ಜೀಕುವ ಜುವೆಲ್ಲರಿಯ ಜೋಗುಳ
Team Udayavani, Oct 24, 2018, 6:00 AM IST
ಮಗನಿಗೆ ತೊಟ್ಟಿಲು ಶಾಸ್ತ್ರ ಮಾಡುವ ಸಂದರ್ಭದಲ್ಲಿ ಕಿವಿಯೋಲೆ ತೊಡಿಸಿದ್ದೆವು. ಅದಾದ ಮೇಲೆ ಪ್ರತಿ ಸಲ ಅಂಗಿಯನ್ನು ತೊಡಿಸುವಾಗ ಎಲ್ಲಿ ಕಿವಿಗೆ ತಗಲುವುದೋ ಎಂದು ಭಯಪಡುತ್ತಿದ್ದೆ. ಕಿವಿಗೆ ತಾಕಬಾರದೆಂದು ಅಂಗಿಯನ್ನು ಎಳೆದು ಎಳೆದು ಅಗಲವಾಗಿಸಿದ್ದರಿಂದಲೇ ಅವನ ಎಲ್ಲಾ ಅಂಗಿಗಳು ಬೇಗನೆ ದೊಗಲೆಯಾಗುತ್ತಿದೆ ಎಂದು ಮನೆಯವರು ನನ್ನನ್ನು ಆಡಿಕೊಳ್ಳುತ್ತಿದ್ದರು…
“ಕುಂಕುಮ ಹಣೆಗೆ ಭೂಷಣ…’ ಎಂಬ ಹಾಡೊಂದನ್ನು ಬಹಳ ಹಿಂದೆ ದೂರದರ್ಶನದಲ್ಲಿ ಕೇಳಿದ ನೆನಪು. ಕುಂಕುಮ, ಸರ, ಬಳೆ, ಕಿವಿಯೋಲೆ, ಮೂಗುತಿ, ಕಾಲ್ಗೆಜ್ಜೆ… ಹೀಗೆ ಆಭರಣಗಳು ಹೆಣ್ಣಿಗೆ ಭೂಷಣವೆಂಬ ಮಾತು ಹಿಂದೆ ಚಾಲ್ತಿಯಲ್ಲಿತ್ತು. ಲಕ್ಷಣವಾದ ಸೀರೆಯುಟ್ಟು ಈ ಆಭರಣಗಳಿಂದ ಭೂಷಿತಳಾದ ಹೆಣ್ಣು ಆದರ್ಶ ಮಹಿಳೆ ಎಂಬ ಅಭಿಪ್ರಾಯ ಇಂದಿಗೂ ಹಲವರಲ್ಲಿದೆ.
ಅದಿರಲಿ, ಈಗ ವಿಷಯಕ್ಕೆ ಬರುತ್ತೇನೆ. ಶಾಲೆಗೆ ಸೇರಿಸಿದಾಗಿನಿಂದ ನನ್ನ ಮಗರಾಯನದು ಒಂದೇ ಹಠ. “ಅಮ್ಮ ನನಗೆ ಕಿವಿಯೋಲೆ ಹಾಕಮ್ಮ. ನಿನ್ನ ಕಿವಿಯೋಲೆ ಹಾಕು’ ಎಂದು. “ಈಗ ನೀನು ದೊಡ್ಡವನು. ದೊಡ್ಡ ಮಕ್ಕಳು ಕಿವಿಯೋಲೆ ಹಾಕಬಾರದು. ಟೀಚರ್ ಬಯ್ಯುತ್ತಾರೆ…’ ಎಂದೆಲ್ಲಾ ಎಷ್ಟು ಸಮಾಧಾನ ಮಾಡಿದರೂ ಅವನು ಜಗ್ಗಲಿಲ್ಲ. ಬೇಕು ಎಂದರೆ ಬೇಕು ಎಂದು ಒಂದೇ ಹಠ ಅವನದು. ಅವನಿಂದಾಗಿ ನನಗೆ ಹಳೆಯ ನೆನಪೆಲ್ಲವೂ ಮರುಕಳಿಸಿತು.
