ಗಡಿನಾಡ ಕನ್ನಡಿಗರು ದ್ವಿತೀಯ ದರ್ಜೆ ಪ್ರಜೆಗಳೇ?
Team Udayavani, Nov 1, 2018, 12:20 PM IST
ಕಾಸರಗೋಡು: ಪಣಿಕ್ಕರ್ ಕುತಂತ್ರದಿಂದ ಅನ್ಯಾಯವಾಗಿ ಕೇರಳಕ್ಕೆ ಸೇರ್ಪಡೆಗೊಂಡ ಅಚ್ಚಗನ್ನಡ ಪ್ರದೇಶವಾದ ಕಾಸರಗೋಡಿನ ಕನ್ನಡಿಗರು ನಿರಂತರವಾಗಿ ಸಂವಿಧಾನಬದ್ಧ ಹಕ್ಕು, ಸವಲತ್ತುಗಳಿಂದ ವಂಚಿತರಾಗುತ್ತಲೇ ಬಂದಿದ್ದಾರೆ. ಆದರೆ ಅದೇ ಸಂದರ್ಭದಲ್ಲಿ ಚೆಲುವ ಕನ್ನಡನಾಡು ಕರ್ನಾಟಕದ ಕನ್ನಡಿಗರು ನ. 1ರಂದು ರಾಜ್ಯೋತ್ಸವವನ್ನು ಸಂಭ್ರಮ ಸಡಗರದಿಂದ ಆಚರಿಸುತ್ತಿದ್ದಾರೆ. ಕರ್ನಾಟಕದಿಂದ ಬೇರ್ಪಟ್ಟು ಮಲತಾಯಿಯ ಮಕ್ಕಳಂತಾದ ಕಾಸರಗೋಡಿನ ಕನ್ನಡಿಗರಿಗೆ ಈ ದಿನ ಕರಾಳ ದಿನವಾಗಿದೆ.
ಅನ್ಯಾಯವಾಗಿ ಕೇರಳಕ್ಕೆ ಸೇರಿ ಹೋದ ಅಚ್ಚಗನ್ನಡ ಪ್ರದೇಶವಾದ ಕಾಸರಗೋಡಿನ ಕನ್ನಡಿಗರು ಕೇರಳದಲ್ಲಿ ದ್ವಿತೀಯ ದರ್ಜೆ ಪ್ರಜೆ ಎಂಬಂತೆ ಬದುಕು ಸಾಗಿಸಬೇಕಾದ ಪರಿಸ್ಥಿತಿ. ಸಂವಿಧಾನಬದ್ಧವಾಗಿ ನೀಡಲಾದ ಎಲ್ಲ ಹಕ್ಕು, ಸವಲತ್ತುಗಳನ್ನು ಕಸಿದುಕೊಳ್ಳುತ್ತಲೇ ಇರುವ ಕೇರಳ ಸರಕಾರ ಮತ್ತು ಕೇರಳದ ವಿವಿಧ ಇಲಾಖೆಗಳಲ್ಲಿರುವ ಅಧಿಕಾರಿ ವರ್ಗ ಭಾಷಾ ಅಲ್ಪಸಂಖ್ಯಾಕ ಕನ್ನಡಿಗರಿಗೆ ನಿರಂತರವಾಗಿ ಕಿರುಕುಳ ನೀಡುತ್ತಲೇ ಬಂದಿದೆ. ಹೀಗಿರುವಂತೆ ಕರ್ನಾಟಕದಲ್ಲಿ ಕನ್ನಡಿಗರು ರಾಜ್ಯೋತ್ಸವ ಸಂಭ್ರಮವನ್ನು ಆಚರಿಸುವಾಗ ಕಾಸರಗೋಡಿನ ಕನ್ನಡಿಗರು ಕಣ್ಣೀರು ಹರಿಸುತ್ತಿದ್ದಾರೆ.
