ಶರತ್ಕಾಲದ ಇಂಗ್ಲಿಶ್‌ ದಸರಾ


Team Udayavani, Oct 21, 2018, 6:00 AM IST

2.jpg

ಶರತ್ಕಾಲದ ಇಂಗ್ಲಿಶ್‌ ದಸರಾ ಟನ್‌ ಅಲ್ಲಿ ಇದೀಗ ಎಲ್ಲೆಲ್ಲೂ ಬಣ್ಣಗಳು. ತಿಂಗಳ ಹಿಂದೆ ಹಚ್ಚ ಹಸುರಿನಲ್ಲಿ ತೂಗುತ್ತಿದ್ದ  ಟೊಂಗೆ ಟಿಸಿಲುಗಳ ಹಾಗೂ ಇನ್ನೊಂದು ತಿಂಗಳು ಕಳೆದರೆ ಎಲೆಗಳೆಲ್ಲ ಉದುರಿ ಬೋಳಾಗಲಿರುವ ರೆಂಬೆ ಕೊಂಬೆಗಳ ನಡುವಿನ ಸ್ಥಿತ್ಯಂತರದ  ಕಾಲವಿದು. ವಸಂತ ಹಾಗೂ  ವೈಶಾಖ ಮಾಸಗಳಲ್ಲಿ ಅರಳಿದ್ದ ಬಣ್ಣ ಬಣ್ಣದ ಹೂಗಳೆಲ್ಲ ಗಿಡ ಮರಗಳಿಂದ ಮರೆಯಾಗಿ ಇನ್ನೇನು ಎಲೆಗಳು ಉದುರಲು ಒಂದು ನೈಸರ್ಗಿಕ ತಯಾರಿ ನಡೆಯುವ ಈ ಸಮಯದಲ್ಲಿ ಎಲೆಗಳೆಲ್ಲ  ಬೇರೆ ಬೇರೆ ವರ್ಣದ ಛಾಯೆಗಳಾಗಿ ಬದಲಾಗಿವೆ. ಕೆಲವು ಮರಗಳ ಎಲೆಗಳಲ್ಲಿ ಎಳೆಯ ಹಳದಿ, ಇನ್ನು ಕೆಲವು ಮರಗಳಲ್ಲಿ ಕಡುಅರಸಿನ, ಕೆಲವು ಚಿನ್ನದ ಬಣ್ಣದಲ್ಲಿ  ಮತ್ತೆ ಕೆಲವು ಕೆಂಪು ರಂಗಿನಲ್ಲಿ , ಎಲ್ಲೆಲ್ಲೂ ಹಸಿರಪೊರೆ ಕಳೆಯುವ ಸಿದ್ಧತೆಯೇ ಕಾಣಿಸುತ್ತದೆ. ಪ್ರಕೃತಿ ಇಲ್ಲೀಗ ಒಂದು ಉಡುಗೆ ಕಳಚಬೇಕು, ಮತ್ತೂಂದು ತೊಡಬೇಕು. ಪ್ರತಿವರ್ಷದ ಇಲ್ಲಿನ ಅಕ್ಟೋಬರ್‌ ತಿಂಗಳೆಂದರೆ, ಸುತ್ತಮುತ್ತಲಿನ ಹಚ್ಚಹಸಿರಿನ ಬಣ್ಣದ ಏಕತಾನವನ್ನು ಅಳಿಸುವುದು, ಬಣ್ಣದ ಬಣ್ಣದ ಚಿತ್ರ ಬರೆಸುವುದು. ನವೆಂಬರ್‌-ಡಿಸೆಂಬರ್‌ ಹೊತ್ತಿಗೆ ಉದುರಿ ಹೋಗಬೇಕಾದ ಎಲೆಗಳು ಸದ್ಯಕ್ಕೆ ಕೆನ್ನೆ ಕೆಂಪು ಮಾಡಿಕೊಂಡ ಶರದೃತು ವಿನ ಷೋಡಶಿಯರಾಗಿ ನಲಿಯುತ್ತಿವೆ. ಇಲ್ಲಿನ ವಾತಾವರಣದಲ್ಲಿ  ಹೀಗೊಂದು ಬಣ್ಣಗಳ ಜಾತ್ರೆ  ನಡೆಯುವ ಹೊತ್ತಲ್ಲಿ  ನವರಾತ್ರಿಯ ಹಬ್ಬದ ಆಗಮನವಾಗಿದೆ. ಈ ಸಮಯಕ್ಕೆ ಭಾರತದಿಂದ ಲಂಡನ್‌ನಲ್ಲಿರುವ ಮಗನ ಮನೆಗೆ ಬಂದ  ಸ್ನೇಹಿತನ ತಾಯಿಯೊಬ್ಬರು ಹೇಳುವಂತೆ, “”ಇಲ್ಲೀಗ ಮರಗಳೇ ಬಣ್ಣದ ಹೂವಿನಂತೆ, ಮತ್ತೆ ದಿನವೂ ಬದಲಾಗುವ ಎಲೆಗಳ ಬಣ್ಣದ ಛಾಯೆಗಳು ನವರಾತ್ರಿಯದೇವಿ ದಿನವೂ ಹೊಸ ಹೊಸ ಸೀರೆ ಉಟ್ಟಂತೆ”. ಆಂಗ್ಲರ ಪ್ರಕೃತಿಯ ಉತ್ಸವವೂ ಹೊರನಾಡಿನ ಸಾಂಸ್ಕೃತಿಕ ಉಲ್ಲಾಸಗಳೂ  ಮುಖಾಮುಖೀಯಾದದ್ದು , ಒಂದು ಇನ್ನೊಂದನ್ನು ತೂಗಿ ಜೋಕಾಲಿ ಆಡಿದ್ದು ಶರತ್ಕಾಲದ ಚಾರಿತ್ರ್ಯಕ್ಕೆ ಹೊಸ ಆಯಾಮ ನೀಡಿದೆ.

