ಬದುಕಿನೊಳಗಣ ನಾಟಕ ನಾಟಕದೊಳಗಣ ಬದುಕು


Team Udayavani, Oct 14, 2018, 6:00 AM IST

9.jpg

ಇತ್ತೀಚೆಗೆ ಹೆಗ್ಗೋಡಿನ ನೀನಾಸಂ ಸಂಸ್ಕೃತಿ ಶಿಬಿರದ ಮೊದಲ ದಿನ “ಸೇತುಬಂಧನ’ ನಾಟಕ ಪ್ರದರ್ಶನ ನಡೆಯಿತು. ಇದು ಈ ಸಲದ “ತಿರುಗಾಟ’ದ ಎರಡು ನಾಟಕಗಳಲ್ಲೊಂದು. ಕೆ. ವಿ. ಅಕ್ಷರ ಇದನ್ನು ಬರೆದು, ನಿರ್ದೇಶಿಸಿದ್ದಾರೆ. “ಸೇತು’ ಎಂಬುದು ಸಂಕೇತ. ಅದು ವಾಚ್ಯಾರ್ಥದ ಸಿಮೆಂಟುಮರಳಿನ ಸೇತುವೆಯೂ ಆಗಬಹುದು, ಮನುಷ್ಯ-ಮನುಷ್ಯರ ನಡುವಿನ ಭಾವನಾತ್ಮಕ ಸೇತುವೂ ಆಗಬಹುದು. “ಸೇತು’ವಿನ ಕಲ್ಪನೆಯನ್ನು ಹತ್ತು-ಹಲವು ಸಂಗತಿಗಳಿಗೆ ಅನ್ವಯಿಸುವ ಕೌಶಲದೊಂದಿಗೆ ನಾಟಕ ಪ್ರಸ್ತುತಿಗೊಂಡಿದೆ. ಪಟ್ಟಣಮುಖೀ ಚಲನೆ, ಹಳ್ಳಿಗಳ ಕುರಿತ ಅವಜ್ಞೆ , ಸಂಪ್ರದಾಯ-ಆಧುನೀಕತೆಗಳ‌ ಸಂಘರ್ಷ, ನದಿಯಿಂದ ಮರಳೆತ್ತುವಂಥ ಪಕ್ಕಾ ವ್ಯವಹಾರ, ಜಾತಿ ರಾಜಕೀಯ- ಇಂಥ ಲೌಕಿಕ ಸಂಗತಿಗಳನ್ನು ಚರ್ಚಿಸುತ್ತ, ಒಂದರೊಳಗೊಂದಾಗಿರುವ ನಾಟಕ ಮತ್ತು ಬದುಕುಗಳನ್ನು ವಿಶ್ಲೇಷಿಸುತ್ತ- ಅಂತಿಮವಾಗಿ ತಣ್ತೀಶಾಸ್ತ್ರೀಯ ಆಶಯದ ಕಡೆಗೆ ಚಲಿಸುವ ಪ್ರಯತ್ನ ಈ ನಾಟಕದಲ್ಲಿದೆ. ಇದನ್ನು ವೀಕ್ಷಿಸುವಾಗ ಮನೋರಂಗದಲ್ಲಿ ಸಮಕಾಲೀನ ಬದುಕಿನ ಪಾತ್ರಗಳು ಓಡಾಡಲಾರಂಭಿಸುತ್ತವೆ. ಅದೇ ಈ ಬರಹಕ್ಕೆ ಪ್ರೇರಣೆ…

