ಶಿರ್ಲಾಲು: ಶಾಸನ ಪತ್ತೆ
Team Udayavani, Nov 1, 2018, 10:18 AM IST
ಕಾಪು: ಶಿರ್ಲಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಹಾಡಿಯಂಗಡಿ ಪ್ರದೇಶದಲ್ಲಿ 14ನೇ ಶತಮಾನದ ಶಾಸನವನ್ನು ಇತಿಹಾಸ ಮತ್ತು ಪುರಾತತ್ವ ವಿದ್ಯಾರ್ಥಿಗಳಾದ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಹಾಗೂ ಸುಭಾಸ್ ನಾಯಕ್ ಬಂಟಕಲ್ಲು ಪತ್ತೆ ಮಾಡಿದ್ದಾರೆ.
ಈ ಕ್ಷೇತ್ರ ಕಾರ್ಯ ಅನ್ವೇಷಣೆಗೆ ಶಿರ್ಲಾಲು ಗ್ರಾ.ಪಂ. ಮಾಜಿ ಸದಸ್ಯ ವಿಠಲ ಆಚಾರ್ಯ ಹಾಗೂ ಹರೀಶ್ ಆಚಾರ್ಯ ಪಡಿಬೆಟ್ಟು-ಶಿರ್ಲಾಲು ಅವರು ಸಹಕಾರ ನೀಡಿದ್ದು ಶಾಸನ ಪಡಿಯಚ್ಚಿನ ಮೊದಲ ಪ್ರತಿಯನ್ನು ಉಡುಪಿಯ ಪ್ರಾಚ್ಯ ಸಂಚಯ ಸಂಶೋಧನ ಕೇಂದ್ರದಲ್ಲಿ ಸಂರಕ್ಷಣೆಗೆ ನೀಡಲಾಗಿದೆ.
ಈ ಶಾಸನವು ಅಪ್ಪು ಶೇರಿಗಾರ ಇವರ ಗದ್ದೆಯ ಬದುವಿನಲ್ಲಿ ಪತ್ತೆಯಾಗಿದೆ. ಶಾಸನವು 71 ಸೆಂ.ಮೀ ಉದ್ದ, 42 ಸೆಂ.ಮೀ ಅಗಲ ಹಾಗೂ 8 ಸೆಂ.ಮೀ. ದಪ್ಪವನ್ನು ಹೊಂದಿದೆ. 22 ಸಾಲುಗಳನ್ನು ಹೊಂದಿರುವ ಶಾಸನವು ಕನ್ನಡ ಲಿಪಿಯಲ್ಲಿದ್ದು, ಸಂಸ್ಕೃತ ಮತ್ತು ಕನ್ನಡ ಭಾಷೆಯನ್ನು ಒಳಗೊಂಡಿದೆ.
ಬಳಪದ ಕಲ್ಲಿನಿಂದ ಮಾಡಲ್ಪಟ್ಟಿರುವ ಈ ದಾನ ಶಾಸನವು ಮೇಲ್ಭಾಗದಲ್ಲಿ ಸೂರ್ಯ-ಚಂದ್ರ, ಖಡ್ಗ, ಕಾಲುದೀಪ, ಶಿವಲಿಂಗ ಮತ್ತು ನಂದಿಯ ಕೆತ್ತನೆಯನ್ನು ಹೊಂದಿದೆ. ಅನಂತರದಲ್ಲಿ ಶಾಸನದ ಪಾಠವನ್ನು ಕಾಣಬಹುದು. ಶಾಸನದಲ್ಲಿ ಶಕವರುಷ 1312, (ಕ್ರಿಸ್ತ ಶಕೆಗೆ ಪರಿವರ್ತಿಸಿದಾಗ 1390ಕ್ಕೆ ಸರಿ ಹೊಂದುತ್ತದೆ) ಅರಸ, ಸ್ಥಳನಾಮ ಹಾಗೂ ದಾನದ ಮಾಹಿತಿಯನ್ನು ಒಳಗೊಂಡಿದೆ.
ಶಕವರುಷ 1312ರ ಕಾರ್ತಿಕ ಶುದ್ದ 15 ಗುರುವಾರದಂದು ಅರಿರಾಯ ಗಂಡರ ದಾವಣಿ ವೀರ ಚೆನ್ನರಸ (ಚೆಂನರಸ) ಒಡೆಯರು ಹಾಗೂ ಭಾರದ್ವಾಜ ಗೋತ್ರದ ತಮ್ಮಣ್ಣ (ತಂಮ್ಮಂಣ) ಸಿನಬಾವರ ಮಗ ಪಾಂಡ್ಯಪ್ಪ ಅರಸರು ಸಿರುವಳಲ (ಶಿರ್ಲಾಲು) ಒಳಗೆ ಬಾರಕೂರ ಹೊರಗಣ ಸೋಮೇಶ್ವರ ದೇವರ ನಂದಾದೀವಿಗೆ 3 ಕಾಟಿ ಗದ್ಯಾಣವನ್ನು ದಾನ ನೀಡಿರುವ ವಿವರ ಶಾಸನದಲ್ಲಿ ಕಾಣಬಹುದು.
ವಿಜಯನಗರ ಅರಸರ ಪ್ರಾಬಲ್ಯ ಬಾರಕೂರು ಪ್ರದೇಶದಲ್ಲಿ ಹೆಚ್ಚು ಕಂಡು ಬಂದ ಹಾಗೆ ಈ ಸ್ಥಳಗಳಲ್ಲಿ ಇಲ್ಲಿನ ಸ್ಥಳೀಯ ಅರಸರ ಪ್ರಾಬಲ್ಯ ಹೆಚ್ಚಾಗಿತ್ತು ಎನ್ನುವುದು ಇತಿಹಾಸಕಾರ ಉಡುಪಿ ಪೂರ್ಣ ಪ್ರಜ್ಞ ಕಾಲೇಜಿನ ಪ್ರಾಂಶುಪಾಲ ಡಾ| ಜಗದೀಶ್ ಶೆಟ್ಟಿ ಅವರ ಅಭಿಪ್ರಾಯವಾಗಿದೆ.
ಶಾಸನದಲ್ಲಿ ಉಲ್ಲೇಖೀತವಾಗಿರುವ ಸಿರುವಳಲು ಎಂಬ ಸ್ಥಳವು ಇಂದು ಶಿರ್ಲಾಲು ಆಗಿ ಪರಿವರ್ತನೆ ಆಗಿರಬಹುದೆಂದು ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಹಾಗೂ ಸುಭಾಸ್ ನಾಯಕ್ ಬಂಟಕಲ್ಲು ಅವರು ಶಾಸನದ ಆಧಾರದ ಮೇಲೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಕರಾವಳಿಯಲ್ಲಿ “ಕರ್ನಾಟಕ ಕೂಟ’: ಜ. 17-23ರ ವರೆಗೆ ಮಂಗಳೂರು, ಉಡುಪಿಯಲ್ಲಿ
Uppinangady; ಕಾಡಾನೆ ಸಂಚಾರದಿಂದ ಹಿರೇಬಂಡಾಡಿ ಗ್ರಾಮಸ್ಥರು ಭಯಭೀತ
Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ
Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್ ಜಾಮ್
Pro Kabaddi League: ಗುಜರಾತ್ ಜೈಂಟ್ಸ್ ವಿರುದ್ಧದಬಾಂಗ್ ಡೆಲ್ಲಿಗೆ ಗೆಲುವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.