ಎಲ್ಲ ಹಬ್ಬಗಳು ಬ್ರಿಟನ್‌ನಲ್ಲಿವೆ…
ಜಗತ್ತಿನ ಎಲ್ಲ ಹಬ್ಬಗಳಿಗೂ ಬ್ರಿಟನ್‌ನಲ್ಲಿ ಎಡೆ ಇದೆ, ಜಾಗ ಇದೆ. ಎಲ್ಲ ದೇಶದ ಜನರನ್ನೂ ಅಂಗೀಕರಿಸುವ ಬ್ರಿಟನ್ನಿಗೆ ಎಲ್ಲ ಸಂಸ್ಕೃತಿಗಳೂ ಕುತೂಹಲ ಹುಟ್ಟಿಸುತ್ತವೆ. ಇಲ್ಲಿನ ಮಕ್ಕಳಿಗೆ ಬೇರೆ ಬೇರೆ ದೇಶದ ಧರ್ಮದ ನಂಬಿಕೆಗಳ ಆಚರಣೆಗಳ ಬೋಧನೆ ಪ್ರಾಥಮಿಕ ವಿದ್ಯಾಭ್ಯಾಸಗಳಲ್ಲಿ  ಸಿಕ್ಕಿರುತ್ತದೆ. ಮತ್ತೆ ನವರಾತ್ರಿಯಂತಹ ವೈವಿಧ್ಯಪೂರ್ಣ ಹಬ್ಬ, ಹೊಸದನ್ನು ಭಿನ್ನವಾಗಿರುವುದನ್ನು ತೆರೆದ ಮನದಿಂದ ನೋಡುವ ಆಂಗ್ಲರನ್ನು ಸುಲಭವಾಗಿ ಆಕರ್ಷಿಸುತ್ತದೆ.  ಪ್ರತಿವರ್ಷದಂತೆ ಈ ವರ್ಷವೂ ನವರಾತ್ರಿಯ ಆರಂಭದ ದಿನವೇ ಮೆಟ್ರೋ, ಸನ್‌, ಇಂಡಿಪೆಂಡೆಂಟ್‌ನಂತಹ ಇಲ್ಲಿನ ಆಂಗ್ಲ  ದಿನಪತ್ರಿಕೆಗಳು, ಬಿಬಿಸಿಯ ರೇಡಿಯೋ ಮಾಲಿಕೆಗಳು ನವರಾತ್ರಿಯ ಹಬ್ಬ ಯಾಕೆ ಹೇಗೆ ಎನ್ನುವುದನ್ನು ಬರೆದಿವೆ, ಬಿತ್ತರಿಸಿವೆ. ಭಾರತದಲ್ಲಿ ಇದರ ಆಚರಣೆ ಹೇಗೆ, ಬ್ರಿಟನ್ನಿನಲ್ಲಿ ಇದರ ಸಂಭ್ರಮ ಏನು ಎಂದು ಉಸುರಿವೆ. ನವರಾತ್ರಿಯ ಬಗ್ಗೆ ಏನೂ ಅರಿಯದ  ಆಂಗ್ಲರೂ ಪತ್ರಿಕೆಯನ್ನು ಓದಿದರೆ ರೇಡಿಯೋ ಕೇಳಿದರೆ ಅವರಿಗೆ ತಿಳಿಯುವಂತೆ ಕೆಲವು ಮೂಲಭೂತ ಮಾಹಿತಿಗಳನ್ನು ನೀಡಲಾಗಿದೆ. ನವರಾತ್ರಿ ಎಂದರೆ ಒಂಬತ್ತು ರಾತ್ರಿಗಳು ಎನ್ನುವಲ್ಲಿಂದ ಶುರು ಆಗುವ ಸರಳ ವಿವರಣೆ, ಈ ಹಬ್ಬದ ಸಮಯಕ್ಕೆ ಧರಿಸುವ ಬಣ್ಣ ಬಣ್ಣದ ವಸ್ತ್ರ ವಿನ್ಯಾಸಗಳು, ಒಳ್ಳೆಯದು ಗೆಲ್ಲುವುದು, ಕೆಟ್ಟದ್ದು ಸೋಲುವುದು, ಸ್ತ್ರೀದೇವಿಯರ  ಆರಾಧನೆ, ಗರ್ಬಾನೃತ್ಯ, ದುರ್ಗಾಪೂಜೆ- ಎಂದೆಲ್ಲ ರೇಡಿಯೋ ಹಾಗೂ ಪತ್ರಿಕೆಗಳ ದಸರಾವನ್ನು ವೀಶ್ಲೇಷಿಸಿವೆ. ಕೆಲವು ಶಾಲೆಗಳಲ್ಲಿ ಧಾರ್ಮಿಕ ಅಧ್ಯಯನ ಎನ್ನುವ ಕಲಿಕೆಯ ವಿಷಯದ ಭಾಗವಾಗಿ ನವರಾತ್ರಿಯನ್ನು ಕುರಿತು ಮಕ್ಕಳಿಗೆ ಮನೆಕೆಲಸವನ್ನೂ ನೀಡಲಾಗಿದೆ, ಶಾಲೆಯಲ್ಲಿ ಚಿತ್ರಗಳೂ ಪ್ರಬಂಧಗಳೂ ತಯಾರಾಗಿವೆ.

