35 ಸಾವಿರ ಅರ್ಜಿ ಸಕಾಲದಲ್ಲಿ ಬಾಕಿ!
Team Udayavani, Oct 23, 2018, 6:00 AM IST
ಬೆಂಗಳೂರು: ಸಾರ್ವಜನಿಕರು ಸರ್ಕಾರದ ಸೇವೆಗಳನ್ನು ತ್ವರಿತವಾಗಿ ಪಡೆಯಲು ಅನುಕೂಲವಾಗುವಂತೆ ಈವರೆಗೆ 897 ಸೇವೆಗಳನ್ನು ಸಕಾಲ ವ್ಯಾಪ್ತಿಗೆ ತರಲಾಗಿದ್ದು, ಸೇವೆಗಳ ಸಂಖ್ಯೆಯನ್ನು 1000ಕ್ಕೆ ವಿಸ್ತರಿಸಲು ಸರ್ಕಾರ ಚಿಂತಿಸಿದೆ. ಆದರೆ ಈಗಾಗಲೇ ಸಕಾಲದಡಿ ಸಲ್ಲಿಕೆಯಾದ ಅರ್ಜಿಗಳ ಪೈಕಿ ಅವಧಿ ಮೀರಿ 35,000 ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದುಬಿಟ್ಟಿವೆ!
ಒಂದೆಡೆ ಕಾಲಮಿತಿ ಮುಗಿದರೂ ವಿಲೇವಾರಿಯಾಗದೆ ಉಳಿಯುತ್ತಿರುವ ಅರ್ಜಿಗಳ ಸಂಖ್ಯೆ ಹೆಚ್ಚಾಗುತ್ತಿದ್ದರೆ, ಇನ್ನೊಂದೆಡೆ ಪ್ರತಿದಿನ ವಿಳಂಬ ವಿಲೇವಾರಿಗೆ ಸಂಬಂಧಪಟ್ಟ ಅಧಿಕಾರಿಗೆ 20 ರೂ. ದಂಡ ವಿಧಿಸುವ, ಅರ್ಜಿದಾರರಿಗೆ ಪರಿಹಾರ ನೀಡುವ ಪ್ರಕ್ರಿಯೆಯೂ ಸ್ಥಗಿತಗೊಂಡಿದೆ. ಇದರಿಂದ ಬಹುತೇಕ ಇಲಾಖೆ ಅಧಿಕಾರಿಗಳು ಸಕಾಲದಲ್ಲಿ ಅರ್ಜಿ ವಿಲೇವಾರಿ ಮಾಡದಿದ್ದರೂ ಯಾವುದೇ ಕ್ರಮವಿಲ್ಲದಂತಾಗಿದ್ದು, ಸಕಾಲದ ಮೂಲ ಆಶಯವೇ ಈಡೇರದಂತಾಗಿದೆ.
