ಇದು ಗೆಳೆಯನ ಅಂತರಂಗ : ರೌಡಿ ಬಸ್ಸಿಗೆ ಬಲಿಯಾದ ನಮ್ಮ ರಂಗ
Team Udayavani, Oct 9, 2018, 7:15 AM IST
ಗೋಣಿಕೊಪ್ಪ / ಮಡಿಕೇರಿ : ನಿಜಕ್ಕೂ ಇದು ನಮ್ಮ ಅಪರಾಧವಲ್ಲ; ಆದರೂ ಮನುಷ್ಯರಾದ ನಿಮ್ಮ ವಾಹನಗಳಿಗಷ್ಟೇ ರಸ್ತೆ ಮೀಸಲು ಎಂಬುದು ಮತ್ತೆ ಸಾಬೀತು ಮಾಡಿದಿರಿ. ನಮ್ಮ ಪ್ರದೇಶವನ್ನು ಆಕ್ರಮಿಸಿದರೂ ಸುಮ್ಮನಿದ್ದಕ್ಕೆ ಗೆಳೆಯನನ್ನು ಕಳೆದುಕೊಂಡಿದ್ದೇನೆ’. ಬಸ್ಸು ಢಿಕ್ಕಿಯಾಗಿ ಸತ್ತ ಆನೆ ರೌಡಿ ರಂಗನನ್ನು ಮೇಲಕ್ಕೆತ್ತಲು ಬಂದ ಅದರ ‘ಗೆಳೆಯ’ ಸುತ್ತಲಿನವರಲ್ಲಿ ದುಃಖ ತೋಡಿಕೊಂಡಂತಿದೆ ಇದು.
‘ಅವನ ಬದುಕಿನ ವರ್ಣರಂಜಿತ ಅಧ್ಯಾಯ ಮುಗಿದಿದೆ. ಅವಕಾಶವಿದ್ದಿದ್ದರೆ ವಿಶ್ವವಿಖ್ಯಾತ ಮೈಸೂರು ದಸರಾದ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳು ತ್ತಿದ್ದ. ನಿಜಕ್ಕೂ ಅದು ಸಂಭ್ರಮದ ಘಳಿಗೆ. ಆದರೆ ದುರದೃಷ್ಟ ಹೀಗೆ ಬಂದು ಅಪ್ಪಳಿಸುತ್ತದೆ ಎಂದುಕೊಂಡಿರಲಿಲ್ಲ.’
‘ರಾತ್ರಿ ತುಸು ತಿರುಗುವ ಆಸೆಯಾಯಿತು. ರಸ್ತೆ ದಾಟಲು ಹೋದ. ನಮಗಂತೂ ಕಣ್ಣು ಕಾಣುವುದು ಕಷ್ಟ. ಆದರೆ ಮನುಷ್ಯರಾದ ನಿಮಗೆ, ನೀವು ಓಡಿಸುವ ವಾಹನಗಳಿಗೆ ಕಣ್ಣು ಕಾಣುವುದಿಲ್ಲವೇ? ಒಂದೇ ಸಮನೆ ಬಂದು ಗುದ್ದಿ ಬಿಟ್ಟರೆ ಏನು ಮಾಡುವುದು? ಕೂಡಲೇ ಓಡಿ ಹೋಗಲು ಸಾಧ್ಯವೇ? ನಮ್ಮ ಪ್ರದೇಶದಲ್ಲಿ ನಾವು ಆರಾಮವಾಗಿ ಇರಲೂ ಸಾಧ್ಯವಿಲ್ಲದಂತಾಗಿದೆ’ ಎಂದಿದ್ದಾನೆ ಗೆಳೆಯ.
