ಅಂಡರ್-19 ಏಶ್ಯ ಕಪ್: 7 ಕೂಟಗಳಲ್ಲಿ 6ನೇ ಕಿರೀಟ ಧರಿಸಿದ ಭಾರತ
Team Udayavani, Oct 8, 2018, 11:14 AM IST
ಢಾಕಾ: ಇತ್ತೀಚೆಗಷ್ಟೇ ಏಶ್ಯ ಕಪ್ ಗೆದ್ದ ಸೀನಿಯರ್ ಕ್ರಿಕೆಟಿಗರ ಹಾದಿಯಲ್ಲೇ ಸಾಗಿದ ಭಾರತದ ಕಿರಿಯರು ಕೂಡ “ಅಂಡರ್-19 ಏಶ್ಯ ಕಪ್’ ಪ್ರಶಸ್ತಿಯನ್ನು ಗೆದ್ದು ಮೆರೆದಿದ್ದಾರೆ. ರವಿವಾರ ಢಾಕಾದಲ್ಲಿ ನಡೆದ ಪ್ರಶಸ್ತಿ ಕಾಳಗದಲ್ಲಿ ಸಿಮ್ರಾನ್ ಸಿಂಗ್ ಸಾರಥ್ಯದ ಭಾರತ ತಂಡ 144 ರನ್ನುಗಳ ಅಂತರದಿಂದ ಶ್ರೀಲಂಕಾವನ್ನು ಮಗುಚಿತು.
“ಶೇರ್ ಎ ಬಾಂಗ್ಲಾ ನ್ಯಾಶನಲ್ ಸ್ಟೇಡಿಯಂ’ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಅಮೋಘ ಪ್ರದರ್ಶನ ನೀಡಿ 3 ವಿಕೆಟಿಗೆ 304 ರನ್ ಪೇರಿಸಿ ಸವಾಲೊಡ್ಡಿತು. ಜವಾಬು ನೀಡಿದ ಶ್ರೀಲಂಕಾ 38.4 ಓವರ್‌ಗಳಲ್ಲಿ 160ಕ್ಕೆ ಕುಸಿಯಿತು.
ಇದು ಏಳು ಅಂಡರ್-19 ಏಶ್ಯಕಪ್ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಭಾರತದ ಪಾಲಾದ ಆರನೇ ಪ್ರಶಸ್ತಿ ಎಂಬುದೊಂದು ಹೆಗ್ಗಳಿಕೆ. ಇದಕ್ಕೂ ಮುನ್ನ 1989, 2003, 2012, 2013-14, 2016ರ ಆವೃತ್ತಿಗಳಲ್ಲಿ ಭಾರತ ಚಾಂಪಿಯನ್ ಆಗಿತ್ತು. 2012ರ ಭಾರತ-ಪಾಕಿಸ್ಥಾನ ನಡುವಿನ ಫೈನಲ್ ಟೈ ಆದ್ದರಿಂದ ಜಂಟಿಯಾಗಿ ಪ್ರಶಸ್ತಿ ನೀಡಲಾಗಿತ್ತು. 2017ರಲ್ಲಿ ಮಾತ್ರ ಭಾರತದ ಪ್ರದರ್ಶನ ನೀರಸವಾಗಿತ್ತು. ಲೀಗ್ ಹಂತ ದಾಟುವಲ್ಲಿ ವಿಫಲವಾಗಿತ್ತು.
ಭಾರತ ಭರ್ಜರಿ ಬ್ಯಾಟಿಂಗ್
ಭಾರತದ ಐದೂ ಮಂದಿ ಬ್ಯಾಟ್ಸ್‌ಮನ್‌ಗಳು ಲಂಕಾ ಬೌಲಿಂಗ್ ದಾಳಿಯನ್ನು ಪುಡಿಗುಟ್ಟಿ ಬೃಹತ್ ಮೊತ್ತ ದಾಖಲಿಸಿದರು. ಆರಂಭಿಕರಾದ ಯಶಸ್ವಿ ಜೈಸ್ವಾಲ್ ಮತ್ತು ಅನುಜ್ ರಾವತ್ ಎಂದಿನ ಪ್ರಚಂಡ ಫಾರ್ಮ್ ಮುಂದುವರಿಸಿ ಮೊದಲ ವಿಕೆಟಿಗೆ 25.1 ಓವರ್‌ಗಳಿಂದ 121 ರನ್ ಪೇರಿಸಿ ಭದ್ರ ಬುನಾದಿ ನಿರ್ಮಿಸಿದರು. ಜೈಸ್ವಾಲ್ ಸರ್ವಾಧಿಕ ಗಳಿಕೆ ಸರ್ವಾಧಿಕ 85 ರನ್ (113 ಎಸೆತ, 8 ಬೌಂಡರಿ, 1 ಸಿಕ್ಸರ್). ರಾವತ್ 79 ಎಸೆತಗಳಿಂದ 57 ರನ್ ಹೊಡೆದರು (4 ಬೌಂಡರಿ, 3 ಸಿಕ್ಸರ್).
