ಚಳಿಗಾಲ, ಆರೋಗ್ಯ ರಕ್ಷಣೆಗಿದು ಸಕಾಲ
Team Udayavani, Oct 30, 2018, 2:38 PM IST
ಚಳಿಗಾಲ ನಿಧಾನವಾಗಿ ಅಡಿಯಿಡುತ್ತಿದೆ. ಬೇಸಗೆ, ಮಳೆ ಎಂದು ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದವರು ಈಗ ಬೇಗ ಎದ್ದು ದೇಹಕ್ಕೆ ಸ್ವಲ್ಪ ಕಸರತ್ತು ಮಾಡಿಸಬೇಕು. ಇಲ್ಲವಾದರೆ ಒಂದಲ್ಲ ಒಂದು ಆರೋಗ್ಯ ಸಮಸ್ಯೆ ಕಾಣಿಸಲಾರಂಭಿಸಬಹುದು. ಹೀಗಾಗಿ ಚಳಿಗಾಲ ಎಂದರೆ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾದ ಕಾಲ.
ಚಳಿಯಿದೆ ವ್ಯಾಯಾಮ ಮಾಡುವುದನ್ನು ನಿಲ್ಲಿಸಬಾರದು. ಪ್ರತಿದಿನ ಅರ್ಧ ಗಂಟೆ ವ್ಯಾಯಾಮ ಮಾಡಲೇಬೇಕು. ವ್ಯಾಯಾಮ ಮಾಡಿದರೆ ಮೈಬೆಚ್ಚಗಾಗುತ್ತದೆ. ಇದರಿಂದ ರಕ್ತ ಸಂಚಾರ ಸರಿಯಾದ ರೀತಿಯಲ್ಲಿ ನಡೆಯುತ್ತದೆ. ಜಲ ಚಿಕಿತ್ಸೆ, ವ್ಯಾಯಾಮ, ಬಿಸಿ ಎಣ್ಣೆಯ ಮಸಾಜ್‌ಮಾಡುವ ಮೂಲಕವೂ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಮಳೆ ನಿಂತು ನಿಧಾನವಾಗಿ ಚಳಿಗಾಲ ಆರಂಭವಾಗತೊಡಗಿದೆ. ತಾಪಮಾನ ವೈಪರಿತ್ಯ ಕಾಣಿಸಿಕೊಳ್ಳುವುದರಿಂದ ಬ್ಯಾಕ್ಟೀರಿಯಾ, ವೈರಸ್‌ಗಳ ಬೆಳವಣಿಗೆ ಹೆಚ್ಚಾಗಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಂದುವ ಅಪಾಯ ಅಧಿಕ. ಹೀಗಾಗಿ ಚಳಿ ಗಾಲ ಬಂದರೆ ನೆಗಡಿ, ಕೆಮ್ಮು, ಗಂಟಲು ನೋವು, ಉಸಿರಾಟದ ಸಮಸ್ಯೆ, ಮೂಗು ಕಟ್ಟುವಿಕೆ, ಎದೆಬಿಗಿತ, ಚರ್ಮ ಒಣಗುವಿಕೆ, ಅಲರ್ಜಿ, ಅಸ್ತಮಾ ಮೊದಲಾದವುಗಳ ಜತೆಗೆ ರಕ್ತ, ನರ ಸಂಬಂಧಿ ಕಾಯಿಲೆಗಳು ಉಲ್ಬಣವಾಗುವ ಸಾಧ್ಯತೆ ಅಧಿಕ.
ಚಳಿಗಾಲದಲ್ಲಿ ದೊಡ್ಡವರಿಗಿಂತ ಮಕ್ಕಳು, ವೃದ್ಧರನ್ನು ಹೆಚ್ಚಾಗಿ ಬಾಧಿಸುತ್ತದೆ. ವೈರಾಣು ಸೋಂಕು, ನೆಗಡಿ, ಶೀತ, ನ್ಯುಮೋನಿಯಾ ಸಮಸ್ಯೆ ಮಕ್ಕಳನ್ನು ಹೆಚ್ಚಾಗಿ ಬಾಧಿಸುತ್ತದೆ. ಅದಕ್ಕಾಗಿ ಸಾಧ್ಯವಾದಷ್ಟು ಮಕ್ಕಳು ಬೆಚ್ಚಗಿನ ವಾತಾವರಣದಲ್ಲಿ ಇರುವಂತೆ ನೋಡಿಕೊಳ್ಳಬೇಕು.
