“ಮಿ ಟೂ’ ಹುಟ್ಟುಹಾಕಿರುವ ಪ್ರಶ್ನೆಗಳು
Team Udayavani, Oct 13, 2018, 6:00 AM IST
ಸಿನೆಮಾ, ಟಿವಿ, ರಾಜಕೀಯ, ಮಾಧ್ಯಮದಂಥ ಪ್ರಭಾವಶಾಲಿಯಾದ ಕ್ಷೇತ್ರಗಳ ಪ್ರವೇಶಕ್ಕೆ ಕೇವಲ ಅರ್ಹತೆ, ಪ್ರತಿಭೆಯೊಂದೇ ಮಾನದಂಡವಲ್ಲ ಎಂಬ ಸತ್ಯ ಗೊತ್ತಾಗಿ ಅನೇಕ ವರ್ಷಗಳೇ ಕಳೆದಿವೆ. ನಾವು ಆ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಳ್ಳುತ್ತೇವೆಂದರೆ – ಒಂದು ಆತ್ಮಸಾಕ್ಷಿ ಮಾರಿಕೊಳ್ಳಬೇಕು ಇಲ್ಲವೆ, ಸತತ ಪರೀಕ್ಷೆಗಳಿಗೆ ಒಡ್ಡಿಕೊಳ್ಳುತ್ತಲೇ ಇರಬೇಕು. ಅಂತಿಮವಾಗಿ ಆಯ್ಕೆ ನಮ್ಮದೇ. ಈ ಪೈಕಿ ಎರಡನೇ ಆಯ್ಕೆಯಲ್ಲಿ ಮಾತ್ರ ನಮಗೆ ಧ್ವನಿ ಎತ್ತಲು ಅವಕಾಶವಿದೆ.
ಆಕೆ ಪತ್ರಕರ್ತೆ. ಒಂದು ವಿಶೇಷ ವರದಿಗಾಗಿ ತೆರಳಿ ವಾಪಾಸು ಬರುವಾಗ ರಾತ್ರಿ ಹನ್ನೊಂದಾಗಿತ್ತು. ಹತ್ಯೆಗೀಡಾದ ಟೆಕಿ ಪ್ರತಿಭಾ ಕೇಸ್ ಮತ್ತೆ ರೀ ಓಪನ್ ಆದ ಸಂದರ್ಭ ಅದು. ಆ ಬಗ್ಗೆ ಚರ್ಚಿಸುತ್ತಿದ್ದ ಕ್ಯಾಮೆರಾಮನ್ ದಾರಿ ಮಧ್ಯೆ ಇಳಿದು, ನಾನು ನಂತರ ಬರುತ್ತೇನೆ ಎಂದ. ಆಕೆ ಟೇಪ್ ಆಫೀಸಿಗೆ ಒಪ್ಪಿಸಿ ಮನೆಗೆ ತೆರಳಬೇಕಿತ್ತು. ಕ್ಯಾಬ್‌ನಲ್ಲಿ ಆಕೆ ಮತ್ತು ಡ್ರೈವರ್ ಮಾತ್ರ. “ಏನ್ ಮಾಡೋಕಾಗುತ್ತೆ ಮೇಡಮ…, ಡ್ರೈವರುಗಳು ನಾವು ವಾರಗಟ್ಲೆ ಮನೆಬಿಟ್ ಬಂದಿರ್ತೀವಿ. ನಾವೂ ಮನುಷ್ಯರಲ್ವಾ, ಎಷ್ಟಂತ ತಡ್ಕೊಳ್ಳೋದು?’ ಎಂದು ಹೇಳುತ್ತಲೇ ರೊಂಯ್ ಎಂದು ಅಲ್ಲಿದ್ದ ವರ್ತುಲವನ್ನು ಜೋರಾಗಿ ತಿರುಗಿಸಿಬಿಟ್ಟ. ಆಗಲೇ ಕ್ಯಾಬ್ ಡ್ರೈವರ್ ಕಡೆ ಗಮನ ಹೋಗಿದ್ದು ಆಕೆಗೆ! ಆ ಕತ್ತಲೆ, ಆ ತಿರುವು, ಆ ವೇಗ, ಆ ಮನಸ್ಥಿತಿ, ಆ ಮಾತು, ಆ ಧಾಟಿ ಒಂದು ಕ್ಷಣ ಕುಸಿಯುವಂತೆ ಮಾಡಿತು. ಅವನಿಗೆ ಪ್ರತಿಕ್ರಿಯಿಸದೆ, ಗಟ್ಟಿ ಮನಸ್ಸು ಮಾಡಿ ಕುಳಿತ ಆಕೆಗೆ, ಸುಮ್ಮನಿದ್ದು ಆಫೀಸ್ ತಲುಪುವುದೊಂದೇ ಆ ಕ್ಷಣದ ತುರ್ತಾಗಿತ್ತು.
