ದೂರು ಸಲ್ಲಿಸಿ 7 ತಿಂಗಳಾದರೂ ತಪ್ಪು ಸರಿಪಡಿಸದ ಇಲಾಖೆ
Team Udayavani, Oct 24, 2018, 11:44 AM IST
ಕಡಬ: ಕುಟ್ರಾಪ್ಪಾಡಿ ಗ್ರಾ.ಪಂ. ವ್ಯಾಪ್ತಿಯ ಕಡಬ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಪಕ್ಕದಲ್ಲಿರುವ ಹಳೆಸ್ಟೇಶನ್‌ನ ಪೊಟ್ಟುಕೆರೆಯ ಪರಂಬೋಕು ಪ್ರದೇಶವನ್ನು ಪಹಣಿ ಪತ್ರಿಕೆಯಲ್ಲಿ ತಿದ್ದುಪಡಿ ಮಾಡಿ ಸರಕಾರಿ ಜಮೀನು ಎಂದು ನಮೂದಿಸಿ ಅತಿಕ್ರಮಣ ಮಾಡಲು ಹುನ್ನಾರ ನಡೆಯುತ್ತಿದೆ ಎಂದು ಕುಟ್ರಾಪ್ಪಾಡಿ ಗ್ರಾ.ಪಂ. ವತಿಯಿಂದ ದೂರು ಸಲ್ಲಿಸಿ 7 ತಿಂಗಳು ಕಳೆದರೂ ಪಹಣಿ ಪತ್ರದಲ್ಲಿನ ತಪ್ಪನ್ನು ಸರಿಪಡಿಸಲು ಕಂದಾಯ ಇಲಾಖೆಗೆ ಸಾಧ್ಯವಾಗಿಲ್ಲ.
ಪಂಚಾಯತ್ ದೂರಿನ ಹಿನ್ನೆಲೆಯಲ್ಲಿ ಪುತ್ತೂರು ಸಹಾಯಕ ಆಯುಕ್ತರು ಕಡಬ ವಿಶೇಷ ತಹಶೀಲ್ದಾರರಿಗೆ ಪತ್ರ ಬರೆದು, ಅಕ್ರಮ ತಿದ್ದುಪಡಿಯ ಬಗ್ಗೆ ಪರಿಶೀಲನೆ ನಡೆಸಿ ವಿವರವಾದ ವರದಿಯೊಂದಿಗೆ ಪಹಣಿ ತಿದ್ದುಪಡಿ ಬಗ್ಗೆ ಆರ್‌ಆರ್‌ಟಿ ಶಾಖೆಯಿಂದ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದ್ದರು.
ಕೆರೆ ಅಭಿವೃದ್ಧಿಗೆ ಮುಂದಾದಾಗ ಅಕ್ರಮ ಪತ್ತೆ
ಕುಟ್ರಾಪ್ಪಾಡಿ ಗ್ರಾಮದ ಸರ್ವೆ ನಂ. 40/1ರಲ್ಲಿ (4.66 ಎಕರೆ ವಿಸ್ತೀರ್ಣ) ಇರುವ ಹಳೆಸ್ಟೇಶನ್‌ನ ಪೊಟ್ಟುಕೆರೆಯನ್ನು ಉದ್ಯೋಗ ಖಾತರಿ ಯೋಜನೆಯಡಿ ಹೂಳೆತ್ತಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಮಾಹಿತಿ ಪಡೆದಾಗ ಈ ಹಿಂದೆ ಕೈಬರಹದ ಪಹಣಿ ಪತ್ರದಲ್ಲಿ ಕೆರೆ ಪರಂಬೋಕು ಎಂದು ಇರುವ ಜಾಗವನ್ನು ಬಳಿಕ ಸರಕಾರಿ ಜಾಗ ಎಂದು ದಾಖಲಿಸಲಾಗಿರುವುದು ಬೆಳಕಿಗೆ ಬಂದಿತ್ತು. ಈ ಅಕ್ರಮ ತಿದ್ದುಪಡಿಯ ಹಿಂದೆ ಕೆರೆಯನ್ನು ಆತಿಕ್ರಮಿಸುವ ಹುನ್ನಾರ ಇರುವುದನ್ನು ಮನಗಂಡು ಅಕ್ರಮ ತಿದ್ದುಪಡಿಯನ್ನು ಸರಿಪಡಿಸಿ ಸದ್ರಿ ಪ್ರದೇಶವನ್ನು ಮತ್ತೆ ಕೆರೆ ಪರಂಬೋಕು ಎಂದು ಪಹಣಿಯಲ್ಲಿ ದಾಖಲಿಸಬೇಕು ಎಂದು ಪಂ. ವತಿಯಿಂದ 7 ತಿಂಗಳ ಹಿಂದೆಯೇ ಡಿಸಿ, ಎಸಿ ಹಾಗೂ ಕಡಬ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಗಿತ್ತು.