ಭಾರತದ ಸರದಿಯ ಉಳಿದೆರಡು ಅರ್ಧ ಶತಕಗಳು ನಾಯಕ ಸಿಮ್ರಾನ್ ಸಿಂಗ್ ಮತ್ತು ಆಯುಷ್ ಬದೋನಿ ಅವರಿಂದ ಸಿಡಿಯಲ್ಪಟ್ಟವು. ಇವರಿಬ್ಬರು 9.1 ಓವರ್‌ಗಳ ಸ್ಫೋಟಕ ಜತೆಯಾಟದಲ್ಲಿ ಮುರಿಯದ 4ನೇ ವಿಕೆಟಿಗೆ 110 ರನ್ ಪೇರಿಸಿದರು. ಸಿಮ್ರಾನ್ 37 ಎಸೆತಗಳಿಂದ 65 ರನ್ ಸಿಡಿಸಿದರೆ (3 ಬೌಂಡರಿ, 4 ಸಿಕ್ಸರ್), ಬದೋನಿ ಕೇವಲ 28 ಎಸೆತಗಳಿಂದ 52 ರನ್ ರಾಶಿ ಹಾಕಿದರು. ಸಿಡಿಸಿದ್ದು 5 ಸಿಕ್ಸರ್ ಹಾಗೂ 2 ಬೌಂಡರಿ. ವನ್‌ಡೌನ್ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್ 31 ರನ್ ಮಾಡಿದರು.
6 ವಿಕೆಟ್ ಹಾರಿಸಿದ ತ್ಯಾಗಿ
ಶ್ರೀಲಂಕಾ ಬ್ಯಾಟಿಂಗ್ ಸರದಿಗೆ ಘಾತಕವಾಗಿ ಕಾಡಿದವರು ಎಡಗೈ ಸ್ಪಿನ್ನರ್ ಹರ್ಷ್ ತ್ಯಾಗಿ. ಅವರು 38 ರನ್ನಿಗೆ 6 ವಿಕೆಟ್ ಹಾರಿಸಿ ಹರ್ಷಾಚರಣೆ ನಡೆಸಿದರು. ಲಂಕಾ ಬ್ಯಾಟಿಂಗ್ ಸರದಿಯಲ್ಲಿ ಒಂದೂ ಅರ್ಧ ಶತಕ ದಾಖಲಾಗಲಿಲ್ಲ. ಆರಂಭಕಾರ ನಿಶಾನ್ ಫೆರ್ನಾಂಡೊ 49, ಮಧ್ಯಮ ಸರದಿಯ ನವೋದ್ ಪರ್ಣವಿತನ 48 ರನ್ ಹೊಡೆದರು. ಪಸಿಂದು ಸೂರ್ಯಬಂಡಾರ ಅವರಿಂದ 31 ರನ್ ದಾಖಲಾಯಿತು. ಈ ಸೋಲಿನೊಂದಿಗೆ ಶ್ರೀಲಂಕಾ ಕಿರಿಯರು 4 ಸಲ ಫೈನಲ್‌ನಲ್ಲಿ ಎಡವಿದಂತಾಯಿತು. ಈ ನಾಲ್ಕೂ ಸೋಲುಗಳು ಭಾರತದ ವಿರುದ್ಧವೇ ದಾಖಲಾದದ್ದು ವಿಶೇಷ.
ಸಂಕ್ಷಿಪ್ತ ಸ್ಕೋರ್
ಭಾರತ-3 ವಿಕೆಟಿಗೆ 304 (ಜೈಸ್ವಾಲ್ 85, ಸಿಮ್ರಾನ್ ಔಟಾಗದೆ 65, ರಾವತ್ 57, ಬದೋನಿ ಔಟಾಗದೆ 52). ಶ್ರೀಲಂಕಾ-38.4 ಓವರ್‌ಗಳಲ್ಲಿ 160 (ಫೆರ್ನಾಂಡೊ 49, ಪರ್ಣವಿತನ 48, ತ್ಯಾಗಿ 38ಕ್ಕೆ 6).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.