ಮಗುವೊಂದು ತಾಯಿಯ ಸ್ಪರ್ಶವನ್ನೇ ಕಳೆದುಕೊಳ್ಳುವ ಪರಿಯಲ್ಲಿ ನಾವಿಂದು ಪ್ರಕೃತಿಯ ಸ್ಪರ್ಶವನ್ನು ಕಳೆದುಕೊಳ್ಳುತ್ತಿದ್ದೇವೆ. ನದಿ ಬೆಟ್ಟವಷ್ಟೇ ಅಲ್ಲ, ಕಡಲು ಕೂಡ ನಮ್ಮ ಯಾವುದೋ ಕಲ್ಪವೃಕ್ಷ ವೃಂದಾವನದ ಕಲ್ಪನೆಯನ್ನು ನನಸುಗೊಳಿಸಲು ನಮಗಿರುವ ಸಲಕರಣೆಗಳ್ಳೋ ಎಂಬಂತೆ ಕಾಣುತ್ತಿದೆ. ಅಷ್ಟರಮಟ್ಟಿಗೂ ನಮ್ಮ ಕಣ್ಣುಗಳಿಗೆ ಪರೆ ಬರುತ್ತಿದೆ. ಬೆಟ್ಟ ಅಗೆದರೆ ಒಳಗರ್ಭದಲ್ಲಿ ಏನಿದೆ, ಯಾವ ಖನಿಜ? ಅದಕ್ಕೆ ಎಲ್ಲಿ ಬೆಲೆ? ಏನು ಬೆಲೆ? ಇತ್ಯಾದಿಗಳ ನಡುವೆ ಬೆಟ್ಟವೇ ಕಾಣದೆ, ದೊಡ್ಡದೊಂದು ಗಣಿಗಾರಿಕೆ ಮೈವೆತ್ತು ಅಲ್ಲಿ ಖನಿಜ ಹೊತ್ತು ಸಾಗುವ ಸಾಲಾನುಸಾಲು ಲಾರಿಗಳ ಚಿತ್ರಗಳು ಕಣ್ತಣಿಸುವ ಕಾಲಕ್ಕೆ ನಾವು ದಾಟಿಕೊಂಡಿದ್ದೇವೆ. 

