾಣ್ಮೆಗೆ ಒಗ್ಗಿವೆ. ಇಂಥ ಕಲ್ಲು ನೆಲದಲ್ಲಿ ಒಂದಡಿ ಎತ್ತರ ಬೆಳೆದ ಗಿಡ ಮೂರಡಿ ಆಳಕ್ಕೆ ಬೇರಿಳಿಸಿರುತ್ತದೆ. ಒಮ್ಮೆ ಭೂಮಿಯಲ್ಲಿ ಮಳ್ಳು ಗಿಡ ಬೆಳೆಯುತ್ತಿದ್ದಂತೆ ಮಣ್ಣು ಪರಿವರ್ತನೆಯಾಗಿ ಮುಳ್ಳಿಲ್ಲದ ಗಿಡ, ಬಳ್ಳಿಗಳು ತಲೆ ಎತ್ತುತ್ತ ಕಾಡು ಕೂಡುತ್ತದೆ.
ಆಗ ಬೇವು, ಶ್ರೀಗಂಧ, ಹೊಂಗೆ ಮರಗಳು ಬೆಳೆಯುತ್ತವೆ. ಮಣ್ಣು ರಚನೆಯ ಮಹತ್ವವನ್ನು ಇಲ್ಲಿ ಕಲಿಯಬಹುದು. ಕಾಡಿನಲ್ಲಿ ನೂರಾರು ಅಡಿಯೆತ್ತರ ಬೆಳೆದ ಹೆಮ್ಮರ ನೋಡುತ್ತೇವೆ. ನಮ್ಮ ತೋಟವೂ ಹೀಗೆ ಬೆಳೆಯಬೇಕೆಂದು ಹಂಬಲಿಸುತ್ತೇವೆ. ಇದ್ದಕ್ಕಿದ್ದಂತೆ ಯಾವಾಗಲೂ ಮರ ಬೆಳೆಯುವುದಿಲ್ಲ. ಹುಲ್ಲು, ಮುಳ್ಳು, ಬಳ್ಳಿ, ಪೊದೆ, ಗಡ್ಡೆ ಸಸ್ಯ ಸಂಕುಲ ಒಂದಿಷ್ಟು ವರ್ಷ ನೆಲವನ್ನು ಆಳುತ್ತದೆ. ಇದಾದ ನಂತರ ವೃಕ್ಷ ಬೆಳವಣಿಗೆಗೆ ಅವಕಾಶ ಕಲ್ಪಿಸುತ್ತದೆ. ಪಕ್ಷಿಗಳ ಹಿಕ್ಕೆಯಲ್ಲಿ ನೆಲಕ್ಕೆ ಬಿದ್ದ ಬೀಜಗಳು ಮೊಳೆತು ಮರವಾಗುತ್ತವೆ. ಗಿಡ ದಟ್ಟನೆಯಲ್ಲಿ ಪೈಪೋಟಿ ಎದುರಿಸಿ ಗೆಲ್ಲಬೇಕು.
ದಟ್ಟ ನೈಸರ್ಗಿಕ ಕಾಡಿನ ಹೆಮ್ಮರದ ಬುಡದ ಸುತ್ತ ಹಲಗೆಯಂತೆ ವಿನ್ಯಾಸಗೊಂಡ ಕಾಂಡದ ಸ್ವರೂಪ ನೋಡಿರಬಹುದು. ಊರೇ ಬೇರು ಎಂದು ಕರೆಯಲ್ಪಡುವ ಇವು ಹೆಮ್ಮರಗಳ ಊರು ಗೋಲಾಗಿವೆ. ಫಲವತ್ತಾದ ಮಣ್ಣಿನಲ್ಲಿ ಬೆಳೆದ ಸಸ್ಯ ಸೂರ್ಯನ ಬೆಳಕು ಹುಡುಕುತ್ತ ಎತ್ತರ ಎತ್ತರಕ್ಕೆ ಬೆಳೆಯುತ್ತವೆ. ರಭಸದ ಬಿರುಗಾಳಿಗೆ ಬಿದ್ದು ಹೋಗುವ ಭಯ ಕಾಡಿದಾಗ ತಮ್ಮ ಕಾಂಡದ ಬುಡವನ್ನು ಪರಿವರ್ತಿಸಿ ಊರೇ ಬೇರಿನ ರಚನೆಯಾಗುತ್ತದೆ. ಐದಾರು ಅಡಿ ಹೊರಕ್ಕೆ ಮೈಚಾಚಿ ಮರದ ಸುತ್ತ ಆಧಾರವಾಗಿರುವ ಹಲಗೆಯಲ್ಲಿ ಚೂರು ಕತ್ತರಿಸಿದರೂ ಇಡೀ ಮರ ಮುರಿದು ಬೀಳುತ್ತವೆ.
