ಡಾ| ಕಸ್ತೂರಿ ರಂಗನ್ ವರದಿ: ಬಿಜೆಪಿ ಮೌನ ಮುರಿಯಲಿ: ಸಿಪಿಎಂ
Team Udayavani, Oct 23, 2018, 6:40 AM IST
ಮಡಿಕೇರಿ:ಡಾ| ಕಸ್ತೂರಿ ರಂಗನ್ ವರದಿ ಜಾರಿ ಕುರಿತು ನ್ಯಾಯಾಲಯ ಹೊರಡಿಸಿರುವ ಆದೇಶದ ಕುರಿತು ಕೊಡಗು ಜಿಲ್ಲೆಯನ್ನು ನಿರಂತರವಾಗಿ ಪ್ರತಿನಿಧಿಸುತ್ತಾ ಬರುತ್ತಿರುವ ಬಿಜೆಪಿ ಪ್ರತಿನಿಧಿಗಳು ಮೌನ ಮುರಿಯಬೇಕೆಂದು ಸಿಪಿಐಎಂ ಕಾರ್ಯದರ್ಶಿ ಇ.ರಾ.ದುರ್ಗಾಪ್ರಸಾದ್ ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೂಕ್ಷ್ಮ ಪರಿಸರ ವಲಯದ ವಿಚಾರದಲ್ಲಿ ಬಿಜೆಪಿ ಮುಖಂಡರು ಕರ್ನಾಟಕ ಸರಕಾರದ ವಿರುದ್ಧ ಆರೋಪ ಮಾಡುವ ಮೊದಲು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಸರಕಾರ ಜನಪರವಾಗಿ ಯಾವ ನಿರ್ಧಾರ ಕೈಗೊಂಡಿದೆ ಎನ್ನುವುದನ್ನು ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದರು.
ಡಾ.ಕಸ್ತೂರಿ ರಂಗನ್ ವರದಿ ಪರ ನ್ಯಾಯಾಲಯ ನೀಡಿರುವ ಆದೇಶಕ್ಕೆ ನೇರವಾಗಿ ಬಿಜೆಪಿ ಸಂಸದರು ಹಾಗೂ ಶಾಸಕರೇ ಕಾರಣವೆಂದು ಆರೋಪಿಸಿರುವ ದುರ್ಗಾಪ್ರಸಾದ್ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಮೌನ ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತೀವ್ರ ವಿರೋಧದ ನಡುವೆಯೂ ವರದಿ ಜಾರಿಯಾದಲ್ಲಿ ಜಿಲ್ಲೆಯ ಜನ ಮುಂದಿನ ದಿನಗಳಲ್ಲಿ ನಿತ್ಯ ಸೆರೆಮನೆ ಸದೃಶ ಜೀವನ ನಡೆಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಜಿಲ್ಲೆಯನ್ನು ಪ್ರತಿನಿಧಿಸುವ ಸಂಸದರು ಸೇರಿದಂತೆ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಬಿಜೆಪಿ ಸಂಸದರು ಕೇಂದ್ರದಲ್ಲಿ ಅಧಿಕಾರದಲ್ಲಿರುವ ತಮ್ಮದೇ ಸರಕಾರದ ಮೇಲೆ ಒತ್ತಡ ಹೇರಿ ಯಾವ ರೀತಿಯಲ್ಲಿ ಜನಪರ ಕಾಳಜಿ ತೋರಿದ್ದಾರೆ ಎಂದು ಅವರು ಪ್ರಶ್ನಿಸಿದರು.
ಡಾ| ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷರು ಹಾಗೂ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಮತ್ತು ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ರಾಜ್ಯ ಸರಕಾರ ಮಂಡಿಸಿದ ಅಭಿಪ್ರಾಯ ಸರಿಯಿಲ್ಲ, ಸಮಿತಿಯ ಮೂಲಕವೇ 10 ಸಾವಿರಕ್ಕೂ ಅಧಿಕ ಆಕ್ಷೇಪಣಾ ಪತ್ರಗಳನ್ನು ಕೇಂದ್ರಕ್ಕೆ ಕಳುಹಿಸಲಾಗುವುದೆಂದು ಈ ಹಿಂದೆ ಭರವಸೆ ನೀಡಿದ್ದರು. ಭರವಸೆಯಂತೆ ನಡೆದುಕೊಂಡಿದ್ದರೆ ಮತ್ತು ಕೇಂದ್ರದ ಮೇಲೆ ಒತ್ತಡ ಹೇರಿದ್ದರೆ ಸೂಕ್ಷ್ಮ ಪರಿಸರ ವಲಯದ ಕುರಿತು ಮತ್ತೂಂದು ಕರಡು ಅಧಿಸೂಚನೆಯನ್ನು ಕೇಂದ್ರ ಸರಕಾರ ಹೇಗೆ ಹೊರಡಿಸಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಸರಕಾರ ಈ ಹಿಂದೆಯೇ ಸಲ್ಲಿಸಿದ್ದ ಆಕ್ಷೇಪಣಾ ವರದಿಯನ್ನು ಕೇಂದ್ರ ಸರಕಾರ ಕಡೆಗಣಿಸಿದ್ದು, ಇದನ್ನು ಮರೆ ಮಾಚುವ ಉದ್ದೇಶದಿಂದ ಬಿಜೆಪಿ ಮಂದಿ ಕಾಂಗ್ರೆಸ್ ಸರಕಾರದ ವಿರುದ್ಧ ಟೀಕೆ ಮಾಡುವ ಮೂಲಕ ಜಿಲ್ಲೆಯ ಜನರ ಹಾದಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.