‘ಆತ (ರೌಡಿ ರಂಗ) ಬನ್ನೇರುಘಟ್ಟ ವ್ಯಾಪ್ತಿಯಲ್ಲಿದ್ದ. ಸ್ವಲ್ಪ ಪುಂಡು ಅಷ್ಟೇ. ಸುತ್ತಲೆಲ್ಲ ಒಂದಿಷ್ಟು ಗದ್ದಲ ಮಾಡಿ ಇಬ್ಬರ ಪ್ರಾಣಗಳನ್ನು ಬಲಿ ತೆಗೆದುಕೊಂಡದ್ದ. ಮನುಷ್ಯರೂ ಅದಕ್ಕೆ ರೌಡಿ ರಂಗ ಎಂದು ಹೆಸರಿಟ್ಟಿದ್ದರು. ಬಳಿಕ ಅವನಿಗೆ ಬನ್ನೇರುಘಟ್ಟ ವ್ಯಾಪ್ತಿಯಲ್ಲಿ ಸಂಯಮದ ಪಾಠ ಕಲಿಸಿ 3 ವರ್ಷದ ಹಿಂದೆ ತಿತಿಮತಿ ವ್ಯಾಪ್ತಿಯ ಮತ್ತಿಗೋಡು ಆನೆ ಶಿಬಿರಕ್ಕೆ ಕರೆದು ತರಲಾಯಿತು. 8 ತಿಂಗಳು ಕ್ರಾಲ್ ನಲ್ಲಿ ಬಂದಿಯಾಗಿ ತರಬೇತಿ ಪಡೆದು ಬದಲಾದ. ಮಾವುತ, ಕಾವಾಡಿಗಳ ಹಾಗೂ ಅರಣ್ಯಾಧಿಕಾರಿಗಳ ಪ್ರಿಯನಾಗಿದ್ದ’ ಎನ್ನುತ್ತಾನೆ ಗೆಳೆಯ.
‘ದಸರಾ ಜಂಬೂ ಸವಾರಿಗೆ ಆಯ್ಕೆಯಾಗಿದ್ದ. ಆರೋಗ್ಯವಂತನಾಗಿದ್ದ. ನಾಯಕತ್ವದ ಗುಣವೂ ಇತ್ತು, ಗಜ ಗಾಂಭೀರ್ಯವಿತ್ತು. ನಿತ್ಯ ಬೆಳಗಿನ ಜಾವ ಎದ್ದು ಆಹಾರ ಅರಸುವುದು ಅಭ್ಯಾಸ. ರವಿವಾರ ಹೊರಟವನು ಮತ್ತೆ ಬರಲಿಲ್ಲ. ತಿತಿಮತಿ ಮಾರ್ಗವಾಗಿ ಬರುತ್ತಿದ್ದ ಬಸ್‌ಗೆ ಢಿಕ್ಕಿ ಹೊಡೆದದ್ದರಿಂದ ಮೃತಪಟ್ಟ. ಇವತ್ತು ಗೆಳೆಯನನ್ನು ಕಳೆದುಕೊಂಡಂತಾಗಿದೆ’ ಎನ್ನುತ್ತಾನೆ ರಂಗನ ಗೆಳೆಯ.
ವನ್ಯಜೀವಿಗಳ ಪ್ರದೇಶ, ಆನೆಗಳ ಕಾರಿಡಾರ್ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ವಾಹನಗಳ ಸಂಚಾರ ಇಂಥ ದುರ್ಘಟನೆಗಳಿಗೆ ಕಾರಣವಾಗುತ್ತಿದೆ. ಖಾಸಗಿ ಬಸ್‌ಗಳ ಮಿತಿ ಮೀರಿದ ವೇಗವೂ ವನ್ಯಜೀವಿಗಳನ್ನು ಬಲಿ ತೆಗೆದುಕೊಳ್ಳುತ್ತಿದೆ ಎಂಬುದು ಸ್ಥಳೀಯರ ಅಭಿಪ್ರಾಯ.
ಬನ್ನೇರುಘಟ್ಟದಲ್ಲಿ ಪುಂಡಾಟದ ಮೂಲಕ ‘ರೌಡಿ’ ಎನ್ನಿಸಿಕೊಂಡಿದ್ದ ರಂಗ ನಮ್ಮಲ್ಲಿಗೆ ಬಂದ ಬಳಿಕ ಸಂಪೂರ್ಣ ಬದಲಾಗಿದ್ದ. ಅವನ ಸೌಮ್ಯ ಸ್ವಭಾವವನ್ನು ಗಮನಿಸಿ ರಂಗ ಎಂದು ಮರುನಾಮಕರಣ ಮಾಡಿದ್ದೆವು. ನನ್ನ ಕೈತುತ್ತು ಉಣ್ಣುತ್ತಿದ್ದ ಆತ ಇಂದು ಕಣ್ಣೆದುರೇ ಬಿದ್ದು ನರಳಾಡುತ್ತಿದ್ದ. ಆ ಕ್ಷಣದಲ್ಲಿ ದೇವರನ್ನು ಪ್ರಾರ್ಥಿಸುವುದರ ಹೊರತು ಏನೂ ಮಾಡಲಾಗಲಿಲ್ಲ.
– ಅಹಮ್ಮದ್ ಷರೀಫ್, ಮಾವುತ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.