ಕಾಡಿನ ಬೆಳವಣಿಗೆಯನ್ನು ಪುಟ್ಟ ಹುಲ್ಲಿನಿಂದ ಹೆಮ್ಮರದವರೆಗೆ, ಬೇರಿನಿಂದ ಟೊಂಗೆ ಟಿಸಿಲಿನ ಮೂಲಕ ಕಲಿಯುತ್ತ ಹೋದರೆ ನೆಲದ ಕೃಷಿ ಪಾಠಗಳು ಕಾಣಿಸುತ್ತವೆ. ಮಲೆನಾಡಿನಲ್ಲಿ 2200-3000 ಮಿಲಿ ಮೀಟರ್ ಮಳೆ ಸುರಿಯುವಲ್ಲಿ ಶತಮಾನಗಳ ಹಿಂದಿನ ಸಾಂಪ್ರದಾಯಿಕ ಅಡಿಕೆ ತೋಟಗಳಿವೆ. ಕಣಿವೆಯಲ್ಲಿ ಬೆಳೆಸಿದ ತೋಟಗಳಿಗೆ ನೀರಾವರಿ ವ್ಯವಸ್ಥೆಗಳಿಲ್ಲ. ಚಳಿಗಾಲದಲ್ಲಿ ಹಳ್ಳ, ಕಾಲುವೆಗಳಿಗೆ ಒಡ್ಡು ಹಾಕಿ ನೀರು ನಿಲ್ಲಿಸುವ ಪದ್ಧತಿಗಳಿಂದ ತೋಟಗಳು ಬದುಕಿವೆ. ಜೋರಾದ ಮಳೆ ಸಹಿಸಬೇಕು, ಬೇಸಿಗೆಯ ಬಿಸಿಲಿಂದ ರಕ್ಷಿಸಬೇಕೆಂದು ಬೇಸಾಯದ ಸಾಂಪ್ರದಾಯಿಕ ಜ್ಞಾನ ಜನಿಸಿದೆ.
ಎಕರೆಗೆ 550 ಅಡಿಕೆ ಮರಗಳಿರಬೇಕೆಂಬ ಸಾಲು ಲೆಕ್ಕಾಚಾರದ ಹೊರತಾಗಿ ಇಲ್ಲಿ ತೋಟಕ್ಕೆ ಕಾಡಿನ ರೂಪ ಬಂದಿದೆ. 70-80 ಅಡಿ ಎತ್ತರ ಬೆಳೆಯುವ ಅಡಿಕೆ, ಅಡಿಕೆ ಮರ ಆಶ್ರಯಿಸಿ 40 ಅಡಿ ಎತ್ತರ ಹಬ್ಬಿದ ಕಾಳು ಮೆಣಸು, 15 ಅಡಿ ಎತ್ತರದ ಬಾಳೆ ಮರಗಳಿವೆ. ನೆಲ ಹಂತದಲ್ಲಿ ಅರಿಶಿನವಿದೆ. ತೋಟದ ಅಂಚಿನಲ್ಲಿ ಅಲ್ಲಲ್ಲಿ ತೆಂಗು, ಜಾಯಿಕಾಯಿ, ಹಲಸು, ನಿಂಬೆ, ಕಂಚಿ, ಬೇರು ಹಲಸು, ಬಿಂಬಳೆ ಮುಂತಾದ ಫಲವೃಕ್ಷಗಳಿವೆ. ಮಳೆಗಾಲದಲ್ಲಿ ಗೆಣಸು, ಕೆಸನ ಗಡ್ಡೆ, ಸವತೆ ಕಾಣಬಹುದು. ಕಾಡಿನಲ್ಲಿ ಮರ, ಬಳ್ಳಿ, ಪೊದೆ, ಹುಲ್ಲುಗಳಿರುವಂತೆ ತೋಟದ ಸಸ್ಯ ಸಮೃದ್ಧತೆ ರಚನೆಯಾಗಿದೆ.
ಭಾರೀ ಮಳೆ ಸುರಿಯುವ ಪ್ರದೇಶದಲ್ಲಿ ಮಳೆಯಿಂದ ಮಣ್ಣು ಸವಕಳಿ ತಪ್ಪಿಸಲು ಬಹುಹಂತದ ವೃಕ್ಷ ಸಂಪತ್ತು ನೆರವಾಗುತ್ತದೆ. ಎತ್ತರದ ಅಡಿಕೆ ಮರದ ತುದಿಯಲ್ಲಿ ಬಿದ್ದ ಮಳೆ ಹನಿ ಬಾಳೆ, ಮೆಣಸಿನ ಬಳ್ಳಿ, ಅರಿಶಿನ ಸಸ್ಯಗಳ ಮೇಲೆ ಹಂತ ಹಂತವಾಗಿ ಸುರಿಯುತ್ತದೆ. ಬೇಸಿಗೆ ಬಿಸಿಲು ತೋಟದ ನೆಲಕ್ಕೆ ತಗುಲದಂತೆ ಬಾಳೆಯಂಥ ನಿತ್ಯಹರಿದ್ವರ್ಣ ಸಸ್ಯಾವರಣ ನೆರವಾಗುತ್ತವೆ. ಪಹಣಿ ಪತ್ರಿಕೆಯಲ್ಲಿ ಅಡಿಕೆ ತೋಟವೆಂದು ದಾಖಲಾದ ಭೂಮಿಯಲ್ಲಿ ಸುಮಾರು 15-20 ಉಪಯುಕ್ತ ಸಸ್ಯ ಜಾತಿಗಳನ್ನು ನೋಡಬಹುದು. ಕಾಡು ನೋಡಿ ಕೃಷಿ ರೂಪಿಸಿದ ತಂತ್ರ ಇದಾಗಿದೆ.
ಚಿಕ್ಕಮಗಳೂರು, ಮಡಿಕೇರಿಯ ಕಾಫಿ ತೋಟಗಳಲ್ಲಿ ಕಾಡಿನ ಅನುಸರಣೆ ಇದೆ. ನೆರಳಿಗಾಗಿ ಹೆಮ್ಮರ, ಬೇಲಿಯಂಚಿನಲ್ಲಿ ಕಿತ್ತಳೆ, ಹಲಸು, ಬಾಳೆಗಳಿವೆ. ಮಳೆಯ ನೀರು ಸರಾಗ ಬಸಿದು ಹೋಗುವ, ಕಡಿದಾದ ಗುಡ್ಡದ ಇಳಿಜಾರಿನಲ್ಲಿ ಕಾಫಿಯ ಗೆದ್ದಿದೆ. ಬೇಸಿಗೆಯಲ್ಲಿ ನೆಲದ ತೇವ ಉಳಿಸಲು ನೆರಳು ನೀಡುವ ವೃಕ್ಷಗಳು ನೆರವಾಗುತ್ತವೆ. ಕಾಫಿ ಪರಾಗಸ್ಪರ್ಶದಿಂದ ಜೇನು ಬದುಕುವ ಪರಿಸರವಿದೆ. ತೋಟದಲ್ಲಿ ಕಾಳು ಮೆಣಸು ಬೆಳೆಯುವ ಹೊಸ ಹೆಜ್ಜೆಗೆ ಪೂರ್ವ ಆಸ್ಟ್ರೇಲಿಯಾದ ಸಿಲ್ವರ್ ಓಕ್ ಮರ ಈಗ ಪಶ್ಚಿಮ ಘಟ್ಟದಲ್ಲಿ ಜನಪ್ರಿಯವಾಗಿದೆ.