ಐತಿಹಾಸಿಕ ಕಾರಣಗಳಿಂದ ವಿಶಾಲ ಕರ್ನಾಟಕ ಹರಿದು ಹಂಚಿಹೋಗಿತ್ತು. ಕನ್ನಡ ತಾಯಿಯ ಮಕ್ಕಳೆಲ್ಲರೂ ಏಕತೆಯಿಂದ ಹೋರಾಟ ನಡೆಸಿದರೂ ಇಂದೂ ಕೂಡ ಕರ್ನಾಟಕದ ಬಹುಪಾಲು ಬೇರೆ ಬೇರೆ ರಾಜ್ಯಗಳಲ್ಲಿ ಉಳಿದುಕೊಂಡಿದೆ. ಕಾಸರಗೋಡು ಭಾಗವೇ ಕೇರಳದಲ್ಲಿ ಸೇರ್ಪಡೆಗೊಂಡಿತು. ಪಣಿಕ್ಕರ್ ಅವರ ಕುತಂತ್ರದಿಂದ ಅಚ್ಚಗನ್ನಡ ಪ್ರದೇಶವಾದ ಕಾಸರಗೋಡು ಕೇರಳ ರಾಜ್ಯಕ್ಕೆ ಧಾರೆಯೆರೆದು ಕೊಡುವಂತಾಯಿತು. 1956ರ ನ. 1 ರಂದು ರಾಜ್ಯ ವಿಂಗಡಣೆ ಸಂದರ್ಭದಲ್ಲಿ ಕಾಸರಗೋಡು ಕನ್ನಡಿಗರ ಅಭಿಪ್ರಾಯಗಳಿಗೆ ಭಿನ್ನವಾಗಿ ಕೇರಳದಲ್ಲಿ ಸೇರ್ಪಡೆಗೊಳ್ಳುವಂತಾಯಿತು. ಕಾಸರಗೋಡು ಕೇರಳಕ್ಕೆ ಸೇರ್ಪಡೆಗೊಂಡು 62 ವರ್ಷಗಳಾದರೂ ಕಾಸರಗೋಡಿನ ಕನ್ನಡಿಗರ ಪರಿಸ್ಥಿತಿ ಸುಧಾರಿಸಿಲ್ಲ. ಈಗಲೂ ದ್ವಿತೀಯ ದರ್ಜೆ ಪ್ರಜೆಗಳಾಗಿಯೇ ಬದುಕುತ್ತಿದ್ದೇವೆ. ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸಬೇಕೆಂದು ನಿರಂತರ ಹೋರಾಟ ನಡೆಯಿತು. ಇಬ್ಬರು ತರುಣರು ಪೊಲೀಸ್ ಗುಂಡಿಗೆ ಬಲಿಯಾದರು. ಇದರ ಪರಿಣಾಮವಾಗಿ ಮಹಾಜನ ಆಯೋಗವನ್ನು ಕೇಂದ್ರ ಸರಕಾರ ನೇಮಿಸಿತು. ಮಹಾಜನ ಆಯೋಗವೂ ಕಾಸರಗೋಡು ಕರ್ನಾಟಕಕ್ಕೆ ಸೇರ್ಪಡೆಗೊಳ್ಳಬೇಕೆಂದು ತೀರ್ಪು ನೀಡಿದ್ದರೂ, ಈ ಆದೇಶ ಮೂಲೆಗುಂಪಾಗಿದೆ.
ಕನ್ನಡಿಗರ ಸಂರಕ್ಷಣೆ ಸರಕಾರದ ಕರ್ತವ್ಯ: ಭಾಷಾ ಅಲ್ಪಸಂಖ್ಯಾಕ ಕನ್ನಡಿಗರಿಗೆ ಸಂವಿಧಾನದತ್ತವಾಗಿ ನೀಡಲಾದ ಹಕ್ಕು ಹಾಗೂ ಸವಲತ್ತುಗಳಿದ್ದು, ಇದರ ಬಗ್ಗೆ ತಿಳಿವಳಿಕೆಯಿಲ್ಲದ ಮಲಯಾಳಿ ಅಧಿಕಾರಿಗಳಿಂದ ಇವುಗಳ ಉಲ್ಲಂಘನೆಯಾಗುತ್ತಿದೆ. ಭಾಷಾ ಅಲ್ಪಸಂಖ್ಯಾಕರ ಭಾಷೆ, ಸಂಸ್ಕೃತಿ ಈಗ ವಿನಾಶದ ಅಂಚಿನಲ್ಲಿದೆ ಹಾಗೂ ಕನ್ನಡಿಗರ ದೈನಂದಿನ ಬದುಕು ಕ್ಷೋಭೆಗೊಳಗಾಗಿದೆ. ಸ್ವತಃ ಭಾಷಾ ಅಲ್ಪಸಂಖ್ಯಾಕರಲ್ಲೂ ತಮ್ಮ ಪರವಾದ ಸಂವಿಧಾನದತ್ತ ಹಕ್ಕುಗಳ ಬಗ್ಗೆ ಅರಿವಿಲ್ಲದೆ ಸ್ವಂತಿಕೆಯನ್ನು ಕಳೆದುಕೊಂಡು ದುರಿತಕ್ಕೀಡಾಗುತ್ತಿದ್ದು, ತಮ್ಮ ಬದುಕಿನಲ್ಲಿ ಮಲಯಾಳ