ನವರಾತ್ರಿ ಆರಂಭ ಆದಾಗಿನಿಂದಲೂ ಭಾರತೀಯ ಜನರ ಅಸ್ತಿತ್ವ ಇರುವ ಇಲ್ಲಿನ ಊರುಗಳಲ್ಲೆಲ್ಲ ದೇವಿಯರಿಗೆ ಹೂ-ಹಾರ ಅಲಂಕಾರ, ಆರತಿಯ ಅರ್ಚನೆ ಆಗಿದೆ. ಬಣ್ಣ ಬಣ್ಣದ ಉಡುಗೆ ಉಟ್ಟ, ಆಕರ್ಷಕ  ಸಿಂಗಾರ ಮಾಡಿಸಿಕೊಂಡ ದುರ್ಗೆ, ಶಾರದೆ, ಲಕ್ಷ್ಮೀ, ಸರಸ್ವತಿಯರು ಬ್ರಿಟನ್ನಿನ ಊರೂರುಗಳಲ್ಲಿ ಪೂಜೆ ಸ್ವೀಕರಿಸಿದ್ದಾರೆ. ಬ್ರಿಟನ್ನಿನ ಪ್ರತಿ ಪಟ್ಟಣದಲ್ಲೂ ಭಾರತೀಯರಿದ್ದಾರೆ ಮತ್ತು ಅಲ್ಲೆಲ್ಲ ದಸರಾದ ಸಂಭ್ರಮ ಕಂಡಿದೆ. ಕೆಲವು ಊರುಗಳ ಅಲ್ಲಲ್ಲಿನ ದೇವಸ್ಥಾನಗಳಲ್ಲಿ, ಮತ್ತೆ ಕೆಲವು ಊರುಗಳಲ್ಲಿ ದಿನಗಳ ಮಟ್ಟಿಗೆ ಬಾಡಿಗೆ ಪಡೆದ ಸಮುದಾಯ ಭವನಗಳಲ್ಲಿ ಹಬ್ಬದ ಆಚರಣೆ ನಡೆದಿದೆ. ದಕ್ಷಿಣದ ಡೊಸೆಟ್‌, ನೈರುತ್ಯದ ಬ್ರಿಸ್ಟಲ್, ಪಶ್ಚಿಮದ ಕಾರ್ಡಿಫ್, ಮಧ್ಯದ ಬರ್ಮಿಂಗಾಮ…, ಡರ್ಬಿ, ನಾಟಿಂಗಾಮ…, ಲೆಸ್ಟರ್‌, ಪೂರ್ವದ ಲಂಡನ್‌, ಕೇಂಬ್ರಿಜ್‌,  ಉತ್ತರದ ಗ್ಲಾಸೊ, ಎಡಿನºರ್ಗ್‌- ಹೀಗೆ ಬ್ರಿಟನ್‌ನ ಊರೂರುಗಳಲ್ಲೂ  ನವರಾತ್ರಿಗಳಿಗೆ ಸ್ವಾಗತ ಸಿಕ್ಕಿದೆ. ಭಾರತದಲ್ಲಿ ಮನೆಮನೆಯಲ್ಲಿ ಆಚರಿಸಲ್ಪಡುವ ಹಬ್ಬಗಳು ಬ್ರಿಟನ್‌ನಲ್ಲಿ ಹೆಚ್ಚಿನ ಕಡೆ ಸಾಮೂಹಿಕ ಆಚರಣೆಯ ರೂಪ ಪಡೆದಿವೆ. ಲಂಡನ್‌ನಲ್ಲಿ ವಿದ್ಯಾರ್ಥಿಗಳೇ ಭಾಗವಹಿಸಿದ ದಾಂಡಿಯಾ ಕಾರ್ಯಕ್ರಮದಲ್ಲಿ 1000 ಕ್ಕಿಂತ ಹೆಚ್ಚು ಯುವಕ-ಯುವತಿಯರು ಭಾಗವಹಿಸಿದ್ದರು‌. ನಾನಿರುವ ಬ್ರಿಸ್ಟಲ… ಊರಿನಲ್ಲಿ ಒಂಬತ್ತು ರಾತ್ರಿಗಳಲ್ಲಿ ತಡರಾತ್ರಿಯ ತನಕವೂ ಲಕ್ಷ್ಮೀ-ದುರ್ಗೆಯರ ಮುಂದೆ ನೃತ್ಯ ನಡೆದಿತ್ತು. ಅವರ ನಡುವೆ ಸ್ಥಳೀಯ ಆಂಗ್ಲರೂ ಸೇರಿ ಕೋಲಾಟ ಆಡಿದ್ದರು. ಭಾರತೀಯರ ದಟ್ಟ ಜನಸಂಖ್ಯೆಯ ಲಂಡನ್‌ ಹಾಗೂ ಲೆಸ್ಟರ ಪಟ್ಟಣಗಳ ಭಾಗಗಳಲ್ಲಿ ನವರಾತ್ರಿ ಹಬ್ಬಕ್ಕೆ ಭಾರತದಲ್ಲಿ ನಡೆಯುವ ಆಚರಣೆಗೆ ಸಿಗುವ ಜನಾಕರ್ಷಣೆ ಸಿಗುತ್ತದೆ. ಈ ಊರುಗಳಲ್ಲಿ ನಡೆಯುವ ನವರಾತ್ರಿ ಆಚರಣೆಗಳಿಗೆ ಐವತ್ತು ವರ್ಷಗಳಿಗೂ ಮಿಗಿಲಾದ ಇತಿಹಾಸ ಇದೆ.  ಲೆಸ್ಟರ್‌ ಪಟ್ಟಣದಲ್ಲಿ ನಡೆಯುವ ನವರಾತ್ರಿ, ದೀಪಾವಳಿಗಳು ಭಾರತದ  ಯಾವ ಊರಿನ ಆಚರಣೆಗಳಿಗೂ ಕಡಿಮೆಯಲ್ಲ ಎನ್ನುವ ಹೆಮ್ಮೆ ಪಡೆದಿವೆ. ಭಾರತದ ಜನರು ಸ್ವಾತಂತ್ರಾéನಂತರ ಹೆಚ್ಚು ವಲಸೆ ಬಂದುನಿಂತ ಊರು ಎನ್ನುವ ಖ್ಯಾತಿಯ ಲೆಸ್ಟರ್‌ನಲ್ಲಿ 25% ಜನರು ಭಾರತೀಯರೆ. ಭಾರತದ ಹೊರಗೆ, ಅತಿ ಹೆಚ್ಚು ಭಾರತೀಯ ಚಿನ್ನದ ಅಂಗಡಿಗಳು ಇರುವ ರಸ್ತೆ ಎನ್ನುವ ಕಾರಣಕ್ಕೆ “ಗೋಲ್ಡ…ಮೈಲ…’ ಎಂದು ಬ್ರಿಟಿಷರಿಂದಲೇ ಕರೆಸಿಕೊಳ್ಳುವ ಲೆಸ್ಟರ್‌ನ ಬೆಲ್ಗೆವ್‌ ರಸ್ತೆ ತನ್ನ ಖ್ಯಾತಿಗೆ ತಕ್ಕಂತೆ ನವರಾತ್ರಿಯ ಪ್ರತಿದಿನ ಅಲಂಕಾರದ ಜೊತೆಗೆ ಬಣ್ಣ ಬಣ್ಣದ  ಸೀರೆಗಳ, ಹೊಳೆಯುವ ಮೆರುಗಿನ ಉಡುಪುಗಳ, ತಿಂಡಿತಿನಿಸುಗಳ ವಿಶೇಷ ಮಾರಾಟಕ್ಕೂ ಸಾಕ್ಷಿ ಆಗಿದೆ. ಭಾರತೀಯ ಹಬ್ಬವೊಂದರ ಕಲರವದ ಒರಿಜಿನಾಲಿಟಿ ಆಸ್ವಾದಿಸಲೆಂದೇ ಬ್ರಿಟನ್‌ನ ಮೂಲೆಯಿಂದ  ಲಂಡನ್‌ ಅಥವಾ ಲೆಸ್ಟರ್‌ ನಗರಗಳಿಗೆ ತೆರಳಿ ಹಬ್ಬ ಮುಗಿಯುವ ತನಕ ಉಳಿದು ಬಂದವರೂ ಇ¨ªಾರೆ.

