ಮಣ್ಣಿನ ಗೊಂಬೆ ಹರಕೆಯ ಕ್ಷೇತ್ರ; ಸುರ್ಯ ಸದಾಶಿವ ದೇವಸ್ಥಾನ
Team Udayavani, Oct 30, 2018, 4:50 PM IST
ಮೃಣ್ಮಯ ಮೂರ್ತಿಯ ಹರಕೆಗೆ ಪ್ರಸಿದ್ಧವಾದ ಕ್ಷೇತ್ರ ಸುರ್ಯ. ಸದಾಶಿವ, ಸದಾವೇಶ್ಚರ ಎಂದು ಭಕ್ತರಿಂದ ಕರೆಯಲ್ಪಡುವ ರುದ್ರನ ನೆಲೆಯೂರಾದ ಇಲ್ಲಿಗೆ ಶಿವರಾತ್ರಿಯ ದಿನ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ತೀರ್ಥ ಸ್ನಾನ ಮಾಡಿ ರುದ್ರಾಭಿಷೇಕ ಸೇವೆ ನೀಡಿ, ಮಣ್ಣು ಗೊಂಬೆಗಳ ಹರಕೆ ಸಲ್ಲಿಸಿದ ಶಿವನ ಕೃಪೆಗೆ ಪಾತ್ರರಾಗುತ್ತಾರೆ.
ಇಲ್ಲಿನ ದೇವ; ಭಕ್ತರಿಂದ ನಗ ನಾಣ್ಯ ಒಡವೆಗಳನ್ನು ನಿರೀಕ್ಷಿಸುವುದಿಲ್ಲ. ಆತನಿಗೆ ಬೇಕಾಗುವುದು ಕೇವಲ ಮಣ್ಣನ ಮೂರ್ತಿ. ಮೃತ್ಯುಂಜಯ ರೂಪಿ ಶ್ರೀ ಸದಾಶಿವ ರುದ್ರನಿಗೆ ಮೃತ್ತಿಕೆಯಿಂದ ತಯಾರಿಸಿದ ಗೊಂಬೆ ಆಟಿಕೆಗಳನ್ನು ಸಮರ್ಪಿಸಿದರೆ ಸಾಕು. ಆತ ಸಂತೃಪ್ತನಾಗುತ್ತಾನೆ! ಭಕ್ತರ ಅರಿಕೆ ಮಣ್ಣಿನ ಮೂಲಕ ಮೂರ್ತರೂಪ ಪಡೆದು ದೇವರಿಗೆ ಅರ್ಪಣೆಯಾದರೆ ಸಾಕು, ಹರಕೆ ಪರಿಪೂರ್ಣವಾದಂತೆ.
ಈ ಸದಾಶಿವ ರುದ್ರನ ಕ್ಷೇತ್ರವಿರುವುದು ಬೆಳ್ತಂಗಡಿ ತಾಲೂಕಿನ ಉಜಿರೆಯ ನಡ ಗ್ರಾಮದ ಸುರ್ಯ ಎಂಬಲ್ಲಿ. ಮಣ್ಣಿನ ಹರಕೆಯ ಕ್ಷೇತ್ರವೆಂದೇ ಪ್ರಸಿದ್ಧವಾದ ಈ ದೇವಸ್ಥಾನವು ರಮಣೀಯವಾದ ಪ್ರಕೃತಿಯ ಮಡಿಲಲ್ಲಿದೆ. ಯಾವುದೇ ಬಯಕೆ ಈಡೇರುವಂತೆ ಕಟ್ಟಿಕೊಂಡ ಹರಕೆಯನ್ನು ಇಲ್ಲಿ ತೀರಿಸುವುದು ಬಲು ಸುಲಭ ಎಂಬ ಕಾರಣಕ್ಕೆ ಇಲ್ಲಿ ಭಕ್ತರ ದಂಡೇ ಬಂದಿಳಿಯುತ್ತದೆ.