ಮಲಯಾಳ ಕಡ್ಡಾಯದ ಯತ್ನ
ಭಾಷೆಯ ಪಾರಮ್ಯವನ್ನು ಸಹಜ ಹಾಗೂ ಅನಿವಾರ್ಯವೆಂದು ಭಾವಿಸತೊಡಗಿದ್ದಾರೆ. ಹೀಗಿದ್ದರೂ ಭಾಷಾ ಅಲ್ಪಸಂಖ್ಯಾಕರ ಹಿತರಕ್ಷಣೆಯು ಸಂವಿಧಾನದ 350 ನೇ ವಿಧಿ ಪ್ರಕಾರ ರಾಜ್ಯ ಸರಕಾರದ ಕರ್ತವ್ಯವಾಗಿದೆ. ಆದುದರಿಂದ ಭಾಷಾ ಅಲ್ಪಸಂಖ್ಯಾಕರ ಸಂವಿಧಾನದತ್ತ ಹಕ್ಕುಗಳ ಸಂರಕ್ಷಣೆಗಾಗಿ ಸರಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗಿದೆ. ಆದರೆ ಸರಕಾರ ಕನ್ನಡಿಗರ ಸಂರಕ್ಷಣೆಗೆ ಬದಲಿಯಾಗಿ ಕನ್ನಡಿಗರಿಗೆ ನಿರಂತರ ಕಿರುಕುಳ ನೀಡುತ್ತಿದೆ. ಪದೇ ಪದೇ ಮಲಯಾಳ ಕಲಿಕೆ ಕಡ್ಡಾಯ ಮಾಡುವ ಸರಕಾರ ಕನ್ನಡಿಗರನ್ನು ಹತ್ತಿಕ್ಕಲು ಯತ್ನಿಸುತ್ತಿದೆ. ಇಂತಹ ಸಂದರ್ಭದಲ್ಲಿ ಕನ್ನಡಿಗರು ಎಚ್ಚೆತ್ತು ಹೋರಾಟ ಮಾಡಿದ ಹಿನ್ನೆಲೆಯಲ್ಲಿ ಕಡ್ಡಾಯ ಮಲಯಾಳ ಎಂಬ ಕ್ಷಿಪಣಿಯನ್ನು ಹಿಂದಕ್ಕೆ ಪಡೆದುಕೊಳ್ಳುತ್ತದೆ.
ಕೆಲವೇ ತಿಂಗಳುಗಳು ಕಳೆದ ಬಳಿಕ ಮತ್ತೆ ಅದೇ ಹಾಡು, ಅದೇ ರಾಗ ಎಂಬಂತೆ ಮತ್ತೆ ಮಲಯಾಳ ಕಡ್ಡಾಯ ಎಂಬ ಅಸ್ತ್ರ ಕನ್ನಡಿಗರ ಮೇಲೆ ಝಳಪಿಸುತ್ತದೆ. ಇದು ಇಲ್ಲಿ ನಿರಂತರವಾಗಿ ನಡೆಯುತ್ತಿದೆ. ಇದೀಗ ಮಲಯಾಳ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಅಲ್ಲದೆ ಇದರಂಗವಾಗಿ ಕನ್ನಡದ ಕುಡಿಗಳಿಗೆ ಮಲಯಾಳ ಕಲಿಸಲು ಪುಸ್ತಕಗಳು ಕಾಸರಗೋಡಿನ ವಿವಿಧ ಎ.ಇ.ಒ ಕಚೇರಿಗಳಿಗೆ ತಲುಪಿದೆ. ಕೆಲವು ಶಾಲೆಗಳ ಮುಖ್ಯೋಪಾಧ್ಯಾಯರು ಈ ಪುಸ್ತಕಗಳನ್ನು ತಮ್ಮ ತಮ್ಮ ಶಾಲೆಗಳಿಗೆ ಕೊಂಡೊಯ್ದಿದ್ದಾರೆ. ಕೆಲವು ಶಾಲೆಗಳಲ್ಲಿ ಮಲಯಾಳ ಪಾಠ ಮಾಡಲಾಗುತ್ತಿದೆ ಎಂಬ ವರದಿಗಳಿವೆ.
