ಕಾಳಜಿ ರಹಿತ ಕನ್ನಡೋತ್ಸವ
Team Udayavani, Nov 1, 2018, 12:30 AM IST
ಕನ್ನಡ ಸಂಸ್ಕೃತಿಯ ಪರ ಕಾಳಜಿವುಳ್ಳ ಸಾವಿರಾರು ಪ್ರಜ್ಞಾವಂತ ಕನ್ನಡಿಗರ ಧ್ವನಿಯಾಗಿ ಎರಡು ಅನಿಸಿಕೆಗಳು ಇಲ್ಲಿವೆ. ಸುಪ್ರೀಂ ಕೋರ್ಟಿನಲ್ಲಿ ಸಂವಿಧಾನದ ತಾಂತ್ರಿಕ ಪ್ರತಿರೋಧದ ಕಾರಣದಿಂದ ಪ್ರಾಥಮಿಕ ಶಾಲೆಗಳಲ್ಲಿ ಕಡ್ಡಾಯ ಕನ್ನಡ ಮಾಧ್ಯಮ ಜಾರಿಯಾಗದೆ ಸೋತಿತು. ಆಗ ಕರ್ನಾಟಕ ವಿಧಾನಸಭೆಯು ಸರ್ವಾನುಮತದಿಂದ ನಿರ್ಣಯಿಸಿ ಸಾಂವಿಧಾನಿಕ ತಿದ್ದುಪಡಿಗೆ ಒತ್ತಾಯಿಸಿ ಕೇಂದ್ರ ಸರಕಾರಕ್ಕೆ ಕಳುಹಿಸಿತು. ಕನ್ನಡ ಪ್ರೇಮಿಗಳು ಮೆಚ್ಚುವ ನಿರ್ಣಯವಿದಾಯ್ತು. ಆದರೆ ಅದು ಅಲ್ಲಿಗೇ ಮಲಗಿತು. ಕನ್ನಡ ಮಾಧ್ಯಮ ಜಾರಿಗೆ ಬಾರದಂತೆ ಕನ್ನಡ ನೇತಾರರಿಂದ ಉಂಟಾಗಿರುವ ತಡೆ ಸರ್ವವಿದಿತವಾಗಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ಸೋಲು
ಕನ್ನಡದ ಕ್ಷೇಮಕ್ಕಾಗಿಯೇ ಇರುವ ಕನ್ನಡ ಸಾಹಿತ್ಯ ಪರಿಷತ್ತು ನಮ್ಮ ಸಂಸದರ ಮೇಲೆ, ಕೇಂದ್ರ ಮಂತ್ರಿ ಮಂಡಳದಲ್ಲಿರುವ ಕರ್ನಾಟಕದ ಮಂತ್ರಿಗಳ ಮೇಲೆ ಒತ್ತಡ ಹೇರಿ ಲೋಕಸಭೆಯಲ್ಲಿ ಪ್ರಸ್ತಾಪಿಸಿ ನಿರ್ಣಯವಾಗುವಂತೆ ಯತ್ನಿಸಲೇ ಇಲ್ಲ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಳಿಗಾರರು ಮಂಗಳೂರಿಗೆ ಬಂದು ಕನ್ನಡ ಪ್ರಾಜ್ಞರ ಬಳಗದಲ್ಲಿ ಸಂವಾದವೊಂದನ್ನು ಕಳೆದ ವರ್ಷ ನಡೆಸಿದರು. ಆಗ ಈ ಬಗ್ಗೆ ಆಗ್ರಹಿಸಿ ಪ್ರಶ್ನಿಸಿದಾಗ ಇನ್ನು ಮುಂದೆ ಯತ್ನಿಸುವುದಾಗಿ ಹೇಳಿದರು. ಮತ್ತೆ ಅದು ಮುಂದುವರಿಯಲೇ ಇಲ್ಲ. ಸಂಸದೀಯ ವ್ಯವಹಾರಗಳ ಮಂತ್ರಿಗಳಾದ ಅನಂತಕುಮಾರರು ಬೆಂಗಳೂರಿನ ಕನ್ನಡಿಗರಿಂದಲೇ ಗೆದ್ದವರು. ಆದರೆ ಅವರೂ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಬೆನ್ನು ಬಿದ್ದು ಈ ಕೆಲಸ ಮಾಡಿಸಲಿಲ್ಲ. ಇನ್ನು ರಾಜ್ಯದ ಇತರ ಕನ್ನಡ ಸಂಘಟನೆಗಳ ನಾಯಕರು ಈ ಕಡೆಗೆ ಪ್ರಾಶಸ್ತ್ಯವೀಯದಿರುವುದು ದುಃಖಕರವಾಗಿದೆ.
