ಸುರಕ್ಷತೆ ಆದ್ಯತೆಯಾಗಬೇಕು
Team Udayavani, Oct 22, 2018, 2:41 PM IST
ಪಂಜಾಬ್‌ನ ಅಮೃತಸರದಲ್ಲಿ ಶುಕ್ರವಾರ ರಾತ್ರಿ ನಡೆದ ದುರಂತ ಮನಕಲಕಿದೆ. ದಸರಾ ನಿಮಿತ್ತ ಆಯೋಜಿಸಿದ ರಾವಣ ದಹನ ಕಾರ್ಯಕ್ರಮ ವೀಕ್ಷಿಸಲು ಸೇರಿದ್ದ ಜನರ ಮೇಲೆ ರೈಲು ಹರಿದು 60 ಮಂದಿ ಮೃತಪಟ್ಟಿರುವ ಈ ಘಟನೆ ಮತ್ತೂಮ್ಮೆ ಸಾರ್ವಜನಿಕ ಸ್ಥಳಗಳಲ್ಲಿ ಜನರ ಸುರಕ್ಷತೆಯನ್ನು ನಾವು ಎಷ್ಟು ಹಗುರವಾಗಿ ಪರಿಗಣಿಸಿದ್ದೇವೆ ಎನ್ನುವುದಕ್ಕೆ ಹಿಡಿದ ಕೈಗನ್ನಡಿ. ಕಾರ್ಯಕ್ರಮದ ಆಯೋಜಕರ ಮತ್ತು ಅದಕ್ಕೆ ಅನುಮತಿ ಕೊಟ್ಟ ಅಧಿಕಾರಿಗಳ ನಿರ್ಲಕ್ಷದಿಂದಲೇ ಈ ದುರಂತ ಸಂಭವಿಸಿದೆ.
ಬಲಿಯಾದವರು ಮಾತ್ರ ಬಿಹಾರ, ಉತ್ತರ ಪ್ರದೇಶ ಮುಂತಾದ ರಾಜ್ಯಗಳಿಗೆ ಸೇರಿದ ಬಡ ಕೂಲಿ ಕಾರ್ಮಿಕರು. ಇದು ಎಂದಲ್ಲ, ಈ ಮಾದರಿಯ ದುರಂತಗಳಲ್ಲಿ ಬಲಿಯಾಗುವುದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಉತ್ಸಾಹದಿಂದ ಬರುವ ಅಮಾಯಕರೇ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ನೂಕುನುಗ್ಗಲು ಸಂಭವಿಸುವುದು, ಕಿಕ್ಕಿರಿದ ಜನಸಂದಣಿಯಿಂದಾಗಿ ಸೇತುವೆ ಕುಸಿಯುವಂಥ ದುರಂತಗಳು ನಮಗೆ ಹೊಸದಲ್ಲ.
ಈಗ ಬೇರೊಂದು ಕಾರಣಕ್ಕೆ ಭಾರೀ ವಿವಾದಕ್ಕೊಳಗಾಗಿರುವ ಶಬರಿಮಲೆಯಲ್ಲೇ ಕೆಲವು ವರ್ಷಗಳ ಹಿಂದೆ ನೂಕುನುಗ್ಗಲು ಸಂಭವಿಸಿ ನೂರಕ್ಕೂ ಹೆಚ್ಚು ಜನರು ಬಲಿಯಾಗಿದ್ದರು. ಉತ್ತರ ಪ್ರದೇಶದಲ್ಲಿ ಆಶ್ರಮದ ಉತ್ಸವ ವೀಕ್ಷಿಸಲು ಬಂದಿದ್ದ ಭಕ್ತರು ತಾತ್ಕಾಲಿಕವಾಗಿ ನಿರ್ಮಿಸಿದ ಸೇತುವೆ ಕುಸಿದುಬಿದ್ದು ಮಡಿದ ಘಟನೆ ಇನ್ನೂ ನೆನಪಿನಲ್ಲಿದೆ. ಈ ಮಾದರಿಯ ಹತ್ತಾರು ಉದಾಹರಣೆಗಳನ್ನು ನೀಡಬಹುದು.
ಇಲ್ಲೆಲ್ಲ ಢಾಳಾಗಿ ಗೋಚರಿಸುವುದು ಜನರ ಸುರಕ್ಷತೆ ಜತೆಗೆ ರಾಜಿ ಮಾಡಿಕೊಂಡಿರುವ ಆಡಳಿತ ವ್ಯವಸ್ಥೆಯ ಲೋಪ. ಅಮೃತಸರ ದುರಂತದಲ್ಲಿ ಮೇಲ್ನೋಟಕ್ಕೆ ಲೋಪಗಳ ಸರಮಾಲೆಯೇ ಗೋಚರಿಸುತ್ತಿದೆ. ರೈಲು ಹಳಿಯ ಅಷ್ಟು ಸಮೀಪ ನೂರಾರು ಜನರು ಜಮಾಯಿಸುವ ಕಾರ್ಯಕ್ರಮ ನಡೆಸಲು ಸ್ಥಳೀಯಾಡಳಿತ ಅನುಮತಿ ಕೊಟ್ಟಿರುವುದೇ ಮೊದಲ ತಪ್ಪು. ರೈಲು ಹಳಿಗೆ ಜನರು ಹೋಗದಂತೆ ತಾತ್ಕಾಲಿಕ ಬೇಲಿ ನಿರ್ಮಿಸದಿರುವುದು ಇನ್ನೊಂದು ತಪ್ಪು.
ರೈಲ್ವೇಯ ಜಾಗದಲ್ಲಿ ಕಾರ್ಯಕ್ರಮ ನಡೆಸುವಾಗ ರೈಲ್ವೇ ಇಲಾಖೆಯಿಂದ ಅನುಮತಿ ಪಡೆದುಕೊಳ್ಳಬೇಕೆಂಬ ಕನಿಷ್ಠ ಜ್ಞಾನವೂ ಇಲ್ಲ ಎನ್ನುವುದು ಆಶ್ಚರ್ಯವುಂಟು ಮಾಡುತ್ತಿದೆ. ಯಾವ ಹೊತ್ತಿನಲ್ಲೂ ರೈಲು ಬರಬಹುದು ಎನ್ನುವ ವಿಷಯ ಆಯೋಜಕರಿಗೂ ಗೊತ್ತಿತ್ತು, ಪೊಲೀಸರಿಗೂ ಗೊತ್ತಿತ್ತು. ಆದರೆ ಅವರ್ಯಾರೂ ಜನರನ್ನು ರೈಲು ಹಳಿ ಮೇಲೆ ಹೋಗದಂತೆ ತಡೆದಿಲ್ಲ. ಕನಿಷ್ಠ ರೈಲು ಹಳಿಗೆ ಹೋಗಬೇಡಿ ಎಂದು ಧ್ವನಿವರ್ಧದಲ್ಲಿ ವಿನಂತಿಯನ್ನಾದರೂ ಮಾಡಬಹುದಿತ್ತು.
ಅಂತೆಯೇ ಒಂದಷ್ಟು ಪೊಲೀಸರನ್ನು ಹಳಿ ಪಕ್ಕ ಕಾವಲು ಹಾಕಬೇಕಿತ್ತು. ರೈಲು ಹಳಿಯುದ್ದಕ್ಕೆ ಒಂದಷ್ಟು ದೂರ ಬೆಳಕಿನ ವ್ಯವಸ್ಥೆಯನ್ನಾದರೂ ಮಾಡಬೇಕಿತ್ತು. ಇದ್ಯಾವುದನ್ನೂ ಮಾಡದಿರುವುದು ಏನು ಮಾಡಿದರೂ ನಡೆಯುತ್ತದೆ ಎಂಬ ದಿವ್ಯ ನಿರ್ಲಕ್ಷ éಕ್ಕೊಂದು ಉದಾಹರಣೆ. ರೈಲು ಹಳಿಯಿಂದ ಬರೀ ನೂರು ಅಡಿ ದೂರದಲ್ಲಿ 20 ಅಡಿಗಿಂತಲೂ ಎತ್ತರದ ರಾವಣನ ಪ್ರತಿಕೃತಿ ಸುಡಲು ಪೊಲೀಸರು ಅನುಮತಿ ಕೊಟ್ಟಿದ್ದಾರೆ ಎಂದರೆ ಸುರಕ್ಷತೆಗೆ ಸಂಬಂಧಿಸಿದ ಅವರ ಸಾಮಾನ್ಯ ಜ್ಞಾನಕ್ಕೆ ಏನೆನ್ನೋಣ?
