ತೋಂಟದಾರ್ಯ ಮಠ: ಡಾ. ಸಿದ್ಧರಾಮ ಸ್ವಾಮೀಜಿ ಉತ್ತರಾಧಿಕಾರಿ
Team Udayavani, Oct 22, 2018, 6:00 AM IST
ಗದಗ: ತೋಂಟದಾರ್ಯ ಮಠದ ಪೀಠಾಧಿಪತಿ ಡಾ| ತೋಂಟದ ಸಿದ್ಧಲಿಂಗ ಸ್ವಾಮೀಜಿಯವರು 10 ವರ್ಷಗಳ ಹಿಂದೆಯೇ ವಿಲ್ ಬರೆದಿಟ್ಟಿದ್ದು, ವಿಲ್‌ನಲ್ಲಿ ಬೆಳಗಾವಿ ನಾಗನೂರು ಮಠದ ಡಾ| ಸಿದ್ಧರಾಮ ಸ್ವಾಮೀಜಿಯವರನ್ನೇ ಉತ್ತರಾಧಿಕಾರಿ ಎಂದು ಹೆಸರಿಸಿದ್ದಾರೆ.
ಡಾ|ತೋಂಟದ ಸಿದ್ಧಲಿಂಗ ಶ್ರೀಗಳು ಅಕಾಲಿಕ ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆ ಉದ್ಭವವಾಗಿತ್ತಾದರೂ, ಮಠದ ಆಡಳಿತ ಮಂಡಳಿ ಸದಸ್ಯರು ಭಾನುವಾರ ಬೆಳಗ್ಗೆ ಸಭೆ ಸೇರಿ ವಿಲ್ ಪರಿಶೀಲಿಸಿದಾಗ ಸ್ವಾಮೀಜಿಯವರು 2008ರಲ್ಲಿಯೇ ಉತ್ತರಾಧಿಕಾರಿಯನ್ನು ನೇಮಿಸಿರುವುದು ತಿಳಿದು ಬಂದಿದೆ. ಮುಂಬೈ ಪಬ್ಲಿಕ್ ಟ್ರಸ್ಟ್ ಕಾಯ್ದೆ-1950ರ ಅಡಿಯಲ್ಲಿ ಬೆಳಗಾವಿಯ ಸಹಾಯಕ ಧರ್ಮದತ್ತಿ ಆಯುಕ್ತರ ಕಚೇರಿಯಲ್ಲಿ ವಿಲ್ ನೋಂದಣಿ ಮಾಡಿಸಲಾಗಿದೆ (ಸಂಖ್ಯೆ ಎ-2633 ಡಿಡಬ್ಲ್ಯು ಆರ್). ಮಠದ 19ನೇ ಪೀಠಾಧಿಪತಿಯಾಗಿ ಡಾ|ತೋಂಟದ ಸಿದ್ಧಲಿಂಗ ಸ್ವಾಮೀಜಿಯವರು ತಮಗೆ ದತ್ತವಾದ ಅಧಿಕಾರದ ಮೇರೆಗೆ 2008ರ ಮಾರ್ಚ್ 10ರಂದು ತಮ್ಮ ಉತ್ತರಾಧಿಕಾರಿಯನ್ನಾಗಿ ಡಾ|ಸಿದ್ಧರಾಮ ಸ್ವಾಮೀಜಿಯವರನ್ನು ನೇಮಕ ಮಾಡಿದ್ದಾಗಿ ವಿಲ್‌ನಲ್ಲಿ ನಮೂದಿಸಿದ್ದಾರೆ.
ಆಡಳಿತ ಮಂಡಳಿ ಸದಸ್ಯರ ಸಭೆ ನಂತರ ಶಿವಮೊಗ್ಗ ಆನಂದಪುರದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿಯವರು, ವಿಲ್‌ನಲ್ಲಿ ನಮೂದಿಸಿದಂತೆ ಮಠದ ಉತ್ತರಾಧಿಕಾರಿಯನ್ನಾಗಿ ನಾಗನೂರುಮಠದ ಶ್ರೀ ಸಿದ್ಧರಾಮ ಸ್ವಾಮೀಜಿ ಅವರನ್ನು ನೇಮಕ ಮಾಡಲಾಗಿದೆ ಎಂದು ವಿವಿಧ ಮಠಾಧೀಶರು, ಗಣ್ಯರು ಹಾಗೂ ಭಕ್ತರ ಸಮ್ಮುಖದಲ್ಲಿ ಘೋಷಿಸಿದರು.