ಪೋರ್ಟ್ಸ್ಮೌತ್‌ನಲ್ಲಿ ನವರಾತ್ರಿ 
ಬ್ರಿಟನ್‌ನ ದಕ್ಷಿಣದ ತುದಿಯಲ್ಲಿರುವ ಪೋರ್ಟ್ಸ್ಮೌತ್‌ ಊರಿನಲ್ಲಿ ಇಂಗ್ಲಿಶ್‌ ಸಾಹಿತ್ಯ ಓದುತ್ತಿರುವ ಅಮಿಷಾ ದೇಸಾಯಿ ಎನ್ನುವ 21 ವರ್ಷದ ವಿದ್ಯಾರ್ಥಿ ಹೇಳುವಂತೆ ಇಂಡಿಯಾದಿಂದ ದೂರ  ಇರುವಾಗ ಭಾರತೀಯ ಎನ್ನುವ ವಿಷಯಗಳೆಲ್ಲವೂ ಅಪೂರ್ವ ಹಾಗೂ ಅಮೂಲ್ಯ ಎನಿಸುತ್ತವೆ. ಇಲ್ಲಿ ಸಿಗುವ ಭಾರತದ ಸ್ನೇಹಿತರಲ್ಲಿ, ಹಬ್ಬಗಳಲ್ಲಿ, ಊಟಗಳಲ್ಲಿ , ಹರಟೆಗಳಲ್ಲಿ ಎಲ್ಲದರಲ್ಲೂ ಸಿಗುವ ಭಾರತೀಯತೆ ಬಹಳ ಆತ್ಮೀಯ ಎನಿಸುತ್ತದೆ. ಅಮಿಷಾ ಈ ವರ್ಷದ ನವರಾತ್ರಿ ಆಚರಿಸಲು ತಾನಿರುವ ಪೋರ್ಟ್ಸ್ಮೌತ್‌ ಊರಿನಿಂದ ಇನ್ನೂರೈವತ್ತು ಕಿ. ಮೀ. ದೂರದ ಲೆಸ್ಟರ್‌ ನಗರಕ್ಕೆ ಹೋಗಿದ್ದಳು. ಅಮಿಷಾ ಹೇಳುವಂತೆ ನವರಾತ್ರಿಯಲ್ಲಿ ಎಲ್ಲವೂ ಇದೆ. ಡೋಲು ಡೋಲಕ್‌ಗಳ ಸಂಗೀತ, ಮೈಮನವನ್ನು ಕುಣಿಸುವ ಕೋಲಾಟ, ತಡ ರಾತ್ರಿಯವರೆಗೆ ಸಾಗುವ ಗರ್ಬಾನೃತ್ಯ, ತಿನ್ನಲು ಹಿತ ಎನಿಸುವ ವಿಶೇಷ ತಿಂಡಿತಿನಿಸುಗಳು,  ಬಣ್ಣಬಣ್ಣದ ಅಪ್ಪಟ ಭಾರತೀಯ ಉಡುಪುಗಳನ್ನು, ಬಿಂದಿ ಒಲೆಗಳನು, ಆಭರಣಗಳನ್ನು ಯೋಚಿಸಿ ಶೋಧಿಸಿ ಉಡುವ-ತೊಡುವ ಅವಕಾಶ, ಬಣ್ಣಬಣ್ಣದ ಮಿರಮಿರ ಹೊಳೆಯುವ ಸೀರೆಯುಟ್ಟು ಬೆಳಕುಗಳ ಅಲಂಕಾರ ಮಾಡಿಕೊಂಡು ವಿರಾಜಮಾನರಾದ ಲಕ್ಷ್ಮೀ-ಸರಸ್ವತಿ ದುರ್ಗೆಯರ ಮೂರ್ತಿಗಳ ಎದುರಲ್ಲಿ ಭಜನೆ, ಹೀಗೆ ಬೆಳೆಯುತ್ತದೆ ನವರಾತ್ರಿ ಆಚರಣೆಯ ಆಕರ್ಷಕ ಪಟ್ಟಿ.  ಒಂದೇ ಊರಿನಲ್ಲಿ  ಒಂದೆಡೆ  ಗುಜರಾತಿಗರ ಶೈಲಿಯ ಅಲಂಕೃತ ದೇವಿಯರು, ಇನ್ನೊಂದು ಕಡೆ ಬಂಗಾಲಿ ಶೃಂಗಾರದ ದೇವಿಯರು, ಮತ್ತೂಂದು ಕಡೆ ದಕ್ಷಿಣ ಭಾರತದ ರೀತಿಯ ಆಚರಣೆ ಎಲ್ಲವೂ ಜೊತೆ ಜೊತೆಗೆ ಸಾಗಿದೆ.    

