ಪ್ರಕೃತಿಯ ವೈಭವಕ್ಕೆ ಮನಸೋತಾಗ..
Team Udayavani, Oct 11, 2018, 3:14 PM IST
ಪ್ರವಾಸ ಹೊರಡುವುದೆಂದರೆ ಎಲ್ಲರಿಗೂ ಖುಷಿ. ಅದೂ ನಗರದ ಒತ್ತಡದ ಬದುಕನ್ನು ಬಿಟ್ಟು ಪ್ರಕೃತಿಯ ಮಡಿಲಲ್ಲಿ ಮಗುವಾಗಿ ಸಂಭ್ರಮಿಸುವ ಕ್ಷಣದಲ್ಲಿ ಬದುಕೇ ಧನ್ಯವಾಯಿತು ಎಂಬ ಭಾವನೆ. ನೂರಾರು ನೆನಪುಗಳನ್ನು ಹೊತ್ತು ಬಂದಾಗ ಏನೋ ಸಾಧಿಸಿ ಬಂದ ಖುಷಿ ನಮ್ಮದಾಗಿತ್ತು. ದೊಡ್ಡ ಗುಂಪು ಕಟ್ಟಿಕೊಂಡು ಪ್ರವಾಸ ಹೋಗುವುದರಲ್ಲಿಯೂ ವಿಶೇಷ ಖುಷಿ ಇದೆ. ಅದರಲ್ಲಿ ಸಿಗುವ ಮೋಜು- ಮಸ್ತಿ, ಅನುಭವಗಳಿಗೆ ಲೆಕ್ಕವೇ ಸಿಗಲಿಕ್ಕಿಲ್ಲ. ಇಂಥ ಒಂದು ಅಭೂತ ಪೂರ್ವ ಅವಕಾಶ ನನ್ನ ಪಾಲಿಗೆ ಸಿಕ್ಕಿತು. 22 ಜನರ ನಮ್ಮ ತಂಡ ಇತ್ತೀಚೆಗೆ ಮಂಗಳೂರಿನಿಂದ ಶಿವಮೊಗ್ಗ, ಅಲ್ಲಿಂದ ಮುರ್ಡೇಶ್ವರದವರೆಗೆ ಪ್ರವಾಸ ಕೈಗೊಂಡಿತು.
ಶನಿವಾರ ಬೆಳಗ್ಗೆ 8 ಗಂಟೆಗೆ ಮಂಗಳೂರಿನಿಂದ ಹೊರಟ ನಮ್ಮ ಪ್ರಯಾಣ ಸುರತ್ಕಲ್, ಪಡುಬಿದ್ರಿ, ನಿಟ್ಟೆ ಮಾರ್ಗವಾಗಿ ಮೊದಲು ಅತ್ತೂರು ಚರ್ಚ್‌ಗೆ ಭೇಟಿ ನೀಡಿದೆವು. ಸ್ವಚ್ಛ ಪರಿಸರ, ಚೊಕ್ಕದಾದ ಸುಂದರ ಜಾಗದಲ್ಲಿ ಭವ್ಯ ಚರ್ಚ್‌ನ ಸೌಂದರ್ಯಕ್ಕೆ ಮನಸೋತೆವು. ಮುಂದೆ ಕಾರ್ಕಳ ದಾಟಿ ಆಂಗುಬೆ ಘಾಟಿಯ ಪ್ರಯಾಣ. ಕೆಳಗಿಳಿಯುವ ಝರಿ, ಪ್ರಕೃತಿಯ ಸುಂದರ ದೃಶ್ಯವನ್ನು ಬಸ್ ನಲ್ಲೇ ಕುಳಿತು ಕಣ್ತುಂಬಿಕೊಂಡು ತೀರ್ಥಹಳ್ಳಿ ಮಾರ್ಗವಾಗಿ ಹೊರಟಾಗ ಮೊದಲು ಕನ್ನಡದ ಕಾವ್ಯ ಋಷಿ ಮೇರು ಸಾಹಿತಿ ಕುವೆಂಪು ಅವರ ಮನೆಗೆ ಬಂದೆವು. ಮನೆಯ ಮುಂದಿನ ಅಂಗಳ ತುಂಬಿದ ಹುಲ್ಲು ಹಾಸಿನ ಬದಿಯ ಹೂಗಿಡಗಳು, ಒಂದು ಪಕ್ಕದಲ್ಲಿ ಅಡಿಕೆ ತೋಟ, ಇನ್ನೊಂದು ಬದಿಯಲ್ಲಿ ಬೃಹದಾಕಾರದ ಮರಗಳು, ಅದರಲ್ಲಿ ಸ್ವಚ್ಛಂದವಾಗಿರುವ ಮಂಗಗಳು, ಅಲ್ಲಲ್ಲಿ ಫಲಕಗಳಲ್ಲಿ ರಾರಾಜಿಸುವ ನುಡಿಮುತ್ತುಗಳು ಎಲ್ಲವನ್ನೂ ಕಣ್ತುಂಬಿಕೊಂಡು ಕವಿ ಮನೆಯೊಳಗೆ ಪ್ರವೇಶಿಸಿದಾಗ ಅಚ್ಚರಿಯೋ ಅಚ್ಚರಿ! ಹಿಂದಿನ ಕಾಲದ ದೊಡ್ಡ ಮರದ ಪರಿಕರಗಳು, ಗೋಡೆ ತುಂಬ ಅವರ ಕುಟುಂಬ ಸದಸ್ಯರ ಭಾವಚಿತ್ರಗಳು, ಕೆತ್ತನೆಯ ಮರದ ಕಂಬಗಳು, ಅವರು ಬರೆದಂಥ ಕೃತಿಗಳು, ಹಳೆಯ ಮರದ ಉಪಕರಣಗಳು ಹೀಗೆ ಗತ ಕಾಲದ ವೈಭವವನ್ನು ಸಾರುವಂಥ ನೂರಾರು ವಿಷಯಗಳನ್ನು ಮನದೊಳಗೆ ತುಂಬಿಕೊಂಡೆವು.
ಅಲ್ಲಿಂದ ಸ್ವಲ್ಪ ಮುಂದೆ ಕುವೆಂಪು ಮತ್ತು ಅವರ ಮಗ ಪೂರ್ಣಚಂದ್ರ ತೇಜಸ್ವಿಯರ ಸಮಾಧಿಗಳಿಗೆ ಭಕ್ತಿ ಪೂರ್ವಕವಾಗಿ ನಮ ಸ್ಕರಿಸಿ, ಮುಂದೆ ನಮ್ಮ ಪ್ರಯಾಣ ಶಿವಮೊಗ್ಗದ ಕಡೆಗೆ ಸಾಗಿತು. ದಾರಿ ಮಧ್ಯೆ ಗಾಜ ನೂರು ಭದ್ರಾ ಮೇಲ್ದಂಡೆ ಯೋಜನೆಯ ಅಣೆಕಟ್ಟು ವೀಕ್ಷಿಸಿದೆವು. ಸುಂದರ ದೃಶ್ಯದ ಮಧ್ಯೆ ಮರ್ಕಟಗಳ ಚೇಷ್ಟೆಯನ್ನೂ ಕಣ್ತುಂಬಿಕೊಂಡೆವು. ಅಷ್ಟರಲ್ಲಿ ಬೆಳಕು ಮರೆಯಾಗಿ ಕತ್ತಲಾವರಿಸುತ್ತಿತ್ತು. ಶಿವಮೊಗ್ಗ ತಲುಪಿ, ಹೊಟೇಲೊಂದರಲ್ಲಿ ರೂಮ್ ಕಾದಿರಿಸಿ ಶಿವಮೊಗ್ಗ ಪೇಟೆ ಸುತ್ತಾಡಿ, ಬಂದು ಮಲಗಿದಾಗ ಕಣ್ತುಂಬ ನಿದ್ದೆ ಎಲ್ಲರನ್ನೂ ಆವರಿಸಿತ್ತು.