ಸಿದ್ಧಲಿಂಗ ಸ್ವಾಮೀಜಿ ಹೆಸರಲ್ಲಿ ಪ್ರಶಸ್ತಿಗೆ ಚಿಂತನೆ
ತೋಂಟದಾರ್ಯ ಮಠದ ಡಾ| ಸಿದ್ಧಲಿಂಗ ಸ್ವಾಮಿಗಳವರು ಕೋಮು ಸೌಹಾರ್ದತೆ ವಿಚಾರದಲ್ಲಿ ಬಹು ದೊಡ್ಡ ಸಾಧನೆ ತೋರುವ ಮೂಲಕ ಸಮಾಜದಲ್ಲಿ ಸಾಮರಸ್ಯಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಹೆಸರಿನಲ್ಲಿ ರಾಜ್ಯಮಟ್ಟದ ಪ್ರಶಸ್ತಿಯೊಂದನ್ನು ನೀಡುವ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಡಾ| ತೋಂಟದ ಸಿದ್ಧಲಿಂಗ ಸ್ವಾಮೀಜಿಯವರಿಗೆ ಅಂತಿಮ ನಮನ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಮುಸೌಹಾರ್ದತೆ ನಿಟ್ಟಿನಲ್ಲಿ ಅವರ ಸೇವೆ ಸದಾ ಸ್ಮರಿಸುವ ನಿಟ್ಟಿನಲ್ಲಿ ರಾಜ್ಯಮಟ್ಟದ ಪ್ರಶಸ್ತಿಯೊಂದನ್ನು ಅವರ ಹೆಸರಲ್ಲಿ ನೀಡಲು ಗಂಭೀರ ಚಿಂತನೆ ಇದ್ದು, ಸರಕಾರದಲ್ಲಿ ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಪಂಚಭೂತಗಳಲ್ಲಿ ಲೀನ
ಹೃದಯಾಘಾತದಿಂದ ಲಿಂಗೈಕ್ಯರಾದ ತೋಂಟದಾರ್ಯ ಮಠದ 19ನೇ ಪೀಠಾಧಿ ಪತಿಯಾಗಿದ್ದ ಡಾ.ತೋಂಟದ ಸಿದ್ಧಲಿಂಗ ಸ್ವಾಮೀಜಿ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವ ಹಾಗೂ ಲಿಂಗಾಯತ ವಿ ಧಿ ವಿಧಾನದಂತೆ ರವಿವಾರ ಮಧ್ಯಾಹ್ನ ತೋಂಟದಾರ್ಯ ಮಠದ ಆವರಣದಲ್ಲಿ ನೆರವೇರಿತು. ನೂರಾರು ಮಠಾ ಧೀಶರು, ಸಾವಿರಾರು ಭಕ್ತರು, ಅನೇಕ ಗಣ್ಯರು ಇದಕ್ಕೆ ಸಾಕ್ಷಿಯಾದರು.
ಶನಿವಾರ ಲಿಂಗೈಕ್ಯರಾಗಿದ್ದ ಡಾ.ತೋಂಟದ ಸಿದ್ದಲಿಂಗ ಸ್ವಾಮೀಜಿಯವರ ಪಾರ್ಥೀವ ಶರೀರವನ್ನು ರವಿವಾರ ಮಧ್ಯಾಹ್ನದವರೆಗೂ ಭಕ್ತರ ದರ್ಶನಕ್ಕೆ ಇರಿಸಲಾಗಿತ್ತು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಸಭಾಪತಿ ಬಸವರಾಜ ಹೊರಟ್ಟಿ, ಸಿಎಂ ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕ ಜನಪ್ರತಿನಿಧಿ ಗಳು ಸ್ವಾಮೀಜಿಯವರ ಅಂತಿಮ ದರ್ಶನ ಪಡೆದರು. ಅನೇಕ ಗಣ್ಯರು, ಮಠಾಧೀಶರು ನುಡಿ ನಮನ ಸಲ್ಲಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.