ನಮ್ಮ ಊರಿನಲ್ಲಿ ಹುಟ್ಟಿದ ಹನ್ನೊಂದನೇ ದಿನಕ್ಕೆ ನಾಮಕರಣದೊಂದಿಗೆ (ತೊಟ್ಟಿಲು ಶಾಸ್ತ್ರ) ಕಿವಿ ಚುಚ್ಚುವ ಶಾಸ್ತ್ರವೂ ನಡೆಯುತ್ತದೆ. ತುಂಬ ಸಣ್ಣವರಿರುವಾಗಲೇ ಚುಚ್ಚುವುದರಿಂದ ಜಾಸ್ತಿ ನೋವು ಕೂಡ ಆಗದು ಎಂಬ ನಂಬಿಕೆ. ಸೋದರಮಾವನ ಕಾಲ ಮೇಲೆ ಮಲಗಿಸಿ, ಶೇಟ್‌ರವರು ಕಿವಿಯನ್ನು ಚುಚ್ಚುತ್ತಾರೆ. ನಂತರ ಶೇಟ್‌ರಿಗೆ ಪ್ರತಿಯಾಗಿ ಕಾಣಿಕೆಯೊಂದಿಗೆ ಸ್ವಲ್ಪ ಅಕ್ಕಿ, ಬೆಲ್ಲ ಕೊಡುವುದು ವಾಡಿಕೆ. ನನ್ನ ಮಗರಾಯನಿಗೂ ಹೀಗೆ ಹನ್ನೊಂದನೇ ದಿನಕ್ಕೆ ಹಾಕಲೆಂದೇ ಕಿವಿಯೋಲೆಯೊಂದನ್ನು ನಮ್ಮಮ್ಮ ಜೋಪಾನವಾಗಿ ಕಾದಿರಿಸಿದ್ದಳು. ನಾನು ಚಿಕ್ಕವಳಾಗಿದ್ದಾಗ ತೊಡಿಸಿದ್ದ ಓಲೆ ಅದು! ಆ ಕಿವಿಯೋಲೆಯನ್ನು ನನಗೆ ತೊಡಿಸಿ, ತದನಂತರ ನನ್ನ ತಮ್ಮನಿಗೂ, ಚಿಕ್ಕಪ್ಪನ ಮಗಳಿಗೂ ತೊಡಿಸಿ ಹಾಗೆಯೇ ಜಾಗೃತೆಯಾಗಿ ಕಾದಿರಿಸಿದ್ದು ಅಮ್ಮನ ಸಾಧನೆಯೇ ಸರಿ!
ಮಗನಿಗೆ ತೊಟ್ಟಿಲುಶಾಸ್ತ್ರ ಮಾಡುವ ಸಂದರ್ಭದಲ್ಲಿ ಕಿವಿಯೋಲೆ ತೊಡಿಸಿದ್ದೆವು. ತೊಡಿಸಿದ ಮೇಲೆ ಅವನಿಗೆ ಅಂಗಿಯನ್ನು ಹಾಕುವಾಗ ಎಲ್ಲಿ ತಗಲುವುದೋ ಎಂದು ಭಯವಾಗಿತ್ತು. ಕಿವಿಗೆ ತಾಕಬಾರದೆಂದು ಅಂಗಿಯನ್ನು ಎಳೆದು ಎಳೆದು ಅಗಲವಾಗಿಸಿದ್ದರಿಂದಲೇ ಅವನ ಎಲ್ಲಾ ಅಂಗಿಗಳು ಬೇಗನೆ ದೊಗಲೆಯಾಗುತ್ತಿದೆ ಎಂದು ಮನೆಯವರು ನನ್ನನ್ನು ಆಡಿಕೊಳ್ಳುತ್ತಿದ್ದರು.
ಹನ್ನೊಂದು ದಿನಕ್ಕೆ ಹಾಕಿದ ಕಿವಿಯೋಲೆಯನ್ನು ಐದು ವರ್ಷದವರೆಗೂ ತೊಡಿಸಿ ಆರನೇ ವರ್ಷಕ್ಕೆ ಶಾಲೆಗೆ ಕಳುಹಿಸುವಾಗ ತೆಗೆದು, ಹುಡುಗಿಯರಿಗೆ ರಿಂಗನ್ನೋ ಅಥವಾ ಬೇರೆ ಓಲೆಯನ್ನೋ ತೊಡಿಸಿ, ಹುಡುಗರಿಗೆ ಇಷ್ಟವಿದ್ದರೆ ಒಂದು ಅಥವಾ ಎರಡು ಕಿವಿಗೂ ಮೂಗುತಿಯಂಥ ಸಣ್ಣ ಕಿವಿಯೋಲೆಯನ್ನು ತೊಡಿಸುವುದು ವಾಡಿಕೆ. ಹಿಂದಿನ ಕಾಲದಲ್ಲಿ, ಒಂದೇ ಮನೆಯವರು ಸೈನಿಕರಾಗಿ ಯುದ್ಧದಲ್ಲಿ ರಾಜನೊಂದಿಗೆ ಹೋಗುವಾಗ, ಹೆಚ್ಚು ಕಡಿಮೆಯಾದರೆ ಗುರುತಿಗಾಗಿ ಕಿವಿಗೆ ತೂತಿದೆಯೇ ಎಂದು ಪತ್ತೆ ಹಚ್ಚುತ್ತಿದ್ದರೆಂದು ಅಜ್ಜಿ ಹೇಳಿದ ನೆನಪು.