ರವಿವಾರ ಬೆಳಗ್ಗೆ 8 ಗಂಟೆಗೆ ಎಲ್ಲರೂ ರೆಡಿಯಾಗಿ ತಾವರೆಕೊಪ್ಪದ ವನ್ಯಧಾಮಕ್ಕೆ ಆಗಮಿಸಿದೆವು. ಅಪರೂಪದ ಉಷ್ಟ್ರ ಪಕ್ಷಿ, ಬಿಳಿ ಕೋಳಿ, ರೆಕ್ಕೆ ಬಿಚ್ಚಿ ನಲಿಯುತ್ತಿದ್ದ ಗಂಡು ನವಿಲಿನ ನರ್ತನ, ಕೊಳದ ಕಪ್ಪು ಹಂಸಗಳು ನೀರಿನಲ್ಲಿ ತೇಲುತ್ತಾ ಸಾಗುವಾಗ ಮಕ್ಕಳೊಡನೆ ನಾವು ಸಣ್ಣ ಮಕ್ಕಳಂತೆ ನರ್ತಿಸತೊಡಗಿದೆವು.
ಗೂಡಿನೊಳಗಿನ ಚಿರತೆ, ಕಪ್ಪು ಚಿರತೆಗಳು, ಕರಡಿಗಳು, ಇವುಗಳೊಳಗಿನ ಜಗಳ, ಕತ್ತೆ ಕಿರುಬ, ಕಾಲು ದಾರಿಯಲ್ಲೇ ಓಡುವ ಮಂಗಗಳು ಎಲ್ಲವೂ ನೋಡಲು ತುಂಬಾ ಮೋಜಾಗಿತ್ತು. ಮುಂದೆ ಮುಂದೆ ಹೋಗುತ್ತಿದ್ದಂತೆ, ಒಣ ಮರದ ರೆಂಬೆಯಡೆಯಲ್ಲಿ ಸುತ್ತಿಕೊಂಡು ಮಲಗಿದ ಹೆಬ್ಟಾವನ್ನು ಕಂಡಾಗ ಎಲ್ಲರೂ ಭಯಭೀತರಾದದ್ದು ಮಾತ್ರ ಸುಳ್ಳಲ್ಲ.
ವಿಶಾಲವಾದ ಈ ಸ್ಥಳದಲ್ಲಿ ಮಕ್ಕಳಿಗಾಗಿ ಕ್ರೀಡೆಗಳಿದ್ದವು. ಸಿಂಹ ಸಫಾರಿ ನೋಡಬೇಕು ಎಂಬ ಆಸೆ ಎಲ್ಲರಲ್ಲೂ ಇದ್ದರೂ ಸಮಯಕ್ಕೆ ಹೊಂದಾಣಿಕೆಯಾಗದೆ ಬೇಸರದಿಂದಲೇ ಅಲ್ಲಿಂದ ನಿರ್ಗಮಿಸಬೇಕಾಯಿತು. ಅಲ್ಲಿಂದ ಮುಂದೆ ಹೊರಟದ್ದು ಇಕ್ಕೇರಿಗೆ.
ಐತಿಹಾಸಿಕ ಪ್ರಸಿದ್ಧ ಸ್ಥಳ
ಸಂಪೂರ್ಣ ಶಿಲೆ ಕಲ್ಲಿನಿಂದಲೇ ನಿರ್ಮಿಸಲ್ಪಟ್ಟ ದೇವಸ್ಥಾನಗಳು, ಸುತ್ತಲೂ ಮನಸೂರೆಗೊಳಿಸುವ ಹೂತೋಟಗಳನ್ನು ಕಂಡು ಅಲ್ಲಿಂದ ಮುಂದೆ ಜೋಗಕ್ಕೆ ನಮ್ಮ ಪ್ರಯಾಣ ಆರಂಭವಾಯಿತು.