ಸೇತುವೆಯಾಗುವವರೆಗೆ ಉಡುಪಿಯಿಂದ ಕೇವಲ ಅಲ್ಲೇ ಆಚೆಗಿರುವ ಮಂಗಳೂರಿಗೆ ಹೋಗಲು ನಾವು ದಾಟಬೇಕಾಗಿದ್ದ ಹೊಳೆಗಳು, ಆ ನಿಧಾನದ ದೋಣಿ ಪಯಣ ಇತ್ಯಾದಿಗಳನ್ನು ನೆನೆದು ನಗುವವರು ನಾವೀಗ. ಸೇತುವೆ ಮೇಲೆ ವಾಹನದಲ್ಲಿ ಸರಕ್ಕನೆ ದಾಟುವ ಭರದಲ್ಲಿ ಹೊಳೆಯ ಜುಳುಜುಳುವನ್ನು ಕೇಳಿಸಿಕೊಳ್ಳದವರು. ಕೇಳಿಸಿಕೊಳ್ಳುವ ತಾಳ್ಮೆಯನ್ನೂ ಎಂದೋ ಕಳಕೊಂಡವರು. ನಮಗದು ಬೇಡವೂ ಬೇಡ. ಆ ಕಾಲಕ್ಕೆ ದಾಟಿಕೊಳ್ಳ ಬೇಕೆ, ಅಯ್ಯಪ್ಪಾ ಬೇಡ ಎನ್ನುವವರು. ಏನೆಲ್ಲ ಯಾಬಗೆಯದೆಲ್ಲ ತಲೆಬಿಸಿಯುಳ್ಳವರು ನಾವು. ಬೇಗ, ಬೇಗ, ಸೂಪರ್‌ ಬೇಗ ತಲುಪಿಕೊಳ್ಳುವ ಹವಣದವರು. ಕ್ಷಣ ಬಿಡುವಿಲ್ಲದವರು. ಆದರೆ, ನಮ್ಮ ಈ ಅವತಾರವನ್ನು ಒಂದಿಷ್ಟೂ ಲೆಕ್ಕಿಸದೆ ನದಿಗಳು ತಮ್ಮದೇ ಸಾವಧಾನದ ಗತಿಯಲ್ಲಿ ಹರಿಯುತ್ತಿರುತ್ತವೆ. ಯಾವತ್ತಿನಿಂದ ಹರಿಯುತ್ತಿರುವ ಜ್ಞಾನಿನದಿಗಳು ಅವು, ಸ್ಥಿತಪ್ರಜ್ಞತೆಯಿಂದ, ಸಣ್ಣ ಮುಗುಳುನಗುವಿನಿಂದ ಎಂಬಂತೆ; ಜನಜೀವನವನ್ನು ತಾವೇ ರೂಪಿಸಿದ ದಿನದಿಂದ ಜನರು ತಮ್ಮನ್ನೇ ಬಗೆದು ತಿನ್ನುವ ಕಾಲದ ವರೆಗೆ ಹರಿದು ಬಂದಿವೆ. ಆದರೆ, ಅವುಗಳ ಹರಿವೇ ಮಾಯವಾಗುವ, ಜೆಸಿಬಿಯ ಬಾಚು ಕೈಗಳು ಅವುಗಳ ಒಡಲನ್ನೇ ಆಳ ಸಿಗಿದು ಚಿನ್ನದ ಮೊಟ್ಟೆಗಳಿಗಾಗಿ ತಡಕಾಡುವ ಇವತ್ತಿನ ದಿನ ಇಂತಿಂಥ ನದಿಗಳೂ ಹೆದರಿವೆ. ಅಂತರ್ಗತವಾಗಿವೆ. ಆರಿವೆ, ಹಾರಿಹೋಗಿವೆ. ರಾಶಿ ರಾಶಿ ಮರಳಿನ ಭಂಡಾರವಾಗಿ ಕಾಣುತ್ತ ಮರುಳು ಜಗತ್ತಿನ ತೀರದ ಮರಳದಾಹಕ್ಕೆ ಪಕ್ಕಾಗಿವೆ. ನೆಲ ಸ್ಪರ್ಶ, ಜಲ ಸ್ಪರ್ಶ, ಪ್ರಕೃತಿಯ ಸ್ಪರ್ಶಕ್ಕೇನೇ ಮನುಷ್ಯಲೋಕ ಎರವಾದ ಯುಗದಲ್ಲಿ ಇದು ಜೀವ, ಇದು ಜೀವನ ಎಂಬುದೇ ಹೊಸವ್ಯಾಖ್ಯೆಗೆ ಸಿಲುಕಿ ನಲುಗುತ್ತಿದೆ. ಜಗತ್ತು ಸಕಾರಣವಾಗಿ ಮಹಾಮಹಾ ಪ್ರಾಕೃತಿಕ ದುರಂತಗಳಿಗೆ ಪಕ್ಕಾಗಿದೆ. ಬರಿದಾದ ಎತ್ತಿನಹೊಳೆಯ ಮಡಿಲು, ಮಳೆಸುಳಿಗೆ ಬಳಿದುಕೊಂಡು ಹೋಗಿರುವ ಅನಾಮಂತ್ರಿತ ಬೃಹತ್‌ ಪೈಪುಗಳು, ವಿಕಲಾಂಗ ಯೋಜನೆಗಳು, ಯಾವ ಘೋರ ಭವಿಷ್ಯವನ್ನು ನುಡಿಯುತ್ತಿವೆ? ಇತ್ತೀಚೆಗೆ ಕಾಲಬುಡದಲ್ಲಿ ನಿಸರ್ಗದ ಮಾರಣಾಂತಿಕ ಆರ್ಭಟವನ್ನು ಕೇಳಿ ಬೆಚ್ಚಿ ಬಿದ್ದ, ವಿವಿಧ ವಿಪ್ಲವಗಳನ್ನು ಮರೆಯಲಾಗದೆ ಚಿತ್ರಗಳನ್ನು ಅಳಸಿಕೊಳ್ಳಲಾಗದೆ ಮನಸ್ಸು ದಣಿದು ತಬ್ಬಿಬ್ಟಾಗಿ ನಿಂತ ಹೊತ್ತಿದು. 