ಬೆಂಗಳೂರು ವ್ಯಾಪ್ತಿಯ ಕಚೇರಿಗಳಲ್ಲೇ 10,500 ಅರ್ಜಿಗಳು ಬಾಕಿ ಉಳಿದಿವೆ. ಮುಖ್ಯವಾಗಿ ಕಂದಾಯ ಇಲಾಖೆಯ ಸೇವೆಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಅವಧಿ ಮೀರಿ ವಿಲೇವಾರಿಯಾಗದೆ ಬಾಕಿ ಉಳಿದಿರುವ ಅರ್ಜಿಗಳ ಸಂಖ್ಯೆಯೂ ಇದೇ ಇಲಾಖೆಯಲ್ಲಿ ಹೆಚ್ಚಿದೆ. ಸಕಾಲ ಆಡಳಿತಾಧಿಕಾರಿ ಕೆ.ಮಥಾಯಿ ಅವರು ಇತ್ತೀಚೆಗೆ ಬೆಂಗಳೂರು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ತಪಾಸಣೆ ನಡೆಸಿದಾಗ ಬಹಳಷ್ಟು ಕಡೆ ಸಕಾಲದಡಿ ಸಮರ್ಪಕವಾಗಿ ಅರ್ಜಿ ವಿಲೇವಾರಿಯಾಗದಿರುವುದು ಕಂಡುಬಂದಿದೆ. ಮುಖ್ಯವಾಗಿ ಸರ್ಕಾರಿ ಕಚೇರಿಗಳಲ್ಲಿ ಸಕಾಲದ ಸೇವೆಗಳ ಬಗ್ಗೆ ಮಾಹಿತಿ ಫಲಕ ಅಳವಡಿಸದಿರುವುದು, ಪರಿಹಾರ ಪಡೆಯುವ ವಿವರ ಪ್ರಕಟಿಸದಿರುವುದು, ಅರ್ಜಿ ವಿವರಗಳನ್ನು ಕಂಪ್ಯೂಟರ್‌ನಲ್ಲಿ ದಾಖಲಿಸದೆ ನೇರವಾಗಿ ಪಡೆಯುವುದು, ಅವಧಿ ಮುಗಿದರೂ ಅರ್ಜಿ ವಿಲೇವಾರಿ ಮಾಡದೆ ನಿರ್ಲಕ್ಷಿಸಿರುವುದು ಬೆಳಕಿಗೆ ಬಂದಿದೆ.
ಪರಿಹಾರ ಕೇಳಿದರೂ ಕೊಡುತ್ತಿಲ್ಲ!
ಸಕಾಲದಡಿ ಸಲ್ಲಿಕೆಯಾದ ಅರ್ಜಿಯಡಿ ಆಯ್ದ ಸೇವೆಯನ್ನು ಇಂತಿಷ್ಟು ದಿನದಲ್ಲಿ ವಿಲೇವಾರಿ ಮಾಡಬೇಕು ಎಂಬ ನಿಯಮವಿದೆ. ಒಂದೊಮ್ಮೆ ಸಕಾರಣವಿಲ್ಲದೆ ವಿಳಂಬ ಮಾಡಿದರೆ ಸಂಬಂಧಪಟ್ಟ ಅಧಿಕಾರಿಗೆ ಅವಧಿ ಮುಗಿದ ಬಳಿಕ ಪ್ರತಿ ದಿನದ ವಿಳಂಬಕ್ಕೆ 20 ರೂ. ದಂಡ ವಿಧಿಸಿ ಅದನ್ನು ಅರ್ಜಿದಾರರಿಗೆ ನೀಡಬಹುದು. ಕಾಲಮಿತಿ ಮುಗಿದರೂ ಸೇವೆ ಒದಗಿಸದಿದ್ದರೆ ಅದನ್ನು ಪ್ರಶ್ನಿಸಿ ಅರ್ಜಿದಾರರು ಮೇಲ್ಮನವಿ ಸಲ್ಲಿಸಿದರೆ ಸಕ್ಷಮ ಪ್ರಾಧಿಕಾರವು ಅಧಿಕಾರಿಗೆ ದಂಡ ವಿಧಿಸಿ ಪರಿಹಾರ ಕೊಡಿಸಬೇಕು. ಬಹಳಷ್ಟು ಮಂದಿ ಮೇಲ್ಮನವಿ ಸಲ್ಲಿಸದ ಕಾರಣ ಪರಿಹಾರ ಪಡೆಯುತ್ತಿಲ್ಲ. ಹಲವು ಪ್ರಕರಣಗಳಲ್ಲಿ ಮೇಲ್ಮನವಿ ಸಲ್ಲಿಸಿದರೂ ಹಿರಿಯ ಅಧಿಕಾರಿಗಳು ಪರಿಹಾರ ಕೊಡಿಸಲು ಆಸಕ್ತಿ ತೋರದ ಕಾರಣ ಅರ್ಜಿದಾರರಿಗೆ ಪರಿಹಾರ ಸಿಗುತ್ತಿಲ್ಲ. ಇದರಿಂದ ಸಕಾಲ ಸೇವೆಗಳಿಂದ ವಿಮುಖರಾಗುವಂತಹ ಸ್ಥಿತಿ ನಿರ್ಮಾಣವಾಗುತ್ತಿದೆ.