ಭರವಸೆಯ ಬೆಳಕು
ಆದರೆ ಕಳೆದ ಕನ್ನಡ ರಾಜ್ಯೋತ್ಸವದ ಮುಖ್ಯ ಭಾಷಣದಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕನ್ನಡ ಮಾಧ್ಯಮ ಜಾರಿಗೆ ಕೇಂದ್ರ ಸರಕಾರ ಪಾರ್ಲಿಮೆಂಟ್ ನಿರ್ಣಯ ಮಾಡದೆ ಅನ್ಯಾಯವಾಗಿದೆ ಎಂದು ಹೇಳಿದ್ದು ಮೆಚ್ಚಬೇಕಾದ ವಿಷಯ. ಕೇಂದ್ರ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಹುದ್ದೆ ಸ್ವೀಕರಿಸಿದೊಡನೆಯೇ ಡಾ| ಚಂದ್ರಶೇಖರ ಕಂಬಾರರು ತಾವು ಈ ಬಗ್ಗೆ ವಿಶೇಷವಾಗಿ ಯತ್ನಿ‚ಸುವುದಾಗಿ ಘೋಷಿಸಿದ್ದು ಮತ್ತೂಂದು ಮೈಲಿಗಲ್ಲು. ಹಾಗೆಯೇ ಅಲ್ಲಲ್ಲಿ ಕ್ಷೀಣ ಸ್ವರದಲ್ಲಿ ಒತ್ತಾಸೆ ನಡೆಯುತ್ತಲೇ ಬಂತು. ಇದು ಪ್ರಾಶಸ್ತ್ಯದ ವಿಷಯವಾಗಲೇ ಇಲ್ಲ.
ಕನ್ನಡ ಸಂಸದರ ಔದಾಸೀನ್ಯ
ಆಡಳಿತ ಪಕ್ಷದವರೇ ಬಹುಪಾಲು ಗೆದ್ದಿರುವ ಕರ್ನಾಟಕದ ಸಂಸದರಿಗೆ ಕನ್ನಡ ಮಾಧ್ಯಮ ಜಾರಿ ಪ್ರಮುಖ ವಿಷಯವಲ್ಲ. ಶಿಕಾರಿಪುರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ -2017ನ್ನು ಉದ್ಘಾಟಿಸಲು ಅಂದಿನ ಸಂಸದರೂ ಮಾಜಿ ಮುಖ್ಯಮಂತ್ರಿಗಳೂ ಆದ ಬಿ.ಎಸ್. ಯಡಿಯೂರಪ್ಪ ಬಂದಿದ್ದರು.
ವೈಯಕ್ತಿಕವಾಗಿ ಯಡಿಯೂರಪ್ಪ ನವರಿಗೆ ಈ ವಿಷಯ ತಿಳಿಸಿ ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ಣಯವಿದೆಂದು ಮನವರಿಕೆಗೆ ಯತ್ನಿಸಿದೆ. ಜೊತೆಯಲ್ಲಿದ್ದ ಕ್ಷೇತ್ರೀಯ ಶಾಸಕ ರಾಘವೇಂದ್ರರೂ ದನಿಗೂಡಿಸಿದರು. ಆದರೆ ಅಲ್ಲಿ ಇದು ಪ್ರಸ್ತಾಪವಾಗಲೇ ಇಲ್ಲ. ಹೀಗೆಯೇ ಇನ್ನೂ ಹಲವು ಸಂಸದರನ್ನೂ, ಶಾಸಕರನ್ನೂ ನಾನು ಈ ಬಗ್ಗೆ ಆಗ್ರಹಪಡಿಸಿದರೂ ಅವರಿಗಿದು ಮುಖ್ಯ ಆಗಲಿಲ್ಲ.
