ದಡ್ಡರೆಲ್ಲ ಹೀರೋ ಆದೆವು!
Team Udayavani, Oct 16, 2018, 6:00 AM IST
ಲೋಕದ ಕಣ್ಣಿಗೆ ಹಾಸ್ಟೆಲ್‌ನ ನಾವೆಲ್ಲರೂ ದಡ್ಡರು, ಸೋಮಾರಿಗಳು ಆಗಿಬಿಟ್ಟಿದ್ದೆವು. ಎಲ್ಲರ ಲೈಫಲ್ಲೂ ಟರ್ನಿಂಗ್ ಪಾಯಿಂಟ್ ಬಂದಂತೆ ನಮ್ಮಲ್ಲೂ ಬಂತು. ಆ ಟ್ವಿಸ್ಟ್‌ಗೂ ಕಾರಣ ಹಾಸ್ಟೆಲ್! ವರ್ಸ್r ಎಂದು ನಮ್ಮನ್ನು ಜರಿದಿದ್ದ ಗೆಳೆಯರು, ಲೆಕ್ಚರರ್‌ಗಳ ಅಭಿಪ್ರಾಯ ಬದಲಿಸಲು, ಕಲಿಕೆ ತಂತ್ರ ರೂಪಿಸಿಯೇಬಿಟ್ಟೆವು… ಆಮೇಲೇನಾಯ್ತು?
ನನ್ನ ಪ್ರಕಾರ, ಬದುಕಿನ ಬಹುದೊಡ್ಡ ಯೂನಿವರ್ಸಿಟಿ ಅಂದ್ರೆ ಹಾಸ್ಟೆಲ್! ಅದು ಎಂಟು ದಿಕ್ಕುಗಳಿಂದ ನೂರಾರು ತೊರೆಗಳು ಬಂದು ಸೇರುವ ಕಡಲಿದ್ದಂತೆ. ಮೊದ ಮೊದಲಿಗೆ ಹಾಸ್ಟೆಲ್‌ಗೆ ಕಾಲಿಟ್ಟಾಗ, ಕಗ್ಗಾಡಲ್ಲಿ ಸಿಲುಕಿದಂತೆ ಕಂಗಾಲಾಗಿದ್ದೆ. ಪರಿಚಿತರಿಲ್ಲದೇ ಚಿಂತೆಯಲ್ಲಿ ನಿದ್ದೆಗೆಟ್ಟಿದ್ದೆ. ಇದನ್ನು ಕೇಳಿ ನನ್ನ ಅಪ್ಪ- ಅಮ್ಮನ ಕಣ್ಣುಗಳು ಸಣ್ಣವಾಗಿದ್ದವು. ದಿನ ಕಳೆದಂತೆ ಇದೂ ಮನೆ ಅಂತನ್ನಿಸಿಬಿಟ್ಟಿತು. ಕುಟುಂಬದಂತೆ ಪ್ರೀತಿ ತೋರುವ ಗೆಳೆಯರ ಗುಂಪು ಹುಟ್ಟಿಕೊಂಡಿತು. ಎಲ್ಲಿಗೇ ಹೋದರೂ ಗುಂಪಿನಲ್ಲೇ ಹೋಗುವುದು, ಸದಾ ಸದ್ದು ಮಾಡುವ ಗುಂಪು ಚರ್ಚೆಗಳು ಮಜಾ ಕೊಟ್ಟವು.