ಚಳಿಗಾಲದಲ್ಲಿ ಕೈಗಳು ನೆರಿಗೆ ಕಟ್ಟಿದಂತೆ ಆಗುವುದು, ಪಾದ ಒಡೆಯುವುದು, ಚರ್ಮದ ಮೇಲೆ ಹೊಟ್ಟಿನಂತಾಗಿ ಚರ್ಮ ಕಿತ್ತು ಬರುವುದು ಹೀಗೆ ಹಲವು ರೀತಿಯ ಸಮಸ್ಯೆ ಕಾಡುತ್ತವೆ. ಚಳಿ ತಡೆಯಲಾರದೆ ದೇಹವನ್ನು ಎಷ್ಟೇ ಬೆಚ್ಚಗಿಟ್ಟರೂ ಹಿಮ್ಮಡಿ ಒಡೆಯುವ ಅಥವಾ ಇತರ ಸಮಸ್ಯೆಗಳನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಪೋಷಕಾಂಶ ಭರಿತ ಆಹಾರ ಸೇವನೆಯ ಜತೆಗೆ ಚರ್ಮಕ್ಕೆ ಹೆಚ್ಚಿನ ಆರೈಕೆ ಒದಗಿಸುವುದು ಕೂಡ ಬಹು ಮುಖ್ಯ.
ಚಳಿಗಾಲದಲ್ಲಿ ಬೀಸುವ ತಂಗಾಳಿಯಲ್ಲಿ ಧೂಳು ಮಂಜಿನ ಕಣ ಇರುವುದರಿಂದ ಕೆಮ್ಮು, ನೆಗಡಿ, ಉಬ್ಬಸ, ಗಂಟಲಿನ ಕಫ, ಉರಿಯೂತ ಹೀಗೆ ಬೇರೆ ಬೇರೆ ಪ್ರಕಾರದ ರೋಗಗಳು ಉಲ್ಬಣವಾಗುತ್ತವೆ. ಹೀಗಾಗಿ ಮನೆಯೊಳಗೆ ಸ್ವಚ್ಛತೆಯನ್ನು ಕಾಪಾಡಿ. ಹೊರಗೆ ಹೋಗುವಾಗ ಮುಖಗವಸು ಹಾಕಿಕೊಂಡು ಹೋಗುವುದು ಉತ್ತಮ. ದೇಹದಲ್ಲಿ ಹೇಗೆ ಬದಲಾವಣೆ ಆಗುತ್ತದೆಯೋ ಅದೇ ರೀತಿ ಚಳಿಗಾಲದಲ್ಲಿ ಕೂದಲಿನ ತುದಿ ಸೀಳು ಬಿಡಲಾರಂಭಿಸುತ್ತದೆ. ಇದಕ್ಕೆ ಕೂದಲಿನ ತುದಿಗೆ ಎಣ್ಣೆಯನ್ನು ಲೇಪಿಸುವುದು ಸೂಕ್ತ. ವೈದ್ಯರ ಸಲಹೆ ಪಡೆದು ಸೂಕ್ತವಾದ ಕಂಡೀಶನರ್ ಗಳನ್ನೂ ಬಳಸಬಹುದು. ಚಳಿಗಾಲದಲ್ಲಿ ತುಟಿ ಒಡೆಯುವ ಸಮಸ್ಯೆಯೂ ಅಧಿಕ. ಇದಕ್ಕಾಗಿ ಲಿಪ್‌ಬಾಮ್‌ಗಳನ್ನು ಬಳಸಬಹುದು. ತುಟಿಯನ್ನು ಸ್ಕ್ರಬ್ ಮಾಡಿ ಆಲೀವ್ ಎಣ್ಣೆ ಅಥವಾ ವೈದ್ಯರ ಸಲಹೆಯ ಮೇರೆಗೆ ಮುಲಾಮುಗಳನ್ನು ಹಚ್ಚಿದರೆ ಚಳಿಗಾಲದಲ್ಲಿ ತುಟಿಯ ರಕ್ಷಣೆ ಮಾಡಬಹುದು.