ಇದರಿಂದಾಗಿ ಕನ್ನಡಿಗರು ಭಾಷೆ, ಸಂಸ್ಕೃತಿಯನ್ನು ಉಳಿಸಿಕೊಳ್ಳಲು ನಡೆಸುತ್ತಿರುವ ಹೋರಾಟ ಅಷ್ಟಿಷ್ಟಲ್ಲ. ಆದರೂ ನಿಶ್ಚಿಂತೆಯಾಗಿ ಬದುಕಲು ಸಾಧ್ಯವಾಗುವುದಿಲ್ಲ. ಇಲ್ಲಿ ಯಾವುದೇ ಸರಕಾರ ಬಂದರೂ ಕನ್ನಡಿಗರ ತಲೆಮೇಲೆ ತೂಗುಗತ್ತಿ ನೇತಾಡುತ್ತಲೇ ಇರುತ್ತದೆ.
ಕಡ್ಡಾಯ ಮಲಯಾಳ ಹೇರಿಕೆಯ ವಿರುದ್ಧ ಕಾಸರಗೋಡಿನ ಕನ್ನಡಿಗರು ನ್ಯಾಯಾಲಯದ ಮೊರೆ ಹೋಗಿ ದ್ದಾರೆ. ಇನ್ನೂ ಕೆಲವು ಸಂಘಸಂಸ್ಥೆಗಳು ನ್ಯಾಯಾಲಯದ ಮೆಟ್ಟಲೇರಿದೆ. ಈ ಹಿನ್ನೆಲೆಯಲ್ಲಿ ಸರಕಾರಕ್ಕೆ ನೋಟೀಸನ್ನೂ ನೀಡಿವೆ.
ಭಾಷಾ ಅಲ್ಪಸಂಖ್ಯಾತ ಕನ್ನಡಿಗರ ಸಂವಿಧಾನಬದ್ಧ ಹಕ್ಕು, ಸವಲತ್ತುಗಳನ್ನು ಕಸಿದುಕೊಳ್ಳದಂತೆ ಹಾಗೂ ಕನ್ನಡಿಗರನ್ನು ನಿಶ್ಚಿಂತೆಯಿಂದ ಇಲ್ಲಿ ಬದುಕಲು ಬಿಡಿ ಎಂಬ ಧ್ವನಿಯನ್ನು ಮೊಳಗಿಸಲು ಕನ್ನಡಿಗರು ಕೇರಳದ ರಾಜ್ಯಧಾನಿ ತಿರುವನಂತಪುರದ ಸೆಕ್ರೆಟರಿಯೇಟ್ ಮುಂದೆ 2016 ನ.1 ರಂದು ಧರಣಿ ಹೂಡಿದ್ದರು. ಕನ್ನಡಿಗರ ಧ್ವನಿ ರಾಜ್ಯದ ರಾಜಧಾನಿಯಲ್ಲಿ ಮೊಳಗಲು ಕಾಸರಗೋಡಿನಿಂದ ನೂರಾರು ಸಂಖ್ಯೆಯಲ್ಲಿ ಕನ್ನಡಿಗರು ಬಸ್, ರೈಲುಗಾಡಿಗಳಲ್ಲಿ ತೆರಳಿದ್ದರು. 2017ರ ಕಳೆದ ಮೇ ತಿಂಗಳ 23 ರಂದು ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ದಿಗ್ಬಂಧನವನ್ನು ನಡೆಸಿತ್ತು. ಈ ಕಾರ್ಯಕ್ರಮದಲ್ಲಿ ಸಾವಿರಾರು ಕನ್ನಡಿಗರು ಪಾಲ್ಗೊಂಡು ಕನ್ನಡಿಗರ ಧ್ವನಿ ಕೇರಳದ ರಾಜಧಾನಿಯಲ್ಲಿ ಮುಟ್ಟಿತ್ತು.