ಇಂಗ್ಲೀಷ್ ಮಾಧ್ಯಮ ಲಾಬಿ ಪ್ರಭಾವ ಕಡ್ಡಾಯ ಕನ್ನಡ ಮಾಧ್ಯಮಕ್ಕೆ “ಲಾಬಿ’ ಆಗಲೇ ಇಲ್ಲ. ಇದು ಎಲ್ಲರ ಕೆಲಸ ಯಾರ ಕೆಲಸವೂ ಆಗಲಿಲ್ಲ. ಆದರೆ ಸ್ವಂತ ಹಣಕಾಸು ಮತ್ತು ಪ್ರತಿಷ್ಠೆಯಿಂದ ಪ್ರೇರಿತರಾದವರು ತಮ್ಮ ಇಂಗ್ಲೀಷ್ ಮಾಧ್ಯಮ ಶಾಲೆಗಳನ್ನು ರಕ್ಷಿಸಿಕೊಳ್ಳಲು ಬಲವಾದ “ಲಾಬಿ’ ಮಾಡಿಕೊಂಡು ಕನ್ನಡ ನೇತಾರರನ್ನು, ಕನ್ನಡ ಸಂಘಟನೆಗಳನ್ನು ಸೋಲಿಸುತ್ತಿದ್ದಾರೆ. ಇದೊಂದೇ ವಿಷಯವನ್ನಿಟ್ಟುಕೊಂಡು ಹೋರಾಡಿ ಗೆಲ್ಲುವ ಛಲ ಕನ್ನಡ ಚುನಾಯಿತ ಜನ ಪ್ರತಿನಿಧಿಗಳಿಗೂ ಇಲ್ಲ. ಕನ್ನಡ ಸಂಘಟನೆಗಳ ಪದಾಧಿಕಾರಿಗಳಿಗೂ ಇಲ್ಲ.
ಕನ್ನಡ ಮಾಧ್ಯಮವೇ ಸರ್ವ ಶ್ರೇಷ್ಠ
ಪ್ರಾಥಮಿಕ ಹಂತದಲ್ಲಿ ಜನ ಭಾಷೆ ಮತ್ತು ರಾಜ್ಯ ಭಾಷೆಯ ಕಲಿಕಾ ಮಾಧ್ಯಮವೇ ಸರ್ವಶ್ರೇಷ್ಠವೆಂದು ಸಿದ್ಧವಾಗಿದೆ. ಮನೋ ವಿಜ್ಞಾನಿಗಳು, ಶಿಕ್ಷಣ ತಜ್ಞರೂ ವಿಶ್ವದೆಲ್ಲೆಡೆ ಹೀಗೆ ನಿರ್ಣಯಿಸಿದ್ದಾರೆ. ಈ ಬಗ್ಗೆ ಚರ್ಚೆ ಇನ್ನು ಮುಗಿದ ಅಧ್ಯಾಯವಾಗಿದೆ. ಅಸಹಾಯಕರಾದ ಕನ್ನಡ ಮಕ್ಕಳು ಪರರಾಜ್ಯಗಳಲ್ಲಿ ಪರದೇಶಗಳಲ್ಲಿ ಅನ್ಯ ಮಾಧ್ಯಮ, ವಿಶೇಷವಾಗಿ ಇಂಗ್ಲೀಷ್ ಮಾಧ್ಯಮವನ್ನು ಕಲಿಯಬೇಕಾದ ದುರ್ಗತಿ, ಅಸಹಾಯಕತೆ ಇದೆ. ಆದರೆ ದುರ್ದೆçವವೆಂದರೆ ಕರ್ನಾಟಕದಲ್ಲಿಯೂ ಇದೇ ದುಃಸ್ಥಿತಿ ಬಂದಿರುವುದು ದುಃಖಕರ. ಒಂದು ಭಾಷೆಯಾಗಿ ಇಂಗ್ಲೀಷ್ ಕಲಿಯುವುದಲ್ಲ; ಮಾಧ್ಯಮವನ್ನೇ ಇಂಗ್ಲೀಷ್ ಮಾಡಿ ಮೀನಿನಂತಹ ನಮ್ಮ ಕೋಮಲ ಮಕ್ಕಳನ್ನು ಕನ್ನಡ ನೀರಿನಿಂದ ಹೊರತೆಗೆದು ಇಂಗ್ಲೀಷ್ ಬಿಸಿಗಾಳಿಯಲ್ಲಿಯೇ ಕಡ್ಡಾಯವಾಗಿ ಬದುಕಲೇ ಬೇಕೆಂದು ಒತ್ತಾಯಿಸುತ್ತಿರುವ ವಿಪರ್ಯಾಸ. ಹೆತ್ತವರ ಅಜ್ಞಾನ ಹೀಗೂ ಸಿದ್ಧವಾಗಿದೆ. ಒಳ್ಳೆಯ ಕನ್ನಡ ಶಾಲೆಗಳ ಅಭಾವವೂ ಇದಕ್ಕೆ ಸೇರಿಕೊಂಡಿದೆ. ಮಲಯಾಳಂ ಮತ್ತು ತಮಿಳು ಮಕ್ಕಳು ಈ ಕಷ್ಟದಿಂದ ದೂರವಿರುವುದನ್ನು ಗಮನಿಸಿದ್ದೀರಾ?
ಕನ್ನಡ ಪ್ರೇಮಿಗಳೇನು ಮಾಡಬಹುದು?