ಮನಸೂರೆಗೊಳಿಸಿದ ಜೋಗ
ಅಪರಾಹ್ನ 2 ಗಂಟೆ ಸುಮಾರಿಗೆ ಜೋಗ ತಲುಪಿದೆವು. ದಾರಿ ಮಧ್ಯೆ ಧಾರಾಕಾರ ಮಳೆಯಾಗುತ್ತಿದ್ದರೂ ಅಲ್ಲಿ ಬರುವಾಗ ಜಿಟಿಜಿಟಿಯಾಗಿ ಹನಿಯುತ್ತಲೇ ಇತ್ತು. ಜೋಗ ನೋಡುವ ಸಂಭ್ರಮದ ನಡುವೆ ಮಳೆ ಸುರಿಯುತ್ತಿರುವುದು ನಮ್ಮ ಲೆಕ್ಕಕ್ಕೇ ಬರಲಿಲ್ಲ. ವಾಹನ ದಟ್ಟಣೆ, ಜನದಟ್ಟಣೆಯ ನಡುವೆ ಟಿಕೆಟ್ ಪಡೆದುಕೊಂಡು, ಹನಿ ಮಳೆಗೆ ತೊಯ್ಯುತ್ತಾ ಜೋಗ ವೀಕ್ಷಣೆಗಾಗಿ ಗೋಪುರದ ಕೆಳಗೆ ನಿಂತಾಗ ಎದುರು ಬರಿ ಬಿಳಿ ಪರದೆ ಹಾಸಿದಂತೆ ಕಂಡು ಉತ್ಸಾಹಕ್ಕೆಲ್ಲ ತಣ್ಣೀರೆರಚಿದಂತಾಯಿತು.
ಅಷ್ಟರಲ್ಲಿ ಪಕ್ಕದಲ್ಲಿದ್ದವರು, ಅಗೋ ಸ್ವಲ್ಪ ಹೊತ್ತು ನಿಲ್ಲಿ ನೇರ ದೃಷ್ಟಿ ಇರಿಸಿ ಜೋಗ ಕಾಣುತ್ತಿದೆ ಎಂದಾಗ ಕಣ್ಣ ಮುಂದಿದ್ದ ಮಂಜು ಸರಿದು ಬೆಟ್ಟದ ಎಡೆ ಯಲ್ಲಿ ಜೋಗ ಜಲಪಾತದ ಸೌಂದರ್ಯ ಕಾಣತೊಡಗಿತು. ಅಬ್ಬ ಕೊನೆಗೂ ದರ್ಶನವಾಯ್ತಲ್ಲ ಎಂದು ನಿಟ್ಟುಸಿರು ಬಿಡುವಷ್ಟರಲ್ಲಿ ಮತ್ತೆ ಮಂಜು ಮುಸುಕಿತು. ಈ ಕಣ್ಣು ಮುಚ್ಚಾಲೆಯಾಟದ ನಡುವೆಯೂ ಜೋಗ ಜಲಪಾತದ ಸೌಂದರ್ಯವನ್ನು ಸಂಪೂರ್ಣ ಕಣ್ತುಂಬಿಕೊಂಡೆವು.
ಅಷ್ಟರಲ್ಲಿ ನಾವು ನಿಂತ ಸ್ಥಳದಿಂದ ಕೆಳಕ್ಕೆ ಕಣ್ಣು ಹಾಯಿಸಿದಾಗ ಎದೆ ನಡುಗಿಸುವ ಪ್ರಪಾತ ಕಂಡು ಭಯಪಟ್ಟು ಅಲ್ಲಿಂದ ಬೇಗ ಬೇಗನೆ ಹೊರಡಲು ಅನುವಾದವು. ವಿದ್ಯುತ್ ಉತ್ಪಾದನಾ ಸಮೀಪದಲ್ಲಿ ವೀಕ್ಷಣಾ ಗೋಪುರವೊಂದಿದ್ದರೂ ಸಮಯದ ಅಭಾವದಿಂದ ಅಲ್ಲಿಂದ ಹೊರಡಲೇ ಬೇಕಾಯಿತು.