ದೂರು ಸಲ್ಲಿಸಿ 4 ತಿಂಗಳ ಬಳಿಕ ಪಹಣಿ ಪತ್ರದಲ್ಲಿನ ತಪ್ಪನ್ನು ಸರಿಪಡಿಸಲು ಕಂದಾಯ ಇಲಾಖೆ ಮುಂದಾಗಿತ್ತು. ಪಹಣಿ ತಿದ್ದುಪಡಿ ಬಗ್ಗೆ ಆರ್‌ಆರ್‌ಟಿ ಶಾಖೆಯಿಂದ ಸಹಾಯಕ ಆಯುಕ್ತರಿಗೆ ಸಲ್ಲಿಸಲಾಗಿತ್ತು. ಆದರೆ ಇನ್ನೂ ತಪ್ಪು ಸರಿಪಡಿಸಲಾಗಿಲ್ಲ ಹಳೆಯ ಕಡತಗಳಲ್ಲಿ ಹಾಗೂ ಪಹಣಿ ಪತ್ರಗಳಲ್ಲಿ ಕೆರೆ ಪರಂಬೋಕು ಎಂದೇ ದಾಖಲಿಸಿರುವ ಸದ್ರಿ ಭೂಮಿಯನ್ನು ಕೆಲವು ವರ್ಷಗಳ ಹಿಂದೆ ಏಕಾಏಕಿ ಸರಕಾರಿ ಜಮೀನು ಎಂದು ಪಹಣಿಯಲ್ಲಿ ದಾಖಲಿಸಿರುವುದರ ಹಿಂದೆ ಕೆರೆಯನ್ನು ಕಬಳಿಸುವ ಉದ್ದೇಶ ಇದೆ ಎನ್ನುವುದು ಸ್ಥಳೀಯರ ಆರೋಪಿಸಿದ್ದರು. ಯಾರಿಗೋ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕೆರೆಯ ಜಮೀನನ್ನು ಸರಕಾರಿ ಎಂದು ನಮೂದಿಸಲಾಗಿದೆ. ಈಗಾಗಲೇ ಕರೆಯ ಒಂದು ಭಾಗದಲ್ಲಿ ಕಲ್ಲು ಮಣ್ಣು ತುಂಬಿರುವುದರಿಂದ ಕೆರೆಯ ಗಾತ್ರ ಸಾಕಷ್ಟು ಕಿರಿದಾಗಿದೆ. ಕೆರೆಗಳನ್ನು ಉಳಿಸಿ ಅಭಿವೃದ್ಧಿಪಡಿಸಬೇಕೆಂದುಆದೇಶ ಹೊರಡಿಸಿರುವ ಸರಕಾರ ಕೆರೆಯ ಅತಿಕ್ರಮಣದ ಸಂಚನ್ನು ವಿಫಲಗೊಳಿಸಿ ಗ್ರಾಮಸ್ಥರಿಗೆ ಕೆರೆಯನ್ನು ಉಳಿಸಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದರು. ಉದಯವಾಣಿ ಸುದಿನ ಈ ಕುರಿತು ಎರಡು ಬಾರಿ ಸಚಿತ್ರ ವರದಿ ಪ್ರಕಟಿಸಿ ಇಲಾಖೆಯನ್ನು ಎಚ್ಚರಿಸಿತ್ತು.
ಶೀಘ್ರ ಕ್ರಮ
ಇದೀಗ ಸಹಾಯಕ ಆಯುಕ್ತರು ಇನ್ನಷ್ಟು ಪೂರಕ ದಾಖಲೆಗಳನ್ನು ಕೇಳಿದ್ದಾರೆ. ಅದನ್ನು ಕಳುಹಿಸಲು ಕ್ರಮ ಕೈಗೊಳ್ಳಲಾಗಿದೆ. ಸಹಾಯಕ ಆಯುಕ್ತರ ಆದೇಶ ಬಂದ ಕೂಡಲೇ ಪಹಣಿಯಲ್ಲಿನ ತಪ್ಪನ್ನು ಸರಿಪಡಿಸಲಾಗುವುದು.
- ಜಾನ್‌ಪ್ರಕಾಶ್ ರೋಡ್ರಿಗಸ್
ಕಡಬ ತಹಶೀಲ್ದಾರ್
ಪತ್ರ ಬರೆದಿದ್ದೇವೆ
ಗ್ರಾಮದ ವ್ಯಾಪ್ತಿಯ ಕೆರೆಗಳ ಹೂಳೆತ್ತಿ ಅಭಿವೃದ್ಧಿಪಡಿಸಿ ಅಂತರ್ಜಲ ಮಟ್ಟ ಏರಿಕೆಯಾಗಲು ಪ್ರಯತ್ನಿಸಬೇಕೆನ್ನುವ ಸರಕಾರದ ಸೂಚನೆಯಂತೆ ಪೊಟ್ಟುಕೆರೆಯ ಅಭಿವೃದ್ಧಿಗೆ ಮುಂದಾಗಿದ್ದೆವು. ಹಳೆಯ ಕೈಬರಹದ ಪಹಣಿಪತ್ರದಲ್ಲಿ ಕೆರೆ ಪರಂಬೋಕು ಎಂದು ಇರುವುದನ್ನು ತಿದ್ದಿ ಸರಕಾರಿ ಜಮೀನು ಎಂದು ಮಾಡಿದ್ದು ಗಮನಕ್ಕೆ ಬಂದಿತ್ತು. ಕೂಡಲೇ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿ ಹಾಗೂ ಕಡಬ ತಹಶೀಲ್ದಾರರಿಗೆ ಪತ್ರ ಬರೆದು ಸರಿಪಡಿಸಲು ಒತ್ತಾಯಿಸಿದ್ದೆವು.
– ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್
ಕುಟ್ರಾಪ್ಪಾಡಿ ಪಿಡಿಒ
ನಾಗರಾಜ್ ಎನ್. ಕೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.