ಸೇತುಬಂಧನ ನಾಟಕವನ್ನು ಬರೆದು ನಿರ್ದೇಶಿಸಿದ ಕೆ. ವಿ. ಅಕ್ಷರ

ಇಂಥ ಬದುಕಿನ ಹೊತ್ತಿನಲ್ಲೊಂದು ನಾಟಕ
ಇಂಥ ಹೊತ್ತಿನಲ್ಲಿ ನಾನು ಹೆಗ್ಗೋಡಿನ ಸಂಸ್ಕೃತಿ ಶಿಬಿರದ ಮೊದಲ ದಿನದ ನಾಟಕ ಸೇತುಬಂಧ‌ನ ನೋಡಿದೆ. ಈ ನಾಟಕ ಕೆ. ವಿ. ಅಕ್ಷರ ಅವರ ಸ್ವಯಂವರ ಲೋಕ ಮತ್ತು ಭಾರತ ಯಾತ್ರೆ ನಾಟಕಗಳ ಮುಂದಿನ ಭಾಗ. ಹಿಂದಿನ ಎರಡು ನಾಟಕಗಳಲ್ಲಿನ ಆಗುಹೋಗುಗಳಿಗೆ ಸಂಬಂಧಿಸಿಕೊಂಡೇ, ಆದರೆ ಅವುಗಳನ್ನು ತಿಳಿಯದವರಿಗೆ ಕೊಂಡಿ ತಪ್ಪದಂತೆ ನಾಟಕ ನಡೆಯುತ್ತದೆ. 

ನಾಟಕದ ಮೊದಲ ಹಂತದಲ್ಲಿ ಊರ ನದಿಗೆ ಸೇತುವೆಯಾಗುತ್ತಿದೆ, ಪರಿಣಾಮವಾಗಿ ಅನೇಕ ಪಲ್ಲಟಗಳಿಂದ ಊರು ನರಳುತ್ತಿದೆ. ಈಗಾಗಲೇ ಸಣ್ಣದೇವರ ಗುಡಿಯೊಂದು ದೊಡ್ಡದಾಗಿ ಬೆಳೆದು ಎಲ್ಲೆಲ್ಲಿಂದೆಲ್ಲ ಜನ ಬರುತ್ತಿದ್ದಾರೆ. ಲಾಂಚು ಅತ್ತಿತ್ತ ಸಾಗುತ್ತ ಅತ್ತಣ ಲೋಕವನ್ನು ಇತ್ತಣ ಲೋಕವನ್ನು ಒಟ್ಟು ಕಲೆಸುತ್ತಿದೆ. ನೋಡುನೋಡುತ್ತಿದ್ದಂತೆ ಊರಿನ ಮುಖ ಮಾತ್ರವಲ್ಲ ಜನರ ಮುಖವೂ ಅನೂಹ್ಯ ಪರಿಯಲ್ಲಿ ಬದಲಾಗಿದೆ. ಆದರೆ ಅವಕಾಶಹೀನರಿಗೆ ಅವಕಾಶಗಳು ಸಿಕ್ಕಿ ತಲೆಯೆತ್ತುವ ಹಾಗೆಯೂ ಆಗಿದೆ. ಹೆಸರಿಲ್ಲದವರಿಗೆ ಹೆಸರು ಬಂದಿದೆ. ಭವಿಷ್ಯ ಇಲ್ಲದವರಿಗೆ ಭವಿಷ್ಯವೊಂದು ಕಾಣುತ್ತಿದೆ. ಜೊತೆಗೇ ಮರಳು ಮಾಫಿಯಾಗಳಿಗೆ ಬಿಡುವಿಲ್ಲವಾಗಿದೆ. ಅದಕ್ಕೆ ಊರಮಂದಿಯ ಕಾಣೆಯೂ ಇದೆ. 