ಹಬ್ಬ ಆಚರಿಸುವವರು ಬಂಗಾಲಿಗಳಿರಲಿ, ಉತ್ತರ ಭಾರತೀಯರಿರಲಿ, ದಕ್ಷಿಣದವರಿರಲಿ ಜಗತ್ತಿನ ಯಾವ ಮೂಲೆಯಲ್ಲಿ ನವರಾತ್ರಿ ಆಚರಣೆ ನಡೆದರೂ ಕೊಲ್ಕತಾದ ಕುಮಾಟೋìಳಿಗೆ  (ಕುಂಬಾರ ಕೇರಿಗೆ) ಮೊದಲೇ ಸುದ್ದಿ ಮುಟ್ಟಿರುತ್ತದೆ. ದುರ್ಗೆ, ಕಾಳಿ, ಲಕ್ಷ್ಮೀ, ಗಣಪತಿಯರ ನೂರುಗಟ್ಟಲೆ ಮೂರ್ತಿಗಳನ್ನು ವಿದೇಶಕ್ಕೆ ಮುಟ್ಟಿಸುವ ಶಿಲ್ಪಿಗಳು, ಕಲಾವಿದರು ಕುಮಾಟೋìಳಿಯಲ್ಲಿ ಇದ್ದಾರೆ. ಉತ್ತರ ಕೊಲ್ಕತಾದ ಶಿಲ್ಪಿಗಳ ಕೇರಿಯ ಮಟ್ಟಿಗೆ ಇದು ಶತಮಾನಗಳಿಂದ ಸಾಗಿಬಂದ ಕುಲಕಸುಬು. ಸಂದು ಓಣಿಗಳಲ್ಲೇ ಕುಳಿತು ನಿಂತು ಜಗನ್ಮೋಹಕ ವಿಗ್ರಹಗಳನ್ನು ತಯಾರಿಸುವ ಖ್ಯಾತಿ ಅಲ್ಲಿನ ಕಲಾವಿದರಿಗಿದೆ. ಇಂಗ್ಲೆಂಡ್‌ ಅಮೆರಿಕಗಳಿಂದ ಕೊಲ್ಕತಾ ಸುತ್ತಲು ಹೋದವರು ಕುಂಬಾರಕೇರಿಯಲ್ಲಿ ಆಯೋಜಿತ ಪ್ರವಾಸವನ್ನೂ ಮಾಡಿಬರುತ್ತಾರೆ. ಅಲ್ಲಿ ತಯಾರಾಗುವ, ಯಾವ ದೇಶವನ್ನೇ ಮುಟ್ಟುವ ದಸರಾ ಸಮಯದ ದುರ್ಗೆ, ಕಾಳಿ, ಲಕ್ಷ್ಮಿಯರ ವಿಗ್ರಹಗಳೇ ಇರಲಿ ಮಣ್ಣುಗಳ ವಿಶೇಷ ಮಿಶ್ರಣ ಪಾಕದಲ್ಲಿ ತಯಾರಾಗಬೇಕು ಮತ್ತು ಆ ಮಣ್ಣಿನಲ್ಲಿ ಜಗತ್ತಿನ ಅತಿದೊಡ್ಡ ವೇಶ್ಯಾಕೇಂದ್ರವೆಂಬ ಖ್ಯಾತಿಯ ಕೊಲ್ಕತಾದ ಸೋನಾಗಾಚಿಯ ಮಣ್ಣನ್ನೂ ಸೇರಿಸುವುದು ಹಳೆಯ ಸಂಪ್ರದಾಯ. ಈ ಸಂಪ್ರದಾಯಕ್ಕೆ  ಸಮಾಜದ ಎಲ್ಲ ಮುಖಗಳೂ ಒಂದೇ ಮಣ್ಣಿನಲ್ಲಿ ಸಮಗ್ರವಾಗಿ ಕೂಡುವುದು ಎಂಬ ಅರ್ಥ ಕೊಟ್ಟವರಿದ್ದಾರೆ ಅಥವಾ ವೇಶ್ಯೆಯರ ಮನೆಗೆ ಭೇಟಿ ನೀಡುವವರು ತಮ್ಮ ಒಳ್ಳೆಯತನವನ್ನು ಬಾಗಿಲಲ್ಲೇ ಬಿಟ್ಟು ಒಳ ಹೊಕ್ಕುವುದರಿಂದ, ಬಾಗಿಲ ಬಳಿಯ ಮಣ್ಣು ಪುಣ್ಯದ ಮಣ್ಣೆಂದು ದೇವಿಯ ವಿಗ್ರಹಕ್ಕೆ ಬಳಸುತ್ತಾರೆ ಎಂದು ವಿವರಿಸುವವರೂ ಇದ್ದಾರೆ. ಈ ಸಂಪ್ರದಾಯಕ್ಕೆ ಹಲವು ವಿಶ್ಲೇಷಣೆಗಳಿದ್ದರೂ  ಸಮಾಜದಿಂದ ತಾತ್ಸಾರ ಅಪಹಾಸ್ಯವನ್ನು  ಪಡೆಯುವ ಒಂದು ವರ್ಗದ ಮನೆಯೆದುರಿನ ಮಣ್ಣನ್ನು ನವರಾತ್ರಿಯ ದೇವಿಯಯ ಮೂರ್ತಿಯಲ್ಲಿ ಬಳಸಿಕೊಳ್ಳುವುದು ಮತ್ತೆ ಆ ವಿಗ್ರಹ ದೇಶ-ವಿದೇಶಗಳಲ್ಲಿ ಪೂಜೆಯನ್ನು ಪಡೆಯುವುದು ಈ ನವಯುಗದ ಮಹಾನ್‌ ವೈರುಧ್ಯಗಳಲ್ಲಿ ಒಂದು. ಇಂತಹ ವೈರುಧ್ಯಗಳನ್ನು  ಸಣ್ಣ ಕೇರಿಯ ಪಾಪ ಪುಣ್ಯದ ಮಣ್ಣಿನ ಪಾಕದಲ್ಲೇ ಬಿಟ್ಟ  ಜಗನ್ಮೋಹಕ ಪ್ರತಿಮೆಗಳು ಬಂಗಾಲದ ಮೂಲೆಮೂಲೆಗೆ, ದೇಶದ ಬೇರೆ ಬೇರೆ ಕಡೆ, ವಿದೇಶಗಳಿಗೆ ಪ್ರಯಾಣ ಮಾಡಿವೆ.