ಅವನು ಪ್ರಾಮಾಣಿಕ, ಕ್ರಿಯಾಶೀಲ ಮತ್ತು ಅರ್ಹತೆಯುಳ್ಳ ಕೆಲಸಗಾರ. ಐದು ವರ್ಷಗಳಿಂದ ಆತ ಕೂತಲ್ಲೇ ಕುಳಿತು ಕೆಲಸ ಮಾಡುತ್ತಿದ್ದಾನೆ. ಒಂದು ವರ್ಷದ ಹಿಂದೆಯಷ್ಟೇ ಸೇರಿದ ಸಹೋದ್ಯೋಗಿಯೊಬ್ಬಳಿಗೆ ಪ್ರಮೋಷನ್ ಮತ್ತು ಆಗಾಗ ವಿದೇಶಗಳಿಗೆ ಹಾರಾಟ. ಇತ್ತೀಚೆಗೆ ಸೇರಿದ ಹೊಸ ಉದ್ಯೋಗಿಗೆ ಅವನಿಗಿಂತ ಜಾಸ್ತಿ ಸಂಬಳ. ತಡೆದೂ ತಡೆದೂ ಬಾಸ್‌ಗೆ ಕೇಳಿದ್ದಕ್ಕೆ, ಬೇರೊಂದು ಊರಿಗೆ ಟ್ರಾನ್ಸ್‌ಫರ್!
ಇಂತಹ ಹಲವಾರು ಘಟನೆಗಳಿಗೆ ಸೋಶಿಯಲ್ ಮೀಡಿಯಾದ “ಮಿ ಟೂ’ ಹ್ಯಾಷ್ ಟ್ಯಾಗ್ ಅಭಿಯಾನ ಮತ್ತೆ ಜೀವ ತುಂಬಿದೆ. ಲೈಂಗಿಕ ದೌರ್ಜನ್ಯ ವಿರೋಧಿ ನೆಲೆಯಲ್ಲಿ ಕೋಟ್ಯಂತರ ಜನರನ್ನು ಜಾಗೃತಗೊಳಿಸಿದ ಮತ್ತು ಒಂದು ಆರಂಭಿಕ ಹಂತದ ಚರ್ಚೆಗೆ ಅವಕಾಶ ಕಲ್ಪಿಸಿದ ಹಿನ್ನೆಲೆಯಲ್ಲಿ ಇದೊಂದು ಸ್ವಾಗತಾರ್ಹ ಬೆಳವಣಿಗೆ. ಮಿ ಟೂ ಆದರೆ, ಅನ್ಯಾಯದ ವಿರುದ್ಧದ ಪ್ರತಿಭಟನೆ ಈಗ ಶುರುವಾಗಿದ್ದೇಕೆ? ಅದೂ ಸೀಮಿತ ವರ್ಗಕ್ಕೆ ಮಾತ್ರ ಅನ್ವಯವಾಗುವಂತೆ? ಅನ್ಯಾಯವಾದಾಗ ಧ್ವನಿ ಎತ್ತುವ ಅವಕಾಶ, ಸಾಮರ್ಥ್ಯ ಇದ್ದವರೇ ಸುಮ್ಮನಿದ್ದು, ಈಗ ಜಾತ್ರೆಯ ಜೊತೆಗೆ ಉಧೋ ಅಂದಂತೆ, ಈಗೇಕೆ ಧ್ವನಿ ಎತ್ತುತ್ತಿದ್ದಾರೆ? ಇದು ಸಮಸ್ಯೆ ಕುರಿತು ಗಮನ ಸೆಳೆಯುವ ನೈಜ ಕಾಳಜಿಯೇ ಅಥವಾ ಪ್ರಚಾರ ಗಿಟ್ಟಿಸುವ ತಂತ್ರ ಮಾತ್ರವೆ? ಮೀ ಟೂ ಅಭಿಯಾನ ಇಂತಹ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಏಕೆಂದರೆ, ಹತ್ತು ಹದಿನೈದು ವರ್ಷಗಳ ನಂತರ ಸೆಲೆಬ್ರಿಟಿಗಳು ಈ ಬಗ್ಗೆ ಮಾತನಾಡುತ್ತಾರೆ ಎಂದರೆ, ಅಲ್ಲೇನೋ ಒಂದು ಉದ್ದೇಶವಿದೆ ಎಂದೇ ಅರ್ಥ. ಸಿನೆಮಾ, ಟಿವಿ, ರಾಜಕೀಯ, ಮಾಧ್ಯಮದಂಥ ಪ್ರಭಾವಶಾಲಿಯಾದ ಕ್ಷೇತ್ರಗಳ ಪ್ರವೇಶಕ್ಕೆ ಕೇವಲ ಅರ್ಹತೆ, ಪ್ರತಿಭೆಯೊಂದೇ ಮಾನದಂಡವಲ್ಲ ಎಂಬ ಸತ್ಯ ಗೊತ್ತಾಗಿ ಅನೇಕ ವರ್ಷಗಳೇ ಕಳೆದಿವೆ. ನಾವು ಆ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಳ್ಳುತ್ತೇವೆಂದರೆ – ಒಂದು ಆತ್ಮಸಾಕ್ಷಿ ಮಾರಿಕೊಳ್ಳಬೇಕು ಇಲ್ಲವೆ, ಸತತ ಪರೀಕ್ಷೆಗಳಿಗೆ ಒಡ್ಡಿಕೊಳ್ಳುತ್ತಲೇ ಇರಬೇಕು. ಅಂತಿಮವಾಗಿ ಆಯ್ಕೆ ನಮ್ಮದೇ. ಈ ಪೈಕಿ ಎರಡನೇ ಆಯ್ಕೆಯಲ್ಲಿ ಮಾತ್ರ ನಮಗೆ ಧ್ವನಿ ಎತ್ತಲು ಅವಕಾಶವಿದೆ. ಉಳಿದಂತೆ ಏನೇ ಮಾಡಿದರೂ ಅದು ಕೇವಲ ಪ್ರಚಾರ ತಂತ್ರ ಮತ್ತು ಚಾಲ್ತಿಯಲ್ಲಿರಲು ಮಾಡುವ ಒಣ ಸಾಹಸ ಎನ್ನಬೇಕಾಗುತ್ತದೆ.
