ದಿವಾಳಿ ಕಾನೂನು; ಸಾಲಗಾರರಿಗೆ ಬಿಸಿ ತುಪ್ಪ
Team Udayavani, Nov 5, 2018, 6:00 AM IST
ಸಾಲದ ಹಣವನ್ನು ವಾಪಸ್ ಮಾಡದೆ ಸತಾಯಿಸುತ್ತಿದ್ದ ಕಂಪನಿಗಳ ಮಾಲೀಕರಿಗೆ ಬಿಸಿ ಮುಟ್ಟಿಸಲು ಸರ್ಕಾರವು ದಿವಾಳಿ ಕಾನೂನನ್ನು ಜಾರಿಗೆ ತಂದಿದೆ. ಕಾಯ್ದೆಯಿಂದ ಆಗಬಹುದಾದ ಪರಿಣಾಮಗಳಿಗೆ ಹೆದರುವ ಜನ 1.10ಲಕ್ಷ ಕೋಟಿಯಷ್ಟು ಸಾಲವನ್ನು ಮರಳಿಸಿದ್ದಾರೆ ಎನ್ನಲಾಗಿದೆ…
ಬ್ಯಾಂಕುಗಳಲ್ಲಿ ಸಾಲ ವಸೂಲಾತಿ ನೀತಿ ನಿಯಮಾವಳಿಗಳು,ಕಾನೂನುಗಳು ಹಲ್ಲಿಲ್ಲದ ಹಾವಿನಂತೆ; ಕಠಿಣವಾಗಿಲ್ಲ. ಸಾಲಗಾರರರ ಪರವಾಗಿವೆ ಮತ್ತು ಅವುಗಳಲ್ಲಿನ ಅನಿವಾರ್ಯವಾದ ಲೋಪದೋಷಗಳನ್ನು ದುರುಪಯೋಗಪಡಿಸಿಕೊಂಡು ಸಾಲಗಾರರರು
ಬ್ಯಾಂಕುಗಳನ್ನು ಬಾಗಿಸುತ್ತಾರೆ. ಆಟವಾಡಿಸುತ್ತಾರೆ ಮತ್ತು ಸತಾಯಿಸುತ್ತಾರೆ ಎನ್ನುವ ಟೀಕೆಗಳು ಲಾಗಾಯ್ತಿನಿಂದ ಇವೆ.
ಬ್ಯಾಂಕುಗಳಲ್ಲಿನ ಸಾಲ ವಸೂಲಾತಿ ಪ್ರಕ್ರಿಯೆ, ಅದು ತೆಗೆದುಕೊಳ್ಳುವ ಸಮಯ, ಸಾಲಗಾರರರು ಸಾಲ ವಸೂಲಿಯನ್ನು ತಡೆಯಲು, ಮುಂದೆ ಹಾಕಲು ಒಡ್ಡುವ ತರಹೇವಾರಿ ಅಡಚಣೆಗಳು, ಬ್ಯಾಂಕಿನವರ ಹತಾಶೆ ನೋಡಿದಾಗ ಈ ಟೀಕೆಗಳ ಹಿಂದಿನ ಕಾರಣ ಗೊತ್ತಾಗದಿರದು. ಬ್ಯಾಂಕಿಂಗ್ ಉದ್ಯಮದ ಬುಡವನ್ನೇ ಅಲ್ಲಾಡಿಸುವ ಮಟ್ಟಕ್ಕೆ ತಲುಪಿದ ವಸೂಲಾಗದ ಸಾಲಗಳು ಮತ್ತು ಇವುಗಳನ್ನು ನಿಯಂತ್ರಿಸಲು ತೆಗೆದುಕೊಂಡ ಕ್ರಮಗಳು ನಿರೀಕ್ಷಿತ ಫಲ ನೀಡದಿರುವುದನ್ನು ನೋಡಿದ ಸರ್ಕಾರ, ದೊಡ್ಡ ಪ್ರಮಾಣದ ವಸೂಲಾಗದ ಸಾಲಗಳನ್ನು, ಮುಖ್ಯವಾಗಿ ಕಾರ್ಪೋರೇಟ್ ಸಾಲಗಳನ್ನು ಗುರಿಯಾಗಿರಿಸಿ ದಿವಾಳೀ ಕಾನೂನು ಅಥವಾ Insolvency Bankruptcy Code ಎನ್ನುವ ಹೊಸ ಸಾಲವಸೂಲಾತಿ ಕಾನೂನನ್ನು 2016 ರಲ್ಲಿ ಜಾರಿಗೆ ತಂದಿದೆ. ಈ ಕಾಯ್ದೆ ಜಾರಿಯ ವೈಖರಿ, ಅರ್ಜೆನ್ಸಿ ಮತ್ತು ವೇಗವನ್ನು ನೋಡಿ ಸಾಲ ಮರುಪಾವತಿ ಮಾಡದ ಕಾರ್ಪೋರೇಟ್ ಕಂಪನಿಗಳಿಗೆ ನಡುಕ ಹುಟ್ಟಿದೆ.