ಬಹುಕಾಲದಿಂದ ಮಕ್ಕಳಾಗದವರು, ವ್ಯವಹಾರದಲ್ಲಿ ಕೈ ಸುಟ್ಟು ಕೊಂಡವರು, ಮನೆಕಟ್ಟುವ ಕನಸು ಕಾಣುವವರು, ಹೊಸ ವಾಹನ ಕೊಳ್ಳಲು ನಿರ್ಧರಿಸಿದವರು, ಅನಾರೋಗ್ಯದಿಂದ ಬಳಲುವವರು ಈ ದೇವರನ್ನು ಬೇಡಿಕೊಂಡು ತಮ್ಮ ತಮ್ಮ ಬೇಡಿಕೆಗಳನ್ನು ಪ್ರತಿಬಿಂಬಿಸುವ ಮಣ್ಣಿನ ಮೂರ್ತಿಗಳನ್ನು ಸಲ್ಲಿಸುವ ಹರಕೆ ಕಟ್ಟಿಕೊಂಡರೆ ಸಾಕು, ಕೆಲವೇ ದಿನಗಳಲ್ಲಿ ಇಷ್ಟಾರ್ಥ ಸಿದ್ದಿಸುತ್ತದೆ ಎಂಬುದು ಭಕ್ತರ ನಂಬಿಕೆ.
ಬಲು ಸರಳ ಹರಕೆ ಈಡೇರಿಕೆ
ಭಕ್ತರು ತಮ್ಮ ಬೇಡಿಕೆ ಸಿದ್ದಿಗಾಗಿ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಬೇಕೆಂದಿಲ್ಲ. ತಾವಿರುವ ಸ್ಥಳದಿಂದಲೇ ಸಂಕಲ್ಪ ಮಾಡಿದರೆ ಸಾಕು, ಇಷ್ಟಾರ್ಥಗಳನ್ನು ಸಿದ್ಧಿಸಿದ ಬಳಿಕ ಕ್ಷೇತ್ರಕ್ಕೆ ಭೇಟಿ ನೀಡಿ ಮಣ್ಣಿನ ಗೊಂಬೆಗಳನ್ನು ಅರ್ಪಿಸಬಹುದು. ಹೀಗೆ ಅರ್ಪಿಸುವ ಮಣ್ಣಿನ ಗೊಂಬೆಗಳು ದೇವಸ್ಥಾನದಲ್ಲೇ ದೊರೆಯುತ್ತದೆ.
ಬೇಡಿಕೊಂಡ ಹರಕೆ ಈಡೇರಿದ ಬಳಿಕ ದೇವಸ್ಥಾನದಲ್ಲಿ ಅಕ್ಕಿ-ತೆಂಗಿನಕಾಯಿ ಇಟ್ಟ ಹರಿವಾಣದಲ್ಲಿ ಮಣ್ಣಿನ ಗೊಂಬೆಯನ್ನು ದೇವಸ್ಥಾನದಲ್ಲಿ ಇಟ್ಟು ಅರ್ಪಿಸುತ್ತಾರೆ. ಮಧ್ಯಾಹ್ನದ ಮಹಾಪೂಜೆಯ ಮೊದಲು ಇವುಗಳನ್ನು ಅಲ್ಲೇ ಸಮೀಪದಲ್ಲಿರುವ ‘ಬನ’ ದೊಳಕ್ಕೆ ಕೊಂಡೊಯ್ಯಲಾಗುತ್ತದೆ. ಅಲ್ಲಿ ಅರ್ಚಕರು ಪೂಜೆ ಮಾಡಿದ ಬಳಿಕ ಮೂರ್ತಿಗಳನ್ನು ಬನದಲ್ಲಿ ಜೋಡಿಸುತ್ತಾರೆ. ಇಲ್ಲಿಗೆ ‘ಹರಕೆ ಬನ’ ಎಂಬ ಹೆಸರಿದ್ದು ಅನಾದಿ ಕಾಲದಿಂದ ಹಾಕಿದ ಲಕ್ಷಾಂತರ ಮಣ್ಣಿನ ಮೂರ್ತಿಗಳು ಇಲ್ಲಿವೆ.
ಕೆಂಪು ಮಣ್ಣಿಂದ ಮಾಡಿದ ಈ ಗೊಂಬೆಗಳ ರಾಶಿ ಮಳೆಗೆ ಕರಗಿ ಮತ್ತೆ ಮಣ್ಣಾಗುತ್ತದೆ. ಹೀಗಾಗಿ ದೇವಳದ ಆಸುಪಾಸು ಜೀರ್ಣೋದ್ಧಾರಗೊಂಡಿದ್ದರೂ ಹರಕೆ ಬನದ ಜಾಗದ ಸ್ವರೂಪವನ್ನು ಮಾತ್ರ ಹಿಂದಿನಂತೆಯೇ ಉಳಿಸಿಕೊಳ್ಳಲಾಗಿದೆ. ಮರದ ಬಿಳಿಲುಗಳಿಂದಲೇ ನಿರ್ಮಾಣವಾದ ದ್ವಾರ ಹಾಗೂ ಕಾಲುದಾರಿ ಬನದ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಿವೆ. ಬನದಲ್ಲೂ ಒಂದು ನಾಗನ ಕಲ್ಲಿದ್ದು ಅಲ್ಲೂ ನಿತ್ಯ ಪೂಜೆ ನಡೆಯುತ್ತದೆ.
ದೇವಸ್ಥಾನದ ಎಡಭಾಗದಲ್ಲಿ ಬೃಹತ್ ಕಲ್ಯಾಣಿಯಿದೆ. ಕೆರೆಯ ಹಸುರು ನೀರು ಭಕ್ತರನ್ನು ಆಕರ್ಷಿಸುತ್ತದೆ. 70-80 ಅಡಿ ವಿಸ್ತಾರವಿರುವ ಕೊಳವು 35 ಅಡಿ ಆಳವಾಗಿದೆ. ಈ ಕೊಳದ ಮಧ್ಯಭಾಗದಲ್ಲಿ ಸುಂದರವಾದ ಮಂಟಪವಿದೆ.ವಾರ್ಷಿಕ ಉತ್ಸವದ ಸಂದರ್ಭದಲ್ಲಿ ದೇಗುಲದ ದೇವರು ಇಲ್ಲಿಗೆ ಭೇಟಿ ನೀಡುವುದುಂಟು. ಇಲ್ಲಿ ಕೆರೆ ಕಟ್ಟೆ ಪೂಜೆ ಮುಗಿಸಿ ಮತ್ತೆ ದೇವಳಕ್ಕೆ ಹಿಂದಿರುಗುವುದು ಪ್ರತೀತಿ. ಮಧ್ಯಭಾಗದಲ್ಲಿರುವ ಮಂಟಪ ಮಳೆಗಾಲದಲ್ಲಿ ಮುಳುಗುತ್ತದೆ, ಆಗ ಕಲ್ಯಾಣಿ ತುಂಬಿ ಹರಿಯುತ್ತಾಳೆ.
ವೈವಿಧ್ಯಮಯ ಹರಕೆ ಮೂರ್ತಿಗಳು
ಇಲ್ಲಿ ತಾಯಿ-ಮಗು-ಮನುಷ್ಯ ದೇಹದ ಅಂಗಾಂಗಗಳಾದ ಹೃದಯ, ಮೂತ್ರಪಿಂಡ, ಕಣ್ಣು, ಕಿವಿ,ಮೂಗು,ನಾಲಗೆ,ತಲೆ,ನರಗಳು,
ಕಿಡ್ನಿ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳು, ವಿಮಾನ, ಜೆಸಿಬಿ ಮುಂತಾದ ಪ್ರತಿಕೃತಿಗಳು,ಪ್ರಾಣಿಗಳಾದ ದನ-ಕರು,ಎತ್ತು,ಎಮ್ಮೆ, ಕೋಣ, ನಾಯಿ, ಬೆಕ್ಕು, ಹಾವು, ಇಲಿ, ಕೋಳಿ, ಕೋಳಿಮೊಟ್ಟೆ, ಕುದುರೆ, ಮಂಗ, ಮನೆ,ಹೆಂಚು, ಮಾಳೀಗೆ, ಭೂಮಿ, ಪುಸ್ತಕ, ಪೆನ್ನು,ನೋಟು, ಮೇಜು, ಕುರ್ಚಿ, ಸ್ಟೆತಸ್ಕೋಪ್, ಟಿವಿ, ಕಂಪ್ಯೂಟರ್, ಮೊಬೈಲ್, ಉಂಗುರ, ವಾಚು , ಕರಿಮಣಿ ಮೊದಲಾದ ನೂರಾರು ಹರಕೆ ಗೊಂಬೆಗಳಿವೆ.