ದುರಂತ ಸಂಭವಿಸಿದ ಬಳಿಕ ಎಲ್ಲರೂ ಜವಾಬ್ದಾರಿಯಿಂದ ನುಣುಚಿಕೊಳ್ಳಲು ನೋಡುತ್ತಿರುವುದು ಮಾತ್ರ ದುರದೃಷ್ಟಕರ. ರೈಲ್ವೇ ಘಟನೆಗೆ ತಾನು ಹೊಣೆಯಲ್ಲ ಎಂದು ಹೇಳಿ ಈಗಾಗಲೇ ಕೈತೊಳೆದುಕೊಂಡಿದೆ. ರಾಜ್ಯ ಸರಕಾರ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದರೂ ಅದರ ಫಲಿತಾಂಶ ಏನಾಗುತ್ತದೆ ಎನ್ನುವುದನ್ನು ಈಗಲೇ ಊಹಿಸಬಹುದು. ಮಡಿದವರ ಕುಟುಂಬಕ್ಕೆ ಒಂದಷ್ಟು ಪರಿಹಾರ ಕೊಟ್ಟರೆ ತನ್ನ ಜವಾಬ್ದಾರಿ ಮುಗಿಯಿತು ಎಂದು ಸರಕಾರ ಭಾವಿಸಿದಂತಿದೆ.
ನಮ್ಮ ದೇಶದಲ್ಲಿ ಉತ್ಸವದಂಥ ಕಾರ್ಯಕ್ರಮಗಳಿಗೆ ಭಾರೀ ಜನಸಂದಣಿ ಸೇರುವುದು ಸಾಮಾನ್ಯ ವಿಚಾರ. ಆದರೆ ಈ ಜನಜಂಗುಳಿಯನ್ನು ನಿಭಾಯಿಸಲು ಅಗತ್ಯವಿರುವ ಸೂಕ್ತ ಏರ್ಪಾಡಾಗಲಿ, ನೀತಿಯಾಗಲಿ ನಮ್ಮಲ್ಲಿ ಇಲ್ಲ. ಕುಂಭಮೇಳದಂಥ ಲಕ್ಷಗಟ್ಟಲೆ ಜನರು ಸೇರುವ ಉತ್ಸವಗಳಲ್ಲಿ ಚಿಕ್ಕದೊಂದು ತಪ್ಪು ಕೂಡಾ ಎಂಥ ಘೋರ ದುರಂತಕ್ಕೆ ಕಾರಣವಾಗಬಹುದು ಎನ್ನುವುದನ್ನು ಅಲ್ಲಿಯ ವ್ಯವಸ್ಥೆಯನ್ನು ನೋಡಿದಾಗಲೇ ಗೊತ್ತಾಗುತ್ತದೆ.
ಎಲ್ಲವೂ ಅದೃಷ್ಟ ಬಲದಿಂದ ಎಂಬಂತೆ ಯಾವುದೇ ಅವಘಡವಿಲ್ಲದೆ ಮುಗಿದು ಹೋಗುತ್ತದೆಯಷ್ಟೆ. ಹಾಗೆಂದು ಇದಕ್ಕೆ ಆಡಳಿತವನ್ನು ಮಾತ್ರ ದೂರಿ ಪ್ರಯೋಜನವಿಲ್ಲ. ಜನರಿಗೂ ತಮ್ಮ ಸುರಕ್ಷತೆ ಮುಖ್ಯ ಎನ್ನುವ ಭಾವನೆ ಇರುವುದಿಲ್ಲ. ಎಲ್ಲರೂ ಅಡ್ಡದಾರಿಯಿಂದ ಸುಲಭವಾಗಿ ತಲುಪಲು ಪ್ರಯತ್ನಿಸುವವರೇ. ಈ ಕಾರಣದಿಂದಾಗಿಯೇ ರೈಲು ಹಳಿಗಳಲ್ಲಿ ವರ್ಷಕ್ಕೆ ಲಕ್ಷಕ್ಕೂ ಮಿಕ್ಕಿ ಜನರು ಪ್ರಾಣ ಕಳೆದುಕೊಳ್ಳುವುದು.
ರೈಲು ಹಳಿಗಿಳಿಯುವುದು ಅತಿಕ್ರಮಣ ಎಂದು ಗೊತ್ತಿದ್ದರೂ ಜನರು ಬೇಗ ತಲುಪುವ ಸಲುವಾಗಿ ಹಳಿ ದಾಟುತ್ತಾರೆ. ಎಲ್ಲೆಡೆಯೂ ಚಲ್ತಾ ಹೈ ಧೋರಣೆಯೇ ಇರುವುದರಿಂದ ಪದೇ ಪದೇ ಈ ಮಾದರಿಯ ದುರಂತಗಳಿಗೆ ನಾವು ಸಾಕ್ಷಿಯಾಗಬೇಕಾಗುತ್ತದೆ. ಆಡಳಿತ ನಡೆಸುವವರಲ್ಲಿ ಮತ್ತು ಜನರಲ್ಲಿ ಸಾರ್ವಜನಿಕ ಸುರಕ್ಷತೆಯ ಬಗ್ಗೆ ಅರಿವು ಮೂಡಲು ಇನ್ನೆಷ್ಟು ದುರಂತ ಸಂಭವಿಸಬೇಕು?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.