ಬೆಚ್ಚಗಿನ ಬಟ್ಟೆಗಿರಲಿ ಆದ್ಯತೆ
ಚಳಿಗಾಲದಲ್ಲಿ ಮಲಗುವಾಗ ಬೆಚ್ಚಗೆ ಹೊದ್ದುಕೊಂಡು ಮಲಗಿ. ಮಲಗುವ ಮುನ್ನ ಮೈಗೆ ಕೋಲ್ಡ್ ಕ್ರೀಮ್, ಬಾಡಿ ಲೋಷನ್ ಹಚ್ಚಿ. ಇದರಿಂದ ತ್ವಚೆ ಒಡೆಯುವ ಸಮಸ್ಯೆ ಕಂಡು ಬರುವುದಿಲ್ಲ. ಜತೆಗೆ ಮನೆಯಿಂದ ಹೊರಗೆ ಹೋಗುವಾಗ ಉಣ್ಣೆಯ ಬಟ್ಟೆಗಳನ್ನು ಧರಿಸಿ. ಪ್ರಯಾಣದ ವೇಳೆ ಮುಖಕ್ಕೆ ತೆಳುವಾದ ಹತ್ತಿ ಬಟ್ಟೆಯನ್ನು ಸುತ್ತಿ. ಇದರಿಂದ ಮುಖ ಒಡೆಯುವುದಿಲ್ಲ. ಹೊರಗಡೆ ಹೋಗುವಾಗ ಕೋಲ್ಡ್ ಕ್ರೀಮ್ ಬಳಸಲು ಮರೆಯಬಾರದು. ಚಳಿಯಿಂದಾಗಿ ಮಂಡಿ, ಮೈಕೈ ನೋವು ಹೆಚ್ಚಾಗಿ ಕಂಡುಬರುತ್ತದೆ. ಈ ಸಮಸ್ಯೆ ಬಾರದಿರಲು ಬೆಚ್ಚನೆಯ ಬಟ್ಟೆಗಳನ್ನೇ ಆಯ್ಕೆ ಮಾಡಿಕೊಳ್ಳಿ.
ಸೀಸನ್ ಫುಡ್ ಸೇವಿಸಿ
ಚಳಿಗಾಲದಲ್ಲಿ ಮುಖ್ಯವಾಗಿ ಸೀಸನ್ ಫುಡ್ ಸೇವನೆ ಒಳ್ಳೆಯದು. ಕಿತ್ತಳೆ ಹಣ್ಣನ್ನು ಪ್ರತಿನಿತ್ಯ ಸೇವಿಸಿ. ತುಂಬಾ ಸಿಹಿ ಹಾಗೂ ಎಣ್ಣೆಯಂಶದ ಆಹಾರಗಳನ್ನು ತಿನ್ನಬೇಡಿ. ಕುರುಕಲು ತಿಂಡಿಗಳಿಂದ ದೂರವಿರಿ. ಸತು ಹಾಗೂ ಕಬ್ಬಿಣಂಶವಿರುವ ಆಹಾರವನ್ನು ಹೆಚ್ಚಾಗಿ ತಿನ್ನಬೇಕು. ಆಹಾರದಲ್ಲಿ ಶುಂಠಿ, ಬೆಳ್ಳುಳ್ಳಿ, ಕರಿಮೆಣಸು, ಚಕ್ಕೆ, ಲವಂಗ ಈ ರೀತಿಯ ಮಸಾಲೆ ಸಾಮಗ್ರಿಗಳನ್ನು ಬಳಸುವುದು ಒಳ್ಳೆಯದು. ಹರ್ಬಲ್ ಟೀ ಹಾಗೂ ಮಸಾಲೆ ಟೀಯನ್ನು ಈ ಕಾಲದಲ್ಲಿ ಕುಡಿಯುವುದು ಒಳ್ಳೆಯದು. ನಿತ್ಯದ ಆಹಾರದಲ್ಲಿ ಬಸಳೆ, ಖರ್ಜೂರ, ಇಡಿ ಧಾನ್ಯಗಳು ಇರಲಿ. ಇವು ಮೈಯನ್ನು ಬೆಚ್ಚಗೆ ಇಡುವುದರ ಜತೆಗೆ ಶೀತ, ಕೆಮ್ಮಿನಿಂದ ರಕ್ಷಣೆ ಒದಗಿಸುತ್ತದೆ.