ಆಳಕ್ಕೆ ಬೇರಿಳಿಸದ, ಹೂ, ಹಣ್ಣು ನೀಡದ ಈ ವೃಕ್ಷ ಪ್ರೀತಿಗೆ ಸ್ಥಳೀಯ ನೈಸರ್ಗಿಕ ಮರಗಳು ಕಡಿಮೆಯಾಗಿವೆ. ಅಗತ್ಯಕ್ಕೆ ತಕ್ಕಂತೆ ಬೇಸಾಯದಲ್ಲಿ ಕಲಿಕೆ ನಡೆಯುತ್ತದೆ. ರೋಗ, ಬೆಲೆ ಏರಿಕೆ ಪರಿಣಾಮಕ್ಕೆ ಒಂದನ್ನು ಸೇರಿಸಿ ಒಂದನ್ನು ಕಳೆಯುವ ಆಟಕ್ಕೆ, ತೋಟವು ಪ್ರಯೋಗ ಭೂಮಿಯಾಗಿದೆ. ಕಾಳುಮೆಣಸು ಅಡಿಕೆ, ಕಾಫಿ, ತೆಂಗಿನ ಉಪಬೆಳೆಯಾಗಿದೆ. ಇದು ಎರಡು ಶತಮಾನಗಳ ಹಿಂದೆ ಕಾಡು ಉತ್ಪನ್ನವಾಗಿತ್ತು. ಪಶ್ಚಿಮಘಟ್ಟದ ಕಾಡುಗಳಲ್ಲಿ ನೈಸರ್ಗಿಕವಾಗಿ ಬೆಳೆದ ಮೆಣಸಿನ ಬಳ್ಳಿಗಳಿಂದ ಸಂಗ್ರಹ ನಡೆಯುತ್ತಿತ್ತು. ‘ಬೊಂದಬಾಳೆ’ ಎಂಬ ಕಾಡು ಮರಕ್ಕೆ ಬಳ್ಳಿಗಳು ಬಹಳ ಚೆನ್ನಾಗಿ ಹಬ್ಬಿ ಬೆಳೆದಿವೆಯೆಂದು ಕ್ರಿ.ಶ. 1801 ಮಾರ್ಚ್ 9 ರಂದು ಯಲ್ಲಾಪುರದ ಕಟ್ಟಿಗೆ ಹಳ್ಳಿಯ ಕಾಡು ನೋಡಿದ ಡಾ. ಫ್ರಾನ್ಸಿಸ್ ಬುಕಾನನ್ ದಾಖಲಿಸುತ್ತಾರೆ.
ಬೊಂದುಬಾಳೆ ಎಂಬ ಮೃದು ಕಟ್ಟಿಗೆಯ ಕಾಡು ಮರಕ್ಕೆ ಕಾಳು ಮೆಣಸು ಚೆನ್ನಾಗಿ ಹಬ್ಬಿದ್ದನ್ನು ದಾಖಲಿಸುತ್ತಾರೆ. ಮರ ಆಶ್ರಯಿಸಿ ಬಳ್ಳಿ ಹಬ್ಬುತ್ತದೆ, ಆದರೆ ಎಲ್ಲ ಜಾತಿಯ ಮರಗಳನ್ನೂ ಬಳ್ಳಿ ತಬ್ಬಿ ಬೆಳೆಯುವುದಿಲ್ಲ! ಕಾಡು ಕಲಿಕೆಯ ವಿಸ್ಮಯವಿದು. ಬಳಸಿ ಬಲ್ಲ ಜ್ಞಾನದಿಂದ ಕೃಷಿ ಬದುಕು ಅನಾವರಣವಾಗುತ್ತದೆ. ಭೂಮಿಯ ಮೇಲಾºಗದ ಸಾವಯವ ಪದಾರ್ಥ, ಮೇಲ್ಮಣ್ಣು, ಖನಿಜಯುಕ್ತ ಮಣ್ಣು, ಅತ್ಯಂತ ಕೆಳಭಾಗದ ಕಲ್ಲು ರಚನೆ ಅರಿತು ಕೃಷಿ ಶುರುವಾಗಬೇಕು. ನೆಲ ಜಲದ ತಾಕತ್ತಿನ ಮೂಲ ಕಲಿಕೆಗೆ ಪ್ರಯೋಗಾಲಯಗಳಿಗಿಂತ ಕಾಡು ಸನಿಹದೆಯಲ್ಲವೇ? ಸರಿಯಾಗಿ ಆಲಿಸಲು ಆರಂಭಿಸಿದರೆ ಕೃಷಿ ಸುಸ್ಥಿರತೆಯ ಧ್ವನಿಗಳು ಇಲ್ಲಿ ಕೇಳಿಸುತ್ತದೆ.