‘ಕನ್ನಡ ನಾಡು ಕಾಸರಗೋಡು ಕಡತದಲ್ಲಾಗಿದೆ ಕಣೆªರೆದು ನೋಡು ಕನ್ನಡವೆಮ್ಮದು ಅನ್ನದ ಭಾಷೆ ಹೊಡೆದರೂ ಹೋಗದ ಅಮ್ಮನ ಭಾಷೆ ಕಾಸರಗೋಡಿನ ಮಣ್ಣಿನ ಮಕ್ಕಳು ನಾವೆಲ್ಲ ಬದುಕನು ಆರಿಸಿ ಬಾಳಲು ಬಂದ ಪರದೇಶೀಯರು ನಾವೆಲ್ಲ’
ಈ ಮೊದಲಾದ ಘೋಷಣೆಗಳು ಅಂದು ಮುಗಿಲು ಮುಟ್ಟಿದ್ದವು. ಕನ್ನಡಿಗರಲ್ಲಿ ಹೊಸ ಸಂಚಲನ ಮೂಡಿಸಿತ್ತು. ಕನ್ನಡಿಗರ ಶಕ್ತಿ ಪ್ರದರ್ಶನಕ್ಕೆ ವೇದಿಕೆಯನ್ನು ಒದಗಿಸಿಕೊಟ್ಟಿತ್ತು. ಕಾಸರಗೋಡಿನ ಕನ್ನಡಿಗರು ಎದ್ದು ನಿಂತರೆ, ಎಚ್ಚರಗೊಂಡರೆ ಶಕ್ತಿಯ ಪ್ರತಿರೂಪವಾಗುತ್ತಾರೆ ಎಂಬುದನ್ನು ಕೇರಳ ಸರಕಾರಕ್ಕೆ ತೋರಿಸಿಕೊಟ್ಟಿತು. ಆದರೆ ಸರಕಾರ ಕನ್ನಡಿಗರ ಬೇಡಿಕೆಗಳನ್ನು ತಿರಸ್ಕರಿಸಿ ಮಲಯಾಳ ಕಡ್ಡಾಯ ಹೇರಿದೆ. ಪ್ರಸ್ತುತ ಶೈಕ್ಷಣಿಕ ವರ್ಷದಿಂದಲೇ ಮಲಯಾಳ ಕಡ್ಡಾಯಗೊಳಿಸಿದೆ. ಈ ಹಿನ್ನೆಲೆಯಲ್ಲಿ ಕನ್ನಡಿಗರು ನಿರಂತರ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ.
2018 ಅ. 6ರಂದು ಕಾಸರಗೋಡಿನ ಕನ್ನಡ ಹೋರಾಟ ಸಮಿತಿ ನೇತೃತ್ವದಲ್ಲಿ ಬೆಂಗಳೂರಿನ ವಿಧಾನಸೌಧ ಬಳಿಯ ಬಸವೇಶ್ವರ ವೃತ್ತದ ಮುಂಭಾಗ ಧರಣಿ ಸತ್ಯಾಗ್ರಹವನ್ನು ನಡೆಸಿ ಕೇರಳ ಸರಕಾರದ ಮೇಲೆ ಒತ್ತಡ ಹಾಕು ವಂತೆ ಕರ್ನಾಟಕ ಸರಕಾರವನ್ನು ವಿನಂತಿಸಲಾಗಿತ್ತು. ಮಲಯಾಳ ಕಲಿಕೆ ಕಡ್ಡಾಯ ಆದೇಶದಿಂದ ಹಿಂದೆ ಸರಿಯ ಬೇಕೆಂದು ಕೇರಳ ಸರಕಾರದ ಮನವೊಲಿಸಲು ಕರ್ನಾಟಕ ಸರಕಾರದ ಉಪಮುಖ್ಯ ಮಂತ್ರಿ ಪರಮೇಶ್ವರ್ ಅವರನ್ನು ಕೇಳಿಕೊಳ್ಳಲಾಗಿತ್ತು.