ಸಾಲ ವಸೂಲಾತಿಗೆ ಇರುವ ಪ್ರತಿಯೊಂದು ಕಾನೂನಿನ ವೈಫಲ್ಯ, ಈ ಕಾನೂನುಗಳು ತೆಗದುಕೊಳ್ಳುವ ಸಮಯ ಮತ್ತು ಕೊನೆಗೊಮ್ಮೆ ಹಲವು ಪ್ರಕರಣಗಳಲ್ಲಿ ಸೋಲನ್ನು ಕಾಣುವು ದನ್ನು ನೋಡಿ , ಕೆಲವು ಬ್ಯಾಂಕುಗಳ ಚೇರ್‌ಮನ್ನರು Insolvency Bankruptcy Code Of India ದ ನಿಯಂತ್ರಕರು. ಈ ನಿಟ್ಟಿನಲ್ಲಿ ಚರ್ಚಿಸಲು ಕರೆದ ಸಭೆಗೆ ಹಾಜಾರಾಗಲು ಹಿಂದೇಟು ಹಾಕಿದ್ದರಂತೆ. ರಿಸರ್ವ್ ಬ್ಯಾಂಕ್‌ನ ಮಧ್ಯಪ್ರವೇಶದ ನಂತರವೂ ಏಳು ಜನ ಚೇರ್ಮನ್ನರುಗಳು ಸಭೆಗೆ ಬಂದಿರಲಿಲ್ಲವಂತೆ.
ಜನವರಿ 2018 ರಿಂದ ಈ ಕಾಯ್ದೆಯು ಗಂಭೀರವಾಗಿ ಅನುಷ್ಠಾನಗೊಂಡಿದೆ. ಹೀಗಾಗಿ, ಬ್ಯಾಂಕುಗಳು ಕ್ರಮೇಣ ಇದರ ಸಿಹಿ ಫಲವನ್ನು ಅನುಭವಿಸಲು ಆರಂಭಿಸಿವೆ. ಈ ಕಾಯ್ದೆಯು ಮೋಸ ಮಾಡುವ ಸಾಲಗಾರರಿಗೆ ಮೂಗುದಾರ ಹಾಕಲು ಅನುಭವದ ಆಧಾರದ ಮೇಲೆ ರೂಪಿತವಾಗಿದೆ. ಇದರಿಂದಾಗಿ, ಬ್ಯಾಂಕುಗಳು ನಿಟ್ಟುಸಿರು ಬಿಡುತ್ತಿವೆ. ಈ ವರೆಗೆ ಸಾಲ ಮರುಪಾವತಿ ಮಾಡದೇ ಬ್ಯಾಂಕುಗಳನ್ನು ಸತಾಯಿಸುತ್ತಿದ್ದ ಮತ್ತು ಬ್ಯಾಂಕುಗಳನ್ನೇ ಖಳನಾಯಕರನ್ನಾಗಿ ಬಿಂಬಿಸುತ್ತಾ, ಸಾಲ ಮರು ಪಾವತಿಸದೆ ನಿರುಮ್ಮಳವಾಗಿ ಇರುತ್ತಿದ್ದ ಸಾಲಗಾರರು , ಈಗ ಈ ಕಾಯ್ದೆಗೆ ಹೆದರಿದ್ದಾರೆ. ಹೊಸ ಕಾಯ್ದೆ ಎಂಬ ಅಸ್ತ್ರವನ್ನೇ ಮುಂದಿಟ್ಟುಕೊಂಡು, ಸಾಲ ಮರುಪಾವತಿಯನ್ನು ನಿರಾಕರಿಸುತ್ತಿದ್ದ, ಮುಂದೂಡುತ್ತಿದ್ದ, ನಾನಾ ಕಾರಣಗಳನ್ನು ಮುಂದೆ ಮಾಡುತ್ತಿದ್ದ ಸಾಲಗಾರರಿಂದ ಬ್ಯಾಂಕುಗಳು ಸುಮಾರು 1.10 ಲಕ್ಷ ಕೋಟಿ ಸಾಲವನ್ನು ವಸೂಲಿ ಮಾಡಿವೆ.