ಈವರೆಗೆ ನೀಡಿದ ಪರಿಹಾರ 1 ಲಕ್ಷ ರೂ.
ಸಕಾಲ ಯೋಜನೆ ಜಾರಿಯಾದ 2012ರಿಂದ ಈವರೆಗೆ ಅರ್ಜಿ ವಿಲೇವಾರಿ ವಿಳಂಬಕ್ಕೆ ಅರ್ಜಿದಾರರಿಗೆ ನೀಡಿರುವ ಒಟ್ಟು ಪರಿಹಾರ ಮೊತ್ತ ಒಂದು ಲಕ್ಷ ರೂ.ನಷ್ಟಿದೆ. ಆದರೆ ವಾಸ್ತವವಾಗಿ ಪ್ರತಿ ಅರ್ಜಿಯ ವಿಳಂಬ ವಿಲೇವಾರಿಗೆ ಸೂಕ್ತ ದಂಡ ವಿಧಿಸಿದ್ದೇ ಆದರೆ ಅರ್ಜಿದಾರರಿಗೆ ಈವರೆಗೆ ಕೋಟ್ಯಂತರ ರೂ. ಪರಿಹಾರ ಸಿಗುತ್ತಿತ್ತು. ವಿಲೇವಾರಿಯಾಗದೇ ಉಳಿದಿರುವ 35 ಸಾವಿರ ಅರ್ಜಿದಾರರಿಗೆ ಒಂದು ದಿನದ ವಿಳಂಬಕ್ಕೆ ತಲಾ 20 ರೂ.ನಂತೆ ಪರಿಹಾರ ನೀಡುವುದೇ ಆದರೆ ಏಳು ಲಕ್ಷ ರೂ. ಪರಿಹಾರ ಸಿಗಲಿದೆ. 10 ದಿನದ ವಿಳಂಬಕ್ಕೂ ಅಧಿಕಾರಿಗಳಿಗೆ ದಂಡ ವಿಧಿಸಿದರೆ ಅರ್ಜಿದಾರರಿಗೆ 70 ಲಕ್ಷ ರೂ.ವರೆಗೆ ಪರಿಹಾರ ಸಿಗುವ ಅವಕಾಶವಿದೆ. ಆದರೆ ಈ ಬಗ್ಗೆ ಹೆಚ್ಚಿನ ಜಾಗೃತಿ ಇಲ್ಲದಿರುವುದು ಹಾಗೂ ಅಧಿಕಾರಿಗಳು ಸ್ಪಂದಿಸಿದ ಕಾರಣ ದಂಡ ವಿಧಿಸುವ, ಪರಿಹಾರ ವಿತರಿಸುವ ಪ್ರಕ್ರಿಯೆ ಬಹುತೇಕ ಸ್ಥಗಿತಗೊಂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ದಂಡ- ಪರಿಹಾರ: ಜಿಜ್ಞಾಸೆ
ಕಾಲಮಿತಿಯೊಳಗೆ ಸಕಾಲ ಅರ್ಜಿ ವಿಲೇವಾರಿಯಾಗದಿದ್ದಾಗ ಅರ್ಜಿದಾರರು ಮೇಲ್ಮನವಿ ಸಲ್ಲಿಸಿ ಪರಿಹಾರ ಪಡೆಯಬಹುದು ಎಂದು ಕಾನೂನಿನಲ್ಲಿದೆ. ಆದರೆ ಅರ್ಜಿದಾರರು ಮೇಲ್ಮನವಿ ಸಲ್ಲಿಸದಿದ್ದರೆ ಪರಿಹಾರ ನೀಡಬಾರದು ಎಂಬುದಾಗಿ ಎಲ್ಲಿಯೂ ಉಲ್ಲೇಖವಾಗಿಲ್ಲ. ಈ ಬಗ್ಗೆ ಕಾರ್ಯಾಂಗದಲ್ಲೇ ಜಿಜ್ಞಾಸೆ ಇದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಹಿರಿಯ ಅಧಿಕಾರಿಗಳೇ ಸ್ವಯಂಪ್ರೇರಿತವಾಗಿ ಅವಧಿ ಮೀರಿ ವಿಳಂಬಕ್ಕೆ ಅರ್ಜಿದಾರರಿಗೆ ಪರಿಹಾರ ವಿತರಿಸಲು ಮುಂದಾದರೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ತ್ವರಿತವಾಗಿ ಸೇವೆಗಳನ್ನು ಒದಗಿಸುವ ಸಾಧ್ಯತೆ ಇದೆ ಎಂಬ ಚರ್ಚೆ ನಡೆದಿದೆ.