ಲೈಂಗಿಕ ದೌರ್ಜನ್ಯ ಮಾತ್ರ ದೌರ್ಜನ್ಯ ಮತ್ತು ಮಹಿಳೆಯರಿಗೆ ಆದ ಅನ್ಯಾಯ ಮಾತ್ರ ಅನ್ಯಾಯ ಎಂಬುದನ್ನೇ ಪ್ಯಾನೆಲ್ ಡಿಸ್ಕಷನ್‌ಗಳ ಮೂಲಕ ನಮ್ಮ ಮಾಧ್ಯಮ ಬಿಂಬಿಸುತ್ತಿದೆ. ಸೆಲೆಬ್ರಿಟಿಗಳಲ್ಲದವರ, ಆರ್ಥಿಕವಾಗಿ ದುರ್ಬಲರಾಗಿರುವ, ಜಾತಿ ಸಾಮರ್ಥ್ಯ ಇಲ್ಲದವರ ಮೇಲೆ ನಡೆಯುವ ಅನ್ಯಾಯಗಳಿಗೇಕೆ ಅಭಿವ್ಯಕ್ತಿ ಅವಕಾಶವಿಲ್ಲ? ಹಾಗೆ ನೋಡಿದರೆ ದೌರ್ಜನ್ಯ ಎಂಬುದು ಮನಃಸ್ಥಿತಿ. ಅದಕ್ಕೆ ಲಿಂಗ ಭೇದ, ಜಾತಿ-ಧರ್ಮ ಭೇದ, ವರ್ಗ ಭೇದ, ಸಂಬಂಧಗಳ ಭೇದವೇ ಇಲ್ಲ. ದೌರ್ಜನ್ಯ ಯಾವಾಗಲೂ ವಿರುದ್ಧ ಲಿಂಗಿಗಳ ನಡುವೆಯೇ ಆಗಬೇಕೆಂದೇನಿಲ್ಲ. ಹೀಗಿರುವಾಗ, “ಮಿ ಟೂ’ ಅಭಿಯಾನ ಕೇವಲ ಸೀಮಿತ ವಿಷಯವನ್ನಿಟ್ಟುಕೊಂಡು ಚರ್ಚೆಗಿಳಿದಿರುವುದನ್ನು ನೋಡಿದರೆ ಮೂಲ ಉದ್ದೇಶ ಬೇರೆಯೇ ಇದೆ ಎಂಬ ಶಂಕೆಯನ್ನು ತರುತ್ತದೆ.
ಸೋಶಿಯಲ್ ಮೀಡಿಯಾದ ಟ್ರೆಂಡ್ ಮತ್ತು ಸೆಲೆಬ್ರಿಟಿಗಳ ಪ್ರಚಾರ ತಂತ್ರವಾಗಿ ಪರಿಣಮಿಸಿರುವ ಇಂಥ ಅಭಿಯಾನಗಳ ಆಯುಷ್ಯವೆಷ್ಟು? ಒಂದು ರೀತಿಯಲ್ಲಿ ಇದು ಕೂಡಾ ದೌರ್ಜನ್ಯವನ್ನು ವಿಜೃಂಭಿಸುವ ವಿಕೃತ ಮನಸ್ಥಿತಿಯೇ. ಏಕೆಂದರೆ, ಅನ್ಯಾಯಕ್ಕೆ ಸೀಮಿತ ಕಾಲದ ಪ್ರತಿಭಟನೆ ಎನ್ನುವುದು ಇಲ್ಲವೇ ಇಲ್ಲ. ಅದು ನಿರಂತರ, ಹಾಗಾಗಿ ದೌರ್ಜನ್ಯಕ್ಕೆ ಪ್ರತಿಯಾಗಿ ಸೂಕ್ತ ಸಂದರ್ಭದಲ್ಲಿ ಪ್ರತಿಭಟಿಸುತ್ತಲೇ ಇರಬೇಕು ಮತ್ತು ಅದಕ್ಕೊಂದು ತಾರ್ಕಿಕ ಅಂತ್ಯವಿರಬೇಕು.