ಕಂಪನಿಗಳ ಮಾಲೀಕರು ಮತ್ತು ಪ್ರವರ್ತಕರು(promoters) ಕಂಪನಿಗಳ ಮೇಲಿನ ಹಿಡಿತವನ್ನ ಕಳೆದುಕೊಳ್ಳುವ ಭಯದಲ್ಲಿ ಸಾಲ ಮರುಪಾವತಿಯನ್ನು ಮಾಡುತ್ತಿದ್ದಾರೆ. ಸದ್ಯದಲ್ಲಿಯೇ ಈ ಹಣಕಾಸು ವರ್ಷದಲ್ಲಿ ಇನ್ನೂ 1.80 ಲಕ್ಷ ಕೋಟಿ ಮರುಪಾವತಿಯನ್ನು ಬ್ಯಾಂಕುಗಳು ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಇದು ಕಳೆದ ವರ್ಷ (2017-18) ವಸೂಲಿಯಾದುದಕ್ಕಿಂತ ಸುಮಾರು ಎರಡೂವರೆ ಪಟ್ಟು ಹೆಚ್ಚಾಗಬಹುದು ಎಂದು ಹೇಳಲಾಗುತ್ತಿದೆ.
ನ್ಯಾಷನಲ್ ಕಂಪನಿ ಲಾ ಟ್ರಿಬ್ಯೂನಲ್‌ನಲ್ಲಿ, ಈವರೆಗೆ ವಸೂಲಾಗದ ಸಾಲದ 977 ಪ್ರಕರಣಗಳು ಸ್ವೀಕರಿಸಲಾಗಿದೆ. ಸಾಲನೀಡಿದ ಬ್ಯಾಂಕುಗಳು, ಸಾಲನೀಡಿದವರು ಮತ್ತು ಆ ಕಂಪನಿಗಳಿಗೆ ಸಾಮಾನು ಸರಂಜಾಮುಗಳನ್ನು ಪೂರೈಸಿದವರು ಕ್ರಮ ತೆಗೆದುಕೊಳ್ಳುವಂತೆ ಕೋರಿದ್ದಾರೆ. 977 ಪ್ರಕರಣಗಳಲ್ಲಿ 381 ಪ್ರಕರಣಗಳು ಬ್ಯಾಂಕ್ ಮತ್ತು ಮನೆ ಖರೀದಿಸಿದವರಿಗೆ ಸಂಬಂಧಪಟ್ಟರೆ, 447 ಪ್ರಕರಣಗಳು ಗುತ್ತಿಗೆದಾರರರು ಮತ್ತು ಸಪ್ಲೆ„ಯರ್ಸ್‌ಗೆ ಸಂಬಂಧಪಟ್ಟಿದ್ದು. ಎನ್.ಸಿ.ಎ ಲ್.ಟಿ ಯಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆ , ಸ್ವೀಕರಿಸಲಾದ ಪ್ರಕರಣಗಳ ನಾಲ್ಕು ಪಟ್ಟು ಇದೆಯಂತೆ. ದಾಖಲಾದ ಪ್ರಕರಣಗಳಲ್ಲಿ ಹಲವು ಪ್ರಕರಣಗಳನ್ನು ಸಾಲಗಾರರು, ಅವು ಸ್ವೀಕೃತವಾಗುವ ಮೊದಲೇ ಸಾಲ ಮರುಪಾವತಿಸಿ, ಪ್ರಕರಣ ಮುಂದುವರೆಯದಂತೆ ಎಚ್ಚರಿಕೆ ವಹಿಸಿ ಬಚಾವ್ ಆಗಿದ್ದಾರೆ. ನಿನ್ನೆ ಮೊನ್ನೆಯವರೆಗೆ ಸಾಲ ಮರುಪಾವತಿಗೆ ಮುಖ ತಿರುಗಿಸುತ್ತಿದ್ದವರು, ಈಗ ರಾಗ ಬದಲಿಸಿ ಸಾಲ ತೀರಿಸಲು ಮುಂದೆ ಬರುತ್ತಿದ್ದು, ಕಂಪನಿಗಳನ್ನು ಉಳಿಸಿಕೊಳ್ಳಲು, ಅವು ತಮ್ಮ ಕೈಬಿಟ್ಟು ಹೋಗದಂತೆ ನೋಡಿಕೊಳ್ಳಲು ಕೈಬಿಡದಂತೆ ಎಚ್ಚರಿಕೆ ವಹಿಸುತ್ತಿದ್ದಾರೆ.