ಕನ್ನಡ ಸಂಘಗಳು, ಕನ್ನಡ ಪ್ರೇಮಿ ಪ್ರಜ್ಞಾವಂತರು ಅಲ್ಲಲ್ಲಿ ಕೂಡಿಕೊಂಡು ಕನ್ನಡ ಮಾಧ್ಯಮ ಶಾಲೆಗಳನ್ನು ದತ್ತು ತೆಗೆದುಕೊಂಡು ಬಲಪಡಿಸ ಬೇಕಾಗಿದೆ. ಕನ್ನಡ ಮಾಧ್ಯಮದ ಕೀಳರಿಮೆ ದೂರವಾಗಲು ಏನೇನೋ ಮಾಡಿ ಸೋತಿದ್ದೇವೆ. ಇದೀಗ ಸರಕಾರಿ ಯತ್ನ ಯಶಸ್ವಿ ಆಗಬೇಕು.ಸಂಸತ್ತಿನ ಶಾಸನವೊಂದರ ಮೂಲಕ ಕಡ್ಡಾಯವಾಗಿ ಪ್ರಾಥಮಿಕ ಒಂದರಿಂದ ಐದನೇ ತರಗತಿಯ ವರೆಗಿನ ಐದು ವರ್ಷಗಳ ಅನಿವಾರ್ಯ ಕನ್ನಡ ಮಾಧ್ಯಮವೇ ರಾಮಬಾಣ.
ಕನ್ನಡ ಬಾರದ ಕನ್ನಡ ಮಕ್ಕಳು
ಇಂಗ್ಲೀಷ್ ಮೀಡಿಯಂನಲ್ಲಿ ಕಲಿಯುತ್ತಿರುವ ನಮ್ಮ ಮಕ್ಕಳ ಕನ್ನಡವನ್ನು ಗಮನಿಸಿದ್ದೀರಾ? ಇನ್ನು ಮುಂದೆ ಈ ಮಕ್ಕಳೂ ಅವರ ಪೀಳಿಗೆಯ ಕನ್ನಡ ಸಾಹಿತ್ಯವನ್ನು ಆಸ್ವಾದಿಸುವ ಸಾಧ್ಯತೆ ಇದೆಯೇನು? ಕೆಲವು ಪ್ರಾಜ್ಞರು ಎಚ್ಚೆತ್ತು ಪ್ರಾಥಮಿಕ ಕಲಿಕೆಯಲ್ಲಿ ಕನ್ನಡ ಮಾಧ್ಯಮಕ್ಕೆ ಒತ್ತಾಯಿಸುತ್ತಾ ಪರಿಣಾಮಕಾರಿ ಪರಿಹಾರಕ್ಕೆ ಯತ್ನಿಸುತ್ತಿದ್ದಾರೆ. ರಾಜ್ಯೋತ್ಸವದ ಅರ್ಥಪೂರ್ಣ ಆಚರಣೆ ಹೀಗಾಗಬೇಕಲ್ಲವೇ? ಇದಿಲ್ಲದೇ ಬಹುಪಾಲು ಕನ್ನಡ ನಾಯಕರು ನಾಳಿನ ರಾಜ್ಯೋತ್ಸವದಲ್ಲಿ ಮಾಡುವ ಆಡಂಬರದ ಕನ್ನಡ ಪ್ರೇಮ ಭಾಷಣಗಳು ಎಷ್ಟೊಂದು ಹಾಸ್ಯಾಸ್ಪದ ಅಲ್ಲವೇ? ಇವರಲ್ಲಿಲ್ಲದ ಕನ್ನಡ ಕಾಳಜಿಯೇ ರೋಗ ಮೂಲವಲ್ಲವೇ? ಕನ್ನಡ ಭುವನೇಶ್ವರಿಯು ನಮ್ಮ ಈ ಸಮಸ್ಯೆಯನ್ನು ಪರಿಹರಿಸುವಳೇ? ಜನ ಭಾಷೆ- ಮನೆ ಭಾಷೆಯೇ ಮಗುವಿನ ಮನದ ಭಾಷೆ. ಇದುವೇ ಕಲಿಕಾ ಮಾಧ್ಯಮವಾಗಬೇಕೆಂದು ರಾಷ್ಟ್ರಪಿತ ಮಹಾತ್ಮಾಗಾಂಧಿಗೆ ಅವರ 150ನೇ ಜನ್ಮೋತ್ಸವದ ಈ ವರ್ಷ ನಾವು ಈ ಉಡುಗೊರೆ ಕೊಡಬಹುದೇನು?
ಭರವಸೆಯಿಂದ ಕಾಯೋಣ.
ಡಾ| ಶಿಕಾರಿಪುರ ಕೃಷ್ಣಮೂರ್ತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್
Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.