ಈ ವರ್ಷದ ಹಬ್ಬಕ್ಕೆ ಕೊಲ್ಕತಾದಿಂದ ಹೊರಟ ನೀಳಕಂಗಳ ದಶಭುಜೆ ದುರ್ಗೆಯರು ಹಡಗೋ ವಿಮಾನವೋ ಹತ್ತಿ ಬ್ರಿಟನ್ನಿಗೂ ಪ್ರಸ್ಥಾನಗೈದಿದ್ದಾರೆ. ಇಲ್ಲಿ  ಕೆಲವರು ಫೈಬರ್‌ನಿಂದ ತಯಾರಾದ ಜೋಡಿಸಬಲ್ಲ ಕಳಚಬಲ್ಲ  ದುರ್ಗೆ ಸರಸ್ವತಿಯರನ್ನೂ ತರಿಸಿಕೊಂಡು ಹಬ್ಬ ಮುಗಿಸಿದ್ದಾರೆ. ದಸರಾ ಮುಗಿದ ಮೇಲೆ ಕೈ ಮುಖ ಕಿರೀಟಗಳನ್ನು ಕಳಚಿ ಪೆಟ್ಟಿಗೆಯ ಒಳಗೆ ಇಟ್ಟು ಮುಂದಿನ ನವರಾತ್ರಿಗೆ ಕಾದಿದ್ದಾರೆ. ಬೆಂಗಾಲಿಯರ ಸಬೋì ಜನಿನ್‌ ದುರ್ಗೋತ್ಸವ, ತೆಲುಗಿನವರ ದಸರಾ ಸಂಬರಾಲು, ಗುಜರಾತಿಗರ ರಾಸ್‌ಗರ್ಬಾ, ಕನ್ನಡಿಗರ ದಸರಾ ವೈಭವಗಳು ಮೇಳೈಸಿದ ವರ್ಣಮಯ ಹಬ್ಬವೊಂದು  ಇದೀಗ ಇಲ್ಲಿ  ಮುಗಿದಿದೆ. ಭಾವ-ಭಕ್ತಿ ಹಾಡು-ಕುಣಿತ ರಂಜನೆ-ಭಜನೆ ಭೋಜನ-ಮಿಲನಗಳಿಂದ ಕೂಡಿದ ಒಂಬತ್ತು ರಾತ್ರಿಗಳೂ ಕಳೆದಿವೆ. ಪ್ರಾಕೃತಿಕ ತೋರಣದ ಪ್ರಭಾವಳಿಯ ನಡುವಲ್ಲಿ ಭಾರತೀಯ ಹಬ್ಬದ ಅಲಂಕಾರವೂ ಸೇರಿ ಬ್ರಿಟನ್ನಿನ  ನವರಾತ್ರಿಯನ್ನು ವೈಶಿಷ್ಟ್ಯಪೂರ್ಣಗೊಳಿಸಿದೆ. ನವರಾತ್ರಿ ಹಬ್ಬಕ್ಕೆ ನೈಸರ್ಗಿಕ ಸ್ವಾಗತ ನೀಡಿದ ಗಿಡಮರಗಳು, ತರುಲತೆಗಳು, ಎಲೆಬಳ್ಳಿಗಳು ಶರತ್ಕಾಲದ ತಂಗಾಳಿಯಲ್ಲಿ ತೊನೆದಾಡಿವೆ.

ಯೋಗೀಂದ್ರ ಮರವಂತೆ

ಟಾಪ್ ನ್ಯೂಸ್

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

9

Dr MC Sudhakar: ‘ಹೈಕಮಾಂಡ್‌ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’

3

Brahmavar: ಕೊಕ್ಕರ್ಣೆ; ಜುಗಾರಿ ನಿರತನ ಬಂಧನ

8

Kundapura: ಬೋಟ್‌ ರೈಡರ್‌ ನಾಪತ್ತೆ; ಸಿಗದ ಸುಳಿವು

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

13

Kundapura: ಮನೆಗೆ ನುಗ್ಗಿ ಚಿನ್ನಾಭರಣ ಕಳವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.