ಆದರೆ, ಯಾರೋ ಎತ್ತಿದ ಧ್ವನಿಗೆ ನಮ್ಮ ಧ್ವನಿ ಎತ್ತುವುದೆಂದರೆ, ಅಲ್ಲಿಯವರೆಗೆ ಅನ್ಯಾಯವನ್ನು ಸಹಿಸಿಕೊಳ್ಳಬೇಕಾದ ವಾತಾವರಣ ಇತ್ತೆಂದೇ ಅರ್ಥ. ಇದು ನಿಜಕ್ಕೂ ಅಪಾಯಕಾರಿ ಬೆಳವಣಿಗೆ. ಅಷ್ಟಕ್ಕೂ ಹೋರಾಟ ಎನ್ನುವುದು ಪ್ರಚಾರಕ್ಕಷ್ಟೇ ಸೀಮಿತವಾದರೆ ಅದು ಇನ್ನೊಂದು ದುರಂತ. ಅಂತಹ ದುರಂತ ಅಂತ್ಯದ ಲಕ್ಷಣಗಳೆಲ್ಲವೂ ಮಿ ಟೂ ಅಭಿಯಾನದಲ್ಲಿ ಕಾಣಿಸುತ್ತಿರುವುದೇ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಕೇವಲ ಅವಕಾಶಗಳನ್ನು ಗಿಟ್ಟಿಸಿಕೊಳ್ಳುವುದೇ ಪರಮ ಧ್ಯೇಯ ಎಂಬ ನಿಟ್ಟಿನಲ್ಲಿ ದಾಪುಗಾಲಿಡುತ್ತಿರುವ ಕೆಲವರಿಂದಾಗಿ ಇಂಥ ಪರಿಸ್ಥಿತಿ ಉಂಟಾಗಿದೆ ಎಂಬುದನ್ನು ನಾವು ಮರೆಯಬಾರದು. ಆದರೆ, ಈಗ ನಡೆದಿರುವ ಅಭಿಯಾನ ನೋಡುತ್ತಿರುವ ಯಾರಲ್ಲಿಯೂ ನಿಜವಾದ ವಿಷಾದ, ಕಳಕಳಿ, ಕಸಿವಿಸಿ ಇಲ್ಲ. ಜನರಂತೂ ಇಡೀ ಅಭಿಯಾನವನ್ನು ಮನರಂಜನಾ ಸರಕಿನ ರೀತಿಯಲ್ಲಿ ನೋಡುತ್ತಿ¨ªಾರೆ. ಮಾಧ್ಯಮವೂ ಕೂಡ ಅವರನ್ನು ಕೆರಳಿಸುವ ನಿಟ್ಟಿನಲ್ಲಿಯೇ ಸುದ್ದಿಯನ್ನು ಬಿಂಬಿಸುತ್ತಿವೆ. ಕೆಲವರೇನೋ ಮುಕ್ತವಾಗಿ ತಮ್ಮ ಮೇಲಿನ ದೌರ್ಜನ್ಯದ ವಿವರ ಹಂಚಿಕೊಂಡರು. ಆದರೆ ತೆರೆಮರೆಯಲ್ಲಿರುವವರು?