ಲೋಕಸಭಾ ಚುನಾವಣೆಯ ಸಂದರ್ಭ ಜಿಲ್ಲಾ ಬಿಜೆಪಿ ವಕ್ತಾರರಾಗಿದ್ದ ಅಡ್ಡಂಡ ಸಿ.ಕಾರ್ಯಪ್ಪ ಅವರು ಕೇಂದ್ರದಲ್ಲಿ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದರೆ ಸೂಕ್ಷ್ಮ ಪರಿಸರ ವಲಯದ ವಿವಾದ ಬಗೆ ಹರಿಯಲಿದೆ ಎಂದು ಭರವಸೆ ನೀಡಿದ್ದರು. ಆದರೆ ಬಿಜೆಪಿಯ ಹುಸಿ ಭರವಸೆಗಳಿಗೆ ಸಾಕ್ಷಿಯಾಗಿದೆ ಎಂದು ದುರ್ಗಾಪ್ರಸಾದ್ ಅವರು ಟೀಕಿಸಿದರು.
ಡಾ| ಕಸ್ತೂರಿ ರಂಗನ್ ವರದಿಯ ವಿಚಾರದಲ್ಲಿ ದೊಡ್ಡ ತಪ್ಪುಗಳನ್ನೇ ಮಾಡಿರುವ ಸಂಸದರು ಹಾಗೂ ಶಾಸಕರಿಗೆ ಇದೀಗ ಮೌನಕ್ಕೆ ಶರಣಾಗುವ ಅನಿವಾರ್ಯತೆ ಬಂದೊದಗಿದೆ. ವರದಿಯಿಂದಾಗುವ ಅನಾಹುತ ಮತ್ತು ನೈಜಾಂಶವನ್ನು ಮರೆ ಮಾಚದೆ ಜಿಲ್ಲೆಯ ಜನತೆಯ ಮುಂದೆ ಮಂಡಿಸಬೇಕೆಂದು ದುರ್ಗಾಪ್ರಸಾದ್ ಒತ್ತಾಯಿಸಿದರು. ಪಕ್ಷದ ಪ್ರಮುಖರಾದ ಎ.ಸಿ.ಸಾಬು ಹಾಗೂ ಶಿವಪ್ಪ ಉಪಸ್ಥಿತರಿದ್ದರು.
ಬಿಜೆಪಿ ಆರೋಪಕ್ಕೆ ಆಕ್ಷೇಪ
ಸೂಕ್ಷ್ಮ ಪರಿಸರ ವಲಯದ ವಿವಾದಕ್ಕೆ ಸಂಬಂಧಿಸಿದಂತೆ ಸೂಕ್ತ ರೀತಿಯಲ್ಲಿ ರಾಜ್ಯ ಕಾಂಗ್ರೆಸ್ ಸರಕಾರ ಆಕ್ಷೇಪಣಾ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಿಲ್ಲವೆಂದು ರಾಜ್ಯದ ಬಿಜೆಪಿ ನಾಯಕರು ಆರೋಪಿಸುತ್ತಿದ್ದಾರೆ. ಆದರೆ ರಾಜ್ಯ ಸರಕಾರ ತನ್ನ ಜವಾಬ್ದಾರಿಯನ್ನು ನಿಭಾಯಿಸಿರುವುದಕ್ಕೆ ಸಾಕ್ಷ್ಯಗಳಿವೆ. ಬಿಜೆಪಿ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವುದಕ್ಕಾಗಿ ರಾಜ್ಯ ಸರಕಾರವನ್ನು ಟೀಕಿಸುತ್ತಿದೆ ಎಂದು ಡಾ.ದುರ್ಗಾಪ್ರಸಾದ್ ಆರೋಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಕಾರು ಢಿಕ್ಕಿಯಾಗಿ ಮಹಿಳೆ ಸಾವು
Canada: ವಾಲ್‌ಮಾರ್ಟ್ ಓವನ್‌ನಲ್ಲಿ ಭಾರತೀಯ ಮೂಲದ ಯುವತಿಯ ಶವ: ಕೆನಡಾ ಪೊಲೀಸರು ಹೇಳಿದ್ದೇನು?
IFFI Goa 2024: ಚಿತ್ರ ನವಿಲಿಗೆ ಹೊಸ ಬಣ್ಣ; ಬೆಳಗ್ಗೆ ಚಿತ್ರಾವತಿ ಕಣ್ಣು ತೆರೆಯುವುದಣ್ಣ!
Mangaluru: ರಾಜ್ಯದ 2ನೇ ಐಟಿ ಕೇಂದ್ರವಾಗಿ ಅಭಿವೃದ್ಧಿಗೆ ಅವಕಾಶ ಇದ್ದರೂ ಆದ್ಯತೆ ನೀಡದ ಸರಕಾರ
Lockdown Days: ಲಾಕ್‌ಡೌನ್ ಎಂಬ ದಪ್ಪಕ್ಷರದಲ್ಲಿ ಬರೆದ ಇತಿಹಾಸ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.