ಮೆಸ್ಕಾಂ ಉಪವಿಭಾಗಕ್ಕೆ 8 ತಿಂಗಳಿಂದ ಬೀಗ
Team Udayavani, Oct 15, 2018, 10:58 AM IST
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಎಂಟು ತಿಂಗಳ ಹಿಂದೆ ಉದ್ಘಾಟನೆಗೊಂಡ ಮೆಸ್ಕಾಂ ಉಪವಿಭಾಗ ಕಚೇರಿ ಇನ್ನೂ ಕಾರ್ಯಾರಾಂಭ ಮಾಡಿಲ್ಲ. ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಸುಬ್ರಹ್ಮಣ್ಯ ಉಪ ವಿಭಾಗಕ್ಕೆ 22 ಕಂದಾಯ ಗ್ರಾಮಗಳು ಹಾಗೂ 13 ಗ್ರಾ.ಪಂ. ಸೇರುತ್ತಿವೆ. ವಿದ್ಯುತ್ ಮಂಜೂರಾತಿ, ಬಿಲ್ ಪಾವತಿ ಇತ್ಯಾದಿ ಮೆಸ್ಕಾಂಗೆ ಸಂಬಂಧಿಸಿದ ಕೆಲಸ – ಕಾರ್ಯಗಳನ್ನು ಪೂರೈಸಬೇಕಿದ್ದರೆ ಈ ಮೊದಲು ದೂರದ ಸುಳ್ಯ ಕೇಂದ್ರಕ್ಕೆ ತೆರಳಬೇಕಿತ್ತು. ಸುಮಾರು 50 ಕಿ.ಮೀ. ದೂರ ಕ್ರಮಿಸಲು ಅಧಿಕ ಸಮಯ ಹಾಗೂ ದುಪ್ಪಟ್ಟು ಹಣ ಖರ್ಚಾಗುತ್ತಿತ್ತು.
ಬಳಿಕ ಈ ಭಾಗದ ಕೆಲವರ ಪ್ರಯತ್ನದಿಂದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಉಪವಿಭಾಗ ಕಚೇರಿ ತೆರೆಯಲು 2015ರಲ್ಲಿ ಮಂಜೂರಾತಿ ಸಿಕ್ಕಿತ್ತು. ಈ ವೇಳೆಯೂ ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸಿದರು. ಸ್ಥಳೀಯ ಪ್ರಮುಖರು ಸರಕಾರ ಮಟ್ಟದಲ್ಲಿ ತೀವ್ರ ತಂದುದರ ಪರಿಣಾಮ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದರು. ಕಚೇರಿ ತೆರೆಯಲು ಇಲ್ಲಿನ ಬಿಎಸ್ಸೆನ್ನೆಲ್ ಕಚೇರಿಯ ಒಂದು ಕೊಠಡಿಯನ್ನು ಬಾಡಿಗೆಗೆ ಪಡಕೊಂಡಿತ್ತು. 2018ರ ಮಾರ್ಚ್‌ನಲ್ಲಿ ನೂತನ ಕಚೇರಿಯ ಉದ್ಘಾಟನೆ ಆಗಿತ್ತು. ಉದ್ಘಾಟನೆಗೆ ಬಂದಿದ್ದ ಅಧಿಕಾರಿಗಳು ನಾಳೆಯಿಂದಲೇ ಕಚೇರಿ ಕಾರ್ಯಾರಂಭ ಮಾಡುವುದಾಗಿ ಹೇಳಿ ತೆರಳಿದ್ದರು.
ಬಾಡಿಗೆ ಪಾವತಿ
ಅಂದು ತೆರೆದ ಕಚೇರಿ ಈ ತನಕವೂ ಕಾರ್ಯಾರಂಭ ಮಾಡಿಲ್ಲ. ಕಚೇರಿ ಬಾಡಿಗೆ ತಿಂಗಳಿಗೆ 13,500 ರೂ. ಪಾವತಿಸುವ ಕುರಿತು ಬಿಎಸ್ಸೆನ್ನೆಲ್ ಜತೆಗೆ ಒಪ್ಪಂದವೂ ಆಗಿತ್ತು. ಬಾಡಿಗೆ ಪಾವತಿಸುತ್ತಿದ್ದರೂ ಒಂದು ಸಲವೂ ಕಚೇರಿಯನ್ನು ತೆರೆದ ನಿದರ್ಶನಗಳಿಲ್ಲ.
