ವಿಮಾನ ನಿಲ್ದಾಣದಲ್ಲಿ ದಸರಾ ಸಂಭ್ರಮ
Team Udayavani, Oct 16, 2018, 2:54 PM IST
ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಎಲ್)ದಲ್ಲೂ ಈಗ ನಾಡಹಬ್ಬ ದಸರಾ ವೈಭವ ಕಳೆಗಟ್ಟಿದೆ. ದಸರಾ ಗೊಂಬೆಗಳ ಪ್ರದರ್ಶನ, ನೃತ್ಯ ಸೊಬಗು, ಸಂಗೀತ ಸುಧೆ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಶೇಷ ಅಲಂಕಾರಗಳಿಂದ ನಿಲ್ದಾಣ ಝಗಮಗಿಸುತ್ತಿದೆ. ದೇಶ-ವಿದೇಶದಿಂದ ಇಲ್ಲಿ ಬಂದಿಳಿಯುವ ಪ್ರಯಾಣಿಕರು ಈ ವೈಭವಕ್ಕೆ ಸಾಕ್ಷಿಯಾಗುತ್ತಿದ್ದಾರೆ. ಮುಂದಿನ ಮೂರು ದಿನಗಳು ಈ ಮೆರಗು ಕಣ್ಮನಸೆಳೆಯಲಿದೆ.
ಸೋಮವಾರ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಈ ವಿಶೇಷ ಉತ್ಸವಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಅತಿ ಹೆಚ್ಚು ಪ್ರಯಾಣಿಕರು ಭೇಟಿ ನೀಡುವ ವಿಮಾನ ನಿಲ್ದಾಣದಲ್ಲಿ ಈ ನಾಡಹಬ್ಬದ ಅಂಗವಾಗಿ ಕಾರ್ಯಕ್ರಮ ಏರ್ಪಡಿಸಿರುವುದು ಸ್ವಾಗತಾರ್ಹ. ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳ ಮೂಲಕ ದಕ್ಷಣ ಭಾರತದ ಸಮೃದ್ಧ ಸಾಂಸ್ಕೃತಿಕ ಪರಂಪರೆಯನ್ನು ಪರಿಚಯಿಸುವ ಉತ್ತಮ ವಿಧಾನ ಇದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮೊದಲ ದಿನದ ಕಾರ್ಯಕ್ರಮದಲ್ಲಿ ಗಾಯಕಿ ಸಂಗೀತಾ ಕಟ್ಟಿ ಅವರ ಗಾಯನ, ಬಿಐಎಎಲ್ ಶ್ರೀಲೇಖಾ ಅವರ ಮೋನಿ ಅಟ್ಟಂ ಪ್ರದರ್ಶನ, ವಿದ್ವಾನ್ ಅಶೋಕ್ ಮತ್ತು ಅವರ ತಂಡದ ಶಾಸ್ತ್ರೀಯ ನೃತ್ಯ ಪ್ರದರ್ಶನ ಗಮನಸೆಳೆಯಿತು. ಹಬ್ಬದ ಪ್ರಯುಕ್ತ ವಿಶೇಷ ಬಾಯಲ್ಲಿ ನೀರೂರಿಸುವ ಆಹಾರ ಕೂಡ ಇಲ್ಲಿ ಲಭ್ಯವಿದೆ. ಪ್ರಯಾಣಿಕರು ದಸರಾ ತಿರುಳಿನ ವರ್ಚುವಲ್ ರಿಯಾಲಿಟಿ ಗೇಮ್ ನ ಅನುಭವವನ್ನು ಪಡೆಯಬಹುದಾಗಿದ್ದು, ಇದರಲ್ಲಿ ರಾವಣ ಪ್ರಮುಖ ಪಾತ್ರಧಾರಿಯಾಗಿರುತ್ತಾನೆ. ಆಟವಾಡಿ ಗೆದ್ದ ಪ್ರಯಾಣಿಕರಿಗೆ ಗಿಫ್ಟ್ ಓಚರ್‌ಗಳನ್ನು ನೀಡಲಾಗುತ್ತದೆ.
ಗೊಂಬೆ ಪ್ರದರ್ಶನದಲ್ಲಿ ಟನಲ್ ಬೋರಿಂಗ್ ಮಷೀನ್
ಬೆಂಗಳೂರು: ನೀವು “ನಮ್ಮ ಮೆಟ್ರೋ’ದಲ್ಲಿ ಪ್ರಯಾಣಿಸಿದ್ದೀರಿ. ಅದು ಓಡಾಡುವ ಸುರಂಗದಲ್ಲಿ ಹಾದುಹೋಗಿದ್ದೀರಿ. ಆದರೆ, ಆ ಸುರಂಗ ಕೊರೆದ ಟನಲ್ ಬೋರಿಂಗ್ ಮಷೀನ್ (ಟಿಬಿಎಂ) ನೋಡಿದ್ದೀರಾ?