ಮುಂದೆ ನಾವು ಬಂದದ್ದು ಮುರುಡೇಶ್ವರ ಶಿವನ ಸಾನ್ನಿಧ್ಯಕ್ಕೆ. ಬೃಹತ್ ಗೋಪುರ, ಅದರ ಹಿಂದೆ ಬೆಟ್ಟಕ್ಕೆ ಸವಾಲು ಎಂಬಂತಿ ರುವ ಶಿವನ ಬೃಹತ್ ಪ್ರತಿಮೆ, ಸಮುದ್ರ ರಾಜನ ಆರ್ಭಟ, ಸುತ್ತಲೂ ಹುಲ್ಲು ಹಾಸು ಕಂಡು ಪ್ರಕೃತಿಯ ಸೊಬಗಿಗೆ ಆಧುನಿಕ ಸ್ಪರ್ಶ ನೀಡಿದಂತಿರುವ ದೇವಾಲಯವನ್ನು ಕಂಡು ಅಚ್ಚರಿಯ ಜತೆಗೆ ಸಂಭ್ರಮವೂ ಉಂಟಾಗಿತ್ತು.
ನೋಡುತ್ತಲೇ ಇರಬೇಕು ಎನ್ನುವ ಮನದ ತುಡಿ ತಕ್ಕೆ ಹೊಟ್ಟೆ ಹಸಿವು ಬ್ರೇಕ್ ನೀಡಿತ್ತು. ಹತ್ತಿರದಲ್ಲೇ ಇದ್ದ ರೆಸ್ಟೋರೆಂಟ್ ನಲ್ಲಿ ಗಡದ್ದಾಗಿ ಮಸಾಲೆ ದೋಸೆ ತಿಂದು , ಕಾಫಿ ಕುಡಿದು ಸಂಜೆ 6 ಗಂಟೆ ವೇಳೆಗೆ ಅಲ್ಲಿಂದ ನಿರ್ಗಮಿಸಿದೆವು. ಪ್ರಯಾಣದ ಸುಸ್ತು, ಮನಸ್ಸಿನಲ್ಲಿ ಸಂತೃಪ್ತಿ ಇದ್ದುದರಿಂದ ಬಸ್ ನಲ್ಲಿ ಹಲವರು ನಿದ್ದೆ ಹೋದರು. ಮಂಗಳೂರು ತಲುಪುವಾಗ ರಾತ್ರಿ 9 ಗಂಟೆ ಕಳೆದಿತ್ತು.
ರೂಟ್ ಮ್ಯಾಪ್
· ಮಗಳೂರಿನಿಂದ ತೀರ್ಥಹಳ್ಳಿಗೆ 141 ಕಿ.ಮೀ. ದೂರ.
·ಸಾಗರದಿಂದ ಜೋಗಕ್ಕೆ 39 ಕಿ.ಮೀ.
·ಊಟ, ವಸತಿಗೆ ಮೊದಲೇ ಬುಕ್ಕಿಂಗ್ ಮಾಡಿದರೆ ಉತ್ತಮ.
·ಸಾಕಷ್ಟು ವಾಹನ ಸೌಲಭ್ಯಗಳೂ ಇವೆ.
·ಬಾಡಿಗೆ ವಾಹನ ಗೊತ್ತುಪಡಿಸಿದರೆ ಸುತ್ತಮುತ್ತಲಿನ ಹಲವಾರು ಪ್ರವಾಸಿ ತಾಣಗಳಿಗೆ
ಭೇಟಿ ನೀಡಬಹುದು.
·ಹತ್ತಿರದಲ್ಲೇ ಇದೆ ಇಕ್ಕೇರಿ, ತಾವರೆ ಕೊಪ್ಪ ವನ್ಯಧಾಮ.
ಬಿ. ಸತ್ಯವತಿ ಎಸ್. ಭಟ್, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ
Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.