ವೈದ್ಯರಿಂದ ಸಲಹೆ ಪಡೆದರೆ ಉತ್ತಮ
ಚಳಿಗಾಲವೆಂದರೆ ಯುವ ಜನಾಂಗಕ್ಕೆ ಆಪ್ಯಾಯಮಾನ ಕಾಲ. ತುಂಬ ಜನ ಇದನ್ನೇ ಇಷ್ಟಪಡುತ್ತಾರೆ. ಆದರೆ, ಬಹುತೇಕ ಜನರಿಗೆ ಚಳಿಗಾಲವೆಂದರೆ ಆರೋಗ್ಯ ಕೆಡುವ ಕಾಲ ಎಂದೂ ಹೇಳುವವರಿದ್ದಾರೆ. ಅದರಲ್ಲೂ ವೃದ್ಧರಿಗೆ/ ಮಕ್ಕಳಿಗೆ ಚಳಿಗಾಲ ಆರೋಗ್ಯಕ್ಕೆ ಸ್ವಲ್ಪ ತೊಂದರೆ ನೀಡುತ್ತದೆ. ಪ್ರತೀ ಬಾರಿ ಚಳಿಯ ಸಂದರ್ಭದಲ್ಲಿ ಆರೋಗ್ಯ ವ್ಯತ್ಯಾಸ ಆಗುವವರು ತಮ್ಮ ವೈದ್ಯರಲ್ಲಿ ಸೂಕ್ತ ಸಲಹೆ- ಮಾರ್ಗದರ್ಶನ ಪಡೆದರೆ ಉತ್ತಮ.
– ಡಾ| ವರ್ಷಾ ಶೆಟ್ಟಿ ತಜ್ಞರು
ಹೃದಯಾಘಾತ ಸಾಧ್ಯತೆ ಹೆಚ್ಚು
ಚಳಿಗಾಲದಲ್ಲಿ ಹೃದಯಾಘಾತ ಪ್ರಮಾಣ ಹೆಚ್ಚು ಎನ್ನಲಾಗಿದೆ. ಹೀಗಾಗಿ ಹೃದಯ ಸಂಬಂಧಿ ಕಾಯಿಲೆಯುಳ್ಳವರು ಎಚ್ಚರ ವಹಿಸುವುದು ಅತೀ ಮುಖ್ಯ. ಚಳಿಗಾಲದ ರಾತ್ರಿಗಳಲ್ಲಿ ತಾಪಮಾನ ಕಡಿಮೆ ಇರುವುದರಿಂದ ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ. ರಕ್ತದೊತ್ತಡ ಹಾಗೂ ಪ್ರೊಟೀನ್ ಪ್ರಮಾಣ ಹೆಚ್ಚಾಗಿ ರಕ್ತ ಹೆಪ್ಪುಗಟ್ಟಬಹುದು. ಇದರಿಂದ ರಕ್ತ ಸಂಚಾರಕ್ಕೆ ತೊಂದರೆಯಾಗಿ ಹೃದಯಕ್ಕೆ ಸಾಕಷ್ಟು ಆಮ್ಲಜನಕ ದೊರೆಯದೇ ಹೃದಯಾಘಾತವಾಗುವ ಸಾಧ್ಯತೆ ಅಧಿಕ. ಅಸ್ತಮಾ, ಮಧುಮೇಹ, ಉಸಿರಾಟ ಮತ್ತಿತರ ಸಮಸ್ಯೆ ಇರುವವರಿಗೂ ಹೃದಯಾಘಾತ ಕಾಡಬಹುದು. ಹೀಗಾಗಿ ಉಸಿರಾಟ ಸಮಸ್ಯೆ, ಎದೆಯುರಿ, ಬೆವರುವಿಕೆ ಕಂಡಾಗ ಎಚ್ಚರ ವಹಿಸುವುದು ಮುಖ್ಯ. ಆಹಾರ ಕ್ರಮ, ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಂಡರೆ ಇದನ್ನು ತಡೆಗಟ್ಟಬಹುದು.
ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.