ಹರಕೆಯ ವಸ್ತುಗಳಿಗೆ ರೂ.20 ರಿಂದ 200ರವರೆಗಿನ ದರ ನಿಗದಿಪಡಿಸಲಾಗಿದೆ. ಈ ಮೂರ್ತಿಗಳನ್ನು ತಯಾರಿಸುವ ಕುಂಬಾರ ಕುಟುಂಬವೊಂದಿದೆ. ಎಲ್ಲಾ ರೂಪದ ಮೂರ್ತಿಗಳನ್ನು ತಯಾರಿಸುವವರು ಇವರೇ. ಹರಕೆಗೆ ಸಮರ್ಪಿಸುವ ಮೂರ್ತಿಗಳನ್ನು ತಯಾರಿಸುವವರು ಇವರೇ. ಹರಕೆಗೆ ಸಮರ್ಪಿಸಿದ ಮೂರ್ತಿಗಳಲ್ಲಿ ಬಿರುಕು ಇರಬಾರದು ಎಂಬ ಕಾರಣಕ್ಕೆ ಆವೆಮಣ್ಣನ್ನು ಕುಲುಮೆಯಲ್ಲಿ ಚೆನ್ನಾಗಿ ಬೇಯಿಸಿ ರೂಪಕೊಡುತ್ತಾರೆ. ಹಿಂದೆಲ್ಲಾ ಇತರ ಮಣ್ಣಿನ ಪಾತ್ರೆಗಳನ್ನೂ ತಯಾರಿಸುತ್ತಿದ್ದ ಈ ಕುಟುಂಬ ಇಂದು ಭಕ್ತರ ಬೇಡಿಕೆಯ ಮೂರ್ತಿಗಳನ್ನು ಮಾತ್ರ ತಯಾರಿಸುತ್ತದೆ. ಒಂದು ವೇಳೆ ನಿಮ್ಮ ಹರಕೆಯ ಮೂರ್ತಿ ಸಂಗ್ರಹದಲ್ಲಿ ಇಲ್ಲವೆಂದಾದರೆ ಒಂದು ವಾರದೊಳಗೆ ತಯಾರಿಸಿಕೊಡುವ ಜವಾಬ್ದಾರಿಯನ್ನೂ ಈ ಕುಟುಂಬ ವಹಿಸಿಕೊಳ್ಳುತ್ತದೆ.