ದಿವಾಳಿ ಕಾನೂನು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದು, ನಿರೀಕ್ಷೆಯಂತೆ ವಸೂಲಿ ನಡೆದರೂ ಶೇ.42ರಷ್ಟು ಪ್ರಕರಣಗಳು 180 ದಿನಗಳ ಮಿತಿಯನ್ನು ದಾಟಿದ್ದು, ಕಾನೂನಿನ ಪ್ರಕಾರ ಅವುಗಳಿಗೆ ಇನ್ನೂ 90 ದಿನಗಳ ಅವಕಾಶವನ್ನು ನೀಡಲಾಗುತ್ತಿದೆ. ಬ್ಯಾಂಕುಗಳು ಇವುಗಳಿಂದಲೂ ಬಾಕಿ ವಸೂಲಿಯನ್ನು ನಿರಿಕ್ಷಿಸಬಹುದು. ಒಟ್ಟೂ 716 ಪ್ರಕರಣಗಳಲ್ಲಿ, ಶೇ. 25ರಷ್ಟು ಪ್ರಕರಣಗಳಲ್ಲಿ ಈ ಪ್ರಕ್ರಿಯೆ ಇನ್ನೂ ಮುಗಿಯಬೇಕಿದೆ. ಈ ವರೆಗೆ ಚಾಲ್ತಿಯಲ್ಲಿರುವ ಎಲ್ಲಾ ಸಾಲ ವಸೂಲಾತಿ ಕಾಯ್ದೆಗಳಲ್ಲಿ, ತೀರಾ ವಿಶೇಷವಾದ ಅಂಶ ವೆಂದರೆ, ಈ ಪ್ರಕ್ರಿಯೆ ಮುಗಿಯಲು ಸಮಯ ಪರಿಮಿತಿಯನ್ನು ವಿಧಿಸಿರುವುದು. ಈ ಕಾಯ್ದೆ ಹಲವಾರು ದೇಶಗಳಲ್ಲಿ ಇದ್ದರೂ, ಈ ಸಮಯ ಪರಿಮಿತಿ ಕಟ್ಟಳೆ ಇರುವುದು ನಮ್ಮ ದೇಶದಲ್ಲಿ ಮಾತ್ರ. ಜೂನ್‌ತಿಂಗಳಿನಲ್ಲಿ 32 ಪ್ರಕರಣಗಳು ಇತ್ಯರ್ಥವಾಗಿದ್ದು 49,783 ಕೋಟಿ ಸಾಲ ವಸೂಲಾಗಿದೆ.