ಸುಳ್ಯದಲ್ಲಿ ಕರ್ತವ್ಯ
ಕಚೇರಿ ಆರಂಭಗೊಂಡಾಗ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು (ತಾಂತ್ರಿಕ) ಹಾಗೂ ಸೀನಿಯರ್ ಅಸಿಸ್ಟೆಂಟ್ ಹುದ್ದೆ, ಕ್ಯಾಶಿಯರ್, ಜೂನಿಯರ್ ಅಸಿಸ್ಟೆಂಟ್ ಹುದ್ದೆ ಮಂಜೂರಾಗಿದ್ದು, ಇವರು ಸುಬ್ರಹ್ಮಣ್ಯ ಬದಲಿಗೆ ಸುಳ್ಯ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಹಾಗೂ ಸಹಾಯಕ ಎಂಜಿನಿಯರ್ ಹುದ್ದೆ ಇನ್ನೂ ಭರ್ತಿಗೊಳಿಸಿಲ್ಲ.
ಸುಬ್ರಹ್ಮಣ್ಯ ಕೇಂದ್ರದಲ್ಲಿ ಉಪವಿಭಾಗ ತೆರೆದರೂ ಕಾರ್ಯಾರಂಭ ಮಾಡದೇ ಇರುವ ಕುರಿತು ಅನೇಕ ಬಾರಿ ಸುಳ್ಯ ತಾ.ಪಂ. ಸಭೆಗಳಲ್ಲಿ ಈ ಭಾಗದ ಸದಸ್ಯರು ಪ್ರಸ್ತಾವಿಸಿದ್ದರು. ಸರ್ವರ್ ವಿಂಗಡಿಸುವ ಕಾರ್ಯ ಪ್ರಗತಿಯಲ್ಲಿದೆ. ಶೀಘ್ರ ಕಾರ್ಯಾರಂಭ ಮಾಡಲಿದೆ ಎಂದು ಮೆಸ್ಕಾಂ ಅಧಿಕಾರಿಗಳು ಸಬೂಬು ನೀಡಿದ್ದಾರೆ. ವಾಸ್ತವದಲ್ಲಿ ಯಾವ ಪ್ರಯತ್ನಗಳೂ ನಡೆದಿಲ್ಲ ಎನ್ನುವುದಕ್ಕೆ ಎಂಟು ತಿಂಗಳಿಂದ ಕಚೇರಿ ಬಾಗಿಲು ಮುಚ್ಚಿರುವುದೇ ಸಾಕ್ಷಿ.
ಪರಿಹಾರ ಕಾಣಬಹುದು
ಸುಬ್ರಹ್ಮಣ್ಯ ಸುತ್ತಮುತ್ತಲ ಪ್ರದೇಶ ದಟ್ಟ ಗೊಂಡಾರಣ್ಯಗಳಿಂದ ಕೂಡಿದೆ. ಈ ಭಾಗದಲ್ಲಿ ಮಳೆಯೂ ಜಾಸ್ತಿ. ಕಾಡಿನೊಳಕ್ಕೆ ಹಾದುಹೋಗುವ ವಿದ್ಯುತ್ ಮಾರ್ಗದಲ್ಲಿ ಆಗಾಗ್ಗೆ ತಂತಿಗಳು ತುಂಡಾಗುವುದು, ಕಂಬಗಳು ನೆಲಕ್ಕೆ ಉರುಳುವುದು ಸಾಮಾನ್ಯ. ಇಂತಹ ಸಂದರ್ಭ ವಿದ್ಯುತ್ ಸಂಪರ್ಕವನ್ನು ಮತ್ತೆ ಸುಸ್ಥಿತಿಗೆ ತರಲು ಕಂಬ, ತಂತಿ ಇತ್ಯಾದಿ ಉಪಕರಣಗಳಿಗೆ ಸುಳ್ಯಕ್ಕೆ ತೆರಳಬೇಕು. ಇದು ವಿಳಂಬಕ್ಕೆ ಕಾರಣವಾಗುತ್ತದೆ. ಖರ್ಚು ದುಪ್ಪಟ್ಟಾಗುತ್ತಿದೆ. ಸುಬ್ರಹ್ಮಣ್ಯದಲ್ಲಿ ಕಚೇರಿ ಕಾರ್ಯಾರಂಭಿಸಿದರೆ ಇದೆಲ್ಲದಕ್ಕೂ ಪರಿಹಾರ ಸಿಕ್ಕಿ, ವಿದ್ಯುತ್ ಸೇವೆಯೂ ಸುಧಾರಿಸುತ್ತದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಪ್ರಮುಖವಾಗಿ ದೇವಸ್ಥಾನ, ಮಠ ಸಹಿತ ಹಲವು ಧಾರ್ಮಿಕ ಕೇಂದ್ರಗಳಿವೆ. ಈ ಸಂಸ್ಥೆಗಳು ಹೆಚ್ಚು ಪ್ರಮಾಣದಲ್ಲಿ ವಿದ್ಯುತ್ ಬಳಸುತ್ತಿವೆ. ಜತೆಗೆ ನಗರ ವಾಣಿಜ್ಯ ಕೇಂದ್ರವಾಗಿ ಬೆಳೆಯುತ್ತಿದೆ. ವಸತಿಗೃಹಗಳು, ವಾಸದ ಮನೆಗಳು, ಅಂಗಡಿ – ಮುಂಗಟ್ಟುಗಳು, ಹೊಟೇಲ್ ಇತ್ಯಾದಿಗಳೂ ಹೆಚ್ಚುತ್ತಿವೆ. ವಿದ್ಯುತ್ ಬಳಕೆದಾರರು ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಸುತ್ತಮುತ್ತಲ ಪರಿಸದಲ್ಲಿ ಕೃಷಿಕರಿದ್ದು ವಿದ್ಯುತ್ ಬಳಕೆದಾರರು ಹೆಚ್ಚು ಇದ್ದಾರೆ.