ಮಗರಾಯನಿಗೆ ಮೂರು ವರ್ಷವಾದ ಕೂಡಲೇ ಪ್ಲೇಸ್ಕೂಲಿಗೆ ಕಳುಹಿಸುತ್ತೇನೆಂದು ತವರಿಗೆ ಹೋದಾಗ ಹೇಳಿದ್ದೇ ತಡ. ಅಮ್ಮ ಶಾಲೆಗೆ ಹೋಗುವಾಗ ಬಂಗಾರದ ಕಿವಿಯೋಲೆ ಬೇಡಮ್ಮ, ತೆಗೆದುಬಿಡೋಣ ಎಂದೆಲ್ಲ ಹೇಳಿ ಮನೆಯ ಬಳಿಯೇ ಇರುವ ಮಾಮನನ್ನು ಕರೆಸಿದರು. ಅವರು ಮಗುವಿಗೆ ತಿಳಿಯದಂತೆ ಅವನ ಕಿವಿಯೋಲೆಯನ್ನು ಕತ್ತರಿಸಿ ತೆಗೆದುಕೊಂಡು ಹೋದರೆಂದು ಅಮ್ಮ ಖುಷಿಪಟ್ಟಳು. ಇದಾದ ಎರಡೇ ದಿನಕ್ಕೆ ಮಗರಾಯ, “ಅಮ್ಮ, ಅವರು ನನ್ನ ಕಿವಿಯೋಲೆ ತೆಗೆದುಕೊಂಡು ಹೋದರು’ ಎಂದು ದೂರು ಹೇಳಲು ಶುರುಮಾಡಿದ. ಇನ್ನೇನೋ ಕಥೆ ಹೇಳಿ ಆ ಕ್ಷಣಕ್ಕೆ ಅವನಿಗೆ ಅದನ್ನು ಮರೆಸಿದೆ. ಅಥವಾ ಹಾಗೆಂದು ನಾನು ಭಾವಿಸಿದೆ.
ಅಮ್ಮನ ಮನೆಯಿಂದ ಬೆಂಗಳೂರಿಗೆ ಬಂದ ಕೆಲವೇ ದಿನದಲ್ಲಿ ನನ್ನ ಕಿವಿಯೋಲೆ ಹಿಡಿದು ಎಳೆಯಲು ಶುರುಮಾಡಿದ. “ಅಮ್ಮ ನನಗೂ ಕಿವಿಯೋಲೆ ಹಾಕಮ್ಮ’ ಎಂದು. “ನನ್ನ ಕಿವಿಯೋಲೆ ನಿನಗೆ ದೊಡ್ಡದಾಗುತ್ತದೆ’ ಎಂದೆಲ್ಲ ಹೇಳಿ ಅವನಿಗೆ ಸಮಾಧಾನ ಪಡಿಸಿದರೂ ನಿತ್ಯವೂ ಅವನದು ಕಿವಿಯೋಲೆಯದೇ ಮಂತ್ರ. ಮೊಮ್ಮಗನೊಂದಿಗೆ ಆಟವಾಡಲು ಬಂದ ಅಜ್ಜಿಗೆ ಅವನ ಕಿವಿಯೋಲೆ ಹುಚ್ಚು ಕಂಡು, “ಮಗು ತುಂಬಾ ಆಸೆಯಿಂದ ಕೇಳ್ತಿದ್ದಾನೆ. ಅವನಿಗೆ ಕಿವಿಯೋಲೆ ಹಾಕೋಣ’ ಎಂದು ಹೇಳಿ ಕಿವಿಯೋಲೆ ಮಾಡಿಸಲು ಅದೇ ಶೇಟ್ ಮಾಮನ ಬಳಿ ಆರ್ಡರ್ ಕೊಟ್ಟಿದ್ದರು. ಅಂತೂ ಇಂತೂ ಕಡೆಗೊಂದು ದಿನ ಕಿವಿಯೋಲೆ ಮಗರಾಯನ ಕಿವಿಯನ್ನು ಅಲಂಕರಿಸಿತು. ಅದನ್ನು ಕಂಡು, “ಎಷ್ಟು ಚಂದ ಇದೆಯಮ್ಮ’ ಎನ್ನುತ್ತಾ ಮಗ ಥೈ ಥೈ ಕುಣಿದ.