ಆದರೆ, ನಮ್ಮ ಮೇಲೆ ಅದ್ಯಾರ ಕಣ್ಣು ಬಿತ್ತೋ? ಒಂದೊಂದೇ ಕಂಟಕ ಶುರು. “ಹಾಸ್ಟೆಲ್ ಹುಡುಗರಿಗೆ ಜವಾಬ್ದಾರಿಯೇ ಇರೋಲ್ಲ. ಶುದ್ಧ ಸೋಮಾರಿಗಳು. ವರ್ಸ್ಟ್ ಬ್ಯಾಚ್. ಅವರ ಜೊತೆ ಸೇರಬೇಡಿ’ ಅಂತ ಕೆಲವು ಲೆಕ್ಚರರ್‌ಗಳ ಕಟ್ಟಪ್ಪಣೆ ಮಾಡಿ, ಎಲ್ಲರಿಂದ ನಮ್ಮನ್ನು ದೂರವಿಟ್ಟರು. ಅದಕ್ಕೆ ಕಾರಣವೂ ಇತ್ತು. ಪ್ರಥಮ ವರ್ಷದಲ್ಲೇ ಸೀನಿಯರ್‌ಗಳೊಂದಿಗೆ ಗಲಾಟೆ, ಪ್ರಾಂಶುಪಾಲರಿಗೆ ದೂರು, ಪೋಲಿಸರ ಭೇಟಿ, ರಾಜಿ- ಸಂಧಾನ, ಉಪನ್ಯಾಸಕರ ವಿರುದ್ಧ ಪ್ರತಿಭಟನೆ. ಲೆಕ್ಚರರ್ ವಿರುದ್ಧವೇ ದೂರು ಸಲ್ಲಿಸಿ ಅವರನ್ನು ಕ್ಲಾಸ್‌ನಿಂದ ವಜಾ ಮಾಡಿಸಿದ್ದು, ಹಾಸ್ಟೆಲ್‌ನಲ್ಲಿ ನೀರಿಲ್ಲ ಅಂತ ವಾರ್ಡನ್ ವಿರುದ್ಧ ಧರಣಿ ಕೂತಿದ್ದು… ಒಂದೇ ಎರಡೇ? “ವರ್ಸ್ಟ್ ಬ್ಯಾಚ್’ ಎಂಬ ಹಣೇಪಟ್ಟಿಗೆ ಇವೆಲ್ಲವೂ ಕಾರಣವಾಗಿದ್ದವು.
ಆದರೆ, ಎಲ್ಲರ ಲೈಫಲ್ಲೂ ಟರ್ನಿಂಗ್ ಪಾಯಿಂಟ್ ಬಂದಂತೆ ನಮ್ಮಲ್ಲೂ ಬಂತು…
ಆ ಟ್ವಿಸ್ಟ್‌ಗೂ ಕಾರಣ ಹಾಸ್ಟೆಲ್! ಈ ಜೀವನ ಒಂದು ಜೇನುಗೂಡು. ಇಲ್ಲಿರುವ ಸಮಸ್ಯೆಗಳೇ ನಮ್ಮೆಲ್ಲರನ್ನೂ ಒಗ್ಗೂಡಿಸಿ, “ನಾವೆಲ್ಲರೂ ಒಂದೇ’ ಎಂಬ ಭಾವ ಹುಟ್ಟಿಸಿತು. ಯಾರೊಬ್ಬರಿಗೆ ಕಷ್ಟ ಎದುರಾದರೂ, ನಮಗೇ ಆಗಿದ್ದು ಎಂಬಂತೆ, ಸಮಸ್ಯೆ ನಿವಾರಿಸಿಕೊಳ್ಳುತ್ತಿದ್ದೆವು. ಯಾರಾದರೂ ಅಪ್ಪ- ಅಮ್ಮ, ಮಗನನ್ನು ನೋಡಲು ಬಂದರೆ, ನಮ್ಮ ಅಪ್ಪ- ಅಮ್ಮನೇ ಬಂದಿದ್ದಾರೆ ಎಂಬಂಥ ಸತ್ಕಾರ. ನೋವಿನಲ್ಲೂ ನಗುವುದನ್ನು ಕಲಿತೆವು. ಪರಸ್ಪರ ಬಿಡಿಸಲಾಗದ ಬಾಂಧವ್ಯ ನಮ್ಮದಾಯಿತು. ಗುಂಪುಗೂಡಿಯೇ ಊಟ- ಉಪಹಾರ. ಒಟ್ಟಿಗೆ ಪ್ರವಾಸ. ಯಾರಿಗಾದರೂ ಹಣದ ತೊಂದರೆ ಎದುರಾದರೆ, ನಾವೆಲ್ಲರೂ ನೆರವಾಗುತ್ತಿದ್ದೆವು. ಅನಿವಾರ್ಯತೆ ಇದ್ದಾಗ ಬಟ್ಟೆ, ಶೂ, ಬೆಲ್ಟ್, ಕೋಟ್‌ಗಳೆಲ್ಲ ವಿನಿಮಯವಾಗಿದ್ದೂ ಇದೆ.
ಇಷ್ಟೇ ಅಲ್ಲ. ಸ್ನಾನಕ್ಕೆ ಕ್ಯೂ ಇದ್ದಾಗ, ಯಾರಿಗೆ ತುರ್ತು ಇದೆಯೋ ಅವರಿಗೆ ಮೊದಲು ಬಿಡುತ್ತಿದ್ದೆವು. ತಡವಾಗಿ ಬಂದರೆ, ಸ್ನೇಹಿತರಿಗೆ ಊಟ ತೆಗೆದಿಡುತ್ತಿದ್ದೆವು. ಹುಷಾರು ತಪ್ಪಿದರೆ, ನಾವೇ ಅಮ್ಮನ ಆರೈಕೆ ನೀಡುತ್ತಿದ್ದೆವು.