ಸ್ವಹಿತಾಸಕ್ತಿ?
ದೇವಸ್ಥಾನ, ಮಠ ಇರುವುದರಿಂದ ಮೆಸ್ಕಾಂಗೆ ಅತೀ ಹೆಚ್ಚು ಆದಾಯ ಕೊಡುವ ಕೇಂದ್ರ ಇದಾಗಿದೆ. ಸುಬ್ರಹ್ಮಣ್ಯವು ಹೊಸದಾಗಿ ಆರಂಭವಾಗುತ್ತಿರುವ ಕಡಬ ತಾಲೂಕಿನ ಭಾಗವಾಗಲಿದೆ. ಹೋಬಳಿ ಕೇಂದ್ರವಾಗುವ ಪಟ್ಟಿಯಲ್ಲೂ ಇದೆ. ಇಷ್ಟಿದ್ದರೂ ಕಚೇರಿ ಆರಂಭಿಸಲು ಮೆಸ್ಕಾಂ ನಿರ್ಲಕ್ಷ್ಯ ತೋರುವುದರ ಹಿಂದೆ ಕಮಿಷನ್ ಲಾಬಿಯ ಜತೆಗೆ ಸ್ಥಳೀಯ ಅಧಿಕಾರಿಯೊಬ್ಬರ ಸ್ವಹಿತಾಸಕ್ತಿ ಅಡಗಿದೆ ಎನ್ನುವ ಅನುಮಾನವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ವಿಳಂಬ ಧೋರಣೆ ವಿರುದ್ಧ ಶೀಘ್ರ ಹೋರಾಟ ನಡೆಸಲು ಸಿದ್ಧತೆ ಕೈಗೊಂಡಿದ್ದಾರೆ.
ಸತ್ಯಾಗ್ರಹಕ್ಕೆ ಸಿದ್ಧ
ಉಪವಿಭಾಗ ತೆರೆಯಲು ಸಾಕಷ್ಟು ಪ್ರಯತ್ನ ನಡೆಸಿದ್ದೇನೆ. ಮುಂದಿನ ತಾ.ಪಂ. ಸಾಮಾನ್ಯ ಸಭೆಗೂ ಮೊದಲು ಉಪವಿಭಾಗ ಕಚೇರಿ ಕಾರ್ಯಾರಂಭ ಮಾಡದೇ ಇದ್ದಲ್ಲಿ ತಾ.ಪಂ. ಕಚೇರಿ ಮುಂದೆ ಸತ್ಯಾಗ್ರಹ ಕೂರಲು ನಿರ್ಧರಿಸಿದ್ದೇನೆ.
– ಅಶೋಕ ನೆಕ್ರಾಜೆ
ತಾ.ಪಂ. ವಿಪಕ್ಷ ನಾಯಕ
ಶೀಘ್ರ ಆರಂಭ
ಉಪವಿಭಾಗ ಕಚೇರಿಗೆ ಕಂಪ್ಯೂಟರ್, ಸಿಬಂದಿ ಸಹಿತ ಎಲ್ಲ ವ್ಯವಸ್ಥೆಗಳು ಆಗಿವೆ. ಸಾಪ್ಟ್ವೇರ್ ಸಮಸ್ಯೆಯಿಂದ ವಿಳಂಬವಾಗಿದೆ. ಶೀಘ್ರ ಕಾರ್ಯಾರಂಭಕ್ಕೆ ಮುಂದಾಗುತ್ತೇವೆ.
– ನರಸಿಂಹ
ಮೆಸ್ಕಾಂ ಇಇ, ಪುತ್ತೂರು
ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Waqf Report: ಅಮಿತ್ ಶಾ ಅಂಗಳಕ್ಕೆ ಭಿನ್ನರ ವಕ್ಫ್ ವರದಿ: ಕಿರಣ್ ರಿಜಿಜು ಮೂಲಕ ಸಲ್ಲಿಕೆ
Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ
ಮಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ
Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ
Train; ಗೋಮಟೇಶ್ವರ ಎಕ್ಸ್‌ಪ್ರೆಸ್ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲು ಕ್ಯಾ| ಚೌಟ ಪತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.