ಇಲ್ಲಿಗೆ ಕಿವಿಯೋಲೆ ರಾಮಾಯಣ ಮುಗಿಯಿತು ಎಂದು ಸಮಾಧಾನ ಪಡುವಷ್ಟರಲ್ಲಿ ಇನ್ನೊಂದು ಕಥೆ ಶುರು. ಅವನ ಕಣ್ಣೀಗ ನನ್ನ ಮೂಗುತಿ ಮೇಲೆ ಬಿದ್ದಿದೆ. “ಅಮ್ಮ, ಇದೇನಮ್ಮ ಮೂಗಿನ ಮೇಲೆ ಆಭರಣ? ನನಗೂ ಬೇಕು’ ಎಂದು ಕೇಳಲು ಶುರು ಹಚ್ಚಿಕೊಂಡಿದ್ದಾನೆ. ಹಿಂದೆಲ್ಲ ಕಿವಿಯೋಲೆ, ಮೂಗುತಿ, ಕುಂಕುಮ, ಸರ, ಬಳೆ, ಕಾಲುಂಗುರ, ಕಾಲು ಚೈನ್ ಇವೆಲ್ಲ ಹೆಣ್ಣಿನ ಆಭರಣಗಳೆಂದು ಗುರುತಿಸಲ್ಪಡುತ್ತಿದ್ದವು.
ಈಗ ಕಾಲ ಬದಲಾಗಿದೆ, ಫ್ಯಾಷನ್ ನೆಪದಲ್ಲಿ, ಹೆಣ್ಣಿನ ಆಭರಣವೆಂದು ಹೇಳುತ್ತಿದ್ದ ಕಿವಿಯೋಲೆಯನ್ನು ಗಂಡಸರೂ ತೊಡುತ್ತಿದ್ದಾರೆ. ಕೈಗೆ ಕಡಗವನ್ನು ಧರಿಸುತ್ತಾರೆ. ಇನ್ನು ಬಟ್ಟೆಯಲ್ಲೂ ಗಂಡು ಹೆಣ್ಣೆಂಬ ಬೇಧವನ್ನು ಸರಿಸಿ ಹುಡುಗರ ಪ್ಯಾಂಟು, ಶರ್ಟನ್ನು ಹೆಣ್ಮಕ್ಕಳು ಧರಿಸಿದರೆ, ಚೂಡಿದಾರವನ್ನು ಸ್ವಲ್ಪ ಮಾರ್ಪಡಿಸಿ ಹುಡುಗರು ಧರಿಸುತ್ತಿದ್ದಾರೆ. ಸ್ಕರ್ಟುಗಳನ್ನೇ ಹೋಲುವಂಥ ಬಟ್ಟೆಯನ್ನು ತೊಟ್ಟ ಹುಡುಗರ ಉದಾಹರಣೆಗಳೂ ಇವೆ. ಹುಡುಗಿಯರು ಲುಂಗಿ ಧರಿಸಿ ಪೋಸ್ ನೀಡಿದ್ದ ಫೋಟೋ ಕೂಡ ಟ್ರೆಂಡಿನಲ್ಲಿತ್ತು. ಮುಂದಿನ ದಿನಗಳಲ್ಲಿ ಹುಡುಗರು ಮೂಗುತಿ ತೊಡುವ ಫ್ಯಾಷನ್ ಕೂಡಾ ಬರಬಹುದು. ಯಾರಿಗೆ ಗೊತ್ತು?!
ಸಾವಿತ್ರಿ ಶ್ಯಾನುಭಾಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shimoga: ಜಮೀನಿನ ವಿದ್ಯುತ್ ಪರಿವರ್ತಕ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ; ಆರೋಪಿಗಳ ಬಂಧನ
Los Angeles: ಮತ್ತೊಂದು ಕಾಡ್ಗಿಚ್ಚು; 30 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ
Threat Mail: ಹಾಸ್ಯ ನಟ ಕಪಿಲ್ ಶರ್ಮಾ ಸೇರಿದಂತೆ ನಾಲ್ವರು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ
Karkala: ಸಾಣೂರಿನಲ್ಲಿ ಟೆಂಪೊಗೆ ಸರಕಾರಿ ಬಸ್ ಢಿಕ್ಕಿ, 10ಕ್ಕೂ ಅಧಿಕ ಮಂದಿಗೆ ಗಾಯ
Donald Trump: ಚೀನಾ ಆಮದು ಮೇಲೆ ಶೇ.10 ಸುಂಕ… ನೂತನ ಅಧ್ಯಕ್ಷ ಟ್ರಂಪ್