ಹೆಂಗವಳ್ಳಿ : ಮನೆಗೆ ಸಿಡಿಲು ಬಡಿದು ಹಾನಿ; ಮಹಿಳೆ ಆಸ್ಪತ್ರೆಗೆ
Team Udayavani, Oct 16, 2018, 9:54 AM IST
ಸಿದ್ದಾಪುರ: ಕುಂದಾಪುರ ತಾಲೂಕು ಹೆಂಗವಳ್ಳಿ ಗ್ರಾಮದ ಇರಿಗೆ ಮೋಹನ ನಾಯ್ಕ ಅವರ ಮನೆಗೆ ಸೋಮವಾರ ಸಿಡಿಲು ಬಡಿದು ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಸಿಡಿಲಿನ ಆಫಾತಕ್ಕೆ ಸಿಲುಕಿದ ಒಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೋಹನ್ ನಾಯ್ಕ ಹಾಗೂ ಅವರ ಮಗಳು ಜ್ಯೋತಿ ಮನೆಯಲ್ಲಿದ್ದ ಸಂದರ್ಭ ಸಿಡಿಲು ಬಡಿದಿದೆ. ಜ್ಯೋತಿ (20) ಅವರು ಸಿಡಿಲಿನ ಆಘಾತದಿಂದ ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೋಹನ್ ನಾಯ್ಕ ಅವರ ಕಿವಿಗೂ ಹಾನಿಯಾಗಿದೆ.
ಮನೆಯ ಮುಂಭಾಗದ ತೆಂಗಿನ ಮರ ಹಾಗೂ ವಿದ್ಯುತ್ ಕಂಬಕ್ಕೆ ಬಡಿದ ಸಿಡಿಲು ಮುಂಭಾಗದ ಗೋಡೆಗೆ ಎರಗಿದ ಪರಿಣಾಮ ಗೋಡೆ ತೂತಾಗಿದೆ. ಅಡುಗೆ ಕೋಣೆ ಮತ್ತು ಪಕ್ಕದಲ್ಲಿರುವ ಕೋಣೆಯ ಗೋಡೆಯನ್ನು ಕೊರೆದುಕೊಂಡು ಹೊರಗೆ ಹೋಗಿದೆ. ಅಡುಗೆ ಮನೆಯ ಎಲ್ಲ ಸಾಮಗ್ರಿಗಳು ಹಾನಿಗೀಡಾಗಿವೆ.
ಮನೆಯ ಮೇಲ್ಛಾವಣಿ, ಹಿಂಭಾಗ ಹಾಗೂ ಬಲ ಭಾಗದ ಸಿಮೆಂಟ್ ಶೀಟಿನ ತಗಡಿನ ಮಾಡು ಜಖಂಗೊಂಡಿದೆ. ವಿದ್ಯುತ್ ಉಪಕರಣಗಳು ಹಾನಿಗೀಡಾಗಿವೆ. ವಿದ್ಯುತ್ ಕಂಬದಿಂದ ಮನೆಗೆ ಅಳವಡಿಸಿದ ಸರ್ವಿಸ್ ವಯರ್, ಮೀಟರ್ ಬೋರ್ಡ್, ಸ್ವಿಚ್ ಬೋರ್ಡ್, ಒಳ ಭಾಗದ ವಯರಿಂಗ್ ಸಂಪೂರ್ಣ ಸುಟ್ಟುಹೋಗಿದೆ. ಮೀಟರ್ ಬೋರ್ಡ್ ಮನೆಯಿಂದ 10 ಮೀಟರ್ ದೂರಕ್ಕೆ ಹಾರಿ ಬಿದ್ದಿದೆ. ಸೋಲಾರ್ ವ್ಯವಸ್ಥೆಯೂ ಹಾನಿಗೀಡಾಗಿದೆ.
ಆಸ್ಪತ್ರೆಗೆ ದಾಖಲು
ಮೋಹನ ನಾಯ್ಕ ಅವರು ಪತ್ನಿ ಹಾಗೂ ನಾಲ್ವರು ಮಕ್ಕಳೊಂದಿಗೆ ವಾಸವಾಗಿದ್ದು, ಸಿಡಿಲು ಬಡಿಯುವ ಸಂದರ್ಭ ತಂದೆ ಮತ್ತು ಮಗಳು ಜ್ಯೋತಿ ಮಾತ್ರ ಮನೆಯಲ್ಲಿದ್ದರು. ಉಳಿದ ಮೂವರು ಹೊರಗಡೆ ಕೆಲಸಕ್ಕೆ ಹೋಗಿದ್ದರು. ಜ್ಯೋತಿ ಅಡುಗೆ ಮನೆಯ ಪಕ್ಕದಲ್ಲಿರುವ ಒಂದು ಕೋಣೆಯಲ್ಲಿ ಟೈಲರಿಂಗ್ ಮಾಡುತ್ತಿದ್ದರು. ಮುಂಭಾಗದ ಗೋಡೆಯ ಮೂಲಕ ಒಳ ಪ್ರವೇಶಿಸಿದ ಸಿಡಿಲು ಜ್ಯೋತಿ ಅವರಿದ್ದ ಕೋಣೆಯ ಮೂಲಕ ಹೊರ ಹೋಗಿದ್ದು ಅವರು ಆಘಾತಕ್ಕೊಳಗಾಗಿದ್ದಾರೆ. ಅವರನ್ನು ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊರಗಿನ ಜಗಲಿಯಲ್ಲಿ ಕುಳಿತಿದ್ದ ಮೋಹನ ನಾಯ್ಕ ಕೂಡ ಆಘಾತಕ್ಕೆ ಒಳಗಾಗಿದ್ದಾರೆ. ಘಟನ ಸ್ಥಳಕ್ಕೆ ಹೆಂಗವಳ್ಳಿ ಗ್ರಾ.ಪಂ. ಸದಸ್ಯ ವಸುಂಧರ ಹೆಗ್ಡೆ, ಅಭಿವೃದ್ಧಿ ಅಧಿಕಾರಿ ದಿನೇಶ್ ನಾಯ್ಕ, ಕಾರ್ಯದರ್ಶಿ ಅಶೋಕ್ ಕುಮಾರ ಶೆಟ್ಟಿ ಅವರು ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಗ್ರಾ.ಪಂ. ತುರ್ತು ಕ್ರಮ
ಸಿಡಿಲಿನಿಂದ ಮನೆಯ ಛಾವಣಿ ಸಂಪೂರ್ಣ ಹಾನಿಗೀಡಾಗಿರುವುದರಿಂದ ಸ್ಥಳೀಯ ಗ್ರಾ.ಪಂ. ವತಿಯಿಂದ ತುರ್ತಾಗಿ ಸಿಮೆಂಟ್ ಶೀಟ್ ತರಿಸಿ ಹಾಕಿಸಿಕೊಟ್ಟಿದ್ದಾರೆ. ಜ್ಯೋತಿ ಅವರು ಚಿಕಿತ್ಸೆ ಪಡೆಯುತ್ತಿರುವುದರಿಂದ ಪರಿಹಾರಕ್ಕಾಗಿ ಕಂದಾಯ ಇಲಾಖೆಗೆ ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.