ದೇವಳದ ಇತಿಹಾಸ
ದೇವಸ್ಥಾನದ ಪರಿಸರಕ್ಕೆ ‘ಸುರ್ಯ’ ಎಂಬ ಹೆಸರು ಬಂದ ಹಿನ್ನೆಲೆಯಲ್ಲಿ ಕತೆಯೊಂದಿದೆ. ಹಿಂದೆ ಒಬ್ಬಾಕೆ ತನ್ನ ಮಗ ಸುರೆಯ ಎಂಬಾತನೊಂದಿಗೆ ಸೊಪ್ಪು ತರಲು ಕಾಡಿಗೆ ಹೋಗಿದ್ದಳಂತೆ. ಆಗ ಸೊಪ್ಪಿನೆಡೆಯಲ್ಲಿ ಮರೆಯಾಗಿದ್ದ ಲಿಂಗರೂಪಿ ಶಿಲೆಗೆ ಕತ್ತಿ ತಾಗಿ ರಕ್ತ ಚಿಮ್ಮಿ ಹರಿಯಿತಂತೆ. ಆಗ ಗಾಬರಿಗೊಂಡ ಆಕೆ ಮಗನನ್ನು ‘ಸುರೆಯಾ’ ಎಂದೂ ಕೂಗಿದಳಂತೆ. ಆ ಘಟನೆಯ ಬಳಿಕ ಈ ಕ್ಷೇತ್ರಕ್ಕೆ ‘ಸುರಿಯ, ಸುರ್ಯ’ ಎಂಬ ಹೆಸರು ಬಂತೆಂದು ಹೇಳಲಾಗುತ್ತದೆ. ಆ ಬಳಿಕ ಊರಿನ ಮುಖ್ಯಸ್ಥರು, ಗ್ರಾಮಸ್ಥರು ಒಟ್ಟಾಗಿ ಅಲ್ಲೇ ಸಮೀಪದಲ್ಲಿರುವ ದೇಗುಲ ನಿರ್ಮಾಣ ಮಾಡಿದರಂತೆ. ಕತ್ತಿಯೇಟಿಗೆ ಸಿಲುಕಿದ ಆ ಲಿಂಗರೂಪಿ ಶಿಲೆಗೆ ಪೂಜೆ ನಡೆಸಿ ದೇವಾಲಯ ನಿರ್ಮಿಸಲಾಯಿತು ಎಂದು ನಂಬಲಾಗಿದೆ.
ಹರಕೆ ಬನದ ಮೂಲದ ಬಗ್ಗೆಯೂ ಒಂದು ಐತಿಹ್ಯವಿದೆ. ಭೃಗು ಮಹರ್ಷಿಯ ಶಿಷ್ಯರೊಬ್ಬರು ಈ ಜಾಗದಲ್ಲಿ ತಪಸ್ಸು ಮಾಡುತ್ತಿದ್ದರಂತೆ. ಅವರ ತಪಸ್ಸಿಗೊಲಿದ ಶಿವಪಾರ್ವತಿಯರು ಪ್ರತ್ಯಕ್ಷವಾಗಿ ಇದೇ ಸ್ಥಳದಲ್ಲಿ ಲಿಂಗರೂಪದಲ್ಲಿ ನೆಲೆಯಾದರು ಎಂದು ನಂಬಲಾಗಿದೆ. ಇದರ ಕುರುಹಾಗಿ ಇಲ್ಲಿ ಎರಡು ಲಿಂಗರೂಪಿ ಶಿಲೆಗಳು ಹಾಗೂ ಶಿಲಾಪಾದಗಳಿವೆ.
ಇಲ್ಲಿ ಮಣ್ಣಿನ ಹರಕೆಯ ಸಂಪ್ರದಾಯ ಹೇಗೆ ಆರಂಭವಾಯಿತು ಎಂಬುದರ ಬಗ್ಗೆ ನಿಖರ ಮಾಹಿತಿಗಳಿಲ್ಲ. ದೇವಳಕ್ಕೆ 700 ವರ್ಷಗಳ ಇತಿಹಾಸವಿದೆ. 13ನೆಯ ಶತಮಾನದಲ್ಲಿ ಬಂಗ (ಜೈನ) ಅರಸರು ದೇವಳವನ್ನು ಅಭಿವೃದ್ದಿಪಡಿಸಿದರು ಎಂದು ಹೇಳಲಾಗುತ್ತದೆ. ಗರ್ಭಗುಡಿಯ ಮುಂಭಾಗದಲ್ಲಿರುವ ನಂದೀಶನ ಮೂರ್ತಿಯ ಬಳಿಯ ಫಲಕದಲ್ಲಿ ಈ ಉಲ್ಲೇಖವೂ ಇದೆ.
