ಬೌದ್ಧ ಧರ್ಮಕ್ಕೆ ಮತಾಂತರಗೊಂಡವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ
Team Udayavani, Nov 5, 2018, 6:05 AM IST
ಬೆಂಗಳೂರು: ಹಿಂದೂ ಧರ್ಮದಿಂದ ಬೌದ್ಧ ಧರ್ಮಕ್ಕೆ ಮತಾಂತರ ಹೊಂದಿದ ಪರಿಶಿಷ್ಟ ಜಾತಿಯ ಸಮುದಾಯದವರಿಗೂ ಎಸ್ಸಿ ಪ್ರಮಾಣ ಪತ್ರ ನೀಡುವಂತೆ 2013ರಲ್ಲಿಯೇ ಸಮಾಜ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ.
ಹಿಂದೂ ಧರ್ಮದ ಪರಿಶಿಷ್ಟ ಜಾತಿಯ ಜನಾಂಗದವರು ಬೌದ್ಧ ಧರ್ಮಕ್ಕೆ ಮತಾಂತರ ಹೊಂದಿದವರಿಗೆ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ನೀಡುವಂತೆ 2013ರ ಡಿ.9 ರಂದು ಸಮಾಜ ಕಲ್ಯಾಣ ಇಲಾಖೆಯ ಅಧೀನ ಕಾರ್ಯದರ್ಶಿಯು ಇಲಾಖೆಯ ಆಯುಕ್ತರು, ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು, ತಹಸೀಲ್ದಾರ್‌ಗಳಿಗೆ ಆದೇಶ ಹೊರಡಿಸಿದ್ದಾರೆ. ಅಲ್ಲದೆ ಈ ಆದೇಶದ ಪ್ರತಿಯನ್ನು ಮಹಾ ಬೋಧಿ ಸೊಸೈಟಿ, ಕರ್ನಾಟಕ ರಾಜ್ಯ ದಕ್ಷಿಣ ಕನ್ನಡ ಜಿಲ್ಲಾ ಬೌದ್ಧ ಮಹಾಸಭಾದವರಿಗೂ ಕಳುಹಿಸಿ ಕೊಟ್ಟಿದ್ದಾರೆ.
ಸಮಾಜ ಕಲ್ಯಾಣ ಇಲಾಖೆಯ ಈ ಆದೇಶದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯೂ 2016ರ ನ.15ರಂದು ಜಿಲ್ಲಾಧಿಕಾರಿಗಳಿಗೆ ಆದೇಶ ಹೊರಡಿಸಿದ್ದು, ಬೌದ್ಧ ಧರ್ಮಕ್ಕೆ ಮತಾಂತರ ಹೊಂದುವ ಪರಿಶಿಷ್ಟ ಜಾತಿಯವರಿಗೆ ನಾಡ ಕಚೇರಿ ತಂತ್ರಾಂಶದ ಮೂಲಕ 101 ಜಾತಿಯವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಬೇಕೆಂದು ಆದೇಶದಲ್ಲಿ ಸೂಚಿಸಲಾಗಿದೆ.