ಹೀಗೆ ಊರು ಬದಲಾಗುತ್ತಿರುವ ಹೊತ್ತಿನಲ್ಲೇ ಯಾವತ್ತಿನಿಂದಲೂ ಒಂದು ಶ್ರುತಿಯಲ್ಲಿ ಬದುಕನ್ನು ಅಳವಡಿಸಿಕೊಂಡು ಜೀವಿಸುತ್ತಿರುವವರಿಗೆ ಅಪಶ್ರುತಿ ಕೇಳಿಸತೊಡಗಿದೆ. ಒಳ ಆಕ್ರೋಶ, ಆವೇಶ, ಭಾವನಾತ್ಮಕ ದಣಿವು, ಸಂಘರ್ಷ ಇತ್ಯಾದಿಗಳಿಂದ ಬದುಕು ಕಂಪಿಸತೊಡಗಿದೆ. ಬದಲಾವಣೆಗಳಿಗೆ ಜನ ಹೊಂದಿಕೊಳ್ಳುವ ಮತ್ತು ಹೊಂದಿಕೊಳ್ಳಲಾಗದೆ ಚಡಪಡಿಸುವ ಇಂಥ ಹೊತ್ತಿನಲ್ಲಿ ಜೋಯಿಸರು ಭಾರತ ಯಾತ್ರೆಯನ್ನು ಮುಗಿಸಿ, ಲಾಂಚಿನ ಮೂಲಕ ಊರು ತಲುಪುತ್ತಾರೆ, ಅವರನ್ನು ಎದುರುಗೊಳ್ಳುವ ಕಿಟ್ಟು, ಮನೆಯಲ್ಲಿ ಮಗಳು ಭಾಮಾ ಮತ್ತು ಕೆಲಸದ ತಿಮ್ಮ (ಈಗ ತಿಮ್ಮ ನಾಯಕ) ಎಲ್ಲರಿಂದಲೂ ಸಂಗತಿಗಳನ್ನು ಸಂಘರ್ಷಗಳನ್ನು ಆಲಿಸುತ್ತಾರೆ. ಊರ ಸ್ಥಿತಿಗತಿ ತಲುಪುತ್ತಿರುವ ಅವಸ್ಥೆಯ ಕುರಿತು ಪಂಚಾತಿಕೆಯೂ ನಡೆಯುತ್ತದೆ. ಅಲ್ಲಿ ಕೈ ಕೈ ಮಿಲಾಯಿಸುವಿಕೆ, ಶ್ರೇಷ್ಠ ಕನಿಷ್ಟರೆಂಬ ಯಾವ ಭೇದವೂ ಇಲ್ಲದೆ ಕೇಳಿಬರುವ ಏರುಧ್ವನಿ, ಭತ್ಸìನೆ, ಸಮರ್ಥನೆ ಇತ್ಯಾದಿಗಳ ನಡುವಲ್ಲಿ  ಜೋಯಿಸರೊಬ್ಬರೇ, ಸೇತುವೆಯ ಅಡಿಯಲ್ಲಿ ಸಾವಧಾನವಾಗಿ ಹರಿವ ನದಿಯಂತೆ, ಸಮತೋಲನದ ಪ್ರಜ್ಞೆಯಾಗಿ ದೃಢ ಚಿತ್ತತೆಯಿಂದ ತಾಳ್ಮೆಯಿಂದ ಚರ್ಚೆಯನ್ನು ಕೇಳಿಸಿಕೊಳ್ಳುತ್ತ ತಮ್ಮ ಊರಿನ ಭವಿಷ್ಯವನ್ನು ಮುಂಗಾಣುತ್ತಾರೆ. ತನ್ನ ಊರಿನ ಅಷ್ಟೇ ಅಲ್ಲ ತನ್ನ ಮನೆಯಲ್ಲೇ ನಡೆದ ಪಲ್ಲಟಗಳಿಗೆ ಪ್ರತಿಸ್ಪಂದಿಸುತ್ತಾರೆ. 