ಮುಂದಿನ ದಿನಗಳಲ್ಲಿ ನ್ಯಾಷನಲ್ ಕಂಪನಿ ಲಾ ಟ್ರಿಬ್ಯೂನಲ್ ಬೆಂಚ್‌ಗೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನು ನೇಮಕ ಮಾಡುವ ಚಿಂತನೆ ನಡೆದಿದ್ದು, ದಿವಾಳಿ ಕಾನೂನು ಹೆಚ್ಚು ಕ್ರಿಯಾಶೀಲವಾಗುವ ಮತ್ತು ಬಾಕಿ ಇರುವ ಪ್ರಕರಣಗಳು ಶೀಘ್ರ ಇತ್ಯರ್ಥವಾಗುವ ಆಶಯವನ್ನು ಎನ್‌ಸಿಎಲ್‌ಟಿ ವ್ಯಕ್ತ ಮಾಡುತ್ತಿದೆ. ಸದ್ಯ ಇರುವ 33 ಸದಸ್ಯರ ಹೊರತಾಗಿ ಇನ್ನೂ 36 ಸದಸ್ಯರನ್ನು ನೇಮಕಮಾಡಲಾಗುತ್ತಿದೆ. ಇನ್ನೂ ಮೂರು ಬೆಂಚ್‌ಗಳಿಗೆ ಅನುಮತಿ ಕೊಟ್ಟಿದ್ದು, ಒಟ್ಟು ದೇಶಾದ್ಯಂತ 14 ಬೆಂಚ್‌ಗಳು ಕಾರ್ಯ ನಿರ್ವಹಿಸಲಿವೆ. ಕಳೆದ ಜೂನ್ ತ್ತೈಮಾಸಿಕದಲ್ಲಿ, ಐಬಿಸಿ ಪ್ರಕ್ರಿಯೆಗೆ ಒಳಪಟ್ಟ 12 ಪ್ರಕರಣಗಳಲ್ಲಿ, ಮೂರು ಪ್ರಕರಣಗಳಲ್ಲಿ ಶೇ.100ರಷ್ಟು ಬಾಕಿ ವಸೂಲಿಯಾಗಿದೆಯಂತೆ. ಬ್ಯಾಂಕಿಂಗ್ ಉದ್ಯಮದಲ್ಲಿರುವ ಒಟ್ಟೂ ಅನುತ್ಪಾದಕ ಆಸ್ತಿಗಳಲ್ಲಿ ಶೇ.73ರಷ್ಟು ಕಾರ್ಪೋರೇಟ್ ಸಾಲಗಳಿವೆ ಮತ್ತು 12 ಕಂಪನಿಗಳು ಶೇ.25ರಷ್ಟು ಅನುತ್ಪಾದಕ ಆಸ್ತಿಗಳನ್ನುಹೊಂದಿವೆ ಎನ್ನುವುದನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಈ ದಿವಾಳಿ ಕಾನೂನಿನ ಮಹತ್ವ ತಿಳಿದೀತು.
ಈ ಕಾಯ್ದೆಯ ಇನ್ನೊಂದು ವಿಶೇಷವೆಂದರೆ, ರಿಯಲ್ ಎಸ್ಟೇಟ್‌ಪ್ರಾಜೆಕ್ಟನಲ್ಲಿ allotment ಹೊಂದಿರುವ ಮನೆ ಖರೀದಿದಾರರನ್ನೂ ಕ್ರೆಡಿಟರ್ ಎಂದು ಪರಿಗಣಿಸಿರುವುದರಿಂದ, ದೊಡ್ಡ ಪೊ›ಜೆಕ್ಟ ನಲ್ಲಿ ಮನೆ ಖರೀದಿಸುವವರಿಗೆ ರಿಲೀಫ್ ದೊರಕಿದೆ. ಮನೆ ಖರೀದಿಸಿ ,ಅದು allotment ಆಗಿ, ವಾಸಿಸಲು ಸೂರು ದೊರಕದವರೂ ಈ ಕಾಯ್ದೆ ಅಡಿಯಲ್ಲಿ ನ್ಯಾಯ ಪಡೆಯಬಹುದು. ಒಂದು ಡೆಡ್‌ಲೈನ್ ಒಳಗೆ ಪರಿಹಾರ ದೊರಕುವ ಈ ಕಾಯ್ದೆಯನ್ನು ಬ್ಯಾಂಕರ್‌ಗಳು ತುಂಬು ಹೃದಯದಿಂದ ಸ್ವಾಗತಿಸಿದ್ದು, ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದ ಅನುತ್ಪಾದಕ ಆಸ್ತಿಯನ್ನು ವಸೂಲು ಮಾಡಿಕೊಳ್ಳುವ ಆಶಯಹೊಂದಿವೆ.
– ರಮಾನಂದ ಶರ್ಮಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.