ಆದರೆ, ಸಮಾಜ ಕಲ್ಯಾಣ ಇಲಾಖೆ ಈ ಆದೇಶ ತಳ ಮಟ್ಟದಲ್ಲಿ ಅಧಿಕಾರಿಗಳ ಗೊಂದಲಕ್ಕೆ ಕಾರಣವಾಗಿದೆ. ಧರ್ಮದ ಕಾಲಂನಲ್ಲಿ ಬೌದ್ಧ ಎಂದು ನಮೂದಿಸಿದರೆ, ಜಾತಿ ಕಾಲಂ ಇಲ್ಲದಿರುವುದರಿಂದ ಅಧಿಕಾರಿಗಳು ಗೊಂದಲಕ್ಕೆ ಒಳಗಾಗಿದ್ದಾರೆ. ಆದರೆ, ತಂತ್ರಾಂಶದಲ್ಲಿ ಬೌದ್ಧ ಧರ್ಮದ ಕಾಲಂನಲ್ಲಿ ಪರಿಶಿಷ್ಟ ಜಾತಿಯ ಕಾಲಂ ಇಲ್ಲದಿರುವುದರಿಂದ ಅವರು ಮತಾಂತರ ಹೊಂದುವ ಮೊದಲೇ ಇದ್ದ ಜಾತಿಯ ಹೆಸರು ಉಲ್ಲೇಖೀಸಿ, ಜಾತಿ ಪ್ರಮಾಣ ಪತ್ರ ನೀಡುವಂತೆ ಕಂದಾಯ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಕೇಂದ್ರ ಸರ್ಕಾರದ ಕಾಯ್ದೆ 1990ರ ನಿರ್ದೇಶನದ ಅನ್ವಯ ಬೌದ್ಧ ಧರ್ಮಕ್ಕೆ ಮತಾಂತರ ಹೊಂದುವ ಪರಿಶಿಷ್ಟ ಜಾತಿಯವರಿಗೆ ಧರ್ಮದ ಕಾಲಂನಲ್ಲಿ ಬೌದ್ಧ ಧರ್ಮ ಎಂದು ಹಾಗೂ ಜಾತಿಯ ಕಾಲಂನಲ್ಲಿ ಪರಿಶಿಷ್ಟ ಜಾತಿ ಎಂದು ನಮೂದಿಸಬೇಕು. ಈ ಆದೇಶ ಪಾಲಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ತಹಸೀಲ್ದಾರ್‌ಗಳು ಜಾತಿ ಪ್ರಮಾಣ ಪತ್ರ ನೀಡುತ್ತಿಲ್ಲ ಎಂದು ಬೌದ್ಧ ಸಂಘಟನೆಗಳಿಂದ ದೂರು ಬಂದಿದ್ದರಿಂದ ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಪರಿಶಿಷ್ಟ ಜಾತಿಯವರಿಗೆ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ನೀಡಲು ಕ್ರಮ ಕೈಗೊಳ್ಳಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.
ಶಿಷ್ಯವೇತನ ನೀಡಲು ಆದೇಶ: ಈ ಮಧ್ಯೆ, ಬೌದ್ಧ ಧರ್ಮಕ್ಕೆ ಮತಾಂತರ ಹೊಂದಿರುವ ಪರಿಶಿಷ್ಟ ಜಾತಿಯ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ನೀಡಲು ಎಸ್‌ಎಸ್‌ಪಿ (ವಿದ್ಯಾರ್ಥಿ ವೇತನ ತಂತ್ರಾಂಶ) ಪೋರ್ಟ್‌ಲ್‌ನಲ್ಲಿ ಬೌದ್ಧ ಧರ್ಮ ನಮೂದಿಸಿದಾಗ ಜಾತಿ ಕಾಲಂನಲ್ಲಿ ಪರಿಶಿಷ್ಟ ಜಾತಿ ಬಾರದೇ ಇರುವುದರಿಂದ ಎಸ್‌ಎಸ್‌ಪಿ ಪೋರ್ಟಲ್‌ನಲ್ಲಿ ಪರಿಶಿಷ್ಟ ಜಾತಿ ಎಂದು ನಮೂದಿಸಲು ಅವಕಾಶ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ಸಮಾಜ ಕಲ್ಯಾಣ ಇಲಾಖೆ ಆಯುಕ್ತರು 2018ರ ಸೆ. 29 ರಂದು ಜಂಟಿ ನಿರ್ದೇಶಕರಿಗೆ ಆದೇಶ ಹೊರಡಿಸಿದ್ದಾರೆ.