ಅಕ್ಷರಸ್ಥ, ಸಾಮಾಜಿಕ ಸ್ಥಾನಮಾನ ಗಳಿಸಿದ ಅಥವಾ ಉದ್ಯೋಗಸ್ಥ ಪುರುಷ- ಮಹಿಳೆಯರು ತಮಗೆ ಅನ್ಯಾಯವಾದಾಗ ಸುಲಭಕ್ಕೆ ಪ್ರತಿಭಟನೆಗಿಳಿಯಬಹುದು ಮತ್ತು ಪ್ರಚಾರ ತಂತ್ರ ರೂಪಿಸಬಹುದು. ಆದರೆ ಉಳಿದವರು? ವಾಸ್ತವದಲ್ಲಿ ಇಂಥ ದೌರ್ಜನ್ಯಕ್ಕೊಳಗಾದವರ ಬಗ್ಗೆ ಯಾವ ಸೆಲೆಬ್ರಿಟಿಗಳು ಮತ್ತು ಹ್ಯಾಷ್‌ಟ್ಯಾಗ್‌ಗಳು ಸಹಾಯ ಮಾಡಿವೆ? ಬೀದಿಗಿಳಿದು ಉಪವಾಸ ಕುಳಿತಿರುವ ಅಂಗನವಾಡಿ ತಾಯಂದಿರು ಮನುಷ್ಯರಲ್ಲವೆ? ಕನಿಷ್ಟ ಮಟ್ಟದ ಕೂಲಿ ಕೊಡಬೇಕು ಎನ್ನುವುದನ್ನು ಇನ್ನೂ ತೀರ್ಮಾನಿಸಲು ಯಾಕೆ ಸಾಧ್ಯವಾಗುತ್ತಿಲ್ಲ? ಅಡುಗೆ ಸಹಾಯಕರಿಗೆ ಯಾವಾಗ ಸರಿಯಾಗಿ ಸಂಬಳ ಸಿಗುತ್ತದೆ? ನಿಮ್ಮ ತಾಲೂಕಿನ ಹೆಣ್ಣುಮಗಳನ್ನು ದೂರದ ಯಾವುದೋ ಜಿಲ್ಲೆಯಲ್ಲಿ ಕೆಲಸ ಮಾಡುವಂತೆ ಆದೇಶಿಸುವುದು ಎಷ್ಟು ಸರಿ? ವಿವಿಧ ಕಚೇರಿಗಳಲ್ಲಿ ಅವರವರ ಪರಿಣತಿ, ಆಸಕ್ತಿಗೆ ಸಂಬಂಧವಿಲ್ಲದ ಕೆಲಸ ಕೊಟ್ಟು ಒತ್ತಡ ಹೇರುವುದು ಸೌಜನ್ಯವೇ? ಇಂತಹ ಪ್ರಶ್ನೆಗಳನ್ನು ಮಿ ಟೂ ಎತ್ತುತ್ತಿಲ್ಲವೇಕೆ? ಅದು ಕೇವಲ ಸೆಲೆಬ್ರಿಟಿಗಳ ಫ್ಲ್ಯಾಶ್‌ಬ್ಯಾಕ್ ಮಾತ್ರ ಆಗಿದ್ದೇಕೆ?
ದೌರ್ಜನ್ಯವನ್ನು ವಿರೋಧಿಸುವ ಪ್ರಕ್ರಿಯೆ ಸಮಾಜದ ಎಲ್ಲಾ ವರ್ಗಗಳನ್ನೂ ಒಳಗೊಳ್ಳಲಿ. ಪುರುಷರಿಗೂ ಅನ್ಯಾಯವಾಗಿದೆ. ಮಹಿಳೆಯರಿಗೂ ಆಗಿದೆ. ಸೆಲೆಬ್ರಿಟಿಗಳು ಹೇಳಿದ ಕಾರಣಕ್ಕೆ ಇದು ಚರ್ಚೆಯಾಗಬೇಕಿಲ್ಲ. ಲಿಂಗ ಕಾರಣಕ್ಕಾಗಿ ಆದ ಅನ್ಯಾಯವಷ್ಟೇ ಅನ್ಯಾಯ ಅಲ್ಲ. ಬೌದ್ಧಿಕ, ಭಾವನಾತ್ಮಕ ದೌರ್ಜನ್ಯ, ಅವಕಾಶಗಳ ನಿರಾಕರಣೆಯೂ ದೌರ್ಜನ್ಯವೇ. ಯಾವ ರೂಪದಲ್ಲಿ ಯಾವ ಸಂದರ್ಭದಲ್ಲಿ ಆದರೂ ಅದು ದೌರ್ಜನ್ಯವೇ. ಹೀಗಿರುವಾಗ, ಸದರಿ ಅಭಿಯಾನ ಕೇವಲ ಹ್ಯಾಷ್‌ಟ್ಯಾಗಿಗಷ್ಟೇ ಸೀಮಿತವಾದರೆ ಇದೊಂದು ಸಂಕುಚಿತ ರೀತಿಯ ಹೋರಾಟವೆನ್ನಿಸಿಕೊಳ್ಳುತ್ತದೆ.