ಅಡಿಕೆ-ರಬ್ಬರ್: ರಬ್ಬರ್ ಬೆಳೆಯುವುದರಿಂದ ಭಾರೀ ಲಾಭವಿದೆ ಎಂಬು ನಂಬಿಕೆ ಕೇರಳದ ತುದಿಯಿಂದ ಕರ್ನಾಟಕದ ಅರೆಮಲೆನಾಡಿಗೂ 20 ವರ್ಷಗಳೀಚೆಗೆ ವಿಸ್ತರಣೆಯಾಗಿವೆ. ದಕ್ಷಿಣ ಕನ್ನಡದ ಸುಳ್ಯದಲ್ಲಿ ಅಡಿಕೆ ಹಿಂದಿಕ್ಕಿ ರಬ್ಬರ್ ಮೇಲೆದ್ದಿದೆ. ಬೆಲೆ ಕುಸಿತ, ಇಳುವರಿ ಕಡಿಮೆ, ಕೂಲಿ ಸಮಸ್ಯೆಯಿಂದ ಮುಂದೇನು ಮಾಡಬೇಕೆಂಬ ಚಿಂತೆ ರಬ್ಬರ್ ಬೆಳೆಗಾರರನ್ನು ಇಂದು ಕಾಡುತ್ತಿದೆ.
ಶಿವಮೊಗ್ಗದ ರಿಪ್ಪನ್‌ಪೇಟೆ- ತೀರ್ಥಹಳ್ಳಿ ಮಾರ್ಗದ ಕೆಲವು ರಬ್ಬರ್ ತೋಟಿಗರು, ಮರಕ್ಕೆ ಕಾಳು ಮೆಣಸಿನ ಬಳ್ಳಿ ಹಬ್ಬಿಸುವ ಹೊಸ ಪ್ರಯತ್ನ ಶುರು ಮಾಡಿದ್ದಾರೆ. ತಾಳೆ ಮರಕ್ಕೆ ನೀರುಣಿಸಿ ಕಿತ್ತ ಕಥೆ ಒಂದಾದರೆ ಸೋತ ರಬ್ಬರ್ ಮರ ಆಧರಿಸಿ ಬಳ್ಳಿ ಗೆಲ್ಲಿಸುವ ಮುಖ ಇದಾಗಿದೆ. ಮರದ ನೆರಳಲ್ಲಿ ಯಾವುದೇ ಬೆಳೆ ಬೆಳೆದರೂ ರಬ್ಬರ್ ಇಳುವರಿ ಕಡಿಮೆಯಾಗುತ್ತದೆ. ರಬ್ಬರ್ ಪ್ರಯೋಜನವಿಲ್ಲದ ಕಾಲದಲ್ಲಿ ಅದೇ ಮರದ ನೆರಳಲ್ಲಿ ಬದುಕಲು ಯಾವೆಲ್ಲ ಬೆಳೆ ಸಾಧ್ಯವೆಂಬ ಪ್ರಶ್ನೆ ಮುಖ್ಯವಾಗುತ್ತದೆ.
ಮುಂದಿನ ಭಾಗ: ಗೊಳಲು ನೆರಳಿನ ಮಾಯಾಲೋಕ
* ಶಿವಾನಂದ ಕಳವೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.