ಬೇಡಿಕೆಯಲ್ಲಿ ಗೊಂದಲ
ಬೌದ್ಧ ಧರ್ಮಕ್ಕೆ ಮತಾಂತರ ಹೊಂದಿರುವ ಪರಿಶಿಷ್ಟ ಜಾತಿಯ ಜನರು ಮತಾಂತರ ಹೊಂದಿದ ಮೇಲೆ ತಮ್ಮ ಮೂಲ ಜಾತಿಯ ಬದಲು, ಜಾತಿಯ ಕಾಲಂನಲ್ಲಿ ಬೌದ್ಧ ಅಥವಾ ನಿಯೋ ಬುದ್ಧಿಸ್ಟ್ ಎಂದು ನಮೂದಿಸಲು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಈ ಕುರಿತಂತೆ ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗ 2017 ರಲ್ಲಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದು, ಕರ್ನಾಟಕ ಸರ್ಕಾರ ಗುರುತಿಸಿರುವ 101 ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಬೌದ್ಧ ಅಥವಾ ನಿಯೋ ಬುದ್ಧಿಸ್ಟ್ ಎಂಬ ಜಾತಿ ಇಲ್ಲ. ಹೀಗಾಗಿ ಜಾತಿಯ ಕಾಲಂನಲ್ಲಿ ಬೌದ್ಧ ಎಂದು ನಮೂದಿಸಿ ಜಾತಿಯ ಪ್ರಮಾಣ ಪತ್ರ ನೀಡಲು ಅವಕಾಶವಿಲ್ಲ ಎಂದು ತಿಳಿಸಿದೆ. ಆದರೆ, ಬೌದ್ಧ ಧರ್ಮದ ಜತೆಗೆ ಮೂಲ ಪರಿಶಿಷ್ಟ ಜಾತಿಯನ್ನು ಉಳಿಸಿಕೊಳ್ಳಲು ಅವಕಾಶವಿದೆ ಎಂದು ಆಯೋಗ ತಿಳಿಸಿದೆ.
ಬೌದ್ಧ ಧರ್ಮಕ್ಕೆ ಸೇರಿದ ಪರಿಶಿಷ್ಟ ಜಾತಿಯವರಿಗೆ ಮೀಸಲಾತಿ ಪ್ರಮಾಣ ಪತ್ರ ನೀಡಲು ರಾಜ್ಯ ಸರ್ಕಾರ ಮನಸ್ಸು ಮಾಡಬೇಕು. ಇದುವರೆಗೂ ಎಲ್ಲ ಸರ್ಕಾರಗಳೂ ಈ ಬಗ್ಗೆ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿವೆ. ರಾಜ್ಯ ಸರ್ಕಾರ ಸಂಪುಟದಲ್ಲಿ ಚರ್ಚಿಸಿ ಸೂಕ್ತ ಕಾನೂನು ತಿದ್ದುಪಡಿ ತಂದು ಮತಾಂತರಗೊಂಡ ಪರಿಶಿಷ್ಟ ಜಾತಿಯವರಿಗೆ ನವ ಬೌದ್ಧರು ಎಂದು ಮೀಸಲಾತಿ ಪ್ರಮಾಣ ಪತ್ರ ನೀಡಬೇಕು.
– ಡಾ.ಎಂ. ವೆಂಕಟಸ್ವಾಮಿ, ರಾಜ್ಯಾಧ್ಯಕ್ಷರು, ಸಮತಾ ಸೈನಿಕ ದಳ
ಹಿಂದೂ ಧರ್ಮದಿಂದ ಬೌದ್ಧ ಧರ್ಮಕ್ಕೆ ಮತಾಂತರ ಹೊಂದಿರುವ ಪರಿಶಿಷ್ಟ ಜಾತಿಯವರಿಗೆ ಮತಾಂತರ ಹೊಂದಿದ ನಂತರವೂ ಪರಿಶಿಷ್ಟ ಜಾತಿಯ (ಎಸ್ಸಿ) ಪ್ರಮಾಣ ಪತ್ರ ನೀಡಲು 2013ರಲ್ಲಿಯೇ ಆದೇಶವಾಗಿದೆ. ಮತಾಂತರಗೊಂಡವರಿಗೆ ಬುದ್ದಿಸ್ಟ್ ಅಂತ ಬರೆಸಲು ಅವಕಾಶ ಇದೆ. ನವ ಬೌದ್ಧರು ಎನ್ನುವ ಪ್ರಸ್ತಾಪ ನಮ್ಮ ಮುಂದಿಲ್ಲ. ಆ ರೀತಿಯ ಬೇಡಿಕೆ ಬಂದರೆ ಪರಿಗಣಿಸುತ್ತೇವೆ.
– ಪ್ರಿಯಾಂಕ್ ಖರ್ಗೆ, ಸಮಾಜ ಕಲ್ಯಾಣ ಸಚಿವ
– ಶಂಕರ ಪಾಗೋಜಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.