ದೌರ್ಜನ್ಯ ಯಾವಾಗಲೂ ನಡೆಯುತ್ತಲೇ ಬಂದಿದೆ. ಅದನ್ನು ಆಗಲೇ ಖಂಡಿಸುತ್ತ ಬರಬೇಕು. ಅಂಥ ವಾತಾವರಣವನ್ನು ಮಹಿಳಾ ಆಯೋಗ, ಸಂಘ-ಸಂಸ್ಥೆಗಳು ಮತ್ತು ಜವಾಬ್ದಾರಿಯುತ ಸ್ಥಾನದಲ್ಲಿರುವವರು ರೂಪಿಸಬೇಕು. ಎಸಗಿದ ದೌರ್ಜನ್ಯಕ್ಕೆ ಈ ರೀತಿ ಶಿಕ್ಷೆಯಾಗಬೇಕು ಎಂಬ ಮಾದರಿಯನ್ನು ತೋರಿಸಬೇಕು. ಅದೇನೂ ಮಾಡದೇ ಇರುವುದರಿಂದಲೇ, ಕೇವಲ ಜನರ ಗಮನ ಸೆಳೆಯುವ ತಂತ್ರಗಾರಿಕೆಯಂತೆ ಭಾಸವಾಗುತ್ತಿದೆ ಮಿ ಟೂ ಅಭಿಯಾನ. ಇಲ್ಲಿ ವ್ಯಕ್ತವಾಗಿರುವ ಹಲವಾರು ಪ್ರಕರಣಗಳ ಕುರಿತು ಸರ್ಕಾರದ ಸಂಬಂಧಿತ ಸಂಸ್ಥೆಗಳು ಸ್ವಯಂಪ್ರೇರಿತವಾಗಿ ಕಾರ್ಯತತ್ಪರವಾಗದಿರುವುದನ್ನು ನೋಡಿದರೆ ಇಡೀ ಅಭಿಯಾನ ಕೇವಲ ಪ್ರಹಸನ ಎಂಬ ಅನಿಸಿಕೆ ಮೂಡಿಸಿದೆ.
ಹಾಗಾಗದಿರಬೇಕೆಂದರೆ, ಸದರಿ ಅಭಿಯಾನ ತನ್ನ ಆಯಾಮವನ್ನು ಎಲ್ಲಾ ಕ್ಷೇತ್ರ, ಲಿಂಗ ಹಾಗೂ ವರ್ಗಗಳಿಗೂ ವಿಸ್ತರಿಸಬೇಕು. ಮನೆ, ಶಾಲೆ, ಕಚೇರಿ, ಹಳ್ಳಿ, ಊರುಗಳಲ್ಲಿನ ನಡೆಯುವ ಎಲ್ಲ ದೌರ್ಜನ್ಯಗಳ ನಿರ್ಮೂಲನೆಗೆ ಮತ್ತು ಅನ್ಯಾಯ ಮಾಡಿದವರಿಗೆ ಶಿಕ್ಷೆಯಾಗಬೇಕು. ಆಗ ಮಾತ್ರ ಅಭಿಯಾನದ ಭರಾಟೆಗೆ ತಾತ್ವಿಕ ಅರ್ಥ ಸಿಗುತ್ತದೆ. ಇಲ್ಲದಿದ್ದರೆ ಇದು ಮಾಧ್ಯಮದ ಇನ್ನೊಂದು ಪ್ರಹಸನವಾಗುತ್ತದಷ್ಟೇ.
ಶ್ರೀದೇವಿ ಕಳಸದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.