– “ನೋಡಿಲ್ಲಾ’ ಎಂದಾದರೆ, ನಗರದ ಬನಶಂಕರಿ ಮೊದಲ ಹಂತದ ಅಶೋಕನಗರದ ವಿ.ಕೆ. ನರಸಿಂಹನ್ ಅವರ ಮನೆಗೆ ಭೇಟಿ ನೀಡಿ. ಅಲ್ಲಿ ನಿಮಗೆ ಈ ಟಿಬಿಎಂ ದರ್ಶನ ಆಗಲಿದೆ. ದಸರಾ ಹಬ್ಬದ ಅಂಗವಾಗಿ ಎಲ್ಲೆಡೆ ನಡೆಯುವ ಗೊಂಬೆ ಪ್ರದರ್ಶನದಲ್ಲಿ ಸಾಮಾನ್ಯವಾಗಿ ಪುರಾಣ ಕತೆಗಳನ್ನು ಕಟ್ಟಿಕೊಡುವ ಗೊಂಬೆಗಳನ್ನು ಹೊಂದಿಸಿಟ್ಟಿರುವುದನ್ನು ಕಾಣಬಹುದು. ಆದರೆ, ನರಸಿಂಹನ್ ಅವರು “ನಮ್ಮ ಮೆಟ್ರೋ’ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಟನಲ್ ಬೋರಿಂಗ್ ಮಷಿನ್‌ಗಳನ್ನು ಹೋಲುವ ಎರಡು “ಮಿನಿ ಟಿಬಿಎಂ’ಗಳನ್ನು ಪ್ರದರ್ಶನಕ್ಕಿಟ್ಟಿದ್ದಾರೆ. ಇದು ಈಗ ಸುತ್ತಮುತ್ತಲಿನ ಜನರ ಪ್ರಮುಖ ಆಕರ್ಷಣೆಯಾಗಿದೆ.
ಪ್ರತಿ ವರ್ಷ ದಸರಾ ಹಬ್ಬಕ್ಕೆ ಗೊಂಬೆ ಪ್ರದರ್ಶನಕ್ಕಿಡಲಾಗುತ್ತದೆ. ಪ್ರತಿ ಸಲ ಒಂದು ವಿಶಿಷ್ಟ ಪರಿಕಲ್ಪನೆ ಪ್ರದರ್ಶನದ ಹೈಲೈಟ್ ಆಗಿರುತ್ತದೆ. ಕಳೆದ ವರ್ಷ ಕೃಷಿಯನ್ನು ಕಟ್ಟಿಕೊಡುವ ಗೊಂಬೆಗಳನ್ನು ಜೋಡಿಸಿಡಲಾಗಿತ್ತು. ಈ ಬಾರಿ ಮೆಟ್ರೋ ಟಿಬಿಎಂ ಅನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವಾಗ ಈ ಕಲ್ಪನೆ ಹೊಳೆಯಿತು ಎಂದು ನರಸಿಂಹನ್ ತಿಳಿಸಿದರು.
ಅಶೋಕನಗರದ ಅಕ್ಕಪಕ್ಕದ ಜನ, ನಗರದ ಮತ್ತು ಬೇರೆ ಊರುಗಳಲ್ಲಿ ನೆಲೆಸಿರುವ ಬಂಧುಗಳು ಗೊಂಬೆ ಪ್ರದರ್ಶನ ವೀಕ್ಷಣೆಗೆ ಬರುತ್ತಾರೆ. ಪ್ರತಿ ವರ್ಷ ಸರಿಸುಮಾರು 500-600 ಜನ ಭೇಟಿ ನೀಡುತ್ತಾರೆ ಎಂದು ಹೇಳಿದರು.
ಗೊಂಬೆ ಪ್ರದರ್ಶನ
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (ಬಿಐಎಎಲ್)ವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಿಲ್ದಾಣದ ಆವರಣದಲ್ಲಿ ಗೊಂಬೆ ಪ್ರದರ್ಶನ ಏರ್ಪಡಿಸಲಾಗಿದೆ. ಈ ಗೊಂಬೆಗಳು ವಿವಿಧ ದೇವರು, ಪುರಾಣ ಕತೆಗಳನ್ನು ಕಟ್ಟಿಕೊಡುತ್ತವೆ. ಜತೆಗೆ ನಾಡಿನ
ಸಂಸ್ಕೃತಿಯನ್ನೂ ಪರಿಚಯಿಸುತ್ತವೆ.
ಮುಂದಿನ ಮೂರು ದಿನಗಳಲ್ಲಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬರುವ ಸಂದರ್ಶಕರು ಮತ್ತು ಪ್ರಯಾಣಿಕರು ಸಂಜೆ 6ರಿಂದ ರಾತ್ರಿ 8-30ರವರೆಗೆ ವಿಶೇಷ ಪ್ರದರ್ಶನಗಳನ್ನು ವೀಕ್ಷಿಸಬಹುದು. ಹಲವು ಶಾಸ್ತ್ರೀಯ ಮತ್ತು ಜಾನಪದ ಕಲಾವಿದರು ಈ ಉತ್ಸವದಲ್ಲಿ ಪ್ರತಿಭೆ ಪ್ರದರ್ಶಿಸಲಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.