ನಾಟಕದ ಮೊದಲ ಭಾಗದಲ್ಲಿ ಒಂದರ ಮೇಲೊಂದು ವಿಭಿನ್ನ ದೃಶ್ಯಗಳ ಜೋಡಣೆ, ನಾಟಕದ ಒಳಗೇ ನಡೆಯುವ ನಾಟಕಗಳು ಸಂಘರ್ಷಗಳು ಮುಂತಾಗಿ ಇಡೀ ನಾಟಕ ವಿಚಿತ್ರ ನಡೆಯಿಂದ ಕಥನವನ್ನು ಕಾಣಿಸುತ್ತದೆ. ನಂತರದ ಅರ್ಧದಲ್ಲಿ ಹಳೆಯ ಕಾಲದ ಜೋಯಿಸರು ತನ್ನೆದುರಿಗೆ ಸಡ್ಡು ಹೊಡೆದು ಖಡಕ್ಕಾಗಿ ನಿಂತಿರುವ ಸದ್ಯದ ವಿದ್ಯಮಾನಗಳಿಗೆ ಸ್ಪಂದಿಸುತ್ತ ತನ್ನದೇ ರೀತಿಯಲ್ಲಿ ಎದುರಿಸಲು ಒಂದು ಸುಹೃದ್‌ ಮಾರ್ಗವನ್ನು ಕಂಡುಕೊಳ್ಳುವತ್ತ ನಿಧಾನವಾಗಿ ಮತ್ತು ಜಾಣ್ಮೆಯಿಂದ ತೊಡಗುತ್ತಾರೆ. ದೇಶವೆಲ್ಲಾ ತಿರುಗಿ ಬಂದವರು ಅವರು. ಹಿಂದಣ ಕಾಲವನ್ನು ಅರಿತವರು. ವರ್ತಮಾನದಲ್ಲಿ ಬದುಕುತ್ತ ಈಗ ಭವಿಷ್ಯದ ಚಿತ್ರವನ್ನೂ ಕಲ್ಪಿಸಿಕೊಳ್ಳಬಲ್ಲ ಸಾಮರ್ಥ್ಯದವರು. ಎಲ್ಲರಂತೆ ಸ್ಥಿಮಿತ ಕಳಕೊಳ್ಳದ ಅವರಿಗೆ ಸಮಸ್ಯೆಯು ನಿನ್ನೆ, ಇಂದು ಮತ್ತು ನಾಳೆಗಳ ಅನುಭವದ ಪ್ರಜ್ಞೆಯಿಂದ ಗ್ರಹಿಸಬೇಕಾದ ಸಮಸ್ಯೆಯಾಗಿ ಕಾಣುತ್ತದೆ. ಅಂತ್ಯದಲ್ಲಿ ಅವರ ಸೂಚನೆಯಂತೆ ನಡೆಯುವ ನಾಟಕವಂತೂ ಸಂಭಾಷಣೆಯನ್ನು ಭಾಮೆ ಮತ್ತು ಕಿಟ್ಟು ಅವರವರೇ ಕಟ್ಟಿಕೊಳ್ಳುವುದರಿಂದಾಗಿ ಒಳಗೇ ಹತ್ತಿಕ್ಕಿದ ಮಾತುಗಳು ಯಾವ ಎಗ್ಗಿಲ್ಲದೆ ಒಡಲು ಹರಿದು ಓತಪ್ರೋತವಾಗಿ ಹೊಮ್ಮಿ ವಾಸ್ತವದ ದರ್ಶನವನ್ನು ಮಾಡಿಬಿಡುತ್ತವೆ. ಜೋಯಿಸರು ಹೀಗೆ ಅವರವರ ಮನೋದರ್ಪಣವನ್ನು ಅವರವರಿಗೇ ತೋರಿಸಿ, ತನ್ನ ಕಲ್ಪನೆಯ ಹಳ್ಳಿಯನ್ನು ಸಾಕಾರಗೊಳಿಸಿಕೊಳ್ಳುವ ಹೊಣೆಯನ್ನು, ಎಂದಿಗೂ ಊರು ಬಿಡದೆ ಅಲ್ಲಿಯೇ ನೆಲೆಸಲು ನಿರ್ಧರಿಸಿದ ಆ ತರುಣಮಂದಿಗೇ ಹೊರಿಸಿ, ತೀರಿಕೊಳ್ಳುತ್ತಾರೆ ಎಂಬಲ್ಲಿಗೆ ನಾಟಕ ಮುಗಿಯುತ್ತದೆ. 