ಕನ್ನಡಿಗರ ಒಕ್ಕೊರಲಿನ ಧ್ವನಿಗೆ ಬೆಲೆ ಇಲ್ಲ
ಕಾಸರಗೋಡಿನ ಪ್ರಮುಖ ಭಾಷೆ, ಸಂಸ್ಕೃತಿ, ಆಡು, ನುಡಿ, ಆಚಾರ, ವಿಚಾರಗಳೆಲ್ಲವೂ ಕನ್ನಡದ್ದೇ. ಹೀಗಿದ್ದರೂ ನಮ್ಮ ಭಾಷೆ, ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಹೋರಾಟ ಮಾಡಬೇಕಾದ ಅನಿವಾರ್ಯ ಕನ್ನಡಿಗರ ಮುಂದಿದೆ. ಇದಕ್ಕಾಗಿ ಕಳೆದ 61 ವರ್ಷಗಳಿಂದ ಹೋರಾಟ ನಡೆಯುತ್ತಲೇ ಇದೆ. ಅದೇ ವೇಳೆ ಭಾಷಾ ಅಲ್ಪಸಂಖ್ಯಾಕ ಕನ್ನಡಿಗರಿಗೆ ಸಂವಿಧಾನಬದ್ಧವಾಗಿ ನೀಡಲಾದ ಹಕ್ಕು, ಸವಲತ್ತುಗಳು ಒಂದೊಂದಾಗಿ ಕಸಿಯಲ್ಪಡುತ್ತಿದ್ದು, ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಕನ್ನಡದ ಅರಿಯದ ಮಲಯಾಳ ಅಧ್ಯಾಪಕರನ್ನು ನೇಮಿಸುವಷ್ಟರ ಮಟ್ಟಿಗೆ ಮುಂದುವರಿದಿದೆ. ಕಾಸರಗೋಡಿನ ಕನ್ನಡಿಗರ ಸಂರಕ್ಷಣೆಗೆ ಕಾಸರಗೋಡು ಜಿಲ್ಲಾ ಭಾಷಾ ಅಲ್ಪಸಂಖ್ಯಾಕ ಸಮಿತಿ ಇದೆ. ಇದರ ಮುಖ್ಯಸ್ಥರಾಗಿ ಜಿಲ್ಲಾಧಿಕಾರಿಗಳಿದ್ದಾರೆ. ಆದರೆ ಈ ಸಮಿತಿಯ ಸಭೆಯೇ ಸರಿಯಾಗಿ ನಡೆಯುವುದಿಲ್ಲ. ರಾಜ್ಯ ಭಾಷಾ ಅಲ್ಪಸಂಖ್ಯಾಕ ಸಮಿತಿಯೂ ಇದೆ. ಮಾನವ ಹಕ್ಕು ಆಯೋಗ ಇದೆ. ಆದರೆ ಈ ಯಾವುದೇ ಸಮಿತಿಗಳಿಗೆ ಕನ್ನಡಿಗರ ಪಾಡು ಅರ್ಥವಾಗುವುದಿಲ್ಲ. ಅರ್ಥವಾದರೂ ಮೌನಕ್ಕೆ ಶರಣಾಗಿವೆ. ಕನ್ನಡಿಗರ ಒಕ್ಕೊರಲಿನ ಧ್ವನಿಗೆ ಬೆಲೆಯೇ ಇಲ್ಲದಂತೆ ಸಂಬಂಧಿತ ಅಧಿಕಾರಿ ವರ್ಗ ನಡೆದುಕೊಳ್ಳುತ್ತಿದೆ. ಸರಕಾರವು ಈ ಹಿನ್ನೆಲೆಯಲ್ಲಿ ಹಿಂದೆ ಬಿದ್ದಿಲ್ಲ.
ನ. 28ರಂದು ಸಂಸತ್ ಭವನಕ್ಕೆ ಮುತ್ತಿಗೆ
ಕೇರಳ ಸರಕಾರವು ಕಾಸರಗೋಡಿನಲ್ಲಿ ಮಲಯಾಳ ಭಾಷಾ ಮಸೂದೆಯನ್ನು ಬಲವಂತವಾಗಿ ಜಾರಿಗೊಳಿಸುತ್ತಿರುವುದನ್ನು ತಡೆಹಿಡಿಯಬೇಕೆಂದು ಆಗ್ರಹಿಸಿ ಕರ್ನಾಟಕ ನವನಿರ್ಮಾಣ ಸೇನೆ ವಿವಿಧ ಕನ್ನಡಪರ ಸಂಘಟನೆಗಳ ಸಹಯೋಗದೊಂದಿಗೆ ನ. 28ರಂದು ದಿಲ್ಲಿಯ ಸಂಸತ್ ಭವನಕ್ಕೆ ಮುತ್ತಿಗೆ ಹೋರಾಟ ನಡೆದಲಿದೆ ಎಂದು ಕರ್ನಾಟಕ ನವನಿರ್ಮಾಣ ಸೇನೆ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ, ಕ.ಸಾ.ಪ. ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಶಿವರಾಮ ಕಾಸರಗೋಡು, ರಾಮನಾಥ ಸಾಂಸ್ಕೃತಿ ಭವನದ ಪ್ರಧಾನ ಸಂಚಾಲಕ ಗುರುಪ್ರಸಾದ್ ಕೋಟೆಕಣಿ, ರಾಮ್ ಪ್ರಸಾದ್ ಅವರು ಹೇಳಿದ್ದಾರೆ.
ಪ್ರದೀಪ್ ಬೇಕಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.