ಪರೀಕ್ಷೆ ಸನಿಹ ಬಂತು. ಹಾಸ್ಟೆಲ್‌ನಲ್ಲಿ ಒಂದು ಜಾಣ ನಿಶ್ಶಬ್ದ ಆವರಿಸಿತು. ತಪಸ್ಸಿಗೆ ಕುಳಿತಂತೆ ಪುಸ್ತಕದ ಮುಂದೆ ಕುಳಿತೆವು. ಗುಂಪು ಚರ್ಚೆಗಳು ಕಬ್ಬಿಣದ ಕಡಲೆಯನ್ನೂ ಮೆತ್ತಗೆ ಮಾಡಿಬಿಟ್ಟವು. ಕ್ಲಾಸ್‌ರೂಮ್‌ನ ಪಾಠಕ್ಕಿಂತ, ಗುಂಪು ಚರ್ಚೆಯಲ್ಲಿ ಕಲಿತಿದ್ದೇ ಹೆಚ್ಚು ಎಂಬಂಥ ಸಂತೃಪ್ತಿಭಾವ. ಒಟ್ಟಿನಲ್ಲಿ ಹಾಸ್ಟೆಲ್ಲೇ ನಮಗೆಲ್ಲ ಎರಡನೇ ವಿಶ್ವವಿದ್ಯಾಲಯ ಆದಂತೆ. ಎಲ್ಲರೂ ಆತ್ಮವಿಶ್ವಾಸದಲ್ಲಿ ಪರೀಕ್ಷೆ ಎದುರಿಸಿದ್ದೆವು.
ಫಲಿತಾಂಶ ಬಂದಾಗ ಬೇರೆಯವರೆಲ್ಲರೂ ಮೂಗಿನ ಮೇಲೆ ಬೆರಳಿಟ್ಟರು. ಹಾಸ್ಟೆಲ್‌ನ ಬ್ಯಾಚ್, ಒಳ್ಳೆಯ ಅಂಕಗಳಿಂದ ಪಾಸ್ ಆಗಿತ್ತು. “ವರ್ಸ್ಟ್ ಬ್ಯಾಚ್’ ಎಂದು ತೀರ್ಪು ಕೊಟ್ಟವರು ಕೊನೆಗೂ ಸೋಲೊಪ್ಪಿಕೊಂಡಿದ್ದರು. “ನಿಮ್ಮ ಒಗ್ಗಟ್ಟು ನಮ್ಮೆಲ್ಲರ ಮನಗೆದ್ದಿದೆ. ನಿಮ್ಮ ಸಾಧನೆಯಿಂದ ನಮ್ಮ ಕಾಲೇಜಿಗೆ ಒಳ್ಳೆಯ ಹೆಸರು ಬಂದಿದೆ. ಓದು- ಬರಹ ಅಷ್ಟೇ ಅಲ್ಲ, ಸಾಹಿತ್ಯ- ಕ್ರೀಡೆ- ಸಂಗೀತದಲ್ಲೂ ಟ್ಯಾಲೆಂಟ್ ತೋರಿಸಿದ್ದೀರಿ. ನೀವೇ ಈ ಕಾಲೇಜಿನ ದಿ ಬೆಸ್ಟ್ ಬ್ಯಾಚ್’ ಅಂದಾಗ, ನಾವೆಲ್ಲ ಖುಷಿಯಲ್ಲಿ ಶಿಳ್ಳೆ ಹಾಕಿದ್ದೇ ಹಾಕಿದ್ದು.
ಹೊಂದಾಣಿಕೆ, ಒಗ್ಗಟ್ಟು ಇದ್ದುಬಿಟ್ಟರೆ ಯಶಸ್ಸು ಸುಲಭದಲ್ಲಿ ಕೈಗೆಟುಕುತ್ತೆ ಎಂಬುದಕ್ಕೆ ನಮ್ಮ ಹಾಸ್ಟೆಲ್ ಜೀವನ ಅದ್ಭುತ ನಿದರ್ಶನ.
ಬಸವರಾಜ ಆರ್. ಪೂಜಾರ, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.