ಬದಲಾವಣೆಗಳನ್ನು ಎದುರಿಸುವುದು ಹೇಗೆ? ಬದಲಾವಣೆಗಳಿಗೆ ಕಾರಣ ಸ್ವತಃ ನಾವೇ? ಅಥವಾ ಯಾವುದೋ ಹೊರಒತ್ತಡವೆ? ಸೇತುವೆ ಎಂಬುದು ನಮ್ಮನ್ನು ಒಟ್ಟು ಸೇರಿಸುವುದಕ್ಕೂ ಸರಿಯೆ. ಅದರ ವಿರುದ್ಧಕ್ಕೂ ಸರಿಯೆ. ಸೇತುವೆ ಆಯಿತು ಎಂದೊಡನೆ ಅದರ ಉದ್ದೇಶ ನೆರವೇರಿಬಿಡುವುದೆ? ಸೇತುವೆ ಎಂಬುದು ಏನು ನಿಜಕ್ಕೂ? ರೂಪಕವೆ? ವಾಸ್ತವವೆ? ಜೋಡಣೆಯೆ, ಕಳಚುವಿಕೆಯೆ? ಕೆಳಗೆ ಯಾವ ಖೇರಿಲ್ಲದೆ ಹರಿಯುವ ನದಿಯೊಡನೆ ಯಾವ ಸಂವಾದವೂ ನಡೆಯದೆ ಹೋಗುವ ದುರಂತವೆ? ಇಂಥ ನಾನಾ ಪ್ರಶ್ನೆಗಳಿಗೆ ನಾಟಕದಲ್ಲಿ ಬರುವ ಜೋಯಿಸರ ಪಾತ್ರ ಒಂದು ರೀತಿಯಲ್ಲಿ ದಿಕ್ಸೂಚಕ ಪಾತ್ರವಾಗಿ ಗೋಚರಿಸುತ್ತದೆ.

ನಾಟಕವು, ಮೊದಲ ಭಾಗದಲ್ಲಿನ ಬಿಡಿಬಿಡಿ ದೃಶ್ಯಗಳ ಮೂಲಕ ಸೇತುವೆಯ ಪರಿಣಾಮಗಳನ್ನು ಹೇಳುತ್ತ, ಉತ್ತರಾರ್ಧದಲ್ಲಿ ಸೇತುವೆ ಎಂಬುದು ಕೇವಲ ಭೌತಸ್ಥಿತಿಯಲ್ಲಿ ಮಾತ್ರ ಇರುವ, ಜನರ ನಡುವಿನ ಸೇತುವೆಯೇ ಕುಸಿದು ಹೋಗಿರುವ ಅಥವಾ ಸೇತುವೆ ಒತ್ತಟ್ಟಿಗಿರಲಿ, ಜನರ ಪರಸ್ಪರ ಅರಿವಿನ ನಡುವೆಯೇ ಗೋಡೆಯೆದ್ದಿರುವ ಪರಿಯನ್ನು ದಾರುಣವಾಗಿ ಹೇಳುತ್ತದೆ. ನೋಡುತ್ತ ನನಗೆ ನೆನಪಾಗಿದ್ದು ನಮ್ಮೂರುಗಳಲ್ಲಿ ನಡೆವ ಕತೆಗಳೇ. ನಮ್ಮ ರಾಜ್ಯದ ದೇಶದ ಕತೆಗಳೇ. 