2012ರಲ್ಲಿ ಶುರು
ಸರ್ಕಾರದ ಸೇವೆಗಳನ್ನು ಪಡೆಯುವಲ್ಲಿ ಅನಗತ್ಯ ವಿಳಂಬ, ಭ್ರಷ್ಟಾಚಾರ, ಸಾರ್ವಜನಿಕರಿಗೆ ಉಂಟಾಗುತ್ತಿದ್ದ ಕಿರಿಕಿರಿ, ತೊಂದರೆ, ಆಡಳಿತದಲ್ಲಿನ ಅವ್ಯವಸ್ಥೆ ಕಾರಣಕ್ಕೆ 2012ರಲ್ಲಿ ಸಕಾಲ ಯೋಜನೆ ಜಾರಿಗೊಳಿಸಲಾಗಿತ್ತು. ಪ್ರತಿ ಸೇವೆಯನ್ನು ನಿಗದಿತ ಕಾಲಮಿತಿಯೊಳಗೆ ಒದಗಿಸುವ ಷರತ್ತಿನ ಜತೆಗೆ ವಿಳಂಬಕ್ಕೆ ನಿತ್ಯ ತಲಾ 20 ರೂ. ದಂಡವನ್ನು ಸಂಬಂಧಪಟ್ಟ ಅಧಿಕಾರಿಗೆ ವಿಧಿಸಿ ಅದನ್ನು ಅರ್ಜಿದಾರರಿಗೆ ಪರಿಹಾರ ರೂಪದಲ್ಲಿ ನೀಡಲು ಅವಕಾಶ ಕಲ್ಪಿಸಲಾಗಿತ್ತು.
ಸಕಾಲದಡಿ ಅವಧಿ ಮೀರಿ ವಿಲೇವಾರಿಯಾಗದ ಅರ್ಜಿಗಳ ಸಂಖ್ಯೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ತಪಾಸಣೆ ಆರಂಭಿಸಲಾಗಿದೆ. ಪರಿಶೀಲನೆ ವೇಳೆ ಕಂಡುಬಂದ ನ್ಯೂನತೆಗಳನ್ನು ಸರಿಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸರ್ಕಾರದಿಂದ ನಿರ್ದೇಶನ ಕೊಡಲಾಗುವುದು. ಸಕಾಲ ಯೋಜನೆ ಸೌಲಭ್ಯಗಳ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲು ಆದ್ಯತೆ ನೀಡಲಾಗುವುದು.
– ಕೆ. ಮಥಾಯ್, ಸಕಾಲ ಆಡಳಿತಾಧಿಕಾರಿ
– ಎಂ. ಕೀರ್ತಿಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bagalakote: ಪ್ರೇಯಸಿ ಗೆಳತಿ ಹತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Bagalakote: ಪ್ರೇಯಸಿ ಗೆಳತಿ ಹತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.