ಇಲ್ಲಿನ ಮುಖ್ಯ ಆರಾಧ್ಯ ದೈವ ಸದಾಶಿವ ರುದ್ರನಿಗೆ ಅಭಿಷೇಕ ಸಹಿತ ನಿತ್ಯ ತ್ರಿಕಾಲ ಪೂಜೆ ನಡೆಯುತ್ತದೆ. ಗರ್ಭಗುಡಿಯ ನೈಋತ್ಯ ಪೌಳಿಯಲ್ಲಿ ಗಣಪತಿಯ ಸಾನ್ನಿಧ್ಯವಿದೆ. ಗಣಪತಿ ದೇವರಿಗೂ ತ್ರಿಕಾಲ ಪೂಜೆ ನಡೆಯುತ್ತದೆ.ಪಂಚಪರ್ವ ದಿನಗಳಲ್ಲಿ ವಿಶೇಷ ಪೂಜೆ ನಡೆಸಲಾಗುತ್ತದೆ. ಶಿವರಾತ್ರಿ ಸಂದರ್ಭದಲ್ಲೂ ವಿಶೇಷ ಪೂಜೆಗಳು ನಡೆಯುತ್ತದೆ.
ದೇವಸ್ಥಾನದ ಬಲಭಾಗದಲ್ಲಿ ನಾಗಬನವಿದೆ. ಇಲ್ಲಿ ನಾಗದೇವರಿಗೆ ನಿತ್ಯಪೂಜೆ, ಕ್ಷೀರಾಭಿಷೇಕ ನಡೆಯುತ್ತದೆ. ಪ್ರತಿ ತಿಂಗಳು ಪಂಚಮಿ, ಷಷ್ಠಿಗಳಂದು, ನಾಗರ ಪಂಚಮಿ ಕುಕ್ಕೆ ಷಷ್ಠಿಯ ದಿನ ವಿಶೇಷ ಪೂಜೆ ನಡೆಯುತ್ತದೆ. ದೇವಸ್ಥಾನದ ಪೌಳಿಯಲ್ಲಿ ಬಲಭಾಗದಲ್ಲಿ ಪಿಲಿಚಾಮುಂಡಿ, ಕೊಡಮಣಿತ್ತಾಯ ದೈವಗಳ ಸಾನ್ನಿಧ್ಯವಿದೆ. ವರ್ಷಾವಧಿ ಜಾತ್ರೆಯ ವೇಳೆ ದೈವಗಳಿಗೆ ನೇಮೋತ್ಸವ ನಡೆಯುತ್ತದೆ.
ಪ್ರಸುತ್ತ ಆನುವಂಶಿಕವಾಗಿ ಸೂರ್ಯಗುತ್ತು ಮನೆತನದ ಆಡಳಿತಕ್ಕೆ ಒಳಪಟ್ಟಿದೆ. ಭಕ್ತರ ಸಂಖ್ಯೆ ಹೆಚ್ಚಿದಂತೆ ನಿತ್ಯ ಮಧ್ಯಾಹ್ನದ ಊಟವೂ ಆರಂಭವಾಗಿದೆ. ಅನ್ನಛತ್ರ ಹಾಗೂ ಅತಿಥಿಗೃಹಗಳ ನಿರ್ಮಾಣವೂ ಆಗಿದೆ. ‘ದೂರದಿಂದ ಬರುವ ಭಕ್ತರಿಗೆ ಮಣ್ಣಿನ ಮೂರ್ತಿ ಸಿಗುವಂತಾಗಬೇಕು ಎಂಬ ಕಾರಣಕ್ಕೆ ದೇವಸ್ಥಾನದ ಆವರಣದಲ್ಲೇ ಎಲ್ಲಾ ಮೂರ್ತಿಗಳು ಸಿಗುವಂಥ ವ್ಯವಸ್ಥೆ ಮಾಡಿದ್ದೇವೆ’ ಎನ್ನುತ್ತದೆ ದೇವಸ್ಥಾನದ ಆಡಳಿತ ಮಂಡಳಿ.