ಒಂದು ರೀತಿಯಲ್ಲಿ ನೋಡಿದರೆ, ವರ್ತಮಾನದ ಜಟಿಲತೆ ಕುರಿತು ಹೇಳುವಂತೆ ಕಾಣುವ ಸೇತುಬಂಧ ನಾಟಕ ನಿಜಕ್ಕೂ ಹೇಳುತ್ತಿರುವುದು ಅಂದು ಇಂದು ಮತ್ತು ಮುಂದಿನ ಕಾಲಗಳ ಒಟ್ಟು ತಳಮಳಗಳನ್ನಲ್ಲವೆ? ಸೇತುಬಂಧ ಎನ್ನುವ ಹೆಸರೇ ಸೀದಾ ಆದಿಯಲ್ಲಿ ನಡೆದ ಒಂದು ದೊಡ್ಡ ಯುದ್ಧದ ನೆನಪಿಗೆ, ದುಷ್ಟ ಸಂಹಾರವೆಂಬ ಕಲ್ಪನೆಗೆ, ಅದಕ್ಕೆ ಕೊಂಡಿಯಾಗಿ ಬರುವ ಅಗ್ನಿಪರೀಕ್ಷೆ ಮತ್ತಿತರ ಕರುಳು ಕೊಯÌ ಸಂಕಟದ ಕತೆಗಳಿಗೆ ನಮ್ಮನ್ನು ಒಯ್ಯುತ್ತವೆ. ಸೀತೆಯನ್ನು ಉಳಿಸಿದ ಸೇತುವೆ, ಸೀತಾ ಎಂಬ ಕೋಮಲತೆಯು ಬೆಂಕಿಯಲಿ ಮಿಂದೆದ್ದು ತನ್ನ ಶುದ್ಧತೆಗೆ ಪುರಾವೆ ತೋರಿ, ಗಂಡನ ಮನದಲ್ಲಿ ಕಟ್ಟಬೇಕಾಗಿ ಬಂದ ಹೊಸ ಸೇತುವೆ; ಹೊಳೆಗಳನ್ನು ಸೇರಿಸುವ ಸೇತುವೆ, ಭಾಷೆಗಳ ನಂಟು ಬೆಸೆವ ಸೇತುವೆ, ಊರೂರುಗಳನ್ನು ರಸ್ತೆ ರಸ್ತೆಗಳನ್ನು ಹೊಲಿವ ಸೇತುವೆ. ಊರ ಮಂದಿಯನ್ನು ಊರುಬಿಡಿಸುವ ಸೇತುವೆ, ಹೊರಮಂದಿಯನ್ನು ಒಳ ಕರೆವ ಸೇತುವೆ, ಊರ ಆಕೃತಿಯನ್ನೇ ಬದಲಿಸುವ ಸೇತುವೆ. ಮರಳು ಬಾಚಿ ದೂರದ ಯಾವುದೋ ನಾಡಿಗೆ ಲಾರಿಯಲ್ಲಿ ಕ್ಷಿಪ್ರದಲ್ಲಿ ಕಳಿಸಲು ನೆರವಾಗುವ ಸೇತುವೆ. ಕಲ್ಲು ಸಾಗಿಸುವ, ಗ್ರಾನೈಟ್‌ ಸಾಗಿಸುವ,  ಬದುಕು ಮುರಿಯುವ ಬದುಕು ಚಿಗುರಿಸುವ ಸೇತುವೆ. ನದಿಯನ್ನು ಅಣಕಿಸುವ, ಪ್ರಕೃತಿಗೆ ಸವಾಲು ಎಸೆವ ಸೇತುವೆ. ಒಟ್ಟಿನಲ್ಲಿ ಸೇತುವೆ ಮತ್ತು ಅ-ಸೇತುವೆಗಳ ನಡುವೆ ನಮ್ಮ ಬದುಕು ತುಯ್ಯುತ್ತಿರುವುದೆ? ಇಂಥಲ್ಲಿ ನಾವು ಬದುಕಿನ ದೀಪ ನಂದದಂತೆ ಕಾಪಾಡಿಕೊಳ್ಳುವ ಬಗೆ ಹೇಗೆ?  

ನಾಟಕವನ್ನು ನಾನು ನೋಡಿದೆನೋ, ಕೇಳಿಕೊಂಡೆನೋ ತಿಳಿಯೆ. ಆದರೆ, ಉದ್ದಕ್ಕೂ ನಾನು ಅದರೊಡನೆ ನನ್ನ ಸಾಲುಗಳನ್ನು ಸೇರಿಸುತ್ತ ಹೋಗಿದ್ದು, ನಾಟಕ ಮುಗಿದ ಮೇಲಷ್ಟೆ ಅರಿವಾಯಿತು. ನಾಟಕದಲ್ಲಿ ನಾನೂ ಇದ್ದೆ ಎಂದು ಆ ಮೇಲಷ್ಟೇ ತಿಳಿಯಿತು. ಮುಗಿಸಿ ಹೊರಬರುವಾಗ ಒಳಗೆ ಒಂದು ಬಗೆಯ ತಪ್ತತೆ ಮತ್ತು ದಣಿವು ಆವರಿಸಿತ್ತು. 

ವೈದೇಹಿ

ಟಾಪ್ ನ್ಯೂಸ್

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

9

Cooker Story: ಹತ್ತು ಸಲ ಕೂಗಿದ್ರೂ  ಅವರಿಗೆ ಗೊತ್ತಾಗಲಿಲ್ಲ..!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

3

Kannada: ವೀರ ಕನ್ನಡಿಗ: ತನು ಕನ್ನಡ, ಮನ(ನೆ) ಕನ್ನಡ

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.