ತಲುಪುವುದು ಹೇಗೆ
ಇಲ್ಲಿಗೆ ಧರ್ಮಸ್ಥಳದಿಂದ ಉಜಿರೆ ಮಾರ್ಗವಾಗಿ 13 ಕಿ.ಮೀ ಹಾಗೂ ಬೆಳ್ತಂಗಡಿ ಪೇಟೆಯಿಂದ ಕಿಲ್ಲೂರು ಮಾರ್ಗವಾಗಿ ಎಂಟು ಕಿ.ಮೀ. ದೂರವಿದೆ. ದೇವಸ್ಥಾನ ಬೆಳಗ್ಗೆ ಏಳರಿಂದ ಮಧ್ಯಾಹ್ನದ ಎರಡರವರೆಗೆ ಹಾಗೂ ಸಂಜೆ ನಾಲ್ಕರಿಂದ 6.30ರವರೆಗೆ ತೆರೆದಿರುತ್ತದೆ.
ಹರಕೆಗೆ ಮಣ್ಣಿನ ಮೂರ್ತಿಯೇ ಏಕೆ?
ಇಲ್ಲಿ ಬೇಡಿಕೊಂಡವರ ಇಷ್ಟಾರ್ಥಗಳು ಸಿದ್ಧಿಯಾಗಿವೆ ಎಂಬುದಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಶೇಖರವಾಗುವ ಮಣ್ಣಿನ ಮೂರ್ತಿಗಳೇ ಸಾಕ್ಷಿ.
ಚಿನ್ನ, ದುಡ್ಡು, ಧಾನ್ಯಗಳು ಲಭ್ಯವಿಲ್ಲದಿದ್ದ ಕಾಲದಲ್ಲಿ ಮಣ್ಣಿನ ಆಕೃತಿಗಳನ್ನು ದೇವರಿಗೆ ಸಂಪ್ರದಾಯ ಆರಂಭವಾಗಿರಬಹುದು ಎಂದು ಊಹಿಸಲಾಗಿದೆ. ಸಾಮಾನ್ಯ ಮನುಷ್ಯನಿಗೆ ನಗ-ನಾಣ್ಯಗಳನ್ನು ದೇವರಿಗೆ ಅರ್ಪಿಸಲು ಸಾಧ್ಯವಾಗದಾಗ ತಾನು ಅನ್ನ ಬೆಳೆಯುವ ಮಣ್ಣಿಗೇ ಮೂರ್ತಿಯ ರೂಪ ನೀಡಿ ದೇವರಿಗೆ ಸಮರ್ಪಿಸಿ ಕೃತಾರ್ಥರಾಗುವ ಸಂಪ್ರದಾಯ ಆರಂಭವಾಗಿರಬೇಕು. ಆದರೆ ಇಂದಿಗೂ ಅದೇ ಪದ್ಧತಿ ಮುಂದುವರೆದಿದೆ. ಭಕ್ತವೃಂದದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರ ದೊರಕುವಂತಾಗಿದೆ. ಇದೇ ಇಲ್ಲಿನ ವಿಶೇಷತೆ. ಅದೇನೇ ಇದ್ದರೂ, ಮನುಷ್ಯನ-ದೇವರು ಹಾಗೂ ಮಣ್ಣಿನ ಅವಿನಾಭಾವ ಸಂಬಂಧವನ್ನು ಇದು ಸಾಂಕೇತಿಕವಾಗಿ ಪ್ರತಿನಿಧಿಸುವುದಂತೂ ಸತ್ಯ.
(ಸಂಗ್ರಹದಿಂದ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ
JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?
“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…
ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!
ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
School Teacher: ಅನಾರೋಗ್ಯದಿಂದ ಉದ್ಯಾವರ ಜೂಲಿಯಾನಾ ಟೀಚರ್ ನಿಧನ
Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ
Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್
Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ
Kannada Cinema: ಕ್ಲೈಮ್ಯಾಕ್ಸ್ ನತ್ತ ʼಕುಲದಲ್ಲಿ ಕೀಳ್ಯಾವುದೋʼ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.